ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಪಾದಗಳಲ್ಲೂ ಅದೇ ತಾಳದ ಹೆಜ್ಜೆಗಳು!

ಅಕ್ಷರ ಗಾತ್ರ

ನಾನು ವಿಗ್ರಹದಂತೆ ನಿಂತುಕೊಂಡು ಅವರನ್ನೇ ನೋಡುತ್ತಿದ್ದೆ. ದೇಶದ ರಂಗಭೂಮಿಗೊಂದು ಹೊಸ ಆಯಾಮ ಕೊಡಲು ಪರಿಶ್ರಮಿಸಿದ ರಂಗಭೀಷ್ಮ ಬಿ.ವಿ. ಕಾರಂತರು ಹಾಸುಗೆಗೆ ಒರಗಿಕೊಂಡು ಹಿಂದೂಸ್ತಾನಿ ಸಂಗೀತವನ್ನು ಆಲಿಸುತ್ತಿದ್ದರು. ನನ್ನನ್ನು ನೋಡಿದವರೇ ಪುಸ್ತಕವೊಂದನ್ನು ಬಿಡಿಸಿಕೊಂಡು ಅದರಲ್ಲಿ ಹಿಂದಿಯಲ್ಲಿ ಬರೆದುದನ್ನು ತೋರಿಸಿದರು. ಅವರು ಹೇಳಹೊರಟಿದ್ದು ಯಕ್ಷಗಾನ ಪೂರ್ವರಂಗದಲ್ಲಿದ್ದ ನಾಟಕೀಯ ಸಂಭಾಷಣೆಗಳನ್ನು ಹಿಂದಿಯಲ್ಲಿ ಬಳಸಿಕೊಂಡ ಬಗ್ಗೆ ಇರಬೇಕು ಎಂದು ನನ್ನ ಊಹೆ.

ಒಮ್ಮೆ ದೆಹಲಿಯ ಕಾರಂತರ ಮನೆಯಲ್ಲಿದ್ದಾಗ ಅವರು ನನ್ನಿಂದ ಯಕ್ಷಗಾನದ ಕೆಲವು ಹೆಜ್ಜೆಗಳನ್ನು ಕುಣಿಸಿದ್ದರು. ಯಾವುದೋ ಒಂದು ಹೆಜ್ಜೆಯನ್ನು ನೋಡಿ ಬೆರಗುಗೊಳ್ಳುತ್ತಲೇ, “ಇದನ್ನು ಯಾರಿಂದ ಕಲಿತೆ?” ಎಂದು ಕೇಳಿದರು. ನಾನು ಪ್ರಾಮಾಣಿಕವಾಗಿ ಆ ಸೂಕ್ಷ್ಮವನ್ನು ಕಲಿಸಿದ ಮೆಟ್ಕಲ್ ಕೃಷ್ಣಯ್ಯ ಶೆಟ್ಟರ ಹೆಸರನ್ನು ಹೇಳಿದೆ. “ಅವರಿಗೀಗ ಎಷ್ಟು ಪ್ರಾಯ?” ಎಂದು ಕೇಳಿದರು. “ಎಂಬತ್ತು ಇರಬಹುದು” ಎಂದೆ.

“ಅವರು ಯಾರಿಂದ ಕಲಿತರು?” ಎಂದು ಪ್ರಶ್ನೆ ಹಾಕಿದರು. “ಅವರ ಹಿರಿಯರಿಂದ ಕಲಿತಿರಬಹುದು” ಎಂದೆ. “ಅವರಿಗೆ ಕಲಿಸುತ್ತಿದ್ದಾಗ ಹಿರಿಯರಿಗೂ ಎಂಬತ್ತರ ಆಸುಪಾಸು ಇರಬಹುದಲ್ಲವೆ?” ಕಾರಂತರು ಕೇಳಿದರು. “ಇರಬಹುದು” ಎಂದೆ. “ಹಾಗಿದ್ದರೆ ನೀನೀಗ ಸುಮಾರು ನೂರೈವತ್ತು ವರ್ಷಗಳ ಹಿಂದಿನ ಹೆಜ್ಜೆಯನ್ನು ಕುಣಿಯುತ್ತಿದ್ದಿ...” ಎಂದರು.

ಆ ಕ್ಷಣದಿಂದ ಪಾದಘಾತದ ಸಪ್ಪಳ ಹೊಸ ರೀತಿಯಲ್ಲಿ ಕೇಳಿಸಲಾರಂಭಿಸಿತು. ಯಕ್ಷಗಾನದ `ಪರಂಪರೆ' ಎಂಬ ಪದವನ್ನು ಸರಳವಾಗಿ ಅರ್ಥವಾಗುವಂತೆ ಕಾರಂತರು ನನ್ನ ಮುಂದೆ ಮಾತನಾಡಿದ್ದರು. ಅವರ ಮುಂದೆ ಪೂರ್ವರಂಗದ ಕೋಡಂಗಿಯ ಸಂಭಾಷಣೆಯನ್ನು ಹೇಳಿದಾಗ ಅದರ ನಾಟಕೀಯತೆಗೆ ಮತ್ತಷ್ಟು ಬೆರಗಾದರು.

ಕೋಡಂಗಿ : ಬಿತ್ತೊ ಬಿತ್ತೊ...
ಭಾಗವತ : ಎಲಾ! ಏನು ಬಿತ್ತು?
ಕೋಡಂಗಿ : ರಾಂಭಟ್ರ ಹಿತ್ತಲಲ್ಲಿ ಹಲಸಿನಕಾಯಿ ಬಿತ್ತು... ಹೋಯ್ತೋ ಹೋಯ್ತ್...
ಭಾಗವತ : ಎಲಾ! ಏನು ಹೋಯಿತು?
ಕೋಡಂಗಿ : ಕುರುಬರ ಕೆಂಚನ ನಾಯಿ ಓಡಿ ಹೋಯಿತು...

ಈ ಸಂಭಾಷಣೆಯನ್ನು ನಾನು ಕೊಂಚ ಬದಲಾವಣೆ ಮಾಡಿದ್ದೆ.

ಕೋಡಂಗಿ : ಬಿತ್ತೊ ಬಿತ್ತೊ...
ಭಾಗವತ : ಎಲಾ! ಏನು ಬಿತ್ತು?
ಕೋಡಂಗಿ : ಈ ಸಲ ಮಳೆಗಾಲದಲ್ಲಿ ಚೆನ್ನಾಗಿ ಮಳೆ ಬಿತ್ತು. ಹೋಯ್ತೋ ಹೋಯ್ತ್....
ಭಾಗವತ : ಎಲಾ! ಏನು ಹೋಯಿತು?
ಕೋಡಂಗಿ : ಊರಿಗೆ ಬಂದ ಬರಗಾಲ ಹೋಯ್ತು... ಹೊಕ್ಕಿತೋ ಹೊಕ್ಕಿತು...
ಕೋಡಂಗಿ : ಗುರುಗಳು ಕಲಿಸಿದ ವಿದ್ಯೆ ತಲೆಗೆ ಹೊಕ್ಕಿತೋ...

`ಚೆನ್ನಾಗಿದೆ. ಇದನ್ನು ನಾಟಕದಲ್ಲಿಯೂ ಬಳಸಬಹುದು...' ಎನ್ನುತ್ತ ಅವುಗಳನ್ನು ಕಾಗದದಲ್ಲಿ ಗೀಚಿಕೊಂಡರು. ಆಮೇಲೆ ಅದರ ಪ್ರೇರಣೆಯಿಂದ ಹಿಂದಿಯಲ್ಲಿಯೂ ನಾಟಕೀಯ ಸಂಭಾಷಣೆಗಳನ್ನು ಅವರು ರೂಪಿಸಿರಬಹುದು.

ಮುಂದೆ ಕೆಲವೇ ದಿನಗಳಲ್ಲಿ ಜೀವನರಂಗದಿಂದ ಮರೆಯಾಗಲು ಸಿದ್ಧರಾದಂತಿದ್ದ `ರಂಗಭೂಮಿಯ ಪರಮಹಂಸ'ನ ಮುಂದೆ ನಿಂತಾಗ ಇಪ್ಪತೈದು ವರ್ಷಗಳ ಹಿಂದೆ ಅವರ ಜೊತೆಗಿದ್ದ ಕ್ಷಣಗಳು ನೆನಪಿಗೆ ಬಂದು ಕಣ್ಣುಗಳು ಮಂಜಾದವು. ನನ್ನ ಹಿತೈಷಿಗಳೂ ಆತ್ಮೀಯರೂ ಆದ ಯಕ್ಷದೇಗುಲದ ಮೋಹನ ಹೊಳ್ಳರಲ್ಲಿ ಹೇಳಿ ಕಳುಹಿಸಿದರೆಂಬ ಕಾರಣಕ್ಕೆ ಆ ಪುಣ್ಯಾತ್ಮನನ್ನು ಕಾಣಲು ಹೋಗಿದ್ದೆ. ಮೆತ್ತಗಾದ ಅವರ ಧ್ವನಿಯನ್ನು ಕೇಳಿ ತುಂಬ ಸಂಕಟವೆನಿಸಿತು. `ಬದುಕು ಕೂಡಾ ಯಕ್ಷಗಾನ ಮಾರಾಯ...' ಎಂದೇನೋ ಹೇಳುತ್ತಿರುವಂತೆಯೇ ನಾನು ಕಣ್ಣಾಲಿಗಳನ್ನು ಒರೆಸಿಕೊಂಡು ಹೊರಬಂದೆ.

                                                                  ---------------

ಬದುಕನ್ನೇ ಯಕ್ಷಗಾನವೆಂದು ಸ್ವೀಕರಿಸಿದವನಿಗೆ ದೇವಸ್ಥಾನದ ಒಳಗಾದರೇನು, ಹೊರಗಾದರೇನು! ಚೆಂಡೆಯನ್ನು ದೇವಸ್ಥಾನದ ಧ್ವಜಸ್ತಂಭದ ಬಳಿ ಇಟ್ಟು ಬಾರಿಸಲು ಸಿದ್ಧನಾದ ಆ ಕ್ಷಣದಲ್ಲಿ ದೇವರು ಎಲ್ಲೆಲ್ಲೂ ಇದ್ದಾನೆ ಎಂದೆಲ್ಲ ತತ್ತ್ವ ಮಾತನಾಡುವಷ್ಟೇನೂ ನಾನು ಬೆಳೆದಿರಲಿಲ್ಲ.

1975ನೇ ಇಸವಿಯ ಒಂದು ದಿನ ನಾನು ಆ ಹವ್ಯಾಸಿ ತಂಡಕ್ಕೆ ಹೋದದ್ದು ವೇಷಧಾರಿಯಾಗಿ. ಆದರೆ, ಚೆಂಡೆಯವನು ಅನಿವಾರ್ಯ ಕಾರಣದಿಂದ ರಜೆ ಹಾಕಿದ್ದರಿಂದ ನಾನು ಚೀಲದೊಳಗಿದ್ದ ಕೋಲುಗಳನ್ನು ಎತ್ತಿಕೊಳ್ಳಬೇಕಾಯಿತು. ಯಕ್ಷಗಾನ ಆರಂಭವಾಗುವ ಮೊದಲು ಊರಿನ ದೇವಸ್ಥಾನದೊಳಗೆ ಹೋಗಿ ಸ್ತುತಿಪದ್ಯ ಹಾಡುತ್ತ ಯಾವುದಾದರೊಂದು ವೇಷವನ್ನು ಕುಣಿಸುವುದು ವಾಡಿಕೆ.

ಅಷ್ಟರಲ್ಲಿ ನಮ್ಮ ತಂಡದ ಹಿರಿಯರ ಮಧ್ಯೆ ಗುಸುಗುಸು ಆರಂಭವಾಯಿತು. ಚೆಂಡೆಯವನು ಬದಲಾದುದು ಅವರ ಸದ್ಯದ ಸಮಸ್ಯೆ. `ಚೆಂಡೆಯವನ ಹಿನ್ನೆಲೆ ಗಮನಿಸಿದರೆ ಅವನನ್ನು ದೇವಸ್ಥಾನದ ಒಳಗೆ ಕಳುಹಿಸುವುದು ಸರಿಯಾದೀತೊ?' ಎಂಬ ಬಗ್ಗೆ ಚರ್ಚೆ ನಡೆಯಿತು. ಅವರು ಈ ಸಂಗತಿಯನ್ನು ನಯವಾಗಿ ನನ್ನಲ್ಲಿ ಹೇಳಿದಾಗ, `ಅಡ್ಡಿಯಿಲ್ಲ. ಯಕ್ಷಗಾನ ನನ್ನ ಬದುಕು. ದೇವಸ್ಥಾನದ ಒಳಗಾದರೇನು, ಹೊರಗಾದರೇನು! ನಾನು ಹೊರಗೆಯೇ ಕುಳಿತುಕೊಂಡು ಚೆಂಡೆ ನುಡಿಸುತ್ತೇನೆ' ಎಂದೆ. ಸಮಸ್ಯೆ ತಾತ್ಕಾಲಿಕವಾಗಿ ಪರಿಹಾರವಾಯಿತು.

ಭಾಗವತರು, ಮದ್ದಲೆವಾದಕರು, ವೇಷಧಾರಿಗಳು- ಎಲ್ಲರೂ ಬಲಗಾಲಿಟ್ಟು ಹೆಬ್ಬಾಗಿಲು ದಾಟಿ ಒಳಪ್ರವೇಶಿಸುವಾಗ ನಾನು ಹಿಂದುಳಿದೆ. ಧ್ವಜಸ್ತಂಭದ ಬಳಿ ಕುಕ್ಕುರುಗಾಲಿನಲ್ಲಿ ಚೆಂಡೆಯನ್ನು ಕಾಲುಗಳ ಮಧ್ಯಕ್ಕೆ ಎಳೆದುಕೊಂಡು ಭಾಗವತರ ಪದ್ಯ ಆರಂಭಿಸುವ ಧ್ವನಿಯನ್ನು ನಿರೀಕ್ಷಿಸುತ್ತ ಕುಳಿತೆ. ನನ್ನ ಕೈಯಲ್ಲಿ ಜತೆ ಕೋಲುಗಳಿದ್ದರೂ ನಾನು ಮಾತ್ರ ಏಕಾಂಗಿಯಾಗಿದ್ದೆ, ಇನ್ನೇನು ಪದ್ಯ ಆರಂಭವಾಯಿತು, ಎನ್ನುವಾಗ ಬಂದೇ ಬಿಟ್ಟರು ನಮ್ಮ ಗುರುಗಳು, ಗುಂಡಿಬೈಲು ನಾರಾಯಣ ಶೆಟ್ಟರು.

“ಏನು, ನೀನು ಹೊರಗೆ ಚೆಂಡೆ ಹಿಡಿದುಕೊಂಡು ಕುಳಿತದ್ದು...” ಎಂದು ಕೇಳಿದರು. “ನಾನು ದೇವಸ್ಥಾನದ ಒಳಗೆ ಬರಬಾರದಂತೆ?” ಎಂದೆ ಇಳಿಧ್ವನಿಯಲ್ಲಿ. “ಯಾಕಂತೆ?” ಎಂದು ಕೇಳಿ, ಬಳಿಕ ಕಾರಣ ಊಹಿಸಿಕೊಂಡವರಂತೆ, “ಯಾರು ಹಾಗಂದವರು...” ಎಂದವರೇ ನನ್ನ ರಟ್ಟೆ ಹಿಡಿದು ಒಳಗೆ ಎಳೆದುಕೊಂಡು ಹೋದರು. ನಾನು ಎಡಗೈಯಲ್ಲಿ ಚೆಂಡೆ ಎತ್ತಿಕೊಂಡು ಅವರ ಜೊತೆ ಕಾಲೆಳೆದುಕೊಂಡು ಹೋದೆ. `

ಇಲ್ಲಿಯೇ ಬಾರಿಸು... ಏನಾಗುತ್ತದೆ ನೋಡೋಣ' ಎಂದು ಮುಖಮಂಟಪದ ಮುಂದೆ ಕುಳ್ಳಿರಿಸಿದರು. ನಾನು ಬಹುಶಃ ದೇವಸ್ಥಾನವನ್ನು ಪ್ರವೇಶಿಸಿದ್ದು ಅದೇ ಮೊದಲಿರಬೇಕು. ಕೊಂಚ ಭಯದಿಂದಲೇ ಚೆಂಡೆಯನ್ನು ನುಡಿಸಿ ಹೊರಬಂದೆ. ಗುಂಡಿಬೈಲು ನಾರಾಯಣ ಶೆಟ್ಟರೇ ಹೇಳಿದುದರಿಂದ ಅಂದು ಯಾರೂ ಆಕ್ಷೇಪಿಸಲಿಲ್ಲ.

ಇಂದಿನ ಸಾಮಾಜಿಕವಾದ ಎಷ್ಟೋ ಪರಿವರ್ತನೆಗಳಿಗೆ ಪ್ರಗತಿಪರತೆಗೆ ತೆರೆದುಕೊಂಡ ಮೇಲು ವರ್ಗದ ಕೆಲವು ಮಂದಿಯ ಹೃದಯವಂತಿಕೆಯೇ ಕಾರಣ ಎಂಬುದನ್ನು ಯಾವತ್ತೂ ಮರೆಯುವಂತಿಲ್ಲ. ಒಮ್ಮೆ ಹೀಗಾಯಿತು. ನನ್ನ ಭಾಷೆಯ ಬಳಕೆಯ ಕೌಶಲ ವರ್ಧಿಸಲಿ ಎಂದು ಗುರುಗಳು ಒಬ್ಬ ಸಂಪ್ರದಾಯಸ್ಥ ಮೇಲ್ವರ್ಗದವರ ಮನೆಗೆ `ಅರ್ಥಗಾರಿಕೆ' ಕಲಿಯಲು ಕಳುಹಿಸಿದ್ದರು. ನನ್ನ ಜೊತೆಗೆ ವಾರಗೆಯವನೊಬ್ಬನಿದ್ದ. ನಮಗೆ ಕಲಿಸುತ್ತಿರುವ ಮಹನೀಯರು ಔದಾರ್ಯದವರಾಗಿದ್ದರೂ ಅವರ ತಾಯಿ ಕರ್ಮಠ ಸಂಪ್ರದಾಯಸ್ಥೆಯಾಗಿದ್ದರು. ನಾವಿಬ್ಬರೂ ಮನೆಗೆಲಸ, ಹೊಲಗೆಲಸ ಮಾಡಿ ಅವರ ಮನೆಯಲ್ಲಿಯೇ ಉಂಡು ಕಲಿತವರು. ನಮ್ಮ ಊಟ- ಉಪಾಹಾರ- ವಸತಿ ಎಲ್ಲವೂ ಮನೆಯ ಹೊರಗೆಯೇ. ಕಾಲಕ್ರಮೇಣ ನಮ್ಮ ದುಡಿಮೆಯ ನಿಷ್ಠೆ ಆ ಮನೆಯ ಹಿರಿಯ ಹೆಂಗಸಿಗೆ ಮೆಚ್ಚುಗೆಯಾಗಿರಬೇಕು. ಒಮ್ಮೆ ಅವರು, `ಒಳಗೆ ಬನ್ನಿ... ಚಾವಡಿಯಲ್ಲಿ ಚಹಾ ಕುಡಿಯಿರಿ' ಎಂದು ಒಳಗೆ ಕರೆದೂಬಿಟ್ಟರು. ಅವರಲ್ಲಾದ ಬದಲಾವಣೆಯನ್ನು ನೋಡಿ ಅವರ ಸೊಸೆ ಮುಸಿಮುಸಿ ನಕ್ಕಿದ್ದರು.

ನಿಷ್ಠೆ, ಪ್ರಾಮಾಣಿಕ ನಡೆಯಿಂದ ಏನನ್ನೂ ಬದಲಾಯಿಸಬಹುದು ಅಥವಾ ಏನನ್ನಾದರೂ ಬದಲಾಯಿಸಬೇಕಿದ್ದರೆ ಮೊದಲು ನಮ್ಮಲ್ಲಿ  ಪ್ರಾಮಾಣಿಕತೆ, ದುಡಿಮೆಯ ನಿಷ್ಠೆ ಇರಬೇಕಾಗುತ್ತದೆ. ಆದರೂ ಜಡ್ಡುಗಟ್ಟಿದ ಜಗತ್ತು ಕೆಲವೊಮ್ಮೆ ಬದಲಾಗದೇ ಉಳಿಯುತ್ತದೆ. ಹಾಗೊಂದು ಘಟನೆ ನಡೆದೇ ಹೋಯಿತು.

ಯಕ್ಷಗಾನ ವೃತ್ತಿಪರ ಮೇಳವೊಂದಲ್ಲಿ ಕಲಾವಿದರಾಗಲು ನಿರಾಕರಿಸಲ್ಪಟ್ಟ ಸಮುದಾಯದ ಯಾರಾದರೂ ದೇವಾಲಯದಲ್ಲಿ ಧೈರ್ಯ ಮಾಡಿ ಪ್ರಸಾದ ಸ್ವೀಕರಿಸಲು ಮುಂದಾದರೆ, ಆ ಕ್ಷಣದಲ್ಲಿಯೇ ರಕ್ತಕಾರಿ ಸಾಯುತ್ತಾರೆ ಎಂಬ ವದಂತಿ ಎದ್ದಿತ್ತು. ನನ್ನಲ್ಲಿ ಈ ಬಗ್ಗೆ ಯಾರೋ ಪ್ರಸ್ತಾಪಿಸಿದ್ದರು. `ನೀವು ಪ್ರಸಾದ ಸ್ವೀಕರಿಸಲು ಸಿದ್ಧವಿದ್ದೀರಾ?' ಎಂದು ಕೇಳಿದ್ದರು. ನಾನು ನಗುತ್ತ ಹೇಳಿದ್ದೆ, `ಖಂಡಿತ, ಸಿದ್ಧನಿದ್ದೇನೆ. ಆದರೆ, ಪ್ರಸಾದ ಸ್ವೀಕರಿಸಿದ ಕ್ಷಣದಲ್ಲಿ ನಾನು ರಕ್ತಕಾರಿ ಸಾಯದಿದ್ದರೆ ನನಗೆ ಪ್ರಸಾದ ಕೊಟ್ಟ ದೇವರ ಪಾತ್ರಿಯನ್ನು ತತ್‌ಕ್ಷಣ ನೆಲಕ್ಕೆ ಕೆಡಹುತ್ತೇನೆ'.

ನಾನು ಈ ಬಗ್ಗೆ ಆಸಕ್ತಿ ವಹಿಸಲಿಲ್ಲ ಎಂಬುದು ಬೇರೆ ಮಾತು. ಇವತ್ತು ಆ ಸ್ಥಿತಿಯೂ ಬದಲಾಗಿ ಕೆಲವು ಸಮುದಾಯಗಳಿಗೆ ಮುಚ್ಚಿದ್ದ ವೃತ್ತಿಪರ ಮೇಳದ ಬಾಗಿಲುಗಳು ಮತ್ತೆ ತೆರೆದುಕೊಂಡಿವೆ.

ಇಂಥ ಘಟನೆಗಳಲ್ಲಿ ನಾನು ಕಲಿತದ್ದು ಬಹಳ. ಕಣ್ಣಿದ್ದವರನ್ನೂ ಕಣ್ಣಿಲ್ಲದವರನ್ನೂ ಸಮಾನವಾಗಿ ಕಾಣುವ ಕಣ್ಣುಗಳು ನನ್ನಲ್ಲಿ ತೆರೆದುಕೊಂಡಿವೆ. ಅಂಧರಿಗಾಗಲಿ, ವಿಶೇಷ ಸಾಮರ್ಥ್ಯದ ವಿದ್ಯಾರ್ಥಿಗಳಿಗಾಗಲಿ ಕಲಿಸುವಾಗ ಇಂಥ ಅನುಭವಗಳೇ ಕೈಹಿಡಿದು ನಡೆಸಿವೆ. ಇವೇ, ಸಾಮಾಜಿಕವಾಗಿ ಮೇಲ್‌ಸ್ತರದಲ್ಲಿರುವ ಸಮುದಾಯವದವರನ್ನೂ ಕೆಳಸ್ತರದ ಬುಡಕಟ್ಟಿನ ಸಮುದಾಯವರನ್ನೂ ಸಮದರ್ಶಿತ್ವದಿಂದ ಕಾಣುವ ಎಚ್ಚರವನ್ನು ಕೊಟ್ಟಿವೆ.

ಎಲ್ಲ ಪಾದಗಳಲ್ಲೂ ಅದೇ ತಾಳದ ಹೆಜ್ಜೆಗಳನ್ನು ಏಕಪ್ರಕಾರವಾಗಿ ಕುಣಿಸಿದ್ದೇನೆ.

                                                                 -------------

`ಅದೇ ತಾಳ... ಆದರೂ ಕುಣಿಯಲಿಲ್ಲ ನೀನು' ಎಂದವರೇ ಗುರು ವೀರಭದ್ರ ನಾಯಕರು ಬಿಲ್ಲಿನ ಕೋಲಿನಲ್ಲಿ ಬಾರಿಸಿಯೇ ಬಿಟ್ಟರು. ಬಡಿಯುತ್ತಲೇ ಇದ್ದರು. ಗುರುಗಳಾದ ಹಿರಿಯಡಕ ಗೋಪಾಲ ರಾಯರು ತಡೆದು, `ಎಂತಕ್ಕೆ ಮಕ್ಕಳಿಗೆ ಹೊಡಿತೀರಿ?' ಎಂದು ಅವರನ್ನು ಸುಮ್ಮನಾಗಿಸಿದರು.

ದೀಪಾವಳಿ ಸಂದರ್ಭದಲ್ಲಿ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳಿಗೆ ಕೆಲವು ದಿನ ರಜೆಯಿರುತ್ತಿತ್ತು. ನಾನು ಎಂದಿನಂತೆ ಗುರುಗಳ ಮನೆಗೆ ಹೋಗಿ ಹೊಲದ ಕೆಲಸದಲ್ಲಿ ಸೇರಿಕೊಳ್ಳುತ್ತಿದ್ದೆ. ಯಾಕೋ ಯಕ್ಷಗಾನ ಸಾಕೆನ್ನಿಸಿತ್ತು. ಓಲಗ - ಕಾಳಗಗಳ ದೀರ್ಘ ಬಾಯಿತಾಳಗಳು ನನಗೆ ಕಂಠಪಾಠವಾಗದೆ, ಬರೆದುಕೊಳ್ಳಲೂ ಆಗದೆ ಒದ್ದಾಡುತ್ತಿದ್ದೆ. ಆದರೂ ದೀಪಾವಳಿ ರಜೆ ಮುಗಿದದ್ದೇ ಯಕ್ಷಗಾನ ಕೇಂದ್ರಕ್ಕೆ ಮರಳಿ ಹೋದೆ. ಅಲ್ಲಿ ತೈ ತಾಂ ತೈಯತ್ತ ದಿನ್ನ ತೈ ತಾಂ ತೈಯತ್ತ ದಿನ್ನ... ಸಲಾಂ ಹೆಜ್ಜೆ ಕುಣಿಯುವಾಗ ಎಡಗೈಯ ಬಿಲ್ಲು ಕಾಲಿಗೆ ತಗುಲಿ ಬಿದ್ದುಬಿಟ್ಟೆ. ಗುರುಗಳು ಅದೇ ಬಿಲ್ಲನ್ನು ಎತ್ತಿ ಹೊಡೆದುಬಿಟ್ಟಿದ್ದರು. ನನಗೆ ತುಂಬ ಬೇಸರವಾಯಿತು. ನಾನು ಈ ಸಂಕೀರ್ಣ ಹೆಜ್ಜೆಗಳನ್ನು ದಕ್ಕಿಸಿಕೊಳ್ಳಲಾರೆ ಅಂತನ್ನಿಸಿತು. ಸಂಜೆ ದೇವಣ್ಣಯ್ಯನವರ ಹೊಟೇಲಿಗೆ ಬಂದವನೇ, ಅಲ್ಲಿಂದ ಯಕ್ಷಗಾನ ಕೇಂದ್ರಕ್ಕೆ ಮರಳದೆ, ನೇರವಾಗಿ ಮನೆಗೆ ಬಂದು ಬಿಟ್ಟೆ. ಮನೆಯೆಂದರೆ ನಾನು ಠಿಕಾಣಿ ಹೂಡಿದ್ದ ಗುರುಗಳಾದ ಗುಂಡಿಬೈಲು ನಾರಾಯಣ ಶೆಟ್ಟರ ಮನೆಯಲ್ಲ. ಅವರು ಬೈದುಬಿಟ್ಟಾರೆಂಬ ಭಯ. ಹಾಗಾಗಿ, ಅಕ್ಕನ ಮನೆಗೆ ಹೋದೆ.

ನಾನು ಕೇಂದ್ರಕ್ಕೆ ಬಾರದಿರುವುದನ್ನು ನೋಡಿ ಹಿರಿಯಡಕ ಗೋಪಾಲರಾಯರು ಉಡುಪಿಯಲ್ಲಿ ಹೂ ಮಾರುತ್ತಿದ್ದ ನನ್ನ ಅಕ್ಕನ ಗಂಡನಲ್ಲಿ ಕಾಳಜಿಯಿಂದ ವಿಚಾರಿಸಿದರಂತೆ. ಈ ಸಂಗತಿ ಗೊತ್ತಾಗಿ, ನನ್ನನ್ನು ಮತ್ತೆ ಯಕ್ಷಗಾನ ಕೇಂದ್ರಕ್ಕೆ ಕಳುಹಿಸಬಹುದು ಎಂಬ ಭಯದಿಂದ ಅಕ್ಕನ ಮನೆ ಬಿಟ್ಟು ಗುಂಡಿಬೈಲು ನಾರಾಯಣ ಶೆಟ್ಟರ ಮನೆಗೆ ಬಂದೆ. ಅವರು, “ಇವತ್ತು ಕ್ಲಾಸು ಇಲ್ಲವೆ, ಯಕ್ಷಗಾನ ಕೇಂದ್ರದಲ್ಲಿ...” ಅಂತ ಕೇಳಿದರು. ನಾನು, `ಇಲ್ಲ' ಎಂದೆ. ಮೆಲ್ಲನೆ, `ನಾನು ಕೇಂದ್ರಕ್ಕೆ ಹೋಗುವುದಿಲ್ಲ' ಎಂದೆ. ನಾರಾಯಣ ಶೆಟ್ಟರು ನನಗೆ ಚೆನ್ನಾಗಿ ಬೈದುಬಿಟ್ಟರು. `ತತ್‌ಕ್ಷಣ ಮರಳಿ ಹೋಗು, ವೀರಭದ್ರ ನಾಯಕರಲ್ಲಿ ಕ್ಷಮೆ ಕೇಳು' ಎಂದು ಗದರಿಸಿದರು. ಆಗ ಗುರುಗಳ ಪತ್ನಿ, `ಅವನಿಗಿಷ್ಟವಿಲ್ಲದಿದ್ದಲ್ಲಿ ಹೋಗುವುದು ಬೇಡ ಬಿಡಿ... ಯಾಕೆ ಬೈಯುತ್ತೀರಿ?' ಎಂದು ನನ್ನ ಪರವಹಿಸಿದರು. ಅಂತೂ ಗುರುಪತ್ನಿಯ ಒಲುಮೆಯಿಂದ ಯಕ್ಷಗಾನ ಕೇಂದ್ರಕ್ಕೆ ಹೋಗದೆ ಅವರ ಮನೆಯಲ್ಲಿಯೇ ಉಳಿದೆ. ಯಥಾಪ್ರಕಾರ, ಹೊಲಗೆಲಸ. ಒಮ್ಮೆ ನಾಟಿ ಮಾಡಿದ ಭತ್ತದ ತೆನೆಯನ್ನು ಹೊತ್ತುಕೊಂಡು ಗದ್ದೆ ಹುಣಿಯಲ್ಲಿ ನಡೆದುಬರುತ್ತಿದ್ದೆ. ದೂರದಲ್ಲಿ ಟೋಪಿ ಕಾಣಿಸಿದಂತಾಯಿತು. ಹತ್ತಿರವಾಗುತ್ತ ಆಕೃತಿ ಸ್ಪಷ್ಟವಾಯಿತು. ಗುರು ವೀರಭದ್ರ ನಾಯಕರು! ಗುಂಡಿಬೈಲು ನಾರಾಯಣ ಶೆಟ್ಟರ ಮನೆಗೆ ಅವರು ಬರುವುದು ಹೊಸತೇನೂ ಅಲ್ಲ.

ನಾನು ಮಾತ್ರ ಮರೆಯಲ್ಲಿ ಅಡಗಿದೆ. ವೀರಭದ್ರ ನಾಯಕರೂ ಗುಂಡಿಬೈಲು ನಾರಾಯಣ ಶೆಟ್ಟರೂ ಅದೂ ಇದೂ ಮಾತನಾಡಿಕೊಳ್ಳುತ್ತ ನನ್ನ ವಿಷಯಕ್ಕೆ ಬಂದರು. `ಸಂಜೀವಾ' ನನಗೆ ಕರೆಬಂತು. ನಾನು ಗುರುವೀರಭದ್ರ ನಾಯಕರ ಮುಂದೆ ತಲೆತಗ್ಗಿಸಿ ನಿಂತೆ. `ನಾನು ಕಲಿಯುವ ದಿನಗಳಲ್ಲಿ ಎಷ್ಟು ಕಷ್ಟ ಪಟ್ಟಿದ್ದೇನೆ ಗೊತ್ತೆ?' ಎಂದವರೇ ನನ್ನನ್ನು ಮತ್ತೆ ಯಕ್ಷಗಾನ ಕೇಂದ್ರಕ್ಕೆ ಬರುವಂತೆ ಸೂಚಿಸಿದರು. ಗುಂಡಿಬೈಲು ನಾರಾಯಣ ಶೆಟ್ಟರು, `ನಾಯಕರು ಹೇಳಿದ್ದು ಕೇಳಿಸಿತಲ್ಲವೆ? ನಡಿ' ಎಂದರು.

ಮತ್ತೆ ಅಲ್ಲಿ ನಿಲ್ಲುವಂತಿಲ್ಲ. ವೀರಭದ್ರ ನಾಯಕರನ್ನು ಅನುಸರಿಸಿದೆ. ಅವರೊಂದಿಗೆ ಉಡುಪಿಯ ಇಂದ್ರಾಳಿಗೆ ಬರುವ ಬಸ್ಸು ಹತ್ತಿದೆ. ಆವಾಗಲೆಲ್ಲ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದುದೇ ಕಡಿಮೆ. ನನ್ನ ಟಿಕೆಟಿನ ದುಡ್ಡನ್ನೂ ಅವರೇ ಕೊಟ್ಟರು. ಬರುತ್ತ ನನ್ನ ಸಮಸ್ಯೆಯನ್ನು ಅವರಲ್ಲಿ ಹೇಳಿಕೊಂಡೆ. `ನನಗೆ ಬರೆಯಲು ಬರುವುದಿಲ್ಲ, ಓದಲು ಬರುವುದಿಲ್ಲ. ಅರ್ಧ- ಮುಕ್ಕಾಲು ಗಂಟೆಗಳಷ್ಟು ದೀರ್ಘವಾಗಿ ಕುಣಿಯಬೇಕಾದ ಒಡ್ಡೋಲಗಗಳ ಬಾಯಿತಾಳಗಳನ್ನು ನೆನಪಿಟ್ಟುಕೊಳ್ಳುವುದು ನನಗೆ ಕಷ್ಟವಾಗುತ್ತದೆ' ಎಂದೆ. ಆ ಬಳಿಕ ವೀರಭದ್ರ ನಾಯಕರಿಗೆ ನನ್ನ ಮೇಲಿನ ಅಕ್ಕರೆ ಹೆಚ್ಚಾಯಿತು. ನನಗೆ ಅರ್ಥವಾಗುವಂತೆ ವಿಶೇಷ ಕಾಳಜಿಯಿಂದ ಬೋಧಿಸಲಾರಂಭಿಸಿದರು. ನನಗೆ ಹೇಳಿಕೊಡುವಂತೆ ಸಹಪಾಠಿಗಳಾದ ರಾಮನಿಗೂ ಮಹಾಬಲನಿಗೂ ಹೇಳಿದರು.

ಇವತ್ತು ನನಗೆ ನೆನಪಿಸಿಕೊಂಡರೆ ಬೆರಗಾಗುತ್ತದೆ. ನಮ್ಮ ಹಿರಿಯ ಕಲಾವಿದರು ಎಷ್ಟೊಂದು ಕಲಾಸಂಪನ್ನರಾಗಿದ್ದರು! ವೀರಭದ್ರನಾಯಕರ ಕುಣಿತ, ಹಸ್ತಪಾದಗಳ ಚಲನೆ, ನಿಲುವು, ಆಯುಧದ ಬಳಕೆ ಎಲ್ಲವೂ ಪ್ರಬುದ್ಧ ಕಲಾಕಾರನಂತಿತ್ತು. ಬಡಗುತಿಟ್ಟಿನಲ್ಲಿ ಮಟಪಾಡಿ- ಹಾರಾಡಿಗಳೆಂಬ ಎರಡು ಪ್ರಭೇದಗಳಿವೆ. ಇವುಗಳ ಅನನ್ಯತೆ ಏನು ಎಂಬುದನ್ನು ನಾನು ಕುಣಿದು ತೋರಿಸಬಲ್ಲೆ. ಇವೆರಡನ್ನೂ ಪ್ರತ್ಯೇಕ ಪ್ರತ್ಯೇಕವಾಗಿ ಪರಿಗಣಿಸುವ ಬಗ್ಗೆ ನನಗೆ ಅಷ್ಟೊಂದು ಒಲವಿಲ್ಲವೆಂಬುದು ಬೇರೆ ಮಾತು. ಗುರು ವೀರಭದ್ರ ನಾಯಕರು ಮಟಪಾಡಿ ವೀರಭದ್ರ ನಾಯಕರೆಂದೇ ಪ್ರಸಿದ್ಧರು. ಅನನ್ಯ ಶೈಲಿಯೊಂದರ ಮಾರ್ಗಪ್ರವರ್ತಕರೂ ಹೌದು.

ಯಕ್ಷಗಾನದಲ್ಲಿ ದೇವದಾಸಿ ಕುಣಿತದ ದಟ್ಟ ಪ್ರಭಾವವಿರಬೇಕೆಂಬುದು ನನ್ನ ಪ್ರಮೇಯ. ಇಲ್ಲಿನ ಬಾಗುಬಳಕುಗಳೆಲ್ಲ ದೇವದಾಸಿ ಪರಂಪರೆಯ ಪ್ರಭಾವದಿಂದ ಬಂದಿರುವಂಥವಾಗಿರಬಹುದು. ಬಡಗುತಿಟ್ಟು ನಾಟ್ಯಶೈಲಿಯ ಸೂಕ್ಷ್ಮಗಳನ್ನು ಅರಿಯಬೇಕಾದರೆ ದೇವಸ್ಥಾನದ ಆವರಣಗಳಲ್ಲಿ ಮಾಸಿ ಹೋಗಿದ್ದ ದೇವದಾಸಿಯರ ಬದುಕಿನ ಕಠಿಣ ಹೆಜ್ಜೆಗಳನ್ನು ಮತ್ತೆ ನಮ್ಮ ಮಾನಸಭಿತ್ತಿಯಲ್ಲಿ ಮೂಡಿಸಿಕೊಳ್ಳಬೇಕಾಗಿದೆ. ಇದನ್ನು ವಿವರಿಸಬೇಕಾದರೆ ಬರೆದು ತೋರುವುದು ಕಷ್ಟ. ಕುಣಿದೇ ಕಾಣಿಸಬೇಕಷ್ಟೆ.

                                                            ------------

`ಆ ಮನುಷ್ಯ ಬರೆಯುವುದರಲ್ಲಿ ಬಹಳ ದೊಡ್ಡವರು ನಿಜ, ಕುಣಿದು ಕಾಣಿಸುವುದರಲ್ಲಿ ಹೇಗೊ?' ಎಂದು ಯೋಚಿಸುತ್ತಲೇ ನಾನು ನೀಲಾವರ ರಾಮಕೃಷ್ಣಯ್ಯನವರನ್ನು ಅನುಸರಿಸಿದೆ. `ಬಾ ಬಾ ಬಂದದ್ದು ತಡವಾಯಿತು. ಅವರು ತುಂಬ ಕಠಿಣ ಜನ. ಬೈದು ಬಿಡುತ್ತಾರೆ' ಎನ್ನುತ್ತ ನನ್ನನ್ನು ಯಕ್ಷಗಾನ ಕೇಂದ್ರದ ಕೊಠಡಿಯೊಳಕ್ಕೆ ಕರೆದೊಯ್ದು ಬಾಗಿಲ ಬಳಿ ನಿಲ್ಲಿಸಿದರು.

1982ರ ಕಾರ್ಗಾಲದ ಒಂದು ದಿನವದು. ಹೊರಗೆ ಜಡಿಮಳೆ. ಒಳಗೆ `ಭೀಷ್ಮ ವಿಜಯ'ದ ಹೆಜ್ಜೆಗಳು ಕೇಳಿಸುತ್ತಿದ್ದವು. ಬೆಳ್ಳನೆಯ ಕೂದಲನ್ನು ಕೊಂಚ ಇಳಿಬಿಟ್ಟು, ಬನಿಯನ್- ಬಿಳಿಯ ಕಚ್ಚೆ ಧರಿಸಿ, ಎಡಗೈಯನ್ನು ಸೊಂಟಕ್ಕೆ ಊರಿಕೊಂಡು ಅವರು ಅಭಿನಯವನ್ನು ಕಲಿಸುತ್ತಿದ್ದರು. ನನ್ನತ್ತ ನೋಡಿದವರೇ, “ಈಗ ರಿಹರ್ಸಲ್ ನಡೆಯುತ್ತಿರುವುದು ಕಾಣಿಸುತ್ತಿಲ್ಲವೆ? ಮತ್ತೆ ಬರಲಿ” ಎಂದು ನಿಷ್ಠುರವಾಗಿ ಬಿಟ್ಟರು.

ಆ ವರ್ಷ ಮಾಯದಂಥ ಮಳೆ ಬಂದು ಉಡುಪಿಯ ಕೆಲಭಾಗಗಳು ಮುಳುಗಿಹೋಗಿದ್ದವು. ನೆರೆಯಲ್ಲಿ ತೇಲಿಹೋಗುತ್ತಿದ್ದ ತೆಂಗಿನಕಾಯಿಯೊಂದು ಯಾವುದೋ ಆಸರೆಗೆ ಸಿಲುಕಿ ನಿಂತುಬಿಟ್ಟಂತೆ ನಾನು ಗೋಡೆಗೆ ಆತುಕೊಂಡು ನಿಂತಿದ್ದೆ. ಜನ ನೀರಿಳಿಯುವುದನ್ನು ಕಾಯುತ್ತಿದ್ದರು. ನಾನು, ಒಳಗೆ ನಡೆಯುವ ರಿಹರ್ಸಲ್ ನಿಲ್ಲುವುದನ್ನೇ ಕಾಯುತ್ತ ನಿಂತಿದ್ದೆ.

(ಸಶೇಷ)
ನಿರೂಪಣೆ: ಹರಿಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT