ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಿನಾಶ ಎಂಬ ಸೆನ್ಸಾಯ್ ಮತ್ತು ಬುದೋ ಜೀವನ ಕ್ರಮ

Last Updated 3 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಶಿಷ್ಯರು ಅವಿನಾಶ್ ಸುಬ್ರಮಣ್ಯಮ್ ಅವರನ್ನು ಸೆನ್ಸಾಯ್ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಸಮರ ವಿದ್ಯೆಯನ್ನು ಕಲಿಸುವ ಗುರುಗಳಿಗೆ ಸೆನ್ಸಾಯ್ ಎಂಬ ಪದವನ್ನು ಬಳಸುವುದು ವಾಡಿಕೆ. ಆದರೆ ಅವಿನಾಶ್ ಜುಡೋ ಕರಾಟೆಯಂಥ ವಿದ್ಯೆಗಳ ಬಗ್ಗೆ ಹೆಚ್ಚು ಲಕ್ಷ್ಯ ಕೊಡುವುದಿಲ್ಲ. ಸಮರ ವಿದ್ಯೆಗಳಿಂದ ಮೂಡಿಬಂದ ವ್ಯಾಯಾಮಗಳನ್ನು ಕಲಿಸುವ ಅವರ ಗುರಿ ಶಿಷ್ಯರಲ್ಲಿ ಬುದೋ ಮನೋಭಾವ ಬೆಳೆಸುವುದು. ಸ್ವಾಸ್ಥ್ಯ ಹೆಚ್ಚಿಸುವುದು.

ಬುದೋ ಜಪಾನೀ ಪದ. ಅದರ ಅರ್ಥ `ಯೋಧನ ದಾರಿ' ಅಥವಾ `ಯೋಧನ ಚೈತನ್ಯ.' ಬುದೋ ಚಿಂತನೆಯಲ್ಲಿ ಶತ್ರು ಹೊರಗೆಲ್ಲೋ ಇರುವುದಿಲ್ಲ. ಒಳಗಿರುವ ನೆಗೆಟಿವ್ ಗುಣಗಳನ್ನು ಎದುರಿಸಿ ಗೆಲ್ಲುವುದೇ ಈ ವಿದ್ಯೆಯ ಪರಮ ಆಶಯ. ಇದು ಕೇವಲ ವ್ಯಾಯಾಮವೋ, ಯುದ್ಧ ತಂತ್ರವೋ ಆಗಿರದೆ ದೊಡ್ಡ ಜೀವನ ಕ್ರಮವೇ ಆಗಿದೆ. ಬುದೋ ಜಪಾನಿನ ಪ್ರಾಚೀನ ಸಮುರಾಯ್ ಸಂಸ್ಕೃತಿಯಿಂದ ಬೆಳೆದು ಬಂದ ಕಲೆ. ಇದರಲ್ಲಿ ಬುಜುಟ್ಸು ಎಂಬ ಸಮರ ಕಲೆಗಿಂತ ಸ್ವಲ್ಪ ಭಿನ್ನವಾಗಿರುವ ಬುದೋ ಪ್ರತಿದಿನದ ಜೀವನದಲ್ಲಿ ಪಾಲಿಸಬಹುದಾದ ಕೌಶಲ ಎಂದು ವ್ಯಾಖ್ಯಾನಿಸುತ್ತಾರೆ.

ಈ ಕಲೆಯ ಜತೆಗೆ ಬೌದ್ಧ ತತ್ವದ ಕೆಲವು ಅಂಶಗಳು ಆಧ್ಯಾತಿಕ ಬೆಳವಣಿಗೆಗೆ ಪ್ರಾಮುಖ್ಯತೆ ಬಂದಿದೆ. ಭಾರತದ ಜಾತಿ ಪದ್ಧತಿಗೆ ಬೌದ್ಧ ಧರ್ಮವನ್ನು ಮದ್ದಾಗಿ ಕಂಡ ಎಷ್ಟೋ ಚಿಂತಕರನ್ನು ಓದಿರುತ್ತೇವೆ, ಕೇಳಿರುತ್ತೇವೆ. ಡಾ. ಅಂಬೇಡ್ಕರ್ ಈ ಧರ್ಮ ಸಮಾನತೆಯ ಕನಸನ್ನು ಹೇಗೆ ಸಾಕಾರಗೊಳಿಸಬಲ್ಲದು ಎಂದು ಚಳುವಳಿಗಾರರಿಗೆ ಸೂಚಿಸಿದರು. ಹಾಗಾಗಿ ಬೌದ್ಧ ತತ್ವದ ಕೆಲವು ಅಂಶಗಳು ಆಗಾಗ ಸಾರ್ವಜನಿಕ ಗಮನಕ್ಕೆ ಬರುತ್ತಿರುತ್ತವೆ. ಮೊನ್ನೆ ಜೈಪುರ್ ಸಾಹಿತ್ಯ ಉತ್ಸವದಲ್ಲಿಯೂ ಅಶಿಸ್ ನಂದಿ ಮತ್ತು ಕಾಂಚ ಐಲಯ್ಯ ಅವರ ನಡುವೆಯೂ ಇದರ ಬಗ್ಗೆ ಚರ್ಚೆಯಾಯಿತು.

ಇನ್ನು ದಲೈ ಲಾಮಾ ಅವರ ಸೌಮ್ಯ ವ್ಯಕ್ತಿತ್ವದಿಂದ ಭಾರತದ ನಗರಗಳಲ್ಲಿ ಹಲವರು ಟಿಬೆಟನ್ ಬುದ್ಧಿಸಂನ ಕಡೆಗೆ ಆಕರ್ಷಿತರಾಗಿದ್ದಾರೆ. ಬೆಂಗಳೂರಿನಲ್ಲಿ ಟಿಬೆಟನ್ ಧರ್ಮದ ಕೇಂದ್ರಗಳು ಕೆಲವು ಕೆಲಸ ಮಾಡುತ್ತಿವೆ. ದಲೈ ಲಾಮಾ ಇಲ್ಲಿಗೆ ಬಂದಾಗ ಟಿಬೆಟನ್ ಜನಕ್ಕಿಂತ ಇತರರೇ ಹೆಚ್ಚಾಗಿ ಕಿಕ್ಕಿರಿದಿರುತ್ತಾರೆ. ದೊಮ್ಮಲೂರಿನಲ್ಲಿ ಇರುವ ಟಿಬೆಟನ್ ಕೇಂದ್ರದಲ್ಲಿ ಒಂದು ಗ್ರಂಥಾಲಯವೂ ಇದೆ.

ಬೌದ್ಧ ಧರ್ಮ ಬೆಂಗಳೂರಿನಂಥ ನಗರಗಳಲ್ಲಿ ನಮ್ಮ ಗಮನಕ್ಕೆ ಬಾರದ ಇನ್ನೊಂದು ಕ್ಷೇತ್ರದಲ್ಲಿ ಅಷ್ಟೇ ಜೀವಂತವಾಗಿದೆ. ಅದು ಮಾರ್ಷಲ್ ಆರ್ಟ್ಸ್ ಅಂದರೆ ಸಮರ ಕಲೆ ಕ್ಷೇತ್ರ. ಸಮರ ಕಲೆ ಅಂದ ಕೂಡಲೇ ಕರಾಟೆ ಮತ್ತು ಜುಡೋದಂತಹ ವಿದ್ಯೆಗಳು ಮನಸಿನಲ್ಲಿ ಮೂಡುತ್ತವೆ. ಆದರೆ ಈ ಕಲೆಗಳನ್ನು ಮೀರಿದ ಎಷ್ಟೋ ವಿಷಯಗಳು ಇಲ್ಲಿ ಅಡಗಿವೆ.

ಅವಿನಾಶ್ ಅವರ ಕಥೆ ವಿಸ್ಮಯ ಹುಟ್ಟಿಸುವಂತಿದೆ. ಅವರು ಅಯ್ಯರ್ ಕುಟುಂಬದಲ್ಲಿ ಹುಟ್ಟಿದವರು. ಅಪರೂಪಕ್ಕೆ ಚರ್ಚ್ ಮತ್ತು ದೇವಸ್ಥಾನಕ್ಕೆ ಹೋಗುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅವರ ಜೀವನವನ್ನು ರೂಪಿಸಿರುವುದು ಬೌದ್ಧ ಧರ್ಮ. ಅದರಲ್ಲೂ ಸಮರ ಕಲೆಗಳ ಮುಖಾಂತರ ಅವರು ಕಂಡುಕೊಂಡ ಬುದೋ ತತ್ವ. ಎಪ್ಪತ್ತರ ದಶಕದಲ್ಲಿ ಬ್ರೂಸ್ ಲೀ ಭಾರತದಲ್ಲಿ ದೊಡ್ಡ ಹೆಸರು ಮಾಡಿದ್ದ. ಅವನು ನಟಿಸಿದ `ಎಂಟರ್ ದಿ ಡ್ರಾಗನ್' ಚಿತ್ರ ಇಲ್ಲಿಯ ಹುಡುಗರಲ್ಲಿ ಮಾರ್ಷಲ್ ಆರ್ಟ್ಸ್ ಕಲಿಯುವ ಆಸೆ ಹುಟ್ಟಿಸಿತು. ಸುಮಾರು ಆ ಸಮಯಕ್ಕೆ ಅವಿನಾಶ್ ಕರಾಟೆಯಲ್ಲಿ ಪರಿಣತಿ ಹೊಂದಿ ಸೇನೆಯ ಯೋಧರಿಗೆ ಕಲಿಸುತ್ತಿದ್ದರು. ಅವರ ಕರಾಟೆ  ಫೋಟೋಗಳನ್ನು ಜಪಾನ್‌ಗೆ ಕಳಿಸಿದಾಗ ಆ ದೇಶಕ್ಕೆ ಹೋಗಿ ಅಧ್ಯಯನ ಮಾಡುವ ಅವಕಾಶ ಒದಗಿಬಂತು.

ಜಪಾನ್‌ಗೆ ಹೋದ ಅವಿನಾಶ್ ಟೋಕಿಯೋ ನಗರ ನೋಡುವ ಉತ್ಸಾಹ ತೋರಲಿಲ್ಲ. ಗುರುಗಳ ಜೊತೆಗೆ ತಮ್ಮೆಲ್ಲ ಸಮಯವನ್ನೂ ಕಳೆದರು. ಜಪಾನ್ ಮತ್ತು ಚೀನಾಕ್ಕೆ ಬರುವ ಬಿಳಿ ವಿದ್ಯಾರ್ಥಿಗಳು ಗುರುಗಳ ಜೊತೆಗೆ ನಡೆದುಕೊಳ್ಳುವ ರೀತಿಗೂ, ಅವಿನಾಶ್ ನಡೆದುಕೊಳ್ಳುವ ರೀತಿಗೂ ಇದ್ದ ವ್ಯತ್ಯಾಸವನ್ನು ಗುರುಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದರಂತೆ. ಯೂರೋಪ್ ಮತ್ತು ಅಮೆರಿಕಾದ ಶಿಷ್ಯರು ಗುರುಗಳ ಬಳಿಗೆ ಹೋಗಿ, `ನಿಮ್ಮ ಊರಿನಲ್ಲಿ ಒಳ್ಳೆ ಮಸಾಜ್ ಎಲ್ಲಿ ಮಾಡುತ್ತಾರೆ?' ಎಂದು ಸಂಕೋಚವಿಲ್ಲದೆ ಕೇಳುತ್ತಿದ್ದರಂತೆ.

ಗುರುಗಳಿಗೆ ಇದು ಇರುಸು ಮುರುಸು ಮೂಡಿಸುತ್ತಿದ್ದು, ಅವಿನಾಶ್ ಅವರ ಪರವಾಗಿ ಮಾತಾಡುತ್ತಿದ್ದರಂತೆ. ಹೀಗಾಗಿ ಗುರುಗಳು ಅವಿನಾಶರಿಗೆ ಕಲಿಸಿದಷ್ಟು ವಿದ್ಯೆ ಇತರರಿಗೆ ಕಲಿಸಲು ಆಗುತ್ತಿರಲಿಲ್ಲ. ಅವಿನಾಶ್ ಜಪಾನೀ ಭಾಷೆಯನ್ನೂ ತಕ್ಕ ಮಟ್ಟಿಗೆ ಮಾತಾಡುತ್ತಾರೆ. ಬಾಡಿ ಲಾಂಗ್ವೇಜ್ ನೋಡಿ ಕಲಿ; ಭಾಷೆ ಚಿಂತೆ ಬಿಡು ಎಂದು ಚೀನಾದ ಗುರುಗಳು ಸೂಚಿಸಿದರಂತೆ.

ಆದರೆ ಈ ಬುದೋ ಸುಲಭದ ಮಾತಲ್ಲ. ಅವಿನಾಶ್ ಕಂಡ ಗುರುಗಳು ನಮ್ಮ ಭಾರತದ ಸಂಗೀತದ ಗುರುಗಳಂತೆಯೇ, ಕೆಲವು ಸಾರಿ ಉದಾರಿಗಳೂ, ಇನ್ನು ಕೆಲವು ಸಾರಿ ತಿಕ್ಕಲು ಸ್ವಭಾವದವರೂ ಆಗಿದ್ದರಂತೆ. ಈ ಯಾತ್ರೆಯಲ್ಲಿ ಅವಿನಾಶ್ ಕಂಡ ಆಶ್ಚರ್ಯಗಳು ಒಂದಲ್ಲ ಎರಡಲ್ಲ. ಒಮ್ಮೆ ಅವರು ಕಷ್ಟ ಪಟ್ಟು ಕಲಿಯುತ್ತಿದ್ದ ಒಂದು ಭಂಗಿಯನ್ನು ಐದು ವರ್ಷದ ಮಗುವೊಂದು ತಿದ್ದಿ ತೋರಿಸಿತು.

ತೊಂಬತ್ತು ವರ್ಷದ ಹಿರಿಯರೊಬ್ಬರು ಭಾರವಾದ ಖಡ್ಗವನ್ನು ಎತ್ತಿ ಮರದ ದಿಮ್ಮಿಯನ್ನು ಇವರ ಕಣ್ಣೆದುರಿಗೇ ಹೋಳು ಮಾಡಿದರು. ಇವೆಲ್ಲ ಸಿನಿಮಾ ಸ್ಟಂಟ್‌ಗಳು ಎಂದು ಕೊಂಕು ಆಡುವವರು ಅವಿನಾಶ್‌ರನ್ನು ಒಮ್ಮೆ ಭೇಟಿ ಮಾಡಬೇಕು. ಅವರು ಇತ್ತೀಚಿಗೆ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಕೆಲವು ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಡುತ್ತಿದ್ದಾರೆ. ಅಲ್ಲಿ ಅವರ ಶಿಷ್ಯರ ಕೆಲವು ತಂತ್ರಗಳನ್ನು ಕಂಡು ಹಲವರು ಬೆರಗಾಗುತ್ತಾರೆ. ಆದರೆ ಅವಿನಾಶ್ ಹೇಳುವಂತೆ ಬುದೋ ಮಾರ್ಗ ಕೇವಲ ದೈಹಿಕ ವಿಷಯಕ್ಕೆ ಸಂಬಂಧಿಸಿದ್ದಲ್ಲ. ಅದು ಬಾಡಿ ಮೈಂಡ್ ಸೋಲ್ ಸ್ಪಿರಿಟ್‌ನ ಹೊಂದಾಣಿಕೆ. ಹಾಗಾಗಿ ಎಲ್ಲದರಲ್ಲೂ ಬುದೋ ಕಾಣಬಹುದು, ಬುದೋ ಪಾಲಿಸಬಹುದು.

ಇಂದಿನ ಸಂಕುಚಿತ ಭಾಷೆಯಲ್ಲಿ ಹೇಳಬೇಕೆಂದರೆ, ಅವಿನಾಶ್ ತಮ್ಮ ಸೀಫಾರ್ ಸಂಸ್ಥೆಯಲ್ಲಿ (ಜಾಲತಾಣ: www.seefar.in) ಕಲಿಸುವುದು ಹೆಲ್ತ್ ಅಂಡ್ ಫಿಟ್ನೆಸ್. ಆದರೆ ಅವರು ನಿಜವಾಗಿ ಕಲಿಸುವುದು ಹಲವು ವಿದ್ಯೆಗಳ ಉತ್ಕೃಷ್ಟ ಮಿಶ್ರಣ, ಬುದೋ ಮಾರ್ಗ. ಈ ತರಬೇತಿಯಲ್ಲಿ ಎಲ್ಲಕ್ಕೂ ಮೂಲ ಚಿ, ಅಂದರೆ ಪ್ರಾಣ. ಜಿಮ್‌ನಲ್ಲಿ ಮಾಡುವ ಟ್ರೇನಿಂಗ್‌ಗಿಂತ ಇದು ತೀರ ಭಿನ್ನ. ಯೋಗ ಧ್ಯಾನಕ್ಕೆ ಒತ್ತು ಕೊಟ್ಟರೆ ಈ ಕ್ರಮದಲ್ಲಿ ಚಟುವಟಿಕೆಯ ಮೂಲಕ ಧ್ಯಾನ ಸ್ಥಿತಿಯನ್ನು ತಲುಪುವುದೇ ಧ್ಯೇಯ. ಚಿ ಕುಂಗ್, ತಾಯ್ ಚಿ, ಲಿಯಂಗ್ ಗಾಂಗ್, ದಾವ್ ಯಿನ್, ರೇನ್ ಶು, ಕಟ್ಟಾ...

ಈ ಕಲೆಗಳನ್ನು ಮಹಾನ್ ಗುರುಗಳ ಸನ್ನಿಧಿಯಲ್ಲಿ ಕಲಿತು ತಂದು ಅವಿನಾಶ್ ಹಂಚುತ್ತಿದ್ದಾರೆ. ಟ್ರೇನಿಂಗ್‌ನ ಮೂಲಕ ಹಲವರ ಜೀವನದಲ್ಲಿ ಉತ್ಸಾಹ ತುಂಬುವ ಮಾರ್ಪಾಡುಗಳನ್ನು ಮಾಡಿದ್ದಾರೆ. `ಕರಾಟೆ ಕಿಡ್' ಮತ್ತು `ಕುಂಗ್ ಫು ಪಾಂಡಾ'ದಂಥ ಚಿತ್ರಗಳಲ್ಲಿ ಕೇಳಿಬರುವ ವಿವೇಕದ ಕಿವಿಮಾತನ್ನು ಅವಿನಾಶ ಶಿಷ್ಯರಿಗೆ ಹೇಳುತ್ತಿರುತ್ತಾರೆ. ಕಟ್ಟುನಿಟ್ಟಿನ ಜೊತೆಗೆ ತುಂಟತನ ಮತ್ತು ಸಾಹಸವನ್ನು ಇಷ್ಟ ಪಡುವ ಅವಿನಾಶ್ ಶಿಷ್ಯರನೇಕರಿಗೆ ನಿಜ ಅರ್ಥದಲ್ಲಿ ಫ್ರೆಂಡ್, ಫಿಲಾಸಫರ್ ಮತ್ತು ಗೈಡ್ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT