ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಜ್ಜೋಡು

Last Updated 14 ಜನವರಿ 2017, 19:30 IST
ಅಕ್ಷರ ಗಾತ್ರ
‘ಮಹಾಭಾರತ’ದಂಥ ಒಂದು ದೀರ್ಘ, ಸಂಕೀರ್ಣ, ಜಟಿಲ ಇತಿಹಾಸವನ್ನು; ಅದು ಹಾಗಿರುವುದರಿಂದಲೇ ಮತ್ತೆ ಮತ್ತೆ ಓದಬೇಕು, ಕೆಲವೊಮ್ಮೆ ಚುಟುಕಾಗಿ ಆದರೆ ಉತ್ಕಟವಾಗಿ, ಕೆಲವೊಮ್ಮೆ ವಿಶದ ವಿಸ್ತಾರವಾಗಿ – ಬಿಟ್ಟುಹೋಗಿರುವ ಸಂಬಂಧಗಳು–ಕೊಂಡಿಗಳು, ಮರಳಿ ಕಾಣಿಸುವಂತೆ ಓದಬೇಕು ಎನ್ನಲಾಗಿದೆ.
 
‘ಇಷ್ಟಂ ಹಿ ವಿದುಷಾಂ ಲೋಕೇ ಸಮಾಸವ್ಯಾಸ ಧಾರಣಮ್‌’ ಎನ್ನುವುದು ಮಹಾಭಾರತದಲ್ಲೇ ಬಂದಿರುವ ಮಾತು. ಒಮ್ಮೆ ಕಿರಿದಾಗಿ, ಬಿಡಿಬಿಡಿಯಾಗಿ, ಇನ್ನೊಮ್ಮೆ ಇಡಿಯಾಗಿ, ಬೇರ್ಪಟ್ಟಂತಿರುವ ಎಲ್ಲವನ್ನೂ ಪರಸ್ಪರ ಸಂಬಂಧಿಸುತ್ತ ಈ ಇತಿಹಾಸವನ್ನು ಅಧ್ಯಯನ ಮಾಡುವುದು ಆಸಕ್ತ ವಿದ್ವಜ್ಜನರಿಗೆ ಇಷ್ಟವಾದುದಂತೆ. ಪಂಪ, ತನ್ನ ‘ವಿಕ್ರಮಾರ್ಜುನವಿಜಯ’ದ ಕೊನೆಯಲ್ಲಿ ತನ್ನ ದೃಷ್ಟಿಯ ಒಂದು ಮಾದರಿಯನ್ನು ಪ್ರಕಟಿಸಿದ್ದಾನೆ. ‘ಛಲದೊಳ್‌ ದುರ್ಯೋಧನಂ, ನನ್ನಿಯೊಳ್‌ ಇನತನಯಂ, ಗಂಡಿನೊಳ್‌ ಭೀಮಸೇನಂ’... ಇತ್ಯಾದಿ. ಇದು ಬಿಡಿ ಬಿಡಿಯಾಗಿ ನೋಡಿದಂತಿದೆ. ಛಲ, ನನ್ನಿ, ಗಂಡುತನ ಇತ್ಯಾದಿ ಗುಣಗಳನ್ನು ಆಯಾಯ ಪಾತ್ರಗಳ ಒಳ ಗುರುತಾಗಿ ನಿರೂಪಿಸಿದಂತಿದೆ. ಪಂಪನ ಪಾತ್ರಪ್ರಶಂಸೆಯ ಮಾತುಗಳಿಂದಲೇ ಉತ್ತೇಜಿತನಾಗಿ, ಆದರೆ ಇನ್ನೊಂದೇ ರೀತಿಯಲ್ಲಿ – ಪಂಪನಿಂದ ತನ್ನ ಭಿನ್ನತೆಯನ್ನು ಸೂಚಿಸುವುದಕ್ಕಾಗಿ – ಕುಮಾರವ್ಯಾಸ, ‘ಅರಸುಗಳಿಗಿದು ವೀರ, ದ್ವಿಜರಿಗೆ ಪರಮವೇದದ ಸಾರ’ ಇತ್ಯಾದಿಯಾಗಿ ತನ್ನ ಮಾದರಿಯನ್ನು ಎತ್ತಿ ಹೇಳುತ್ತಾನೆ. ‘ದಶಾರ್ಥಾಃ ಸರ್ವ ಭಾರತೇ’ – ಮಹಾಭಾರತಕ್ಕೆ ಹತ್ತು–ಹತ್ತಾರು ಅರ್ಥಗಳಿವೆ ಎಂಬ ಪರಂಪರೆಯ ಹೊಗಳಿಕೆಯ ನುಡಿ ಕೂಡ ಇತಿಹಾಸದ ಓದಿನ ಬಗೆಬಗೆಗಳನ್ನೇ ಸೂಚಿಸುವ ನುಡಿಯಾಗಿದೆ. ಇತಿಹಾಸದ ಓದಿನ ಜೊತೆಗೆ ಓದಿನ ಇತಿಹಾಸವೂ ಬೆರೆತೇ ಇರುತ್ತದೆ!
 
ಹೌದು; ಬಿಡಿಬಿಡಿಯಾಗಿ ಪಾತ್ರಗಳ ಕಣ್ಣಿನಿಂದ ಇತಿಹಾಸವನ್ನು ನೋಡುವಾಗ ಅನೇಕ ವಿ–ಸಂಗತಿಗಳು ಕಾಣಿಸಬಹುದು, ಕಾಣಿಸುತ್ತವೆ. ಹಾಗೆ ಕಾಣಿಸಿ, ಸರಿ–ತಪ್ಪುಗಳ ಮಾತು, ನ್ಯಾಯ–ಅನ್ಯಾಯಗಳ ಮಾತು ನೂರು ನಡೆಯಬಹುದು. ಆದರೆ ಇವನ್ನೆಲ್ಲ ಕಾಲದ ದೊಡ್ಡದೊಂದು ವಿಸ್ತಾರದಲ್ಲಿ ಕಾಣಿಸಿ ಪಾತ್ರಗಳ ವ್ಯಕ್ತಿನಿಷ್ಠ ದೃಷ್ಟಿಯನ್ನು ಮೀರಿ ನೋಡಿದಾಗ – ಹಾಗೆ ಮೀರಿ ನೋಡುವುದಕ್ಕಾಗಿಯೇ ವಿಸ್ತಾರದಲ್ಲಿ ಕಾಣಿಸುವುದು ಮತ್ತು ಅಂಥ ನೋಟವೂ ಒಂದು ಇದೆಯಲ್ಲವೆ – ಕಂಡ ವಿಸಂಗತಿಗಳ ಹಿಂದೆಯೂ ಒಂದು ಸಂಗತಿ, ಒಂದು ಕಾರಣ, ಒಂದು ಹಿನ್ನೆಲೆ, ಒಂದು ಮನೋಧರ್ಮ ಕಂಡುಬರಬಹುದು – ಪರ, ವಿರೊಧಗಳ ಮಾತಿಗಿಂತ ಹೆಚ್ಚಾಗಿ. ಆಗ, ನಾವೇನೋ ಇತಿಹಾಸವನ್ನು ವ್ಯಕ್ತಿನಿಷ್ಠವಾಗಿ ನೋಡುತ್ತಿರಬಹುದು, ಆದರೆ ಇತಿಹಾಸವು ನಮ್ಮನ್ನು ವ್ಯಕ್ತಿನಿಷ್ಠವಾಗಿ ನೋಡುತ್ತಿಲ್ಲ, ಅದರ ನೋಟವೇ ಬೇರೆ ಎನ್ನುವುದು ಅರಿವಾಗಬಹುದು. ಇತಿಹಾಸಕ್ಕೆ ನಾವು ಬರಿಯ ಒಂದು ಬಿಡಿ ಪಾತ್ರವಲ್ಲ. ಅಥವಾ ಪಾತ್ರವಾಗಿಯೂ ಪಾತ್ರವಲ್ಲ. ಅದು ನಮ್ಮನ್ನು ಇಡಿಯಾಗಿ ಒಳಗೊಳ್ಳಬಯಸುತ್ತದೆ; ನಮ್ಮ ಭೂತ–ಭವಿಷ್ಯಗಳ ಸಮೇತ. ಇಡಿಯಾಗಿ ಒಳಗೊಂಡು ತನ್ನಂತೆ ಮಾಡಿಕೊಳ್ಳಬಯಸುತ್ತದೆ. ಇತಿಹಾಸದ ಆಧ್ಯಾತ್ಮಿಕ ರೂಪವಾದ ‘ಕಾಲ’ದ ಜೊತೆ ಸಮೀಕರಿಸಿಕೊಂಡು ಬದುಕಿದ ಕೃಷ್ಣನು, ಅರ್ಜುನನೊಡನೆ ತನ್ನ ‘ಮಾಧ್ಯಮ’ವಾಗು ಎಂದು ಕೇಳುತ್ತಾನೆ. ತನ್ನ ‘ನಿಮಿತ್ತ’ನಾಗು ಎನ್ನುತ್ತಾನೆ. ಇತಿಹಾಸದ ‘ನಿಮಿತ್ತ’ವಾಗುವುದೆಂದರೆ ಇತಿಹಾಸವಾದಂತೆಯೇ. ಬಿಡಿಯಾದ ‘ಪಾತ್ರ’ವಾಗುವುದನ್ನು ಕಳಚಿಕೊಂಡಂತೆಯೇ. ವ್ಯಾಸರು, ಮಹಾಭಾರತವೆಂಬ ಈ ಇತಿಹಾಸವು ತನ್ನ ಅಂತರನುಭವವೆಂದು ಹೇಳಿದ್ದುಂಟು. ಹಾಗೆ ಹೇಳಿದ್ದು ಪಾತ್ರನಿಷ್ಠದೃಷ್ಟಿಯನ್ನು ಮೀರಿನಿಂತೇ ಹೇಳಿದ್ದೆನ್ನಿಸುತ್ತದೆ.
 
ಇತಿಹಾಸದ ಓದುವಿಕೆಗಳ ಈ ಬಗೆಗಳನ್ನು ಏಕಾಗ್ರತೆಯ ಎರಡು ರೂಪಗಳೆನ್ನಬಹುದು. ಒಂದು ಮಾರ್ಮಿಕವಾದ ಕಥೆ ಇದೆ. ಕೌರವ–ಪಾಂಡವ ಹುಡುಗರಿಗೆ ಬಿಲ್ವಿದ್ಯೆಯನ್ನು ಕಲಿಸುತ್ತದ್ದ ಗುರು ದ್ರೋಣನು ತನ್ನ ಶಿಷ್ಯರ ಏಕಾಗ್ರತೆಯನ್ನು ಪರೀಕ್ಷಿಸಬೇಕೆಂದುಕೊಂಡನಂತೆ. ದೊಡ್ಡ ಮರವೊಂದರಲ್ಲಿ ಹಕ್ಕಿಯ ಕುರುಹೊಂದನ್ನು ಲಕ್ಷ್ಯವಾಗಿರಿಸಿದನಂತೆ. ಆ ಸೂಕ್ಷ್ಮವಾದ ಗುರಿಯನ್ನು ಕಾಣುವುದೇ ತುಸು ಕಷ್ಟವಿತ್ತು. ಮೊದಲು ಆ ಗುರಿ ಕಾಣಬೇಕು. ಆಮೇಲೆ ಗುರಿ ಮಾತ್ರ ಕಾಣಬೇಕು. ಆಗ ಬಿಲ್ಗಾರ ತಾನು ಕಣೆ ಏರಿಸಿ ಮೈ–ಮನ ಸಜ್ಜಾಗಬೇಕು. ವಿಚಲಿತನಾಗದೆ ಅಷ್ಟು ಹೊತ್ತು ಇದ್ದು ಗುರು, ‘ಹೊಡೆ’ ಎಂದಾಗ ಹೊಡೆಯಬೇಕು. ದ್ರೋಣ; ಮೊದಲು ಹುಡುಗರಲ್ಲಿ ಹಿರಿಯನಾದ ಧರ್ಮಜನನ್ನು ಕರೆದನಂತೆ. ಹಕ್ಕಿ ಕಾಣಿಸುತ್ತಿದೆಯೆ ಎಂದು ಕೇಳಿದನಂತೆ. ಹೌದು. ಹಕ್ಕಿ ಕಾಣಿಸುತ್ತಿತ್ತು ಧರ್ಮಜನಿಗೆ. ಇನ್ನೇನು ಕಾಣಿಸುತ್ತಿದೆ? ತಾನು ಕಾಣಿಸುತ್ತಿದ್ದೇನೆಯೆ? – ಧರ್ಮಜನಿಗೆ ದ್ರೋಣನೂ ಕಾಣಿಸುತ್ತಿದ್ದ. ನೆರೆದ ತಮ್ಮಂದಿರು? ಅವರೂ ಕಾಣಿಸುತ್ತಿದ್ದರು. ಧರ್ಮಜನ ಉತ್ತರವನ್ನು ಕೇಳಿ ಗುರುವಿಗೆ ತೀರ ನಿರಾಸೆಯಾಯಿತು. ಅವನು ಶಿಷ್ಯರಲ್ಲಿ ತನ್ನ ಗುರಿಯನ್ನು ಅರಸುತ್ತಿದ್ದ. ಗುರಿಯನ್ನು ಮಾತ್ರ ಕಾಣಬಲ್ಲವರು ಗುರಿಯನ್ನು ಕೆಡವಬಲ್ಲರು! ಅಂಥವನೊಬ್ಬ ಬೇಕು. ಅದು ಧರ್ಮಜನಾಗಲಾರ. ಧರ್ಮಜನಿಗೆ ಎಲ್ಲವೂ ಕಾಣಿಸುತ್ತದೆ. ಉಳಿದ ಶಿಷ್ಯರಲ್ಲಿಯೂ ಯಾರೂ ತದೇಕಚಿತ್ತರು ಕಾಣಿಸಲಿಲ್ಲ. ತನ್ನ ಕಣ್ಣುಗಳಿಂದ ಗುರಿಯನ್ನು ಮಾತ್ರ ಕಂಡವನು ಅರ್ಜುನನೊಬ್ಬ. ಅರ್ಜುನನಿಗೆ ಮರವೂ ಗುರುವೂ ಯಾವುದೂ ಕಾಣಿಸುತ್ತಿರಲಿಲ್ಲ. ರೆಕ್ಕೆಪುಕ್ಕಗಳ ಹಕ್ಕಿಯೂ ಕಾಣಿಸಲಿಲ್ಲ. ಹಕ್ಕಿಯ ಕೊರಳೊಂದು ಕಾಣುತ್ತಿತ್ತು. ತನ್ನನ್ನು ಸೀಳಿಬಿಡು ಎನ್ನುತ್ತಿತ್ತು. ಅರ್ಜುನ ಹಕ್ಕಿಯನ್ನು ಕೆಡವಿದ.
 
ಇದೇನೋ ನಿಜ. ಇದು ಏಕಾಗ್ರತೆಯ ಚಿತ್ರ. ಗುರಿಯಲ್ಲಿ ಬಾಣದಂತೆ ತನ್ಮಯನಾಗು ಎನ್ನುತ್ತದೆ ಉಪನಿಷತ್ತು ಕೂಡ. ‘ಶರವತ್‌ ತನ್ಮಯೋ ಭವೇತ್‌’. ಅಥವಾ ಬಾಣದ ಮೊನೆಯಲ್ಲಿ ಅದೃಶ್ಯ ಗುರಿಯೊಂದು ಕೀಲಿಸಿಯೇ ಇರುತ್ತದೇನೋ! ಇದೇ ತದೇಕಮನಸ್ಕತೆ. ಇದನ್ನೇ ಲೋಕದಲ್ಲಿ ಎಲ್ಲರೂ ಸಾಧಿಸಬೇಕೆಂದು ಬಯಸುತ್ತಿರುವುದು. ಅನ್ಯಮನಸ್ಕತೆಯು ಈ ಏಕಮನಸ್ಕತೆಗಿಂತ ಭಿನ್ನವಾಗಿದೆ. ಕೆಲವೊಮ್ಮೆ ವಿರೋಧಿಯೂ ಆಗಿದೆ. ಆದರೆ ಇತಿಹಾಸವು ಈ ಇನ್ನೊಂದು ಬಗೆಯ ಏಕಾಗ್ರತೆಯನ್ನು ಬಯಸುತ್ತಿದೆ; ಇದನ್ನು ಅರಸುತ್ತಿದೆ ಎಂದು ಅನ್ನಿಸುತ್ತದೆ. ಅಂದರೆ ಎಲ್ಲವನ್ನೂ ನೋಡಬಲ್ಲ ಮನಸ್ಸನ್ನು ಇತಿಹಾಸ ಹುಡುಕಾಡುತ್ತಿದೆ. ಗುರಿಯೊಂದನ್ನೇ ನೋಡುವುದು ಏಕಮನಸ್ಕತೆಯಾದರೆ, ಯಾವುದನ್ನೂ ಕುರಿತಾಗಿ ನೋಡದೆ ಆದರೆ ಎಲ್ಲವನ್ನೂ ನೋಡಬಲ್ಲದ್ದು ‘ಅನ್ಯಮನಸ್ಕತೆ’ ಎನ್ನಬಹುದು. ‘ಅನ್ಯಮನಸ್ಕತೆ’ ಎನ್ನುವ ಚಿತ್ತಸ್ಥಿತಿಗೆ ತನ್ನದೇ ಆದ ಚೆಲುವಿದೆ. ಅದು ನಿರಾಳ–ಚೆಲುವು!
 
ಈ ಸಂದರ್ಭವನ್ನು ಕುರಿತಂತೆ ಎಚ್ಚೆಸ್ವಿಯವರ ಆಳವಾದ ಪದ್ಯವೊಂದಿದೆ.
 
ತನಗೊಂದು ‘ಗುರಿ’ ಇದ್ದು ಅದನ್ನು ಸಾಧಿಸಲೇಬೇಕೆಂದುಕೊಳ್ಳುವ ಮನಸ್ಸು, ತನ್ನ ಉದ್ದೇಶಕ್ಕೆ ಪೂರಕವಾಗಿರುವವರನ್ನು ಅರಸುತ್ತಲೇ ಇರುತ್ತದೆ. ದ್ರುಪದನ ಮೇಲಿನ ದ್ವೇಷದಿಂದ ಅವನನ್ನು ಸೋಲಿಸಬಲ್ಲವರನ್ನು ಹಲ್ಲು ಕಚ್ಚಿ ರೂಪಿಸಹೊರಟ ದ್ರೋಣನಂತೆ. ಇದು ಕಾವ್ಯದಲ್ಲಿ ಅಮೋಘ ಪಾತ್ರಚಿತ್ರಣವನ್ನು ಮಾಡಿದಂತೆ. ಆದರೆ ಎಲ್ಲವನ್ನೂ ನೋಡುವ ‘ಇತಿಹಾಸ’ – ಏಕಾಗ್ರತೆಯ ಸಫಲತೆ; ವಿಫಲತೆಗಳನ್ನೂ ನೋಡಬಲ್ಲ ಇತಿಹಾಸ – ಒಮ್ಮೆ ಏಕಾಗ್ರತೆಯನ್ನು ಸಾಧಿಸಿ, ‘ಗುರಿ’ಯನ್ನು ಕೆಡವಿದವನು ಮುಂದೆ ಎಲ್ಲೆಲ್ಲೂ ತನ್ನ ಗುರಿಯನ್ನು ಅರಸುತ್ತ ಹೋಗುವ ಅಪಾಯವನ್ನು ಮನಗಾಣಬಲ್ಲ ಇತಿಹಾಸ – ತನ್ನ ಎಂದರೆ ಇತಿಹಾಸದ ಸ್ವಭಾವದಂತೆ ಎಲ್ಲವನ್ನೂ ಬಲ್ಲವನನ್ನು – ಅದು ಏಕಾಗ್ರತೆಯನ್ನು ಸಾಧಿಸಲಾಗದ ವೈಫಲ್ಯವೆಂದೇ ಲೋಕ ಹೇಳಲಿ – ರೂಪಿಸಲು ಬಯಸುತ್ತದೆ. ಅಥವಾ ಏಕಾಗ್ರನಾಗಬಲ್ಲವನನ್ನು ಕೂಡ ಒಂದು ಸಂದರ್ಭದಲ್ಲಿ ತೀರ ಅನ್ಯಮನಸ್ಕನನ್ನಾಗಿಸಿ – ಹಕ್ಕಿಯ ಕೊರಳನ್ನು ಮಾತ್ರ ಕಾಣಬಲ್ಲ ಹರಿತ ನೋಟದ ಬೇಟೆಗಾರನನ್ನು ಮುಗ್ಧ ‘ಪಕ್ಷಿವೀಕ್ಷಕ’ ವಿಜ್ಞಾನಿಯನ್ನಾಗಿಸಿಬಿಡುತ್ತದೆ!
 
ಕುರುಕ್ಷೇತ್ರದ ಮಹಾಯುದ್ಧ ಇನ್ನೇನು ಮೊದಲಾಗಬೇಕು ಎನ್ನುವ ಸ್ಫೋಟಕ ಹಂತದಲ್ಲಿ ದ್ರೋಣರ ಪ್ರಿಯಶಿಷ್ಯ, ಕೃಷ್ಣನ ನೆಚ್ಚಿನ ಗೆಳೆಯ ಅರ್ಜುನನಿಗೆ ಇದೇ ಆಯಿತು! ಎರಡೂ ಸೇನೆಗಳ ಮಧ್ಯೆ – ಸೇನಯೋರುಭಯೋರ್ಮಧ್ಯೇ, ಈ ಮಾತೆಷ್ಟು ಅರ್ಥಪೂರ್ಣ! ತನ್ನ ತೇರನ್ನು ನಿಲ್ಲಿಸೆಂದ ಅರ್ಜುನನ ಮಾತಿನಂತೆ ಕೃಷ್ಣನು ಅಂಥದೊಂದು ಜಾಗದಲ್ಲಿ ತೇರನ್ನು ನಿಲ್ಲಿಸಿ, ‘ಪಶ್ಯ’ – ನೋಡು ಸೇರಿದ ಕುರುಗಳನ್ನು ಎಂದನಂತೆ! ಬಲು ಹಿಂದೆ, ಹಕ್ಕಿಯ ಕೊರಳು ಮಾತ್ರ ಕಾಣುತ್ತಿದೆ ಎಂದಾಗ ‘ಹೊಡೆ’ ಎಂದು ದ್ರೋಣರು ಹೇಳಿದಂತಾಯಿತು – ಆದರೆ ಇನ್ನೊಂದು ರೀತಿಯಲ್ಲಿ! ಅರ್ಜುನನು ನೋಡಿದ. ನೋಡಿದ್ದು ಹಕ್ಕಿಯೆ ಕೊರಳಾಗಿರಲಿಲ್ಲ! ನೋಡಿದ್ದು ತನ್ನ ಶತ್ರುಗಳನ್ನಾಗಿರಲಿಲ್ಲ! ತನ್ನ ಬಂಧುಗಳನ್ನು ನೋಡಿದ. ಗೆಳೆಯರನ್ನು, ಒಡನಾಡಿಗಳನ್ನು, ಅಣ್ಣ ತಮ್ಮಂದಿರನ್ನು. ಪಿತೃಪಿತಾಮಹರನ್ನು ನೋಡಿದ. ಅವನಿಗೆ ಶತ್ರುಗಳೇ ಕಾಣಿಸಲಿಲ್ಲ! ದ್ರೋಣಶಿಷ್ಯನಿಗೆ ಏನಾಯಿತು? ಏಕಾಗ್ರತೆ ಭಂಗವಾಯಿತೆನ್ನಬೇಕೆ? ಕಾಣಬಾರದ್ದೆಲ್ಲ ಕಾಣಿಸಿತೆನ್ನಬೇಕೆ? ಅನ್ಯಮನಸ್ಕನಾದನೆನ್ನಬೇಕೆ? ಶತ್ರುಗಳನ್ನು ನೋಡಿ ಉರಿ ಮಸಗಬೇಕಾದವನು ತನ್ನವರನ್ನು ನೋಡಿ ಹೇಳಲಾಗದ ಅದೊಂದು ವಿಷಾದದಲ್ಲಿ ಮುಳುಗಿದ! ಈ ವಿಷಾದ ಬಾರದೆ ಇರುತ್ತಿದ್ದರೆ – ಕೃಷ್ಣನ ಮುಖದಿಂದ ‘ಗೀತೆ’ಯು ಹುಟ್ಟಿಕೊಳ್ಳುವ ಸಂದರ್ಭವೇ ಇರುತ್ತಿರಲಿಲ್ಲ. ನಿಜ. ಅರ್ಜುನನೇನು ಮಾಡಬೇಕು ಎನ್ನುವ ಪ್ರಶ್ನೆಗೆ – ನಿನ್ನ ಕರ್ತವ್ಯವನ್ನು ಮಾಡು – ಇಡಿಯ ನಾಗರಿಕತೆಯನ್ನು ಯುದ್ಧಮುಖವಾಗಿ ಪ್ರೇರಿಸುತ್ತಿರುವ ದೊಡ್ಡ ಶಕ್ತಿಯೊಂದರ ಮಾಧ್ಯಮವೆಂಬಂತೆ ಕರ್ತವ್ಯವನ್ನು ಮಾಡುವುದಷ್ಟೆ ನಿನ್ನ ಮುಂದಿರುವ ದಾರಿ ಎಂದು ಕೃಷ್ಣನು ‘ಕುರಿತಾಗಿ’ ಹೇಳುತ್ತಾನೆನ್ನುವುದು ನಿಜವಾದರೂ, ಈ ನಿಲುವನ್ನು ತಾಳಬೇಕಾದರೆ ಇದಕ್ಕೆ ಹಿನ್ನೆಲೆಯಾಗಿ ಕೃಷ್ಣನು ಹೇಳುವ ವಿಷಯಗಳ ವಿಸ್ತಾರವೆಷ್ಟು! ಪ್ರಾಯಃ ‘ಗೀತೆ’ಯಲ್ಲಿ ಸಂಸ್ಕೃತಿಗೆ ಸಂಬಂಧಪಟ್ಟಂತೆ ಹೇಳದೇ ಬಿಟ್ಟ ವಿಷಯಗಳೇ ಇಲ್ಲ ಎಂಬಂತಿದೆ. ಅಂದರೆ ಯುದ್ಧ ಮಾಡೆನ್ನುವುದು ‘ಲಕ್ಷ್ಯ’ವಾದರೂ ಆ ‘ಲಕ್ಷ್ಯ’ವು ಸಾಧಿತವಾಗುವುದು ಇದುವರೆಗೆ ಅಲಕ್ಷಿಸಿದ ಎಷ್ಟೋ ವಿಷಯಗಳ ಹಿನ್ನೆಲೆಯಲ್ಲಿ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಅನ್ಯಮನಸ್ಕತೆಯೇ ಏಕ–ಮನಸ್ಕತೆಯನ್ನು ರೂಪಿಸಿದಂತೆ.
 
ನಿಜವಾದ ಕಾವ್ಯಕ್ಕೆ ಏಕಮನಸ್ಕತೆಯ ಜೊತೆಗೆ ಅನ್ಯ–ಮನಸ್ಕತೆಯ ನಿರುದ್ದಿಷ್ಟ ನೆರವೂ ಇರಬೇಕೆನಿಸುತ್ತದೆ. ಸೃಷ್ಟಿಶೀಲತೆಯ ವಿಧಾನಗಳೇ ಹೀಗೆ ಉದ್ದೇಶ–ನಿರುದ್ದೇಶಗಳ ಜೊತೆ ಹೆಣೆದುಕೊಂಡಿವೆ. ಹತ್ತು ದಿಕ್ಕುಗಳಲ್ಲಿ ಹರಿಯುತ್ತಿರುವ ಬದುಕನ್ನು ಗುರುತಿಸಹೊರಟ ‘ಇತಿಹಾಸ’ವಂತೂ ಅನ್ಯ–ಮನಸ್ಕತೆಯ ಜೊತೆ ಒಕ್ಕತನ ಮಾಡಿಯೇ ಮಾಡುತ್ತದೆ; ಕೆಲವೊಮ್ಮೆ ಈ ಒಕ್ಕತನ – ಇಜ್ಜೋಡಿನಂತೆ ಕಂಡರೂ. ಸ್ವಯಂ ವ್ಯಾಸರು ಇದನ್ನು ‘ನಿಯೋಗ’ ಆಚರಣೆಯ ಹೊತ್ತಿನಲ್ಲಿ ಅನುಭವಿಸಿದರೆನ್ನುವುದು ಇತಿಹಾಸವೇ ಹೇಳುತ್ತಿರುವ ತನ್ನ ಆತ್ಮ–ವೃತ್ತಾಂತದಂತಿದೆ!
 
ಹಸ್ತಿನಾವತಿಯ ಅರಮನೆಯಲ್ಲಿ ಏನಾಗಿತ್ತೆಂದರೆ – ಮೈಯ್ಯನ್ನೂ ಮನಸ್ಸನ್ನೂ ಎರಡನ್ನೂ ಸರಿಯಾಗಿ ಓದಲಾಗದ ವಿಲಕ್ಷಣ ಅನಕ್ಷರತೆ ಅಲ್ಲಿ ತುಂಬಿತ್ತು. ಪ್ರಾಯಃ ಎಲ್ಲ ಅರಮನೆಗಳಲ್ಲೂ. ವಿಚಿತ್ರವೀರ್ಯನು ಪಟ್ಟದ ಅರಸನಾಗಿದ್ದನು ನಿಜ. ಆದರೆ ಅವನು ಅಂತಃಪುರಕ್ಕೆ ಸೀಮಿತಗೊಂಡಿದ್ದನು. ಅಂಬಿಕೆ–ಅಂಬಾಲಿಕೆಯರು, ಅಂಬೆಯ ತಂಗಿಯರು, ಅವನ ಒಡನಾಡಿಗಳಾಗಿದ್ದರು. ಭೀಷ್ಮನೇ ತನ್ನ ಪರಾಕ್ರಮವನ್ನು ಮೆರೆದು, ಈ ತನ್ನ ತಮ್ಮನಿಗಾಗಿ ಕರೆದಂದ ಹುಡುಗಿಯರು. ಏಳು ವರುಷಗಳ ದಾಂಪತ್ಯದ ಬದುಕು. ಇನ್ನೂ ಸಂತಾನವಾಗಿರಲಿಲ್ಲ. ಅಷ್ಟರಲ್ಲಿ ಕ್ಷಯರೋಗ ಪೀಡಿತನಾಗಿ – ಅತಿಕಾಮದ ಕಾರಣವಿರಬೇಕು – ವಿಚಿತ್ರವೀರ್ಯನು ಅಸುನೀಗಿದನು. ಸತ್ಯವತಿ ಮತ್ತು ಭೀಷ್ಮ ನೋಡನೋಡುತ್ತಿದ್ದಂತೆ ಅವರ ನಿರೀಕ್ಷೆಯ ಗೋಪುರಗಳನ್ನೆಲ್ಲ ಕೆಡವಿ, ಹಸ್ತಿನೆಯ ಸಿಂಹಾಸನ ದಾಶಕುಲವನ್ನೇ ನುಂಗಿಬಿಟ್ಟಿತು. ಅರಮನೆ ತಬ್ಬಲಿಯಾಯಿತು.
 
ಸತ್ಯವತಿ ಸ್ತಬ್ಧಳಾಗಿ ಹೋದಳು! ಏನಾಗಿಹೋಯಿತು! ದೋಣಿಕಾರ್ತಿ ಹುಡುಗಿಯಾಗಿದ್ದಳು. ಋಷಿ ಪರಾಶರನಿಂದ – ಅವನು ರಸಋಷಿಯೇ ನಿಜ – ಮೈಯ ಗಂಧವೇ ಬದಲಿಸಿತು. ಮತ್ಸ್ಯಗಂಧಿಯಾಗಿದ್ದವಳು ಯೊಜನಗಂಧಿಯಾದಳು. ತಾನು ಗಂಧಪರಿವರ್ತನೆ ಬಯಸಬಾರದಿತ್ತೇನೋ. ಕನ್ನೆತನ ಕಳೆಯದಂತೆ ಕೂಡುವೆನೆಂದವನಲ್ಲಿ ಮೈಯಗಂಧವೇಕೆ ಪರಿವರ್ತನೆ ಮಾಡೆಂದು ಬೇಡಿದೆ? ಗಂಧವೂ ಮುನ್ನಿನಂತೇ ಇರಬಹುದಿತ್ತು. ಈಗ ತಾನು ಯೋಜನಗಂಧಿಯಾದೆ. ಅರಮನೆಗೆ ಬಂದೆ. ರಾಣಿಯಾದೆ. ಶಂತನುವಿನಿಂದ ಎರಡು ಮಕ್ಕಳನ್ನು ಪಡೆದು ರಾಜಮಾತೆಯಾದೆ. ಈಗ ಮಕ್ಕಳನ್ನು ಕಳೆದುಕೊಂಡೂ ಈಗಲೂ ತಾನು ರಾಜಮಾತೆಯೇ. ಅದಕ್ಕೆ ಕಾರಣ ಗಾಂಗೆಯ ಭೀಷ್ಮ! ಶಂತನುವಿನ ಮೊದಲ ಮಗನಾಗಿ ತನ್ನನ್ನು ಚಿಕ್ಕಮ್ಮನೆಂದು ಕರೆದು ತನ್ನನ್ನು ರಾಜಮಾತೆಯಾಗಿಸಿದವನು. ಥಟ್ಟನೆ ಸತ್ಯವತಿಗೆ ಹೊಳೆಯಿತು. ಭೀಷ್ಮನಿಗೆ ಶಂತನುವಿತ್ತ ಇಚ್ಛಾಮರಣವೆಂಬ ವರದ ಮಹತ್ತ್ವ ಈಗ ತನ್ನಿಬ್ಬರು ಮಕ್ಕಳನ್ನು ಕಳೆದುಕೊಂಡ ಮೇಲೆ ಬೇರೆಯೇ ರೀತಿಯಲ್ಲಿ ಅವಳಿಗೆ ಅರ್ಥವಾಗತೊಡಗಿತು. ತಬ್ಬಲಿಯಾಗಿಹೋದ ಅರಮನೆಗೆ ಈಗ ಭೀಷ್ಮನೇ ಆಸರೆ. ಭೀಷ್ಮನೇ ದಿಕ್ಕು. ಅವನಲ್ಲಿಯೇ – ಪಿಂಡಶ್ಚ; ಕೀರ್ತಿಶ್ಚ; ಸಂತಾನಂ ಚಪ್ರತಿಷ್ಠಿತಂ – ಎಂದುಕೊಂಡಳು. ಶಂತನುವಿಗೆ ಪಿಂಡಪ್ರಧಾನ ಮಾಡತಕ್ಕವನು, ಸಿಂಹಾಸನದ ಕೀರ್ತಿಯನ್ನು ಮತ್ತೆ ಬೆಳಗಿಸಬಲ್ಲವನು, ಮಕ್ಕಳನ್ನು ಪಡೆಯಬಲ್ಲವನಾಗಿ ತಬ್ಬಲಿತನವನ್ನು ಕಳೆಯುವವನು – ಎಲ್ಲ ರೀತಿಯಿಂದಲೂ ಅರಮನೆಗೆ ದಿಕ್ಕುದೆಸೆ ಭೀಷ್ಮನೊಬ್ಬನೇ. ಸತ್ಯವತಿ ಚೇತರಿಸಿಕೊಂಡಳು. ನಾವೆಯನ್ನು ಅದು ಮುಳುಗದಂತೆ ಜತನ ನೋಡುತ್ತ ದಡ ಸೇರಿಸುವ ಹೊಣೆ ಹೊತ್ತಿದ್ದ ದೋಣಿಕಾರ್ತಿಯ ಬದುಕು ಬದುಕಿದವಳು – ಹುಟ್ಟುಹಾಕುವ ಕೈ ಹಾಗೆ ಚೆಲ್ಲಲಾರಳು!
 
ಭೀಷ್ಮನನ್ನು ಕಂಡಳು. ಆಪದ್ಧರ್ಮವಾಗಿ ಮದುವೆಯಾಗೆಂದಳು. ಮಕ್ಕಳನ್ನು ಪಡೆ ಎಂದಳು. ಆದರೆ ಅದು ದೂರದ ಮಾತು. ಆಪದ್ಧರ್ಮವಾಗಿಯೇ ಬಲ್ಲ ಶಾಸ್ತ್ರಜ್ಞರು ಸೂಚಿಸುವ ‘ನಿಯೋಗಪದ್ಧತಿ’ಯಿಂದ ವಿಚಿತ್ರವೀರ್ಯನ ಪತ್ನಿಯರಲ್ಲಿ ಮಕ್ಕಳನ್ನು ಪಡೆದು –ಕುಸಿದ ಅರಮನೆಯನ್ನು ಮತ್ತೆ ಕಟ್ಟೋಣ ಎಂದಳು.
 
ಭೀಷ್ಮನದು ಕಡ್ಡಿ ತುಂಡುಮಾಡಿದಂತೆ ಮಾತು. ತಾನು ಮದುವೆಯಾಗಲಾರೆನೆಂದುದು, ಸಿಂಹಾಸನವೇರಲಾರೆನೆಂದುದು, ದಾಶರಾಜನಿಗೆ ಕನ್ಯಾಶುಲ್ಕವಾಗಿ ಕೊಟ್ಟ ಮಾತು. ಈಗ ಈ ಮಾತಿನಿಂದ ಹಿಂದೆ ಸರಿಯುವುದು ಅಸಾಧ್ಯ. ಇದೇ ಕಾರಣದಿಂದ ತಾನು ನಿಯೋಗಕ್ಕೂ ಒಪ್ಪಲಾರೆ. ‘ತನ್ನ ಮಾತು ತನಗೆ ಹಗೆಯಾದರೆ ಅದೇ ಪ್ರಳಯವಲ್ಲಾ’. ಆಪದ್ಧರ್ಮವಾಗಿ ನಿಯೋಗವೇನೋ ಸರಿ. ಅದೊಂದೇ ದಾರಿ. ಆದರೆ ನಿಯೋಗಕ್ಕೆ ಯಾರು ಯೋಗ್ಯ ಆಯ್ಕೆ ಎಂದು ಯೋಚಿಸು.
ಸತ್ಯವತಿಗೆ ಈಗ ತನ್ನ ಮೊದಲ ಮಗು – ಕಾನೀನ – ವ್ಯಾಸಕೃಷ್ಣನ ನೆನಪು ಬಂತು. ನೀನು ನೆನೆದಾಗಲೆಲ್ಲ ನಿನ್ನ ಬಳಿ ಬರುವೆ ಅಮ್ಮ ಎಂದು ಹೇಳಿದ್ದ ಮಗ; ತಂದೆಯೊಡನೆ ಯಾವುದೋ ದ್ವೀಪಕ್ಕೆ ನಡೆವ ಹೊತ್ತಿನಲ್ಲಿ. ಬದುಕಿನಲ್ಲಿ ಬರುವ ಕಷ್ಟ ಸಂಕಟಗಳನ್ನು ಮುಂಗಂಡು ಪ್ರೀತಿಯಿಂದ ಆಡಿದ ಮಾತು ಅದು. ತೊರೆದುಹೋದ ಮಗನನ್ನು ತಾಯಮನ ಮತ್ತೆ ಮತ್ತೆ ನೆನೆಯುತ್ತಿರುತ್ತದೆ ಎಂದು ವ್ಯಾಸರು ಬಲ್ಲರು. ಯಾರಿಗೆ ಗೊತ್ತು? ಮದುವೆಗೆ ಮುನ್ನ ಹುಟ್ಟಿದ ಮಗನ ಮೇಲಿನ ಪ್ರೀತಿಯೇ ಆಳವಾದುದಿರಬಹುದು! ಕೃಷ್ಣದ್ವೈಪಾಯನ, ಯಮುನೆಯ ನಡುಗಡ್ಡೆಯೊಂದರಲ್ಲಿ ವೇದಾಧ್ಯಯನ ಮಾಡುತ್ತ ವ್ಯಕ್ತಿತ್ವ ಬೆಳೆದವನು; ದ್ವೀಪವಾಸಿ. ದ್ವೀಪದಂತೆ ನಿರ್ಲಿಪ್ತ. ಕ್ಷುಬ್ಧ ಕಲ್ಲೋಲ ಕಡಲಿನ ನಡುವೆ ಇದ್ದೂ ನಡುಗಡ್ಡೆಯಂತೆ ನಿರಾಳ ನಿರ್ಲಿಪ್ತ. ತಾಯಿ ಸತ್ಯವತಿ ದುಃಖದ ಕಡಲಿನ ನಡುವೆ ಆಸರೆಯ ಒಂದೇ ದ್ವೀಪವೆಂಬಂತೆ ಮಗನನ್ನು ನೆನೆದಳು.
 
ಅರಮನೆಯ ಸುತ್ತಲಿನ ಗಾಳಿಯಲ್ಲಿ ಮತ್ಸ್ಯಗಂಧ ಹಗುರಾಗಿ ಸುಳಿಯಿತು. ಅರಮನೆಯ ಹೆಂಗಸರು ಹುಬ್ಬು ಮುರಿದರು. ಮೂಗು ಮುಚ್ಚಿಕೊಂಡರು. ವ್ಯಾಸರೇ ಹೇಳಿದ್ದುದು – ‘ಸುಗಂಧೇಶತರ ಗಂಧಶ್ಚ ಸಹಸಾ ದುಷ್ಪ್ರಧರ್ಷಣಃ’ ತನ್ನ ಮೈಯಗಂಧ ಹಸ್ತಿನೆಯ ಅರಮನೆಯ ಕ್ಷತ್ರಿಯ ಸ್ತ್ರೀಯರಿಗೆ ಸಹಿಸಲಸಾಧ್ಯ. ತಾಯಿ ಸತ್ಯವತೀದೇವಿಗೆ ತನ್ನ ಮತ್ಸ್ಯಗಂಧ ಮತ್ತೊಮ್ಮೆ ನೆನಪಾಯಿತು. ಪರಾಶರರ ನೆನಪಾಯಿತು. ಮಂಜಿನ ಪರದೆಯ ನೆನಪು ಬಂತು. ಬದುಕು ಮಂಜಿನಂತೇ ಕರಗುವುದು ಎಂದುಕೊಂಡಳು. ಕಣ್ಣು ಮಂಜಾಯಿತು. ತಾಯಿ, ಮಗನನ್ನು ತೋಳುಗಳಿಂದ ಅಪ್ಪಿಕೊಂಡಳು. ನಾರುಗಟ್ಟಿದ ಮಗನ ತಲೆಗೂದಲನ್ನು ಕಂಬನಿಯಿಂದ ನೆನೆಯಿಸಿದಳು. ನಡೆದುದೆಲ್ಲವನ್ನೂ ಹೇಳಿದಳು. ತಮ್ಮನ ಮಡದಿಯರಲ್ಲಿ ನಿಯೋಗಕ್ಕೆ ಒಪ್ಪಿ ಕುಲವನ್ನು ಉದ್ಧರಿಸು ಎಂದಳು. ತಮ್ಮನ ಮೇಲಿನ ಪ್ರೀತಿ, ರಾಜವಂಶದ ಉದ್ಧಾರ, ಭೀಷ್ಮನಂಥವನ ಬೇಡಿಕೆ, ಪ್ರಜೆಗಳ ಹಿತ, ಸ್ವಯಂ ನಿನ್ನ ಮನಸ್ಸಿನ ಔದಾರ್ಯ, ತಾಯಿಯ ಆಜ್ಞೆ – ಇಷ್ಟು ಹಿನ್ನೆಲೆಯಲ್ಲಿ ಒಪ್ಪಲಾರೆಯಾ ಎಂದಳು.
 
ವ್ಯಾಸರು ತಾತ್ತ್ವಿಕವಾಗಿ ಒಪ್ಪಿದರು. ಆಪದ್ಧರ್ಮ ಎಂದು ಒಪ್ಪಿದರು. ತಾಯಿಯ ಮಾತು ಎಂದೊಪ್ಪಿದರು. ತಾಯಿಯ ಮಾತೆನ್ನುವುದೇ ಎಲ್ಲದಕ್ಕಿಂಥ ದೊಡ್ಡ ಕಾರಣ. ಎಳವೆಯಲ್ಲಿಯೇ ತಾಯನ್ನಗಲಿದ್ದು, ವ್ಯಾಸರನ್ನು; ತಾಯಿಯ ಕುರಿತು ಬಹಳ ಮೆತ್ತಗೆ ಮಾಡಿತ್ತು! ಆದರೆ ತಾಯಿಗೆ ವ್ಯಾಸರು ಒಂದು ಸೂಕ್ಷ್ಮವನ್ನು ಹೇಳಿದ್ದರು. ಅದೇನೆಂದರೆ, ಅರಮನೆಯ ಸ್ತ್ರೀಯರಿಗೆ ತಪಸ್ವಿ ಜನರನ್ನು ಒಪ್ಪುವ ಮನೋಧರ್ಮ ಸ್ವಾಭಾವಿಕವಾಗಿಯೇ ಇಲ್ಲ. ಅದರಲ್ಲೂ ವ್ಯಾಸರನ್ನು ಒಪ್ಪುವುದು ಇನ್ನಷ್ಟು ಕಷ್ಟ. ಆದುದರಿಂದ ಒಂದು ವರ್ಷ ಸೊಸೆಯಂದಿರು ವ್ರತಸ್ಥರಾಗಿರಬೇಕು. ತಾಯಿ ನೆನೆದಾಗಲೆಲ್ಲ ತಾನು ಬಂದೆ ಬರುವೆ. ಹಾಗೆ ಸೊಸೆಯಂದಿರೂ ತನ್ನನ್ನು ನೆನೆವಂತೆ ಅವರು ವ್ರತನಿಷ್ಠರಾಗಬೇಕು.
 
ಮಾತು ಸಹಜವಾಗಿದೆ. ಯುಕ್ತಿ ಯುಕ್ತವಾಗಿದೆ. ಆದರೆ ಸತ್ಯವತಿಯ ಮನೋಧರ್ಮವೇ ಬೇರೆ. ಪರಾಶರರು ಈ ದೋಣಿಕಾರ್ತಿಯನ್ನು ಕಂಡಾಗ ಏನು ನಡೆದುಬಿಟ್ಟಿತು – ಅದೆಲ್ಲ ತತ್‌ಕ್ಷಣದ ಸಹಜ ಸ್ಫುರಣವೆಂಬಂತೆ ಯಾವ ಯೋಚನೆಗಳ ಭಾರವಿಲ್ಲದೆ – ನಿಸರ್ಗದ ನಡುವೆ ಯಾವ ಕೃತಕತೆಯೂ ಇಲ್ಲದೆ – ಯಾವ ಕಾಯುವಿಕೆಯೂ ಇಲ್ಲದೆ ನಡೆದ ಒಂದು ವಿದ್ಯಮಾನವಾಗಿತ್ತಾಗಿ ಈಗ ವ್ಯಾಸರನ್ನು ಕಂಡಾಗ ಅದೆಲ್ಲ ಮತ್ತೆ ಮರುಕಳಿಸಿ ಅರಮನೆಯಲ್ಲಿ ನಿಡುಗಾಲ ಕಳೆದರೂ ಆಕೆ ವ್ಯಾಸರ ಮಾತಿಗೆ ಲಕ್ಷ್ಯವೇ ಕೊಡದೆ ಅಂದೇ ನಿಯೋಗ ನಡೆದುಬಿಡಬೇಕೆಂದು ತಾಯಿ, ಮಗನನ್ನು ಮಾತು ಮೂಕವಾಗಿಸಿದಳು. ಅಲ್ಲದೆ ಒಂದು ವರ್ಷ ಕಾಯಬೇಕು ಎಂದಾಗ ದುರಂತಗಳನ್ನೆ ಕಂಡ ಮನಸ್ಸಿಗೆ ದುರಂತಗಳ ಮುನ್ನೋಟವೇ ಕಾಡಬಹುದು.
 
ಇತ್ತ, ವ್ಯಾಸರನ್ನು ಸಹಿಸುವುದು ಸುಲಭವಲ್ಲ ಎಂಬ ಕಾರಣದಿಂದಲೇ, ಸೊಸೆ ಅಂಬಿಕೆಗೆ, ವ್ಯಾಸರು ಇಂದು ನಿನ್ನ ಬಳಿ ಬರುವರು ಎಂದು ತಾಯಿ ಹೇಳದಾದಳು. ನಿನ್ನ ಗಂಡನ ಅಣ್ಣನೊಬ್ಬನಿರುವ, ಅವನು ಬರುವನೆಂದಿದ್ದಳು. ಅಂಬಿಕೆಗೆ ತನ್ನ ಗಂಡನ ಅಣ್ಣನೆಂದರೆ – ಅದು ಭೀಷ್ಮನೇ. ಸ್ವಯಂವರ ಮಂಟಪದಿಂದ ತಮ್ಮನ್ನು ಒಯ್ದವನೂ ಭೀಷ್ಮನೇ. ಇನ್ನೊಮ್ಮೆ ಅವನೊಡನೇ ಸ್ವಯಂವರವಾಗುವುದೋ! ಅಂಬಿಕೆ, ಕ್ಷಾತ್ರತೇಜೋ ವಿರಾಜಮಾನನಾದ ಭೀಷ್ಮನನ್ನು ನೆನೆಯುತ್ತಿರಬೇಕಾದರೆ ಅಂತಃಪುರದ ಬಾಗಿಲು ಕಿರುಗುಟ್ಟಿ ಒಳಗಡಿ ಇಟ್ಟವನು – ಕೆಂಜೆಡೆಯ ಕೃಷ್ಣಾಜಿನದ ವ್ಯಾಸಮುನಿ. ಇಜ್ಜೋಡಾಗಿಹೋಯಿತು. ಅಂಬಿಕೆ ನೋಡಲೊಲ್ಲದೆ ಕಣ್ಣುಮುಚ್ಚಿದಳು. ಒಲ್ಲದಿಕೆಯಿಂದ ಕಣ್ಣುಮುಚ್ಚಿದವರ ಕಣ್ಣು ತೆರೆಯಿಸುವುದು ಹೇಗೆ? ಯಾರು? ತಾಯಿಯೊಡನೆ ವ್ಯಾಸರು ಹೇಳಿದರಂತೆ: ಅಂಬಿಕೆಯ ಮಗು ಕುರುಡಾಗುತ್ತೆ. ಬಲಶಾಲಿ ಏನೋ ಆಗುತ್ತದೆ. ಅಪ್ಪುಗೆಯಂತೂ ಉಕ್ಕಿನ ಹಿಡಿತದಂತೆ. ಏಕೆಂದರೆ ಕುರುಡರ ಅಪ್ಪುಗೆ ಬಲಿಷ್ಠ.
 
ಹೌದು; ತನ್ನನ್ನು ನೋಡಲಾರದವರೊಡನೆಯೂ ನೋಡಲೊಲ್ಲದವರೊಡನೆಯೂ ಇತಿಹಾಸ ವ್ಯವಹರಿಸಲೇಬೇಕಾಗುತ್ತದೆ. ‘ಕಾಲಃ ಸುಪ್ತೇಷು ಜಾಗರ್ತಿ’ ಎನ್ನುವುದು ಮಹಾಭಾರತದ್ದೇ ಮಾತು. ನಿದ್ರಿಸುತ್ತಿದ್ದವರಲ್ಲಿಯೂ, ಕಾಲ; ತಾನು ನಿದ್ರಿಸದೆ ಎಚ್ಚರವಾಗಿಯೇ ಇರುತ್ತದೆ ಎನ್ನುವುದು ಈ ಮಾತಿನ ಅರ್ಥ. ತನ್ನ ಬಗ್ಗೆ ಕುರುಡಾದವರ ಕುರಿತೂ ‘ಕಾಲ’ ತಾನು ಜಾಗ್ರತವಾಗಿರುತ್ತದೆ – ಎನ್ನಬಹುದು. ಅದು ವ್ಯಾಸರ ಅನುಭವವೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT