ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ವಿನ್ಯಾಸ ಮತ್ತು ಕ್ಯಾಮೆರಾ ಇರುವ ಫೋನ್

Last Updated 21 ಜೂನ್ 2017, 19:30 IST
ಅಕ್ಷರ ಗಾತ್ರ

ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಪ್ರಸಿದ್ಧ ಹೆಸರು ಹುವಾವೇ (Huawei). ಈ ಕಂಪೆನಿಯ ಮೊಬೈಲ್ ಫೋನ್ ವಿಭಾಗ ಹೋನರ್ (Honor). ಈ ಕಂಪೆನಿಯ ಕೆಲವು ಸ್ಮಾರ್ಟ್‌ಫೋನ್‌ಗಳ ವಿಮರ್ಶೆಯನ್ನು ಈ ಅಂಕಣದಲ್ಲಿ ನೀಡಲಾಗಿತ್ತು. ಇತರೆ ಕಂಪೆನಿಗಳಂತೆ ಹೋನರ್ ಕೂಡ ಹಲವು ನಮೂನೆಯ ಮತ್ತು ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುತ್ತಿದೆ. ಇದೇ ಅಂಕಣದಲ್ಲಿ ಹೋನರ್ 6 ಎಕ್ಸ್ ಮತ್ತು ಹೋನರ್ 8 ಫೋನ್‌ಗಳ ವಿಮರ್ಶೆ ನೀಡಲಾಗಿತ್ತು. ಹೋನರ್ 8 ಸ್ವಲ್ಪ ದುಬಾರಿ ಎನ್ನುವವರಿಗೆ ಹೋನರ್ 8 ಲೈಟ್ (Honor 8 Lite) ಬಂದಿದೆ. ಇದು ಈ ಸಲ ನಾವು ವಿಮರ್ಶಿಸುತ್ತಿರುವ ಗ್ಯಾಜೆಟ್.

ಹೋನರ್ 8 ರ ಬೆಲೆ ಸುಮಾರು 29 ಸಾವಿರ ರೂಪಾಯಿ. ಅದು ದುಬಾರಿ ಆಯಿತು ಎನ್ನುವವರಿಗಾಗಿ ಈ ಫೋನ್  ಬಂದಿದೆ. ಇದರ ರಚನೆ ಮತ್ತು ವಿನ್ಯಾಸ ಬಹುಮಟ್ಟಿಗೆ ಹೋನರ್ 8ನ್ನೇ ಹೋಲುತ್ತದೆ. ಇದು 5.2 ಇಂಚು ಗಾತ್ರದ ಪರದೆಯನ್ನು ಒಳಗೊಂಡಿದೆ. ದಪ್ಪವೂ ಕಡಿಮೆ ಇದೆ. 5.5 ಇಂಚು ಗಾತ್ರದ ಪರದೆ ಇರುವ ಫೋನ್ ದೊಡ್ಡದಾಯಿತು ಎನ್ನುವವರಿಗೆ ಇದು ಉತ್ತಮ ಆಯ್ಕೆ.

ಇದನ್ನು ಕೈಯಲ್ಲಿ ಹಿಡಿದಾಗ ಒಂದು ಉತ್ತಮ ಮೇಲ್ದರ್ಜೆಯ ಫೋನನ್ನು ಹಿಡಿದ ಭಾವನೆ ಬರುತ್ತದೆ. ಇದರ ಹಿಂಭಾಗದಲ್ಲೂ ಗಾಜಿನ ಹೊದಿಕೆ ಇದೆ. ಇದರಿಂದಾಗಿ ಇದು ತುಂಬ ನುಣುಪಾಗಿದೆ. ಗಾತ್ರ ಸ್ವಲ್ಪ ಕಡಿಮೆ ಇರುವುದರಿಂದ ಒಂದು ಕೈಯಲ್ಲಿ ಹಿಡಿದು ಬಳಸುವುದು ಸುಲಭ. ಆದರೆ ನುಣುಪಾಗಿರುವುದರಿಂದ ಜಾರಿ ಬೀಳುವ ಭಯವಿದೆ. ಕೈಯಿಂದ ಜಾರಿ ಬೀಳಬಾರದು ಎಂದು ಕಂಪೆನಿಯವರೇ ಒಂದು ಪ್ಲಾಸ್ಟಿಕ್ ಕವಚ ನೀಡಿದ್ದಾರೆ. ಅದನ್ನು ಹಾಕಿಕೊಂಡರೆ ಉತ್ತಮ.

ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಕೆಳಭಾಗದಲ್ಲಿ ಯುಎಸ್‌ಬಿ ಕಿಂಡಿ ಇದೆ. ಇದು ಯುಎಸ್‌ಬಿ-ಸಿ ಅಲ್ಲ. ಮೇಲ್ಭಾಗದಲ್ಲಿ 3.5 ಮಿ.ಮೀ. ಇಯರ್‌ಫೋನ್ ಕಿಂಡಿ ಇದೆ. ಎಡಭಾಗದಲ್ಲಿ ಚಿಕ್ಕ ಪಿನ್ ತೂರಿಸಿದಾಗ ಹೊರಬರುವ ಟ್ರೇ ಇದೆ. ಇದನ್ನು ಒಂದು ನ್ಯಾನೊ ಸಿಮ್ ಮತ್ತು ಮೈಕ್ರೊಎಸ್‌ಡಿ ಮೆಮೊರಿ ಕಾರ್ಡ್ ಅಥವಾ ಎರಡು ನ್ಯಾನೊ ಸಿಮ್ ಹಾಕಲು ಬಳಸಲಾಗುತ್ತದೆ.

ಯುಎಸ್‌ಬಿ ಓಟಿಜಿ ಸವಲತ್ತು ಕೂಡ ಇದೆ. ಫ್ರೇಂನ ಕೆಳಭಾಗದಲ್ಲಿ ಒಂದು ಗ್ರಿಲ್‌ ಇದ್ದು ಸ್ಪೀಕರ್ ಅದರೊಳಗಿದೆ. ಹಿಂಭಾಗದಲ್ಲಿ ಮೇಲ್ಭಾಗದ ಮೂಲೆಯಲ್ಲಿ ಕ್ಯಾಮೆರಾ ಇದೆ.  ಪಕ್ಕದಲ್ಲಿ ಫ್ಲಾಶ್ ಇದೆ. ಇದರಲ್ಲಿ ಹೋನರ್ 8ರಂತೆ ಎರಡು ಕ್ಯಾಮೆರಾ  ಇಲ್ಲ. ಹಿಂಭಾಗದ ಮಧ್ಯಭಾಗದಲ್ಲಿ ಬೆರಳಚ್ಚು ಸ್ಕ್ಯಾನರ್ ಇದೆ.

ಇದರಲ್ಲಿರುವುದು 5.2 ಇಂಚು ಗಾತ್ರದ ಹೈಡೆಫಿನಿಶನ್ ಪರದೆ. ಇದರ ಗುಣಮಟ್ಟ ಚೆನ್ನಾಗಿದೆ. ಇದರಲ್ಲಿರುವುದು ಹುವಾವೆಯವರು ತಯಾರಿಸಿದ ತಮ್ಮದೇ ಪ್ರೊಸೆಸರ್. ಫೋನಿನ ಕೆಲಸದ ವೇಗ ಪರವಾಗಿಲ್ಲ. ಅಂಟುಟು ಬೆಂಚ್‌ಮಾರ್ಕ್ 58,251 ಇದೆ, ಅಂದರೆ ಇದು ಅತಿ ವೇಗದ ಫೋನ್ ಅಲ್ಲ. ವಿಡಿಯೊ ವೀಕ್ಷಣೆ, ಸಾಮಾನ್ಯ ಆಟ ಆಡುವುದು ಎಲ್ಲ ಉತ್ತಮವಾಗಿವೆ. ಅಧಿಕ ಶಕ್ತಿಯನ್ನು ಬೇಡುವ ಮೂರು ಆಯಾಮದ ಆಟಗಳನ್ನು ಕೂಡ ಆಡಬಹುದು. ಹೈಡೆಫಿನಿಶನ್ ಸಹಿತ ಬಹುತೇಕ ಎಲ್ಲ ವಿಡಿಯೊಗಳ ವೀಕ್ಷಣೆ ಚೆನ್ನಾಗಿದೆ.

4k ವಿಡಿಯೊ ಪ್ಲೇ ಆಗುತ್ತದೆ. ಇದರ ಆಡಿಯೊ ಇಂಜಿನ್ ಪರವಾಗಿಲ್ಲ. ಇಯರ್‌ಫೋನ್ (ಇಯರ್‌ಬಡ್ ಅಲ್ಲ) ನೀಡಿದ್ದಾರೆ ಹಾಗೂ ಅದರ ಗುಣಮಟ್ಟ ಪರವಾಗಿಲ್ಲ.

ಈ ಫೋನಿನಲ್ಲಿರುವುದು 12 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಕ್ಯಾಮೆರಾ. ಈ ಕ್ಯಾಮೆರಾದ ಗುಣಮಟ್ಟ ಚೆನ್ನಾಗಿದೆ. ಕ್ಯಾಮೆರಾ ಕಿರುತಂತ್ರಾಂಶದಲ್ಲಿ (ಆ್ಯಪ್‌) ಪ್ರೊ ಅಂದರೆ ಮ್ಯಾನ್ಯುವಲ್ ವಿಧಾನ ಇದೆ. ಅದನ್ನು ಬಳಸಿ ಐಎಸ್‌ಒ, ಷಟ್ಟರ್ ವೇಗ, ಫೋಕಸ್ ಎಲ್ಲ ಮಾಡಬಹುದು. ಚೆನ್ನಾಗಿ ಬೆಳಕಿದ್ದಾಗ ಉತ್ತಮ ಫೋಟೊ ತೆಗೆಯುತ್ತದೆ. ಕಡಿಮೆ ಬೆಳಕಿನಲ್ಲಿ ತೆಗೆದ ಫೋಟೊಗಳು ಅತ್ಯುತ್ತಮ ಎನ್ನುವಂತಿಲ್ಲ. ಸೆಲ್ಫಿ ಕ್ಯಾಮೆರಾ ಕೂಡ ಚೆನ್ನಾಗಿದೆ. ಇದು 4k ವಿಡಿಯೊ ಚಿತ್ರೀಕರಣ ಮಾಡುವುದಿಲ್ಲ.

ಜಿಯೋ ಸಿಮ್ ಕೆಲಸ ಮಾಡುತ್ತದೆ. ಆಂಡ್ರಾಯ್ಡ್‌  7.0 ಮತ್ತು ಇಎಂಯುಐ 5 ಇವೆ. ಕನ್ನಡದ ಯೂಸರ್ ಇಂಟರ್‌ಫೇಸ್ ಕೂಡ ಇದೆ. ಬೆರಳಚ್ಚು ಸ್ಕ್ಯಾನರ್ ವೇಗವಾಗಿ ಕೆಲಸ ಮಾಡುತ್ತದೆ. ಆದರೆ ಅದು ಹೋನರ್ 8 ಫೋನಿನಲ್ಲಿ ಇರುವಂತೆ ಬಟನ್ ಆಗಿ ಕೆಲಸ ಮಾಡುವುದಿಲ್ಲ.

ಈ ಫೋನ್ ಹೋನರ್ 8 ಬೆಲೆ ಹೆಚ್ಚಾಯಿತು ಎನ್ನುವವರಿಗಾಗಿಯೇ ಸ್ವಲ್ಪ ಕಡಿಮೆ ಬೆಲೆಗೆ ನೀಡಲು ತಯಾರಿಸಿದ ಫೋನ್. ಹೋನರ್ 8ರಲ್ಲಿ ಎರಡು ಕ್ಯಾಮೆರಾ ಇವೆ. ಹೋನರ್ 8 ಲೈಟ್‌ನಲ್ಲಿರುವುದು ಒಂದೇ ಕ್ಯಾಮೆರಾ. ಬಳಸಿರುವ ಪ್ರೊಸೆಸರ್ ಕೂಡ ಸ್ವಲ್ಪ ಕಡಿಮೆ ಬೆಲೆಯದು.

ಒಟ್ಟಿನಲ್ಲಿ ಹೇಳುವುದಾದರೆ ನೀಡುವ ಬೆಲೆಗೆ ಅಲ್ಲಿಂದಲ್ಲಿಗೆ ತೃಪ್ತಿ ನೀಡುವ ಫೋನ್ ಎನ್ನಬಹುದು. ಉತ್ತಮ ಕ್ಯಾಮೆರಾ  ಮತ್ತು ಅತ್ಯುತ್ತಮ ರಚನೆ ವಿನ್ಯಾಸಗಳು ಈ ಫೋನಿನ ಹೆಗ್ಗಳಿಕೆ ಎನ್ನಬಹುದು. 


*


ವಾರದ ಆ್ಯಪ್ -ಸಂಗೀತ ಪಾರ್ಟಿ ಮಾಡಿ
ನೀವು ಒಂದಿಷ್ಟು ಜನ ಒಟ್ಟು ಸೇರಿದ್ದೀರೆಂದಿಟ್ಟುಕೊಳ್ಳಿ. ಒಬ್ಬರ ಸ್ಮಾರ್ಟ್‌ಫೋನಿನಲ್ಲಿರುವ ಹಾಡನ್ನು ಎಲ್ಲರೂ ಒಟ್ಟಿಗೆ ತಮ್ಮ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಪ್ಲೇ ಮಾಡಿ ಒಟ್ಟಿಗೆ ಕುಣಿದು ಕುಪ್ಪಳಿಸಬೇಕಾ? ಅದಕ್ಕೆಂದೇ ಒಂದು ಕಿರುತಂತ್ರಾಂಶ (ಆ್ಯಪ್) ಇದೆ. ಅದು ಬೇಕಿದ್ದರೆ ನೀವು ಗೂಗಲ್ ಪ್ಲೇ ಸ್ಟೋರಿನಲ್ಲಿ AmpMe - Social Music Party  ಎಂದು ಹುಡುಕಬೇಕು ಅಥವಾ bit.ly/gadgetloka283 ಜಾಲತಾಣಕ್ಕೆ ಭೇಟಿ ನೀಡಬೇಕು. ನಿಮ್ಮಲ್ಲೊಬ್ಬರು ಡಿ.ಜೆ. ಆಗಿ ತನ್ನ ಫೋನಿನಿಂದ ಹಾಡುಗಳನ್ನು ಪ್ಲೇ ಮಾಡಿ ಉಳಿದವರೆಲ್ಲರು ತಮ್ಮ ತಮ್ಮ ಫೋನ್‌ಗಳಲ್ಲಿ ಅದನ್ನೇ ಏಕಕಾಲಕ್ಕೆ ಈ ಕಿರುತಂತ್ರಾಂಶ ಮೂಲಕ ಪ್ಲೇ ಮಾಡಬಹುದು.

*
ಗ್ಯಾಜೆಟ್‌ ಸುದ್ದಿ -ದುಬಾರಿ ಫೋನಿನಿಂದ ಟ್ಯಾಕ್ಸಿ ಬುಕ್ ಮಾಡಿದರೆ ದುಪ್ಪಟ್ಟು ಚಾರ್ಜ್ 
ನೀವು ಓಲಾ, ಉಬರ್ ಇತ್ಯಾದಿ ಟ್ಯಾಕ್ಸಿ ಸೇವೆ ಬಳಸುವವರಾದರೆ ಕೆಲವೊಮ್ಮೆ ಎರಡು ಪಾಲು ಅಥವಾ ಇನ್ನೂ ಹೆಚ್ಚು ಬೆಲೆ (1.5x, 2x, 2.5x, ಇತ್ಯಾದಿ) ತೋರಿಸುವುದನ್ನು ಗಮನಿಸಿರಬಹುದು. ಹೆಚ್ಚು ಜನ ಏಕಕಾಲಕ್ಕೆ ಕಾರು ಹುಡುಕುತ್ತಿದ್ದಾಗ ಹೀಗೆ ಹೆಚ್ಚಿನ ಬೆಲೆ ತೋರಿಸುತ್ತದೆ ಎಂದು ಅವರು ಹೇಳಿಕೊಳ್ಳುತ್ತಾರೆ. ಇದಕ್ಕೆ ಅವರ ಭಾಷೆಯಲ್ಲಿ surge pricing ಎನ್ನುತ್ತಾರೆ. ಒಬ್ಬರು ಒಂದು ಪ್ರಯೋಗ ಮಾಡಿದರು. ಏಕಕಾಲಕ್ಕೆ ಒಂದು ಕಡಿಮೆ ಬೆಲೆಯ ಫೋನ್ ಮತ್ತು ಇನ್ನೊಂದು ದುಬಾರಿ ಐಫೋನಿನಿಂದ ಓಲಾ ಟ್ಯಾಕ್ಸಿಯನ್ನು ಒಂದೇ ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಬುಕ್ ಮಾಡಿದರು. ಇಬ್ಬರೂ ತಲುಪಬೇಕೆಂದು ಬುಕ್ ಮಾಡಿದ ಸ್ಥಳವೂ ಒಂದೇ ಆಗಿತ್ತು. ಆದರೆ ಕಡಿಮೆ  ಬೆಲೆಯ ಫೋನಿನಿಂದ ಬುಕ್ ಮಾಡಿದಾತನಿಗೆ ಮಾಮೂಲಿ ಬೆಲೆ ತೋರಿಸಿತ್ತು ಹಾಗೂ ಐಫೋನಿನಿಂದ ಬುಕ್ ಮಾಡಿದವನಿಗೆ ದುಪ್ಪಟ್ಟು ಬೆಲೆ ತೋರಿಸಿತ್ತು. ತಿಳಿಯಿತಲ್ಲ? ಇನ್ನು ಮುಂದೆ ಓಲಾ ಟ್ಯಾಕ್ಸಿ ಬುಕ್ ಮಾಡಲೆಂದೇ ಒಂದು ಅತಿ ಕಡಿಮೆ ಬೆಲೆಯ ಫೋನ್ ಇಟ್ಟುಕೊಳ್ಳಿ!

*
ಗ್ಯಾಜೆಟ್‌ ಸಲಹೆ -ಅರಸ್ ಅವರ ಪ್ರಶ್ನೆ: ನನ್ನ ಹತ್ತಿರ ಎಮ್ಐ ನೋಟ್ 3 ಮೊಬೈಲ್ ಫೋನ್ ಇದೆ.  ಎಕ್ಸ್‌ಪ್ಲೋರರ್ ಓಪನ್ ಮಾಡಿದರೆ  Unfortunately Explorer has stopped ಎಂದು ಬರುತ್ತದೆ. ಇದಕ್ಕೆ ಏನು ಪರಿಹಾರ?
ಉ:
 ನೀವು ES File Explorer ಅಥವಾ X-plore ಬಳಸಿ ನೋಡಿ.

*
ಗ್ಯಾಜೆಟ್‌ ತರ್ಲೆ -ಬಜಾಜ್‌ನವರು ಫೋನ್ ತಯಾರಿಸಿದರೆ ಅದನ್ನು 45 ಡಿಗ್ರಿ ಕೋನದಲ್ಲಿ ಓರೆಯಾಗಿ ಹಿಡಿದರೆ ಮಾತ್ರ ಅದು ಕೆಲಸ ಮಾಡುತ್ತದಾ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT