ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಮಾನದಿಂದ ಓಡಿದ ಓಣಿ ಬದಿಯಲ್ಲೇ ಸನ್ಮಾನ!

Last Updated 21 ಏಪ್ರಿಲ್ 2013, 8:31 IST
ಅಕ್ಷರ ಗಾತ್ರ

`ನಾನು ಡಿಲ್ಲಿಗೆ ಹೋಗುವವನಿದ್ದೇನೆ'
1978ರ ಸುಡುಬಿಸಿಲು ಬೆನ್ನಿಗೆ ಬೀಳುತ್ತಿದ್ದಾಗ ಉದ್ದಿನ ಗದ್ದೆಯಲ್ಲಿ ನಾನು ಹೇಳಿದ ಮಾತನ್ನು ಕೇಳಿ ಬಾಗಿ ಉದ್ದು ಕೀಳುತ್ತಿದ್ದ ನರ್ಸಿ ಶೆಡ್ತಿಯವರು ಬೆನ್ನನ್ನು ನೇರ ಮಾಡಿದರು.

`ಅವರು ತೀರಿಕೊಂಡ ನಂತರವಂತೂ ಠಿಕಾಣಿಯಿಲ್ಲದೆ ನೀನು ಊರೂರು ತಿರುಗುತ್ತಿದ್ದಿ. ಯಕ್ಷಗಾನ ಅಂತೆಲ್ಲ ಹೇಳಿಕೊಂಡು ಮನೆಗೂ ಸರಿಯಾಗಿ ಬರುವುದಿಲ್ಲ. ಇನ್ನು ಡಿಲ್ಲಿಗೆ ಹೋದರಂತೂ ಇಲ್ಲಿಯವರಿಗೆ ಕೈ ತಪ್ಪಿದಂತೆಯೇ. ನಿನ್ನ ಮನೆಯವರಿಗೆ ನಾನೇನು ಹೇಳುವುದು! ಅಂದ ಹಾಗೆ ಸಂಜೀವಾ, ನಿನಗೆ ಹಿಂದಿ ಬರುತ್ತೇನೊ, ಡಿಲ್ಲಿಯಲ್ಲಿ ತಿರುಗಬೇಕಾದರೆ ಹಿಂದಿ ಬೇಕಲ್ಲವಾ?' ಎಂದವರೇ ಮತ್ತೆ ಬಾಗಿ ಉದ್ದು ಕೀಳತೊಡಗಿದರು.

ಗುರುಗಳಾದ ಗುಂಡಿಬೈಲು ನಾರಾಯಣ ಶೆಟ್ಟರು ತೀರಿಕೊಂಡರೂ ನನಗೆ ಅವರ ಮನೆಯ ಸಂಪರ್ಕ ತಪ್ಪಿರಲಿಲ್ಲ. ಗುರುಪತ್ನಿ ನರ್ಸಿ ಶೆಡ್ತಿಯವರ `ಅಮ್ಮನ ಆಸರೆ' ನನಗಲ್ಲಿ ಇದ್ದೇ ಇತ್ತು. ನಾನು ಆಗೀಗ ಹೋಗುವುದು, ಹೊಲದಲ್ಲಿ ಉದ್ದು ಕೀಳಲು ಸಹಾಯ ಮಾಡುವುದು, ಏತದಿಂದ ನೀರು ಬಸಿಯುವುದು- ಎಲ್ಲ ಮಾಡುತ್ತಿದ್ದೆ.

ನನಗೆ ಹಿಂದಿ ಬಿಡಿ, ಕನ್ನಡವೇ ಚೆನ್ನಾಗಿ ಬರುವುದಿಲ್ಲ. ಇದನ್ನು ನಾನು ಗುರುಗಳಾದ ನೀಲಾವರ ರಾಮಕೃಷ್ಣಯ್ಯನವರಲ್ಲಿ ಹೇಳಿಯೂ ಇದ್ದೆ. `ನಿನಗೆ ಭಾಷೆ ಬತ್ತಿಲ್ಲ ಮಾರಾಯ, ಹಂಗಾರೆ ಯಕ್ಷಗಾನದವರಿಗೆ ಯಾರಿಗೆ ಹಿಂದಿ ಬತ್ತ್ ಹೇಳ್, ಹಿಂದಿ ಬಪ್ಪೋರ್ ಯಾರಿಲ್ಲೆ. ಹಾಗಂತ ಈ ಅವಕಾಶವನ್ನು ಬಿಡೂಕಾತ್ತ? ಬಿ.ವಿ. ಕಾರಂತರ ಜೊತೆ ಕೆಲಸ ಮಾಡೋದು ಕುಶಲ್ ಅಂತ ತಿಳ್ಕೊಂಡಿಯಾ? ನೀನು ಹೋಯ್ಕ ಹೋಯ್ಕೆ!'.

ನೀಲಾವರ ರಾಮಕೃಷ್ಣಯ್ಯ

`ನಾನು ಹಿಂದಿ ಬರುವುದಿಲ್ಲ' ಎಂದು ಹೇಳಿದ್ದಕ್ಕೆ ನೀಲಾವರದ ಗುರುಗಳು ಕೊಟ್ಟ ಉತ್ತರವಿದು. ಆಗಲೇ ಯಕ್ಷಗಾನ ಕೇಂದ್ರದಲ್ಲಿ ನನ್ನ ಕಲಿಕೆಯ ಅವಧಿ ಮುಗಿದು, ಅಲ್ಪಕಾಲ ಮೇಳದ ತಿರುಗಾಟವೂ ಆಗಿ, ಹವ್ಯಾಸಿ ಸಂಘಸಂಸ್ಥೆಗಳಲ್ಲಿ ಕಲಾವಿದನಾಗಿ ಓಡಾಡುತ್ತಿದ್ದೆ. ಹಾಗೆಂದು, ಯಕ್ಷಗಾನ ಕೇಂದ್ರದ ಮತ್ತು ಅಲ್ಲಿನ ಗುರುಗಳ ಸಂಪರ್ಕ ಕಡಿದು ಹೋಗಿರಲಿಲ್ಲ. ನಾಟಕಕಾರ ಬಿ.ವಿ. ಕಾರಂತರು ತಮ್ಮ ನಾಟಕಕ್ಕೆ ಪೂರಕವಾಗಿ ಯಕ್ಷಗಾನ ಕಲಿಸುವವರನ್ನು ಯಕ್ಷಗಾನ ಕೇಂದ್ರದಿಂದ ಕಳಿಸಿಕೊಡಿ ಅಂತ ಪ್ರೊಫೆಸರ್ ಕು.ಶಿ. ಹರಿದಾಸ ಭಟ್ಟರಲ್ಲಿ ಹೇಳಿದ್ದರಂತೆ. ಕು.ಶಿ. ಅವರ ಸೂಚನೆಯ ಮೇರೆಗೆ ನೀಲಾವರ ರಾಮಕೃಷ್ಣಯ್ಯನವರು ನನ್ನನ್ನು ಕರೆಸಿ ದೆಹಲಿಗೆ ಹೋಗುವಂತೆ ಆಗ್ರಹಿಸಿದ್ದರು.

ಬಿ.ವಿ. ಕಾರಂತರ ಹೆಸರು ಕೇಳಿದ ಕೂಡಲೇ ನನ್ನ ಕಿವಿ ಅರಳಿತು. ನಾನು ಯಕ್ಷಗಾನ ಕೇಂದ್ರದ ವಿದ್ಯಾರ್ಥಿಯಾಗಿದ್ದಾಗ ಅವರು ಎಂಜಿಎಂ ಕಾಲೇಜಿಗೆ ಬಂದು ನಾಟಕ ತಾಲೀಮು ಮಾಡಿಸಿದುದನ್ನು ನೋಡಿದ್ದೆ. ಸಾಂಪ್ರದಾಯಿಕ ಯಕ್ಷಗಾನವನ್ನು ದೃಶ್ಯದಾಖಲೆ ಮಾಡಿಸಿದುದನ್ನು ಹತ್ತಿರದಿಂದ ಕಂಡಿದ್ದೆ.

`ನೋಡು ಸಂಜೀವ, ಕಳೆದ ವರ್ಷ ನಮ್ಮ ಕೇಂದ್ರದಿಂದ ಡಿಲ್ಲಿಗೆ ಹೋದ ವಿದ್ಯಾರ್ಥಿಗಳಿಗೆ ಕೈ ತುಂಬ ದುಡ್ಡು ಕೊಟ್ಟಿದ್ದಾರೆ. ನೀನಾದರೋ ಬದುಕಿನಲ್ಲಿ ಕಷ್ಟಪಟ್ಟು ಅನುಭವ ಇದ್ದವನು. ಅಲ್ಲದೆ, ನಿನ್ನ ಜೊತೆಗೆ ಪೇತ್ರಿಯ ಮಂಜುನಾಥನೂ ಬರುತ್ತಾನೆ. ಭಾಷೆ ಬರೂದಿಲ್ಲ ಅಂತ ತಲೆಬಿಸಿ ಮಾಡಬೇಡ. ಕಲೆಗೆ ಭಾಷೆ ಎಂಬುದಿಲ್ಲ ಮಾರಾಯ... ನಾಳೆ ಕಾಲೇಜಿನ ಆಫೀಸಿಗೆ ಹೋಗಿ ಕು.ಶಿ. ಅವರನ್ನು ಕಾಣು' ಎಂದುಬಿಟ್ಟರು.

ಆದೇಶದ ಧ್ವನಿ ಇರುವ ವಾಕ್ಯವನ್ನು ಕೇಳಿ ನಾನು ಸಣ್ಣಗೆ ಕಂಪಿಸಿದೆ. `ಹಿಂದಿ ಬರುವುದಿಲ್ಲ' ಎಂಬ ಹಿಂಜರಿಕೆ ಒಳಗೊಳಗೆ ಇದ್ದರೂ ಅಲ್ಲಿ ಹೋದರೆ ಚೆನ್ನಾಗಿ ದುಡ್ಡುಕೊಡುತ್ತಾರೆ ಎಂಬ ಸೆಳೆತ ಅದರ ವಿರುದ್ಧ ದಿಕ್ಕಿನಲ್ಲಿ ವೊಳೆಯಲಾರಂಭಿಸಿತು. ಆಗೆಲ್ಲ ಬಯಲಾಟದಲ್ಲಿ ಇಡೀ ರಾತ್ರಿ ಚೆಂಡೆ ಬಾರಿಸಿದರೆ ಮೂರು ರೂಪಾಯಿ ಕೊಡುತ್ತಿದ್ದರು. ಇಂಥ ಕಾಲದಲ್ಲಿ ಎಲ್ಲಾದರೂ ಸ್ವಲ್ಪ ಹೆಚ್ಚು ದುಡ್ಡು ಸಿಗುತ್ತದೆ ಎಂದಾಗ ಯಾರು ನಿರಾಕರಿಸುತ್ತಾರೆ!

ಆದರೆ, ಗುರುಪತ್ನಿ ನರ್ಸಿ ಶೆಡ್ತಿಯವರೂ `ಹಿಂದಿ ಬಾರದೆ ಡಿಲ್ಲಿಯಲ್ಲಿ ಏನು ಮಾಡುತ್ತಿ ಮಾರಾಯ?' ಎಂದದ್ದು ಕೇಳಿ ನನಗೆ ಆ ರಾತ್ರಿಯಿಡೀ ನಿದ್ದೆ ಬರಲಿಲ್ಲ. ಗುಂಡಿಬೈಲ್ ನಾರಾಯಣ ಶೆಟ್ಟರ ಜಗಲಿಯಲ್ಲಿ ಸುಮ್ಮನೆ ಕುಳಿತಿದ್ದೆ.

`ಹೆಂಗಾದರೂ ಅಡ್ಡಿಯಿಲ್ಲ, ನೀನು ಡಿಲ್ಲಿಗೆ ಹೋಗಲೇಬೇಕು ಮಾರಾಯ' ಎಂದರು ರಘು ಶೆಟ್ಟರು. ಗುಂಡಿಬೈಲ್ ನಾರಾಯಣ ಶೆಟ್ಟರ ಮಗ ರಘು ಮತ್ತು ನಾನು ಅಣ್ಣತಮ್ಮಂದಿರಂತೆ ಬೆಳೆದವರು. ಹೊಲದ ಕೆಲಸವನ್ನೆಲ್ಲ ನಾವು ಜೊತೆಯಾಗಿಯೇ ಮಾಡುತ್ತಿದ್ದದ್ದು. ಶಾಲೆಯ ಪರೀಕ್ಷೆಯ ಸಮಯದಲ್ಲಿ ನಾವಿಬ್ಬರೂ ರಾತ್ರಿಯ ಹೊತ್ತು ನೀರು ಬಸಿದು ಗದ್ದೆಗೆ ಬಿಡಲು ತೆರಳುತ್ತಿದ್ದೆವು.

ಅವರ ಕೈಯಲ್ಲಿ ಪುಸ್ತಕಗಳು. ನನ್ನ ಕೈಯಲ್ಲೊಂದು ಬಡಿಗೆ. ಅವರು ಕಂಬದ ದೀಪದ ಕೆಳಗೆ ಓದುತ್ತಿದ್ದಾಗ ನಾನು ನೀರು ಬಸಿಯುವುದು. ನನಗೆ ಸುಸ್ತಾದಾಗ ಅವರು ನೀರು ಬಸಿಯತೊಡಗಿದರೆ ನಾನು ಅವರ ಪುಸ್ತಕ ಕಾಯುತ್ತ ಕುಳಿತುಕೊಳ್ಳುವುದು. ಆಗಲೇ ಅವರು ನನಗೆ ಕೆಲವು ಕನ್ನಡ ಪದಗಳನ್ನು ಓದಿಸಲು ಕಲಿಸಿದ್ದು. ಈಗಲೂ ನನ್ನಲ್ಲಿ ಆತ್ಮವಿಶ್ವಾಸವನ್ನು ತುಂಬಿ ಕೆಲವು ಹಿಂದಿ ಪದಗಳನ್ನು ಹೇಳಿಕೊಟ್ಟರು.

ಆಗೆಲ್ಲ ದೇಶದ ರಾಜಧಾನಿಗೆ ಹೋಗುವುದೆಂದರೆ ವಿದೇಶ ಪ್ರಯಾಣದಂತೆ. ಹಾಗೆಂದು, ಅದೇನೂ ಡಿಲ್ಲಿಯ ನನ್ನ ವೊದಲ ಪಯಣವಲ್ಲ. ಹಿಂದೊಮ್ಮೆ ಗಣರಾಜ್ಯೋತ್ಸವ ಪೆರೇಡ್‌ಗಾಗಿ ಉಡುಪಿಯ ತಂಡದಲ್ಲಿ ಯಕ್ಷಗಾನ ವೇಷಧಾರಿಯಾಗಿ ಹೋಗಿದ್ದೆ. ಅದು 1976ರಲ್ಲಿ. ಬನ್ನಂಜೆ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿಯವರನ್ನು ಉಡುಪಿಯ ಎಂ.ಪಿ.ಗಳಾಗಿದ್ದ ರಂಗನಾಥ ಶೆಣೈಯವರು ದೆಹಲಿಗೆ ಆಹ್ವಾನಿಸಿದ್ದರು. ತಂಡದ ಜೊತೆಗೆ ಹೋದುದರಿಂದ ನನಗೇನೂ ಕಷ್ಟವೆನಿಸಲಿಲ್ಲ. ಅಲ್ಲದೆ, ದೆಹಲಿಯಲ್ಲಿ ರಂಗನಾಥ ಶೆಣೈಯವರ ಮನೆಯಲ್ಲಿಯೇ ನಮ್ಮ ವಾಸ್ತವ್ಯವಿತ್ತು.

ಈಗ ಹೊರಟಿದ್ದು ನಾವಿಬ್ಬರೇ. ನಾನು ಮತ್ತು ಮದ್ದಲೆ ಸಾಥಿಗೆ ಪೇತ್ರಿ ಮಂಜುನಾಥ ಪ್ರಭುಗಳು. ಇಬ್ಬರಿಗೂ ಸರಿಯಾಗಿ ಭಾಷೆ ಬರುವುದಿಲ್ಲ. ವ್ಯವಹಾರದಲ್ಲಿ ಕುಶಲಿಗಳಲ್ಲ.

ನಾನು ಎಂ.ಜಿ.ಎಂ. ಕಾಲೇಜಿನಲ್ಲಿ ಪ್ರೊ. ಕು.ಶಿ. ಅವರ ಕೊಠಡಿಗೆ ಹೋದಾಗ ಪೇತ್ರಿ ಮಂಜುನಾಥ ಪ್ರಭುಗಳು ಮೊದಲೇ ಅಲ್ಲಿಗೆ ಬಂದಿದ್ದರು. `ಡಿಲ್ಲಿಯಲ್ಲಿ ಮೂರು- ನಾಲ್ಕು ತಿಂಗಳು ಇರಬೇಕಾದೀತು. ಅಲ್ಲಿ ಎಲ್ಲ ವ್ಯವಸ್ಥೆ ಬಿ.ವಿ. ಕಾರಂತರು ನೋಡಿಕೊಳ್ಳುತ್ತಾರೆ. ಏನೂ ಹೆದರಬೇಡಿ. ಓ ಅಲ್ಲಿ ಕಾರಂತರಿದ್ದಾರೆ. ಅವರಲ್ಲಿ ಮಾತನಾಡಿ. ದಾರಿ ಖರ್ಚಿಗೆ ಮತ್ತು ಟಿಕೆಟ್ ಅವರೇ ಕೊಡುತ್ತಾರೆ' ಎಂದರು ಕು.ಶಿ. ಯವರು.

ನಾನು, ಬಹುಶಃ ಬಿ.ವಿ. ಕಾರಂತರೇ ನಮ್ಮನ್ನು ಮಾತನಾಡಿಸಲು ಬಂದಿರಬೇಕೆಂದು ಭಾವಿಸಿದೆ. ಆದರೆ, ಅಲ್ಲಿ ಅವರಿದ್ದಂತಿರಲಿಲ್ಲ. ಅವರನ್ನೇ ಹೋಲುವ ವ್ಯಕ್ತಿಯೊಬ್ಬರು ನನ್ನಲ್ಲಿ ಮಾತನಾಡಿ ನನ್ನ ಹೆಸರು, ಪ್ರಾಯ, ವಿಳಾಸ ಎಲ್ಲವನ್ನೂ ಬರೆದುಕೊಂಡರು. ಇನ್ನೆರಡು ದಿನಗಳಲ್ಲಿ ಟಿಕೆಟ್ ಬರಲಿದ್ದು ನಾನೂ ಮಂಜುನಾಥ ಪ್ರಭುಗಳೂ ಅದನ್ನು ಬಂದು ಪಡೆದುಕೊಳ್ಳುವಂತೆ ಸೂಚಿಸಿದರು. ಹಿಂದೆ ಹೊರಡುವಾಗ ಅವರು ಬಿ.ವಿ. ಕಾರಂತರಿರಬಹುದೆ ಎಂಬುದನ್ನು ಖಚಿತಪಡಿಸಿಕೊಳ್ಳಲು, `ಸರ್, ನಿಮ್ಮ ಹೆಸರೇನು?' ಎಂದು ಕೇಳಿದೆ. `ನನ್ನ ಹೆಸರಾ? ಓ ಅಲ್ಲಿ ನೇಮ್‌ಪ್ಲೇಟ್‌ನಲ್ಲಿದೆ, ಓದಿ' ಎಂದರು.

`ನನಗೆ ಇಂಗ್ಲಿಷ್ ಬರುವುದಿಲ್ಲ' ಎಂದೆ. ಅವರು, `ಇಂಗ್ಲಿಷ್ ಬರುವುದಿಲ್ಲವೆ? ದೆಹಲಿಗೆ ಹೋಗಿ ಏನು ಮಾಡುತ್ತೀರಿ?' ನಗುತ್ತ ಕಾಳಜಿಯಿಂದ ಹೇಳಿದವರೇ, `ನಾನು ಬಿ.ಕೆ. ಕಾರಂತ' ಎಂದರು. ನಾನು `ಆಯ್ತು ಸರ್' ಎಂದು ಹೊರಬಂದೆ. ಅವರು ಬಿ.ವಿ. ಕಾರಂತರ ಸಹೋದರ ಬಾಬುಕೋಡಿ ಕೃಷ್ಣ ಕಾರಂತರೆಂದು ನೀಲಾವರ ರಾಮಕೃಷ್ಣಯ್ಯನವರು ಆಮೇಲೆ ಹೇಳಿದರು.

ತಿಂಗಳು ಯಾವುದೆಂದು ಸರಿಯಾಗಿ ನೆನಪಿಲ್ಲ. ತಾರೀಕು 7 ಇರಬೇಕು. ಸಂಜೆ ನಾನೂ ಮಂಜುನಾಥ ಪ್ರಭುಗಳೂ ಮಂಗಳೂರು ರೈಲ್ವೆಸ್ಟೇಷನ್‌ಗೆ ಹೋಗಿ ಅಲ್ಲಿ ಕುಳಿತೇ ಬೆಳಗು ಮಾಡಿದೆವು. ಮುಂಜಾನೆ `ಜಯಂತಿ ಜನತಾ' ರೈಲು ಬಂತು. ಅದನ್ನು ಹತ್ತಿದೆವು. ರೈಲು ಕೇರಳಾಭಿಮುಖವಾಗಿ ಹೊರಟಿತು. ಆ ಮೂಲಕ ಡಿಲ್ಲಿಗೆ ಎರಡು ದಿನಗಳ ಪಯಣ. ನಾವಿಬ್ಬರೂ ಬಣ್ಣದ ಲುಂಗಿ ಧರಿಸಿದ್ದೆವು. ನನಗಂತೂ ಚಪ್ಪಲಿ ಧರಿಸಿ ಗೊತ್ತೇ ಇರಲಿಲ್ಲ. ಇಬ್ಬರಲ್ಲಿಯೂ ಚೀಲದ ದೊಡ್ಡ ಗಂಟು. ಅದನ್ನು ತಲೆಯಡಿ ಇಟ್ಟರೆ ಸುಖನಿದ್ದೆ.

ಹಾಗೇ ಒಮ್ಮೆ ಗಂಟಿಗೆ ತಲೆಕೊಟ್ಟು ನಿದ್ದೆ ಹೋಗಿದ್ದೆ. ಗಲಿಬಿಲಿ ಕೇಳಿಸಿದಾಗ ಎಚ್ಚರವಾಯಿತು. ಎದ್ದು ನೋಡುತ್ತೇನೆ, ಗಂಟು ಇಲ್ಲ. ಅತ್ತಿತ್ತ ಹುಡುಕಿದರೂ ಸುಳಿವಿಲ್ಲ. ಅದರಲ್ಲೇನೂ ಬಂಗಾರವಿರಲಿಲ್ಲ; ಒಂದೆರಡು ಧೋತಿ, ಅಂಗಿ, ತಲೆಗೆ ಹಾಕುವ ತೆಂಗಿನೆಣ್ಣೆಯ ಕುಪ್ಪಿ, 501 ಬಾರ್‌ಸೋಪ್‌ನ ಬಿಲ್ಲೆ, ಹಲ್ಲುಜ್ಜಲು ಅಕ್ಕಿತೌಡನ್ನು ಸುಟ್ಟು ನಾನೇ ಸಿದ್ಧಗೊಳಿಸಿದ ಮಸಿಯ ಡಬ್ಬಿ ಮತ್ತು ನನ್ನ ಚೆಂಡೆಕೋಲು!

ನನ್ನ ಸರ್ವಸ್ವ ಹೋದರೂ ಚಿಂತೆಯಾಗುತ್ತಿರಲಿಲ್ಲ, ನನ್ನ ಪ್ರೀತಿಯ ಚೆಂಡೆಕೋಲು ಕೈ ತಪ್ಪಿದುದನ್ನು ತಿಳಿದು ಅಳು ಬರುವಂತಾಯಿತು. ಸಹೃದಯಿ ಮಂಜುನಾಥ ಪ್ರಭುಗಳು ಅವರ ಚೀಲದಲ್ಲಿದ್ದ ಚೆಂಡೆಕೋಲನ್ನು ನನಗೆ ಕೊಟ್ಟು ಸಮಾಧಾನ ಪಡಿಸಿದರು. ಆಗ ನಾಗ್ಪುರ-ಭೋಪಾಲ್ ದಾಟಿದ ಬಳಿಕ ಕಳ್ಳರ ಹಾವಳಿ ಬಹಳ. `ಇರಲಿ, ಅದು ಅವರ ಹೊಟ್ಟೆಪಾಡು. ನನ್ನ ಗಂಟಿನಲ್ಲಿದ್ದ ವಸ್ತುಗಳಿಂದ ಅವರಿಗೇನು ಹೊಟ್ಟೆ ತುಂಬುವುದೊ!' ಎಂದುಕೊಂಡೆ.

                                                                        --------------               

`ದುಡಿದು ಹೊಟ್ಟೆ ತುಂಬಿಸಿಕೊಳ್ಳಬಾರದೆ, ಕದಿಯುವುದ್ಯಾಕೆ?' ಎಂದು ಗದರುತ್ತ ಆ ಮನೆಯವರು ಬಡಿಗೆ ಹಿಡಿದುಕೊಂಡು ಬರುವಾಗ ನಾನು ಒಂದೆರಡು ತೆಂಗಿನಕಾಯಿಗಳನ್ನು ಕೈಯಲ್ಲಿಯೂ ಕಂಕುಳಲ್ಲಿಯೂ ಅಮುಕಿಕೊಂಡು ತೋಟದ ಪಾಗಾರವನ್ನು ಜಿಗಿದು ಓಡಿಬರುತ್ತಿದ್ದೆ. ಹತ್ತು ಹನ್ನೆರಡರ ಸಣ್ಣ ಪ್ರಾಯ. ಚುರುಕು ಕಾಲುಗಳು. ಕದ್ದು ಓಡುವುದು ದೊಡ್ಡ ಸಂಗತಿಯೇ ಅಲ್ಲ. ಒಮ್ಮೆ ತೆಂಗಿನಕಾಯಿ, ಮತ್ತೊಮ್ಮೆ ತರಕಾರಿ, ಕೆಲವೊಮ್ಮೆ ಹಣ್ಣುಹಂಪಲು. ಮನೆಗೆ ತಂದು ಹಾಕಿದರೆ, `ಎಲ್ಲಿಂದ?' ಎಂದು ಕೇಳುವವರಿಲ್ಲ. ಮನೆಯಲ್ಲಿಯೂ ಗಂಜಿ ಊಟಕ್ಕೆ ತತ್ವಾರ. ಹೇಗೂ ಆಗಲಿ, ಮನೆಗೆ ತಂದು ಹಾಕುತ್ತಾನಲ್ಲ ಎಂಬ ಸಮಾಧಾನ ಭಾವ.

ಇತ್ತೀಚೆಗಿನ ಘಟನೆಯೊಂದು ಫಕ್ಕನೆ ನೆನಪಾಗುತ್ತಿದೆ. ನನ್ನ ಚೀಲದಿಂದ ಯಾರೋ ಹುಡುಗರು ದುಡ್ಡು ಕದ್ದರು. ಕದ್ದ ಹುಡುಗನನ್ನು ಹುಡುಕಿ ತೆಗೆಯುವುದು ದೊಡ್ಡ ಸಂಗತಿಯಲ್ಲ. ಆದರೆ, ನಾನು ಬಾಲ್ಯದಲ್ಲಿ ಹಸಿವು ನೀಗಿಸಿಕೊಳ್ಳಲು ಕದ್ದ ದಿನಗಳೇ ನೆನಪಿಗೆ ಬಂದವು. ತಿನಿಸು ಕೊಳ್ಳಲು ಹಣವಿಲ್ಲ. ಕದಿಯದೆ ದಾರಿಯಿಲ್ಲ. ಹಾಗೆಂದು, ನಾನೆಂದೂ ಹಣ ಕದ್ದದ್ದಿಲ್ಲ.

ಬಾಲ್ಯದಲ್ಲಿ ನಾನು ಕದ್ದ ಪ್ರತಿಫಲವನ್ನು ಇಂದು ಅನುಭವಿಸುತ್ತಿದ್ದೇನೆ ಎಂದುಕೊಂಡು ಸುಮ್ಮನಾದೆ. ನನ್ನ ಚೀಲದಿಂದ ಹಣ ಕದ್ದ ಹುಡುಗನೇನಾದರೂ ಈ ಬರಹವನ್ನು ಓದುತ್ತಿದ್ದರೆ, ಆ ದುಡ್ಡನ್ನು ಸದುಪಯೋಗಪಡಿಸಿಕೊಂಡು, ತನ್ನಲ್ಲಿ ಹಣ ಸಂಚಯನವಾದಾಗ ಅದನ್ನು ಇನ್ನೊಬ್ಬರಿಗೆ ದಾನ ಮಾಡಬೇಕೆಂದು ಕೇಳಿಕೊಳ್ಳುತ್ತೇನೆ.

ಒಮ್ಮೆ ಹೀಗಾಯಿತು. ಉಡುಪಿಯ ಮಠದಲ್ಲಿ ರಥೋತ್ಸವ. ದೇವರು ಆರೂಢರಾಗಿರುವ ರಥಕ್ಕೆ ಭಕ್ತಾದಿಗಳು ಸಮರ್ಪಣಾಭಾವದಲ್ಲಿ ಹಣ್ಣುಗಳನ್ನೆಸೆಯುವುದು ಸಂಪ್ರದಾಯ. ಅದಕ್ಕಾಗಿ ರಥಬೀದಿಯಲ್ಲಿ ವ್ಯಾಪಾರಿಗಳು ಹಣ್ಣುಗಳನ್ನು ರಾಶಿ ಹಾಕಿ ಮಾರುತ್ತಿದ್ದರು. ನನಗೂ ನನ್ನ ಗೆಳೆಯರಿಗೂ ಆ ಹಣ್ಣುಗಳನ್ನು ಕದಿಯುವುದೇ ಒಂದು ಆಟ.

ರಥಕ್ಕೆಸೆದ ಹಣ್ಣುಗಳನ್ನು ಹೆಕ್ಕಿ ತಿನ್ನೋಣವೆಂದರೆ ರಥದ ಚಕ್ರದಡಿ, ಜನರ ಕಾಲುಗಳಡಿಯಲ್ಲಿ ಸಿಕ್ಕಿ ಅವು ಅಪ್ಪಚ್ಚಿಯಾಗುತ್ತಿದ್ದವು. ಹಾಗಾಗಿ, ಕದಿಯುವುದೊಂದೇ ಮಾರ್ಗವಾಗಿ ಯಾರಿಗೂ ತಿಳಿಯದಂತೆ ಕಿತ್ತಲೆ ಹಣ್ಣುಗಳನ್ನು ಚಡ್ಡಿಯ ಕಿಸೆಯಲ್ಲಿ ಇಳಿಸಿ ಪರಾರಿಯಾಗುತ್ತಿದ್ದೆವು. ಹೀಗೆ ಪ್ರತೀದಿನ ಹಣ್ಣುಗಳ ಪ್ರಮಾಣ ಕಡಿಮೆಯಾಗುತ್ತಿರುವುದು ವ್ಯಾಪಾರಿಗಳಿಗೆ ಗೊತ್ತಾಯಿತು. ಒಮ್ಮೆ ಅವರು ಮರೆಯಲ್ಲಿ ನಿಂತುಕೊಂಡು ಕಳ್ಳರಿಗಾಗಿ ಹೊಂಚುಹಾಕತೊಡಗಿದರು.

ರಥಬೀದಿಗೆ ನಮ್ಮ ಪ್ರವೇಶವಾಯಿತು. ಜನಜಂಗುಳಿಯಲ್ಲಿ ಯಾರಿಗೂ ತಿಳಿಯದಂತೆ ಹಣ್ಣುಗಳ ರಾಶಿಯ ಬಳಿಗೆ ತೆರಳಿದೆವು. ಎತ್ತೆತ್ತಲೋ ನೋಡುವಂತೆ ನಟಿಸುತ್ತ ಇನ್ನೇನು ಹಣ್ಣಿನ ರಾಶಿಗೆ ಕೈ ಹಾಕುತ್ತೇವೆ ಎನ್ನುವಾಗ ಹಿಡಿದೇಬಿಟ್ಟರು. ನಾನು ಕೈಕೊಸರಿಕೊಂಡು ಓಡಿದೆ. ಅದಮಾರು ಮತ್ತು ಪೇಜಾವರ ಮಠಗಳ ನಡುವಿನ ಓಣಿಯಲ್ಲಿ ಓಡಿದ್ದೇ ಓಡಿದ್ದು. ಅವರು ಹಿಂಬಾಲಿಸುತ್ತ ಓಡಿಬಂದರು. ಪುಟ್ಟ ಪಾದಗಳು. ಹಸಿದ ಹೊಟ್ಟೆ. ಬಸವಳಿದ ಬದುಕು.

ಎಷ್ಟು ಓಡಿದರೂ ತಪ್ಪಿಸಿಕೊಳ್ಳಲಾಗಲಿಲ್ಲ. ಬಬ್ಬರ್ಯ ಕಟ್ಟೆಯ ಬಳಿ (ಈಗಿನ ಚಿತ್ತರಂಜನ್ ಸರ್ಕಲ್‌ನ ಮಾರ್ಗ) ನನ್ನನ್ನೂ ನನ್ನ ಜೊತೆ ಇದ್ದ ಕೆಲವು ಹುಡುಗರನ್ನೂ ಹಿಡಿದುಬಿಟ್ಟರು. ಬಡಿದರು. ಬಡಿದರು. ಸನಿಹದಲ್ಲಿದ್ದ ಸಹೃದಯರಾರೋ `ಮಕ್ಕಳನ್ನು ಕೊಂದೇ ಬಿಡುತ್ತೀರಾ?' ಎಂದು ನಮ್ಮನ್ನು ಅವರ ಕೈಯಿಂದ ಬಿಡಿಸಿದರು.

ಮೈತುಂಬ ಪೆಟ್ಟಿನ ಗುರುತುಗಳು, ಮನಸ್ಸು ತುಂಬ ಅವಮಾನದ ಗೀರುಗಳು. ಹಿಂತಿರುಗಿ ನೋಡದೆ ಅಲ್ಲಿಂದಲೂ ಓಡಿಬಿಟ್ಟೆ.

                                                                      --------------



ಎಷ್ಟು ಓಡಿದರೂ ಬದುಕನ್ನೇ ಬಿಟ್ಟು ಓಡಲಾಗುವುದಿಲ್ಲವಲ್ಲ!
`ನಾನು ಅಂದು ಅವಮಾನದಿಂದ ಓಡಿದ ಓಣಿಯ ಬದಿಯಲ್ಲಿಯೇ ನನಗಿವತ್ತು ಶಾಲು ಹಾಕಿ ಸಂಮಾನ ಮಾಡಿದ್ದೀರಿ' ಎಂದೆ.

2010ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದುದಕ್ಕಾಗಿ ಉಡುಪಿಯ ಯಕ್ಷಗಾನ ಕಲಾರಂಗ ಸಂಸ್ಥೆಯ ಕಚೇರಿಯಲ್ಲಿ ನನ್ನನ್ನು ಸಂಮಾನಿಸಿದ ಆ ಕ್ಷಣ ನಾನು ಮೇಲಿನ ಮಾತನ್ನು ಹೇಳುವಾಗ ಮನಸ್ಸು ನಲ್ವತ್ತೈದು ವರ್ಷಗಳ ಆಚೆಗೂ ಈಚೆಗೂ ಓಲಾಡುತ್ತಿತ್ತು.

(ಸಶೇಷ)
ನಿರೂಪಣೆ: `ಹರಿಣಿ'

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT