ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ನಾಶ: ಬದುಕೇ ಬರಿದು...

Last Updated 7 ಜೂನ್ 2011, 19:30 IST
ಅಕ್ಷರ ಗಾತ್ರ

`ಸ್ಥಳೀಯರಿಗೆ ಸಾಕಷ್ಟು ಉದ್ಯೋಗಾವಕಾಶ ನೀಡುವ ಗಣಿಗಾರಿಕೆಯನ್ನು ನೀವೇಕೆ  ವಿರೋಧಿಸುತ್ತೀರಿ?~...ಮುಂಬೆನಲ್ಲಿ ಇನ್‌ವೆಸ್ಟ್‌ಮೆಂಟ್ ಬ್ಯಾಂಕರ್ ಆಗಿದ್ದ ಶ್ರೀಕಾಂತ್, ನನ್ನ ಮುಂದೆ ಈ ಪ್ರಶ್ನೆ ಇಟ್ಟಾಗ ನನಗೆ ಅಚ್ಚರಿ! ದೊಡ್ಡ ದೊಡ್ಡ ಬ್ಯಾಂಕಿಂಗ್ ಕಂಪೆನಿಗಳಲ್ಲಿ ಕೆಲಸ ಮಾಡಿದ್ದ ಅವರನ್ನು ನಾನು ತುಂಬ ವರ್ಷಗಳಿಂದಲೂ ಬಲ್ಲೆ. ಅವರೊಬ್ಬ ಮೇಧಾವಿ, ಮುಕ್ತ ಮನಸ್ಸಿನವರು.

ಅಪರೂಪಕ್ಕೆ ಅವರನ್ನು ಭೇಟಿಯಾಗುತ್ತಿದ್ದೆ. ಅವರೊಂದಿಗಿನ ಒಡನಾಟ ನನಗೆ ಖುಷಿ ಕೊಡುತ್ತಿತ್ತು.ಇತ್ತೀಚೆಗೆ ಅವರು ನಗರಕ್ಕೆ ಬಂದಿದ್ದರು. `ಹೊಸದಾಗಿ ಗಣಿಗಾರಿಕೆ ಯೋಜನೆ ಶುರುವಾದಾಗ, ಅದರಿಂದ ಸಾಕಷ್ಟು ಉದ್ಯೋಗಾವಕಾಶ ದೊರೆಯುತ್ತದೆ ಮತ್ತು ಸ್ಥಳೀಯ ಆರ್ಥಿಕತೆ ಸುಧಾರಿಸುತ್ತದೆ ಎಂದು ನಿಮಗೆ ಅನ್ನಿಸುವುದಿಲ್ಲವೇ?~ ಎಂಬುದು ಶ್ರೀಕಾಂತ್ ಅವರ ಸರಳ ಪ್ರಶ್ನೆಯಾಗಿತ್ತು.

ಇತ್ತೀಚೆಗೆ ನಡೆದ ವಿಚಾರಸಂಕಿರಣವೊಂದರಲ್ಲಿ ಐ.ಟಿ ವೃತ್ತಿಪರರೊಬ್ಬರು ಗಣಿಗಾರಿಕೆಗೆ ಅಪಾರ ಪ್ರಮಾಣದಲ್ಲಿ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕೆನ್ನುವ ತಮ್ಮ ಕಂಪೆನಿಯ ನಿರ್ಧಾರ  ಸಮರ್ಥಿಸಿಕೊಂಡಿದ್ದರು.

ಗಣಿಗಾರಿಕೆ ಸಂಬಂಧವಾಗಿ ಮಂಗಳೂರಿನಲ್ಲಿ 2000 ಎಕರೆಗೂ ಹೆಚ್ಚಿನ ಪ್ರಮಾಣದ ಜಮೀನು ಮಂಜೂರು ಮಾಡುವಂತೆ ಸರ್ಕಾರವನ್ನೂ ಅವರು ಕೇಳಿದ್ದರಂತೆ. ಅಲ್ಲದೇ ಇಷ್ಟೇ ಪ್ರಮಾಣದ ಜಮೀನನ್ನು ಪುಣೆಯಲ್ಲಿಯೂ ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನ ಮಾಡಿದ್ದರು.

ಪುಣೆಯಲ್ಲಿ ಸಾಕಷ್ಟು ಉದ್ಯೋಗಾವಕಾಶಕ್ಕೆ ಅನುಕೂಲವಾಗುವಂತೆ ಕೈಗಾರಿಕೆ  ಸ್ಥಾಪಿಸಲು ಆ ಕಂಪೆನಿಯು ಉದ್ದೇಶಿಸಿತ್ತು. `ನಾವು ಸ್ಥಳೀಯರಿಗೆ ಉದ್ಯೋಗ ನೀಡುತ್ತೇವೆ. ಸ್ಥಳೀಯ ಗ್ರಾಮಸ್ಥರನೇಕರಿಗೆ ನಾವು ನಮ್ಮ ಕಂಪೆನಿಯಲ್ಲಿ ಕೆಲಸ ನೀಡಲು ಮುಂದಾಗಿದ್ದೇವೆ~ ಎಂದು ಅವರು ಹೇಳಿದ್ದರು.

ನಗರವಾಸಿಗಳ ಇಂಥ ಧೋರಣೆ /ವರ್ತನೆ  ನನಗೆ ಅರ್ಥವಾಗುವುದಿಲ್ಲ. ಈ ಎಲ್ಲ ವೃತ್ತಿಪರರು ಹೇಳುವುದರಲ್ಲಿ ಅರ್ಥವಿದೆ ಅಥವಾ ಹೇಳಿದ್ದು ಸರಿಯಾಗಿದೆ ಎಂದು ನಾವು ಅರ್ಥೈಸಬಾರದು.

ಈಗ ಮತ್ತೆ ಶ್ರೀಕಾಂತ್ ಕೇಳಿದ ಪ್ರಶ್ನೆಗೆ ಬರೋಣ. `ನಾನು ಮೂರು ವಿಭಿನ್ನ ಚಿಂತನೆಗಳನ್ನು ಮುಂದಿಟ್ಟುಕೊಂಡು ನಿಮ್ಮ ಪ್ರಶ್ನೆಗೆ ಉತ್ತರಿಸುವೆ~ ಎಂದು ಅವರಿಗೆ ಹೇಳಿದೆ.

ಮೊದಲನೆಯದಾಗಿ, ಇಡೀ ಭಾರತದ ಭೂಪ್ರದೇಶ ಲೆಕ್ಕಕ್ಕೆ ತೆಗೆದುಕೊಂಡರೆ ನಗರ ಪ್ರದೇಶಗಳ ವ್ಯಾಪ್ತಿ ಅಬ್ಬಬ್ಬಾ ಎಂದರೆ, ಶೇ 3 ಕ್ಕಿಂತ ಹೆಚ್ಚಿಲ್ಲ ಎನ್ನುವುದನ್ನು ನೀವು ಗಮನಿಸಬೇಕು. ಇನ್ನು ಇಲ್ಲಿನ ಜನಸಂಖ್ಯೆ  ಪರಿಗಣಿಸಿದರೆ ಸುಮಾರು ಶೇ 40 ರಷ್ಟು ಇದೆ. ಮುಂದಿನ 10 ವರ್ಷಗಳಲ್ಲಿ ಈ ಪ್ರಮಾಣವು ಶೇ 50 ರಷ್ಟು ವೃದ್ಧಿಯಾಗುತ್ತದೆ.
ನಗರವಾಸಿಗಳು ಶೇ 70 ರಷ್ಟು ನೈಸರ್ಗಿಕ ಸಂಪನ್ಮೂಲಗಳನ್ನು ಬಳಸುತ್ತಾರೆ...~

ಶ್ರೀಕಾಂತ್ ಕೂಡ ನನ್ನಂತೆಯೇ ಯೋಚಿಸುತ್ತಾರೆ ಎನ್ನುವುದು ನನಗೆ ಖಾತ್ರಿ ಇರಲಿಲ್ಲ.
ಆದರೂ, ನಾನು ಪಟ್ಟುಬಿಡಲಿಲ್ಲ, `ವಿದ್ಯುತ್, ನೀರು ಇವೇ ಮುಂತಾದ ಅಗತ್ಯಗಳಿಗೆ ನಾವು ಉಳಿದ ಶೇ 97 ರಷ್ಟು ಭೂಮಿಯನ್ನು ಅವಲಂಬಿಸುವುದಿಲ್ಲ ಎಂದು ನಮಗೆ ನಾವು ಹೇಳಿಕೊಳ್ಳಲು ಸಾಧ್ಯವೇ... ನಾವು ಬಳಸುವ ಪ್ರತಿಯೊಂದು ವಸ್ತುವಿಗೂ ನೈಸರ್ಗಿಕ ಸಂಪನ್ಮೂಲದ ಬಳಕೆಯಾಗುತ್ತದೆ ಅಲ್ಲವೇ? ...~ ಎಂದು ನಾನು ವಾದ ಮಂಡಿಸಿದೆ.

 ಅವರು ಈ ಚರ್ಚೆಯಲ್ಲಿ ಕುತೂಹಲ ತೋರಿಸಿದ್ದರಿಂದ ನಾನು ಮುಂದುವರಿಸಿದೆ.  `ಈ ಎಲ್ಲ ಖನಿಜ ಸಂಪನ್ಮೂಲಗಳ ಬಳಕೆಯನ್ನು ಮತ್ತು ಕಾಡನ್ನೇ ನೆಚ್ಚಿಕೊಂಡವರ ಬದುಕನ್ನು ನಾಶಪಡಿಸುವುದನ್ನು ನಿಲ್ಲಿಸಿದರೆ, ಅವರು ಸಾವಿರಾರು ವರ್ಷಗಳ ತಮ್ಮ ಜೀವನ ಕ್ರಮವನ್ನು ಮುಂದುವರಿಸಿಕೊಂಡು ಹೋಗುತ್ತಾರೆ. ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಮಾತ್ರ ಇವರು ನಗರದ ಮಾರುಕಟ್ಟೆಯನ್ನು ಆಶ್ರಯಿಸುತ್ತಾರೆಯೇ ಹೊರತೂ ಉಳಿದಂತೆ ಇವರು ನಗರದ ಆರ್ಥಿಕತೆ ಅವಲಂಬಿಸದೇ ಬದುಕುವವರು.
 
ಇವರು ತಮ್ಮ ಸಾಂಪ್ರದಾಯಿಕ ಕೌಶಲದೊಂದಿಗೆ ಹೊಟ್ಟೆಪಾಡು ನೋಡಿಕೊಳ್ಳುತ್ತಿದ್ದಾರೆ ಮತ್ತು ತಮ್ಮದೇ ಜೀವನ ಕ್ರಮದಲ್ಲಿ ಘನತೆಯಿಂದ ಬದುಕುತ್ತಿದ್ದಾರೆ~.ನಾನು ಇಷ್ಟು ಹೇಳಿದ ಮೇಲೂ ಶ್ರೀಕಾಂತ್‌ಗೆ ಮನವರಿಕೆ ಆದಂತೆ ಕಾಣಲಿಲ್ಲ. `ಅದೆಲ್ಲ ಸರಿ, ಗ್ರಾಮೀಣ ಜನರು ನಮ್ಮಂತೆಯೇ, ಅಂದರೆ ನಗರವಾಸಿಗಳಂತೆಯೇ ಬದುಕಲು ಹಂಬಲಿಸುತ್ತಿಲ್ಲವೇ?

ಅವರಿಗೂ ಬಣ್ಣದ ಟಿವಿ, ಕಾರು, ಏರ್‌ಕಂಡೀಷನ್ ವ್ಯವಸ್ಥೆ ಎಲ್ಲವೂ ಬೇಕು ಅನ್ನಿಸುತ್ತದೆ. ಆದರೆ ನಾವು ಅವರ ಈ ಆಸೆಗಳನ್ನು ಮಣ್ಣುಪಾಲುಮಾಡುತ್ತಿದ್ದೇವೆ ಅಲ್ಲವೇ? ಎಂದು ಪ್ರಶ್ನಿಸಿದರು. ಅವರ ವಾದವೇನು ಎಂಬುದು ನನಗೆ ಅರ್ಥವಾಯಿತು.

`ಜೀವನದ ಗುಣ ಮಟ್ಟ ಅಂದರೆ ಏನು ಎನ್ನುವುದನ್ನು ವಿವರಿಸುವುದು ಕಷ್ಟ~ ಎಂದು ಪ್ರತಿಕ್ರಿಯಿಸಿದೆ.  ಶ್ರೀಮಂತರೂ ಸೇರಿದಂತೆ ಬಹುತೇಕ ನಗರವಾಸಿಗಳು ಏನೂ ಕೊರತೆ ಇಲ್ಲದಂತೆಯೇ ಬದುಕುತ್ತಿದ್ದಾರೆ. ತಮ್ಮೆಲ್ಲ ಅಗತ್ಯ ಹಾಗೂ ಆಸೆಗೆ ತಕ್ಕಂತೆ ಅವರು ಬದುಕುತ್ತಿದ್ದರೂ ನೆಮ್ಮದಿ ಹಾಗೂ ಸಮಾಧಾನ ಅವರಲ್ಲಿ ಕಾಣುವುದಿಲ್ಲ.

ಇದನ್ನು ಅರ್ಥಮಾಡಿಕೊಳ್ಳದಷ್ಟು ಅಜ್ಞಾನಿಗಳೇನೂ ಅಲ್ಲ ಹಳ್ಳಿಗಾಡಿನ ಜನರು. ಆದರೆ, ಆರ್ಥಿಕ ಮುಗ್ಗಟ್ಟು ಎದುರಾದಾಗ, ಅವರು ನಗರಗಳಿಗೆ ವಲಸೆ ಬರುತ್ತಾರೆ. ಇದು ಕೇವಲ ಹಳ್ಳಿಗರ ಸಮಸ್ಯೆ ಮಾತ್ರವಲ್ಲ; ಕೆಲವೊಂದು ಸಂದರ್ಭಗಳಲ್ಲಿ ನಗರವಾಸಿಗಳೂ ಉದ್ಯೋಗ ಸಿಗದೇ ಪರದಾಡುವುದುಂಟು~ ಎಂದು ನಾನು ಹೇಳಿದೆ.

ನಮ್ಮ ಜಿಲ್ಲೆಗಳು, ತಾಲ್ಲೂಕುಗಳು, ಬ್ಲಾಕ್‌ಗಳು, ಗ್ರಾಮಗಳು ಹಾಗೂ ಸಾವಿರಾರು ಸಣ್ಣ ವಸತಿನೆಲೆಗಳು ಮತ್ತು ಕುಗ್ರಾಮಗಳಲ್ಲಿ ಸರಿಯಾದ ಆರ್ಥಿಕ ವ್ಯವಸ್ಥೆ ಕಲ್ಪಿಸುವಂತಹ ಉತ್ತಮ ಆಡಳಿತ ವ್ಯವಸ್ಥೆ ರೂಪುಗ್ಳೊಬೇಕು. ಆಗ ಮಾತ್ರ ಈ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಈ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ.

ಗಣಿಗಾರಿಕೆಯಿಂದ ಸಾಕಷ್ಟು ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ ಎನ್ನುವ ಭಾವನೆ ಅನೇಕರಲ್ಲಿದೆ. ಆದರೆ, 50 ವರ್ಷಗಳ ಇತಿಹಾಸ  ಕೆದಕಿ ನೋಡಿದರೆ ವಾಸ್ತವ ಏನು ಎನ್ನುವುದು ನಿಚ್ಚಳವಾಗುತ್ತದೆ.

ಕಳೆದ ಅರ್ಧ ಶತಮಾನದಲ್ಲಿ ನಡೆದ ಇಂಥ ಅಭಿವೃದ್ಧಿ ಯೋಜನೆಗಳಿಂದ ಗ್ರಾಮೀಣ ಜನರು, ಕಾಡಿನ ಮಕ್ಕಳು ತಮ್ಮ ನೆಲೆಕಳೆದುಕೊಂಡಿದ್ದಾರೆ. ಕಾಡು-ಮೇಡು, ನದಿ...ಇವೇ ಮುಂತಾದವುಗಳನ್ನು ಆಶ್ರಯಿಸಿಕೊಂಡು ಘನತೆಯಿಂದ ಬದುಕುವ ಸಾಮರ್ಥ್ಯ ಈ ಜನರಿಗಿದೆ. ಆದರೆ, ಅಭಿವೃದ್ಧಿಯ ಹೆಸರಿನಲ್ಲಿ ಅವರ ಬದುಕುವ ಹಕ್ಕನ್ನೇ ಕಸಿದುಕೊಳ್ಳಲಾಗಿದೆ ಅಲ್ಲವೇ?

ಜೀವನದ   ಗುಣ ಮಟ್ಟ ಅಂದರೆ ಏನು ಎನ್ನುವುದನ್ನು ವಿವರಿಸುವುದು ಕಷ್ಟ.ಶ್ರೀಮಂತರೂ  ಸೇರಿದಂತೆ ಬಹುತೇಕ ನಗರವಾಸಿಗಳು ಏನೂ ಕೊರತೆ ಇಲ್ಲದಂತೆಯೇ ಬದುಕುತ್ತಿದ್ದಾರೆ. ತಮ್ಮೆಲ್ಲ ಅಗತ್ಯ ಹಾಗೂ ಆಸೆಗೆ ತಕ್ಕಂತೆ   ಬದುಕುತ್ತಿದ್ದರೂ ನೆಮ್ಮದಿ ಹಾಗೂ ಸಮಾಧಾನ ಅವರಲ್ಲಿ ಕಾಣುವುದಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT