ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯುತ್ತಮ ವೇಗದ ಫೋನ್

Last Updated 4 ಜನವರಿ 2017, 19:30 IST
ಅಕ್ಷರ ಗಾತ್ರ

ಇದು ತನಕ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಎಲ್ಲ ಫೋನ್‌ಗಳೂ ಉತ್ತಮ ಮತ್ತು ಅತ್ಯುತ್ತಮ ಅನ್ನಬಹುದಾದ ಫೋನ್‌ಗಳನ್ನು ತಯಾರಿಸಿದ ವಿಶಿಷ್ಟ ಕಂಪೆನಿ  ಒನ್‌ಪ್ಲಸ್. ಈ ಕಂಪೆನಿ ಕೆಲವೇ  ಫೋನ್‌ಗಳನ್ನು ತಯಾರಿಸಿದೆ. ಆದರೆ ತಯಾರಿಸಿದ ಎಲ್ಲ ಫೋನ್‌ಗಳೂ ಉತ್ತಮವಾಗಿವೆ ಹಾಗೂ ಈ ಮೂಲಕ ಮಾರುಕಟ್ಟೆಯಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿಕೊಂಡಿದೆ. ಮೊದಲಿಗೆ ಫೋನ್‌ಗಳನ್ನು ಆಹ್ವಾನದ ಮೂಲಕ ಮಾತ್ರವೇ ಮಾರಿ ತುಂಬ ಜನಪ್ರಿಯವಾಯಿತು. ಈಗ ಒನ್‌ಪ್ಲಸ್ ಕಂಪೆನಿಯ ಎಲ್ಲ ಫೋನ್‌ಗಳು ಆಹ್ವಾನವಿಲ್ಲದೇ ದೊರೆಯುತ್ತಿವೆ. ಈಗ ಹೊಸದಾಗಿ ಬಂದಿರುವ ಒನ್‌ಪ್ಲಸ್ 3ಟಿ (Onep*us 3T) ನಮ್ಮ ಈ ವಾರದ ಗ್ಯಾಜೆಟ್.

ಗುಣವೈಶಿಷ್ಟ್ಯಗಳು
ನಾಲ್ಕು ಹೃದಯಗಳ ಕ್ವಾಲ್ಕಾಂ ಸ್ನಾಪ್‌ಡ್ರ್ಯಾಗನ್ (2 x 2.34 GHz, 2 x 2.19 GHz, Qua*comm© Snapdragon™ 821) ಪ್ರೊಸೆಸರ್, ಗ್ರಾಫಿಕ್ಸ್‌ಗೆಂದೇ ಪ್ರತ್ಯೇಕ ಆಡ್ರೆನೋ 530 ಪ್ರೊಸೆಸರ್, 6+64/128 ಗಿಗಾಬೈಟ್ ಮೆಮೊರಿ, 4ಜಿ ಎರಡು ನ್ಯಾನೋ ಸಿಮ್, ಮೈಕ್ರೋಎಸ್‌ಡಿ ಮೆಮೊರಿ ಕಾರ್ಡ್ ಹಾಕುವ ಸೌಲಭ್ಯ ಇಲ್ಲ, ಯುಎಸ್‌ಬಿ ಆನ್-ದ-ಗೋ (USB OTG) ಇದೆ,

5.5 ಇಂಚು ಗಾತ್ರದ 1080x 1920 ಪಿಕ್ಸೆಲ್ ರೆಸೊಲೂಶನ್ನಿನ ಅಮೋಲೆಡ್ ಪರದೆ, ಗೊರಿಲ್ಲ-4 ಗಾಜು, f/2.0 ಅಪೆರ್ಚರ್‌ನ ಲೆನ್ಸ್ ಉಳ್ಳ 16 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಮತ್ತು 16 ಮೆಗಾಪಿಕ್ಸೆಲ್‌ನ ಇನ್ನೊಂದು ಸ್ವಂತೀ ಕ್ಯಾಮೆರಾ, ಕ್ಯಾಮೆರಾಗೆ ಎಲ್ಇಡಿ ಫ್ಲಾಶ್, ಪೂರ್ತಿ ಹೈಡೆಫಿನಿಶನ್ (1080p) ಮತ್ತು 4k ವಿಡಿಯೊ ಚಿತ್ರೀಕರಣ, 3400mAh ಶಕ್ತಿಯ ತೆಗೆಯಲಸಾಧ್ಯವಾದ ಬ್ಯಾಟರಿ, 152.7 x 74.7 x 7.35 ಮಿ.ಮೀ. ಗಾತ್ರ, 158 ಗ್ರಾಂ ತೂಕ, ವೈಫೈ, ಬ್ಲೂಟೂತ್, ಜಿಪಿಎಸ್, ಎನ್‌ಎಫ್‌ಸಿ, ಆಂಡ್ರಾಯ್ಡ್‌ 6.0.1+ಆಕ್ಸಿಜನ್ 3.5.4, ಡ್ಯಾಶ್ ಚಾರ್ಜಿಂಗ್, ಇತ್ಯಾದಿ. ಬೆಲೆ ₹27,999 (64 ಗಿಗಾಬೈಟ್), ₹34,999 (128 ಗಿಗಾಬೈಟ್).

ಈ ಫೋನಿನ ವಿಮರ್ಶೆ ಓದುವ ಮೊದಲು ಒನ್‌ಪ್ಲಸ್ 3ರ ವಿಮರ್ಶೆಯನ್ನು (ಗ್ಯಾಜೆಟ್‌ ಲೋಕ, ಜೂನ್ 30, 2016) ಓದಿಕೊಂಡರೆ ಉತ್ತಮ. (ಗ್ಯಾಜೆಟ್‌ ಲೋಕದ ಹಳೆಯ ಸಂಚಿಕೆಗಳಿಗೆ ಭೇಟಿ ನೀಡಿ – bit*y.com/gadget*oka). ಯಾಕೆಂದರೆ ಇದಕ್ಕೂ ಒನ್‌ಪ್ಲಸ್ 3ಗೂ ಸ್ವಲ್ಪವೇ ವ್ಯತ್ಯಾಸವಿದೆ. ರಚನೆ ಮತ್ತು ವಿನ್ಯಾಸದಲ್ಲಿ ಇದು ಒನ್‌ಪ್ಲಸ್ 3ರ ಪಡಿಯಚ್ಚು. ಅದಕ್ಕೂ ಇದಕ್ಕೂ ನೋಟದಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಪಕ್ಕ ಪಕ್ಕ ಇಟ್ಟರೆ ಯಾವುದೆಂದು ಹೇಳಲು ಸಾಧ್ಯವಿಲ್ಲ.

ಕ್ಯಾಮೆರಾ ಎದ್ದು ನಿಂತಿದೆ. ಇದು ನನಗೆ ಇಷ್ಟವಾಗಲಿಲ್ಲ. ಮೇಜಿನ ಮೇಲೆ ಇಟ್ಟಾಗ ಕ್ಯಾಮೆರಾದ ಲೆನ್ಸ್‌ಗೆ ಸ್ವಲ್ಪ ಗೀರುಗಳಾಗುವ ಸಾಧ್ಯತೆ ಇದೆ. ದಪ್ಪ ಕವಚ ಹಾಕಿಕೊಂಡು ಈ ನ್ಯೂನತೆಯನ್ನು ಸರಿಪಡಿಸಿಕೊಳ್ಳಬಹುದು. ಬೆರಳಚ್ಚು ಸ್ಕ್ಯಾನರ್ ಮುಂಭಾಗದಲ್ಲಿ ಕೆಳಗೆ ಮಧ್ಯದಲ್ಲಿದೆ. ಇದು ಆಂಡ್ರಾಯ್ಡ್‌ನ ಪ್ರಮುಖ ಬಟನ್ ಆಗಿಯೂ ಕೆಲಸ ಮಾಡುತ್ತದೆ. ನನ್ನ ಪ್ರಕಾರ ಬೆರಳಚ್ಚು ಸ್ಕ್ಯಾನರ್ ಹಿಂಭಾಗದಲ್ಲಿದ್ದರೆ ಉತ್ತಮ. ಎಂದಿನಂತೆ ಕೈಯಲ್ಲಿ ಹಿಡಿಯುವ, ಬಳಸುವ ಅನುಭವ ಚೆನ್ನಾಗಿದೆ. ಒಂದು ಮೇಲ್ದರ್ಜೆ ಫೋನನ್ನು ಹಿಡಿದ ಭಾವನೆ ಬರುತ್ತದೆ.

6 ಗಿಗಾಬೈಟ್ ಪ್ರಾಥಮಿಕ ಮೆಮೊರಿ ಇರುವ ಕೆಲವೇ ಫೋನ್‌ಗಳಲ್ಲಿ ಇದೂ ಒಂದು. ಕೆಲವು ಲ್ಯಾಪ್‌ಟಾಪ್‌ಗಳಲ್ಲಿರುವುದು 4 ಗಿಗಾಬೈಟ್ ಮೆಮೊರಿ ಮಾತ್ರ. ಅಂದ ಮೇಲೆ ಇದರ ಕೆಲಸದ ಶಕ್ತಿಯನ್ನು ಊಹಿಸಿಕೊಳ್ಳಬಹುದು. ಒನ್‌ಪ್ಲಸ್ 3ರಲ್ಲೂ ಇಷ್ಟೇ ಮೆಮೊರಿ ಇದೆ. ಆದರೆ ಇದರಲ್ಲಿರುವುದು ಇನ್ನೂ ಆಧುನಿಕ ಮತ್ತು ಸುಧಾರಿತ ಪ್ರೊಸೆಸರ್. ಅಂತೆಯೇ ಇದರ ಕೆಲಸದ ವೇಗ ಒನ್‌ಪ್ಲಸ್ 3ಕ್ಕಿಂತಲೂ ಉತ್ತಮವಾಗಿದೆ. ಯಾವ ಆಟವನ್ನು ಬೇಕಾದರೂ ಆಡಬಹುದು.

ಇದು ವೇದ್ಯವಾಗಬೇಕಾದರೆ ಇದರಲ್ಲಿ ಆಸ್ಫಾಲ್ಟ್ ಆಟ ಆಡಬೇಕು. ವಿಡಿಯೊ ವೀಕ್ಷಣೆ ಚೆನ್ನಾಗಿದೆ. ಹೈಡೆಫಿನಿಶನ್ ಮಾತ್ರವಲ್ಲ 4k ವಿಡಿಯೊ ವೀಕ್ಷಣೆ ಕೂಡ ಮಾಡಬಹುದು. ಇದರ ಬ್ಯಾಟರಿ  ಒನ್‌ಪ್ಲಸ್ 3ಕ್ಕಿಂತಲೂ ಹೆಚ್ಚು ಶಕ್ತಿಶಾಲಿಯಾಗಿದೆ. ಬ್ಯಾಟರಿ ಬಾಳಿಕೆ ಚೆನ್ನಾಗಿದೆ. ಒನ್‌ಪ್ಲಸ್ 3ರಂತೆ ಇದರಲ್ಲೂ  ಡ್ಯಾಶ್ ಚಾರ್ಜಿಂಗ್ ಇದೆ. ಸುಮಾರು 45 ನಿಮಿಷದಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ.


ಒನ್‌ಪ್ಲಸ್ 3 ಮತ್ತು ಇದಕ್ಕೆ ಇರುವ ಇನ್ನೊಂದು ಪ್ರಮುಖ ವ್ಯತ್ಯಾಸವೆಂದರೆ ಕ್ಯಾಮೆರಾ. ಇದರಲ್ಲಿ ಪ್ರಾಥಮಿಕ ಮತ್ತು ಸ್ವಂತೀ –ಎರಡೂ ಕ್ಯಾಮೆರಾಗಳು 16 ಮೆಗಾಪಿಕ್ಸೆಲ್‌ನ f/2 ಲೆನ್ಸ್‌ ಅನ್ನು ಒಳಗೊಂಡಿವೆ. ಜೊತೆಗೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಇದೆ. ಇದರಲ್ಲಿನ ಮ್ಯಾನ್ಯುವಲ್ ವಿಧಾನ ತುಂಬ ಚೆನ್ನಾಗಿದೆ. ಕಡಿಮೆ ಬೆಳಕಿನಲ್ಲೂ ತೃಪ್ತಿದಾಯಕವಾಗಿ ಫೋಟೊ ತೆಗೆಯುತ್ತದೆ. ಗುಣಮಟ್ಟದ ವಿಡಿಯೊ ಜೊತೆಗೆ 4k ವಿಡಿಯೊ ಕೂಡ ಇದನ್ನು ಬಳಸಿ ತಯಾರಿಸಬಹುದು. ಉತ್ತಮ ಫೋಟೊ, ವಿಡಿಯೊ ಮತ್ತು ಸ್ವಂತೀ ತೆಗೆಯಲು ಸದ್ಯ ಇದಕ್ಕಿಂತ ಉತ್ತಮ ಕ್ಯಾಮೆರಾ ಫೋನ್ ಈ ಬೆಲೆಯಲ್ಲಿ ಇಲ್ಲ.

ಇತರೆ ಒನ್‌ಪ್ಲಸ್ ಫೋನ್‌ಗಳಂತೆ ಇದರ ಆಡಿಯೊ ಇಂಜಿನ್ ಕೂಡ ಚೆನ್ನಾಗಿದೆ. ಆದರೆ ಇಯರ್‌ಫೋನ್ ನೀಡಿಲ್ಲ. ಮೂರು ಮೈಕ್ರೋಫೋನ್ ಇವೆ. ಹಿನ್ನೆಲೆಯ ಗದ್ದಲವನ್ನು ನಿವಾರಿಸಿ ನೀವು ಮಾತನಾಡಿದ್ದನ್ನು ಮಾತ್ರ ಪ್ರತ್ಯೇಕಿಸಿ ಕಳುಹಿಸುವುದರಿಂದ ನಿಮ್ಮ ಮಾತನ್ನು ಆಲಿಸುವವರಿಗೆ ಧ್ವನಿಯಲ್ಲಿ ಸ್ಪಷ್ಟತೆ ಇರುತ್ತದೆ. ಆಂಡ್ರಾಯ್ಡ್‌ 6.0.1 ಜೊತೆ ಆಕ್ಸಿಜನ್ ಓಎಸ್ ಇದೆ.

ಕನ್ನಡದ ಯೂಸರ್ ಇಂಟರ್‌ಫೇಸ್ ಕೂಡ ಇದೆ. ಒಟ್ಟಿನಲ್ಲಿ ಹೇಳುವುದಾದರೆ, ನೀಡುವ ಹಣಕ್ಕೆ ಅತ್ಯುತ್ತಮ ಫೋನ್ ಎನ್ನಬಹುದು. 2016ರ ವರ್ಷದ ಫೋನ್ ಎಂಬ ಪ್ರಶಸ್ತಿ ನೀಡುವಾಗ ₹30,000ದ ಆಸುಪಾಸಿನ ಬೆಲೆಯ ಉತ್ತಮ ಫೋನ್ ಎಂಬ ಪ್ರಶಸ್ತಿಯನ್ನು ಇದಕ್ಕೆ ನೀಡಬಹುದು. ಇಷ್ಟೆಲ್ಲ ಹೇಳಿದ ಮೇಲೆ ನೀವು ಒಂದು ಪ್ರಶ್ನೆ ಕೇಳಬಹುದು– ‘ನನ್ನಲ್ಲಿ ಈಗಾಗಲೇ ಒನ್‌ಪ್ಲಸ್ 3 ಇದೆ. ನಾನು ಪುನಃ ಹಣ ಖರ್ಚು ಮಾಡಿ ಒನ್‌ಪ್ಲಸ್ 3ಟಿ ಕೊಳ್ಳುವ ಅಗತ್ಯವಿದೆಯೇ?’ ಎಂದು. ಅದು ಅಗತ್ಯವಿಲ್ಲ ಎಂಬುದೇ ನನ್ನ ಉತ್ತರ. ಯಾಕೆಂದರೆ ಒನ್‌ಪ್ಲಸ್ 3 ಇನ್ನೂ ಹಳತಾಗಿಲ್ಲ. 

ವಾರದ ಆ್ಯಪ್ - ಅವಿಭಾಜ್ಯ ಸಂಖ್ಯೆ ಪತ್ತೆ ಹಚ್ಚಿ
2017ರ ವಿಶೇಷ ಏನು ಎಂದು ಗಣಿತಜ್ಞರನ್ನು ಕೇಳಿದರೆ ಅವರು ಅದೊಂದು ಅವಿಭಾಜ್ಯ ಸಂಖ್ಯೆ ಎನ್ನುತ್ತಾರೆ. ಗಣಿತದಲ್ಲಿ ಮಜಾ ಅನುಭವಿಸುವವರಿಗೆ ಅವಿಭಾಜ್ಯ ಸಂಖ್ಯೆಗಳ ಜೊತೆ ಆಟವಾಡುವುದು ಒಂದು ಸಮಯ ಕಳೆಯುವ ವಿಧಾನವಾಗಿರುತ್ತದೆ. ಒಂದು ಸಂಖ್ಯೆ ಅವಿಭಾಜ್ಯ ಸಂಖ್ಯೆ ಹೌದೋ ಅಲ್ಲವೋ ಎಂದು ಪತ್ತೆ ಹಚ್ಚುವುದು ಹೇಗೆ? ಅದಕ್ಕೂ ಕಿರುತಂತ್ರಾಂಶಗಳಿವೆ (ಆ್ಯಪ್). ಅಂತಹ ಒಂದು ಕಿರುತಂತ್ರಾಂಶ ಬೇಕಿದ್ದಲ್ಲಿ ನೀವು ಗೂಗಲ್‌್ ಪ್ಲೇ ಸ್ಟೋರಿನಲ್ಲಿ Prime Number Test ಎಂದು ಹುಡುಕಬೇಕು  ಅಥವಾ bit.*y/gadget*oka260 ಜಾಲತಾಣಕ್ಕೆ ಭೇಟಿ ನೀಡಬೇಕು. ಕೊಟ್ಟ ಸಂಖ್ಯೆ ಅವಿಭಾಜ್ಯ ಸಂಖ್ಯೆ ಹೌದೋ ಅಲ್ಲವೋ ಎಂದು ಇದು ಲೆಕ್ಕ ಹಾಕಿ ಹೇಳುತ್ತದೆ. ಇದರ ಇತರೆ ಸೌಲಭ್ಯಗಳೆಂದರೆ ಯಾವುದೇ ಒಂದು ಸಮ ಸಂಖ್ಯೆಯನ್ನು ನೀಡಿದರೆ ಅದು ಅದನ್ನು ಎರಡು ಅವಿಭಾಜ್ಯ ಸಂಖ್ಯೆಗಳ ಮೊತ್ತವಾಗಿ ತೋರಿಸುತ್ತದೆ. ಯಾವುದೋ ಒಂದು ಅವಿಭಾಜ್ಯ ಸಂಖ್ಯೆಯನ್ನು ತೋರಿಸು ಎಂದರೆ ಅದನ್ನೂ ಮಾಡುತ್ತದೆ.

*
ಗ್ಯಾಜೆಟ್‌ ಸಲಹೆ - ವಿಖ್ಯಾತ ಜೈನ್ ಅವರ ಪ್ರಶ್ನೆ: 30,000 ರೂಪಾಯಿ ಒಳಗಿನ ಉತ್ತಮ ಫೋನ್ ಯಾವುದು? 
ಉ: ಒನ್‌ಪ್ಲಸ್ 3ಟಿ.

*
ಗ್ಯಾಜೆಟ್‌ ತರ್ಲೆ - 2017 ಹೊಸ ವರ್ಷದ ತೀರ್ಮಾನಗಳು
*ಶೌಚಾಲಯಕ್ಕೆ ಹೋಗುವಾಗ ಸ್ಮಾರ್ಟ್‌ಫೋನ್ ತೆಗೆದುಕೊಂಡು ಹೋಗುವುದಿಲ್ಲ
*ಯದ್ವಾತದ್ವಾ ಸ್ವಂತೀ ತೆಗೆದು ಇನ್‌ಸ್ಟಾಗ್ರಾಂನಲ್ಲಿ ಸೇರಿಸುವುದಿಲ್ಲ
*ವಾಟ್ಸ್‌ಆ್ಯಪ್‌ನಲ್ಲಿರುವ ಸ್ನೇಹಿತರೆಲ್ಲರಿಗೆ ಶುಭೋದಯ ಮತ್ತು ಶುಭರಾತ್ರಿ ಸಂದೇಶ ಕಳುಹಿಸುವುದಿಲ್ಲ
*ವಾಟ್ಸ್‌ಆ್ಯಪ್‌ನಲ್ಲಿ ಬಂದ ಸಂದೇಶಗಳನ್ನು ಯಾರಿಗೂ ಫಾರ್ವರ್ಡ್ ಮಾಡುವುದಿಲ್ಲ
*ಅನುಮತಿಯಿಲ್ಲದೆ ಯಾರನ್ನೂ ವಾಟ್ಸ್‌ಆ್ಯಪ್ ಗ್ರೂಪುಗಳಿಗೆ ಸೇರಿಸುವುದಿಲ್ಲ

*
ಗ್ಯಾಜೆಟ್‌ ಸುದ್ದಿ - ಬುದ್ಧಿವಂತ ಪರದೆ ನಿಯಂತ್ರಕ
ನಿಮ್ಮ ಮನೆಯ ಕಿಟಕಿಗಳಿಗೆ ಹಾಕಿದ ಪರದೆಗೊಂದು ನಿಯಂತ್ರಕ ಇದ್ದರೆ ಒಳ್ಳೆಯದು ಎಂದು ಯಾವತ್ತಾದರೂ ಅನ್ನಿಸಿತ್ತಾ? ಸರಳವಾದ ದೂರನಿಯಂತ್ರಕಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಅವುಗಳನ್ನು ಬಳಸಿ ಪರದೆಯನ್ನು ತೆರೆಯುವುದು, ಹಾಕುವುದು ಮಾಡಬಹುದು. ಈಗ ಬರಲಿರುವ ಸ್ಲೈಡ್ ಎಂಬ ಬುದ್ಧಿವಂತ ನಿಯಂತ್ರಕ ಇವೆಲ್ಲಕ್ಕಿಂತ ಮಿಗಿಲು.

ಅದು ಒಂದು ಸರಳವಾದ ಮೋಟಾರು ಚಾಲಿತ ಪರದೆ ನಿಯಂತ್ರಕದಂತೆ ಕಾಣುತ್ತದೆ. ಆದರೆ ಅದು ಅಷ್ಟು ಸರಳವಾದುದಲ್ಲ. ಅದನ್ನು ನಿಮ್ಮ  ಸ್ಮಾರ್ಟ್‌ಫೋನ್ ಮೂಲಕ ನಿಯಂತ್ರಿಸಬಹುದು. ಅಂತರಜಾಲದ ಮೂಲಕವೂ ನಿಯಂತ್ರಿಸಬಹುದು.

ಎಷ್ಟು ಗಂಟೆಗೆ ಪರದೆ ಹಾಕಬೇಕು, ಎಷ್ಟು ಗಂಟೆಗೆ ಪರದೆ ತೆರೆಯಬೇಕು ಎಂದು ನಿಗದಿಪಡಿಸಬಹುದು. ನೀವು ದಿನಗಟ್ಟಲೆ ಮನೆಯಿಂದ ದೂರ ಹೋಗುವವರಾದರೆ ಈ ರೀತಿ ಪ್ರೋಗ್ರಾಮ್ ಮಾಡಿಟ್ಟರೆ ಉತ್ತಮ. ಆಗ ನೋಡುವವರಿಗೆ ಮನೆಯಲ್ಲಿ ಯಾರೋ ಇದ್ದಾರೆ ಎಂಬ ಭಾವನೆ ಬರುತ್ತದೆ. ಈ ಸ್ಲೈಡ್ ಇನ್ನೂ ಮಾರುಕಟ್ಟೆಗೆ ಬಂದಿಲ್ಲ.

*
ಸೂಚನೆ
ಈ ಸಂಚಿಕೆಯೊಂದಿಗೆ ಗ್ಯಾಜೆಟ್‌ಲೋಕ 6ನೇ ವರ್ಷಕ್ಕೆ ಕಾಲಿಡುತ್ತಿದೆ. ಗ್ಯಾಜೆಟ್‌ಲೋಕದಲ್ಲಿ ಏನಾದರೂ ಬದಲಾವಣೆಗಳು ಬೇಕಿದ್ದಲ್ಲಿ ಸೂಚಿಸಬಹುದು. ಇಮೇಲ್-kamanabillu@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT