ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರ, ಸಮಾಜ, ಭಾಷೆ

Last Updated 14 ಏಪ್ರಿಲ್ 2012, 19:30 IST
ಅಕ್ಷರ ಗಾತ್ರ

ಅಧಿಕಾರ ಅನ್ನುವುದು ಅಮೂರ್ತವಾದ ಕಲ್ಪನೆ. ಅಮೂರ್ತವಾಗಿದ್ದರೂ ನಮ್ಮೆಲ್ಲರ ಬದುಕನ್ನೂ ಪ್ರಭಾವಿಸುವ ಕಲ್ಪನೆ. `ಯಾವುದೇ ಕೆಲಸ ಕಾರ್ಯಗಳು ನಡೆಯುವಂತೆ ಮಾಡುವ ಸಮಾಜದ ಶಕ್ತಿಯೇ ಅಧಿಕಾರ. ಅಧಿಕಾರದ ಬಗ್ಗೆ ತಿಳಿಯುವುದರಿಂದ ಯಾರ ಮೇಲೆ ಯಾರಿಗೆ ಎಂಥ ನಿಯಂತ್ರಣವಿದೆ, ಅದನ್ನು ಯಾರ ಉಪಯೋಗಕ್ಕೆ ಬಳಸುತ್ತಾರೆ ಅನ್ನುವುದು ತಿಳಿಯುತ್ತದೆ~ ಅನ್ನುವ ಮಾತನ್ನು ಗಮನಿಸಿ.

ಸಮಾಜದಲ್ಲಿ ಅಧಿಕಾರ ವರ್ತಿಸುವ ಬಗೆ ರಾಜಕೀಯದಲ್ಲಿ ಎದ್ದು ಕಾಣುತ್ತದೆ. ಪ್ರಜಾಪ್ರಭುತ್ವದಲ್ಲಿ ನಾವು ನೀಡುವ ಮತಗಳ ಮೂಲಕ ನಮ್ಮ ಪರವಾಗಿ ಕಾನೂನುಗಳನ್ನು ರಚಿಸುವ ಅಧಿಕಾರವನ್ನು ರಾಜಕಾರಣಿಗಳಿಗೆ ನೀಡುತ್ತೇವೆ. ಹಾಗೆ ಅವರು ರೂಪಿಸಿದ ಕಾನೂನುಗಳನ್ನು ಮೀರಿದರೆ ನಮ್ಮನ್ನು ಶಿಕ್ಷಿಸುವ ಅಧಿಕಾರ ಸಮಾಜಕ್ಕೆ ಇರುತ್ತದೆ. ರಾಜಕೀಯ ಅಧಿಕಾರ ನಮ್ಮ ಬದುಕಿನ ಬಹಳಷ್ಟು ಅಂಶಗಳನ್ನು ನಿಯಂತ್ರಿಸುತ್ತದೆ.
 
ನಾವು ಎಷ್ಟು ತೆರಿಗೆ ಕೊಡಬೇಕು, ನಮಗೆ ಎಂಥ ಶಿಕ್ಷಣ ದೊರೆಯುತ್ತದೆ, ಎಂಥ ಬಗೆಯ ಔಷಧೋಪಚಾರ ಸಿಗುತ್ತದೆ, ಯಾವ ಥರದ ಔಷಧಿಗಳು ಮಾರಾಟಕ್ಕೆ ಒದಗಬೇಕು, ಯಾವ ರಸ್ತೆಯಲ್ಲಿ ಎಷ್ಟು ವೇಗದಲ್ಲಿ ವಾಹನ ಓಡಿಸಬಹುದು, ಇತ್ಯಾದಿಯಾಗಿ ಸಮಾಜದ ಎಲ್ಲರನ್ನೂ ತಾಕುವ ವಿಷಯಗಳೆಲ್ಲ ರಾಜಕೀಯ ಅಧಿಕಾರದ ವ್ಯಾಪ್ತಿಗೇ ಬರುತ್ತವೆ.
 
ಈ ಅಧಿಕಾರವನ್ನು ಚಲಾಯಿಸುವವರು ಪೋಲೀಸರು, ನ್ಯಾಯಾಧಿಕಾರಿಗಳು, ಸೆರೆಮನೆಯ ಅಧಿಕಾರಿಗಳು ಹೀಗೆ ಬಿಡಿವ್ಯಕ್ತಿಗಳೇ. ಬೇರೆಯವರ ಬದುಕಿನಲ್ಲಿ ಮಧ್ಯಪ್ರವೇಶ ಮಾಡುವ ಹಕ್ಕು ಅವರಿಗೆ ಇರುತ್ತದೆ.
 
ತಾವು ವಹಿಸುವ ಪಾತ್ರಗಳ ಕಾರಣದಿಂದ ಇನ್ನೊಂದು ಬಗೆಯ ಅಧಿಕಾರವಿರುವ ಜನರೂ ಇದ್ದಾರೆ. ಮೇಷ್ಟರು, ಅಪ್ಪ ಅಮ್ಮಂದಿರು, ಕೆಲಸ ಕೊಡುವ ಉದ್ಯೋಗದಾತರು ಇಂಥವರು. ಇವರಿಗೆಲ್ಲ ಇರುವುದು ವೈಯಕ್ತಿಕ ಅಧಿಕಾರ.

ಕೊನೆಯದಾಗಿ ಇತರರಿಗಿಂತ ಹೆಚ್ಚು ಅಥವ ಕಡಿಮೆ ಅಧಿಕಾರವಿರುವ ಸಾಮಾಜಿಕ ಗುಂಪುಗಳೂ ಇವೆ. ಬಡವರು, ಹೆಂಗಸರು, ಕಡಮೆ ಸಂಖ್ಯೆಯಲ್ಲಿರುವ ಜನವರ್ಗಗಳು, ಅಸ್ಪೃಶ್ಯತೆಗೆ ಗುರಿಯಾದವರು, ಹಣಬಲ ಅಷ್ಟಿರದ ಹಿಂದುಳಿದ ವರ್ಗ ಮತ್ತು ಜಾತಿಗೆ ಸೇರಿದವರು ಹೀಗೆ.

ಸಾಮಾಜಿಕವಾಗಿ ಅಧಿಕಾರವಿಲ್ಲದ, ಆರ್ಥಿಕ ಬೆಂಬಲವಿಲ್ಲದ ಇಂಥ ಸಮೂಹಗಳು ತಾರತಮ್ಯಕ್ಕೆ, ಅವಗಣನೆಗೆ ಗುರಿಯಾಗುತ್ತಲೇ ಇರುತ್ತವೆ. ಸಾಮಾಜಿಕ ಮತ್ತು ವೈಯಕ್ತಿಕ ಅಧಿಕಾರ ಯಾವಾಗಲೂ ಕೆಲವರದ್ದು ಮಾತ್ರ ಆಗಿರುತ್ತದೆ, ಅಧಿಕಾರಕ್ಕೆ ಒಳಪಡುವವರು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ.

ಅಧಿಕಾರಕ್ಕೂ ಭಾಷೆಗೂ ಏನು ಸಂಬಂಧ? ಅಧಿಕಾರ ವ್ಯಕ್ತವಾಗುವುದು, ಚಲಾವಣೆಯಾಗುವುದು ಬಹುಮಟ್ಟಿಗೆ ಭಾಷೆಯ ಮೂಲಕವೇ.  ಉದಾಹರಣೆಗೆ ರಾಜಕೀಯ ಅಧಿಕಾರ ಅಸ್ತಿತ್ವಕ್ಕೆ ಬರುವುದೇ ಭಾಷೆಯ ಮೂಲಕ- ಭಾಷಣ, ಚರ್ಚೆ, ವಾಗ್ವಾದ, ಅಕ್ಷರ ರೂಪಕ್ಕೆ ಇಳಿಯುವ ಕಾನೂನು, ಬರವಣಿಗೆಯ ರೂಪದಲ್ಲಿ, ಕೆಲವೊಮ್ಮೆ ಮಾತಿನಲ್ಲೂ ರವಾನೆಯಾಗುವ ಆಜ್ಞೆಗಳು ಇತ್ಯಾದಿಗಳ ಮೂಲಕ. ಕಾನೂನು ರೂಪಗೊಳ್ಳುವುದೂ, ಶಿಕ್ಷೆ ಜಾರಿಯಾಗುವುದೂ ವ್ಯಕ್ತಿಗಳು ಬಳಸುವ ಭಾಷೆಯ ಮೂಲಕವೇ.

ಸಾರ್ವಜನಿಕ ವಲಯದಲ್ಲಿ ಮಾತ್ರವಲ್ಲ, ಖಾಸಗಿಯಾಗಿ, ಮನೆಯೊಳಗೆ ಕೂಡಾ ಅಧಿಕಾರದ ಚಲಾವಣೆ ಭಾಷೆಯ ಮೂಲಕವೇ ನಡೆಯುತ್ತದೆ. ತಾಯಿ ತಂದೆಯರು ಮಕ್ಕಳನ್ನು ಮಾತಾಡಿಸುವ ರೀತಿಯಲ್ಲೆ ಅಧಿಕಾರದ ಸ್ವರೂಪ ಸ್ಥಾಪಿತವಾಗುತ್ತದೆ. ದೈಹಿಕವಾಗಿ, ಹಣಕಾಸಿನ ವಿಷಯದಲ್ಲಿ, ಕಾನೂನಿನ ದೃಷ್ಟಿಯಲ್ಲಿ ಕೂಡಾ ಅಧಿಕಾರ ಯಾರದ್ದು ಅನ್ನುವುದನ್ನು ಬಳಸುವ ಭಾಷೆಯೇ ತೋರುತ್ತದೆ.

ಎಷ್ಟೋ ಮನೆಗಳಲ್ಲಿ ವಯಸ್ಸಿಗೆ ಬಂದ ಮಕ್ಕಳನ್ನೂ ಅಪ್ಪ ಅಮ್ಮಂದಿರು ಮಾತಾಡಿಸುವಾಗ ಚಿಕ್ಕಮಕ್ಕಳೊಂದಿಗೆ ಬಳಸುತಿದ್ದಂಥ ಸ್ವರೂಪದ ಅಧಿಕಾರೀ ಭಾಷೆಯನ್ನೇ ಬಳಸುತ್ತಾರೆ.

ಹಿಂದಿನಷ್ಟು ಅಲ್ಲದಿದ್ದರೂ ಧರ್ಮ ಕೂಡ ಜನರ ಮನಸ್ಸಿನ ಮೇಲೆ ಅಧಿಕಾರ ಉಳಿಸಿಕೊಂಡಿದೆ. ಧರ್ಮದ ಅಧಿಕಾರವೂ ಜನರ ಭಾಷೆಗಿಂತ ಭಿನ್ನವಾದ ಅಥವ ಭಿನ್ನವಾದ ಭಾಷೆಯ ಬಳಕೆಯನ್ನು ಅವಲಂಬಿಸಿರುತ್ತದೆ. ಧರ್ಮದ ತತ್ವ ಮತ್ತು ಆಚರಣೆಗಳನ್ನು ವಿವರಿಸುವ, ವ್ಯಾಖ್ಯಾನಿಸುವ, ಅರ್ಥೈಸುವ ಅಧಿಕಾರವೂ ಭಾಷೆಯ ತಿಳಿವಳಿಕೆಯ ಮೂಲಕವೇ ನಿರ್ದಿಷ್ಟ ಗುಂಪಿಗೆ ದೊರೆತಿರುತ್ತದೆ.
 
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ದೇವಭಾಷೆಯ ಕಲ್ಪನೆಯೂ ಹಲವು ಸಮಾಜಗಳಲ್ಲಿವೆ. ದೇವಭಾಷೆಯನ್ನು ಅರಿಯಬಲ್ಲವರು ಅಪಾರ ಅಧಿಕಾರ ಪಡೆಯುತ್ತಿದ್ದರು. ಈ ಹೊತ್ತಿನ ದಿನಗಳಲ್ಲೂ ಟಿವಿಗಳಲ್ಲಿ ಭವಿಷ್ಯವನ್ನು ನುಡಿಯುವ, ಬ್ರಹ್ಮಾಂಡದ ಸತ್ಯಗಳನ್ನೆಲ್ಲ ಬಲ್ಲವರಂತೆ ವರ್ತಿಸುವ `ಜ್ಞಾನಿ~ಗಳು ತಾವು ಬಳಸುವ ಭಾಷೆ, ವಾಕ್ಯರಚನೆ, ಮಾತಿನ ಧಾಟಿಯಿಂದಲೇ ಜನರ ಮನಸ್ಸಿನ ಮೇಲೆ ಅಧಿಕಾರದ ಮುದ್ರೆ ಒತ್ತುತ್ತಾರೆ.

ಪ್ರಾಚೀನ ಕಾಲದಲ್ಲಿ ದೇವವಾಣಿಗೆ, ದೇವರು ನುಡಿದನೆನ್ನಲಾದ ಮಾತಿಗೆ, ಅಂಥ ಮಾತುಗಳ ಸಂಗ್ರಹಕ್ಕೆ ಇದ್ದ ಅಧಿಕಾರ ಈಗ ಪ್ರಜಾಪ್ರಭುತ್ವದಲ್ಲಿ ಹುಷಾರಾಗಿ ವಾಕ್ಯಗಳನ್ನು ರಚಿಸಿ ನಿರೂಪಿಸಿದ ಸಂವಿಧಾನಕ್ಕೆ, ಅಪರಾಧ ಮತ್ತು ದಂಡ ಸಂಹಿತೆಗೆ ಇದೆ. ಪ್ರಾಚೀನ ಕಾಲದ ವೇದಗಳು ವಿವಿಧ ಧರ್ಮಶಾಸ್ತ್ರಗಳು ಅಧಿಕೃತತೆಯನ್ನು ನೀಡುತಿದ್ದವು, ಇಂದು ಸಂವಿಧಾನ ಕಾನೂನುಗಳು ಅಧಿಕಾರಕ್ಕೆ ಅಧಿಕೃತತೆಯನ್ನು ನೀಡುವ ಪ್ರಮಾಣಗಳು. ಆ ಹೊತ್ತಿನ ಅವು, ಈ ಹೊತ್ತಿನ ಇವು ಎರಡೂ ಭಾಷೆಯ ರಚನೆಗಳೇ. 

ಇನ್ನು ಶಿಕ್ಷಣವೆಂದರೆ ಮಗು ಬದುಕನ್ನು ಅರಿಯಲು ಅಗತ್ಯವಾದ ಭಾಷೆಗಳನ್ನು ಕಲಿಸುವುದೇ ಉದ್ದೇಶವಾಗಿರುವ ಸಂಸ್ಥೆ. ಭಾಷೆಗಳು ಎಂದರೆ ಕನ್ನಡ, ಇಂಗ್ಲಿಶ್ ಇಂಥ ಭಾಷೆಗಳು ಮಾತ್ರವಲ್ಲ, ಗಣಿತದ ಭಾಷೆ, ಚರಿತ್ರೆಯ ಭಾಷೆ, ತಂತ್ರಜ್ಞಾನದ ಭಾಷೆ ಇವು ಕೂಡಾ. ಶಿಕ್ಷಣವೆಂದರೆ ಬಗೆಬಗೆಯ ಭಾಷೆಗಳ ಕಲಿಕೆಯಲ್ಲದೆ ಇನ್ನೇನೂ ಅಲ್ಲ.
 
ಯಾರು, ಎಂಥ ಜನವರ್ಗ ಶಿಕ್ಷಣ ಪಡೆಯಬಹುದು, ಎಂಥ ಶಿಕ್ಷಣ ಪಡೆಯಬಹುದು ಅನ್ನುವುದನ್ನೆಲ್ಲ ಸೂಕ್ಷ್ಮವಾಗಿ, ನಯವಾಗಿ ನಿರ್ಧರಿಸುತ್ತ ಶಿಕ್ಷಣ ಮತ್ತು ಧರ್ಮಗಳು ಕೂಡಾ ಗುಪ್ತವಾಗಿ ಸಮಾಜದ ಅಧಿಕಾರದ ಬಗೆಯನ್ನು ಪೋಷಿಸುತ್ತಲೇ ಇರುತ್ತವೆ.

ಸುಮ್ಮನೆ ಒಂದು ನಿಮಿಷ ಯೋಚಿಸಿ ನೋಡಿ- ನಾವು ಕಟ್ಟಿಕೊಂಡಿರುವ ಶಿಕ್ಷಣವೆಂಬ ಸಂಸ್ಥೆಯ ಉದ್ದೇಶ ಎಲ್ಲರಿಗೂ ಶಿಕ್ಷಣವನ್ನು ಕೊಡುವುದೋ, ಕಲಿಕೆಯ ಅವಕಾಶ ಎಲ್ಲರಿಗೂ ದೊರೆಯುವಂತೆ ಮಾಡುವುದೋ ಅಥವಾ ಬಗೆ ಬಗೆಯ ಉಪಾಯಗಳ ಮೂಲಕ ಸಾಧ್ಯವಾದಷ್ಟೂ ಜನರನ್ನು ಶಿಕ್ಷಣದಿಂದ ದೂರವಿಡುವುದೋ? ಶಿಕ್ಷಣದಿಂದ ದೂರವಿಡುವುದೆಂದರೆ ಅಧಿಕಾರದಿಂದಲೂ ದೂರವಿಡುವುದೇ ಅಲ್ಲವೇ?

ಯಾರು ಅಧಿಕಾರಿಗಳು, ಯಾರು ಅಧಿಕಾರಿಗಳಿಗಿಂತ ಮೇಲ್ಪಟ್ಟ ರಾಜಕಾರಣಿಗಳು, ಯಾರು ಸಮಾಜದ ಗಣ್ಯರು, ಆಢ್ಯರು ಅನ್ನುವುದೆಲ್ಲ, ಯಾರು ಅನ್ಯಾಯಕ್ಕೆ ಒಳಗಾದವರು, ದಮನಕ್ಕೆ ಗುರಿಯಾದವರು, ಅಧಿಕಾರವಿಲ್ಲದವರು ಅನ್ನುವುದೆಲ್ಲ ಅವರು ಬಳಸುವ ಭಾಷೆಯ ಮೂಲಕವೇ ತಿಳಿದುಬಿಡುತ್ತದೆ.

ಭಾಷೆಯಷ್ಟೇ ಅಲ್ಲ, ಜನರ ಅಂಗಭಂಗಿ, ಉಡುಪು, ಮಾತಿನ ದನಿ ಎಲ್ಲವೂ ಸಮಾಜದಲ್ಲಿರುವ ಅಧಿಕಾರವಿನ್ಯಾಸದ ಫಲಿತಾಂಶಗಳನ್ನು ಎತ್ತಿ ತೋರುತ್ತವೆ. ನಾವು ಶಿಕ್ಷಣ ಎಂದು ಯಾವುದನ್ನು ಕರೆಯುತ್ತೇವೆಯೋ ಅದು, ಮನರಂಜನೆ ಎಂದು ಕರೆಯುತ್ತೇವಲ್ಲ ಅದು, ಸಮೂಹ ಮಾಧ್ಯಮಗಳು ಎಂದು ಕರೆಯುತ್ತೇವಲ್ಲ ಅದು, ಧರ್ಮ ಎಂದು ಗುರುತಿಸುತ್ತೇವಲ್ಲ ಆ ಸಂಸ್ಥೆಗಳು ಎಲ್ಲವೂ ತೀರ ಸಹಜ, ತೀರ ಅನಿವಾರ್ಯ ಅನ್ನುವ ಹಾಗೆ ಸಮಾಜದಲ್ಲಿ ಇರುವ ಅಧಿಕಾರದ ವಿನ್ಯಾಸವನ್ನು ಸಮರ್ಥಿಸುವ ಕೆಲಸವನ್ನೇ ಮಾಡುತ್ತಿರುತ್ತವೆ.

ಪ್ರಭಾವಶಾಲೀ ಸಾಮಾಜಿಕ ಗುಂಪುಗಳು ಬಳಸುವ ಭಾಷೆ ಅವರ ಹಿತಾಸಕ್ತಿಯನ್ನು ಕಾಪಾಡುವ ಹಾಗೆಯೇ ಇರುತ್ತದೆ. ಯಾಕೆಂದರೆ ಭಾಷೆಯ ಮೇಲೆ ಹೆಚ್ಚಿನ ಅಧಿಕಾರ ಇರುವುದೇ ಈ ಗುಂಪುಗಳಿಗೆ. ರಾಜಕಾರಣಿಗಳು, ವಕೀಲರು, ಮುಖ್ಯ ಮಠ ಮಾನ್ಯಗಳ ಸ್ವಾಮೀಜಿಗಳು, ಮಾಧ್ಯಮಗಳ ಮೇಲೆ ಒಡೆತನ ಇರುವವರು, ಸಾಮಾಜಿಕ ಮನ್ನಣೆಗೆ ಪಾತ್ರರಾದವರು ಬಳಸುವ ಭಾಷೆಯನ್ನೇ ಗಮನಿಸಿ ನೋಡಿ.

ಹಾಗಾಗಿ ಮಾಧ್ಯಮಗಳಿಂದ ದೂರ ಇರುವವರನ್ನು, ಬರವಣಿಗೆಯ ದಾಖಲೆಗಳನ್ನು ಸೃಷ್ಟಿಮಾಡಲಾಗದವರನ್ನು, ಭಾಷೆಯಲ್ಲಿ ಸತ್ಯಗಳನ್ನು ಸೃಷ್ಟಿಸಲಾಗದವರನ್ನು ದಮನಿಸುವುದು, ಆಳುವುದು ತೀರ `ಸಹಜ~ ಅನ್ನಿಸುತ್ತದೆ, ದಬ್ಬಾಳಿಕೆ ಅದೃಶ್ಯವಾಗಿಯೂ ನಡೆಯುತ್ತದೆ. ನಾವು ಚಿಕ್ಕವರಿದ್ದಾಗ ಪಠ್ಯಪುಸ್ತಕಗಳಲ್ಲಿ ಸಿಪಾಯಿದಂಗೆಯ ಬಗ್ಗೆ ಓದುತಿದ್ದೆವು. ಆಮೇಲಷ್ಟೇ ಅದು ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ವರ್ಣನೆಗೊಂಡದ್ದು.

ನಮ್ಮನ್ನು ಆಳುತಿದ್ದ ಬ್ರಿಟಿಷರಿಗೆ 1856ರ ಘಟನೆ ದಂಗೆಯಾಗಿ ಕಂಡಿತ್ತು, ಅದನ್ನು `ನಮ್ಮ~ ದೃಷ್ಟಿಯಿಂದ ನೋಡಲು ತೊಡಗಿದ್ದು ಸ್ವಾತಂತ್ರ್ಯ ಬಂದ ದಶಕಗಳ ನಂತರವೇ. ಹಾಗೆಯೇ `1492ರಲ್ಲಿ ಕ್ರಿಸ್ಟೊಫರ್ ಕೊಲಂಬಸ್ ಅಮೆರಿಕ ಖಂಡದ ಅನ್ವೇಷಣೆ ಮಾಡಿದ~ ಎಂದು ಇಂದೂ ನಮ್ಮ ಮಕ್ಕಳು ಓದುವ ವಾಕ್ಯವನ್ನೇ ತೆಗೆದುಕೊಳ್ಳಿ.

ಅದು ಅಧಿಕಾರವುಳ್ಳ ಬಿಳಿಯ ಜನಕ್ಕೆ, ಅವರ ಮನೋಧರ್ಮವನ್ನು ಒಪ್ಪಿದ ನಮ್ಮಂಥ ಸಮಾಜಗಳಿಗೆ ಸಹಜವಾಗಿ ಕಾಣುತ್ತದೆ. ಆದರೆ ಅಮೆರಿಕ ಖಂಡದಲ್ಲಿ ನೆಲಸಿದ್ದ ಮೂಲನಿವಾಸಿಗಳ ದೃಷ್ಟಿಯಿಂದ ಒಮ್ಮೆ ನೋಡಿ. 1492ರಲ್ಲಿ ನಡೆದದ್ದು ಹೊಸ ಭೂಖಂಡದ ಅನ್ವೇಷಣೆಯಲ್ಲ, ದೊಡ್ಡ ಸ್ಥಳೀಯ ಜನಸಮುದಾಯದ ಸ್ವಾತಂತ್ರ್ಯ ಹರಣ ಮತ್ತು ವಿನಾಶದ ಆರಂಭ ಅನ್ನಿಸುವುದಿಲ್ಲವೇ? ಪಠ್ಯಪುಸ್ತಕಗಳಲ್ಲಿ ಬಳಸುವ ಭಾಷೆ ಪ್ರಬಲವಾಗಿರುವ ಜನರ ಗುಂಪಿನ ಸತ್ಯವನ್ನು ಹೇಳುತ್ತದೆ, ದುರ್ಬಲ ಗುಂಪಿನ ಸತ್ಯವನ್ನು ಬಚ್ಚಿಡುತ್ತದೆ.

ಕೆಲವೊಮ್ಮೆ ಸಂಭಾಷಣೆಯಲ್ಲಿ ನೀವು ಅಸಹಾಯಕರಾಗುತ್ತೀರಿ. `ನೀವೇನು ಬುದ್ಧಿಜೀವಿಗಳೇ?~, `ನೀವು ವಿಚಾರವಾದಿಗಳೇ?~, `ನೀವು ಸಮಾಜವಾದಿಗಳೇ?~ ಅನ್ನುವ ಪ್ರಶ್ನೆ ಕೇಳಿದರೆ ಹೇಗೆ ಉತ್ತರಿಸುತ್ತೀರಿ? ಈ ಮೂರೂ ಪದಗಳು ಈಗ ಲೇವಡಿಗೆ ಒಳಗಾಗಿವೆ. ಅಧಿಕಾರವಿರುವ ಗುಂಪು ಲೇವಡಿಯ ಮೂಲಕ, ಪದಗಳಿಗೆ ಇರುವ ಅರ್ಥವನ್ನು ತಿರುಚುವ ಮೂಲಕ ತನ್ನನ್ನು ತಾನು ಸಮರ್ಥಿಸಿಕೊಳ್ಳುವ, ತನ್ನ ವಿರೋಧಿಗಳನ್ನು ಹೀಗಳೆಯುವ ಕೆಲಸ ಮಾಡುತ್ತಲೇ ಇರುತ್ತದೆ.
 
ಭಾಷೆಯನ್ನು ಬೇರೆ ಥರ ಬಳಸುವ ಮೂಲಕ ಹೊಸ ಸಮಾಜವನ್ನು ನಿರ್ಮಿಸಲು ಸಾಧ್ಯವೇ? ಕುಂಟರು, ಹೆಳವರು, ವಿಕಲಾಂಗರು, ದೈಹಿಕ ನ್ಯೂನತೆ ಉಳ್ಳವರು, ಇತ್ಯಾದಿ ಪದಗಳ ಬಳಕೆಯನ್ನು ಬಿಟ್ಟುಕೊಟ್ಟು ಅಸಾಮರ್ಥ್ಯ ಉಳ್ಳವರು ಅಥವ ಭಿನ್ನ ಸಾಮರ್ಥ್ಯ ಉಳ್ಳವರು, ಬದುಕಿನಲ್ಲಿ ಭಿನ್ನ ಸವಾಲನ್ನು ಎದುರಿಸಬೇಕಾದವರು ಎಂದು ಗುರುತಿಸುವ ಪ್ರಯತ್ನದ ಹಿಂದೆ ಸಾಮಾಜಿಕ ಸೌಜನ್ಯ ಮಾತ್ರವಲ್ಲ ಅಂಥ ಜನ ತಾವೂ ಸಮಾಜದ ಗೌರವಾನ್ವಿತ ಸದಸ್ಯರು ಎಂದು ಭಾವಿಸುವಂತೆ ಆಗಬೇಕು ಅನ್ನುವ ಅಪೇಕ್ಷೆಯೂ ಕೆಲಸಮಾಡುತ್ತದೆ.
 
ವೃದ್ಧರು, ಮುದುಕರು ಅನ್ನುವ ಬದಲಾಗಿ ಹಿರಿಯ ನಾಗರಿಕರು ಅನ್ನುವುದು, ಭಿನ್ನಲಿಂಗಿಗಳನ್ನು ಮಂಗಳಮುಖಿಯರು ಎಂದು ಗುರುತಿಸುವುದು ಇವೆಲ್ಲದರ ಹಿಂದೆ ಇರುವ ದೃಷ್ಟಿಕೋನ ಒಂದೇ- ನಮ್ಮ ಭಾಷೆ ಬದಲಾದರೆ ನಮ್ಮ ಗ್ರಹಿಕೆಯೂ ಬದಲಾದೀತು ಅನ್ನುವ ನಂಬಿಕೆಯ ದೃಷ್ಟಿಕೋನ.
 
ಬಳಸುವ ಮಾತು ಬದಲಾದರೆ ಭಿನ್ನಸಾಮರ್ಥ್ಯವುಳ್ಳವರ, ಹಿರಿಯನಾಗರಿಕರ, ಮಂಗಳಮುಖಿಗಳ ಬದುಕಿನಲ್ಲಿ ಕಿಂಚಿತ್ತಾದರೂ ಬದಲಾವಣೆ ಆದೀತೆ? ಸಮಾಜದಲ್ಲಿ ಇರುವ ಪೂರ್ವಗ್ರಹಗಳು ಪದಗಳ ಬದಲಾವಣೆಯಿಂದ ಇಲ್ಲವಾಗುತ್ತದೆಯೇ? ಬಳಸುವ ಭಾಷೆಯ ಬದಲಾವಣೆ ವಾಸ್ತವದ ಬದಲಾವಣೆಗೂ ಕಾರಣವಾಗಬೇಕಲ್ಲವೇ?

ಭಾಷೆ, ಸಮಾಜ ಮತ್ತು ಅಧಿಕಾರ ಇವು ಮೂರೂ ಪರಸ್ಪರ ಸಂಬಂಧ ಇರುವ ಸಂಗತಿಗಳು. ಈ ಸಂಬಂಧಕ್ಕೆ ಗಮನಕೊಟ್ಟು ಸಮಾಜವನ್ನು ತಿಳಿಯಲು ಯತ್ನಿಸುವುದು ಎಂದರೆ ಸಮಾಜದ ರಚನೆ, ಸಮಾಜದ ಕಾರ್ಯನಿರ್ವಹಣೆ, ಒಟ್ಟು ಸಮಾಜದ ಬಗ್ಗೆ ಬೇರೆ ಬೇರೆ ಸಮೂಹಗಳಲ್ಲಿ ಗುಪ್ತವಾಗಿ ಇರುವ, ಬಲುಮಟ್ಟಿಗೆ ಅದೃಶ್ಯವಾಗಿರುವ ಪೂರ್ವಗ್ರಹಗಳನ್ನು ಅರಿಯುವ ಕೆಲಸವೇ ಆಗುತ್ತದೆ.

ಸಮಾಜದ ವಾಸ್ತವತೆಯಲ್ಲಿ ನಮ್ಮನ್ನು ನಾವು ಅರಿಯುವ, ನಮ್ಮ ಮತ್ತು ಇತರರ ಸಂಬಂಧದ ಸ್ವರೂಪವನ್ನು ಅರಿಯುವ, ಮನುಷ್ಯ ಸಮಾಜದಲ್ಲಿ ನಿಜವಾಗಿ ಇರಬಾರದ ಅನ್ಯಾಯವನ್ನು ಕಾಣುವುದಕ್ಕೆ, ಕಂಡು ನಿವಾರಿಸಲು ಯತ್ನಿಸುವುದಕ್ಕೆ ದಾರಿಯಾದೀತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT