ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಿದ್ದೀತು ಈ ಬಾರಿ ಚುನಾವಣಾ ವಿಷಯ?

Last Updated 19 ಮಾರ್ಚ್ 2018, 19:30 IST
ಅಕ್ಷರ ಗಾತ್ರ

2019ರ ಲೋಕಸಭಾ ಚುನಾವಣೆಯನ್ನು ಯಾವ ವಿಷಯ ಇಟ್ಟುಕೊಂಡು ಎದುರಿಸಲಾಗುತ್ತದೆ? ಚುನಾವಣೆ ನಡೆಯಲು ಇನ್ನೊಂದು ವರ್ಷ ಬಾಕಿ ಇದೆ. ಇನ್ನು ಕೆಲವು ತಿಂಗಳ ಅವಧಿಯಲ್ಲಿ ರಾಜಕೀಯ ಪಕ್ಷಗಳು ಮತ್ತು ಮೈತ್ರಿಕೂಟಗಳು ತಮ್ಮ ತಮ್ಮ ಸ್ಥಾನವನ್ನು ಗುರುತಿಸಿಕೊಳ್ಳುತ್ತವೆ. ಮತದಾರರಿಗೆ ರವಾನಿಸಬೇಕಿರುವ ಸಂದೇಶವನ್ನು ಅತ್ಯಂತ ಪರಿಣಾಮಕಾರಿಯಾಗಿ ಸಿದ್ಧಪಡಿಸುವುದು, ಪ್ರಸಾರ ಮಾಡುವುದು ಹೇಗೆ ಎಂಬುದನ್ನು ನಿರ್ಧರಿಸಲು ಅವು ಜಾಹೀರಾತು ಏಜೆನ್ಸಿಗಳು, ಚುನಾವಣಾ ಏಜೆನ್ಸಿಗಳು ಮತ್ತು ಮಾರ್ಕೆಟಿಂಗ್ ತಜ್ಞರ ಬಳಿ ಹೋಗುತ್ತವೆ. ಬಿಜೆಪಿಯು 2014ರಲ್ಲಿನ ತನ್ನ ಯಶಸ್ವೀ ಚುನಾವಣಾ ಅಭಿಯಾನದ ವೇಳೆ ‘ಒಗಲ್ವಿ ಅಂಡ್ ಮೇಥರ್’ ಜಾಹೀರಾತು ಕಂಪನಿಯ ಸೇವೆಯನ್ನು, ಕಾಂಗ್ರೆಸ್ ಪಕ್ಷವು ಡೆನ್ಸು ಕಂಪನಿಯ ಸೇವೆಯನ್ನು ಪಡೆದಿದ್ದವು. ನನಗೆ ನೆನಪಿರುವಂತೆ ಭಾರತದ ರಾಜಕಾರಣದಲ್ಲಿ ಜಾಹೀರಾತು ಕಂಪನಿಯ ಸೇವೆಯನ್ನು ಮೊದಲ ಬಾರಿಗೆ ಪಡೆದಿದ್ದು 1985ರಲ್ಲಿ. ಆಗ ರಾಜೀವ್ ಗಾಂಧಿ ಅವರು ‘ರೆಡಿಫ್ಯುಷನ್’ ಕಂಪನಿಯ ಸೇವೆಯನ್ನು ಪಡೆದಿದ್ದರು.

ಸಾರ್ವಜನಿಕರಿಗೆ ಅತ್ಯಂತ ಹೆಚ್ಚು ಇಷ್ಟವಾಗುವ ಚುನಾವಣಾ ಪ್ರಚಾರ ಸಂದೇಶಗಳನ್ನು ರೂಪಿಸಲು ಪ್ರಯತ್ನಿಸುವ ಪವರ್ ಪಾಯಿಂಟ್ ಪ್ರೆಸೆಂಟೇಷನ್ ನೀಡುವ ಸೂಟುಧಾರಿಗಳನ್ನು ನಮ್ಮ ರಾಜಕಾರಣಿಗಳು ಈ ಬಾರಿಯ ಚುನಾವಣೆ ಸಂದರ್ಭದಲ್ಲೂ ಭೇಟಿ ಮಾಡುತ್ತಾರೆ. ಸಾರ್ವಜನಿಕ ಚರ್ಚೆಗಳ ಮೇಲೆ ಹಿಡಿತ ಸಾಧಿಸಲು ಮಾರ್ಕೆಟಿಂಗ್‌ ಚತುರರು ‘ಯೆ ದಿಲ್ ಮಾಂಗೆ ಮೋರ್’, ‘ಯೆ ಅಂದರ್‌ ಕಿ ಬಾತ್‌ ಹೈ’ ಮತ್ತು ‘ಅಚ್ಛೇ ದಿನ್ ಆನೆವಾಲೆ ಹೈ’ ಹಾಗೂ ಇವುಗಳಂತಹ ಘೋಷವಾಕ್ಯಗಳನ್ನು ಸಿದ್ಧಪಡಿಸುತ್ತಾರೆ. ಸಾಮಾಜಿಕ ಜಾಲತಾಣಗಳು ಹಾಗೂ ತಂತ್ರಜ್ಞಾನದ ಮೇಲಿನ ದೊಡ್ಡ ಪ್ರಮಾಣದ ಹೂಡಿಕೆಯಿಂದ ಸಿಕ್ಕಂತಹ ಪ್ರಯೋಜನ ಹಾಗೂ 2014ರ ಚುನಾವಣೆ ಕಲಿಸಿದ ಇತರ ಪಾಠಗಳು 2019ರ ಚುನಾವಣೆ ವೇಳೆ ಕ್ರಿಯೆ ರೂಪದಲ್ಲಿ ಕಾಣಸಿಗಲಿವೆ. ಚುನಾವಣೆ ವೇಳೆ ಹಲವು ಜನ ಕೈತುಂಬ ಹಣ ಸಂಪಾದಿಸಲಿದ್ದಾರೆ.

2014ರ ಚುನಾವಣೆ ವೇಳೆ ತಾನು ₹ 714 ಕೋಟಿ ವೆಚ್ಚ ಮಾಡಿದ್ದಾಗಿ ಬಿಜೆಪಿ ಚುನಾವಣಾ ಆಯೋಗಕ್ಕೆ ತಿಳಿಸಿದೆ. ಕಾಂಗ್ರೆಸ್ ಪಕ್ಷ ₹ 516 ಕೋಟಿ ವೆಚ್ಚ ಮಾಡಿದೆ. ಒಂದು ರಾಜ್ಯದಲ್ಲಿ ಮಾತ್ರ ಇರುವ ಶರದ್ ಪವಾರ್ ಅವರ ಎನ್‌ಸಿಪಿಯಂತಹ ಪಕ್ಷವು ಚುನಾವಣೆಯಲ್ಲಿ ತಾನು ₹ 51 ಕೋಟಿ ಖರ್ಚು ಮಾಡಿರುವುದಾಗಿ ಹೇಳಿದೆ. 2019ರಲ್ಲಿ ಈ ಮೊತ್ತಗಳು ದುಪ್ಪಟ್ಟು ಅಥವಾ ಮೂರುಪಟ್ಟು ಹೆಚ್ಚಾಗುವ ನಿರೀಕ್ಷೆ ಇಟ್ಟುಕೊಳ್ಳಬಹುದು. ಅಭ್ಯರ್ಥಿಗಳು ನಗದು ರೂಪದಲ್ಲಿ ಮಾಡುವ ವೆಚ್ಚಗಳು ಅಥವಾ ಪಕ್ಷಗಳ ಪರವಾಗಿ ಕಂಪನಿಗಳು ಮಾಡುವ ವೆಚ್ಚಗಳು ಇದರಲ್ಲಿ ಸೇರಿಲ್ಲ (ಈ ರೀತಿಯ ವೆಚ್ಚಗಳು ಭಾರತದಲ್ಲಿ ಸಾಮಾನ್ಯ). ಪ್ರಮುಖ ಅಭ್ಯರ್ಥಿಗಳು ಸುಲಭವಾಗಿ ₹ 15 ಕೋಟಿಯವರೆಗೆ ಖರ್ಚು ಮಾಡುತ್ತಾರೆ. ಇವರು ಮಾಡುವ ಈ ಖರ್ಚಿನಲ್ಲಿ ಟಿಕೆಟ್‌ ಪಡೆಯಲು ಮಾಡುವ ಖರ್ಚು ಒಳಗೊಂಡಿರುವುದಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ನನ್ನ ಅಂದಾಜಿನ ಪ್ರಕಾರ 2019ರ ಮೇ ತಿಂಗಳಿಗೆ ಮುನ್ನ ಕನಿಷ್ಠ ₹ 25 ಸಾವಿರ ಕೋಟಿಯಷ್ಟು ಹಣ ಕೈಯಿಂದ ಕೈಗೆ ಹರಿದಿರುತ್ತದೆ. ಇಷ್ಟೊಂದು ಹಣ ಖರ್ಚಾಗುತ್ತದೆ ಎಂಬುದನ್ನು ನಂಬಲು ಆಗದು ಎನ್ನುವುದು ನಿಮ್ಮ ನಿಲುವಾಗಿದ್ದರೆ, ಇಕನಾಮಿಕ್ ಟೈಮ್ಸ್‌ನಲ್ಲಿ ಬಂದಿರುವ ವರದಿಯೊಂದನ್ನು ಗಮನಿಸಬೇಕು. ಅದು ಅಧ್ಯಯನವೊಂದನ್ನು ಉಲ್ಲೇಖಿಸಿದೆ. 2017ರಲ್ಲಿ ನಡೆದ ಉತ್ತರ ಪ್ರದೇಶ ಚುನಾವಣೆಯಲ್ಲಿ ₹ 5,500 ಕೊಟಿ ವೆಚ್ಚವಾಗಿದೆ ಎಂದು ಈ ಅಧ್ಯಯನ ಅಂದಾಜಿಸಿದೆ.

ದಿನಪತ್ರಿಕೆಗಳು ಮತ್ತು ಟಿ.ವಿ. ವಾಹಿನಿಗಳಿಗೆ ರಾಜಕೀಯ ಜಾಹೀರಾತುಗಳ ಮೂಲಕ ಹೆಚ್ಚುವರಿ ಆದಾಯ ದೊರೆಯುತ್ತದೆ. ಇಂತಹ ಜಾಹೀರಾತುಗಳಲ್ಲಿ ಬಹುತೇಕವು ಸುದ್ದಿಯ ಸೋಗಿನಲ್ಲಿ ಇರುತ್ತವೆ. ಹಲವು ರೀತಿಯಲ್ಲಿ ‘ಡೀಲ್‌’ಗಳು ಕುದುರುತ್ತವೆ. ನೀರವ್‌ ಮೋದಿ ಹಗರಣ ನಮಗೆ ತೋರಿಸಿಕೊಟ್ಟಿರುವಂತೆ,
ಭ್ರಷ್ಟನಲ್ಲದ ನಾಯಕನೊಬ್ಬ ಇರುವ ಮಾತ್ರಕ್ಕೇ ಭ್ರಷ್ಟಾಚಾರ ಕೊನೆಗೊಳ್ಳುವುದೂ ಇಲ್ಲ, ಆರಂಭವಾಗುವುದೂ ಇಲ್ಲ.

ಯಾವ ಪಕ್ಷದ ಜೊತೆ ಮೈತ್ರಿ ಸಾಧಿಸಿದರೆ ಹೆಚ್ಚು ಲಾಭ ಬರುತ್ತದೆ ಎಂಬ ಬಗ್ಗೆ ಪಕ್ಷಗಳು ನಿರ್ಭಾವುಕವಾಗಿ ಪರಿಶೀಲನೆ ನಡೆಸುತ್ತವೆ. ಆರಂಭದಲ್ಲಿನ ಅನುಕೂಲಗಳನ್ನು ಬಿಟ್ಟುಕೊಟ್ಟು, ಮುಂದಿನ ಹಂತಗಳಲ್ಲಿ ಇನ್ನಷ್ಟು ಲಾಭವಾಗುತ್ತದೆ, ಅನುಕೂಲವೂ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಕೆಲವು ನಾಯಕರು ಆಯ್ಕೆಗಳನ್ನು ಮುಕ್ತವಾಗಿ ಇರಿಸಿಕೊಳ್ಳುತ್ತಾರೆ.

ರಾಹುಲ್‌ ಗಾಂಧಿ ಅವರಿಂದ ಎಷ್ಟು ದೂರ ಉಳಿದುಕೊಳ್ಳಬೇಕು ಅಥವಾ ಅವರಿಗೆ ಎಷ್ಟು ಹತ್ತಿರವಾಗಿರಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲು 2019ಕ್ಕೆ ಮೊದಲೇ ನಡೆಯುವ ಮಧ್ಯ ಪ್ರದೇಶ, ಕರ್ನಾಟಕ, ರಾಜಸ್ಥಾನ ಮತ್ತು ಛತ್ತೀಸಗಡ ವಿಧಾನಸಭಾ ಚುನಾವಣೆಗಳು ಹಲವು ಸ್ಥಳೀಯ ಪಕ್ಷಗಳಿಗೆ ನೆರವಾಗಲಿವೆ. ಭಾರತೀಯ ಜನತಾ ಪಕ್ಷವು ಚುನಾವಣೆಗಳಲ್ಲಿ ಕಳೆದ ಆರು ವರ್ಷಗಳಿಂದ ಅದ್ಭುತವಾದ ಪ್ರದರ್ಶನ ನೀಡುತ್ತಿರುವುದಕ್ಕೆ ಕಾರಣ ಏನು ಎಂಬುದು ಅದರ ವಿರೋಧಿಗಳಿಗೆ ಸಂಪೂರ್ಣವಾಗಿ ಅರ್ಥವಾಗಿರುತ್ತದೆ. ಈ ಪಕ್ಷಗಳು ಬಿಜೆಪಿಯ ಶಕ್ತಿ–ದೌರ್ಬಲ್ಯಗಳನ್ನು ಸಂಪೂರ್ಣವಾಗಿ ಪರಿಶೀಲಿಸಿರುತ್ತವೆ. ಹೀಗೆ ಅರ್ಥವಾಗಿರುವ ಕಾರಣದಿಂದಾಗಿಯೇ, ಅಸಾಧ್ಯ ಎನ್ನುವಂತಹ ಹೊಂದಾಣಿಕೆಗಳು ಚುನಾವಣಾ ಕಣದಲ್ಲಿ ಸಾಧ್ಯವಾಗಿವೆ (ಉತ್ತರ ಪ್ರದೇಶದಲ್ಲಿ ಈಚೆಗೆ ಮಾಯಾವತಿ ಮತ್ತು ಅಖಿಲೇಶ್ ಯಾದವ್ ಅವರು ಮಾಡಿಕೊಂಡ ಹೊಂದಾಣಿಕೆ ಒಂದು ಉದಾಹರಣೆ).

ನಾವು ಈ ಲೇಖನದ ಆರಂಭದಲ್ಲಿ ಎತ್ತಿದ ಪ್ರಶ್ನೆಗೆ ಮರಳೋಣ. ಈ ಬಾರಿಯ ಚುನಾವಣೆಯಲ್ಲಿ ಚರ್ಚೆಯ ವಿಷಯ ಯಾವುದಾಗಿರು
ತ್ತದೆ? ಇದು, ಚುನಾವಣೆಯ ವೇಳೆಗೆ ನಡೆಯುವ ಚರ್ಚೆಗಳ ಮೇಲೆ ಯಾರು ನಿಯಂತ್ರಣ ಹೊಂದಿರುತ್ತಾರೆ ಎಂಬುದನ್ನು ಆಧರಿಸಿದೆ. 2014ರಲ್ಲಿನ ಚರ್ಚೆಯ ವಿಷಯವನ್ನು ನಿರ್ಧರಿಸಿದ್ದು ಅಂದಿನ ವಿರೋಧ ಪಕ್ಷವೇ ವಿನಾ ಆಡಳಿತ ಪಕ್ಷ ಅಲ್ಲ. ತನ್ನ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಹಗರಣಗಳಿಗೆ ಸಮರ್ಥನೆ ನೀಡುವುದೇ ಕಾಂಗ್ರೆಸ್ಸಿನ ಕೆಲಸವಾಗಿತ್ತು. ಬಿಜೆಪಿಯು ತನ್ನ ನಾಯಕನಲ್ಲಿದೆ ಎಂದು ಭಾವಿಸಿದ ಗುಣಗಳ ಬಗ್ಗೆ ಮುಂಚೂಣಿಯಲ್ಲಿ ನಿಂತು ಪ್ರಚಾರ ನಡೆಸಿತು.

ಎಲ್‌.ಕೆ. ಅಡ್ವಾಣಿ ಅವರನ್ನು ಬಲಿಷ್ಠ ನಾಯಕ ಎಂದು ಬಿಂಬಿಸುವ ಅಭಿಯಾನ ರೂಪಿಸಲು ಬಿಜೆಪಿಯು 2009ರಲ್ಲಿ ಫ್ರಾಂಕ್‌ ಸಿಮೋಸ್–ಟ್ಯಾಗ್‌ ಮತ್ತು ಉಟೋಪಿಯಾ ಎನ್ನುವ ಏಜೆನ್ಸಿಗಳ ನೆರವು ಪಡೆಯಿತು. ಮನಮೋಹನ್ ಸಿಂಗ್‌ ಅವರಿಗೆ ನಿರ್ಧಾರ ಕೈಗೊಳ್ಳುವ ಶಕ್ತಿ ಇಲ್ಲ ಎಂದು ಬಿಂಬಿಸಲು ಬಿಜೆಪಿಯು ‘ಮಜಬೂತ್ ನೇತಾ, ನಿರ್ಣಾಯಕ್ ಸರ್ಕಾರ್’ ಎನ್ನುವ ಘೋಷವಾಕ್ಯವನ್ನು ರೂಪಿಸಿತು. ಆದರೆ ಮನಮೋಹನ್ ಸಿಂಗ್ ಅವರು ನಿರ್ಧಾರ ಕೈಗೊಳ್ಳಲಾಗದ ವ್ಯಕ್ತಿ ಆಗಿರಲಿಲ್ಲ ಎಂಬುದು ಬೇರೆ ಮಾತು. ಆ ವರ್ಷ ಕಾಂಗ್ರೆಸ್ ಪಕ್ಷವು ಜೆ. ವಾಲ್ಟರ್ ಥಾಮ್ಸನ್‌ ಏಜೆನ್ಸಿಯ ನೆರವು ಪಡೆಯಿತು. ಅದು ‘ಆಮ್‌ ಆದ್ಮಿ’ ಘೋಷವಾಕ್ಯವನ್ನು ಹುಟ್ಟುಹಾಕಿತು. ಇದನ್ನು ಮುಂದಿನ ದಿನಗಳಲ್ಲಿ ಅರವಿಂದ ಕೇಜ್ರಿವಾಲ್ ಸೂಕ್ತವಾಗಿ ಬಳಸಿಕೊಂಡರು.

ಕೆಲವು ಸಂದರ್ಭಗಳಲ್ಲಿ ಚರ್ಚೆಯ ಮೇಲೆ ಪ್ರಭಾವ ಬೀರುವ ಸಂಗತಿಗಳು ಪಕ್ಷಗಳಿಗೆ ಗೆಲುವು ತಂದುಕೊಡುವಷ್ಟು ಸಮರ್ಥವಾಗಿ ಇರುವುದಿಲ್ಲ. ‘ಗ್ರೇ ವರ್ಲ್ಡ್‌ವೈಡ್‌’ ಸಂಸ್ಥೆಯು ರೂಪಿಸಿಕೊಟ್ಟ ‘ಭಾರತ ಪ್ರಕಾಶಿಸುತ್ತಿದೆ’ ಘೋಷಣೆಯು 2004ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದ ಚುನಾವಣಾ ಸೋಲಿಗೆ ಕಾರಣವಾಯಿತು. ಈ ಸೋಲನ್ನು ಯಾರೂ ಊಹಿಸಿರಲಿಲ್ಲ. ಆ ಸೋಲಿಗೆ ಕಾರಣ ಏನು ಎಂಬುದು ಇಂದಿಗೂ ಯಾರಿಗೂ ಪೂರ್ತಿಯಾಗಿ ಅರ್ಥವಾಗಿಲ್ಲ.

2019ರ ಲೋಕಸಭಾ ಚುನಾವಣಾ ಪ್ರಚಾರ ಅಭಿಯಾನವು ಸಕಾರಾತ್ಮಕ ಅಂಶಗಳನ್ನು ಆಧರಿಸಿ ನಡೆಯುತ್ತದೆ ಎಂದು ನನಗೆ ಅನಿಸುತ್ತಿಲ್ಲ. ಅಂದರೆ, ಆಡಳಿತ ಪಕ್ಷ ಅಥವಾ ವಿರೋಧ ಪಕ್ಷಗಳ ಕಡೆಯಿಂದ ‘ಅಚ್ಛೇ ದಿನ್’ ಮಾದರಿಯ ಚುನಾವಣಾ ಘೋಷಣೆಗಳು ಬರುವ ಸಾಧ್ಯತೆ ಕಡಿಮೆ ಎಂಬುದು ನನ್ನ ಮಾತಿನ ಅರ್ಥ. ದೇಶದ ಅರ್ಥ ವ್ಯವಸ್ಥೆಯು ಹೇಳಿಕೊಳ್ಳುವಷ್ಟೇನೂ ವಿಶೇಷ ಸ್ಥಿತಿಯಲ್ಲಿ ಇಲ್ಲ. ಹಾಗೆಯೇ ನಮ್ಮ ಜೀವನ ಮಟ್ಟವು 2014ರಲ್ಲಿ ಇದ್ದಿದ್ದಕ್ಕಿಂತ ಗಮನಾರ್ಹ ರೀತಿಯಲ್ಲಿ ಬದಲಾಗಿದೆ ಎಂದೂ ಅನಿಸುತ್ತಿಲ್ಲ.

ನಾನು ಕೆಲವು ದಿನಗಳ ಹಿಂದೆ ಬಿಜೆಪಿಯ ಒಬ್ಬರು ನಾಯಕರ ಜೊತೆ ಮಾತನಾಡುತ್ತಿದ್ದೆ.ಅಯೋಧ್ಯೆಯ ವಿಚಾರವನ್ನು ಚರ್ಚೆಗೆ ತರಲಾಗುತ್ತದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಅಯೋಧ್ಯೆಯ ವಿಷಯವನ್ನು ಪ್ರಸ್ತಾಪಿಸುತ್ತಿಲ್ಲ. ಆದರೆ ಈ ‍ಪರಿಸ್ಥಿತಿ ಬೇಗನೆ ಬದಲಾಗಬಹುದು. ಅಯೋಧ್ಯೆ ವಿಚಾರವನ್ನು ಸುಪ್ರೀಂ ಕೋರ್ಟ್‌ ವಿಚಾರಣೆಗೆ ಕೈಗೆತ್ತಿಕೊಂಡಿದ್ದು, ಶೀಘ್ರವೇ ತೀರ್ಪು ಬರುವ ಸಾಧ್ಯತೆ ಇಲ್ಲದಿಲ್ಲ. ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ಬಯಸಿದ್ದ ಸುಬ್ರಮಣಿಯನ್ ಸ್ವಾಮಿಯಂಥವರ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಕೆಲವು ದಿನಗಳ ಹಿಂದೆ ತಳ್ಳಿಹಾಕಿದೆ. ಈ ವಿಚಾರವನ್ನು ಇತ್ಯರ್ಥ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದ ಪ್ರಸ್ತಾವವನ್ನು ತಳ್ಳಿಹಾಕಿರುವ ಕೋರ್ಟ್‌, ‘ಜಮೀನು ವಿವಾದದಲ್ಲಿ ಮಧ್ಯಮ ಮಾರ್ಗವನ್ನು ಕಂಡುಕೊಳ್ಳುವುದು ಸಾಧ್ಯವೇ’ ಎಂದು ಪ್ರಶ್ನಿಸಿದೆ.

ಅಯೋಧ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಬರುವ ಯಾವುದೇ ತೀರ್ಪು ಮುಂದಿನ ಚುನಾವಣೆಯ ಚರ್ಚಾ ವಿಷಯ ಆಗುವ ಸಾಧ್ಯತೆ ಇದೆ. ಆಗ ಚುನಾವಣಾ ಅಭಿಯಾನದ ಸಂದೇಶ ಏನಿರಬಹುದು ಎಂಬುದನ್ನು ಆಲೋಚಿಸಿದಾಗ ಮೈ ನಡುಗುತ್ತದೆ.

(ಲೇಖಕ: ಅಂಕಣಕಾರ ಹಾಗೂಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT