ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸೆ ಮಾಡಿದ ಅನಾಹುತ

Last Updated 19 ಜನವರಿ 2015, 19:30 IST
ಅಕ್ಷರ ಗಾತ್ರ

ಇದು ಆಫ್ರಿಕಾ ಖಂಡದ ಪುರಾತನ ಕಥೆ. ಇಫಿಯೋಪಿಯಾದ ಪರ್ವತ ಶ್ರೇಣಿ­­ಗಳಲ್ಲಿ ಆನೆಗಳ ದೊಡ್ಡ ಪರಿವಾರ ನೆಲೆ­ಸಿತ್ತು.  ಅದು ಯಾವ ದೇವರ ಕೃಪೆಯೋ ಒಂದು ಹೆಣ್ಣಾನೆಗೆ ಮರಿ ಜನಿಸಿತು.  ಅದರ ಬಣ್ಣ ಹೊಳೆ­ಹೊಳೆವ ಬೆಳ್ಳಿಯ ಬಣ್ಣ, ಗುಲಾಬಿ ಬಣ್ಣದ ಕಣ್ಣುಗಳು, ಕಾಲುಗಳು ಮಾತ್ರ ಪಾರದರ್ಶಕವಾದ ವಜ್ರದ  ಕಂಭಗಳಂತಿದ್ದವು.

ಅದರ ದಂತಗಳು ಬಂಗಾರದ ತುತ್ತೂರಿ­­ಗಳಂತಿದ್ದವು. ಬೆನ್ನ ಮೇಲೆ ಮಾಣಿಕ್ಯ, ರತ್ನಗಳಿಂದ ಕೂಡಿದ ರತ್ನ­ಗಂಬಳಿ­ಯನ್ನು ಹಾಸಿದಂತೆ ತೋರುತ್ತಿತ್ತು. ಅತ್ಯಂತ ಶಾಂತವಾದ ಮುಖ, ಮಣಿ­ಗಳಿಂದ ಸಿಂಗರಿಸಿದ ದೊಡ್ಡ ಮಾಲೆಯಂತೆ ತೊನೆ­ಯುವ ಸೊಂಡಿಲು ಇವು­ಗಳಿಂದ ಅದು ಮನಮೋಹಕವಾಗಿತ್ತು.   ಅದು ರೂಪ­ದಲ್ಲಿ ಮಾತ್ರವಲ್ಲ, ಗುಣದಲ್ಲೂ ಅಪ­ರೂ­ಪ­­­ದ್ದಾಗಿತ್ತು. ಅದು ಯಾರಿಗೂ ಹಿಂಸೆ ಮಾಡುತ್ತಿರಲಿಲ್ಲ. ಬದಲಾಗಿ ಯಾವ ಆನೆಗೆ ತೊಂದರೆ ಬಂದರೂ ಓಡಿಹೋಗಿ ಸಹಕರಿಸುತ್ತಿತ್ತು. 

ಅದು ದೊಡ್ಡದಾ­ದಂ­ತೆಲ್ಲ ಉಳಿದ ಆನೆಗಳು ಅದನ್ನೇ ನಾಯಕನೆಂದು ಭಾವಿಸಿ ಅದರ ಸೇವೆ ಮಾಡುತ್ತಿ­ದ್ದವು.  ಅದು ಹೀಗೆ ತನ್ನ ಪಾಡಿಗೆ ತಿರುಗಾಡಿಕೊಂಡಿದ್ದಾಗ ದೂರ­ದಲ್ಲಿ ಒಬ್ಬ ಮನುಷ್ಯ­ನನ್ನು ಕಂಡಿತು. ಆತ ಕಾಡಿನೊಳಗೆ ನವಿಲುಗಳನ್ನು ಹಿಡಿಯಲು ಬಂದ­ವನು. ತುಂಬ ದೂರ ಬಂದಿದ್ದ­ರಿಂದ ಅವನಿಗೆ ಮರಳಿ ಹೋಗುವ ದಾರಿ ತಿಳಿಯದೆ ಕಂಗಾ­ಲಾಗಿ ಅಳುತ್ತಿದ್ದ. ಅವನಿಗೆ ಸಹಾಯ ಮಾಡಲೆಂದು ಈ ಗಜರಾಜ ಅವ­ನೆ­ಡೆಗೆ ನಡೆಯಿತು. ತನ್ನ ಕಡೆಗೆ ಆನೆ ಬರುವುದನ್ನು ಕಂಡು ಮನುಷ್ಯ ಗಾಬರಿಯಾಗಿ ಓಡ­ತೊಡಗಿದ.

ಅವನ ಗಾಬರಿಯನ್ನು ಕಂಡು ಆನೆ ಅಲ್ಲಿಯೇ ನಿಂತಿತು. ಆತನೂ ಧೈರ್ಯದಿಂದ ನಿಂತ.  ಆಗ ಆನೆ ಮತ್ತೆ ಮುಂದುವರೆಯಿತು. ಆತ ಹೆದರಿ ಓಡಿದ. ಹೀಗೆ ಮೂರು-ನಾಲ್ಕು ಬಾರಿ ಆದಾಗ ಮನುಷ್ಯನಿಗೆ ಧೈರ್ಯ ಬಂದಿತು. ಹಾಗಾದರೆ ಆನೆ ತನಗೆ ಸಹಾಯ ಮಾಡಲು ಬರುತ್ತಿರಬೇಕೆಂದು ತಿಳಿದು ಗಟ್ಟಿ­ಯಾಗಿ ನಿಂತ.  ಆನೆ ಹತ್ತಿರ ಬಂದು, ‘ಯಾಕಪ್ಪಾ, ಏನಾದರೂ ಸಹಾಯ ಬೇಕಿತ್ತೇ?’ ಎಂದು ಕೇಳಿತು.  ಅದಕ್ಕೆ ಆತ ತಾನು ದಾರಿ ತಪ್ಪಿದ್ದನ್ನು ಹೇಳಿಕೊಂಡು ಅತ್ತ.  ಆಗ ಆನೆ, ‘ಛೇ ಅದಕ್ಕೇಕೆ ಅಳುತ್ತೀ? ಬಾ ನನ್ನ ಬೆನ್ನ ಮೇಲೆ ಕೂತುಕೋ. 

ನಿನ್ನನ್ನು ನಗರದ ಹತ್ತಿರ ಬಿಡುತ್ತೇನೆ’ ಎಂದು ಬಾಗಿ ಅವನನ್ನೇರಿಸಿಕೊಂಡು ನಗರದ ಕಡೆಗೆ ನಡೆಯಿತು.  ಈತ ದಾರಿಯನ್ನು ಗುರುತು ಮಾಡಿಕೊಳ್ಳುತ್ತ ಬಂದ.  ಊರು ಹತ್ತಿರ ಬಂದಾಗ ಅವನನ್ನು ಕೆಳಗಿಳಿಸಿ ಹೋಯಿತು. ಮನುಷ್ಯ ನೇರವಾಗಿ ದಂತದ ಕೆಲಸ ಮಾಡುವವರ ಬಳಿಗೆ ಹೋಗಿ ತಾನು ಕಂಡ ಅಪ­ರೂಪದ ಆನೆಯ ವಿಷಯ ಹೇಳಿದಾಗ ಅವರು ಅದರ ದಂತ ತಂದುಕೊಟ್ಟರೆ ಸಾವಿರ ಬಂಗಾರದ ನಾಣ್ಯಗಳನ್ನು ಕೊಡುವುದಾಗಿ ಹೇಳಿದರು.

ಈತ ಮರುದಿನ ಕರಗಸವನ್ನು ತೆಗೆದುಕೊಂಡು ಮತ್ತೆ ಬಂದ ದಾರಿಯಲ್ಲೇ ಸಾಗಿ ಆನೆಯನ್ನು ಕಂಡ.  ಬಿಕ್ಕಿ ಬಿಕ್ಕಿ ಅಳುತ್ತಾ ಹೇಳಿದ, ‘ನನ್ನ ಬದುಕೇ ಕಷ್ಟವಾಗಿದೆ. ಹೊಟ್ಟೆಗೆ ಏನೂ ಇಲ್ಲ.  ನಿನ್ನ ದಂತ ಕೊಟ್ಟರೆ ನನಗೆ ಸ್ವಲ್ಪ ಹಣ ಕೊಡುತ್ತಾರಂತೆ. ನೀನು ಸಹಾಯ ಮಾಡಬಹುದೇ?’ ಅದು ತುಂಬ ಸಾಧು ಸ್ವಭಾವದ ಆನೆ. ‘ಆಯಿತಪ್ಪ, ನಿನಗೆ ಅನುಕೂಲವಾದರೆ ಕತ್ತರಿಸಿಕೋ’ಎಂದು ಮೊಳಕಾಲೂರಿ ಕುಳಿತಿತು. ಈತ ಎರಡೂ ದಂತಗಳನ್ನು ಕೊಯ್ದುಕೊಂಡು ನಗರಕ್ಕೆ ಬಂದ. 

ಆಸೆಗೆ ಮಿತಿ­ಯುಂಟೇ? ಮರು­ವಾರ ಮತ್ತೆ ಕರಗಸ ಹಿಡಿದು ಬಂದ. ‘ಹೋದ ಬಾರಿ ನೀನು ಕೊಟ್ಟ ದಂತದಿಂದ ಸಾಲ ಮುಗಿಯಿತು. ಆದರೆ, ಮುಂದಿನ ಬದುಕಿಗೇನು ಮಾಡಲಿ? ನಿನ್ನ ಸುಂದರವಾದ ಕಾಲುಗಳ ಕೆಳಭಾಗ­ವನ್ನು ಕೊಟ್ಟರೆ ನನಗೆ ಕೆಲಸ ಕೊಡುತ್ತಾರಂತೆ. ದೊರೆತೀತೇ?’ ಎಂದು ಕೇಳಿದ. ಗಜರಾಜ, ‘ಅಯ್ಯಾ ಮುಂದಿನ ಹಾಗೂ ಹಿಂದಿನ ಎರಡೂ ಕಾಲು ಕತ್ತರಿಸಿದರೆ ನನಗೆ ನಡೆಯುವುದು ಸಾಧ್ಯವಿಲ್ಲ.  ಅದಕ್ಕೆ ನನ್ನ ಮುಂದಿನ ಎಡಗಾಲು ಹಾಗೂ ಹಿಂದಿನ ಬಲ­ಗಾಲನ್ನು ಕತ್ತರಿಸಿಕೋ.

ನಾನು ಹೇಗೋ ಇರುವಷ್ಟು ದಿನ ಕುಂಟುತ್ತ ಬದು­ಕುತ್ತೇನೆ. ನಿನ್ನ ಬಾಳು ಚೆನ್ನಾ­ದರೆ ಸಾಕು’ ಎಂದಿತು. ಈ ಪಾಪಿ ಮನುಷ್ಯ ನಿರ್ದಯ­ವಾಗಿ ಎರಡೂ ಕಾಲು­ಗಳನ್ನು ಕತ್ತರಿಸಿ­ಕೊಂಡು ಹೆಗಲ ಮೇಲೆ ಹೊತ್ತು ನಡೆದ.  ಆನೆ ಅವನನ್ನು ಕ್ಷಮಿಸಿ­ದರೂ ನಿಸರ್ಗ ಕ್ಷಮಿಸಬೇಕಲ್ಲ. ಮುಂದಿನ ಕ್ಷಣದಲ್ಲಿ ನೆಲದ ಲಾವಾರಸ ಹೊರಗೆ ನೆಗೆದು ಆ ದಳ್ಳುರಿಯಲ್ಲಿ ಅವನನ್ನು ಸುರಳಿಸುತ್ತಿ ಎಳೆದು ಭೂಗರ್ಭದಲ್ಲಿ ಸೇರಿಸಿ­ಕೊಂಡು ಬಿಟ್ಟಿತು. ನೀಚ ಭೂಗರ್ಭ ಸೇರಿದ.

ಆ ಕ್ಷಣದಲ್ಲೇ ಗಜ­ರಾಜನಿಗೆ ಮತ್ತೆ ಕಳೆದ ದಂತಗಳು ಮತ್ತು ಕಾಲುಗಳು ಮರಳಿ ಬಂದವು. ಇದೊಂದು ಜಾನಪದ ಕಥೆ­ಯಾದರೂ ಇಂದಿಗೂ ಪ್ರಸ್ತುತ­ವಾಗಿದೆ. ಮನುಷ್ಯ, ತನ್ನ ಹಿಂಗಲಾರದ ಆಸೆ­ಗಳನ್ನು ತೀರಿಸಿ­ಕೊಳ್ಳಲು, ನಿಸರ್ಗ, ಸಮಾಜ, ಅಷ್ಟೇ ಏಕೆ ತನ್ನ ಕುಲ­ಬಾಂಧವರನ್ನೇ ಬಳಸಿ­­ಕೊಳ್ಳುತ್ತಾನೆ, ಪೀಡಿ­ಸುತ್ತಾನೆ, ಮೋಸ­ಗೊಳಿಸುತ್ತಾನೆ. ಎಂದೋ ಒಂದು ದಿನ ಗಜರಾಜನಿಗೆ ಮೋಸ ಮಾಡಿದ ವ್ಯಕ್ತಿಗೆ ದೊರಕಿದ ಶಿಕ್ಷೆ ನಮಗೂ ದೊರಕೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT