ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊರಿನ ಕರ್ಮ ನೆನೆದು ಬಿಕ್ಕಿ ಬಿಕ್ಕಿ ಅತ್ತಳಾಕೆ

Last Updated 18 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

`ನೀನು ಬರೆಯಬೇಕು~ : ನಲ್ವತ್ತು ವರ್ಷಗಳ ನಂತರ ನನ್ನ ಕಾಲೇಜು ಸಹಪಾಠಿ ಫೋನ್ ಮಾಡಿದ್ದಳು. ಆಕೆಯ ದನಿಯಲ್ಲಿ ಕೋರಿಕೆಯಿತ್ತು, ಆಗ್ರಹವಿತ್ತು, ಹತಾಶೆಯಿತ್ತು. ನಾನು ಬರೆದರೆ ಏನಾದರೂ ಆಗಬಹುದು ಎಂಬ ನಂಬಿಕೆಯೂ ಇದ್ದಂತೆ ಇತ್ತು. ಆಕೆ ತೀರಾ ನೊಂದುಕೊಂಡಿದ್ದಳು. ನಮ್ಮ ಊರು ಮುದ್ದೇಬಿಹಾಳಕ್ಕೆ ಕೇವಲ 15 ಕಿಲೋ ಮೀಟರ್ ದೂರದ ತಂಗಡಗಿಯಿಂದ ಬರುವಾಗ ಕಾರು ಮುಳುಗುವಂಥ ಒಂದು ದೊಡ್ಡ ಹಳ್ಳದಲ್ಲಿ ಆಕೆಯ ಮಗನ ಸೊಂಟ ಮುರಿದು ಹೋಗಿತ್ತು. ಆತನನ್ನು ಯಾವ ಯಾವುದೋ ಆಸ್ಪತ್ರೆಗೆ ಸೇರಿಸಿ ಈಗ ಬೆಂಗಳೂರಿನ ಆಸ್ಪತ್ರೆಗೆ ಸೇರಿಸಿದ್ದಾರಂತೆ, ಆತ ಮತ್ತೆ ಸಹಜ ಸ್ಥಿತಿಗೆ ಮರಳುವುದು ಕಷ್ಟವಂತೆ. `ಮುದ್ದೇಬಿಹಾಳದ ಜನರಿಗೆ ಒಂದು ಒಳ್ಳೆಯ ರಸ್ತೆಗೂ ಅರ್ಹತೆಯಿಲ್ಲವೇ?~ ಆಕೆ ಕೇಳುತ್ತಿದ್ದಳು.

ನಾನೂ ಊರು ಬಿಟ್ಟು 40 ವರ್ಷವಾಯಿತು. ಮತ್ತೆ ಹೋದುದು ಆಗಲೋ ಈಗಲೋ. ಅದೂ ಹೀಗೆ ಹೋಗಿ ಹಾಗೆ ಬಂದುದು. ಆರು ತಿಂಗಳ ಹಿಂದೆ ಹೋಗಿದ್ದೆ. ಅದೂ ಹಾರುಭೇಟಿಯೇ. ಊರಿನಲ್ಲಿ ಒಂದೇ ಒಂದು ರಸ್ತೆಯೂ ಸರಿ ಇರಲಿಲ್ಲ. ಗುಂಡಿಗಳಿಗೆ, ಹಳ್ಳಗಳಿಗೆ ಲೆಕ್ಕ ಇರಲಿಲ್ಲ. ಮುಖ್ಯ ರಸ್ತೆಯ ಕಥೆಯೇ ಅದು. ಅದು ನನಗೆ ಹೊಸದೂ ಅನಿಸಲಿಲ್ಲ. ಜಿಲ್ಲಾ ಕೇಂದ್ರಗಳ ರಸ್ತೆಗಳು ಇದಕ್ಕೂ ಅಧ್ವಾನ ಸ್ಥಿತಿಯಲ್ಲಿ ಇದ್ದುದನ್ನು ನಾನೇ ನೋಡಿದ್ದೆ. ಹಾಗೆಂದು ಊರು ಬೆಳೆದಿಲ್ಲ ಎಂದು ಅಲ್ಲ. ನಾನು ಊರ ಹೊರಗೆ ಇದ್ದ ಕನ್ನಡ ಶಾಲೆಯಲ್ಲಿ ಕಲಿತವನು. ಈಗ ಅದು ಊರಿನ ಮಧ್ಯಕ್ಕೆ ಬಂದಿದೆ. ಶಾಲೆಯ ಸ್ಥಿತಿ ಮಾತ್ರ ನಾವು ಕಲಿಯುವಾಗ ಹೇಗೆ ಇತ್ತೋ ಹಾಗೆಯೇ ಇದೆ! ಸುಣ್ಣ ಬಣ್ಣವನ್ನಾದರೂ ಹಚ್ಚಿದ್ದಾರೆಯೇ? ಒಂದು ಕೊಠಡಿಯಾದರೂ ಹೊಸದಾಗಿ ಸೇರಿದೆಯೇ? ಹೊರಗಿನಿಂದ ಕಾಣುತ್ತಿರಲಿಲ್ಲ. ನಾನು ಒಳಗೆ ಹೋಗಿ ನೋಡಲಿಲ್ಲ. ಸುಮ್ಮನೆ ಊರಿನಲ್ಲಿ ಸೈಟು ಬೆಲೆ ಎಷ್ಟು ಎಂದು ಕೇಳಿದೆ. ಬೆಂಗಳೂರಿಗಿಂತ ಕಮ್ಮಿಯೇನೂ ಇರಲಿಲ್ಲ!

ನಮ್ಮ ಊರಿಗೆ ಕೃಷ್ಣಾ ನದಿ ಕೇವಲ ಒಂಬತ್ತು ಕಿಲೋ ಮೀಟರ್ ದೂರದಲ್ಲಿ ಹರಿಯುತ್ತಾಳೆ. ಆಕೆ ಹೆದ್ದೊರೆ. ಹಳೆಯ ಗೆಳೆಯರು ಹೇಳುತ್ತಿದ್ದರು :  `ನಮ್ಮ ಊರಿಗೆ 15 ದಿನಕ್ಕೆ ಒಮ್ಮೆ ನೀರು ಬರುತ್ತದೆ. ಎಷ್ಟು ಹೊತ್ತಿಗೆ ಬರುತ್ತದೆ ಗೊತ್ತಿಲ್ಲ. ನಲ್ಲಿ ಗೊರ ಗೊರ ಸದ್ದು ಮಾಡುವುದನ್ನೇ ಕಾಯುತ್ತ ಕೂರುತ್ತೇವೆ. ನೀರು ಬಂತು ಎಂದರೆ ಸಂಭ್ರಮಪಟ್ಟು ಹಂಡೆ, ಕೊಡ ಮಾತ್ರವಲ್ಲ, ಚೊಂಬು, ಲೋಟದಲ್ಲಿಯೂ ತುಂಬಿ ಇಟ್ಟುಕೊಳ್ಳುತ್ತೇವೆ. ಮತ್ತೆ 15 ದಿನ ಕಾಯಬೇಕಲ್ಲ?~ ಜನರಿಗೆ ಅವರ ಯೋಗ್ಯತೆಗೆ ತಕ್ಕಂಥದು ಸಿಗುತ್ತದೆಯೇ? ಇದರಲ್ಲಿ ಊರ ಜನರ ತಪ್ಪು ಮಾತ್ರ ಇದೆಯೇ?

ಗೊತ್ತಾಗಲಿಲ್ಲ. ಜನರಲ್ಲಿ ಸಿಟ್ಟು ಕಡಿಮೆ ಆಗಿದೆ ಅನಿಸಿತ್ತು ಅಷ್ಟೇ. ಇನ್ನೊಬ್ಬ ಗೆಳೆಯನ ಹುಡ್ಕೊ ಬಡಾವಣೆಯ ಮನೆಗೆ ಹೋದೆ. ರಾತ್ರಿಯಾಗಿತ್ತು. ಹಾದಿಯಲ್ಲಿ ಒಂದೇ ಒಂದು ಬೀದಿ ದೀಪ ಇರಲಿಲ್ಲ. ರಸ್ತೆ ಮೊದಲೇ ಇರಲಿಲ್ಲ. ಒಂದಿಷ್ಟು ಮಳೆ ಬಂದು ಇಡೀ ರಸ್ತೆಯಲ್ಲಿ ಕೊಚ್ಚೆ, ಹೊಂಡ ಇದ್ದುವು. ಕತ್ತಲೆಯಲ್ಲಿ ಕೊಚ್ಚೆ, ಹೊಂಡ ದಾಟುವುದು ಕಷ್ಟವಾಯಿತು. ಅದೆಲ್ಲ ಗೊತ್ತಿದ್ದ ಗೆಳೆಯ ಮುಂದೆ ಸರ ಸರ ನಡೆದು ಹೋದ. ನಮಗೆ ಎಲ್ಲವೂ ರೂಢಿಯಾಗಿ ಬಿಡುತ್ತದೆ ಎಂದುಕೊಂಡೆ.

ಕಳೆದ ಆರೆಂಟು ತಿಂಗಳಲ್ಲಿ ಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ನಮ್ಮ ಊರು ಬಂದು ಸೇರಲು ಯಾವ ರಸ್ತೆಯೂ ಸರಿಯಿಲ್ಲ. ಹತ್ತು ಹದಿನೈದು ನಿಮಿಷಗಳಲ್ಲಿ ಬಂದು ತಲುಪಬಹುದಾದ ದಾರಿ ಸಾಗಲು ಗಂಟೆಗಟ್ಟಲೆ ಹಿಡಿಯುತ್ತದೆ. ಮಧ್ಯದಲ್ಲಿ ನಿಮ್ಮ ಸೊಂಟಕ್ಕೆ ಯಾವ ಖಾತ್ರಿಯೂ ಇಲ್ಲ. ಕಾಲೇಜು ಗೆಳತಿ ಹೇಳುತ್ತಿದ್ದಳು, `ನಾಲ್ಕು ವರ್ಷವಾಯಿತು. ತಂಗಡಗಿಯಿಂದ ಮುದ್ದೇಬಿಹಾಳದ ರಸ್ತೆ ಸರಿ ಹೋಗಲಿಲ್ಲ.

ಆಲಮಟ್ಟಿಯಿಂದ ಬರುವ ರಸ್ತೆ ಸ್ಥಿತಿಯೂ ಹೀಗೆಯೇ  ಇದೆ. ಮೊದಲು ಒಂದೋ ಎರಡೋ ಗುಂಡಿಗಳು ಇದ್ದುವು. ದಿನಕ್ಕೊಂದು ಗುಂಡಿ ಸೇರಿಕೊಂಡು ಈಗ ದೊಡ್ಡ ಹಳ್ಳಗಳು ಆಗಿವೆ. ಹಳ್ಳಗಳ ನಡುವೆ ರಸ್ತೆ ಹುಡುಕಿಕೊಂಡು ಜನರು ಅಡ್ಡಾಡುತ್ತಿದ್ದಾರೆ. ರಸ್ತೆಯ ಆಜುಬಾಜು ಇದ್ದ ಕಬ್ಬಿನ ಗದ್ದೆಗಳ ರೈತರು ತಾವೇ ಟ್ರ್ಯಾಕ್ಟರ್‌ಗಳಲ್ಲಿ ಮಣ್ಣು ತಂದು ಹಳ್ಳಗಳನ್ನು ತುಂಬಿದ್ದಾರೆ. ಮಣ್ಣು ಹಾರಿ ಹೋಗಿ ಮತ್ತೆ ಹಳ್ಳಗಳು ಬಾಯಿ ತೆರೆದುಕೊಂಡು ನಿಂತಿವೆ. ನಿನಗೆ ಗೊತ್ತೇ, ನಾಲ್ಕು ವರ್ಷಗಳ ಹಿಂದೆ ತಂಗಡಗಿ ರಸ್ತೆಯನ್ನು ಒಂದೂ ಕಾಲು ಕೋಟಿ ರೂಪಾಯಿ ಖರ್ಚು ಮಾಡಿ ರಿಪೇರಿ ಮಾಡಿದ್ದರು.

ಎಂಟೊಂಬತ್ತು ತಿಂಗಳ ಹಿಂದೆ ಇದೂ ಸೇರಿ ಕೆಲವು ರಸ್ತೆಗಳನ್ನು ಮತ್ತೆ 65 ಲಕ್ಷ ರೂಪಾಯಿ ಖರ್ಚು ಮಾಡಿ ರಿಪೇರಿ ಮಾಡಿದರು. ಆಗ ಬರೀ ಸಣ್ಣ ಹೊಂಡ ಮುಚ್ಚಿದರು. ದೊಡ್ಡ ಹಳ್ಳ ಹಾಗೆಯೇ ಬಿಟ್ಟರು! ಈಗೇನೋ 17 ಕೋಟಿ ರೂಪಾಯಿ ಖರ್ಚು ಮಾಡಿ ಮತ್ತೆ ಎಲ್ಲ ರಸ್ತೆ ರಿಪೇರಿ ಮಾಡುತ್ತಾರಂತೆ. ಮುಖ್ಯಮಂತ್ರಿ ಬಳಿ ಕಡತ ಇದೆಯಂತೆ.
`ಮೊನ್ನೆ ಊರ ಜನರೆಲ್ಲ ಸೇರಿ ಬಂದ್ ಮಾಡಿದರು. ಬಂದ್ ಮಾಡಿದವರು ಯಾರು ಗೊತ್ತೆ? ಪಡ್ಡೆ ಹುಡುಗರು! ಇಡೀ ದಿನ ಒಂದು ಕಪ್ಪು ಚಹವೂ ಸಿಗಲಿಲ್ಲ. ಈಗ ವ್ಯಾಪಾರಸ್ಥರು ಸರದಿ ಉಪವಾಸ ಮಾಡುತ್ತಿದ್ದಾರೆ. ಅವರಿಗೂ ನೆಂಟರ ಮೇಲೆ ಪ್ರೀತಿ. ಅಕ್ಕಿಯ ಮೇಲೆ ಅಸೆ. ಹಾಗೂ ಸೈ ಹೀಗೂ ಸೈ! ನಾವು ಮತ್ತೆ ಏನು ಮಾಡಬಹುದು?

ಶಾಸಕ ನಮ್ಮ ಊರಿನವರಲ್ಲ. ಅವರಿಗೆ ನಮ್ಮ ವೋಟು ಬೇಕಾದಂತೆಯೂ ಕಾಣುವುದಿಲ್ಲ. ಮೊದಲಿನಿಂದಲೂ ಹಾಗೆಯೇ ಅಲ್ಲವೇ? ಅವರಿಗೆ ವೋಟು ಹಾಕುವ ನಲ್ವತ್ತು ಹಳ್ಳಿಗಳು ಇವೆ. ಅವರ ವಿರುದ್ಧ ನಿಲ್ಲುವ ಅಭ್ಯರ್ಥಿಗೂ ನಲ್ವತ್ತು ಐವತ್ತು ಹಳ್ಳಿಗಳು ಇವೆ. ಮೊದಲು ದೇಶಮುಖರು ಗೆಲ್ಲುತ್ತಿದ್ದರು. ಈಗ ನಾಡಗೌಡರು ಗೆಲ್ಲುತ್ತಿದ್ದಾರೆ. ಧಣಿಗಳು. ಹೊಟ್ಟೆ ತುಂಬಿದವರು! ಅವರು ಹೆಸರಿಗೆ ನಮ್ಮ ಊರಿನ ಶಾಸಕರು. ನಮಗೂ ಅವರಿಗೂ ಸಂಬಂಧವೇ ಇಲ್ಲ. ಅವರು ನಮ್ಮ ಊರಿಗೆ ಯಾವಾಗ ಬರುತ್ತಾರೆ, ಯಾವಾಗ ಹೋಗುತ್ತಾರೆ. ಒಂದೂ ಗೊತ್ತಾಗುವುದಿಲ್ಲ. ಐ.ಬಿ.ಗೆ ಬಂದು ಹೋಗುತ್ತಾರಂತೆ. ವಿಚಿತ್ರ ಎಂದರೆ ಅವರೂ ಇದೇ ರಸ್ತೆಯಲ್ಲಿಯೇ ಸಂಚರಿಸುತ್ತಾರೆ. ಅವರಿಗೆ ರಸ್ತೆ ಕಾಣುವುದಿಲ್ಲವೇ?

`ನಿನಗೆ ಗೊತ್ತಾ? ನಿಮ್ಮ ಊರಿನಲ್ಲಿ ಭೂ ಮಾಫಿಯಾ ಇರುವ ಹಾಗೆ ಇಲ್ಲಿ ಗುತ್ತಿಗೆದಾರರ ಮಾಫಿಯಾ ಇದೆ. ಅವರಿಗೆ ಯಾರ ರಕ್ಷಣೆ ಇದೆ ಎಂದು ನಾನು ಹೇಳಬೇಕಿಲ್ಲ. ನಾನು ಹೇಳಿದೆ ಎಂದು ನೀನು ಬರೆದು ಬಚಾವಾಗಬಹುದು. ನಾನು ಇಲ್ಲಿಯೇ ಇರಬೇಕು, ಬದುಕಬೇಕು! ಯಾರು ಗುತ್ತಿಗೆ ತೆಗೆದುಕೊಂಡರೂ ಅವರಿಂದ ಒಬ್ಬ ಗುತ್ತಿಗೆದಾರನೇ ಕಿತ್ತುಕೊಂಡು ಕೆಲಸ ಮಾಡುತ್ತಾನೆ. ಕೆಲಸ ಹೇಗೆ ಮಾಡುತ್ತಾನೆ ಎಂದು ನೀನು ಬಂದು ನೋಡು. ಎಲ್ಲ ರಾಕ್ಷಸರ ಹಾಗೆ ಇದ್ದಾರೆ. ಯಾರಿಗೂ ಒಂಚೂರೂ ಭಯವಿಲ್ಲ. ದುಡ್ಡು ಕೊಳ್ಳೆ ಹೊಡೆಯುತ್ತಿದ್ದಾರೆ. ಒಂದೇ ಒಂದು ರಸ್ತೆ ಕೆಲಸದ ಬಳಿಯೂ ಅದರ ಖರ್ಚು ವೆಚ್ಚದ ಫಲಕವಿಲ್ಲ. ಕೇಳಿದರೆ ಹೇಳುವುದಿಲ್ಲ.

ಅದೇನು ಪಾರದರ್ಶಕ ಕಾಯ್ದೆಯೋ ಒಂದೂ ತಿಳಿಯದು. ನಮ್ಮ ಊರಿನ ಆಸುಪಾಸಿನ ರಸ್ತೆಗಳ ನಿರ್ಮಾಣ, ದುರಸ್ತಿ ಕೆಲಸವನ್ನು ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ಮಾಡಬೇಕು. ಅವರೆಲ್ಲ ಆಲಮಟ್ಟಿಯಲ್ಲಿ ಎಲ್ಲಿ ಇರುತ್ತಾರೆ? ಬೆಂಗಳೂರಿನಲ್ಲಿಯೇ ಅಲ್ಲವೇ ಅವರು ಇರುವುದು? ಇಲ್ಲಿ ಇದ್ದರೆ ಅವರಿಗೆ ನಮ್ಮ ಕಷ್ಟ ಗೊತ್ತಾಗುತ್ತಿತ್ತು.

ಕೇಳುವವರು ಇಲ್ಲ ಎಂದ ಮೇಲೆ ಒಂದು ಸಾರಿ ಮುದ್ದೇಬಿಹಾಳದಿಂದ ತಂಗಡಗಿಗೆ ರಸ್ತೆ ಮಾಡಿದೆವು ಎಂದು ಬಿಲ್ಲು ಹಾಕುತ್ತಾರೆ. ಇನ್ನೊಂದು ಸಾರಿ ಅದೇ ಬಿಲ್ಲನ್ನು ತಂಗಡಗಿಯಿಂದ ಮುದ್ದೇಬಿಹಾಳಕ್ಕೆ ರಸ್ತೆ ಮಾಡಿದೆವು ಎಂದು ಹಾಕುತ್ತಾರೆ! ಊರಿನ ರಸ್ತೆ ಕೆಲಸ ನೋಡಿಕೊಳ್ಳಲು ಪುರಸಭೆಯಲ್ಲಿ ಒಬ್ಬ ಎಂಜಿನಿಯರ್ ಇಲ್ಲ ಗೊತ್ತಾ?

`ಎಲ್ಲದಕ್ಕೂ ರಾಜಕಾರಣ. ಶಾಸಕರಿಗೆ ಕೇಳಿದರೆ ಮುಂದೆ ಶಾಸಕರಾಗಲು ಹೊರಟವರು ಅಡ್ಡಿಯಾಗಿದ್ದಾರೆ ಎನ್ನುತ್ತಾರೆ. ಇವರು ಕಾಂಗ್ರೆಸ್ಸು, ಅವರು ಬಿಜೆಪಿ. ಕೆಲಸ ಆದರೆ ನಾನು ಮಾಡಿದೆ ಎಂದು ಬಿಜೆಪಿ ಅಭ್ಯರ್ಥಿ ಹೇಳುತ್ತಾರೆ. ಆಗದಿದ್ದರೆ ಕಾಂಗ್ರೆಸ್ ಶಾಸಕರು ಮಾಡಿಸಲಿಲ್ಲ ಎನ್ನುತ್ತಾರೆ. ಈಗಿನ ಕಾಂಗ್ರೆಸ್ ಶಾಸಕರ ವಿರುದ್ಧ ಹತ್ತಿರದ ಊರಿನ ಇನ್ನೊಬ್ಬ ಕಾಂಗ್ರೆಸ್ ಶಾಸಕ ಪಿತೂರಿ ಮಾಡುತ್ತಿದ್ದಾರಂತೆ. ಅವರು ಏನಾದರೂ ಮಾಡಲಿ, ನಾವು ಏನು ಮಾಡಬೇಕು? ನಿನಗೇ ಏಕೆ ಹೇಳಿದೆ ಗೊತ್ತೆ?

ಇಲ್ಲಿನ ಬಹುತೇಕ ಪತ್ರಕರ್ತರು ಹಾಳಾಗಿ ಹೋಗಿದ್ದಾರೆ. ಎಲ್ಲರಿಗೂ ತಿಂಗಳಿಗೆ ಇಂತಿಷ್ಟು ಎಂದು ಅಧಿಕಾರಿಗಳು ದುಡ್ಡು ಕೊಡುತ್ತಾರಂತೆ. ಆಲಮಟ್ಟಿಯಲ್ಲಿ ಒಂದು ಡೈರಿಯನ್ನೇ ಅದಕ್ಕಾಗಿ ಇಟ್ಟಿದ್ದಾರಂತೆ. ತಿಂಗಳಿಗೊಮ್ಮೆ ಹೋಗಿ ಎರಡು ಸಾವಿರ ಮೂರು ಸಾವಿರ ಹಣ ಇಸಿದುಕೊಂಡು ಬಂದು ನಿಮ್ಮವರು ಹೊಟ್ಟೆ ಹೊರೆಯುತ್ತಿದ್ದಾರೆ. ಏನು ನಾಚಿಗೆಗೆಟ್ಟವರಪ್ಪ? ಹೀಗಾದರೆ ಹೇಗೋ? ನಮ್ಮ ಊರು ಮಾತ್ರ ಹೀಗೆ ಆಗಿದೆಯೇ? ಎಲ್ಲ ಊರುಗಳೂ ಹೀಗೆಯೇ ಇವೆಯೇ? ಮತ್ತೆ ಸರ್ಕಾರ, ಅಷ್ಟು ಅಭಿವೃದ್ಧಿ ಆಗಿದೆ, ಇಷ್ಟು ಅಭಿವೃದ್ಧಿ ಆಗಿದೆ ಎಂದು ಹೇಳುತ್ತದೆಯಲ್ಲ? ಎಲ್ಲಿ ಆಗಿದೆ ಮಾರಾಯ? ಹೀಗೆಯೇ ಆದರೆ, ನಮ್ಮ ಊರುಗಳೆಲ್ಲ ನಾಶವಾಗಿ ಬಿಡುತ್ತವೆಯಲ್ಲವೊ?... ರಾಜಕಾರಣದಲ್ಲಿ ಇರುವ, ಅಧಿಕಾರದಲ್ಲಿ ಇರುವ ನಿನ್ನ ಗೆಳೆಯ-ಗೆಳತಿಯರ ಬಗ್ಗೆ ಹೇಳಲು ಬೇಕಾದಷ್ಟು ಇದೆ. ಹೇಳಲೇ?~

ಜತೆಗೆ ಕಲಿಯುವಾಗ ಪೆದ್ದಿಯ ಹಾಗೆ ಇದ್ದ ಈ ಹುಡುಗಿಗೆ ಇಷ್ಟು ಸಿಟ್ಟು ಹೇಗೆ ಬಂತು? ಗೊತ್ತಾಗಲಿಲ್ಲ. `ಹೋಗಲಿ, ಎಷ್ಟು ದಿನಕ್ಕೊಮ್ಮೆ ನೀರು ಬರುತ್ತಿದೆ~ ಎಂದು ಸುಮ್ಮನೆ ಕೇಳಿದೆ. `ಅದೊಂದು ಸರಿ ಹೋಗಿದೆಯಪ್ಪ. ಈಗ ವಾರಕ್ಕೆ ಒಮ್ಮೆ ನೀರು ಬರುತ್ತಿದೆ. ಒಳ್ಳೆಯದಾಯಿತು~ ಎಂದಳು. ನಗಬೇಕು ಅನಿಸಿತು. `ವಾರಕ್ಕೆ ಒಮ್ಮೆ ನೀರು ಬರುವುದೇನು ದೊಡ್ಡ ವಿಷಯವೇ? ದಿನ ಬಿಟ್ಟು ದಿನ ನೀರು ಬರದೇ ಇದ್ದರೆ ಬೆಂಗಳೂರಿನಲ್ಲಿ ಹಾಹಾಕಾರ ಆಗುತ್ತದೆ ಗೊತ್ತೆ? ವಾರಕ್ಕೊಮ್ಮೆ ನೀರು ಬಂದರೆ ಅದು ನಮಗೆ ಮೊದಲ ಪುಟದ ಸುದ್ದಿ. ದೊಡ್ಡ ಹಲ್ಲಾಗುಲ್ಲಾ ಆಗುತ್ತದೆ. ನೋಡು, ರಾಜಕಾರಣಿಗಳು ನಿಮಗೆ ಹೇಗೆ ಮಂಕುಬೂದಿ ಹಾಕುತ್ತಾರೆ ಎಂದರೆ ಒಂಬತ್ತು ಕಿಲೋ ಮೀಟರ್ ದೂರ ಇರುವ ಮುದ್ದೇಬಿಹಾಳಕ್ಕೇ ಕೃಷ್ಣಾ ನದಿಯಿಂದ ನೀರು ಕೊಡಲು ಆಗುವುದಿಲ್ಲ. ಕೋಲಾರಕ್ಕೂ ಅದೇ ನೀರು ಕೊಡುತ್ತಾರಂತೆ ಗೊತ್ತಾ~ ಎಂದು ನಾನು ನಗುತ್ತ ಕೇಳಿದೆ.

`ನಿನಗೆ ನಾನು ಫೋನ್ ಮಾಡಿದ್ದು ಅದಕ್ಕಾಗಿಯೇ ಮಾರಾಯ. ನನ್ನ ಮಗನ ಕಥೆ ಏನಾಗುತ್ತದೆ ಗೊತ್ತಿಲ್ಲ. ಅದು ನನ್ನ ಹಣೆಬರಹ. ನೀವೆಲ್ಲ ಬೆಂಗಳೂರಿನ ಬಗ್ಗೆ ಮಾತ್ರ ಯೋಚನೆ ಮಾಡಿದರೆ ನಾವು ಉಳಿಯುವುದು ಕಷ್ಟ. ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ನಮ್ಮ ಕಡೆ ಗಮನ ಇಲ್ಲ. ನೀವೂ ನಮ್ಮನ್ನು ಮರೆತರೆ ನಮ್ಮ ಪಾಡು ಯಾರು ಕೇಳುತ್ತಾರೆ? ನೀನು ಬರೆದುಬಿಟ್ಟರೆ ಏನಾದರೂ ಭಾರಿ ಬದಲಾವಣೆ ಆಗುತ್ತದೆ ಎಂದು ನನಗೆ ಅನಿಸಿಲ್ಲ. ಆದರೆ, ಅಧಿಕಾರದಲ್ಲಿ ಇದ್ದವರಿಗೆ ಸ್ವಲ್ಪ ನಾಚಿಕೆಯಾದೀತು ಎಂದು ಅನಿಸಿದೆ... ಬರೆಯುತ್ತೀಯಾ?...~  ಆಕೆ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು : ತಂದೆಯಂಥ ಮಗನಿಗಾಗಿ; ತಾಯಿಯಂಥ ಊರಿಗಾಗಿ...

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT