ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪವಾಸ ಸತ್ಯಾಗ್ರಹದ ಫಲಶ್ರುತಿಗಳೇನು?

Last Updated 20 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಸೇನಾಪಡೆ ದೌರ್ಜನ್ಯದ ವಿರುದ್ಧ ಸಿಡಿದೆದ್ದು ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ ವಾಪಸ್‌ಗೆ ಒತ್ತಾಯಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ, ಮಣಿಪುರದ ಮಾನವ ಹಕ್ಕುಗಳ ಹೋರಾಟಗಾರ್ತಿ ಇರೋಮ್‌ ಶರ್ಮಿಳಾ ಅವರ ಸತ್ಯಾಗ್ರಹಕ್ಕೆ 16 ವರ್ಷಗಳ ನಂತರ ಸಿಕ್ಕಿರುವ ತಿರುವು, ನನಗೆ ದಿವಂಗತ ನಟ ದೇವಾನಂದ್‌ ಅವರ 60ನೇ ದಶಕದ ‘ಗೈಡ್‌’ ಚಿತ್ರವನ್ನು ನೆನಪಿಸುತ್ತದೆ.

ನಾನು ಅದನ್ನು ಇಲ್ಲಿ ಹೆಚ್ಚು ಅನುಕೂಲಕರವಾದ ಆದರ್ಶಪ್ರಾಯ ಚಿತ್ರ ಎನ್ನುವುದಕ್ಕಿಂತ, 60ರ ದಶಕದ ವಾಸ್ತವ ಚಿತ್ರಣ ಕಟ್ಟಿಕೊಡುವ ಚಿತ್ರ ಎಂದೇ ಕರೆಯಲು ಇಷ್ಟಪಡುವೆ. ಆಮರಣಾಂತ ಉಪವಾಸದ ರಾಜಕೀಯವೂ ಸೇರಿದಂತೆ 60ರ ದಶಕವು ಹಲವಾರು ಸಂಕಷ್ಟಗಳಿಗೆ ಸಾಕ್ಷಿಯಾಗಿತ್ತು.  

ಪಂಜಾಬಿ ಭಾಷಿಕರಿಗೆ ಪ್ರತ್ಯೇಕ ರಾಜ್ಯ (ಪಂಜಾಬಿ ಸುಬಾ) ಬೇಡಿಕೆಗೆ ಒತ್ತಾಯಿಸಿ ಪಂಜಾಬ್‌ನ ಸಂತ ಫತೇಹ್‌ ಸಿಂಗ್‌ ಅವರು ಸತ್ಯಾಗ್ರಹ ನಡೆಸಿ ಕೇಂದ್ರ ಸರ್ಕಾರವನ್ನು ಮಣಿಸುವಲ್ಲಿ ಯಶಸ್ವಿಯಾಗಿದ್ದರು.

ಆರ್.ಕೆ.ನಾರಾಯಣ್‌ ಅವರ ಕಾದಂಬರಿ (ದ ಗೈಡ್‌) ಆಧರಿಸಿದ ಅದೇ ಹೆಸರಿನ ‘ಗೈಡ್‌’ ಚಿತ್ರದಲ್ಲಿ ದೇವಾನಂದ್ ಅವರು ಜೈಲು ಶಿಕ್ಷೆ ಅನುಭವಿಸಿ ಹಳ್ಳಿಗೆ ಮರಳಿದಾಗ ಎದುರಿಸುವ ವಿಚಿತ್ರ ಸನ್ನಿವೇಶಗಳ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದಾರೆ.

ತನ್ನ ಪ್ರೇಯಸಿಯ (ವಹೀದಾ ರೆಹಮಾನ್‌) ಸಹಿ ನಕಲು ಮಾಡಿ ವಂಚನೆ ಮತ್ತು ಫೋರ್ಜರಿ ಆರೋಪದ ಮೇಲೆ ಜೈಲು ಶಿಕ್ಷೆಗೆ ಗುರಿಯಾಗುವ ನಾಯಕ, ಮನೆಗೆ ಮರಳುವ ಸಂದರ್ಭ ಎದುರಾದಾಗ ತೀವ್ರ ಮುಜುಗರಕ್ಕೆ ಒಳಗಾಗಿ ವೇಷ ಮರೆಸಿಕೊಂಡು ದೇವಸ್ಥಾನವೊಂದರಲ್ಲಿ ಆಶ್ರಯ ಪಡೆಯುತ್ತಾನೆ.

ನಿರಂತರವಾಗಿ ಬರಗಾಲಕ್ಕೆ ತುತ್ತಾಗಿದ್ದ ಆ ಪ್ರದೇಶದಲ್ಲಿ ಯುವ ಮತ್ತು ಜಾಣ ಸಾಧುವನ್ನು ಕಂಡು ಗ್ರಾಮದ ಜನರು ಬೇರೆ ರೀತಿಯಲ್ಲಿಯೇ ಆಲೋಚಿಸುತ್ತಾರೆ.

ಹಳ್ಳಿಗೆ ಮಳೆ ತರಲು ದೈವವೇ ಈತನನ್ನು ತಮ್ಮ ಹಳ್ಳಿಗೆ ಕಳಿಸಿದೆ ಎಂಬುದು ಅವರ ದೃಢ ನಂಬಿಕೆಯಾಗಿರುತ್ತದೆ. ಸಾಧು ಆಮರಣಾಂತ ಉಪವಾಸ ಕುಳಿತರೆ ಮಾತ್ರ ದೇವರು ಕರಗಿ ಮಳೆ ಸುರಿಸುತ್ತಾನೆ ಎಂದು ಮುಗ್ಧ ಗ್ರಾಮಸ್ಥರು ನಂಬಿರುತ್ತಾರೆ.

ಜನಪದ ಕಥೆಗಳಲ್ಲಿ ಕೇಳಿರುವಂತೆ ತಮ್ಮ ಹಳ್ಳಿಗೆ ಮಳೆ ತರಿಸುವ ಸಾಧು ಬಂದಿದ್ದಾನೆ ಎಂದೇ ಅವರೆಲ್ಲ ದೃಢವಾಗಿ ನಂಬಿರುತ್ತಾರೆ. ‘ನಾನು ದೇವದೂತ ಅಲ್ಲ. ಜೈಲು ಶಿಕ್ಷೆಗೆ ಗುರಿಯಾಗಿದ್ದ ಆರೋಪಿ’ ಎನ್ನುವ ಸತ್ಯವನ್ನು ಹಳ್ಳಿಗರಿಗೆ ಮನದಟ್ಟು ಮಾಡಿಕೊಡಲು ನಾಯಕ ರಾಜು (ಗೈಡ್‌) ಹರಸಾಹಸಪಟ್ಟರೂ ಅದು ವ್ಯರ್ಥ ಪ್ರಯತ್ನವಾಗಿರುತ್ತದೆ. ಆತನ ಮಾತನ್ನು ಯಾರೊಬ್ಬರೂ ಕಿವಿ ಮೇಲೆ ಹಾಕಿಕೊಳ್ಳುವುದಿಲ್ಲ. ಅನಿವಾರ್ಯವಾಗಿ ಆತ ಉಪವಾಸ ಸತ್ಯಾಗ್ರಹಕ್ಕೆ ಕುಳಿತುಕೊಳ್ಳಬೇಕಾಗುತ್ತದೆ.

ಚಿತ್ರದ ಅಂತ್ಯದಲ್ಲಿ ನಾಯಕ ಭಾವೋದ್ರಿಕ್ತನಾಗಿ ತನ್ನಷ್ಟಕ್ಕೆ ತಾನೇ ಅಸಂಬದ್ಧವಾಗಿ ಬಡಬಡಿಸುವುದು ಚಲನಚಿತ್ರ ವೀಕ್ಷಕರ ಮನಕಲಕುತ್ತದೆ. ಉಪವಾಸದಿಂದ ಸಾಯುವ ಇಚ್ಛೆ ಆತನಿಗೆ ಎಳ್ಳಷ್ಟೂ ಇರುವುದಿಲ್ಲ. ಏನಾದರೂ ಮಾಡಿ ಬದುಕಬೇಕೆಂಬುದೇ ಆತನ ಹಂಬಲವಾಗಿರುತ್ತದೆ. ತನ್ನ ಮುಂದೆ ಇರಿಸಿದ್ದ ಪ್ರಸಾದ ಕದ್ದು ಸೇವಿಸಲೂ ಪ್ರಯತ್ನಿಸುತ್ತಾನೆ. ಆದರೆ, ಅಲ್ಲಿಂದ ಪಾರಾಗಲು ಆತನಿಗೆ ಸಾಧ್ಯವಾಗುವುದೇ ಇಲ್ಲ.

ಉಪವಾಸದಿಂದ ಪಾರಾಗಿ ಓಡಿ ಹೋಗುವುದರಿಂದ ಹಳ್ಳಿಗರ ಮನಸ್ಸಿಗೆ ತುಂಬ ಗಾಸಿಯಾಗುತ್ತದೆ ಎಂದು ಭಾವಿಸಿ ಉಪವಾಸ ಮುಂದುವರೆಸಲು ನಿರ್ಧರಿಸಿ ಪ್ರಾಣ ಬಿಡುತ್ತಾನೆ. ಅದೇ ಸಮಯಕ್ಕೆ ಮಳೆ ಸುರಿಯಲು ಆರಂಭಿಸಿ ಜನಪದ ಕತೆಯಲ್ಲಿನ ಹಳ್ಳಿಗರ ನಂಬಿಕೆ ಗಟ್ಟಿಗೊಳ್ಳುತ್ತದೆ.

ಅರ್ಧ ಶತಮಾನದ ಹಿಂದಿನ ಚಲನಚಿತ್ರ ಅದಾಗಿತ್ತು. ಈಗ ಕಾಲ ಬದಲಾಗಿದೆ. ಸಾಕಷ್ಟು ತಿಳಿದುಕೊಂಡಿರುವ, ಕೆಲವೊಮ್ಮೆ  ಪರಿಸ್ಥಿತಿಯ ಬಲಿಪಶುಗಳಾಗುವ, ತಮ್ಮ ಅಹಂ, ಸಾಮಾಜಿಕ ಒತ್ತಡ, ಪ್ರಸಿದ್ಧಿ ಮತ್ತು ತಾರಾಪಟ್ಟದ ಸೆಳೆತದಿಂದಾಗಿ ಈಗಲೂ ಅನೇಕರು ತಮ್ಮ ಜೀವವನ್ನೇ ಪಣಕ್ಕೆ ಇಡುತ್ತಾರೆ. ಆಮರಣಾಂತ ಉಪವಾಸ ಎನ್ನುವ ಆತ್ಮಹತ್ಯಾ ಸ್ವರೂಪದ ಪ್ರಜಾಸತ್ತಾತ್ಮಕ ಪ್ರತಿಭಟನೆಯ ಮಾರ್ಗ ಆಯ್ದುಕೊಳ್ಳುತ್ತಾರೆ.

ಯಾರೊಬ್ಬರೂ ತಾವು ಸಾಯಬೇಕೆಂದು ಇಷ್ಟಪಡುವುದಿಲ್ಲ. ಜನನಾಯಕ ಎಂದು ಜನರು ಒಬ್ಬನನ್ನು ಎಷ್ಟೇ ಹೊಗಳಿದರೂ, ಅವರು ಇತರರಿಗಾಗಿ ಮತ್ತು ಅನ್ಯರ ಹೋರಾಟಕ್ಕಾಗಿ ಸಾಯಲು ಬಯಸುವುದಿಲ್ಲ. ಖ್ಯಾತಿ, ವೈಭವವನ್ನು ಎಲ್ಲರೂ  ಪ್ರೀತಿಸುತ್ತಾರೆ.

ಮರಣೋತ್ತರವಾಗಿ ಪರಮವೀರ ಚಕ್ರ ಪಡೆಯುವುದಕ್ಕಿಂತ ಜೀವಂತವಾಗಿದ್ದುಕೊಂಡು ಮಹಾವೀರ ಚಕ್ರ, ಶೌರ್ಯ ಪ್ರಶಸ್ತಿ ಪಡೆಯುವುದೇ ಅನೇಕರ ಇಚ್ಛೆಯಾಗಿರುತ್ತದೆ. ಉರ್ದು ನಾಣ್ಣುಡಿ (ಜಾನ್‌  ಹೈ ತೋ, ಜಹಾನ್‌ ಹೈ) ಇಡೀ ಜಗತ್ತಿಗಿಂತ ಜೀವವೇ ಬಹು ಅಮೂಲ್ಯವಾಗಿರುತ್ತದೆ ಎನ್ನುವ ಬದುಕಿನ ಕಟು ಸತ್ಯ ಈಗ ಶರ್ಮಿಳಾ  ಅವರಿಗೂ ಹೊಳೆದಿರಬಹುದು.

ಅವರ ಕೆದರಿದ ಕೇಶರಾಶಿ, ಮೂಗಿನ ಮೂಲಕ ದೇಹದೊಳಗೆ ತೂರಿರುವ ನಳಿಕೆಗಳು, ಅಂದಗೆಟ್ಟ ಮುಖವು ಹೋರಾಟದ ಲಾಂಛನವಾಗಿ ಪರಿಣಮಿಸಿದೆ. ಸಾಮಾಜಿಕ ಕಾರ್ಯಕರ್ತರು, ನಾಗರಿಕ ಹಕ್ಕುಗಳ ಸ್ವಯಂ ಸೇವಾ ಸಂಸ್ಥೆಗಳು, ಟೆಲಿವಿಷನ್‌ ಚರ್ಚಾಗೋಷ್ಠಿಗಳಲ್ಲಿ ಭಾಗವಹಿಸುವುದನ್ನೇ ಪೂರ್ಣ ವೃತ್ತಿಯನ್ನಾಗಿ ಮಾಡಿಕೊಂಡಿರುವವರು, ಮಾಧ್ಯಮ ಸಂಸ್ಥೆಗಳು, ಟಿ.ವಿ. ಚಾನೆಲ್‌ಗಳು ಶರ್ಮಿಳಾ ಅವರನ್ನು ತಮ್ಮ ಕಾರ್ಯಕ್ರಮಗಳಿಗೆ ಆಹ್ವಾನಿಸಿ ಪ್ರಶಸ್ತಿ ನೀಡಿ ಸನ್ಮಾನಿಸಿವೆ.

ಇವರಿಗೆಲ್ಲ ಶರ್ಮಿಳಾ ಅವರ ಮೂಗಿಗೆ ಕೊಳವೆ ಹಾಕಿಕೊಂಡ, ಕೆದರಿದ ತಲೆಗೂದಲು ಮತ್ತು  ಅಂದಗೆಟ್ಟ ಮುಖ, ಅಂದರೆ ಹೋರಾಟದ ಮುಖವೇ ಮುಖ್ಯವಾಗಿರುತ್ತದೆ. ಇನ್ನು ಮುಂದೆ ಶರ್ಮಿಳಾ ಅವರು ಹೋರಾಟಕ್ಕಿಂತ ತಮ್ಮ ಬಗ್ಗೆಯೇ ಹೆಚ್ಚು ಮಾತನಾಡಲಿದ್ದಾರೆ.

ಇತರರು ತಮ್ಮನ್ನು ದುರ್ಬಳಕೆ ಮಾಡಿಕೊಳ್ಳಲು ಮತ್ತು ತಮ್ಮ ಹೋರಾಟದ ವಕ್ತಾರರಾಗಲು ಅವಕಾಶ ನೀಡಲಾರರು. ಕೆಲ ಬ್ರ್ಯಾಂಡ್‌ಗಳು ಕೆಲ ಕಾಲ ಭಾರಿ ಗಮನ ಸೆಳೆದು ಆನಂತರ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತವೆ. ಅದೇ ರೀತಿ ಶರ್ಮಿಳಾ ಅವರ ವ್ಯಕ್ತಿತ್ವದ ಭಾಗವಾಗಿದ್ದ ದ್ರವ ಆಹಾರ ಸೇವನೆಯ ನಳಿಕೆಗಳು ಈಗ ಇಲ್ಲವಾಗಿರುವುದರಿಂದ ಶರ್ಮಿಳಾ ಹೆಸರಿನ ಬ್ರ್ಯಾಂಡ್‌ ಈಗ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಎಲ್ಲಿಯವರೆಗೆ ಶರ್ಮಿಳಾ ಸಾಯಲು ಪ್ರಯತ್ನ ಪಡುತ್ತಿದ್ದರೋ ಅಲ್ಲಿಯವರೆಗೆ ಅವರಿಗೆ ಬೆಲೆ ಇತ್ತು.

ಈಗ ಶರ್ಮಿಳಾ ಚುನಾವಣೆಯಲ್ಲಿ ಸ್ಪರ್ಧಿಸಲು ಉದ್ದೇಶಿಸಿದ್ದಾರೆ.  ಮುಖ್ಯಮಂತ್ರಿಯಾಗುವುದು ಅವರ ಇಚ್ಛೆಯಾಗಿದೆ. ಮಣಿಪುರದಲ್ಲಿ ಸೇನಾ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (ಎಎಫ್‌ಎಸ್‌ಪಿಎ) ರದ್ದುಪಡಿಸುವುದಕ್ಕೆ ಸಂಬಂಧಿಸಿದ ತಮ್ಮ ಹೋರಾಟದಲ್ಲಿ ಅವರು ಗೆಲ್ಲಬೇಕಾಗಿದೆ.

ಅನೇಕರ ಪಾಲಿಗೆ ಇವೆಲ್ಲ ಬೇಸರ ಮೂಡಿಸುವ, ಕುತೂಹಲವೇ ಇಲ್ಲದ ಸಂಗತಿಗಳಾಗಿವೆ. ‘ಎಎಫ್‌ಎಸ್‌ಪಿಎ’ ರದ್ದುಪಡಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎನ್ನುವುದು ಅವರಿಗೆ ಗೊತ್ತಿಲ್ಲ ಎನ್ನುವಷ್ಟು ಅವರು ಮೂರ್ಖರಾಗಿರುವರೇ?

ಅಥವಾ ನೀವು ಅಂದುಕೊಂಡಿರುವುದಕ್ಕಿಂತ ಅವರು ಹೆಚ್ಚು ಜಾಣರಿರಬಹುದೇ? ನೆರೆಯ ರಾಜ್ಯ ತ್ರಿಪುರಾದಲ್ಲಿ ಜಾಣ ಮುಖ್ಯಮಂತ್ರಿ ಮಾಣಿಕ್‌ ಸರ್ಕಾರ್‌ ಅವರು ಕೇಂದ್ರ ಸರ್ಕಾರದ ಮನವೊಲಿಸಿ, ಬಂಡುಕೋರರ ಹಾವಳಿಪೀಡಿತ ರಾಜ್ಯದಲ್ಲಿ ‘ಎಎಫ್‌ಎಸ್‌ಪಿಎ’  ರದ್ದುಪಡಿಸಿರುವುದನ್ನು ಅವರು ಪತ್ರಿಕೆಗಳನ್ನು ಓದುವುದರ ಮೂಲಕ ತಿಳಿದುಕೊಂಡಿರಬಹುದು.

ಒಂದು ವೇಳೆ ಅಭಿಮಾನಿಗಳು, ಪ್ರಶಂಸಕರು ಮತ್ತು ಕುಟುಂಬದ ಸದಸ್ಯರು ಶರ್ಮಿಳಾ ಅವರನ್ನು ಕೈಬಿಟ್ಟರೂ ಅವರೇನೂ ಧೃತಿಗೆಡುವುದಿಲ್ಲ. ಸ್ವತಂತ್ರ ಭಾರತದಲ್ಲಿ  ಉಪವಾಸ ಸತ್ಯಾಗ್ರಹವು ಸಾಮೂಹಿಕ ಹೋರಾಟದ ಅಸ್ತ್ರವಾಗಿ ಬಳಕೆಯಾಗುತ್ತಿದ್ದರೂ, ಸುಲಭವಾಗಿ ಮೋಸ ಹೋಗುವವರನ್ನು ಜಾಣ ಹಿತಾಸಕ್ತಿಗಳು ಶೋಷಣೆ ಮಾಡುತ್ತವೆ.

ಅದರಲ್ಲೂ ರಾಜಕೀಯ ಅಧಿಕಾರ ಬಯಸುವವರು ಮರಳು ಮಾಡುವ ಕಾರ್ಯತಂತ್ರದ ಮೂಲಕ ದುರ್ಬಳಕೆ ಮಾಡಿಕೊಳ್ಳುತ್ತಾರೆ. ಇದು ಹಿಂದಿ ಭಾಷಿಕ ರಾಜ್ಯಗಳಲ್ಲಿ ಕಂಡು ಬರುವ ‘ನೀವು ಸಂಘರ್ಷ ಮುಂದುವರೆಸಿರಿ, ನಾವು ನಿಮ್ಮ ಜತೆ ಇರುತ್ತೇವೆ’ (ನೀವು ನಿಮ್ಮ ಜೀವ ಪಣಕ್ಕಿಡಿ, ನಾವು ನಿಮ್ಮ ಜತೆ ಇದ್ದೇವೆ’ ಎನ್ನುವ ಜನಪ್ರಿಯ ಘೋಷಣೆಗಳಲ್ಲಿ   ಸರಿಯಾಗಿ ಪ್ರತಿಫಲನಗೊಳ್ಳುತ್ತದೆ.

ಪರಸ್ಪರ ಸಾಕಷ್ಟು ಹೋಲಿಕೆಗಳು ಇರುವ ಇತ್ತೀಚಿನ ಎರಡು ನಿದರ್ಶನಗಳನ್ನು ಪರಿಶೀಲಿಸೋಣ. ಇವೆರಡೂ ಘಟನೆಗಳು ಟೆಲಿವಿಷನ್‌ ಚಾನೆಲ್‌ಗಳು ಮನೆಮನೆಗೆ ತಲುಪಿದ ನಂತರ ನಡೆದ ಘಟನೆಗಳಾಗಿವೆ. ಐದು ವರ್ಷಗಳ ಹಿಂದೆ, ಅಣ್ಣಾ ಹಜಾರೆ ಅವರು ದೆಹಲಿಯ ರಾಮಲೀಲಾ ಮೈದಾನದಲ್ಲಿ 12 ದಿನಗಳ ಕಾಲ ನಡೆಸಿದ ಉಪವಾಸ ಸತ್ಯಾಗ್ರಹದ ಸಂದರ್ಭದಲ್ಲಿ ತುಂಬ ನಿತ್ರಾಣಗೊಂಡು ಜೀವಕ್ಕೆ ಎರವಾಗುವ ಹಂತ ತಲುಪಿದ್ದರು.

ಸತ್ಯಾಗ್ರಹ ಕೊನೆಗೊಳ್ಳುತ್ತಿದ್ದಂತೆ ಅವರನ್ನು ದೆಹಲಿಯ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆನಂತರ ಇನ್ನಷ್ಟು ಚೇತರಿಸಿಕೊಳ್ಳಲಿ ಎಂದು ಜಿಂದಾಲ್‌ ನೆಹರೂ ಇನ್‌ಸ್ಟಿಟ್ಯೂಟ್‌ಗೆ ದಾಖಲಿಸಲಾಗಿತ್ತು. ಉಳ್ಳವರು ದೇಹದ ಕೊಬ್ಬು ಕರಗಿಸಲು ಇಲ್ಲಿಗೆ ಹೋಗುತ್ತಾರೆ.

ಅದೆಲ್ಲ ಪ್ರಾಸಂಗಿಕ ಎಂದು ನಿರ್ಲಕ್ಷಿಸಬಹುದು. ಆದರೆ, ಅಣ್ಣಾ ಸತ್ಯಾಗ್ರಹದಲ್ಲಿ ನಿರತರಾಗಿದ್ದಾಗ, ಅವರ  ಪ್ರಮುಖ ಬಂಟರಲ್ಲಿ ಒಬ್ಬರಾಗಿದ್ದ ಸ್ವಾಮಿ ಅಗ್ನಿವೇಷ್‌ ಸರ್ಕಾರದ ಜತೆ ‘ಕೈಜೋಡಿಸಿದ್ದರು’ ಎಂದು ಅಣ್ಣಾ ಅವರ ಹಿಂಬಾಲಕರೆ ಹೇಳಿಕೊಂಡಿದ್ದರು.

ತಮ್ಮ ಉಪವಾಸ ಸತ್ಯಾಗ್ರಹದಿಂದ ಕೊಂಚ ಮಟ್ಟಿಗೆ ಬದಲಾವಣೆಯ ಬೆಳಕು ಕಂಡಿದ್ದ ಅಣ್ಣಾ , ತಮ್ಮ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಒಂದು ವರ್ಷದ ನಂತರ ಜಂತರ್‌ ಮಂತರ್‌ನಲ್ಲಿ ಮತ್ತೆ ಉಪವಾಸಕ್ಕೆ ಕುಳಿತರು. ತಮ್ಮ ಪ್ರಮುಖ  ಅನುಯಾಯಿಗಳಾದ ಅರವಿಂದ ಕೇಜ್ರಿವಾಲ್‌, ಮನಿಷ್‌ ಸಿಸೋಡಿಯ ಮತ್ತು ಗೋಪಾಲ್‌ ರೈ ಅವರೂ ತಮ್ಮೊಂದಿಗೆ ಸೇರಿಕೊಳ್ಳಲು ಒತ್ತಾಯಿಸಿದ್ದರು.

ಇದು 10 ದಿನಗಳವರೆಗೆ ನಡೆಯಿತು. ಸೇನಾ ಪಡೆಯ ಮಾಜಿ ಮುಖ್ಯಸ್ಥರು ಈ ನಿರಶನ ಕೊನೆಗೊಳಿಸಿದರು. ಕೆಲ ದಿನಗಳ ನಂತರ ಗೋಪಾಲ್‌ ರೈ ಮತ್ತು ಸೇನಾ ಪಡೆಯ ಮಾಜಿ ಮುಖ್ಯಸ್ಥರು, ಅಣ್ಣಾ ಹಜಾರೆ ಅವರ ರಾಳೆಗಣ ಸಿದ್ಧಿ ಆಶ್ರಮದಲ್ಲಿ ಟೆಲಿವಿಷನ್‌ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿರುವುದನ್ನು ನಾವೆಲ್ಲ ನೋಡಿದ್ದೇವೆ.

ಮುಂಬೈನಲ್ಲಿ ನಡೆದ ಮೂರನೇ ಸತ್ಯಾಗ್ರಹವು ಅಲ್ಪ ಕಾಲಾವಧಿಯದಾಗಿತ್ತು. ಕೆಲವೇ ಕೆಲ ಜನರು ಅದರಲ್ಲಿ ಭಾಗಿಯಾಗಿದ್ದರು. ಇಷ್ಟೊತ್ತಿಗಾಗಲೇ ಅಣ್ಣಾ ಹಜಾರೆ ಅವರಿಗೆ ವಾಸ್ತವ ಅರಿವಿಗೆ ಬಂದಿತ್ತು. ತಮ್ಮನ್ನು ಬಲಿಪಶು ಮಾಡುವುದರ ಮೂಲಕ ತಮ್ಮ ಅನುಯಾಯಿಗಳು ಸಾಕಷ್ಟು ಲಾಭ ಮಾಡಿಕೊಂಡಿರುವುದು ಅವರಿಗೆ ಮನದಟ್ಟಾಗಿತ್ತು.

ಹೀಗಾಗಿ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿಯ ಆಹ್ವಾನವನ್ನು ಸಂತೋಷದಿಂದಲೇ ಒಪ್ಪಿಕೊಂಡು ಸತ್ಯಾಗ್ರಹ ಕೈಬಿಟ್ಟು, ತಮ್ಮ ಆಶ್ರಮಕ್ಕೆ ಮರಳಿದ್ದರು. ಹಳೆಯದು ನಿಮಗೆ ಮರೆತು ಹೋಗಿದ್ದರೆ, ಅಣ್ಣಾ ಹಜಾರೆ ಅವರು ಉಪವಾಸ ಸತ್ಯಾಗ್ರಹ ನಡೆಸಿದ್ದ  ಸಂದರ್ಭಗಳಲ್ಲಿ ನಡೆದಿದ್ದ ಚರ್ಚಾಗೋಷ್ಠಿಗಳ ಟೆಲಿವಿಷನ್‌ ಕ್ಲಿಪ್ಪಿಂಗ್‌ಗಳನ್ನು  ಪರಿಶೀಲಿಸಿದರೆ ನಿಮಗೆ ಈ ಎಲ್ಲ ಸಂಗತಿಗಳು ಸ್ಪಷ್ಟಗೊಳ್ಳುತ್ತವೆ.

ಅಣ್ಣಾ ತಮ್ಮ ಉಪವಾಸ ಕೈಬಿಟ್ಟಿರುವುದು ಕಂಡು ಬಹುತೇಕ ಕಾರ್ಯಕರ್ತರಿಗೆ ತೀವ್ರ ಅಸಮಾಧಾನವಾಗಿತ್ತು. ಮೇಧಾ ಪಾಟ್ಕರ್‌ ಅವರು ಪ್ರಾಮಾಣಿಕವಾಗಿ, ಯಾವುದೇ ಹಿಂಜರಿಕೆ ಇಲ್ಲದೆ ‘ಅಣ್ಣಾ, ನೀವು ಸಂಘರ್ಷ ಮುಂದುವರೆಸಿ’ ಎಂದು ಕೇಳಿಕೊಂಡಿದ್ದರು.

ಅಣ್ಣಾ ಬದುಕಿ ಉಳಿದರು. ಆದಾಗ್ಯೂ, ತಮ್ಮ ಬೆಂಬಲಿಗರಿಗೆ ಸಾಕಷ್ಟು ಪ್ರಯೋಜನಗಳು ಲಭಿಸುವಂತೆ ಮಾಡುವಲ್ಲಿ ಸಫಲರಾದರು. ಸತ್ಯಾಗ್ರಹ ಆಂದೋಲನದಲ್ಲಿ ಭಾಗಿಯಾದವರು ಚುನಾವಣೆಯಲ್ಲಿ ಗೆದ್ದು ಬಂದಿದ್ದಾರೆ,  ಸರ್ಕಾರದ ಉನ್ನತ ಹುದ್ದೆಗಳಲ್ಲಿ ಇದ್ದಾರೆ, ಇನ್ನೊಬ್ಬರು ಪ್ರತಿಸ್ಪರ್ಧಿ ನೆಸ್ಲೆಗೆ ಪರ್ಯಾಯ ಕಾರ್ಪೊರೇಟ್‌ ಸಾಮ್ರಾಜ್ಯವನ್ನೇ ಕಟ್ಟಿದರು. ಮತ್ತೊಬ್ಬರು ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದಾರೆ.

ಈಗ ಅವರ ಅನುಯಾಯಿಗಳಲ್ಲಿ ಯಾರೊಬ್ಬರಲ್ಲೂ ಅಣ್ಣಾ ಅವರನ್ನು ಭೇಟಿಯಾಗುವ ಕನಿಷ್ಠ ಸೌಜನ್ಯವೂ ಕಾಣುತ್ತಿಲ್ಲ. ದೇಶದಾದ್ಯಂತ ಪ್ರತಿಭಟನೆಯ ಮಿಂಚು ಹರಿಸಿದ್ದ ಉಪವಾಸ ಸತ್ಯಾಗ್ರಹದ ವಾರ್ಷಿಕೋತ್ಸವದ ದಿನವೂ ಇವರಿಗೆ ಅಣ್ಣಾ ನೆನಪಾಗುವುದಿಲ್ಲ. ಯಾರೊಬ್ಬರೂ ತಮಗೆ ಅಧಿಕಾರ ತಂದುಕೊಟ್ಟ ಅಣ್ಣಾ ಅವರಿಗೆ ಕೃತಜ್ಞತೆಯನ್ನೂ ಹೇಳಿಲ್ಲ ಅಥವಾ ಅಣ್ಣಾ ಅವರ ಜನ ಲೋಕಪಾಲ್‌ ವ್ಯವಸ್ಥೆ ಕಾರ್ಯಗತಗೊಳಿಸಲು ಹೋರಾಟ ನಡೆಸುವುದಾಗಿ ಭರವಸೆಯನ್ನೂ ನೀಡಿಲ್ಲ.

ಮಹಾತ್ಮ ಗಾಂಧಿ ಅವರ ಕನಸುಗಳನ್ನು ನನಸು ಮಾಡುವ ಭರವಸೆ ನೀಡುತ್ತಲೇ ದೇಶದ ಸಂಪತ್ತನ್ನು ನಿರಂತರವಾಗಿ ಲೂಟಿ ಮಾಡಿದ ಕಾಂಗ್ರೆಸ್‌ಗೆ ಹೋಲಿಸಿದರೆ ಇವರದ್ದು ಕಡಿಮೆ ಆಷಾಢಭೂತಿತನ ಎನ್ನಬಹುದು. ‘ಜೀವ ಇದ್ದರೆ ಇಡೀ ಜಗತ್ತೇ ಇದ್ದಂತೆ’ ಎನ್ನುವುದು ಸಕಾಲದಲ್ಲಿ ಅರಿವಿಗೆ ಬಂದಿರುವುದಕ್ಕೆ ಅಣ್ಣಾ ಹಜಾರೆ ಅವರಲ್ಲಿ ಸಂತೃಪ್ತ ಭಾವ ಇರಬಹುದು.

ಈಗಲೂ ನಡೆಯುತ್ತಿರುವ ಮೇಧಾ ಪಾಟ್ಕರ್‌ ಅವರ ಆಂದೋಲನದ ನಿದರ್ಶನವನ್ನೂ ನಾನು ಇಲ್ಲಿ ಉಲ್ಲೇಖಿಸಲು ಬಯಸುತ್ತೇನೆ. ಮೇಧಾ ಎಷ್ಟು ಬಾರಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ ಅಥವಾ ಎಷ್ಟು ಬಾರಿ ನಿಜವಾಗಿಯೂ ಉಪವಾಸಕ್ಕೆ ಕುಳಿತಿದ್ದಾರೆ ಎನ್ನುವುದನ್ನು ಲೆಕ್ಕ ಹಾಕುವಲ್ಲಿ ವಿಫಲನಾಗಿರುವೆ.

ಪ್ರತಿ ಬಾರಿಯೂ ಉಪವಾಸ ಸತ್ಯಾಗ್ರಹ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುವ ಮೊದಲೇ, ತಮ್ಮ ಹೋರಾಟದ ಉದ್ದೇಶ ಈಡೇರುವ ಬಗ್ಗೆ ತಲೆಕೆಡಿಸಿಕೊಳ್ಳದ ಅವರು ಮಧ್ಯದಲ್ಲಿಯೇ ಪ್ರತಿಭಟನೆ ಕೈಬಿಟ್ಟಿದ್ದಾರೆ. ಮುಂಗಾರು ಮಳೆಯ ಮೊದಲ ಲಕ್ಷಣಗಳು ಕಂಡು ಬರಲಾರಂಭಿಸಿದಂತೆ, ಮಧ್ಯಪ್ರದೇಶದ ನರ್ಮದಾ ನದಿ ದಂಡೆಯ ಯಾವುದಾದರೂ ಒಂದು ಭಾಗದಿಂದ ಇವರ ಹೆಸರು ಕೇಳಿ ಬರಲಾರಂಭಿಸುತ್ತದೆ.

ಉಪವಾಸ ಸತ್ಯಾಗ್ರಹಗಳು, ಜಲ ಸಮಾಧಿ ಪ್ರತಿಭಟನೆಗಳು ಮತ್ತು ಆನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುವುದನ್ನು ಮೇಧಾ ಮುಂದುವರೆಸಿಕೊಂಡು ಬಂದಿದ್ದಾರೆ. ತಮ್ಮ ಪ್ರತಿಭಟನೆಯ ಫಲಶ್ರುತಿ ಬಗ್ಗೆ ಶರ್ಮಿಳಾ ಅವರಿಗೆ 16 ವರ್ಷಗಳ ನಂತರ ಮನದಟ್ಟಾದರೆ, ಅಣ್ಣಾ ಅವರಿಗೆ ಮೂರು ಉಪವಾಸಗಳ ನಂತರ ಜ್ಞಾನೋದಯವಾಗಿತ್ತು.

ದ್ವಿತೀಯ ಮಹಾಯುದ್ಧದ ಸಂದರ್ಭದಲ್ಲಿ ಅಮೆರಿಕದ ಸೇನಾಧಿಕಾರಿ ಜನರಲ್‌ ಪ್ಯಾಟೊನ್‌ ಹೇಳಿಕೆಯನ್ನು ಚಲನಚಿತ್ರವೊಂದರಲ್ಲಿ ಉಲ್ಲೇಖಿಸಿರುವುದನ್ನು ಇಲ್ಲಿ ಪ್ರಸ್ತಾಪಿಸಲು ನಾನು ಬಯಸುವೆ. ‘ದೇಶಕ್ಕಾಗಿ ಸಾಯುವ ಮೂಲಕ ಯಾರೊಬ್ಬರೂ ಯುದ್ಧವನ್ನು ಗೆದ್ದಿಲ್ಲ. ಇತರ ಬಡಪಾಯಿಗಳನ್ನು ಸಾಯಿಸುವ ಮೂಲಕ ಗೆದ್ದಿದ್ದಾರೆ.’

‘ನೀವು ನಿಮ್ಮ ಹೋರಾಟವನ್ನು ಪ್ರೀತಿಸುತ್ತಿದ್ದರೆ, ನೀವು ಅದಕ್ಕಾಗಿ ಸಾಯಲು ಸಿದ್ಧರಿರಬೇಕು’ ಎನ್ನುವುದೇ ಶರ್ಮಿಳಾ, ಅಣ್ಣಾ ಹಜಾರೆ ಮತ್ತು ಮೇಧಾ ಪಾಟ್ಕರ್‌ ಅವರ ಹೋರಾಟದ ಸಂದೇಶವಾಗಿದೆ.
(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT