ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ.ಟಿ.ಸಚಿವರ ‘ಟ್ಯಾಬ್ಲೆಟ್ ಕೃಷಿ’ ಕ್ರಾಂತಿ

Last Updated 22 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ರ್ನಾಟಕದ ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಎಸ್.ಆರ್. ಪಾಟೀಲ್ ಅವರು ತಮ್ಮದೇ ಖರ್ಚಿನಲ್ಲಿ ವಿಜಾಪುರ ಮತ್ತು ಬಾಗಲಕೋಟೆಯ ಜಿಲ್ಲೆಯ 200 ಮಂದಿ ರೈತರಿಗೆ ಹತ್ತರಿಂದ ಹದಿನೈದು ಸಾವಿರ ರೂಪಾಯಿ ಬೆಲೆಬಾಳುವ ಟ್ಯಾಬ್ಲೆಟ್‌ಗಳನ್ನು ಕೊಡುತ್ತಿದ್ದಾರೆ. ಹೊಸ ವರ್ಷದ ಎರಡನೇ ವಾರದಲ್ಲಿ ಈ ಟ್ಯಾಬ್ಲೆಟ್‌ಗಳು ರೈತರ ಕೈ ತಲುಪಬಹುದು ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ.

ರೈತರಿಗೇಕೆ ಟ್ಯಾಬ್ಲೆಟ್ ಎಂಬ ಮಾಧ್ಯಮಗಳ ಪ್ರಶ್ನೆಗೆ ಸಚಿವರು ನೀಡಿರುವ ಉತ್ತರವೂ ಕುತೂಹಲಕಾರಿ­ಯಾಗಿದೆ  ‘ಕೃಷಿ ಕ್ಷೇತ್ರ ಈಗ ಅಪಾಯದಲ್ಲಿದೆ. ಸಮಸ್ಯೆಗೆ ಈಗಲೇ ಪರಿಹಾರ ಹುಡುಕದಿದ್ದರೆ ಭವಿಷ್ಯದಲ್ಲಿ ವಿಷಾದಿಸಬೇಕಾಗುತ್ತದೆ.  ಮಾಹಿತಿ ತಂತ್ರಜ್ಞಾನ ಆಧಾರಿತ ಕೃಷಿಯನ್ನು ಉತ್ತೇಜಿಸುವುದರಿಂದ ಈಗ ಜೂಜಿ­ನಂತಾಗಿರುವ ಕೃಷಿ ಕ್ಷೇತ್ರದ ಸ್ಥಿತಿ ಬದಲಾಗಿ ಅನೇಕರಿಗೆ ಉದ್ಯೋಗಾವ­ಕಾಶಗಳನ್ನು ಸೃಷ್ಟಿಸುತ್ತದೆ. ಇದು ಆರ್ಥಿಕತೆಯ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ’.

ಎಸ್.ಆರ್. ಪಾಟೀಲರ ‘ಮಾಹಿತಿ ತಂತ್ರಜ್ಞಾ­ನಾ­ಧಾರಿತ ಕೃಷಿ’ ನಿಜಕ್ಕೂ ಕುತೂಹಲಕರ ಮತ್ತು ಕ್ರಾಂತಿಕಾರಿ­ಯಾದ ಪರಿಕಲ್ಪನೆ. ಕೃಷಿಯಲ್ಲಿ ಮಾಹಿತಿ ತಂತ್ರಜ್ಞಾನವನ್ನು ಹೇಗೆ ಬಳಸಲಾ­ಗುತ್ತದೆ ಎಂಬುದಕ್ಕೂ ಸಚಿವರಲ್ಲಿ ಉತ್ತರವಿದೆ. ‘ನಾವು ಕೊಡುವ ಟ್ಯಾಬ್ಲೆಟ್‌ನಲ್ಲಿರುವ ತಂತ್ರಾಂಶ ಭಾರೀ ಲಾಭ ತರುವ ಬೆಳೆಗಳ ಬಗ್ಗೆ ಮಾಹಿತಿ ನೀಡುತ್ತದೆ, ಇದರ ಜೊತೆಗೆ ಬೆಳೆಗಳಿಗೆ ಬರುವ ರೋಗಗಳು, ಕೀಟ ನಿಯಂತ್ರಣ, ನೀರಿನ ಬಳಕೆ ಇತ್ಯಾದಿಗಳ ವಿವರವನ್ನೂ ಒದಗಿಸುತ್ತದೆ’.

ಸಚಿವರು ಹೇಳುತ್ತಿರುವ ಬೆಳೆ ಮಾಹಿತಿ, ಕೀಟ ನಿಯಂತ್ರಣ, ನೀರಿನ ಬಳಕೆ ಇತ್ಯಾದಿಗಳ ಮಾಹಿತಿ ಒದಗಿಸುವುದಕ್ಕೆ 150 ರೂಪಾಯಿಯ ರೇಡಿಯೋ ಸಾಕಾಗುತ್ತದೆ. ಎಲ್ಲಾ ಆಕಾಶವಾಣಿ ಕೇಂದ್ರಗಳಿಂದಲೂ ಪ್ರತೀ ಗಂಟೆಗೊಮ್ಮೆ ಆಯಾ ಪ್ರದೇಶದ ರೈತರಿಗೆ ಅಗತ್ಯವಿರುವ ಪೇಟೆ ದಾರಣೆ ಪ್ರಸಾರವಾಗುವಂತೆಯೂ ನೋಡಿಕೊಳ್ಳ­ಬಹುದು. ಬೆಳೆಗಳಿಗೆ ಬರುವ ರೋಗ, ಬಾಧಿಸುವ ಕೀಟ ಇತ್ಯಾದಿಗಳ ಬಗ್ಗೆ ಪ್ರತಿದಿನವೂ ಫೋನ್–ಇನ್ ಕಾರ್ಯಕ್ರಮಗಳನ್ನು ಪ್ರಸಾರ ಮಾಡ­ಬಹುದು.

ಇನ್ನೂ ಹೆಚ್ಚಿನ ಮಾಹಿತಿಗಾಗಿ ರೈತರಿಗಾಗಿ ಕೇಂದ್ರ ಸರ್ಕಾರ ಆರಂಭಿಸಿರುವ ಕಾಲ್ ಸೆಂಟರ್‌ಗಳಿವೆ. ಹಾಗಿದ್ದರೆ ಹತ್ತರಿಂದ ಹದಿನೈದು ಸಾವಿರ ರೂಪಾಯಿ ಬೆಲೆಯ ಟ್ಯಾಬ್ಲೆಟ್‌ನ ಅಗತ್ಯವೇನು? ಬಹುಶಃ ಈ ಪ್ರಶ್ನೆಗೆ ಇರುವ ಏಕೈಕ ಉತ್ತರ– ರೈತರಿಗೆ ಟ್ಯಾಬ್ಲೆಟ್ ಬಿಟ್ಟು ಬೇರೆ ಯಾವುದೇ ರೀತಿಯಲ್ಲಿ ಮಾಹಿತಿ ಕೊಟ್ಟರೂ ಅದು ‘ಮಾಹಿತಿ ತಂತ್ರಜ್ಞಾನ ಆಧಾರಿತ ಕೃಷಿ’ ಆಗುವುದಿಲ್ಲ!

ಮಾಹಿತಿ ತಂತ್ರಜ್ಞಾನ ಸಚಿವರ ರೈತರಿಗೆ ಟ್ಯಾಬ್ಲೆಟ್ ಕೊಡುವ ಉತ್ಸಾಹವನ್ನು ಅರ್ಥ ಮಾಡಿಕೊಳ್ಳು­ವುದಕ್ಕೆ ಸ್ವಲ್ಪ ನಮ್ಮ ಅಭಿವೃದ್ಧಿ ಪರಿಕಲ್ಪನೆಗಳ ಇತಿಹಾಸವನ್ನು ನೋಡಬೇಕಾ­ಗುತ್ತದೆ. ನಮ್ಮ ರಾಜಕಾರಣಿಗಳ ಮಟ್ಟಿಗೆ ಅಭಿವೃದ್ಧಿ ಎಂದರೆ ಕಟ್ಟಡಗಳನ್ನು ನಿರ್ಮಿಸಬೇಕು, ಅಣೆಕಟ್ಟುಗಳನ್ನು ಕಟ್ಟಬೇಕು ಅಥವಾ ಯಾವು­ದಾದರೊಂದು ನಿರ್ಮಾಣ ಕಾಮಗಾರಿಯನ್ನು ಮಾಡಬೇಕು. ಇವನ್ನು ಬಿಟ್ಟರೆ ಏನನ್ನಾದರೂ ಫಲಾನುಭವಿಗಳಿಗೆ ಹಂಚಬೇಕು.

ಮಾಹಿತಿ ತಂತ್ರಜ್ಞಾನ ಸಚಿವರಿಗೆ ಸದ್ಯಕ್ಕೆ ತೋಚಿದ್ದು ಟ್ಯಾಬ್ಲೆಟ್‌­ಗಳನ್ನು ರೈತರಿಗೆ ಹಂಚುವುದು. ಈಗಾಗಲೇ ಎಲ್ಲಾ ಶಾಸಕರಿಗೆ ಐಪ್ಯಾಡ್‌ಗಳನ್ನು ಹಂಚಲಾಗಿದೆ. ಇದನ್ನು ರೈತರಿಗೂ ಹಂಚಿಬಿಟ್ಟರೆ ಮಾಹಿತಿ ತಂತ್ರಜ್ಞಾನವನ್ನು ಕೃಷಿಯಲ್ಲಿ ಬಳಸಿ­ದ್ದೇವೆ ಎಂದು ಹೇಳಲು ಸಾಧ್ಯವಾಗುತ್ತದೆ ಎಂಬುದು ಅವರ ನಿಲುವಾಗಿರಬಹುದು. ಅದಕ್ಕಿಂತ ಹೆಚ್ಚಾಗಿ IT-enabled agriculture ಎಂಬ ಸುಂದರ ಪದಪುಂಜವೊಂದು ಅವರ ಸಾಧನೆಗಳ ಪಟ್ಟಿಗೆ ಸೇರಿಕೊಂಡು ಬಿಡುತ್ತದೆ.

ಈ ಬಾರಿಯ ಬಜೆಟ್‌ ಮಂಡಿಸಿದ ಸಿದ್ದರಾಮಯ್ಯ ‘ಕೃಷಿ ಕ್ಷೇತ್ರಕ್ಕೆ ಒದಗಿಸುತ್ತಿರುವ ಸಂಪನ್ಮೂಲದ ಪ್ರಮಾಣ ಹೆಚ್ಚುತ್ತಲೇ ಇದ್ದರೂ ಕೃಷಿ ಕ್ಷೇತ್ರದ ಅಭಿವೃದ್ಧಿ ಮಾತ್ರ ಋಣಾತ್ಮಕ­ವಾಗಿದೆ’ ಎಂದಿದ್ದರು. ಇದೇಕೆ ಹೀಗಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಮಾಹಿತಿ ತಂತ್ರಜ್ಞಾನವನ್ನೂ ಬಲ್ಲ ಕೃಷಿ ಸಚಿವರು ಈ ತನಕ ಪ್ರಯತ್ನಿಸಿದಂತೆ ಕಾಣಿಸುವುದಿಲ್ಲ. ಆದರೆ ಮಾಹಿತಿ ತಂತ್ರಜ್ಞಾನ ಸಚಿವರಂತೂ ಕೃಷಿ ಕ್ಷೇತ್ರದ ಸುಧಾರಣೆಗೆ ಒಂದು ‘ಟ್ಯಾಬ್ಲೆಟ್ ಕ್ರಾಂತಿ’ಯ ನೀಲ ನಕಾಶೆ ರೂಪಿಸಿದ್ದಾರೆ!

ಕೆಲವು ಸೇವೆಗಳನ್ನು ಪರಿಣಾಮಕಾರಿಯಾ­ಗಿಸಲು ಮಾಹಿತಿ ತಂತ್ರಜ್ಞಾನ ಉಪಯುಕ್ತ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಕೇವಲ ತಂತ್ರಜ್ಞಾನದಿಂದಷ್ಟೇ ಎಲ್ಲವನ್ನೂ ಸಾಧಿಸಲಾಗು­ವುದಿಲ್ಲ ಎಂಬುದನ್ನೂ ಅರ್ಥ ಮಾಡಿಕೊಳ್ಳಬೇಕು. ಭೂದಾಖಲೆಗಳ ಕಂಪ್ಯೂಟರೀಕರಣಕ್ಕಾಗಿ ಕೇಂದ್ರ  ಸರ್ಕಾರ ಉದಾರವಾಗಿ ಅನುದಾನ ನೀಡಲು ಹೊರಟಾಗ ಅದನ್ನು ಯಶಸ್ವಿಯಾಗಿ ಬಳಸಿ­ಕೊಂಡ ರಾಜ್ಯಗಳಲ್ಲಿ ಕರ್ನಾಟಕವೂ ಒಂದು.

ಜೆ.ಎಚ್.ಪಟೇಲ್ ಅವರು ಮುಖ್ಯಮಂತ್ರಿಯಾ­ಗಿದ್ದ ಅವಧಿಯಲ್ಲಿ ಕಂದಾಯ ಸಚಿವರಾಗಿದ್ದ ಬಿ.ಸೋಮಶೇಖರ್ ಅವರು ಆಸಕ್ತಿವಹಿಸಿದ್ದರಿಂದ ಪಹಣಿಯ (ಆರ್‌ಟಿಸಿ) ಕಂಪ್ಯೂಟರೀಕರಣ ಯೋಜನೆ ‘ಭೂಮಿ’ ಆರಂಭಗೊಂಡಿತು. ಯೋಜನೆ ಪೂರ್ಣಗೊಳ್ಳುವ ಹೊತ್ತಿಗೆ ಎಸ್.ಎಂ.­ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ­ರಿಂದ ‘ಭೂಮಿ’ಯ ಕೀರ್ತಿ ಅವರಿಗೆ ದೊರೆಯಿತು. ‘ಭೂಮಿ’ ತಂತ್ರಾಂಶ ರೈತರು ಪಹಣಿ ಪಡೆದು­ಕೊಳ್ಳುವ ಪ್ರಕ್ರಿಯೆಯನ್ನು ಸರಳಗೊಳಿಸಿತು ಎಂಬುದರಲ್ಲಿ ಸಂಶಯವಿಲ್ಲ.

ಪಹಣಿ ಪಡೆಯಲು ರೈತರು ಗ್ರಾಮ ಲೆಕ್ಕಿಗರಿಗೆ ಲಂಚ ಕೊಡಬೇಕಾಗಿರ­ಲಿಲ್ಲ. ಅವರನ್ನು ಹುಡುಕಿಕೊಂಡು ಅಲೆಯುವ ಅಗತ್ಯವಿರಲಿಲ್ಲ. ‘ನೆಮ್ಮದಿ ಕೇಂದ್ರ’ಗಳಲ್ಲಿ ಈ ಪ್ರತಿಯನ್ನು ಪಡೆಯಬಹುದು. ಆದರೆ ಮ್ಯುಟೇಷನ್ ಅಥವಾ ಮಾಲೀಕತ್ವದ ಬದಲಾ­ವಣೆ­ಯಂಥ ಕೆಲಸಗಳು ಬಹಳ ಸಂಕೀರ್ಣ­ವಾಗಿಬಿಟ್ಟವು. ಪಹಣಿಗಳನ್ನು ಕಂಪ್ಯೂಟರೀಕರಿ­ಸುವ ಅವಧಿಯಲ್ಲಿ ಅನೇಕರ ಹೆಸರುಗಳು ತಪ್ಪಾಗಿದ್ದವು. ಅವುಗಳನ್ನು ಸರಿಪಡಿಸುವುದಕ್ಕೆ ವಿಶೇಷ ಪ್ರಯತ್ನಗಳೇನೂ ನಡೆಯಲಿಲ್ಲ.

ಪ್ರತಿ­ಯೊಂದು ಬದಲಾವಣೆಗೂ ತಂತ್ರಾಂಶ ನಿರ್ದಿಷ್ಟ ಕಾರಣಗಳನ್ನು ಬಯಸುತ್ತದೆ. ಹೆಸರಿನ ತಿದ್ದುಪಡಿ ಎಂಬುದು ತಂತ್ರಾಂಶದ ಮಟ್ಟಿಗೆ ಮಾಲೀಕತ್ವ ಬದಲಾವಣೆಯಂಥದ್ದೇ ಕ್ರಿಯೆ. ಕಂಪ್ಯೂಟರೀಕ­ರಣದ ವೇಳೆ ಡೇಟಾ ಎಂಟ್ರಿ ಮಾಡಿದವರ ತಪ್ಪಿಗೆ ರೈತರು ದಂಡ ತೆರಬೇಕಾಗಿದೆ. ‘ಭೂಮಿ’ ತಂತ್ರಾಂಶದಲ್ಲಿ ಇಂಥ ಅನೇಕ ತಾಂತ್ರಿಕ ಮತ್ತು ಆಡಳಿತಾತ್ಮಕ ಸಮಸ್ಯೆಗಳಿವೆ. ಆದರೆ ಕಂಪ್ಯೂಟ­ರೀಕ­ರಣವೇ ಒಂದು ಅದ್ಭುತವೆಂದು ಎಲ್ಲರೂ ಭಾವಿಸಿರುವುದರಿಂದ ಅದರ ಕುರಿತಂತೆ ಈಗಲೂ ಯಾರೂ ಚರ್ಚಿಸುತ್ತಿಲ್ಲ. ಈ ಸಮಸ್ಯೆಗಳನ್ನು ಬದಿಗಿಡೋಣ.

ಯಾವ ಊರಿನಲ್ಲಿ ಎಷ್ಟು ಸರ್ಕಾರಿ ಭೂಮಿ ಇದೆ ಎಂಬ ಸಮರ್ಪಕ ಮಾಹಿತಿಯನ್ನೂ ಕೂಡಾ ಈ ಮಹತ್ವಾಕಾಂಕ್ಷೆಯ ಕಂಪ್ಯೂಟರೀಕೃತ ದಾಖಲೆಗಳನ್ನು ಬಳಸಿ ಪಡೆದುಕೊಳ್ಳಲು ಸಾಧ್ಯವಿಲ್ಲ. ಇದು ಒದಗಿಸುವ ಮಾಹಿತಿಯಲ್ಲಿ ಅನೇಕ ತಪ್ಪುಗಳಿರುತ್ತವೆ. ಏಕೆಂದರೆ ಕಂಪ್ಯೂಟರಿಗೆ ಊಡಿಸಿರುವ ಮಾಹಿತಿ­ಯಲ್ಲೇ ಅನೇಕ ತಪ್ಪುಗಳಿವೆ. ಎಷ್ಟು ಪ್ರದೇಶದಲ್ಲಿ ಯಾವ ಬೆಳೆ ಎನ್ನುವುದಂತೂ ಅಧ್ವಾನ. ಇಂಥ ಯಾವ ಮಾಹಿತಿಯನ್ನೂ ಸರಿಯಾಗಿ ಸಂಗ್ರಹಿಸಲಾಗಿಲ್ಲ.

ಕಂಪ್ಯೂಟರ್ ನಾವು ಸಂಗ್ರಹಿಸಿದ ಮಾಹಿತಿ­ಯನ್ನಷ್ಟೇ ನಮಗೆ ಮರಳಿ ಕೊಡುತ್ತದೆಯೇ ಹೊರತು ಅದು ತನ್ನಷ್ಟಕ್ಕೆ ತಾನೇ ಮಾಹಿತಿಯನ್ನು ಕಲೆ ಹಾಕುವುದಿಲ್ಲ. ಎಸ್.ಆರ್.ಪಾಟೀಲ್ ಅವರು ಸ್ವಂತ ಖರ್ಚಿನಲ್ಲಿ ರೈತರಿಗೆ ಕೊಡಲು ಹೊರಟಿರುವ ಟ್ಯಾಬ್ಲೆಟ್‌ನಲ್ಲಿ ಯಾವುದೇ ತಂತ್ರಾಂಶ ಅಳವಡಿಸಿದರೂ ಅದು ಮಾಹಿತಿ ಒದಗಿಸಬೇಕೆಂದರೆ ಅದಕ್ಕೆ ಮಾಹಿತಿಯನ್ನು ಊಡಿಸಬೇಕು. ಈ ಮಾಹಿತಿಯನ್ನು ಊಡಿಸು­ವುದಕ್ಕೆ ಏನು ಮಾಡುತ್ತಾರೆಂಬುದರ ಮೇಲೆ ಉಳಿದೆಲ್ಲವೂ ನಿರ್ಧಾರವಾಗುತ್ತದೆ.

ರೈತರಿಗೆ ಉಪಕಾರಿಯಾಗುವಂಥ ಮಾಹಿತಿಯನ್ನು ಸಂಗ್ರ­ಹಿಸಿ ಒದಗಿಸುವಂಥ ವ್ಯವಸ್ಥೆಯೊಂದನ್ನು ರೂಪಿಸಿ­ದರೆ ಅದನ್ನು ಪಡೆಯಲು ಬೇಕಿರುವ ಉಪಕರಣ­ಗಳನ್ನು ಸರ್ಕಾರ ಒದಗಿಸುವ ಅಗತ್ಯವೇನೂ ಇಲ್ಲ. ರೈತರೇ ಅವುಗಳನ್ನು ಖರೀದಿಸುತ್ತಾರೆ. ಸಚಿವರ ಆದ್ಯತೆ ಈ ಮಾಹಿತಿ ಸಂಗ್ರಹಿಸಿ ಸಂವಹಿಸುವ ಕೆಲಸಕ್ಕಿಂತ ಟ್ಯಾಬ್ಲೆಟ್‌­ಗಳನ್ನು ಹಂಚುವುದರತ್ತ ಇರುವುದು ಮುಖ್ಯ ಸಮಸ್ಯೆ.

ಇನ್ನು ಸರ್ಕಾರ ಯಾವ ರೀತಿಯಲ್ಲಿ ಸಾರ್ವ­ಜನಿಕರಿಗೆ ಮಾಹಿತಿ ಒದಗಿಸುತ್ತದೆ ಎಂಬುದಕ್ಕೆ ಸರ್ಕಾರಿ ಇಲಾಖೆಗಳ ವೆಬ್‌ಸೈಟ್‌ಗಳ ಮೇಲೊಮ್ಮೆ ಕಣ್ಣು ಹಾಯಿಸಿದರೆ ಸಾಕು. ಕಂದಾಯ ಇಲಾಖೆಯನ್ನು ಎಲ್ಲಾ ಇಲಾಖೆಗಳ ತಾಯಿ ಎನ್ನುತ್ತಾರೆ. ಆ ಇಲಾಖೆಗೆ ಒಂದು ವೆಬ್‌ಸೈಟ್ ಇಲ್ಲ. ಇರುವುದು ‘ಭೂಮಿ’ ಮತ್ತು ‘ಕಾವೇರಿ’ಯ ವೆಬ್‌ಸೈಟ್‌ಗಳು ಮಾತ್ರ. ಕರ್ನಾಟಕ ವಿಧಾನ ಮಂಡಲದ ವೆಬ್‌ಸೈಟ್‌ಗಳೂ ಬಹಳ ವಿಚಿತ್ರವಾಗಿವೆ.

ಇಲ್ಲಿ ಶಾಸಕರು ಕೇಳಿದ ಪ್ರಶ್ನೆಗಳು ಪಿಡಿಎಫ್ ರೂಪದಲ್ಲಿ ದೊರೆಯು­ತ್ತವೆ. ಆದರೆ ಆ ಪ್ರಶ್ನೆಗಳಿಗೆ ವಿವಿಧ ಸಚಿವರು ನೀಡಿದ ಉತ್ತರಗಳು ಎಲ್ಲಿವೆ ಎಂಬುದು ಯಾರಿಗೂ ಗೊತ್ತಿಲ್ಲ. ಇನ್ನು ಚರ್ಚೆಗಳ ಪಠ್ಯ ದೊರೆಯುವುದಂತೂ ದೂರದ ಮಾತು. ಕರ್ನಾಟಕಕ್ಕೆ ಹೋಲಿಸಿದರೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಹತ್ತು ಸ್ಥಾನಗಳಷ್ಟು ಕೆಳಗಿರುವ ಬಿಹಾರ ವಿಧಾನಸಭೆಯ ವೆಬ್‌ಸೈಟ್ ನಮ್ಮದಕ್ಕಿಂತ ಹಲವು ಪಟ್ಟು ಚೆನ್ನಾಗಿದೆ. ಇಲ್ಲಿ ವಿಧಾನಸಭಾ ಕಲಾಪಗಳ ವೆಬ್‌ಕ್ಯಾಸ್ಟಿಂಗ್ (ಅಂತರ್ಜಾಲ ಪ್ರಸಾರ) ಇದೆ.

ಹಲವಾರು ಗಂಟೆಗಳ ಕಲಾಪವನ್ನು ಇಲ್ಲಿ ಸಂಗ್ರಹಿಸಿಡ­ಲಾಗಿದೆ. ಆಸಕ್ತರು ಚರ್ಚೆಗಳನ್ನು ತಮಗೆ ಬೇಕಿರುವಾಗ ನೋಡಿಕೊಳ್ಳಬಹುದು. ಬಿಹಾರ ವಿಧಾನಸಭಾ ಸಚಿವಾಲಯ ಇದಕ್ಕಾಗಿ ಭಾರೀ ತಾಣವನ್ನೇನೂ ರೂಪಿಸಿಲ್ಲ. ಎನ್ಐಸಿ ಸರ್ಕಾರ­ಗಳಿಗೆ ಉಚಿತವಾಗಿ ಒದಗಿಸುವ ವೆಬ್‌ಕ್ಯಾಸ್ಟಿಂಗ್ ಸೌಲಭ್ಯವನ್ನು ಅಳವಡಿಸಿ­ಕೊಂಡಿದೆ­ಯಷ್ಟೇ. ಲೋಕಸಭೆ ಮತ್ತು ರಾಜ್ಯಸಭೆಗಳ ಅಂತರ್ಜಾಲ ತಾಣಗಳಲ್ಲಿ ಎಲ್ಲಾ ಚರ್ಚೆಗಳ ಪಠ್ಯ, ಪ್ರಶ್ನೋತ್ತರಗಳು ಲಭ್ಯವಿವೆ. ಅಂಥದ್ದೊಂದು ವ್ಯವಸ್ಥೆಯನ್ನು ರೂಪಿಸುವುದಕ್ಕೆ ಕರ್ನಾಟಕ ಈ ತನಕ ಮನಸ್ಸು ಮಾಡಿಲ್ಲ.

ಕರ್ನಾಟಕ ಸರ್ಕಾರದ ಒಂದೇ ಒಂದು ಸರ್ಕಾರಿ ಜಾಲತಾಣವೂ ದೃಷ್ಟಿ ವಂಚಿತರಿಗೆ ಓದುವ ಅವಕಾಶ ಕಲ್ಪಿಸಿಲ್ಲ. ಯಾವ ಇಲಾಖೆಯ ವೆಬ್‌ಸೈಟ್ ಕೂಡಾ ಇಲಾಖೆಯ ಸಂಪೂರ್ಣ ಮಾಹಿತಿಗಳನ್ನು ಒದಗಿಸುವುದಿಲ್ಲ. ಅಷ್ಟೇ ಅಲ್ಲ ಮಾಹಿತಿ ತಂತ್ರಜ್ಞಾನ ಸಚಿವರು ಒದಗಿಸುವ ಟ್ಯಾಬ್ಲೆಟ್ ಬಳಸಿ ಯಾವ ಸರ್ಕಾರಿ ಜಾಲ ತಾಣವನ್ನೂ ಸಮರ್ಪಕವಾಗಿ ನೋಡಲೂ ಸಾಧ್ಯವಿಲ್ಲ. ಏಕೆಂದರೆ ಯಾವ ಸರ್ಕಾರೀ ಜಾಲ ತಾಣವೂ ಟ್ಯಾಬ್ಲೆಟ್ ಅಥವಾ ಮೊಬೈಲ್ ಸ್ನೇಹಿಯಲ್ಲ.

ಇಷ್ಟರ ಮೇಲೆ ಕಷ್ಟಪಟ್ಟು ಇವುಗಳಲ್ಲಿ ಮಾಹಿತಿ ಹುಡುಕುವವರು ಕಡ್ಡಾಯ­ವಾಗಿ ಇಂಗ್ಲಿಷ್ ಕಲಿತಿರಲೇಬೇಕು. ಏಕೆಂದರೆ ಕರ್ನಾಟಕ ಸರ್ಕಾರದ ಇಲಾಖೆಗಳ ಜಾಲತಾಣ­ಗಳಲ್ಲಿ ಕನ್ನಡ ಇಲ್ಲ ಎನ್ನುವಷ್ಟು ಕಡಿಮೆ. ಮಾಹಿತಿ ತಂತ್ರಜ್ಞಾನ ಸಚಿವರು ಟ್ಯಾಬ್ಲೆಟ್‌ನಲ್ಲಿ ಕೃಷಿ ಮಾಹಿತಿಯ ಜೊತೆಗೆ ರೈತರಿಗೆ ಇಂಗ್ಲಿಷ್ ಕಲಿಸುವುದಕ್ಕೂ ಒಂದು ಯೋಜನೆ ರೂಪಿಸಬಹುದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT