ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಣೆಯಾಗುತ್ತಿರುವ ಹೆಣ್ಣು ಮಕ್ಕಳನ್ನು ಹುಡುಕುವುದು ಹೇಗೆ?

Last Updated 10 ಡಿಸೆಂಬರ್ 2012, 21:01 IST
ಅಕ್ಷರ ಗಾತ್ರ
ಕರ್ನಾಟಕ ರಾಜ್ಯ ಮಹಿಳಾ ಆಯೋಗ ಕಳೆದ ವಾರ ರಾಜ್ಯ ಸರ್ಕಾರಕ್ಕೆ ವರದಿಯೊಂದನ್ನು ಸಲ್ಲಿಸಿದೆ. 2009-11ರ ಅವಧಿಯಲ್ಲಿ 14,989 ಮಂದಿ ಕಾಣೆಯಾಗಿದ್ದು, ಇವರಲ್ಲಿ ಶೇಕಡ 46.37 ಪತ್ತೆಯಾಗಿದ್ದರೆ, ಉಳಿದವರ ಸುಳಿವು ದೊರೆತಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ವರದಿ ತಯಾರಿಕೆಗೆ ಪೂರಕವಾಗಿ ಮೈಸೂರು ನಗರವನ್ನೇ ಕೇಂದ್ರೀಕರಿಸಿ ಕೈಗೊಳ್ಳಲಾಗಿರುವ ಅಧ್ಯಯನವೊಂದರ ಪ್ರಕಾರ, ನಗರದಲ್ಲಿ ಇದೇ ಅವಧಿಯಲ್ಲಿ 1,612 ಮಂದಿ ಕಾಣೆಯಾಗಿದ್ದು ಅವರಲ್ಲಿ ಶೇಕಡ 52.30ರಷ್ಟು ಹೆಣ್ಣುಮಕ್ಕಳು ಅಥವಾ ಮಹಿಳೆಯರು. ಮೈಸೂರು ನಗರದಿಂದ ಕಾಣೆಯಾದ 100 ಹೆಣ್ಣುಮಕ್ಕಳ ಪ್ರಕರಣಗಳನ್ನು ವಿಶದವಾದ ಅಧ್ಯಯನಕ್ಕೆ ಒಳಪಡಿಸಲಾಗಿತ್ತು ಎಂಬ ಅಂಶ ಕೂಡ ವರದಿಯಿಂದ ತಿಳಿದು ಬರುತ್ತದೆ.

` ಕಾಣೆಯಾದವರು'  ಎಂಬ ಪದವನ್ನು ಈ ವರದಿಯಲ್ಲಿ `ಮನೆಯನ್ನು ಬಿಟ್ಟು ಹೋದವರು' ಎಂಬ ಅರ್ಥದಲ್ಲಿ ಬಳಸಲಾಗಿದೆ. ಸ್ತ್ರೀಯರು ಕಾಣೆಯಾಗಲು ಕೆಲ ಕಾರಣಗಳನ್ನು ಗುರುತಿಸಿದ್ದು, ಅವುಗಳಲ್ಲಿ ಪ್ರಮುಖವಾದವು ವೈವಾಹಿಕ ಹಿಂಸೆ ಅಥವಾ ಕುಟುಂಬದ ನಿರ್ಲಕ್ಷ್ಯ, ಮಾಧ್ಯಮಗಳ ಪ್ರಭಾವ, ಪ್ರೇಮ ಸಂಬಂಧಗಳು ಮತ್ತು ಶೈಕ್ಷಣಿಕ ಸಾಧನೆಯನ್ನು ಮಾಡಲು ಕುಟುಂಬಗಳು ಹೇರುವ ಒತ್ತಡ. ಶೇಕಡ 75ರಷ್ಟು ಪ್ರಕರಣಗಳಲ್ಲಿ ಸ್ತ್ರೀಯರು ಮನೆಯಿಂದ ಕಾಣೆಯಾಗುವುದಕ್ಕೆ ಪತಿಯ ಮನೆಯವರು ನೀಡುವ ಕಿರುಕುಳ ಅಥವಾ ಅವರು ಸಿಲುಕಿಹಾಕಿಕೊಳ್ಳುವ ಪ್ರೇಮ ಸಂಬಂಧಗಳೇ ಕಾರಣವಾಗಿರುತ್ತವೆ ಎಂಬ ಸೂಚನೆ ವರದಿಯಿಂದ ಮೂಡಿಬಂದಿದೆ.

ಹೆಣ್ಣುಮಕ್ಕಳು ಮನೆಯಿಂದ ಕಾಣೆಯಾಗುವುದನ್ನು ತಪ್ಪಿಸಬೇಕಾದರೆ ಅವರನ್ನು ಸಮಾಜಘಾತುಕ ಶಕ್ತಿಗಳಿಂದ ರಕ್ಷಿಸಬೇಕಾಗುತ್ತದೆ ಎಂಬುದು ಆಯೋಗದ ಪ್ರಮುಖ ಸಲಹೆಗಳಲ್ಲಿ ಒಂದು. ಹಾಗೆ ಮಾಡಬೇಕಾದರೆ ಬಸ್ಸು ಮತ್ತು ರೈಲು ನಿಲ್ದಾಣಗಳಲ್ಲಿ, ಸಿನಿಮಾ ಮಂದಿರಗಳ ಬಳಿಯಲ್ಲಿ ಪೊಲಿಸರ ನೆರವಿನಿಂದ ನಿಗ್ರಹ ಕೇಂದ್ರಗಳನ್ನು ಸ್ಥಾಪಿಸುವುದು, ಶಿಕ್ಷಣ ಸಂಸ್ಥೆಗಳಲ್ಲಿ ನೈತಿಕ ಶಿಕ್ಷಣವನ್ನು ನೀಡುವುದು, ಮನೆಯಿಂದ ಓಡಿಹೋಗಲು ಪ್ರಚೋದನೆ ನೀಡುವ ಧಾರಾವಾಹಿಗಳ ನಿಷೇಧ ಮುಂತಾದ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಬೇಕೆಂದು ಕೂಡ ಆಯೋಗ ಸಲಹೆ ಮಾಡಿದೆ.

ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಹೆಣ್ಣುಮಕ್ಕಳು ಮತ್ತು ಮಹಿಳೆಯರ ಕಣ್ಮರೆಯಂಥ ಗಂಭೀರವಾದ ವಿಷಯದ ಬಗ್ಗೆ ಮಹಿಳಾ ಆಯೋಗ ಗಮನ ಹರಿಸಬೇಕಾದದ್ದು ಸಹಜವೇ. ಆದರೆ `ಕಾಣೆಯಾಗುವವರು' ಎಂಬ ಪದದ ಬಳಕೆಯನ್ನು ಮನೆಯಿಂದ ತಪ್ಪಿಸಿಕೊಂಡು ಓಡಿಹೋಗುವವರು ಎಂಬ ಅರ್ಥದಲ್ಲಿ ಪ್ರಧಾನವಾಗಿ ಬಳಸಿರುವುದು ಈ ಸಮಸ್ಯೆಯ ವಿವಿಧ ಮುಖಗಳನ್ನು ಮುಚ್ಚಿಟ್ಟಂತಾಗಿದೆ.

ಭಾರತೀಯ ಸಮಾಜದಲ್ಲಿ ಹೆಣ್ಣುಮಕ್ಕಳು `ಕಣ್ಮರೆಯಾಗುವುದು' ಎಲ್ಲ ಸಂದರ್ಭಗಳಲ್ಲೂ ಅವರ ಆಯ್ಕೆಯಿಂದಲ್ಲ ಎಂಬುದು ನಾವು ಮೊದಲು ಮನಗಾಣಬೇಕಾದ ಒಂದು ಸತ್ಯ. ಎರಡು ದಶಕಗಳ ಹಿಂದೆ ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞರಾದ ಅಮರ್ತ್ಯಸೆನ್ ಅವರು ತಮ್ಮ  `ಮೋರ್ ದ್ಯಾನ್ 100 ಮಿಲಿಯನ್ ವಿಮೆನ್ ಆರ್ ಮಿಸ್ಸಿಂಗ್'  ಎಂಬ ಲೇಖನದಲ್ಲಿ `ಕಾಣೆಯಾಗುತ್ತಿರುವ ಮಹಿಳೆಯರು' ಎಂಬ ಪರಿಕಲ್ಪನೆಯನ್ನು ಪ್ರಥಮವಾಗಿ ಬಳಸಿದರು. ಜಗತ್ತಿನಾದ್ಯಂತ ಸುಮಾರು ಹತ್ತು ಕೋಟಿ ಮಹಿಳೆಯರು ನಮ್ಮ ನಡುವಿನಿಂದ ಕಾಣೆಯಾಗಿದ್ದಾರೆ, ಲಿಂಗ ತಾರತಮ್ಯವೇ ಇದಕ್ಕೆ ಪ್ರಮುಖ ಕಾರಣ ಎಂದು ಸೆನ್ ಅವರು ಸೂಚಿಸಿದ್ದರು.

ಭಾರತವೂ ಸೇರಿದಂತೆ ದಕ್ಷಿಣ ಏಷ್ಯಾದ ಕೆಲ ದೇಶಗಳಲ್ಲಿ ಸ್ತ್ರೀಯರನ್ನು ಕುರಿತ ಸಾಂಸ್ಕೃತಿಕ ಪೂರ್ವಗ್ರಹಗಳು ಹಾಗೂ ಅವರು ಎದುರಿಸುವ ತಾರತಮ್ಯಗಳ ಕಾರಣದಿಂದಾಗಿ ಅವರ ಸಂಖ್ಯೆ ಇಳಿಮುಖವಾಗುತ್ತಿದೆ ಎಂಬುದು ಸೆನ್ ಅವರ ವಾದವಾಗಿತ್ತು. ಅಭಿವೃದ್ಧಿಶೀಲ ಜಗತ್ತಿನಲ್ಲಿ ಇಳಿಮುಖವಾಗುತ್ತಿರುವ ಸ್ತ್ರೀ-ಪುರುಷ ಅನುಪಾತವನ್ನು ಗಮನದಲ್ಲಿಟ್ಟುಕೊಂಡು, ಈ ದೇಶಗಳಲ್ಲಿ ಮಹಿಳೆಯರು ಮತ್ತು ಹೆಣ್ಣುಮಕ್ಕಳು ಎದುರಿಸುವ ಕೌಟುಂಬಿಕ ನಿರ್ಲಕ್ಷ್ಯವೇ ಅವರು ಈ ಜಗತ್ತಿನಿಂದ ಕಾಣೆಯಾಗಲು ಪ್ರಮುಖ ಕಾರಣ ಎಂಬುದು ಅಮಾರ್ತ್ಯ ಅವರ ದೃಷ್ಟಿಕೋನವಾಗಿತ್ತು.
ಲಿಂಗ ತಾರತಮ್ಯದ ವಿವಿಧ ಮುಖಗಳು ನಿಧಾನವಾಗಿ ತೆರೆದುಕೊಳ್ಳುತ್ತಿದ್ದ 1990ರ ದಶಕದಲ್ಲಿ ಸೆನ್ ಅವರು ಬಳಸಿದ್ದ  `ಕಾಣೆಯಾಗುತ್ತಿರುವ ಮಹಿಳೆಯರು' ಎಂಬ ಪರಿಕಲ್ಪನೆ ನಮ್ಮನ್ನು ಅಲುಗಾಡಿಸಿತ್ತು.

ಅದುವರೆಗೂ ನಕಾರಾತ್ಮಕ ಅರ್ಥದಲ್ಲೇ ಬಳಸಲ್ಪಡುತ್ತಿದ್ದ  ಪದಕ್ಕೆ ಹೊಸದೇ ಆದ ಒಂದು ಅರ್ಥ ಬಂದಿತ್ತು. ಪ್ರತಿಕೂಲ ಸಾಮಾಜಿಕ - ಸಾಂಸ್ಕೃತಿಕ -ಆರ್ಥಿಕ ಸಂದರ್ಭಗಳ ಕಾರಣದಿಂದಾಗಿ ಬದುಕಿನ ಪೂರ್ಣಾವಧಿಯನ್ನು ಕಳೆಯಲಾಗದೆ ಮಧ್ಯದಲ್ಲೇ ನಿರ್ಗಮಿಸುವ ಹೆಣ್ಣು ಜೀವಗಳಿಗೆ `ಕಾಣೆಯಾದವರು' ಎಂಬ ಪದವನ್ನು ಬಳಸಲಾಯ್ತು. ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ಬಡ ಕುಟುಂಬಗಳಲ್ಲಿ ಪೌಷ್ಟಿಕ ಆಹಾರ, ಆರೋಗ್ಯ ರಕ್ಷಣೆ, ಅರಿವನ್ನು ಮೂಡಿಸುವ ಶಿಕ್ಷಣ, ಸುರಕ್ಷಿತ ದುಡಿಮೆ ಮುಂತಾದ ಅಭಿವೃದ್ಧಿ ಪ್ರೇರಕ ಸೇವೆಗಳಿಂದ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ವಂಚಿತರಾಗಿರುವುದರಿಂದಲೇ ಜೀವನದ ವಿವಿಧ ಘಟ್ಟಗಳಲ್ಲಿ ಅವರು ತಮ್ಮ ಬದುಕಿನಿಂದಲೇ ನಿರ್ಗಮಿಸುವಂಥ ಸ್ಥಿತಿಗಳು ಉದ್ಭವವಾಗಿ ಅವರು ಅಗೋಚರರಾಗುತ್ತಾರೆ ಎಂಬ ದೃಷ್ಟಿಕೋನ ಲಿಂಗ ಅಸಮಾನತೆಯ ಚರ್ಚೆಗೆ ಹೊಸ ಆಯಾಮವನ್ನು ನೀಡಿತ್ತು.

ಸಾವು ಎನ್ನುವುದು ಮಾನವ ಬದುಕಿನ ಒಂದು ಅನಿವಾರ್ಯ ಘಟ್ಟ ಎನ್ನುವುದು ನಿಜ. ಆದರೆ ಹೆಣ್ಣಾಗಿ ಹುಟ್ಟಿದ ಏಕೈಕ ಕಾರಣಕ್ಕಾಗಿ ಹಾಗೂ ಸಮಾಜದ ಸಂಪನ್ಮೂಲಗಳ ಅಸಮಾನ ಹಂಚಿಕೆಯಿಂದಾಗಿ ಜೀವ ತ್ಯಾಗ ಮಾಡಬೇಕಾದ ಸ್ಥಿತಿಗೆ ತಳ್ಳಲ್ಪಟ್ಟವರನ್ನೂ ಕಾಣೆಯಾದವರ ಪಟ್ಟಿಯಲ್ಲಿ ನಾವು ಸೇರಿಸಬೇಕಲ್ಲವೇ? 

ಕಳೆದ ಶತಮಾನದ ಕೊನೆಯ ದಶಕದಲ್ಲಿ `ಕಾಣೆಯಾಗುತ್ತಿರುವ ಹೆಣ್ಣುಗಳು' ಎಂಬ ಪರಿಕಲ್ಪನೆಯ ಚರ್ಚೆಯಲ್ಲಿ ಭ್ರೂಣಾವಸ್ಥೆಯಲ್ಲಿಯೇ ಹೆಣ್ಣೆಂಬ ಕಾರಣಕ್ಕಾಗಿ ಹತ್ಯೆಗೊಳಗಾಗುವ ಶಿಶುಗಳನ್ನೂ ಸೇರಿಸಲಾಯಿತು. ಈ ಹೆಣ್ಣು ಶಿಶುಗಳು `ನಿಜವಾದ ಅರ್ಥದಲ್ಲಿ ಕಾಣೆಯಾದವರು'. ಏಕೆಂದರೆ ಇವರಿಗೆ ಹೊರ ಪ್ರಪಂಚವೂ ಗೋಚರವಾಗುವುದಿಲ್ಲ, ಆ ಪ್ರಪಂಚಕ್ಕೂ ಇವರು ಕಾಣಿಸಿಕೊಳ್ಳುವುದಿಲ್ಲ.

 ಗಂಡು ಶಿಶುವಿನ ವ್ಯಾಮೋಹಕ್ಕೆ ಒಳಗಾಗಿ, ಎಲ್ಲಿ ಹೆಣ್ಣು ಮಕ್ಕಳಾದರೆ ವರದಕ್ಷಿಣೆಯನ್ನು ನೀಡಬೇಕೋ ಎಂಬ ಭಯಕ್ಕೆ ಬಲಿಯಾಗಿ ತಮ್ಮ ಕರುಳ ಕುಡಿಗಳನ್ನು ಭ್ರೂಣವಸ್ಥೆಯಲ್ಲಿಯೇ ಹೊಸಕಿ ಹಾಕುವ ಪೋಷಕರ ಸಂಖ್ಯೆ ಈ ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಾ ಹೋಯಿತು. ಈ ಪಾಪ ಕೃತ್ಯಕ್ಕೆ ಕೈ ಜೋಡಿಸಿದ ವೈದ್ಯರು, ದಾದಿಯರು, ಆಸ್ಪತ್ರೆಗಳ ಆಡಳಿತಾತ್ಮಕ ವ್ಯವಸ್ಥೆಗಳು ಮುಂತಾದವರ ಒಂದು ಬೃಹತ್ ಜಾಲವೇ ಭಾರತದಲ್ಲಿ ಈಗ ಸೃಷ್ಟಿಯಾಗಿದೆ. ಈ ಹೊತ್ತು ಹೆಣ್ಣು ಭ್ರೂಣ ಹತ್ಯೆ 1000 ಕೋಟಿ ರೂಪಾಯಿಗಳ ಉದ್ಯಮವಾಗಿ ಪರಿಣಮಿಸಿದೆ ಎಂದು ಹೇಳಲಾಗುತ್ತಿದೆ.

ಅಂಕಿ-ಅಂಶಗಳ ಪ್ರಕಾರ ಪ್ರತಿ ವರ್ಷವೂ ಹತ್ತು ಲಕ್ಷ ಹೆಣ್ಣು ಮಕ್ಕಳು ಹುಟ್ಟುವ ಮೊದಲೇ ಹೆಣವಾಗುತ್ತಿದ್ದಾರೆ, ಕಣ್ಣು ಬಿಡುವ ಮುನ್ನವೇ ಕಾಣೆಯಾಗುತ್ತಿದ್ದಾರೆ. ಕರ್ನಾಟಕವೂ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಮರೆಯಾಗುತ್ತಿರುವ ಹೆಣ್ಣು ಭ್ರೂಣಗಳ ಸಂಖ್ಯೆ ಏರುತ್ತಿದೆ. ದೇಶದ ಹೆಣ್ಣು-ಗಂಡು ಮಕ್ಕಳ ಅನುಪಾತ ಇಳಿಯುತ್ತಿದೆ. ಆದರೆ `ಕಾಣೆಯಾದ ಹೆಣ್ಣುಗಳ' ಚರ್ಚೆಯಲ್ಲಿ ಈ ಹೆಣ್ಣು ಜೀವಗಳಿಗೇಕೆ ಸ್ಥಾನವಿಲ್ಲ? ಅವರನ್ನೇಕೆ ನಾವು ಮಾಯವಾದವರು ಎಂದು ಪರಿಗಣಿಸುತ್ತಿಲ್ಲ?

ಮಹಿಳಾ ಆಯೋಗ ಸಲ್ಲಿಸಿರುವ ವರದಿಯಲ್ಲಿ ಮಾನವ ಸಾಗಾಣಿಕೆಯ ಜಾಲಕ್ಕೆ ಬಲಿಯಾಗುವ ಹೆಣ್ಣು ಮಕ್ಕಳನ್ನು ರಕ್ಷಿಸಲು ಅವರಿಗೆ ತಿಳಿವಳಿಕೆ ನೀಡುವ ಬಗ್ಗೆ ಪ್ರಸ್ತಾಪವಿದೆ. ಆದರೆ ಈ ಅನಿಷ್ಟ ಪಿಡುಗಿಗೆ ಬಲಿಯಾಗುತ್ತಿರುವ ಹೆಣ್ಣು ಮಕ್ಕಳು ಹಾಗೂ ಮಹಿಳೆಯರನ್ನು ಕಾಣೆಯಾಗುತ್ತಿರುವ ಹೆಣ್ಣುಗಳ ಪಟ್ಟಿಗೆ ಸೇರಿಸಲಾಗಿದೆಯೇ ಎಂಬ ಪ್ರಶ್ನೆ ಇಲ್ಲಿ ಏಳಬೇಕು. ಈ ಸಾಗಾಣಿಕೆಯ ಜಾಲ ಜಾರಿರುವ ಆಳ ಹಾಗೂ ಅದನ್ನು ಸುತ್ತುವರೆದಿರುವ ಭಯಾನಕ ಸತ್ಯಗಳು ನಮ್ಮ ಉಹೆಗೂ ನಿಲುಕಲಾರದಂಥ ಮಟ್ಟವನ್ನು ತಲುಪಿದೆ. ವರ್ಷದಿಂದ ವರ್ಷಕ್ಕೆ ಲೈಂಗಿಕ ಶೋಷಣೆಗೆ ಒಳಗಾಗಿ ತಮ್ಮ ಕುಟುಂಬದ, ನೆರೆಹೊರೆಯ ಹಾಗೂ ಸಮಾಜದ ಮನಃಪಟಲದಿಂದಲೇ ಕಾಣೆಯಾಗುತ್ತಿರುವ ಲಕ್ಷಾಂತರ ಹೆಣ್ಣುಗಳ ದೈನಂದಿನ ಬದುಕಿನತ್ತ ಗಮನ ಹರಿಸುವುದು ಸರ್ಕಾರ, ಕಾನೂನು ವ್ಯವಸ್ಥೆ, ಮಹಿಳಾ ಆಯೋಗಗಳು ಹಾಗೂ ಮಾನವ ಹಕ್ಕುಗಳ ಹೋರಾಟಗಾರರಿಗೆ ಆದ್ಯತೆಯ ವಿಷಯವಾಗಬೇಕು.  

ಇತ್ತೀಚೆಗಷ್ಟೇ ಲಭ್ಯವಾಗಿರುವ ಮಾಹಿತಿಯ ಮೂಲವೊಂದರ ಪ್ರಕಾರ, ಮಹಿಳೆಯರು ಹಾಗೂ ಮಕ್ಕಳ ಸಾಗಾಣಿಕೆ ನಮ್ಮ ದೇಶದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಔಷಧಗಳ ಉದ್ದಿಮೆಗಳ ನಂತರ ಮೂರನೇ ಅತಿ ಬೃಹತ್ ಉದ್ಯಮವಾಗಿದೆ. ಲೈಂಗಿಕ ವೃತ್ತಿಯಲ್ಲಿ ತೊಡಗಿರುವವರೆಲ್ಲರ ಜಂಟಿ ಆದಾಯ ವರ್ಷಕ್ಕೆ 40,000 ಕೋಟಿಗಳಷ್ಟು ಎಂದರೆ ಹೇಗೆ ಈ ವೃತ್ತಿ ಸಮಾಜವನ್ನು ಆವರಿಸಿದೆ ಎಂಬ ಕಲ್ಪನೆಯಾದರೂ ನಮಗೆ ಬರಬೇಕು.

ಹೆಣ್ಣಿನ ದೇಹವನ್ನು ಬಂಡವಾಳವನ್ನಾಗಿರಿಸಿಕೊಂಡು ಕೋಟಿಗಟ್ಟಲೆ ಬಂಡವಾಳ ಹೂಡಿಕೆ ಹಾಗೂ ಉತ್ಪತ್ತಿಯಾಗುತ್ತಿದೆ. ಆದರೆ ಈ ವಿಷವರ್ತುಲದಲ್ಲಿ ಸಿಲುಕಿರುವ ಹೆಣ್ಣು ಸಮಾಜದ ಚಿತ್ತದಲ್ಲಿದ್ದಾಳೆಯೇ? ಅವಳ ಇರುವಿಕೆಯನ್ನು ನಾವು ಗುರುತಿಸುತ್ತೇವೆಯೇ? ಒಂದು ನಿಜವಾದ ಅರ್ಥದಲ್ಲಿ ಈ ಹೆಣ್ಣುಗಳೂ ಕಾಣೆಯಾದವರಲ್ಲವೇ?

ಮಹಿಳಾ ಆಯೋಗದ ವರದಿಯಲ್ಲಿ ಶೇಕಡ 36 ಹೆಣ್ಣುಮಕ್ಕಳು ಪ್ರೇಮ ಸಂಬಂಧಗಳ ಕಾರಣದಿಂದಾಗಿ ತಮ್ಮ ಮನೆಯಿಂದ ಕಾಣೆಯಾಗುತ್ತಾರೆ ಎಂದು ಹೇಳಲಾಗಿದೆ. ಓರ್ವ ಹೆಣ್ಣು ತನ್ನ ಮನೆಯಿಂದ ದೂರ ಹೋದಳೆಂದಾಕ್ಷಣ ಸಾಮಾನ್ಯವಾಗಿ ಜನರ ಮನಸ್ಸಿನಲ್ಲಿ ಬರುವ ಆಲೋಚನೆಯೆಂದರೆ, ಆಕೆ ಯಾರನ್ನೋ ಪ್ರೀತಿಸಿಯೋ ಅಥವಾ ಪರಪುರುಷನ ವ್ಯಾಮೋಹದಿಂದಲೋ ಓಡಿಹೋಗಿದ್ದಾಳೆ ಎಂಬುದು. ಬದಲಾಗುತ್ತಿರುವ ಉದ್ಯೋಗ ಸ್ಥಿತಿಗಳು, ಹೆಚ್ಚುತ್ತಿರುವ ಚಲನೆ, ಸಡಿಲವಾಗುತ್ತಿರುವ ಸಾಮಾಜಿಕ ನಿರ್ಬಂಧಗಳು ಮತ್ತು ಇಡೀ ಸಮಾಜವನ್ನು

ಸುತ್ತುವರೆದಿರುವ ವಾಣಿಜ್ಯೀಕೃತ ಮನರಂಜನಾ ಮಾಧ್ಯಮದ ಹಾವಳಿ - ಇವುಗಳೆಲ್ಲದರ ಪ್ರಭಾವದಿಂದ ಯುವಕ-ಯುವತಿಯರು ಪ್ರೀತಿ-ಪ್ರೇಮಗಳನ್ನು ಕುರಿತಂತೆ ಬಣ್ಣದ ಕನಸುಗಳನ್ನು ಕಟ್ಟಿ, ಅವುಗಳ ಬೆನ್ನಟ್ಟಿ ಮನೆಯಿಂದ ಹೋಗಿರುವಂಥ ಘಟನೆಗಳು ಹೆಚ್ಚುತ್ತಿವೆ ಎನ್ನುವುದು ನಿಜ. ಆದರೆ ಇಂದಿಗೂ ಎಷ್ಟು ಕುಟುಂಬಗಳಲ್ಲಿ ವಯಸ್ಕ ಮಕ್ಕಳಿಗೆ ತಮ್ಮ ಆಯ್ಕೆಯ ಸಂಗಾತಿಯನ್ನು ವಿವಾಹವಾಗಲು ಅವಕಾಶವಿದೆ? 

ಮನೆತನದ ಗೌರವ ರಕ್ಷಣೆ ಧರ್ಮ ಅಥವಾ ಜಾತಿಯ ಹೆಸರಿನಲ್ಲಿ ಮರ್ಯಾದಾ ಹತ್ಯೆಯಂಥ ಅಮಾನವೀಯ ಕೃತ್ಯಗಳಲ್ಲಿ ತೊಡಗುವ ಮಂದಿಗೆ ಯಾವ ಶಿಕ್ಷೆಯೂ ಆಗದಂಥ ನಮ್ಮ ಸಮಾಜದಲ್ಲಿ, ಅನೇಕ ಹೆಣ್ಣು , ಗಂಡು ಮಕ್ಕಳು ಕುಟುಂಬವೆಂಬ ಸಾಂಸ್ಥಿಕ ಚೌಕಟ್ಟಿನಿಂದ ಹೊರಬಂದು ಜಗತ್ತಿನ ಕಣ್ಣಿಗೆ ಕಾಣೆಯಾಗುತ್ತಿದ್ದಾರೆ.

ತಮ್ಮ ಮನೆಯಲ್ಲಿ ಇರಬೇಕೆಂದರೂ ಅವರಿಗೆ ಜೀವ ಭಯವಿದ್ದಾಗ ತಲೆ ಮರೆಸಿಕೊಳ್ಳುವಂಥ ಅನಿವಾರ್ಯ ಪರಿಸ್ಥಿತಿ ಬಂದೊದಗಿರುವುದು ನಮಗೆ ತಿಳಿಯದ ವಿಷಯವೇ? ಖಾಪ್ ಅಥವಾ ಅಂತಹುದೇ ಸಂಸ್ಥೆಗಳಿಂದ ಪ್ರೇರಿತವಾದ ದೌರ್ಜನ್ಯಗಳ ಇತಿಹಾಸವನ್ನು ಪರೀಕ್ಷಿಸಿದಾಗಲೇ ನಮಗೆ ತಿಳಿಯುತ್ತದೆ, ಏಕೆ ಅನೇಕ ಹೆಣ್ಣು ಮಕ್ಕಳು ಕಾಣೆಯಾಗುತ್ತಾರೆ ಎಂಬುದು.

ಹೆಣ್ಣು ಮಕ್ಕಳು ಅಥವಾ ಮಹಿಳೆಯರು ಕಾಣೆಯಾಗುವ ವಿಷಯವನ್ನು ಸರಳೀಕೃತಗೊಳಿಸಲು ಸಾಧ್ಯವಿಲ್ಲ. ಮನೆಗಳಿಂದ ಹೋದ ಅನೇಕರು ಸ್ವಇಚ್ಛೆಯಿಂದಲೋ, ಪೊಲೀಸರ ನೆರವಿನಿಂದಲೋ ಹಿಂದಿರುಗಿರುವುದುಂಟು. ಆದರೆ ಮನೆಯೇ ದೌರ್ಜನ್ಯದ ಮೂಲವಾದಾಗ ಅಪಾಯಗಳಿಂದ ತುಂಬಿದ ಹೊರಜಗತ್ತೇ ಹಿತ ಎನಿಸುವ ಸ್ಥಿತಿಗೆ ಅವರು ತಲುಪಬಹುದು. ಆದ್ದರಿಂದ ಕಾಣೆಯಾದ ಹೆಣ್ಣುಗಳನ್ನೆಲ್ಲಾ ಒಂದು ಸಮರೂಪ ವರ್ಗವೆಂಬಂತೆ ಪರಿಗಣಿಸದೆ, ಈ ಸಮಸ್ಯೆಯ  ಕಾಣುವ  ಹಾಗೂ  ಕಾಣದ  ಮುಖಗಳೆರಡನ್ನೂ ಪರಿಶೀಲಿಸಿದತೆ ಒಳಿತು. ಅದರ ಜೊತೆಜೊತೆಗೆ ಅವರನ್ನು ಈ ಸ್ಥಿತಿಗೆ ತಳ್ಳುವ ವ್ಯಕ್ತಿ-ವ್ಯವಸ್ಥೆಗಳಿಗೆ ಕಠಿಣ ಶಿಕ್ಷೆ ಆಗುವಂಥ ಪರಿಸ್ಥಿತಿಯೂ ನಿರ್ಮಾಣವಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT