ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗ ‘ಸೈನ್ಸ್ ಕಾಂಗ್ರೆಸ್’-ಮುಕ್ತ ಭಾರತ?

Last Updated 27 ಡಿಸೆಂಬರ್ 2017, 19:44 IST
ಅಕ್ಷರ ಗಾತ್ರ

ಅನ್ಯಲೋಕದ ಜೀವಿಗಳಿಬ್ಬರು ತಮ್ಮ ಗಗನನೌಕೆಯಲ್ಲಿ ಸುತ್ತಾಡುತ್ತ ಸೌರಮಂಡಲಕ್ಕೆ ಬರುತ್ತಾರೆ. ಮಂಗಳ, ಬುಧ, ಗುರು, ಶುಕ್ರ, ಶನಿ ಮುಂತಾದ ಬರಡು ಗ್ರಹಗಳನ್ನು ನೋಡುತ್ತ ಬಂದ ಒಬ್ಬಾತ ಈ ಪುಟ್ಟ ನೀಲಿ ಪೃಥ್ವಿಯನ್ನು ಕಂಡು ಚಕಿತನಾಗಿ ತನ್ನ ದುರ್ಬೀನಿನಲ್ಲಿ ನೋಡುತ್ತಾನೆ. ಇಲ್ಲಿನ ಯುದ್ಧನೌಕೆಗಳನ್ನೂ ಬಾಂಬರ್ ವಿಮಾನಗಳನ್ನೂ ಅಣ್ವಸ್ತ್ರಸಜ್ಜಿತ ರಾಕೆಟ್‍ಗಳನ್ನೂ ವರ್ಣಿಸುತ್ತಾನೆ. ಆ ಇನ್ನೊಬ್ಬನಿಗೂ ಅಚ್ಚರಿ. ‘ಹಾಗಿದ್ದರೆ ಅಲ್ಲಿನವರು ಪ್ರಚಂಡ ಬುದ್ಧಿಜೀವಿಗಳೇ ಇರಬೇಕು, ಸಮೀಪ ಸಾಗುವುದು ಡೇಂಜರ್ ಅಲ್ವಾ?’ ಎಂದು ಕೇಳುತ್ತಾನೆ.

ದುರ್ಬೀನು ಹಿಡಿದವ ತನ್ನ ತಲೆಗಳನ್ನು ಅಲ್ಲಾಡಿಸಿ, ‘ಹಾಗೇನೂ ಅನ್ನಿಸುತ್ತಿಲ್ಲ. ಅವರು ಆ ಶಸ್ತ್ರಾಸ್ತ್ರಗಳನ್ನೆಲ್ಲ ತಮ್ಮವರ ಕಡೆಗೇ ಗುರಿ ಇಟ್ಟಿದ್ದಾರೆ’ ಎನ್ನುತ್ತಾನೆ.

*

ಮನುಷ್ಯನೆಂಬ ಪ್ರಕಾಂಡ ಬುದ್ಧಿಗೇಡಿಯ ಈ ಚಿತ್ರಣವನ್ನು ಎಲ್ಲರೂ ಒಪ್ಪಲಿಕ್ಕಿಲ್ಲ, ಏಕೆಂದರೆ ಈ ಡೈಲಾಗನ್ನು ಬರೆದವನೂ ಮನುಷ್ಯನೇ ತಾನೆ? ಇಲ್ಲೂ ವಿವೇಕವಂತರು, ಸಂತರು, ಶಾಂತಿಮಂತ್ರದ ಧೀಮಂತರು ಎಲ್ಲ ಇದ್ದಾರೆ –ಆದ್ದರಿಂದಲೇ 15 ಸಾವಿರ ಪರಮಾಣು ಬಾಂಬ್‍ಗಳಿದ್ದರೂ ಕಳೆದ 73 ವರ್ಷಗಳಲ್ಲಿ ಒಂದೂ ಢಮ್ಮೆಂದಿಲ್ಲ ಎಂದು ನೀವು ವಾದಿಸಬಹುದು. ಬಾಂಬ್‍ಗಳು ತಣ್ಣಗೆ ಕೂತಿವೆ ನಿಜ. ಆದರೆ ಪೃಥ್ವಿ ದಿನದಿಂದ ದಿನದಿಂದ ಕಾವೇರುತ್ತಿದೆ. ಈ ಎಲ್ಲ ವಿವೇಕವಂತರೂ ಪರಿಸರವಾದಿಗಳೂ ಸೇರಿದಂತೆ ನಮ್ಮ ಏಳು ನೂರು ಕೋಟಿ ಜನರ ದಿನನಿತ್ಯದ ಚಟುವಟಿಕೆಗಳೇ ಈ ಭೂಮಿಯನ್ನು ಅಪಾಯದ ಪ್ರಪಾತದ ಕಡೆ ತಳ್ಳುತ್ತಿದೆ. ನಾಡಿದ್ದು ಹೊಸ ವರ್ಷವನ್ನು ಸ್ವಾಗತಿಸಲೆಂದು ಎಲ್ಲ ಮತಧರ್ಮಗಳ ಕನಿಷ್ಠ ಐದು ನೂರು ಕೋಟಿ ಜನರು ಉರಿಸುವ ಬಾಣ ಬಿರುಸು, ಉಡಾಯಿಸುವ ರಾಕೆಟ್‍ಗಳನ್ನು ಊಹಿಸಿದರೆ ಆ ಅನ್ಯಲೋಕದವರಿಗೂ ಗೊತ್ತಾಗುತ್ತದೆ -ನಾವೆಲ್ಲ ಒಟ್ಟಾಗಿ ಹೇಗೆ ನಮ್ಮ ಏಕೈಕ ವಾಸದ ಗ್ರಹಕ್ಕೇ ಬೆಂಕಿ ಹಚ್ಚಿ ಸಂಭ್ರಮಾಚರಣೆ ಮಾಡುತ್ತಿದ್ದೇವೆ ಅಂತ.

ಈಗಂತೂ ಮನುಷ್ಯನೊಂದಿಗೆ ಪೈಪೋಟಿಗೆ ನಿಂತಂತೆ ಪ್ರಕೃತಿಯೂ ತನಗೆ ತಾನೇ ಬೆಂಕಿ ಹಚ್ಚಿಕೊಂಡು ಮೋಜು ನೋಡುತ್ತಿದೆ. ಗಂಗೋತ್ರಿಯಲ್ಲಿ ಹಿಮಪಾತದ ನಡುವೆಯೂ ಅರಣ್ಯಕ್ಕೆ ಬೆಂಕಿ ಬಿದ್ದಿದೆ. ನಮ್ಮ ಚಾರ್ಮಾಡಿಯ ಸೋಮನಕಾಡು ಎಂಬಲ್ಲೂ ಅಕಾಲದಲ್ಲಿ ಬೆಂಕಿ ಬಿದ್ದಿದೆ. ಇಂಡೊನೇಶ್ಯದ ಬಾಲಿ ದ್ವೀಪದಲ್ಲಿ ನಿದ್ರಿಸುತ್ತಿದ್ದ ಆಗುಂಗ್ ಜ್ವಾಲಾಮುಖಿ ಭುಗಿಲೆದ್ದು ಫೂತ್ಕರಿಸಿದೆ. ಕ್ಯಾಲಿಫೋರ್ನಿಯಾದ ಕಾಡಿನ ಬೆಂಕಿ ಕಳೆದ 21 ದಿನಗಳಿಂದ ಸತತ ಉರಿಯುತ್ತ ಹಿಂದಿನ ಎಲ್ಲ ದಾಖಲೆಗಳನ್ನೂ ಮೀರಿ ನಿಗಿಯುತ್ತಿದೆ. ಸುಮಾರು 275 ಸಾವಿರ ಎಕರೆಗಳಷ್ಟು ಅರಣ್ಯವನ್ನೂ ಏಳು ನೂರಕ್ಕೂ ಹೆಚ್ಚು ಮನೆಗಳನ್ನೂ ಧ್ವಂಸ ಮಾಡಿದೆ. ವರ್ಷವಿಡೀ ಮಹಾಪೂರ, ಚಂಡಮಾರುತಗಳಂಥ ಪ್ರಕೋಪಗಳಿಂದ ಹೈರಾಣಾಗಿರುವ ಅಮೆರಿಕ ಈಗ ಕಾಡಿನ ಬೆಂಕಿಯಿಂದಲೂ ತತ್ತರಿಸುತ್ತಿದೆ.

ಭೂತಾಪ ಏರಿಕೆ ವಿಜ್ಞಾನಿಗಳಲ್ಲಿ ತೀವ್ರ ಆತಂಕ ಮೂಡಿಸುತ್ತಿದೆ. ಎರಡು ವಾರಗಳ ಹಿಂದೆ ಪ್ಯಾರಿಸ್‍ನಲ್ಲಿ ‘ಒಂದುಭೂಮಿ ಶೃಂಗಸಭೆ’ ನಡೆಯಿತು. 2015ರ ಪ್ಯಾರಿಸ್ ಶೃಂಗಸಭೆಯ ನಿರ್ಣಯಗಳನ್ನು ಏನಕೇನ ಜಾರಿಗೆ ತರಲೆಂದು ಹೊಸ 12 ಉಪಕ್ರಮಗಳನ್ನು ಘೋಷಿಸಲಾಗಿದೆ. ಅಮೆರಿಕ ಅದರಲ್ಲಿ ಭಾಗಿಯಾಗಿಲ್ಲ. ಜಾಗತಿಕ ತಾಪಮಾನ ಏರಿಕೆಯನ್ನು ನಿರಾಕರಿಸುತ್ತ ಪ್ಯಾರಿಸ್ ಒಪ್ಪಂದವನ್ನೂ ಧಿಕ್ಕರಿಸಿದ ಟ್ರಂಪ್ ಸರ್ಕಾರ ಈಗ ವಾಯುಮಂಡಲವನ್ನೇ ಬದಲಿಸುವ ಸಾಹಸಕ್ಕೆ ಕೈಹಾಕಲು ಸಿದ್ಧತೆ ನಡೆಸಿದೆ. ಹೊಸ ವರ್ಷದ ಹೊಸ ವೈಜ್ಞಾನಿಕ ಸಾಹಸಗಳ ಪಟ್ಟಿಯಲ್ಲಿ ‘ಜಿಯೊ ಎಂಜಿನಿಯರಿಂಗ್’ ಪ್ರಯೋಗವೂ ಸೇರಿದೆ. ಸಮಚಿತ್ತದ ವಿಜ್ಞಾನಿಗಳು ಅದನ್ನು ವಿರೋಧಿಸುತ್ತಿದ್ದಾರೆ.

ಬಿಸಿಪ್ರಳಯವನ್ನು ತಡೆಯಬೇಕಿದ್ದರೆ ನಮಗಿರುವುದು ಮೂರೇ ಮೂರು ಉಪಾಯ: 1. ಫಾಸಿಲ್ ಇಂಧನಗಳ (ಕಲ್ಲಿದ್ದಲು, ಪೆಟ್ರೋಲಿಯಂ ತೈಲ ಮತ್ತು ಅನಿಲಗಳ) ಬಳಕೆಯನ್ನು ಕಡಿಮೆ ಮಾಡುತ್ತ ಹೋಗುವುದು; 2. ವಾಯುಮಂಡಲದಲ್ಲಿರುವ ಇಂಗಾಲದ ಭಸ್ಮವನ್ನು ಹೀರಿ ತೆಗೆಯುವುದು ಮತ್ತು 3. ಭೂಮಿಗೆ ಬಿಸಿಲಿನ ಝಳ ಕಡಿಮೆ ಪ್ರಮಾಣದಲ್ಲಿ ತಲುಪುವಂತೆ ಮಾಡುವುದು. ಮೊದಲನೆಯ ಉಪಾಯ ಎಲ್ಲಕ್ಕಿಂತ ಉತ್ತಮ ಹೌದಾದರೂ ಜಗತ್ತಿನ ಎಲ್ಲ ಕಾರು, ಲಾರಿ, ಬಸ್ಸು, ಬೈಕು, ರೈಲು, ಹಡಗು, ವಿಮಾನ ಮತ್ತು ಕಾರ್ಖಾನೆಗಳ ಯಂತ್ರೋಪಕರಣಗಳನ್ನು ಬದಿಗೊತ್ತಿ ಸೌರಶಕ್ತಿಯಿಂದ ಚಲಿಸುವ ಬದಲೀ ಎಂಜಿನ್‍ಗಳನ್ನು ಬಳಕೆಗೆ ತರಬೇಕಾಗುತ್ತದೆ. ಆದರೆ ಕಲ್ಲಿದ್ದಲು ಮತ್ತು ಪೆಟ್ರೊಲಿಯಂ ಲಾಬಿಯನ್ನು ಕಡೆಗಣಿಸಿ ಜಾಗತಿಕ ಧುರೀಣರು ಅಂಥ ಕ್ರಾಂತಿಗೆ ಕೈ ಹಾಕಿದರೆ ಮತ್ತೊಂದು ಮಹಾಯುದ್ಧವೇ ನಡೆದೀತು. ಆದ್ದರಿಂದಲೇ ಫಾಸಿಲ್ ಇಂಧನಗಳನ್ನು ಕೈಬಿಡಬೇಕೆಂಬ ಪ್ಯಾರಿಸ್ ಒಪ್ಪಂದವನ್ನು ತನ್ನ ಅಧಿಕಾರಾವಧಿಯಲ್ಲಿ ಜಾರಿಗೆ ತರಲು ಯಾವ ದೇಶದ ಯಾವ ರಾಜಕಾರಣಿಯೂ ಮುಂದಾಗುವುದಿಲ್ಲ. ಇನ್ನು ಎರಡನೆಯ ಉಪಾಯವಾಗಿ ವಾಯುಮಂಡಲದ ಇಂಗಾಲದ ಡೈಆಕ್ಸೈಡನ್ನು ಹೀರಿ ತೆಗೆಯಬೇಕೆಂದರೆ ವರ್ಷಕ್ಕಲ್ಲ, ವಾರಕ್ಕೆ ಕೋಟಿಗಟ್ಟಲೆ ಮರಗಳನ್ನು ಬೆಳೆಸಬೇಕಾಗುತ್ತದೆ. ಕೊಳ್ಳುಬಾಕ ಸಂಸ್ಕೃತಿ ಮತ್ತು ಯಂತ್ರದಾಸ್ಯತ್ವಕ್ಕೆ ಒಗ್ಗಿ ಹೋಗಿರುವ ಜನರನ್ನು ಬರಿಗೈಯಲ್ಲಿ ಈ ಕೆಲಸಕ್ಕೆ ನುಗ್ಗಿಸಬಲ್ಲ ಮುತ್ಸದ್ದಿಗಳು, ಧಾರ್ಮಿಕ ನಾಯಕರು ಯಾರೂ ಕಾಣುತ್ತಿಲ್ಲ. ಮೇಲಾಗಿ ಭಣಭೂಮಿಯಲ್ಲಿ ನೀರಿನ ಅಭಾವ, ಬಿಸಿಲಿನ ತಾಪ ಎರಡೂ ಜಾಸ್ತಿಯಾಗುತ್ತ ಹೋಗುತ್ತಿದೆ.

ವಾಯುಮಂಡಲದ ಇಂಗಾಲವನ್ನು ಹೀರಿ ತೆಗೆದು ಅದರಿಂದ ಕಾರ್ಬನ್ ನಾರನ್ನು ತಯಾರಿಸುವ ಖಾಸಗಿ ಪ್ರಯೋಗವೊಂದನ್ನು ‘ಗ್ಲೋಬಲ್ ಥರ್ಮೊಸ್ಟಾಟ್’ ಹೆಸರಿನ ಕಂಪನಿ ಹೊಸ ವರ್ಷದಲ್ಲಿ ಆರಂಭಿಸಲಿದೆ. ಪ್ರಯತ್ನವೇನೊ ಒಳ್ಳೆಯದೇ. ಆದರೆ ನಾವೆಲ್ಲ ಸೇರಿ ವರ್ಷಕ್ಕೆ 40 ಶತಕೋಟಿ ಟನ್ ಸಿಓಟುವನ್ನು ಗಾಳಿಗೆ ತೂರುತ್ತಿದ್ದೇವೆ. ನಮ್ಮ ಕೋಟ್ಯಂತರ ವಾಹನಗಳ ಹೊಗೆ ಕೊಳವೆಗಳಿಂದ ಹೊಮ್ಮುವ ಇಂಗಾಲದ ಭಸ್ಮವನ್ನು ಘನರೂಪಕ್ಕೆ ತಂದು ಗುಡ್ಡೆಹಾಕಲು ಸಾಧ್ಯವೆ? ಕಾರ್ಖಾನೆಯ ಹೊಗೆ ಕೊಳವೆಯಿಂದ ಹೊಮ್ಮುವ ಇಂಗಾಲದ ಡೈಆಕ್ಸೈಡನ್ನು ನೆಲದೊಳಗಿನ ಶಿಲಾ ಪದರಗಳಲ್ಲಿ ನುಗ್ಗಿಸುವ ಸಣ್ಣ ಪ್ರಯೋಗ ಅಲ್ಲಲ್ಲಿ ನಡೆದಿದೆ (ಭಾರತದಲ್ಲಲ್ಲ). ಆದರೆ ಗಟ್ಟಿ ಗ್ರಾನೈಟ್‍ನಂಥ ಶಿಲೆಗಳಿದ್ದಲ್ಲಿ ಅದೂ ಫಲಕಾರಿ ಆಗುವಂತಿಲ್ಲ.

ಕೊನೆಗೆ ಉಳಿದಿರುವ ಉಪಾಯ ಏನೆಂದರೆ, ಜಾಗತಿಕ ಮಟ್ಟದಲ್ಲಿ ಭಾರೀ ದೊಡ್ಡ ಏನೋ ಒಂದು ಎಂಜಿನಿಯರಿಂಗ್ ಪ್ರಯೋಗ ಮಾಡಿ ಬಿಸಿಲಿನ ಝಳವನ್ನು ಕಮ್ಮಿ ಮಾಡುವುದು; ಅಂದರೆ, ಭೂಮಿಗೆ ಬಿಸಿಲು ತಲುಪುವ ಮೊದಲೇ ಅದನ್ನು ಪ್ರತಿಫಲಿಸಿ ಆಚೀಚೆ ಚದುರಿ ಹೋಗುವಂತೆ ಮಾಡುವುದು. ಆಕಾಶದಾಚೆಗೆ ಕೊಡೆ ಬಿಚ್ಚಿದಂತೆ. ಅಮೆರಿಕ ಈಗ ಅದೇ ಪ್ರಯೋಗ ಮಾಡಲು ಹೊರಟಿದೆ. ರಾಕೆಟ್ ಹಾರಿಸಿ ಎತ್ತರದಲ್ಲಿ ಸಲ್ಫರ್ ಡಯಾಕ್ಸೈಡನ್ನು (ಗಂಧಕದ ಭಸ್ಮವನ್ನು) ವಾಯುಮಂಡಲಕ್ಕೆ ತುಂಬಿದರೆ ಅದು ಸೂರ್ಯ ಕಿರಣಗಳನ್ನು ಆಚೀಚೆ ಚದುರಿಸುತ್ತದೆ. ಹಿಂದೆ 1991ರಲ್ಲಿ ಪಿನಾಟುಬೊ ಜ್ವಾಲಾಮುಖಿ ಸಿಡಿದಾಗ 170 ಲಕ್ಷ ಟನ್ ಗಂಧಕದ ಭಸ್ಮ ಹೀಗೆ ಗಾಳಿಗೆ ಸೇರಿದ್ದರಿಂದ ಇಡೀ ಉತ್ತರ ಗೋಲಾರ್ಧದಲ್ಲಿ ಸರಾಸರಿ ಉಷ್ಣತೆ ಅರ್ಧ ಡಿಗ್ರಿ ಸೆಲ್ಸಿಯಸ್ ಕಡಿಮೆ ಆಗಿದ್ದನ್ನು ವಿಜ್ಞಾನಿಗಳು ವರದಿ ಮಾಡಿದ್ದರು. ಈಗ ಕೃತಕವಾಗಿ ಹಾಗೇ ಮಾಡಬಹುದು. ಸುಲಭ ಕೂಡ. ಜೆಟ್ ವಿಮಾನಗಳನ್ನು ಎತ್ತರಕ್ಕೆ ಹಾರಿಸಿ ಗಂಧಕದ ಭಸ್ಮವನ್ನು ಎರಚಬಹುದು. ಆದರೆ ಜರ್ಮನಿಯ ಮ್ಯಾಕ್ಸ್ ಪ್ಲಾನ್ಕ್ ವಿಜ್ಞಾನಿಗಳ ಪ್ರಕಾರ, ಉಷ್ಣತೆಯನ್ನು ಒಂದು ಡಿಗ್ರಿ ಕಡಿಮೆ ಮಾಡಬೇಕೆಂದರೆ ಪ್ರತಿದಿನ 6700 ವಿಮಾನ ಹಾರಾಟ ನಡೆಸಬೇಕಾಗುತ್ತದೆ! ಅದಕ್ಕೇ ಎಷ್ಟೊಂದು ಪೆಟ್ರೋಲ್ ಉರಿಸಬೇಕಾಗುತ್ತದೆ. ತೈಲದ ಕಂಪನಿಗಳಿಗೆ ಲಗಾಮು ಹಾಕುವ ಬದಲು ವಾಯುಮಂಡಲವನ್ನು ಹೀಗೆ ತೊಳಸಂಬಟ್ಟೆ ಮಾಡುವುದನ್ನು ವಿವೇಕವಂತರು ಯಾರೂ ಒಪ್ಪುವುದಿಲ್ಲ. ಏನೋ ಮಾಡಲು ಹೋಗಿ ಇನ್ನೇನೋ ದೊಡ್ಡ ಭಾನಗಡಿ ಆಗಿಬಿಟ್ಟರೆ?

ಅಂಥ ಹುಚ್ಚಾಟದ ಬದಲು ತುಸು ಸುರಕ್ಷಿತ ಎನ್ನಬಹುದಾದ ಪ್ರಯೋಗವೊಂದನ್ನು ಹಾರ್ವರ್ಡ್ ಭೌತ ವಿಜ್ಞಾನಿ ಡೇವಿಡ್ ಕೇತ್ ಅವರ ತಂಡ ಕೈಗೊಳ್ಳಲಿದೆ. ಅವರೊಂದು ಬಲೂನನ್ನು ವಾಯುಮಂಡಲದ ಆಚೆ 12 ಕಿಲೊಮೀಟರ್ ಎತ್ತರಕ್ಕೆ ಹಾರಿಸಿ ಅಲ್ಲಿ ಉಗಿಯ ಸಿಂಚನ ಮಾಡಲಿದ್ದಾರೆ. ಎರಡು ಫುಟ್‍ಬಾಲ್ ಮೈದಾನದಷ್ಟು ವಿಸ್ತೀರ್ಣಕ್ಕೆ ಅದು ಚದುರಿದಾಗ ಸೌರ ಕಿರಣಗಳು ಎಷ್ಟರ ಮಟ್ಟಿಗೆ ಚದುರುತ್ತವೆ ಎಂಬುದನ್ನು ಅದೇ ಬಲೂನಿನಲ್ಲಿರುವ ಉಪಕರಣಗಳು ಅಳೆದು ನೋಡಿ ವರದಿ ಮಾಡುತ್ತವೆ. ಇದು ಕೇವಲ ಪ್ರಯೋಗಕ್ಕಷ್ಟೆ. ಅದು ಯಶಸ್ವಿಯಾದರೂ ಅದನ್ನು ಜಾಗತಿಕ ಮಟ್ಟದಲ್ಲಿ ಬಳಕೆಗೆ ತಂದರೆ ಅಡ್ಡ ಪರಿಣಾಮ ಯಾವ ದೇಶದ ಮೇಲೆ ಹೇಗಾಗುತ್ತದೊ ಯಾರಿಗೂ ಗೊತ್ತಿಲ್ಲ.

ಭಾರತ ಸರ್ಕಾರ ಹವಾಮಾನ ಬದಲಾವಣೆಗೆ ಸಂಬಂಧಿಸಿ ಎಂಟು ‘ಮಿಶನ್’ಗಳಿಗೆ ಚಾಲನೆ ನೀಡಿದೆ. ಸೌರಶಕ್ತಿ, ಅರಣ್ಯವೃದ್ಧಿ, ಸುಸ್ಥಿರ ಜಲ ನಿರ್ವಹಣೆ, ಸುಸ್ಥಿರ ಅಭಿವೃದ್ಧಿ ಇತ್ಯಾದಿ. ಆದರೆ ಕೊಳ್ಳುಬಾಕ ಸಂಸ್ಕೃತಿಗೆ ಲಗಾಮು ಹಾಕುವ ಯೋಜನೆ ಮಾತ್ರ ಈ ಎಂಟರಲ್ಲಿ ಇಲ್ಲ. ಬದಲಿಗೆ ಅಭಿವೃದ್ಧಿ ಪಥದಿಂದ ದೂರ ಉಳಿದ ಆದಿವಾಸಿಗಳು, ಗಿರಿಜನರು ಮತ್ತು ಅನಕ್ಷರಸ್ಥ ಕೃಷಿಕರನ್ನೂ ಕೊಳ್ಳುಬಾಕ ಸಂಸ್ಕೃತಿಯತ್ತ ಎಳೆಯುವ ಯತ್ನಗಳು ಜೋರಾಗಿವೆ. ಹಾಗೆ ‘ದೂರ ಉಳಿದವರನ್ನು ವಿಜ್ಞಾನ ತಂತ್ರಜ್ಞಾನದ ಮೂಲಕ ತಲುಪುವುದು ಹೇಗೆ?’ ಎಂಬುದೇ ಈ ಬಾರಿಯ 105ನೇ ‘ಸೈನ್ಸ್ ಕಾಂಗ್ರೆಸ್ ಸಮ್ಮೇಳನ’ದ ಒತ್ತುಗುರಿಯಾಗಿತ್ತು. ಮುಂದಿನ ವಾರ ಅದನ್ನು ಚರ್ಚಿಸಲೆಂದು ನೂರಾರು ಪ್ರಬಂಧಗಳು ಕೂಡ ಸಿದ್ಧವಾಗಿದ್ದವು. ಆದರೆ ಈಗ ಕೊನೇ ಕ್ಷಣದಲ್ಲಿ ಒಂದು ಅನಿರೀಕ್ಷಿತ ಘಟಿಸಿದೆ. ಪ್ರತಿವರ್ಷದಂತೆ ಜನವರಿ 3ರಿಂದ 7ರವರೆಗೆ ನಡೆಯಬೇಕಿದ್ದ ‘ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್’ ಮಹಾಮೇಳವನ್ನು ಹಠಾತ್ ಕೈಬಿಡಲಾಗಿದೆ. ಈವರ್ಷ ಅದನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲವೆಂದು ಸಂಘಟಕರು ಹೇಳಿದ್ದಾರೆ.

ವಿಜ್ಞಾನಿಗಳ ಕುಂಭಮೇಳ ಎಂತಲೇ ಪ್ರತೀತಿ ಪಡೆದಿದ್ದ ‘ಸೈನ್ಸ್ ಕಾಂಗ್ರೆಸ್’ನ ಹಿಂದಿನ 104 ವರ್ಷಗಳ ಚರಿತ್ರೆಯಲ್ಲಿ ಒಮ್ಮೆಯೂ ಹೀಗಾಗಿದ್ದಿಲ್ಲ. ಈ ಬಾರಿ ಹೈದರಾಬಾದ್‍ನ ಒಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಮೇಳ ನಡೆಯಬೇಕಿತ್ತು. ಪ್ರತಿವರ್ಷವೂ ಪ್ರಧಾನಿಯವರೇ ಅದನ್ನು ಉದ್ಘಾಟಿಸುವ ಸಂಪ್ರದಾಯವಿತ್ತು. ಕೇಂದ್ರ ಸರ್ಕಾರದ ಹೊಸ ವರ್ಷದ ಕಾರ್ಯಕ್ರಮಗಳಲ್ಲಿ ಸದಾ ಮೊದಲನೆಯದಾಗಿದ್ದ ಕಾರ್ಯಕ್ರಮ ಇದಾಗಿತ್ತು.

ದೇಶದ ಇಡೀ ವರ್ಷದ ವೈಜ್ಞಾನಿಕ ಆದ್ಯತೆಗಳನ್ನು ಪ್ರಧಾನಿಯವರು ಅಲ್ಲಿ ಮಂಡಿಸಬೇಕಿತ್ತು. ಮಹಾಮೇಳದ ಅದ್ದೂರಿಯ ಸಿದ್ಧತೆಗಳೆಲ್ಲ ಮುಗಿದಿದ್ದವು. ಹೈದರಾಬಾದ್‍ನ ಎಲ್ಲ ಪ್ರಮುಖ ಹೊಟೆಲ್‍ಗಳೂ ತಿಂಗಳ ಹಿಂದೆಯೇ ಬುಕ್ ಆಗಿದ್ದವು. ವಿದೇಶೀ ನೊಬೆಲ್ ವಿಜ್ಞಾನಿಗಳೂ ಸೇರಿದಂತೆ (ಸ್ವದೇಶದ ಯಾರೂ ಇಲ್ಲವಲ್ಲ) ಐದಾರು ಸಾವಿರ ವಿಜ್ಞಾನಿಗಳು ತಮ್ಮ ಪ್ರಯಾಣದ ಸೀಟುಗಳನ್ನು ಕಾದಿರಿಸಿದ್ದರು. ಹದಿನೈದಕ್ಕೂ ಹೆಚ್ಚು ಸಮಾನಾಂತರ ಗೋಷ್ಠಿಗಳಲ್ಲಿ ಮಂಡಿಸಬೇಕಾದ ಪ್ರಬಂಧಗಳ ಮುಖ್ಯಾಂಶಗಳೂ ಪುಸ್ತಕ ರೂಪದಲ್ಲಿ ಮುದ್ರಿತವಾಗಿದ್ದವು. ಎಲ್ಲವನ್ನೂ ಹಠಾತ್ ರದ್ದುಗೊಳಿಸಿದ್ದು ಏಕೆ ಎಂಬುದಕ್ಕೆ ನಿಖರ ಕಾರಣವೇ ಹೊರಬರುತ್ತಿಲ್ಲ. ಒಸ್ಮಾನಿಯಾ ಕ್ಯಾಂಪಸ್ಸಿನಲ್ಲಿ ಉದ್ವಿಗ್ನ ಪರಿಸ್ಥಿತಿ ಇದ್ದುದರಿಂದ ಪ್ರಧಾನಿಯವರ ಭದ್ರತೆ ಒದಗಿಸುವುದು ಕಷ್ಟವಾದೀತೆಂಬ ಕಾರಣಕ್ಕೆ ಮೇಳವನ್ನು ಕೈಬಿಡಲಾಯಿತೆಂದು ಹೇಳಲಾಗುತ್ತಿದೆ. ಅದಂತೂ ನಿಜ ಇರಲಿಕ್ಕಿಲ್ಲ. ಹಿಂದೆ 2014ರಲ್ಲಿ ಕಾಶ್ಮೀರದಲ್ಲಿ ನಡೆಯಬೇಕಿದ್ದ 101ನೇ ಮೇಳವನ್ನು ಭದ್ರತಾ ವಿಚಾರವಾಗಿ ಒಂದು ತಿಂಗಳು ಮುಂದೂಡಿ ಫೆಬ್ರುವರಿಯಲ್ಲಿ ನಡೆಸಲಾಗಿತ್ತು ವಿನಾ ಕೈಬಿಟ್ಟಿರಲಿಲ್ಲ. ಕಾಶ್ಮೀರಕ್ಕಿಂತ ಪ್ರಕ್ಷುಬ್ಧ ಸ್ಥಿತಿ ಒಸ್ಮಾನಿಯಾದಲ್ಲಿ ಇರಲಿಕ್ಕುಂಟೆ? ಏನೊ ಗೊತ್ತಿಲ್ಲ.

ಈ ಮಹಾಮೇಳಕ್ಕೆ ‘ಸೈನ್ಸ್ ಕಾಂಗ್ರೆಸ್’ ಎಂದು ಹೆಸರಿದ್ದುದಕ್ಕೂ ‘ಕಾಂಗ್ರೆಸ್-ಮುಕ್ತ’ ರಾಷ್ಟ್ರವನ್ನಾಗಿ ಭಾರತವನ್ನು ಬದಲಿಸಬೇಕೆಂಬ ಭಾಜಪಾ ದೀಕ್ಷೆಗೂ ಸಂಬಂಧವಂತೂ ಇರಲಿಕ್ಕಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT