ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣೇ ಕಾಮನ ಬೀಜ

Last Updated 5 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಯಯಾತಿಯು ಸುಖದ ಅನುಭವವನ್ನು ಅತ್ಯುತ್ಕಟತೆಯಲ್ಲಿ ಕಂಡರಿಸುತ್ತಲೇ ಅಲ್ಲಿಯೇ ಆ ಆಳದಲ್ಲಿ ದುಃಖದ ಬೀಜವೊಂದನ್ನು ಕಂಡನು. ಮನಸೆಂಬ ಕಡಲಿನ ಆಳದಲ್ಲಿ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವ ಭಿನ್ನಪ್ರವಾಹಗಳು ಪರಸ್ಪರ ತಾಕಲಾಡುತ್ತಿರುವುವು. ಕಾಮನೆಗಳೆಂದರೆ ಸುಖದ ಸಕ್ಕರೆಯ ಲೇಪವನ್ನು ಹೊತ್ತ ದುಃಖದ ಕಹಿ ಬೀಜಗಳು.

ಪ್ರತಿಯೊಂದು ಅನುಭವವೂ ತನ್ನ ಭಾರವನ್ನು ಹೆಚ್ಚುಕಾಲ ಹೊರಲಾರದೆ, ಸ್ವ–ವಿರೋಧವನ್ನು ತನ್ನೊಳಗೆ ಇಟ್ಟುಗೊಂಡಿದೆ ಎಂದು ಲೋಕಕಂಡ ಈ ಮಹಾಕಾಮುಕನಿಗೆ ಹೊಳೆಯಿತು! ನಿಸರ್ಗವು ನಮ್ಮ ಮೇಲೆ ಸುರಿಸುವ ಪ್ರೀತಿಯನ್ನು ಯಾವ ಮಾತುಗಳಲ್ಲಿ ಬಣ್ಣಿಸುವುದು ಸಾಧ್ಯ? ತನ್ನನ್ನು ತಳಸ್ಪರ್ಶಿಯಾಗಿ ಅನುಭವಿಸಿದವನಿಗೆ ನಿಸರ್ಗವು ತನ್ನ ರಹಸ್ಯವನ್ನು ತೆರೆದು ತೋರಿಸುವುದು.

ಸುಖದಲ್ಲಿ ಅಡಗಿರುವ ದುಃಖದ ಅರಿವನ್ನು ಅದು ನಿರ್ವಂಚನೆಯಿಂದ ಊಡುವುದು. ಅಂದರೆ – ಸುಖದ ಮೂಲಕ ನಿಜವಾದ ದುಃಖದ ಪರಿಚಯ! ಇದರ ಇನ್ನೊಂದು ಮುಖವೂ ನಿಜ. ಅದೆಂದರೆ ದುಃಖಾನುಭವದ ಮೂಲಕ ನಿಜಸುಖದ ಗುರುತು! ಬಯಕೆಗಳೇ ದುಃಖದ ಮೂಲ ಎನ್ನುವೆವಾದರೆ ಸುಖದ ಬಯಕೆಗಳೇ ನೈಜಸುಖಕ್ಕೆ ಅಡ್ಡಿ ಎಂದಂತೆ.ಇದು ತಿಳಿದು ಬಯಕೆಗಳನ್ನು ಕೈಬಿಟ್ಟಾಗಲೇ ಸಹಜಸುಖ. ಅರಿವಿನಲ್ಲಿಯೇ ಇರುವ ಈ ವಿಲಕ್ಷಣತೆಯನ್ನು ಮನಸ್ಸು ತನ್ನೊಳಗೆ ಮುಳುಗಿದಾಗಲೇ ಅನುಭವಿಸಿ ಅರಿಯಬಲ್ಲೆವಲ್ಲದೆ ಮನಸ್ಸು ಹೊರಗಣ ವಿಷಯದಲ್ಲಿ ಅಲೆಯುತ್ತಿರಲಾಗಿ ತಿಳಿಯಲಾರೆವು.

ಅಂದರೆ ಐತಿಹಾಸಿಕ ಕಾಲದ ನೇರಚಲನೆಯಲ್ಲಿ ಮನಸ್ಸು horiziontal ಆಗಿ ಸಾಗುತ್ತಿರುವಾಗ ತಿಳಿಯಲಾರೆವು. ನಮ್ಮೊಳಗಿನ ಆಧ್ಯಾತ್ಮಿಕ ಕಾಲದ vertical ಚಲನೆಯಲ್ಲಿ ಇದನ್ನು ತಿಳಿಯಬಲ್ಲೆವು. ಯಯಾತಿಗೆ ಈ ಅರಿವು – ಮಗನ ಯೌವನವನ್ನು ಪಡೆದು ಸುಖಿಸುತ್ತಿರಲಾಗಿ ಉಂಟಾಯಿತು. ಮುಪ್ಪಿನಲ್ಲಿ ಯೌವನ; ಯೌವನದಲ್ಲಿ ಮುಪ್ಪಿನ ಹಾಸುಹೊಕ್ಕಿನಲ್ಲಿ ಈ ಹೊಸ ಕಾಣ್ಕೆ ಉಂಟಾಯಿತು. ಹಳೆಯ–ಹೊಸ ಈ ಎರಡು ಜನಾಂಗಗಳ, ತಂದೆ–ಮಗನ ಈ ಅತಿ ಸೂಕ್ಷ್ಮ ಘರ್ಷಣೆಯಲ್ಲಿ ಈ ಅರಿವು ಹೊತ್ತಿಕೊಂಡಿತು. ಯಯಾತಿಗೆ ಮಾತ್ರವಲ್ಲ, ಪೂರುವಿಗೂ ಈ ಅರಿವು ಉಂಟಾಗಿರಬೇಕು!

ಯಯಾತಿ, ತನ್ನ ಮುಪ್ಪನ್ನು ಅದೊಂದು ಹೇಳಲಾಗದ ಸಂತಸದಿಂದ ಸ್ವೀಕರಿಸಿ ಕಾಡಿಗೆ ತೆರಳಿದನು. ಪೂರು ತನ್ನ ಯೌವನವನ್ನು ಮರಳಿ ಪಡೆದನು. ಮುಪ್ಪನ್ನು ಕೆಲಕಾಲ ಅನುಭವಿಸಿ ಮರಳಿ ತಾರುಣ್ಯದ ಹುಮ್ಮಸವನ್ನು ಪಡೆದ ಮೊದಲ ಪಕ್ವತರುಣ – ಪೂರು. ದೀರ್ಘಕಾಲದಿಂದ ನಡೆದುಬಂದ ಪರಂಪರೆಯೊಂದು ತರುಣ ಜೀವಗಳನ್ನು ಹೀಗೆಯೇ ಕಾಡುತ್ತ ಕಾಡುತ್ತ ರೂಪಿಸುವುದೇನೋ!

ಪೂರುವಿನ ಪರಂಪರೆ ಬೆಳೆಯಿತು. ಈ ಸಂತತಿಯನ್ನೇ ಪೌರವರೆನ್ನುವರು. ಈ ಪರಂಪರೆಯಲ್ಲಿ ಬಂದವನು ದುಷ್ಷಂತ–ಶಕುಂತಲೆಯರ ಮಗ – ಭರತ. ಭರತನು ಖ್ಯಾತನಾಗಿ ಸೌರವವಂಶವೇ ಮುಂದೆ ‘ಭರತವಂಶ’ ಎಂದು ಹೆಸರಾಯಿತು. ಈ ಭರತವಂಶೀಯರಾದ ಕೌರವ–ಪಾಂಡವರ ಇತಿಹಾಸ ಕಥನವಾದುದರಿಂದಲೇ ವ್ಯಾಸರು ತಮ್ಮ ಕೃತಿಯನ್ನು ‘ಭಾರತ’ ಎಂದು ಕರೆದರು. ನಮ್ಮ  ಈ ದೇಶಕ್ಕೆ ‘ಭಾರತ’ ಎಂಬ ಹೆಸರಾದದ್ದು ಕೂಡ ದುಷ್ಷಂತ– ಶಕುಂತಲೆಯರ ಮಗ ಭರತ ಚಕ್ರವರ್ತಿಯಿಂದಲೇ ಎಂದೂ ಹೇಳುವರು. ಇದು ಕ್ಷತ್ರಿಯ ಪರಂಪರೆ.

ಈ ಅರ್ಥದಲ್ಲಿ ಲೌಕಿಕವೇ ಮುಖ್ಯವಾಗಿರುವ ಪರಂಪರೆ. ಇಲ್ಲಿ ಸಾಂದರ್ಭಿಕವಾಗಿ ನೆನಪಿಸಿಕೊಳ್ಳುವುದಾದರೆ, ಇದಕ್ಕಿಂತ ಭಿನ್ನವಾಗಿ ಇನ್ನೊಂದು ಪರಂಪರೆಯನ್ನು ಡಾ. ಬಿ.ಆರ್‌. ಅಂಬೇಡ್ಕರ್‌ ಗುರುತಿಸುತ್ತಾರೆ. ಎರಡು ‘ಭಾರತ’ಗಳಿವೆ ಎನ್ನುತ್ತಾರೆ ಅಂಬೇಡ್ಕರ್‌. ಒಂದು, ದೌಷ್ಷಂತೀ ಭಾರತ. ಅಂದರೆ ದುಷ್ಷಂತ–ಶಕುಂತಲೆಯರ ಮಗ ‘ಭರತ’ನಿಂದಾಗಿ ಹಾಗೆ ಹೆಸರಾದ ಭಾರತಭೂಮಿ. ಇನ್ನೊಂದು –ಸ್ವಾಯಂಭುವ ಮನುವಿನ ಪರಂಪರೆಯಲ್ಲಿ ಬಂದ, ಪ್ರಿಯಂವದ– ಅಗ್ನೀಧ್ರ–ನಾಭಿ–ಋಷಭ–ಭರತ ಪರಂಪರೆ. ಈ ಪರಂಪರೆಯ ಭರತನಿಂದಾಗಿಯೇ ದೇಶಕ್ಕೆ ‘ಭಾರತ’ ಎಂದು ಹೆಸರಾಯಿತು ಎನ್ನುತ್ತದೆ ಭಾಗವತ ಪುರಾಣ. ಅಂಬೇಡ್ಕರ್‌ ಭಾಗವತದ ಮಾತನ್ನು ಉಲ್ಲೇಖಿಸುತ್ತಾರೆ.

‘ತೇಷಾಂ ವೈ ಭರತೋ ಜ್ಯೇಷ್ಠೋ ನಾರಾಯಣ ಪರಾಯಣಃ
ವಿಖ್ಯಾತಂ ವರ್ಷಮೇತದ್‌ ಯನ್ನಾಮ್ನಾ ಭಾರತ ಮುತ್ತಮಮ್‌’

(ಋಷಭದೇವನ ನೂರು ಮಂದಿ ಮಕ್ಕಳಲ್ಲಿ ಭರತನು ಹಿರಿಯ. ಈತ ಭಗವದ್‌ ಭಕ್ತ. ಇವನ ಹೆಸರಿನಿಂದಲೇ ಈ ಶ್ರೇಷ್ಠವಾದ ನಾಡು ‘ಭಾರತ’ ಎಂದು ಹೆಸರಾಯಿತು.)
ಈ ಭರತಪರಂಪರೆಯೇ ಜೈನಪರಂಪರೆ ಕೂಡ. ಅಂಬೇಡ್ಕರ್‌ ಅವರಿಗೆ ಈ ಪರಂಪರೆಯಲ್ಲಿ ಏಕೆ ಆಸಕ್ತಿ ಎಂದರೆ ವೇದಗಳಲ್ಲಿ ಉಲ್ಲೇಖಗೊಂಡ ಪ್ರಸಿದ್ಧ ರಾಜನಾದ ‘ಸುದಾಸ’ ಇದೇ ಭರತ ಪರಂಪರೆಗೆ ಸೇರಿದವನು. ಸುದಾಸ, ಅಶ್ವಮೇಧವನ್ನು ಮಾಡಿದ ದೊಡ್ಡ ಸಾಮ್ರಾಟನಾಗಿದ್ದ. ವಿಶ್ವಾಮಿತ್ರನಂಥ ಪ್ರಚಂಡ ವ್ಯಕ್ತಿಯೇ ಸುದಾಸನಿಗೆ ಪುರೋಹಿತನಾಗಿದ್ದ. ಸುದಾಸನ ತಂದೆಯಾದ ‘ದಿವೋದಾಸ’ ಭರತಕುಲಕ್ಕೆ ಸೇರಿದವನು ಎಂಬ ವೇದಗಳಲ್ಲಿ ಬಂದ ಉಲ್ಲೇಖವನ್ನು ಅಂಬೇಡ್ಕರ್‌ ಕೊಡುತ್ತಾರೆ.

ದಿವೋದಾಸನಿಗೆ ‘ಪಿಜವನ’ ಎಂಬ ಹೆಸರೂ ಇತ್ತು. ‘ಪಿಜವನ’ನ ಮಗನಾಗಿ ಸುದಾಸ ‘ಪೈಜವನ’ ಎನಿಸುತ್ತಾನೆ. ಈ ಪೈಜವನ ಸುದಾಸನನ್ನು ಮಹಾಭಾರತ, ಶೂದ್ರ ಎಂದು ಕರೆದಿದೆ – ‘ಶೂದ್ರಃ ಪೈಜವನೋ ನಾಮ’. ಇದೀಗ ಆಶ್ಚರ್ಯ! ಕ್ಷತ್ರಿಯನು ಶೂದ್ರನಾದದ್ದು ಹೇಗೆ?

ಈ ಎಲ್ಲ ಮಾಹಿತಿಗಳ ಮೇಲಿನಿಂದ ಅಂಬೇಡ್ಕರ್‌ ತಲುಪಿರುವ ನಿಗಮನ ಯಾವುದೆಂದರೆ – ಶೂದ್ರರು ಕ್ಷತ್ರಿಯರೇ ಆಗಿದ್ದರು; ಬ್ರಾಹ್ಮಣ–ಕ್ಷತ್ರಿಯರ ನಡುವಣ ಘರ್ಷಣೆ ತೀವ್ರವಾದಾಗ ಕ್ಷತ್ರಿಯ ಸಂಸ್ಕಾರದಿಂದಲೂ ಬಾಹ್ಯರಾಗಿ ಶೂದ್ರರಾಗಿ ಪರಿಣಮಿಸಿದರು – ಎಂದು. ಮತ್ತು ಮುಖ್ಯವಾದ ನಿಗಮನ ಏನೆಂದರೆ, ಭಾಗವತ ಪುರಾಣವು ಹೇಳುವಂತೆ ಈ ದೇಶಕ್ಕೆ ಯಾರಿಂದ ‘ಭಾರತ’ ಎಂದು ಹೆಸರಾಯಿತೋ ಆ ಪರಂಪರೆಗೆ ನೇರವಾಗಿ ಸಂಬಂಧಿಸಿದ್ದು – ಶೂದ್ರಸಮುದಾಯ ಎಂದು. ಋಗ್ವೇದ, ಮಹಾಭಾರತ, ಭಾಗವತಗಳಿಂದಲೇ ಈ ಅಂಶಗಳನ್ನು ಅಂಬೇಡ್ಕರ್‌ ಎತ್ತಿ ತೋರಿಸುತ್ತಾರೆ ಎನ್ನುವುದು ಚೇತೋಹಾರಿಯಾಗಿದೆ.

ಅಲ್ಲದೆ ಈ ವಿವರಗಳ ಮೇಲಿನಿಂದ ನೋಡುವುದಾದರೆ, ಅಂಬೇಡ್ಕರ್‌, ಜೈನಧರ್ಮಕ್ಕೆ ಮತಾಂತರಗೊಳ್ಳುವುದು ಹೆಚ್ಚು ತರ್ಕಬದ್ಧವಾಗುತ್ತಿತ್ತು. ಆದರೆ ಜೈನ ತತ್ತ್ವಚಿಂತನೆಯಲ್ಲಿ ಸಹಮತ ಏರ್ಪಡದೆ ಅವರು ಬೌದ್ಧಧರ್ಮದತ್ತ ಒಲಿದರು ಎನಿಸುತ್ತದೆ. ಇಂಥ ವಿಷಯಗಳಲ್ಲೆಲ್ಲ ನಾನಾದೃಷ್ಟಿ ಭೇದಗಳೂ ವಾದಗಳೂ ಸಾಧ್ಯವೆನ್ನುವುದು ವಿದಿತವೇ ಇದೆ. ಮುಖ್ಯವಾದ ಮಾತೆಂದರೆ ಪರಂಪರೆಯಲ್ಲಿ ಬಹುರೂಪೀ ಎಳೆಗಳಿವೆ. ಲೌಕಿಕ ಎಳೆಗಳು, ಆಧ್ಯಾತ್ಮಿಕ ಎಳೆಗಳು. ಇವೆರಡೂ ಪರಸ್ಪರ ಬೆರೆಯಲು ಹವಣಿಸುವ ಎಳೆಗಳು. ಈ ಹವಣಿನಲ್ಲಿ ರಸ– ವಿರಸಗೊಳ್ಳುವ, ಸಮ್ಮುಖ– ವಿಮುಖಗೊಳ್ಳುವ, ಬೆರೆತರೂ ಬೆರೆಯದಂತಿರುವ, ಬೆರೆಯದೆಯೂ ಬೆರೆತಂತಿರುವ ನಾನಾ ಭಂಗಿಗಳಿವೆ.

ಲೌಕಿಕ ಇತಿಹಾಸ ಮತ್ತು ಆಧ್ಯಾತ್ಮಿಕ ಇತಿಹಾಸ – ಈ ಎರಡರ ನಡುವಣ ಸಮಾನ ಅಂಶವೆಂದರೆ ಘಟನೆಗಳು ಮತ್ತೆ ಮತ್ತೆ ಆವೃತ್ತಿಗೊಳ್ಳುತ್ತಹೋಗುವವು. ಯಯಾತಿ–ಪೂರು ಸಂಬಂಧ, ಶಂತನು ಮತ್ತು ದೇವವ್ರತ (ಭೀಷ್ಮ)ರ ಸಂಬಂಧದಲ್ಲಿ ಪುನರಭಿನೀತವಾಗುವುದು, ಸಂದರ್ಭ–ಪರಿಸರ ಬೇರೆ ಇರಬಹುದು. ಆದರೆ ತಂದೆಯ ಕಾಮನೆಯನ್ನು ನೆರವೇರಿಸುವುದಕ್ಕಾಗಿ ಪ್ರಾಯಪ್ರಬುದ್ಧನಾದ ಮಗನು ತಾನು ಬ್ರಹ್ಮಚರ್ಯವನ್ನು ಯಾವಜ್ಜೀವ ಪಾಲಿಸಬೇಕಾಗಿ ಬರುವುದು.

ಇದು ಲೌಕಿಕವಾಗಿ ಘಟನೆಗಳ ಐತಿಹಾಸಿಕ ಮರುಕಳಿಕೆಯಾದರೆ, ಆಧ್ಯಾತ್ಮಿಕವಾಗಿ, ಎಂದೋ ಒಮ್ಮೆ ಮನದಾಳದಲ್ಲಿ ಬೀಜರೂಪವಾಗಿ ನೆಲೆಯಾದ ಸಂಸ್ಕಾರವೊಂದು ದೊಡ್ಡದಾಗಿ ಬೆಳೆಯುತ್ತ ಆ ಸಂಸ್ಕಾರವು ನಿಃಶೇಷವಾಗಿ ಇಲ್ಲವಾಗುವವರೆಗೆ ವಿವಿಧ ರೂಪದಲ್ಲಿ ಪ್ರಕಟಗೊಳ್ಳುತ್ತ ಹೋಗುವುದು. ಹೀಗೆ ಲೌಕಿಕ ಮತ್ತು ಆಧ್ಯಾತ್ಮಿಕ – ಈ ಎರಡು ಮುಖಗಳಲ್ಲಿಯೂ ಘಟನಾವಳಿಗಳ ಮರುಕಳಿಕೆಗಳನ್ನು ನಿರ್ವಹಿಸುತ್ತ ಇತಿಹಾಸದ ಓದೆನ್ನುವುದು ಅಭಿಜ್ಞಾನದ ಅಚ್ಚರಿಯನ್ನೊದಗಿಸುವ ಮೂಲಕ ರಸೋತ್ಕರ್ಷವನ್ನೂ ಉಂಟುಮಾಡುವುದೆನ್ನುವುದೇ ಮಹಾಭಾರತದ ಒಳದನಿಯಾಗಿದೆ.

ಅಭಿಜ್ಞಾನವೆಂದರೆ ಈಗಿನ ಘಟನೆಯಲ್ಲಿ ಕಳೆದುಹೋದ ವಿದ್ಯಮಾನವೊಂದರೆ ಚಹರೆಯನ್ನು ಗುರುತಿಸುವುದು. ಅದೇ ಇದು ಎಂಬ ಸಂಬಂಧದ ಅರಿವನ್ನು ಪಡೆಯುವುದು. ನೆನಪಿನ ಮೂಲಕ ಕಾಲದ ಜೀವಂತಿಕೆ ಎಂದೂ ಕಳೆದುಹೋಗಿಲ್ಲ ಎಂದು ಅರಿಯುವುದು. ಮಹಾಭಿಷನೆಂಬ ಚಕ್ರವರ್ತಿಯೊಬ್ಬನಿದ್ದ, ಇಕ್ಷ್ವಾಕು ವಂಶಕ್ಕೆ ಸೇರಿದವನು. ಈತನೊಮ್ಮೆ ಬ್ರಹ್ಮಸಭೆಗೆ ಹೋಗಿದ್ದನಂತೆ. ದೇವತೆಗಳು ರಾಜರ್ಷಿಗಳು ಎಲ್ಲ ಅಲ್ಲಿ ನೆರೆದಿದ್ದರು. ದೇವನದಿಯಾದ ಗಂಗೆ ಈ ಸಭೆಗೆ ಬಂದಳು.

ಬಂದವಳು ಬ್ರಹ್ಮದೇವನ ಸಮೀಪಕ್ಕೆ ನಡೆದಳು. ಗಂಗೆಯ ನೀರೇ ಬಿಳಿ. ಬೆಳದಿಂಗಳಿನಂಥ ಬಿಳಿ ಬಟ್ಟೆ ಉಟ್ಟಿದ್ದಳು. ಬೆಳ್ಳಿಯ ವಿಗ್ರಹದಂತಿದ್ದಳು. ಸರ್ವಧವಳೆ, ಗಂಗೆ ನಡೆದು ಬರುತ್ತಿರಬೇಕಾದರೆ ಇದ್ದಕಿದ್ದಂತೆ ತುಸು ಬಿರುಸಾಗಿ ಗಾಳಿ ಬೀಸಿತು. ಸಭೆಯಲ್ಲಿ ಸಂಚಲನವಾಯಿತು. ಗಾಳಿಗೆ ನದಿಯ ಮೇಲ್ಮೆಯಲ್ಲಿ ತೆರೆಗಳೇಳುವಂತೆ ಗಂಗೆ ಉಟ್ಟಿದ್ದ ಬಟ್ಟೆ ಗಾಳಿಯಲ್ಲಿ ಹಾರಾಡಿತು.

ಆಕೆಯ ಮೈಯನ್ನು ಸಭೆಗೆ ತೋರಿಸಿತು. ಅನಿಮಿಷರೆನಿಸುವ ದೇವತೆಗಳೆಲ್ಲ ಈ ಅಚಾತುರ್ಯಕ್ಕೆ ತಮ್ಮ ಒಪ್ಪಿಗೆ ಇಲ್ಲವೆಂಬಂತೆ ತಮ್ಮ ಮುಖ ಕೆಳಗೆ ಹಾಕಿ – ಗಂಗೆ ಇನ್ನಷ್ಟು ನಾಚದಂತೆ ಮಾಡಿದರು. ಆದರೆ ಈ ಮಹಾಭಿಷನಿದ್ದನಲ್ಲ – ಈತ ನೆಟ್ಟ ನೋಟದಿಂದ, ದಡದಲ್ಲಿ ಕುಳಿತು ನದಿಯನ್ನು ನೋಡುತ್ತಿರುವಷ್ಟು ನಿಃಶಂಕೆಯಿಂದ, ನಾಚಿಕೆಗೆಟ್ಟು ಅರಿವೆ ಇಲ್ಲದ ಗಂಗೆಯ ಮೈಯನ್ನು ಪರಿವೆ ಇಲ್ಲದೆ ನೋಡುತ್ತಿದ್ದ. ನದಿಯನ್ನೇ ಆದರೂ ಇಷ್ಟು ನಿಃಶಂಕೆಯಿಂದ ನೋಟಕ್ಕೂ ಕೂಡ ಯಾರೂ ಬಳಸಿಕೊಳ್ಳಬಾರದು – ಎನಿಸುತ್ತದೆ.

ಬ್ರಹ್ಮದೇವ, ಮಹಾಭಿಷನ ಬಗ್ಗೆ ಕುಪಿತನಾದ. ನೀನು ಈ ಸಭೆಯಲ್ಲಿರಲು ಯೋಗ್ಯನಲ್ಲವೆಂದ. ನಿನ್ನಲ್ಲಿ ಕಾಮದ ಸಂಸ್ಕಾರಗಳು ತುಂಬಿವೆ. ನೀನು ಮರ್ತ್ಯಲೋಕದಲ್ಲಿ ಹುಟ್ಟು. ಈ ಕಾಮನೆಗಳನ್ನು ಅನುಭವಿಸಿ, ಸಂಸ್ಕಾರಗಳನ್ನು ಕಳೆದುಕೊಂಡು ಸ್ವಚ್ಛನಾಗಿ – ಗಂಗೆಯಲ್ಲಿ ಮಿಂದಂತೆ ಸ್ವಚ್ಛನಾಗಿ ಬಾ. ಇದಕ್ಕನುಕೂಲವಾಗುವಂತೆ ಗಂಗೆಯೇ ನಿನಗೆ ಮರ್ತ್ಯದಲ್ಲೂ ಸಹವರ್ತಿಯಾಗಿರುವಳು. ಸ್ವರ್ಗದಲ್ಲಿ ಹರಿಯುವ ಗಂಗೆಯೇ ಮರ್ತ್ಯದಲ್ಲೂ ಹರಿಯುವಳಲ್ಲವೆ! ಆದರೆ, ಸಹವರ್ತಿಯಾದರೂ ಗಂಗೆ – ನಿನಗೆ ಅತೀವ ಅಪ್ರಿಯವನ್ನುಂಟುಮಾಡುವಳು. ಆಗ ಅವಳ ಮೇಲೆ ನೀನು ಕುಪಿತನಾದಂದು, ನಿನಗೆ ಶಾಪದಿಂದ ಬಿಡುಗಡೆಯಾಗುವುದು ಎಂದ ಬ್ರಹ್ಮದೇವ.

ಇದು ಒಂದು ರೀತಿಯಲ್ಲಿ ಗಂಗೆಗೂ ಶಪಿಸಿದಂತೆ ಆಗಲಿಲ್ಲವೆ? ಗಂಗೆಯ ತಪ್ಪೇನು? ಮಹಾಭಿಷನ ನೋಟ, ಎಲ್ಲೋ ಮನದ ಮೂಲೆಯಲ್ಲಿ ಗಂಗೆಗೂ ಇಷ್ಟವಾಗಿತ್ತೇನು? – ಎಂದರೆ ಮಹಾಭಾರತದ ಅನುಬಂಧದಂತಿರುವ ‘ಹರಿವಂಶ’ ಈ ಸಂಬಂಧದಲ್ಲಿ ಇನ್ನೊಂದೇ ಕಥೆಯನ್ನು ಹೇಳುವುದು. ಅದೇನೆಂದರೆ: ಒಮ್ಮೆ ಬ್ರಹ್ಮದೇವ ಮೂಡಲ ಕಡಲಿನತ್ತ ನಡೆಯುತ್ತಿದ್ದನಂತೆ. ಕಡಲಿನಲ್ಲಿ ಗಂಗೆ ಬೆರೆತಿದ್ದಳು. ಹೆದ್ದೆರೆಗಳೇಳುತ್ತಿದ್ದವು. ಬ್ರಹ್ಮದೇವನತ್ತ ಅಲೆಯೊಂದು ನುಗ್ಗಿಬಂತು.

ಅವನ ಮೈ ಒದ್ದೆ ಮಾಡಿತು. ಕಡಲು ಸದಾ ತುಂಬಿಕೊಂಡಿರುವುದೇನೋ ನಿಜವೇ. ತುಂಬಿರಬೇಕಾದುದು ನಿಜವೇ. ಆದರೆ ಕಡಲು ತುಳುಕಬಾರದು. ಎಂದೂ ಮೇರೆ ಮೀರಬಾರದು. ‘ಅಚಲ ಪ್ರತಿಷ್ಠಂ’ ಎಂದೇ ಕಡಲಿನ ಪ್ರಸಿದ್ಧಿ. ಈಗ ಮೇರೆ ಮೀರಿದಂತಾಯಿತು. ಕಡಲೇ ಮೇರೆ ಮೀರಿದರೆ ಇನ್ನೇನು ಉಳಿಯಿತು? ಸೃಷ್ಟಿ ಎಲ್ಲಡೆ ಸಂಯಮರಹಿತವಾಗಿ ಮುನ್ನುಗ್ಗುವುದನ್ನು ಬ್ರಹ್ಮದೇವ ನೋಡಿದ. ಶಾಂತನಾಗು – ಶಾಂತೊಭವ – ಎಂದನಂತೆ. ಕಡಲು ಶಾಂತವಾಯಿತು. ಶಾಂತವಾದರೆ ಸಾಲದು.

ಅದಕ್ಕೆ ತನ್ನ ತಪ್ಪಿನ ಅರಿವಾಗಬೇಕು. ಮೇರೆ ಮೀರುವುದೆಂದರೆ ಅದು ಮೇಲಿನಿಂದ ಕೆಳಗೆ ಕುಸಿದಂತೆ ಎಂದರಿವಾಗಬೇಕು. ಅದಕ್ಕಾಗಿ ಬ್ರಹ್ಮ, ಸಮುದ್ರರಾಜನಿಗೆ ಅಂದರೆ ವರುಣನಿಗೆ – ಅವನ ಜೊತೆ ಬೆರೆತ ಗಂಗೆಗೂ ಕೂಡ – ಶಾಪವಾಕ್ಯಗಳನ್ನು ನುಡಿದನಂತೆ: ಮಹಾಭಿಷನೆಂಬ ರಾಜನಾಗಿ ಹುಟ್ಟು, ಅಲ್ಲಿ ಮತ್ತೆ ಮಾಡುವ ತಪ್ಪಿನಿಂದ ಮರಳಿ ಶಂತನು ಆಗಿ ಹುಟ್ಟು, ನಾನು – ‘ಶಾಂತನಾಗು’ ಎಂದೆ. ಈಗ ನೀನು ಶಾಂತನಾಗಿರುವುದೂ ನಿಜ. ಆದರೆ ನಿಜಕ್ಕೂ ಶಾಂತನಾಗಬೇಕಾದರೆ ನಿನಗೆ ಎರಡು ಜನ್ಮಗಳು ಬೇಕು.

ಮಹಾಭಿಷನಾಗಿ ಗಂಗೆಯನ್ನು ಲಾಲಸೆಯಿಂದ ನೋಡಿದ ದೋಷ, ಶಂತನುವಾಗಿ ನಿನ್ನ ಬಳಿಯೇ ಇರುವ ಗಂಗೆ ಎಸಗುವ ಅಪ್ರಿಯಗಳನ್ನು ಕಂಡು ರೋಸಿ ನೀನು ಗಂಗೆಯನ್ನು ಅಗಲಿದಾಗ ಆ ದೋಷ ತೊಲಗುವುದು. ಅಗಲುವಿಕೆಯೇ ಬಿಡುಗಡೆ – ಎಂದನಂತೆ ಬ್ರಹ್ಮ. ಇತಿಹಾಸವೆಂದರೆ ಪುನರಭಿನಯ. ಇನ್ನೊಮ್ಮೆ ಸಂಭವಿಸುವಿಕೆ. ಇನ್ನೊಮ್ಮೆ ಎನ್ನುವುದು ಪ್ರಕೃತಿಯೆ ನುಡಿಗಟ್ಟು. ಈಗ ಆಗುತ್ತಿರುವುದು ಇದಂ ಪ್ರಥಮ ಅಲ್ಲ. ಹೊಚ್ಚ ಹೊಸತಲ್ಲ. ಹಿಂದೆಯೂ ಹೀಗೇ ಆಗಿತ್ತು. ಅಥವಾ ಮೊದಲ ಬಾರಿಗೆ ಸಂಭವಿಸಿದ್ದು ಕೂಡ. ಅದು ಸಂಭವಿಸಿದ ಕೂಡಲೇ ಅದೊಂದು ‘ಅಚ್ಚು’ ಆಗಿಬಿಡುತ್ತದೆ.

‘ನೆನಪು’ ಆಗಿಬಿಡುತ್ತದೆ. ‘ಅದರಂತೆ’ ಎಂಬ ನುಡಿಗಟ್ಟು ಸಿದ್ಧವಾಗಿಬಿಡುತ್ತದೆ. ಬ್ರಹ್ಮ ಸೃಷ್ಟಿಕರ್ತನಲ್ಲವೆ! ‘ಸೃಷ್ಟಿ’ ಎಂದರೆ ಒಂದು ಅಚ್ಚು. ಒಮ್ಮೆ ಒಂದು ಅಚ್ಚು ಸಿದ್ಧವಾದರೆ ಆ ಅಚ್ಚಿನಂತೆ ಮತ್ತೆ ಸೃಷ್ಟಿ ಮುಂದುವರೆಯುತ್ತದೆ. ಆದುದರಿಂದ ಸೃಷ್ಟಿಕರ್ತನ ಶಾಪ – ಹೀಗೆಯೇ ಇನ್ನೊಮ್ಮೆ ಅನುಭವಿಸು ಎಂದಲ್ಲದೆ ಬೇರೆ ಹೇಗೆ ಇರಲು ಸಾಧ್ಯ? ಸೃಷ್ಟಿಕರ್ತನ ಶಾಪವೆಂದರೆ, ಅವನು ತನ್ನ ಕರ್ತವ್ಯವನ್ನು ಮಾಡಿದಂತೆ ಕೂಡ! ಇನ್ನೊಮ್ಮೆ ಅನುಭವಿಸುವುದರಲ್ಲಿಯೇ ಬಿಡುಗಡೆ ಕೂಡ ಸಿದ್ಧಿಸುವುದೆನ್ನುವುದು ಸೃಷ್ಟಿಯ ಅಚ್ಚಿನ ನುಡಿಕಟ್ಟೇ ಆಗಿದೆ!

ಹಾಗೆ ಮಹಾಭಿಷ – ಅರ್ಥಾತ್‌ ವರುಣ – ಶಂತನುವಾಗಿ ಹುಟ್ಟಿದ. ಭರತಕುಲದ ಪ್ರತೀಪನ ಮಗ – ಶಂತನು ಹಸ್ತಿನಾವತಿಯ ದೊರೆ. ಶಂತನುವಿನ ವ್ಯಕ್ತಿತ್ವದಲ್ಲೊಂದು ವಿಶೇಷವಿತ್ತು. ಅದೆಂದರೆ ಶಂತನುವಿನ ಕರಸ್ಪರ್ಶದಲ್ಲಿ – ಅವನು ಮುಟ್ಟಿದ ಯಾರಿಗೂ ಯೌವನವೇ ಬಂದಂತೆ ಆಗುತ್ತಿತ್ತು. ‘ಪುನರ್ಯುವಚಭವತಿ’. ಹಾಗಾದರೆ ಶಂತನುವಿನಲ್ಲಿ ಎಂಥ ಯೌವನವಿರಬೇಡ! ಅವನು ಯೌವನದ ಕಡಲು! ಮುಪ್ಪು–ಯೌವನ ಮಹಾಭಾರತವನ್ನು ಬಹಳ ಕಾಡಿದಂತಿದೆ. ಯಾರನ್ನು ಕಾಡಿಲ್ಲ?

ಶಂತನುವಿಗೆ ಬೇಟೆ; ಗಂಗಾತೀರದ ಸಂಚಾರ ಬಹುಪ್ರಿಯವಾಗಿತ್ತು. ಅಂಥದೊಂದು ಸಂಚಾರಲ್ಲಿ ಅವನು ಅವಳನ್ನು ನೋಡಿದ. ಎವೆ ಇಕ್ಕದೆ ನೋಡಿದ. ಇದೇ ಮೊದಲ ಬಾರಿಗೆ ನೋಡುತ್ತಿದ್ದರೂ ಎಲ್ಲೋ ನೋಡಿದಂತೆ ಅದೇ ಧವಳಸುಂದರಿ! ಇವಳನ್ನು ನೋಡಿ ಎವೆಮುಚ್ಚಿದರೆ ಇನ್ನು ಬೇರಾವುದನ್ನೂ ನೋಡಬೇಕಿಲ್ಲ ಎಂಬಂತೆ. ಅವಳಿಗೂ ಈ ನೋಟ ಬೇಕಾದುದೇ. ‘ಕಣ್ಣೇ ಕಾಮನ ಬೀಜ’. ಅದು ಬ್ರಹ್ಮ ಸಭೆಯಲ್ಲೂ ನಿಜ, ಮರ್ತ್ಯದ ಮಣ್ಣಿನಲ್ಲೂ ನಿಜ.

ಗಂಡು–ಹೆಣ್ಣು ಮೈಮರೆತ ಕ್ಷಣದಲ್ಲಿ ನಿಸರ್ಗದ ಶಕ್ತಿಗಳು ಎಚ್ಚರಗೊಳ್ಳುವವು. ಇವರಿಂದ  ಮೈಪಡೆಯಬೇಕಾದ, ಈಗ ಎಲ್ಲೋ ಇರುವ ಜೀವಗಳು, ತಾವು ಇದ್ದಲ್ಲೇ ಒಮ್ಮೆ ಹೊರಳಿಕೊಳ್ಳುವವು! ಆಗಸದಲ್ಲಿ ಹರಡಿರುವ ಯಾವುದೋ ನುಡಿಗಟ್ಟು – ಅದು ವರವೋ ಶಾಪವೋ ಯಾವುದೇ ಆಗಿರಲಿ – ತಮ್ಮ ತಮ್ಮ ಅರ್ಥಗಳತ್ತ ಧಾವಿಸುವವು!
ಶಂತನು ಮತ್ತು ಗಂಗೆ ಮದುವೆಯಾದರು.

ಗಂಗೆ ಕೆಲವು ನಿಬಂಧನೆಗಳನ್ನು ಹೇಳಿದ್ದಳು. ತಾನು ಏನು ಮಾಡಿದರೂ ತನ್ನನ್ನು ಪ್ರಶ್ನಿಸಬಾರದು. ಪ್ರಶ್ನಾತೀತಳಂತೆ ತನ್ನನ್ನು ನಡೆಯಿಸಿಕೋ. ಏನು ಮಾಡಿದರೂ – ಅದು ಪ್ರಿಯವೋ ಅಪ್ರಿಯವೋ ತನ್ನನ್ನು ತಡೆಯದಿರು. ತಾನು ನಿಯಮ್ಯಳಲ್ಲ. ಲೋಕನ್ಯಾಯದ ತರ್ಕಬದ್ಧತೆಯನ್ನು ಮೀರಿದ ಬೇರಾವುದೋ ಹೊಳಹಿನ ಒಳನೋಟದಿಂದ ಮಾತ್ರ ತಮ್ಮ ದಾಂಪತ್ಯ ನಡೆಯಬೇಕು! ಶಂತನು ಒಪ್ಪಿದ. ಒಮ್ಮೆ ಮೇರೆದಪ್ಪಿದ ಕಡಲು ತನಗೆ ತಾನೇ ಮತ್ತೆಮತ್ತೆ ಸಂಯಮದ ಪಾಠ ಹೇಳಿಕೊಳ್ಳಬೇಕಾಯಿತು.

ಗಂಗೆ ವಿಲಕ್ಷಣಳಾಗಿದ್ದಳು. ಏಳು ಮಕ್ಕಳನ್ನು ಹೆತ್ತಳು. ಗಂಡುಮಕ್ಕಳು. ಹೊಕ್ಕುಳ ಬಳ್ಳಿ ತುಂಡರಿಸಿ ಮಗು ಕೈಗೆ ಬರುತ್ತಿದ್ದಂತೆ, ನಿನಗೆ ಪ್ರಿಯವಾದುದನ್ನು ಮಾಡುತ್ತಿರುವೆನೆಂದು ಆ ಕೂಸಿನ ಕಿವಿಯಲ್ಲಿ ಉಸುರುತ್ತ, ಅದನ್ನೆತ್ತಿ ನೀರಿಗೆಸೆಯುವಳು – ಶಂತನು ಕಂಗೆಟ್ಟು ನೋಡುತ್ತಿರುವಂತೆ! ಈ ವಿಲಕ್ಷಣ ನಡವಳಿಕೆಯ ಹಿಂದೆ ಒಂದು ಕಾರಣವಿರಬೇಕು.

ವಸುಗಳೆಂಬ ದೇವತೆಗಳಲ್ಲಿ ಎಂಟರ ಒಂದು ಗುಂಪು ಒಮ್ಮೆ ವಸಿಷ್ಠ ಮಹರ್ಷಿಗಳಿಗೆ ತಪ್ಪಿ  ನಡೆಯಿತಂತೆ. ಅವರಿಂದ, ನೀವು ಮಾನವನಾಗಿ ಹುಟ್ಟಿ ಎಂಬ ಕೆಡುನುಡಿಯನ್ನು ವಸುಗಳು ಕೇಳಬೇಕಾಯಿತು. ಗಂಗೆ ಮಾನವಿಯಾಗಿ ಹುಟ್ಟುವ ಬಗ್ಗೆ ವಸುಗಳಿಗೆ ತಿಳಿದಿತ್ತು. ಅವರು ಗಂಗೆಯನ್ನು ಬೇಡಿದರು. ‘ನಿನ್ನ ಒಡಲಲ್ಲಿ ಹುಟ್ಟುವೆವು ತಾಯೆ.

ಹುಟ್ಟಿದೊಡನೆ ನೀನು ನಮ್ಮನ್ನು ಮರಳಿ ನಿನ್ನೊಡಲಿಗೆ ಹಾಕಿಕೋ. ಆ ಹುಟ್ಟಿನಿಂದ ನಮಗೆ ಬಿಡುಗಡೆ ಮಾಡಿಸು’. ಗಂಗೆ ನಿಜಕ್ಕಾದರೆ ವಿರಕ್ತನದಿ. ಯಮುನೆಯ ನೀರಿಗಾದರೋ ಅನುರಕ್ತಿಯ ಗುಣ. ಯಮುನೆಯ ಬಣ್ಣ ಕಪ್ಪು. ಕೃಷ್ಣ–ಗೋಪಿಕೆಯರ ರಾಸ ನಡೆದದ್ದು ಯಮುನೆಯ ತಡಿಯಲ್ಲಿ. ಗಂಗೆಯ ನೀರಿಗೆ ವಿರಕ್ತಿಯ ಗುಣ.

ಋಷಿಗಳೆಲ್ಲರೂ ಗಂಗೆ ಪ್ರಿಯಳಾದುದು ಈ ಕಾರಣದಿಂದ. ಇನ್ನೂ ಒಂದು ಹೆಜ್ಜೆ ಮುಂದೆಹೋದರೆ – ಗಂಗೆಯ ನೀರು ಸಾವಿನ ಮಡಿಲು! ಮರಣಾಸನ್ನ ಜೀವಕ್ಕೆ ಗಂಗೆಯ ನೀರು ಒಂದು ಬಿಂದು ಎರೆಯಬೇಕು. ಬೇರಾವ ನೀರೂ ಅಲ್ಲ. ಕೃಷ್ಣನಿಗೆ ಯಮುನೆಯಂತೆ ಗಂಗೆಯೂ ಪ್ರಿಯ. ಹೇಗೆನ್ನುವಿರೋ. ಬಾಲ್ಯದ ನೆನಪು ಕಾಡುತ್ತಿರುವ ಮನುಷ್ಯಜೀವಿಯನ್ನು ಕುರಿತು ಕೃಷ್ಣ ಹೇಳಿದ, ಸಾವಿನ ಹೊತ್ತಿನಲ್ಲಿ ನನ್ನನ್ನು ನೆನೆ. ನಾನು ಸಾವಿನ ಹೊತ್ತಿನಲ್ಲಿ ನೆನೆಯಬೇಕಾದ ದೇವರು! ಬಾಲ್ಯದ ನೆನಪೆಂದರೆ ಹುಟ್ಟಿನ ನೆನಪು. ಹುಟ್ಟಿನ ನೆನಪಲ್ಲಿ ಸತ್ತರೆ ಮತ್ತೆ ಹುಟ್ಟು.

ಆದುದರಿಂದ ಹುಟ್ಟಿನಿಂದ ಬಿಡುಗಡೆಗಾಗಿ ನನ್ನ ನೆನೆ – ಎಂದ. ಯಮನೆ ಕೃಷ್ಣನಿಗೆ ಇಷ್ಟು ಪ್ರಿಯಳಾದರೂ – ಕೃಷ್ಣ; ಹರಿವ ನೀರುಗಳಲ್ಲೆಲ್ಲ ನಾನು ಗಂಗೆಯಲ್ಲಿ ನೆಲೆಯಾಗಿರುವೆನೆಂದಿದ್ದ. ‘ಸ್ರೋತಸಾಮನ್ಮಿ ಜಾಹ್ನವೀ’. ಕೊನೆಯ ಗುಟುಕಿನ ಗಂಗಾಜಲದಲ್ಲಿ ಕೃಷ್ಣನೇ ಇದ್ದಾನೆ ಎಂದಂತೆ ಇದು. ವಾರಾಣಸಿಯಲ್ಲಿ ಹರಿಯುವ ಗಂಗೆಯ ದಡದಲ್ಲಿ ಬಾಲ್ಯವನ್ನೆಲ್ಲ ಕಳೆದ ಪಂಡಿತರಾಜ ಜಗನ್ನಾಥ ತನ್ನ ಕೊನೆಯ ದಿನಗಳಲ್ಲಿ ಮತ್ತೆ ಗಂಗೆಯ ದಡಕ್ಕೆ ಮರಳಿದ.

‘ತನೋತು ಮಮ ಶಂ ತನೋಃ ಸಪದಿ ಶಂತನೋರಂಗನಾ’ ಎಂದು ಎದೆಬಿರಿಯುವಂತೆ ತನ್ನೊಳಗನ್ನು ತಾಯಿ ಗಂಗೆಯ ಮುಂದೆ ತೋಡಿಕೊಂಡ. ನಿದ್ದೆಗೆಟ್ಟು ಭೋಗದಲ್ಲಿ ದಣಿದ ಈ ಜೀವಕ್ಕೆ ತಂಪನ್ನೆರೆಯಬಲ್ಲ ತಾಯಿ ನೀನು ಒಬ್ಬಳೇ ಎಂದ. ನೀನು ಶಂತನುವಿನ ಮದಡಿಯಲ್ಲವೆ ಎಂದ! ನೀನು ಕೈಬಿಟ್ಟರೆ ನನಗಾರು ದಿಕ್ಕು? ಎಂದು ಆರ್ತವಾಗಿ ಕೇಳಿದ. ಗಂಗೆಯ ಮಡಿಲಲ್ಲಿ ಸಾವನ್ನು ಹಂಬಲಿಸಿದ. ಗಂಗೆ ಎಂಬ ತಾಯೊಡನೆ ಕೇಳಬೇಕಾದುದು ಇದನ್ನೇ ಇರಬೇಕು!

ಗಂಗೆ ಏಳು ಮಕ್ಕಳನ್ನು ಹೊಟ್ಟೆಗೆ ಹಾಕಿಕೊಂಡಳು. ಎಂಟನೆಯ ಮಗು ಹುಟ್ಟಿತು! ಈಗ ಶಂತನುವಿಗೆ ತಡೆಯದಾಯಿತು. ಗಂಗೆಯನ್ನು ತನ್ನೊಳಗೆ ಬೆರೆಸಿಕೊಳ್ಳುವ ಕಡಲಿಗೂ ಗಂಗೆಯ ಗುಟ್ಟು ತಿಳಿದಿರಲಿಲ್ಲ. ಶಂತನು ಗಂಗೆಯನ್ನು ತಡೆದ. ಈ ಮಗುವನ್ನಾದರೂ ಬಿಟ್ಟು ಬಿಡು ಎಂದ. ಗಂಗೆ ಒಪ್ಪಿದಳು. ಆದರೆ ದಾಂಪತ್ಯ ಇಲ್ಲಿಗೆ ಮುಗಿಯಿತು ಎಂದಳು.

ಮಗು ದೇವವ್ರತ (ಭೀಷ್ಮ) ನನ್ನು  ತನ್ನೊಡನೆ ಒಯ್ದು ಅವನನ್ನು ಶಾಸ್ತ್ರಪಾರಂಗತನನ್ನಾಗಿಸಿ ಮರಳಿ ಶಂತನುವಿಗೆ ಒಪ್ಪಿಸಿದಳು. ಹೀಗೆ ದೇವವ್ರತ, ತಂದೆ ಉಳಿಸಿದ ಮಗನಾಗಿ ತಂದೆಗೆ ಮೀಸಲಾದ. ತಾನು ಉಳಿಸಿದ ಮಗನಿಂದ ತಂದೆ ಬಯಸಿದುದೇನು ಎನ್ನುವುದು ಇನ್ನೊಂದು ವಿಲಕ್ಷಣ ವೃತ್ತಾಂತವಾಗಿದೆ. ಮತ್ತೆ ಯಯಾತಿ–ಪೂರು ಇವರ ಕಥೆ, ಶಂತನು–ದೇವವ್ರತರ ಕಥೆಯಲ್ಲಿ ಇನ್ನೊಂದು ರೀತಿಯಲ್ಲಿ ಪುನರಭಿನೀತಗೊಳ್ಳುತ್ತಿದೆ. ಇತಿಹಾಸವು ಚಕ್ರವಲ್ಲವೆ? ಈ ಚಕ್ರದ ಉರುಳುವಿಕೆಯಲ್ಲಿ ಸಿಕ್ಕಿ ನುಗ್ಗುನುರಿಯಾಗದೆ – ದಾರಿಯುಂಟೆ ಅನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT