ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಣದ ಕಣ್ಣು

Last Updated 10 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ರಾಜಪ್ಪನಿಗೆ ಆಗಲೇ ಸುಮಾರು ಎಪ್ಪತ್ತು ವರ್ಷ. ಹೆಂಡತಿ ತೀರಿ­ಹೋಗಿ­ದ್ದಾಳೆ.  ಮಗ, ಸೊಸೆ ಬೇರೆ ಊರಿನಲ್ಲಿ ನೆಲೆಯಾಗಿದ್ದಾರೆ. ಈತ ಒಬ್ಬನೇ ತನ್ನೂರಿನ ದೊಡ್ಡ ಮನೆಯಲ್ಲಿ ಉಳಿದಿ­ದ್ದಾನೆ. ಯಾರೋ ಬಂದು ದಿನವೂ ಅಡುಗೆ ಮಾಡಿಕೊಟ್ಟು ಹೋಗುತ್ತಾರೆ, ಮನೆಯಲ್ಲಿ ಆಳುಗಳಿದ್ದಾರೆ. ಈತ­­ನದು ಭಾರಿ ಶ್ರೀಮಂತರ ಮನೆತನ. ಹೊಲದ ಉತ್ಪನ್ನ ತುಂಬ ದೊಡ್ಡದು. ಅದ­ಕ್ಕೆಂದೇ ಆತನಿಗೆ ಊರು ಬಿಟ್ಟು ಹೋಗಲು ಮನಸ್ಸಿಲ್ಲ. ಈ ಸಂದರ್ಭದಲ್ಲಿ ರಾಜಪ್ಪನ ಕಣ್ಣು ಮಂದವಾಗತೊಡಗಿದವು.  ಯಾವುದೂ ಸ್ಪಷ್ಟವಾಗಿ ಕಾಣು­ತ್ತಿಲ್ಲ.

ಹೀಗೆಯೇ ಮುಂದುವರೆದರೆ ಆರು ತಿಂಗಳಲ್ಲಿ ತಾನು ಪೂರ್ತಿ ಅಂಧನೇ ಆಗಿ­ಬಿಡು­ತ್ತೇನೆಂಬ ಭಯ ಕಾಡತೊ­ಡಗಿತು.  ಕಂಡವರನ್ನೆಲ್ಲ ಪರಿಹಾರಕ್ಕಾಗಿ ಕೇಳಿದ.  ಆಗ ಯಾರೋ ಒಬ್ಬರು ದಿನಕರ ಪಂಡಿತನ ಬಗ್ಗೆ ಹೇಳಿದರು. ಅವನು ಕಣ್ಣಿನ ದೋಷ­ವನ್ನು ಖಂಡಿತ­ವಾಗಿಯೂ ಪರಿಹರಿಸುತ್ತಾನೆ.  ಆದರೆ ಅವನ ಫೀಸು ಬಹಳ ಹೆಚ್ಚು ಎಂದರು. ರಾಜಪ್ಪ ದಿನಕರ ಪಂಡಿತನನ್ನು ಕರೆಸಿ ಮಾತ­ನಾಡಿದ. ಆತನೂ ಅವನು ಕಣ್ಣಿನ ಪರೀಕ್ಷೆ ಮಾಡಿ ಆರು ತಿಂಗಳಿನಲ್ಲಿ ಸಂಪೂರ್ಣ ಗುಣ­ವಾಗುವ ಭರವಸೆ­ನೀಡಿದ.  ನಿರೀಕ್ಷಿಸಿದಂತೆ ಅವನ ಫೀಸೂ ಭಾರಿಯಾಗಿಯೇ ಇತ್ತು. ಕಣ್ಣು ಮುಖ್ಯ­ವಲ್ಲವೇ? ರಾಜಪ್ಪ ಫೀಸನ್ನು ಒಪ್ಪಿದ.

ದಿನಕರ ಪಂಡಿತ ಹೇಳಿದ, ‘ನನಗೆ ಮೊದಲು ಇಪ್ಪತ್ತು ಸಾವಿರ ರೂಪಾಯಿ ಕೊಡಬೇಕು. ಆರು ತಿಂಗ­ಳಿನ ನಂತರ ಕಣ್ಣು ಪೂರ್ತಿ ಗುಣ­ವಾದ ಮೇಲೆ, ಸ್ಪಷ್ಟವಾಗಿ ಕಾಣ­ತೊಡಗಿ­ದೊಡನೆ ಉಳಿದ ಒಂದು ಲಕ್ಷ ಎಂಬತ್ತು ಸಾವಿರ ರೂಪಾಯಿ ಕೊಡತಕ್ಕದ್ದು’ ಈ ಕರಾರಿಗೆ ರಾಜಪ್ಪ ಒಪ್ಪಿದ. ಚಿಕಿತ್ಸೆ ಪ್ರಾರಂಭವಾಯಿತು. ದಿನಕರ ಪಂಡಿತ ಒಳ್ಳೆಯ ವೈದ್ಯ­ನಾದರೂ ಬಹಳ ಆಸೆ­ಬರುಕ. ದಿನಾಲು ಬಂದು ರಾಜಪ್ಪನ ಕಣ್ಣುಗಳಿಗೆ ಔಷಧಿ ಹಾಕಿ ನಂತರ ಕಣ್ಣುಗಳ ಮೇಲೆ ಔಷಧಿಯ ಪಟ್ಟಿಯನ್ನು ಹಾಕಿ ಬಿಡುತ್ತಿದ್ದ. ಅದನ್ನು ತೆಗೆಯು­ವವರೆಗೆ ರಾಜಪ್ಪನಿಗೆ ಏನೂ ಕಾಣುತ್ತಿರಲಿಲ್ಲ. ಪಟ್ಟಿಯನ್ನು ತೆಗೆದ ಮೇಲೆಯೂ ಆದಷ್ಟು ಮಟ್ಟಿಗೆ ಕಣ್ಣು ಮುಚ್ಚಿಕೊಂಡೇ ಇರುವಂತೆ ತಾಕೀತು ಮಾಡಿದ್ದ.

ದಿನಕರ ಪಂಡಿತ ರಾಜಪ್ಪನ ಮನೆಯನ್ನು ಗಮನಿಸಿದ.  ಅವನ ದೇವರ ಮನೆಯಲ್ಲಿ ಬಂಗಾರದ, ಬೆಳ್ಳಿಯ ಪಾತ್ರೆಗಳು, ಆಭರಣಗಳು, ವಿಗ್ರಹ­ಗಳಿದ್ದವು.  ಅವುಗಳ ಬೆಲೆ ಆದಷ್ಟು ಲಕ್ಷ ರೂಪಾ­ಯಿ­ಗಳಾಗುತ್ತಿತ್ತೋ? ಪಂಡಿತ ದಿನಕ್ಕೊಂದರಂತೆ ಒಂದೊಂದನ್ನೇ ಕದ್ದು­ಕೊಂಡು ಮನೆಗೆ ಹೋಗುತ್ತಿದ್ದ.  ಆರು ತಿಂಗಳಲ್ಲಿ ದೇವರ ಮನೆ ಚೊಕ್ಕಟ­ವಾಗು­ವು­ದಷ್ಟೇ ಅಲ್ಲ,  ಮನೆಯಲ್ಲಿದ್ದ ಯಾವ ಬೆಲೆಬಾಳುವ ಸಾಮಾನುಗಳೂ ಉಳಿಯ­ಲಿಲ್ಲ. ಆರು ತಿಂಗಳಿನ ಚಿಕಿತ್ಸೆ ಮುಗಿದ ನಂತರ ಈಗ ರಾಜಪ್ಪನಿಗೆ ಸ್ಪಷ್ಟವಾಗಿ ಕಾಣು­ವು­­ದರಿಂದ ಉಳಿದ ಫೀಸನ್ನು ನೀಡಲು ದಿನಕರ ಪಂಡಿತ ಒತ್ತಾಯಿಸಿದ. ಕಣ್ಣು ಚೆನ್ನಾಗಿ ಕಾಣುತ್ತಿದ್ದ ರಾಜಪ್ಪ ಮನೆ­ಯನ್ನು ಗಮನಿಸಿದಾಗ ದಿನಕರನ ಮೋಸದ ಅರಿವಾಗಿ ಹಣ ನೀಡುವು­ದಿ­ಲ್ಲವೆಂದು ಹೇಳಿದ.

ದಿನಕರ ಪಂಡಿತ ಜಿಲ್ಲಾಧಿಕಾರಿ­ಯಾದ ಗುಂಡಣ್ಣನ ಕಡೆಗೆ ದೂರು ಒಯ್ದ. ಗುಂಡಣ್ಣ ಇಬ್ಬರನ್ನೂ ಕರೆಸಿ ಮಾತನಾಡಿದಾಗ ಪಂಡಿತನ ಮೋಸ ತಿಳಿಯಿತು.  ದಿನಕರ ಪಂಡಿತ ವಾದ ಮಾಡಿದ, ‘ಸ್ಪಷ್ಟವಾಗಿ ಕಣ್ಣು ಕಾಣಿಸಿದರೆ ಪೂರ್ತಿ ಹಣ ಕೊಡುವ ಒಪ್ಪಂದ­ವಾಗಿದೆ.  ಈಗ ರಾಜಪ್ಪನವರಿಗೆ ಕಣ್ಣು ಚೆನ್ನಾಗಿ ಕಾಣುತ್ತಿದೆ.  ಆದ್ದರಿಂದ ನನ್ನ ಹಣ ನನಗೆ ಬರಬೇಕು. ದಯವಿಟ್ಟು ಕೊಡಿಸಿ ಕೊಡಿ’. ಗುಂಡಣ್ಣ ರಾಜಪ್ಪನನ್ನು ಕೇಳಿದ, ‘ನಿಮಗೆ ಕಣ್ಣು ಚೆನ್ನಾಗಿ ಕಾಣುತ್ತಿದೆಯೇ?.’ ‘ಹೌದು ಸ್ವಾಮಿ, ಕಾಣುತ್ತಿದೆ’. ಎಂದ ರಾಜಪ್ಪ.  ದಿನಕರ ಪಂಡಿತ ಜಂಬದಿಂದ ಬೀಗಿದ.  ಗುಂಡಣ್ಣ ಮತ್ತೆ ಕೇಳಿದ.

‘ರಾಜಪ್ಪ, ಈಗ ನಿಮ್ಮ ಮನೆಯಲ್ಲಿ ದೇವರ ಮೂರ್ತಿಗಳು, ಆಭರಣಗಳು, ಬೆಲೆಬಾಳುವ ವಸ್ತುಗಳು ಕಾಣುತ್ತಿವೆಯೇ?’. ‘ಇಲ್ಲ ಸ್ವಾಮಿ, ಅವು ಕಳುವಾಗಿವೆ’ ಎಂದ ರಾಜಪ್ಪ. ‘ಅದೆಲ್ಲ ಕಥೆ ಬೇಡ. ಈಗ ವಸ್ತುಗಳು ಕಾಣುತ್ತಿ­ವೆಯೇ?’ ಕೇಳಿದ ಗುಂಡಣ್ಣ. ‘ಇಲ್ಲ ಮಹಾಸ್ವಾಮಿ’ ನುಡಿದ ರಾಜಪ್ಪ.  ‘ಹಾಗಾದರೆ ನಿಮ್ಮ ಕಣ್ಣು ಇನ್ನೂ ಸರಿಯಾಗಿಲ್ಲ. ಎಲ್ಲಿಯವರೆಗೆ ನಿಮ್ಮ ಮನೆಯ ಬೆಲೆ ಬಾಳುವ ವಸ್ತುಗಳು ನಿಮಗೆ ಮರಳಿ ಕಾಣುವುದಿಲ್ಲವೋ ಅಲ್ಲಿಯವರೆಗೆ ನಿಮ್ಮ ಕಣ್ಣು ಸರಿ­ಯಾ­ಗಿಲ್ಲ. ಚಿಕಿತ್ಸೆ ವಿಫಲವಾಗಿದೆ.

ಆದ್ದರಿಂದ ನೀವು ಪಂಡಿತರಿಗೆ ಹಣ ನೀಡುವ ಅವಶ್ಯಕತೆ ಇಲ್ಲ.  ಅಷ್ಟೇ ಅಲ್ಲ, ನಿಮಗೆ ಗುಣವಾಗುತ್ತದೆಂದು ಹೇಳಿ ಮೋಸ ಮಾಡಿದ್ದರಿಂದ ಅವರಿಗೆ ಮೂರು ವರ್ಷ ಜೈಲಿನ ಶಿಕ್ಷೆ ನೀಡುತ್ತೇನೆ’ ಎಂದ ಗುಂಡಣ್ಣ.  ದಿನಕರ ಪಂಡಿತ ಹೌಹಾರಿದ.  ಗುಂಡಣ್ಣನ ಕಾಲು ಹಿಡಿದುಕೊಂಡು ತಪ್ಪೊಪ್ಪಿಕೊಂಡು ಎಲ್ಲ ವಸ್ತುಗಳನ್ನು ಮರಳಿಸಿ ತನ್ನ ಫೀಸು ತೆಗೆದುಕೊಂಡು ಹೋದ. ಯಾವುದೇ ವ್ಯವಹಾರದಲ್ಲಿ ಪ್ರಾಮಾಣಿಕತೆ ಬಹಳ ಮುಖ್ಯ. ಅಪ್ರಾಮಾಣಿಕತೆಯಿಂದ ಸಂಪಾದಿಸಿದಾಗ ಕೆಲದಿನ ಅದು ತುಂಬ ಸಂಭ್ರಮವನ್ನು ತಂದೀತು. ಮೋಸ ಮಾಡಿ ಸುಲಭವಾಗಿ ಗಳಿಸಿದೆನಲ್ಲ ಎಂಬ ಹೆಮ್ಮೆ ಮೂಡೀತು.  ಆದರೆ, ಅದು ಮುಂದೆ ಬಡ್ಡಿಸಹಿತ ನೋವನ್ನು ಕೊಡುವುದು ಖಂಡಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT