ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌ನ ಅಮಲು ಮೊಟಕುಗೊಳಿಸುವ ಟ್ರೆಂಡ್

Last Updated 7 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಏಪ್ರಿಲ್ 4ರಂದು ಈ ವರ್ಷದ ಎರಡನೇ ಐಪಿಎಲ್ ಮ್ಯೋಚ್ ಬೆಂಗಳೂರಿನಲ್ಲಿ ನಡೆಯಿತು. ರಾತ್ರಿ ಎಂಟು ಗಂಟೆಗೆ ಪ್ರಾರಂಭವಾದ ಪಂದ್ಯ 12ಕ್ಕೆ ಮುಗಿಯಿತು. ಶುಕ್ರವಾರ ಕೆಲಸದ ದಿನ. ಆಫೀಸ್‌ನಿಂದ ಮನೆಗೆ ಹೋಗಿ ಮಡದಿ ಮಕ್ಕಳನ್ನು ಒಟ್ಟುಮಾಡಿಕೊಂಡು ಜಂಗುಳಿಯಲ್ಲಿ ಸ್ಟೇಡಿಯಂ ಸೇರುವ ಯಾವ ಕಷ್ಟವನ್ನೂ ಲೆಕ್ಕಿಸದೆ ಸುಮಾರು 40,000 ಜನ ನೆರೆದಿದ್ದರು. ಈ ಖಾಸಗಿ ಪಂದ್ಯಕ್ಕೆ ಐದು ವರ್ಷ ತುಂಬಿದೆ. ಆರನೇ ವರ್ಷದ ಪಂದ್ಯಗಳು ಈಗ ಜಾರಿಯಲ್ಲಿವೆ.

ರಾಯಲ್ ಚಾಲೆಂಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಜರುಗಿದ ಪಂದ್ಯವನ್ನು ವಿಜಯ್ ಮಲ್ಯ ಒಡೆತನದ, `ಬೆಂಗಳೂರಿನದು' ಎಂದು ಕರೆಸಿಕೊಳ್ಳುವ ತಂಡ ಗೆದ್ದಿತು. (ರಾಯಲ್ ಚಾಲೆಂಜ್ ಎಂಬ ವಿಸ್ಕಿ ಹೆಸರಿಗೆ `ಬೆಂಗಳೂರು' ಎಂಬ ಬಾಲಂಗೋಚಿ ಅಂಟಿಸಿಕೊಂಡಿರುವ ಈ ತಂಡವನ್ನು ಮಲ್ಯರ ತಂಡ ಎಂದು ಕರೆಯುವುದೇ ಸೂಕ್ತ, ಅಲ್ಲವೇ?)  ನಾನು ನೋಡಿದ ಮೂರನೇ ಐಪಿಎಲ್ ಮ್ಯೋಚ್ ಇದು.

ಟ್ವೆಂಟಿ20 ಮ್ಯೋಚ್ ಒಂದು ಸಿನಿಮಾ ನೋಡುವಷ್ಟು ಸಮಯದಲ್ಲಿ  ಮುಗಿದುಹೋಗುತ್ತದೆ. ಹಾಗಾಗಿ ಐದು ದಿನ ಸುದೀರ್ಘವಾಗಿ ಆಡುವ ಟೆಸ್ಟ್ ಆಟದ ರಸಿಕರು ಟ್ವೆಂಟಿ20 ಕ್ರಿಕೆಟ್ ಇಷ್ಟ ಪಡುವುದಿಲ್ಲ. ಗಾಳಿ, ಬೆಳಕು, ನೆಲ, ಆಕಾಶ ಎಲ್ಲವನ್ನೂ ಅನುಕೂಲವೋ ಪ್ರತಿಕೂಲವೋ ಎಂದು ವಿಶ್ಲೇಷಿಸಿ,  ವೈರಿಗಳ ಬಲಾಬಲಗಳನ್ನು ಅಂದಾಜು ಮಾಡಿ, ತಂತ್ರ ಹೂಡಿ ಟೆಸ್ಟ್ ಆಟಗಾರ ಸೆಣೆಸಾಡಬೇಕು. ಕಷ್ಟ ಎದುರಾದಾಗ ಎದೆಗುಂದದೆ, ಯಾವ ಸಂದರ್ಭದಲ್ಲೂ  ಕ್ರೀಡಾ ಮನೋಭಾವ ಕೈಬಿಡದೆ, ಸವಾಲುಗಳನ್ನು ನಿಭಾಯಿಸಿಕೊಂಡು ಹೋಗಬೇಕು. ಟೆಸ್ಟ್ ಆಟವನ್ನು ಆದರ್ಶ ಜೀವನ ಕಲಿಸುವ ಮಾರ್ಗದರ್ಶಿಯಾಗಿ ಕಾಣುವವರು ಹಲವರಿದ್ದಾರೆ.

ಟಿ20 ಪ್ರಾರಂಭವಾದದ್ದು 2003 ರಲ್ಲಿ. ಇಂಗ್ಲೆಂಡ್ ಕೌಂಟಿ ಆಟದಲ್ಲಿ  ಮೊದಲು ಬಳಕೆಯಾದ ಈ ಪ್ರಕಾರ ನಂತರ ಎಲ್ಲೆಡೆ ಹಬ್ಬಿತು. ಆಟವನ್ನು ಟೆಸ್ಟ್‌ನಿಂದ ಏಕ ದಿನಕ್ಕೆ, ಮತ್ತು ಈಗ ಮೂರೇ ಗಂಟೆಗೆ ಮೊಟಕುಗೊಳಿಸುವುದರಿಂದ ಆಗುವ ಪರಿಣಾಮಗಳ ಬಗ್ಗೆ ಚರ್ಚೆ ನಡೆಯುತ್ತಿರುತ್ತದೆ. ಮೊಟಕಾದಷ್ಟೂ ಆಟದ ಸೂಕ್ಷ್ಮಗಳು ಮರೆಯಾಗುತ್ತವೆ; ಬ್ಯಾಟ್ ಬೀಸಿ ರನ್ ಗಳಿಸುವುದೊಂದೇ ಗುರಿಯಾಗಿಹೋಗುತ್ತದೆ. ಮುಖ್ಯ ಟೀಕೆ ಎಂದರೆ: ಇದರಲ್ಲಿ  ಒಟ್ಟಾರೆ ಆಟಗಾರರ, ನೋಡುಗರ ಧೋರಣೆಯೇ ಅಗ್ಗವಾಗಿ ಹೋಗುತ್ತದೆ.

ಇಂಥ ವಾದಗಳಲ್ಲಿ ಸತ್ಯ ಇಲ್ಲದೆ ಇಲ್ಲ. ಟೆಸ್ಟ್ ಕ್ರಿಕೆಟ್ ಶಾಸ್ತ್ರೀಯ ಸಂಗೀತದ ಗಾಂಭೀರ್ಯ ಹೊಂದಿದ್ದರೆ, ಟ್ವೆಂಟಿ20 ಸಿನಿಮಾದ ಚಿಣಮಿಣ ಐಟಂ ನಂಬರ್ ನಂತೆ ತೋರುತ್ತದೆ. ಆದರೆ ಮೊಟಕುಗೊಳಿಸುವ ತತ್ವದ ಬಗ್ಗೆ ತೀರ ನಿರಾಶೆಯಿಂದ ಮಾತಾಡುವುದು ಸುದ್ದಿ ಮಾಧ್ಯಮದಲ್ಲಿ ಕೆಲಸ ಮಾಡುವ ನನ್ನಂಥವರಿಗೆ ಕಷ್ಟ. ಆದರೆ ಐದು ದಿನ ಕೂತು ಟೆಸ್ಟ್ ನೋಡುವ ಸಮಯ, ವ್ಯವಧಾನ ಎಷ್ಟು ಜನರಿಗಿದೆ? ಪತ್ರಿಕೋದ್ಯಮ ನೋಡಿ. ಪ್ರಿಂಟ್ ಪತ್ರಿಕೆಗಳು ಹಿಂದೆಂದೂ ಕಾಣದ ಪಲ್ಲಟಗಳನ್ನು ಕಾಣುತ್ತಿವೆ. ಪತ್ರಿಕೆಯನ್ನೇ ಓದದ ಹಲವರನ್ನು ಇಂದು ಬಲ್ಲೆ. ಓದಲು ಟೈಮ್ ಇಲ್ಲ ಎಂದು ಹೇಳುವವರನ್ನು ಸುಸಂಸ್ಕೃತರ ವಲಯಗಳಲ್ಲಿಯೇ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಕಾಣಬಹುದು.

ಇದರಿಂದ ಪತ್ರಿಕೆಯಲ್ಲಿ ಸಂಕ್ಷಿಪ್ತವಾಗಿ ಬರೆಯುವ ಒತ್ತಡ ಹೆಚ್ಚಿದೆ. ಲಂಗು ಲಗಾಮಿಲ್ಲದ ಉದ್ದುದ್ದದ ಲೇಖನಗಳನ್ನು ಚಿಕ್ಕದಾಗಿಸಿ ತಿಳಿಗೊಳಿಸುವ ಕೆಲಸ ನನ್ನದಾದ್ದರಿಂದ ಟಿ20 ಟ್ರೆಂಡ್ ಮೂಲತತ್ವವೇ ಕೆಟ್ಟದು ಎಂದು ಹೇಳಲಾರೆ. ಎಷ್ಟೋ ಲೇಖನಗಳು ಸಂಕ್ಷಿಪ್ತವಾಗಿದ್ದರೆ ಮಾತ್ರ ಮೌಲಿಕವಾಗಿರುತ್ತವೆ. ಆದರೆ ಎಲ್ಲ ಲೇಖನಗಳ ಬಗ್ಗೆಯೂ ಹೀಗೆ ಹೇಳಲಾಗುವುದಿಲ್ಲ. ನಾನು ನಡೆಸುತ್ತಿದ್ದ ಆನ್‌ಲೈನ್ ಪತ್ರಿಕೆಯಲ್ಲಿ 500 ಪದಗಳಲ್ಲಿ ಪೂರ್ಣಗೊಳ್ಳುವ ಸಂಗೀತದ ಆಲ್ಬಂ ವಿಮರ್ಶೆ ಪ್ರಕಟಿಸುತ್ತಿದ್ದೆವು. 

ಈಗ್ಗೆ ಕೆಲವು ವರ್ಷದ ಹಿಂದೆ, ಮೊಬೈಲ್ ಬಳಕೆ ಹೆಚ್ಚಾದಾಗ, 140 ಅಕ್ಷರಗಳ (ಅಂದರೆ ಸುಮಾರು ಎರಡು ವಾಕ್ಯಗಳ) ಮಿತಿ ಇರುವ ಎಸ್‌ಎಂಎಸ್ ಈ ಕೆಲಸಕ್ಕೆ ಬಳಸಿಕೊಳ್ಳಬಹುದೇ ಎಂದು ಸ್ವಲ್ಪ ದಿನ ತಲೆಕೆಡಿಸಿಕೊಂಡಿದ್ದೆ. ಹೀಗೆ ವಿಮರ್ಶೆ ಬರೆಯಲೂ ಪ್ರಯತ್ನಿಸಿದೆ. ಅದು ಕಷ್ಟಸಾಧ್ಯ ಎಂದು ಅರಿವಾಯಿತು. ಎಲ್ಲರಿಗೂ ಅರ್ಥವಾಗುವ ಸಂಕ್ಷಿಪ್ತ ಪರಿಭಾಷೆ ಬಳಕೆಗೆ ಬಂದರೆ ಕೆಲವು ತೊಡಕುಗಳನ್ನು ಮೀರಬಹುದು ಎಂದು ಯೋಚಿಸುತ್ತಿದ್ದೆ. ವಿಮರ್ಶೆ ಬರೆಯಲು ಎರಡು ವಾಕ್ಯ ಸಾಲದು. (ನ್ಯೂಸ್ ಮುಖ್ಯಾಂಶ ಹೇಳಲು ಸಾಕು). ಆದರೆ ಈಗ ಸ್ಮಾರ್ಟ್ ಫೋನ್‌ಗಳು ಬಂದಿವೆ. ನ್ಯೂಸ್ ವೀಕ್ ನಡೆಸುತ್ತಿದ್ದ ಅಮೆರಿಕನ್ ಸಂಸ್ಥೆ ದಿ ಡೈಲಿ ಬೀಸ್ಟ್ ಎಂಬ ಹೆಸರಿನ ಮೊಬೈಲ್ ಸೌಲಭ್ಯ ಕಲ್ಪಿಸಿದೆ. ಹೆಚ್ಚು ಲೇಖನಗಳು ಒಂದು ಸ್ಮಾರ್ಟ್‌ಫೋನ್ ಸ್ಕ್ರೀನ್‌ನಷ್ಟು ಉದ್ದವಿರುತ್ತವೆ. ಲೇಖನಗಳು ಮೊನಚಾಗಿರುತ್ತವೆ.

ಐಪಿಎಲ್ ಸರಕು ಮಾರುವವರಿಗೆ ವರದಾನವಾಗಿದೆ, ಅವರದೇ ದರ್ಬಾರು ನಡೆದಿದೆ ಎನ್ನುವ ಟೀಕೆಯನ್ನು ಕೇಳಿದ್ದೇವೆ. ಆದರೆ ಇಂಥ ಟಿ 20 ಪಂದ್ಯಗಳಿಂದ ಒಂದಷ್ಟು ಒಳ್ಳೆಯದಾಗಿದೆ ಎಂದು ಕೆಲವು ಆಟಗಾರರು ಹೇಳಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಆಟಗಾರ ಮಾಥ್ಯೂ ಹೇಡೆನ್ ಹೇಳುವಂತೆ, ಆಟಗಾರ ಫಿಟ್ನೆಸ್ ಇದರಿಂದ ಹೆಚ್ಚಿದೆ.

ಮೊನ್ನೆಯ ಪಂದ್ಯದಲ್ಲಿ ಐಪಿಎಲ್‌ನ ಎಲ್ಲ ಗುಣ ಅವಗುಣಗಳೂ ಕಂಡು ಬಂದವು. ಆರ್‌ಸಿಬಿಯ ಗೇಲ್ ಎಂದಿನಂತೆ ಅದ್ಭುತವಾಗಿ ಆಡಿದ. ಆದರೆ ಆಟವನ್ನು ಸವಿಯುವ ಸಮಯವನ್ನು ಕೊಡದ ವ್ಯವಸ್ಥಾಪಕರು ಎರಡು ಓವರ್ ಮಧ್ಯೆ ಕೆಟ್ಟ ಹಾಡುಗಳನ್ನು ಹಾಕುತ್ತಿದ್ದರು. ಎಲ್ಲರೂ ಕಿರಚುವಂತೆ ಮೈಕಲ್ಲಿ  ಹುರಿದುಂಬಿಸುತ್ತಿದ್ದರು. ಯಾವುದೋ ಮಕ್ಕಳ ಅಮ್ಯೂಸ್ಮೆಂಟ್ ಪಾರ್ಕ್‌ನಲ್ಲಿದ್ದಂತೆ ಭಾಸವಾಯಿತು.

ಆಶ್ಚರ್ಯವೆಂದರೆ ಮುಂಬೈ ಇಂಡಿಯನ್ಸ್ ತಂಡವನ್ನು ಬೆಂಬಲಿಸುವ ನೂರಾರು ಜನ ಗ್ಯಾಲರಿಯಲ್ಲಿದ್ದರು. ಇವರು ಬೆಂಗಳೂರಿನಲ್ಲಿ ನೆಲೆಸಿರುವ ಮುಂಬೈ ಮೂಲದವರು ಮತ್ತು ಉತ್ತರ ಭಾರತೀಯರಿರಬೇಕು. ಅವರಲ್ಲಿ ಕೆಲವರು ಆರ್‌ಸಿಬಿ ಯಾವುದೋ ಕಳಪೆ `ಲೋಕಲ್' ತಂಡ ಎನ್ನುವ ರೀತಿ ವರ್ತಿಸುತ್ತಿದ್ದರು. ಮಲ್ಯರ ತಂಡದ ಭಕ್ತನಲ್ಲದ ನನ್ನ ಎದೆಯಲ್ಲಿ  ಅವರ ತಂಡವೇ ಗೆಲ್ಲಬೇಕು ಎನ್ನುವ ಹಠ ಮೂಡಿತು. ಆರ್‌ಸಿಬಿ ಗೆದ್ದಾಗ ಖುಷಿಪಟ್ಟವರಲ್ಲಿ ನಾನೂ ಒಬ್ಬ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT