ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಲೋಟದಷ್ಟು ಚಿಂತೆ

Last Updated 19 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಕಳೆದ ವರ್ಷ ಅಮೆರಿಕದ ನ್ಯೂಜರ್ಸಿಗೆ ಹೋದಾಗ ಅಲ್ಲಿ ಚಳಿಗಾಲ. ವಿಪರೀತ ಚಳಿ ಮತ್ತು ಹಿಮಪಾತ. ಶೂನ್ಯಕ್ಕಿಂತ ನಾಲ್ಕಾರು ಡಿಗ್ರಿ ಕೆಳಗಿದ್ದ ವಾತಾವ­ರಣದಲ್ಲಿ ಹೊರಗೆ ಹೋಗುವುದು ಹೇಗೆ? ಮರುದಿನ ನಾನೊಂದು ಕಾರ್ಯಕ್ರಮಕ್ಕೆ ಹೋಗಬೇಕಾದ್ದರಿಂದ ಮುಂಬರುವ ಹವಾಮಾನದ ಬಗ್ಗೆ ತಿಳಿದುಕೊಳ್ಳಲು ಟಿ.ವಿ. ನೋಡುತ್ತಿದ್ದೆ. 

ಮರುದಿನದ ಹವಾಮಾನದ ಬಗ್ಗೆ ಸುದ್ದಿ ಬಂದಾಗ ನಿರೂಪಕಿ ಹೇಳಿದರು, ನಾಳೆ ಬಹು ದಟ್ಟವಾದ ಮಂಜು ಮುಸುಕಲಿದೆ. ಮಧ್ಯಾಹ್ನದವರೆಗೂ ಇಡೀ ನಗರದ ಪ್ರದೇಶವನ್ನು ಮಂಜು ಕವಿಯುವುದರಿಂದ ಹೊರಗೆ ವಾಹನ ತೆಗೆದುಕೊಂಡು ಹೋಗುವುದನ್ನು ತಪ್ಪಿಸುವುದು ವಾಸಿ. ಆ ದಟ್ಟ ಮಂಜಿನಿಂದಾಗಿ ಸುಮಾರು ಹತ್ತು ಅಡಿಗಳಷ್ಟು ದೂರದ ವಸ್ತುವೂ ಕಾಣುವುದು ಕಷ್ಟ. ಆಯ್ತು ಎಂದುಕೊಂಡು ಕಾರ್ಯಕ್ರಮವನ್ನು ಬದಲಾಯಿಸುವಂತೆ ಕಾರ್ಯಕರ್ತರಿಗೆ ಹೇಳಿ ವ್ಯವಸ್ಥೆ ಮಾಡಿದೆ.

ಮರುದಿನ ಪತ್ರಿಕೆಯಲ್ಲಿ ಮಂಜಿನ ಬಗ್ಗೆ ಒಂದು ವಿಶೇಷ ಲೇಖನ ಬಂದಿತ್ತು. ಅದನ್ನು ಬರೆದದ್ದು ವಾಷಿಂಗ್ಟನ್‌ ಬ್ಯೂರ  ಆಫ್ ಸ್ಟ್ಯಾಂಡರ್ಡ್ಸ ಸಂಸ್ಥೆಯ ಹಿರಿಯ ಅಧಿಕಾರಿ. ಅದೊಂದು ಬಹು ಜವಾಬ್ದಾರಿಯಾದ ಸಂಸ್ಥೆ. ಪ್ರತಿಯೊಂದು ವಸ್ತುವಿನ ಮಟ್ಟವನ್ನು ಅಳೆದು ತಿಳಿಸುವ ಕೆಲಸ ಈ ಸಂಸ್ಥೆಯದು. ಈ ಲೇಖನದಲ್ಲಿ ಬಂದ ಒಂದು ವಿಷಯ ನನ್ನ ಗಮನ ಸೆಳೆಯಿತು. ನೆಲದಿಂದ ನೂರು ಅಡಿಯಷ್ಟು ಎತ್ತರದ, ಇಡೀ ನಗರವನ್ನು ಆವರಿಸಿರುವ ಈ ಮಂಜು ಸುಮಾರು ಆರು ಕೋಟಿ ಅತ್ಯಂತ ಸೂಕ್ಷ್ಮ ನೀರಿನ ಹನಿಗಳಿಂದಾಗಿದೆ.

ಆರು ಕೋಟಿ ಹನಿಗಳು ಎಂದರೆ ತುಂಬ ದೊಡ್ಡದಾಗಿ ಕಾಣುತ್ತದಲ್ಲವೇ? ಆದರೆ ಅವೆಲ್ಲ ನೀರಿನ ಪುಟ್ಟ ಪುಟ್ಟ ಹನಿಗಳನ್ನು ತಂಪುಗೊಳಿಸಿ ಶೇಖರಿಸಿದರೆ ಅದು ಒಂದು ಲೋಟ ನೀರಿಗಿಂತ ಕಡಿಮೆ.  ಅಂದರೆ ಇಡೀ ನಗರದ ದೃಷ್ಟಿಯನ್ನೇ ಕಿತ್ತುಕೊಂಡ ಒಟ್ಟು ಮಂಜಿನ ನಿಜವಾದ ಗಾತ್ರ ಒಂದು ಲೋಟ ಮಾತ್ರ! ಒಂದು ಲೋಟ ನೀರು ತುಂಬ ಚಿಕ್ಕ ಗಾತ್ರ. ಆದರೆ ಆ ನೀರು ಅತ್ಯಂತ ಚಿಕ್ಕ ಚಿಕ್ಕ ಕಣಗಳಾಗಿ ಹರಡಿದರೆ ಇಡೀ ನಗರದ, ನೆಲದಿಂದ ನೂರು ಅಡಿಗಳಷ್ಟು ಕ್ಷೇತ್ರವನ್ನು ಕತ್ತಲೆಯಲ್ಲಿ ಮುಳುಗಿಸಬಲ್ಲದು!

ಆಗ ನನಗೆನ್ನಿಸಿತು, ಎಲಾ, ಒಂದು ಲೋಟದಷ್ಟು ಚಿಂತೆ, ಗಾಬರಿ ಮತ್ತು ಹೆದರಿಕೆಗಳು ಅನವಶ್ಯಕವಾಗಿ ಹರಡಿದರೆ ಇಡೀ ಜೀವನವನ್ನೇ ಮಬ್ಬುಗೊಳಿಸ­ಬಲ್ಲವಲ್ಲವೇ? ನಮ್ಮ ಚಿಂತೆ, ಭಯಗಳು ಮುಂದಾಗುವ ಯಾವುದೋ ಘಟನೆಯ ಬಗ್ಗೆ, ಮುಂಬರುವ ಯಾವುದೋ ಪರಿಸ್ಥಿತಿಯ ಬಗ್ಗೆ. ನೀವು ಗಮನಿಸಿದ್ದೀರಾ? ಯಾವ ಘಟನೆಯ ಬಗ್ಗೆ, ಪರಿಸ್ಥಿತಿಯ ಬಗ್ಗೆ ನೀವು ಅಷ್ಟೊಂದು ಭಯಪಟ್ಟಿದ್ದಿರೋ, ಚಿಂತಿಸಿದ್ದಿರೋ ಅದು ಬರಲೇ ಇಲ್ಲ. ಬರೀ ಚಿಂತಿಸಿದ್ದೇ ಬಂತು. ಬಹಳಷ್ಟು ಬಾರಿ ನಾವು ಚಿಂತಿಸಿದ ಅಪಾಯಗಳು ನಡೆಯುವುದೇ ಇಲ್ಲ.

ಕಳೆದ ಇಡೀ ವರ್ಷ ನೀವು ಚಿಂತಿಸಿ ಹೈರಾಣಾದ ವಿಷಯ ನೆನಪಿಸಿಕೊಳ್ಳಿ. ಅದರ ಬಗ್ಗೆ ಈಗ ನೀವು ನಗುತ್ತೀರಿ. ಛೇ ಆಗ ಅದರ ಬಗ್ಗೆ ಎಷ್ಟು ತಲೆ ಕೆಡಿಸಿಕೊಂಡಿದ್ದೆನಲ್ಲವೇ ಎಂದು ಆಶ್ಚರ್ಯಪಡುತ್ತೀರಿ. ಚಿಂತಿಸಿದ ಕೆಲಸ ಹೇಗೋ ಆಗಿ ಹೋಯಿತು. ಮತ್ತೆ ಜೀವನ ನಡೆಯುತ್ತಿದೆ. ಒಬ್ಬ ಮನಃಶಾಸ್ತ್ರಜ್ಞರ ಪ್ರಕಾರ ನಾವು ಭಯಪಟ್ಟ ಕೆಲಸಗಳಲ್ಲಿ ಪ್ರತಿಶತ ೨೨ ರಷ್ಟು ನಡೆಯುವುದೇ ಇಲ್ಲ.

ಆದರೆ ಆ ಭಯದ ಯೋಚನೆಯಲ್ಲಿ ನಾವು ಮುರುಟಿಹೋಗುತ್ತೇವೆ. ಈ ಚಿಂತೆ, ಈ ಭಯಗಳು ಅತ್ಯಂತ ಮೊಂಡಾದ ಉಳಿ ಇದ್ದಂತೆ. ಇಂಥ ಉಳಿಯಿಂದ ನಮ್ಮ ಭವಿಷ್ಯದ ಸುಂದರ ಶಿಲ್ಪವನ್ನು ನಿರ್ಮಿಸಲು ಸಾಧ್ಯವೇ? ಅಂದರೆ ಚಿಂತೆ ಇಲ್ಲದೇ ಬದುಕುವುದು ಹೇಗೆ ಎಂಬ ಪ್ರಶ್ನೆಯೂ ಉದ್ಭವಿಸಬಹುದು. ಬರಬಹು­ದಾದ ಸಮಸ್ಯೆಗಳ ಬಗ್ಗೆ ನಿಧಾನ­ವಾಗಿ, ವೈಚಾರಿಕವಾಗಿ ಯೋಚಿಸಿ, ಆದರೆ ಭಾವನಾತ್ಮಕ­ವಾಗಿ­ಯಲ್ಲ.

ಪರಿಹಾರಗಳನ್ನು ಹುಡುಕಲು ಪ್ರಯತ್ನಿಸಿ, ತಿಳಿದವರಲ್ಲಿ ಈ ಸ್ಥಿತಿಯನ್ನು ಮೊದಲೇ ಕಂಡವರನ್ನು ಕೇಳಿ ಮಾರ್ಗದರ್ಶನ ಪಡೆಯಿರಿ. ಆದರೆ ದಿನಾಲು ಸುಮ್ಮನೇ ಕೊರಗುತ್ತ ಕೂಡದಿರಿ. ಏಕೆಂದರೆ ಒಂದು ಲೋಟದಷ್ಟು ಚಿಕ್ಕ ವಿಷಯದ ಚಿಂತೆ ಹರಡುತ್ತಾ ಹೋದರೆ ಜೀವನ­ದೃಷ್ಟಿಯನ್ನೇ ಮಸುಕುಮಾಡಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT