ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿಯಷ್ಟೇ ಜೀವನದಿಯೇ? ಕೃಷ್ಣಾ ಅಲ್ಲವೇ?

Last Updated 7 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

‘ಕಾವೇರಿ’ ಗಲಾಟೆ ಜೋರಾಗಿತ್ತು. ಆಳುವ ಮತ್ತು ವಿರೋಧ ಪಕ್ಷಗಳು ವಿಪರೀತ ತಲೆ ಕೆಡಿಸಿಕೊಂಡಿದ್ದವು. ಆ ವೇಳೆ ಸಿಕ್ಕಿದ ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಸವರಾಜ ಕುಂಬಾರ ಅವರು ‘ಕಾವೇರಿ ಮಾತ್ರ ಜೀವನದಿಯೇ? ಕೃಷ್ಣಾ, ಭೀಮಾ ಅಲ್ಲವೇ?’ ಎಂದು ಸಾತ್ವಿಕ ಸಿಟ್ಟನ್ನು ಹೊರ ಹಾಕಿದರು.

ನಾನು ಇಂತಹ ಪ್ರಶ್ನೆಗಳನ್ನು ಹಲವು ಬಾರಿ ಕೇಳಿಸಿಕೊಂಡಿದ್ದೇನೆ. ಸಾತ್ವಿಕ ಸಿಟ್ಟನ್ನೂ ಕಂಡಿದ್ದೇನೆ. ಇಂಥ ಭಾವನೆ ಈ ಭಾಗದಲ್ಲಿ ಏಕೆ ಇರಬಹುದು ಎನ್ನುವುದನ್ನು ಯೋಚಿಸತೊಡಗಿದೆ. ಸಾಹಿತ್ಯಿಕ, ಚಾರಿತ್ರಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಆಯಾಮಗಳು ಬಿಚ್ಚಿಕೊಳ್ಳತೊಡಗಿದವು.

ಕನ್ನಡ ಸಾಹಿತ್ಯದ ಮೊದಲ ಲಕ್ಷಣ ಕೃತಿ ‘ಕವಿರಾಜಮಾರ್ಗ’ದಲ್ಲಿ ‘ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ..’ ಎಂದು ಕನ್ನಡನಾಡಿನ ಗಡಿಯನ್ನು ಉಲ್ಲೇಖಿಸಲಾಗಿದೆ.

ಈ ಕೃತಿಕಾರ ಕಲಬುರ್ಗಿ ಜಿಲ್ಲೆ ಮಳಖೇಡದವನಾಗಿದ್ದು ಕೃಷ್ಣಾ, ಭೀಮಾ, ಕಾಗಿಣಾ ನದಿಗಳು ಸಮೀಪವೇ ಇದ್ದವು. ಆದರೂ ಕಾವೇರಿ ನದಿಯ ಹೆಸರನ್ನು ಉಲ್ಲೇಖಿಸಿದ್ದಾನೆ! ಅಲ್ಲದೇ ಬೆಂಗಳೂರು, ಮೈಸೂರು ಭಾಗದ ಸಾಹಿತಿಗಳು ಆಧುನಿಕ ಕನ್ನಡ ಸಾಹಿತ್ಯಕ್ಕೆ ಮೊದಲು ತೆರೆದುಕೊಂಡರು. ಅವರು ಸಹಜವಾಗಿಯೇ ‘ಕಾವೇರಿ’ ಕುರಿತು ಕವಿತೆಗಳನ್ನು ಬರೆದರು. ಗಾಯಕರು ಜನಪ್ರಿಯಗೊಳಿಸಿದರು. ‘ಕಾವೇರಿ’ ಕುರಿತಾದ ಚಿತ್ರಗೀತೆಗಳು ಜನರ ನಾಲಿಗೆ ಮೇಲೆ ನಲಿದಾಡತೊಡಗಿದವು.

ರಾಜ್ಯದಲ್ಲಿ ಮೊದಲು ಕಾವೇರಿಗೆ ‘ಕೃಷ್ಣರಾಜಸಾಗರ’ ಅಣೆಕಟ್ಟೆಯನ್ನು ನಿರ್ಮಿಸಲಾಯಿತು. ಅಲ್ಲಿಯ ರೈತರು ವಾಣಿಜ್ಯ ಬೆಳೆ ಬೆಳೆಯಲು ಶುರು ಮಾಡಿದರು. ಆರ್ಥಿಕವಾಗಿ ಸಬಲರಾದರು. ಶಿಕ್ಷಣ ಪಡೆದರು. ಜಾಗೃತರಾದರು. ರಾಜಕೀಯವಾಗಿಯೂ ಪ್ರಮುಖ ಪಾತ್ರ ನಿರ್ವಹಿಸತೊಡಗಿದರು.

ಇವುಗಳಿಗೆ ಕಳಸವಿಟ್ಟಂತೆ ‘ಕೃಷ್ಣರಾಜಸಾಗರ’ ಅಣೆಕಟ್ಟೆಯ ‘ಬೃಂದಾವನ’ ತನ್ನ ಸೌಂದರ್ಯದಿಂದ ವಿಶ್ವದ ಪ್ರವಾಸಿಗರನ್ನು ಆಕರ್ಷಿಸಿತು. ಸಿನಿಮಾಗಳು ಕಾವೇರಿ ನದಿ ಮತ್ತು ಬೃಂದಾವನದ ಸಹಜ ಸೊಬಗನ್ನು ಪ್ರೇಕ್ಷಕರಿಗೆ ಉಣಬಡಿಸಿದವು.

ಇವು ಅಷ್ಟೇ ಅಲ್ಲದೆ ಕಾವೇರಿಗೆ ‘ವಿವಾದ ಕೇಂದ್ರ’ವೂ ಇದೆ. ಕರ್ನಾಟಕ ಮತ್ತು ತಮಿಳುನಾಡು ನಡುವೆ ನದಿ ನೀರು ಹಂಚಿಕೆಯ ಒಪ್ಪಂದವಾಗಿತ್ತು. ಅದು ವಿವಾದವಾಗಿ ಎರಡು ರಾಜ್ಯಗಳ ಜನರ ಮಧ್ಯೆ ಭಾವನಾತ್ಮಕ, ರಾಜಕೀಯ ಮತ್ತು ಪ್ರತಿಷ್ಠೆಯ ವಿಷಯವಾಗಿದೆ. ಈ ಕಾರಣಗಳಿಂದಾಗಿ ಆಗಾಗ ಗಲಭೆಗಳು ನಡೆಯುತ್ತಲೇ ಇರುತ್ತವೆ.

ಇವುಗಳಷ್ಟೇ ಮುಖ್ಯವಾಗಿ ಕಾವೇರಿ ನದಿಯು ಕನ್ನಡದ ‘ಅಸ್ಮಿತೆ’ ಎನ್ನುವಂತಾಗಿದ್ದು, ತನ್ನ ಸುತ್ತಲೂ ‘ಪ್ರಭಾವಳಿ’ಯನ್ನು ಸೃಷ್ಟಿಸಿಕೊಂಡಿದೆ.

ನದಿ ನೀರು ಮತ್ತು ರೈತರ ನಡುವೆ ಸಂಬಂಧ ಉಂಟಾದರೆ ಅಂತಹ ನದಿಗೆ ಮಹತ್ವ ಬರುತ್ತದೆ. ತಮಗೆ ಸಿಗುವ ನೀರು ‘ಖೋತಾ’ ಆಗುತ್ತದೆ ಎನ್ನುವುದು ತಿಳಿದರೆ ಸಾಕು; ಅವರು ಉಗ್ರ ಹೋರಾಟಕ್ಕೆ ಮುಂದಾಗುತ್ತಾರೆ. ಕಾವೇರಿ ನದಿಗೆ ಇಂಥದ್ದು ಸಾಧ್ಯವಾಗಿದೆ. ಆದರೆ ಕೃಷ್ಣಾ ನದಿ ಈ ವಿಷಯದಲ್ಲಿ ಶತಮಾನದಷ್ಟು ಹಿಂದೆ ಉಳಿದಿದೆ!

ಹೈದರಾಬಾದ್‌ ಕರ್ನಾಟಕ ಹೆಚ್ಚು ಒಣಭೂಮಿಯನ್ನು ಹೊಂದಿದೆ. ಮಳೆಯನ್ನೇ ಆಶ್ರಯಿಸಿ ಬೆಳೆಯನ್ನು ಬೆಳೆಯುವುದು ರೈತರಿಗೆ ಅಭ್ಯಾಸವಾಗಿದೆ. ಪಕ್ಕದಲ್ಲಿ ನದಿ ಇದ್ದರೂ ಅದರ ನೀರು ಏಕೆ ತಮ್ಮ ಹೊಲದಲ್ಲಿ ಹರಿಯುತ್ತಿಲ್ಲ ಎಂದು ಕೇಳಿಕೊಂಡವರಲ್ಲ. ಇಲ್ಲಿಯ ಜನ ಕುಡಿಯುವ ನೀರಿಗೆ ನದಿಗಳಿಗಿಂತ ಕೆರೆ, ಬಾವಿಗಳನ್ನು ಅವಲಂಬಿಸಿದವರು. ಆದ್ದರಿಂದ ನದಿ ಜೊತೆ ಸಂಬಂಧ ಕಡಿಮೆಯೇ ಇತ್ತು.

ಕೃಷ್ಣಾ ರಾಜ್ಯದ ದೊಡ್ಡ ನದಿ. ಇದಕ್ಕೆ ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ಅಣೆಕಟ್ಟು ನಿರ್ಮಿಸಲು 1964 ರಲ್ಲಿ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಅವರು ಅಡಿಗಲ್ಲು ಹಾಕಿದರು. ಆದರೆ, ಅದರಲ್ಲಿ ನೀರು ಸಂಗ್ರಹವಾಗಿದ್ದು ಮಾತ್ರ ನಲವತ್ತು ವರ್ಷಗಳ ನಂತರ! ಇದೇ ನದಿಗೆ ನಾರಾಯಣಪುರ ಬಳಿ ‘ಬಸವಸಾಗರ’ ಅಣೆಕಟ್ಟೆಯನ್ನು ನಿರ್ಮಿಸಲಾಗಿದೆ. ‘ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಸಾಗರ’ ಅಣೆಕಟ್ಟೆಯ ಎತ್ತರಕ್ಕೆ ಸಂಬಂಧಿಸಿದ ವಿವಾದವನ್ನು ಹೊರತುಪಡಿಸಿದರೆ, ಈ ನದಿ ಹೆಚ್ಚು ಸುದ್ದಿಯಾಗುವುದು ಪ್ರವಾಹದಿಂದ!

ಕೃಷ್ಣಾ ಮೇಲ್ದಂಡೆ ಯೋಜನೆ ದೇಶದ ಬೃಹತ್‌ ನೀರಾವರಿ ಯೋಜನೆಗಳಲ್ಲಿ ಒಂದು. ಈಗ 15 ಲಕ್ಷ ಎಕರೆ ಭೂಮಿಗೆ ನೀರು, 18 ನಗರಗಳು ಹಾಗೂ ನೂರಾರು ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುತ್ತಿದೆ. ಆಲಮಟ್ಟಿಯಲ್ಲಿ 290 ಮೆಗಾವಾಟ್‌ ವಿದ್ಯುತ್‌ ಉತ್ಪಾದನೆ ಆಗುತ್ತಿದೆ.

ಆಧುನಿಕ ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಹೈದರಾಬಾದ್‌ ಕರ್ನಾಟಕದಲ್ಲಿ ಹೆಚ್ಚಾಗಿ ಪುರಾಣ, ತತ್ವಪದ, ಬಯಲಾಟದಂತಹ ಸಾಹಿತ್ಯ ರಚನೆ ಆಗುತ್ತಿತ್ತು. ಹೀಗಾಗಿ ಇಲ್ಲಿನ ಸಾಹಿತಿಗಳು ಅಲ್ಲಿಯವರಂತೆ ನದಿಗಳ ಕುರಿತು ಕವಿತೆಯನ್ನು ಕಟ್ಟಲೂ ಇಲ್ಲ, ಗಾಯಕರು ಹಾಡಲೂ ಇಲ್ಲ.

‘ಕೃಷ್ಣಾ ನದಿಗೆ ಕಟ್ಟಲಾಗಿರುವ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಸಾಗರ ಅಣೆಕಟ್ಟೆಯ 123, ನಾರಾಯಣಪುರದ ಬಸವಸಾಗರದ 37, ಹಿಪ್ಪರಗಿ ಬ್ಯಾರೇಜ್‌ 10 ಸೇರಿ ಒಟ್ಟು 170 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿದೆ. ಕಾವೇರಿ ನದಿಯ ಕೃಷ್ಣರಾಜಸಾಗರ ಅಣೆಕಟ್ಟೆಯಲ್ಲಿ 49 ಟಿಎಂಸಿ ನೀರು ಇದೆ. ಆದರೂ ಕಾವೇರಿ ಜಪ ಮಾತ್ರ ನಿಂತಿಲ್ಲ’ ಎಂದು ಶಹಾಪುರದ ಹಿರಿಯ ವಕೀಲ ಭಾಸ್ಕರರಾವ ಮುಡಬೂಳ ಅವರು ಬೇಸರ ವ್ಯಕ್ತಪಡಿಸುತ್ತಾರೆ.

ನನ್ನೂರು ಕಾವೇರಿ ನದಿ ದಂಡೆಯ ಮೇಲಿದೆ. ಬಾಲ್ಯದಲ್ಲಿ ಆ ನದಿಯಲ್ಲೇ ಈಜುವುದನ್ನು ಕಲಿತೆ. ಬೇಸಿಗೆಯಲ್ಲಿ ‘ಕಾವೇರಿ’ ಆಪ್ತ ಸಂಗಾತಿ ಆಗುತ್ತಿತ್ತು. ಆ ನದಿಯಿಂದಾಗಿಯೇ ನಮ್ಮ ಗದ್ದೆಯಲ್ಲಿ ಹಸಿರು ಉಕ್ಕುತ್ತದೆ. ಕಾವೇರಿ ಚಳವಳಿಯಲ್ಲಿ ನಾನೂ ಭಾಗಿ ಆಗಿದ್ದೆ. ಕಾವೇರಿಯೊಂದಿಗೆ ಇಷ್ಟೆಲ್ಲ ಒಡನಾಟ ನನ್ನದು.

ವಿಜಯಪುರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುವಾಗ ಕೃಷ್ಣಾ, ಭೀಮಾ ನದಿಗಳ ಜೊತೆಗೆ ಸಂಬಂಧ ಶುರುವಾಯಿತು. ಈಗ ಕಲಬುರ್ಗಿಯಲ್ಲಿಯೂ ಮುಂದುವರಿದಿದೆ. ‘ಕಾವೇರಿ–ಕೃಷ್ಣಾ’ ಎನ್ನುವ ತರತಮ ಇಲ್ಲದೆ ಇದೆಲ್ಲವನ್ನೂ ಹೊರಗೆ ನಿಂತು ನೋಡುತ್ತಾ ವಿನಯದಿಂದಲೇ ಹೇಳುತ್ತಿದ್ದೇನೆ.

ನದಿ ಎಷ್ಟು ಎಕರೆ ಭೂಮಿಗೆ ನೀರು ಉಣಿಸುತ್ತದೆ. ಕುಡಿಯಲು, ಕೈಗಾರಿಕೆಗೆ, ವಿದ್ಯುತ್‌ ಉತ್ಪಾದನೆಗೆ ಎಷ್ಟು ನೀರು ಕೊಡುತ್ತದೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳುತ್ತೇವೆ. ಅಂದರೆ, ನದಿ ಇರುವುದೇ ನಮಗಾಗಿ ಎನ್ನುವಂತೆ ಒರಟಾಗಿ ನಡೆದುಕೊಳ್ಳುತ್ತೇವೆ. ಆದರೆ, ನದಿ ಎಂದರೆ ಬರೀ ನೀರು ಹರಿಯುವ ಸ್ಥಳವಲ್ಲ; ಅದು ಜೀವಜಾಲದ ನೇಯ್ಗೆ. ಅದರ ಪಾತ್ರದ ಉದ್ದಕ್ಕೂ ಅಸಂಖ್ಯಾತ ಜೀವಿಗಳು ಉಸಿರಾಡುತ್ತವೆ.

ಮೊಸಳೆಗಳು ನೀರಿದೆ ಎಂದು ಎಲ್ಲಿಯೋ ವಾಸಿಸುವುದಿಲ್ಲ. ಅವು ತಕ್ಕನಾದ ಜಾಗವನ್ನು ಹುಡುಕಿಕೊಳ್ಳುತ್ತವೆ. ಆಹಾರ, ವಿಹಾರ, ಸಂತಾನೋತ್ಪತ್ತಿಗೆ ಸುರಕ್ಷಿತ ಸ್ಥಳವೇ ಎನ್ನುವುದನ್ನು ಗಮನಿಸುತ್ತವೆ. ಹಕ್ಕಿಗಳು ತಮಗೆ ಎಲ್ಲಿ ಮೀನು, ಏಡಿ, ಕಪ್ಪೆ, ಕೀಟಗಳು ಸಿಗುತ್ತವೆ ಎಂಬುದನ್ನು ತಿಳಿದುಕೊಂಡಿರುತ್ತವೆ.

ನದಿಗುಂಟ ಕಾಲ್ನಡಿಗೆಯಲ್ಲಿ ಸಾಗಿದರೆ ಕೆಲವು ಪ್ರಭೇದ ಮರ, ಗಿಡ, ಹಕ್ಕಿ, ಸಸ್ತನಿಗಳು ಕಾಣಿಸುತ್ತವೆ. ನದಿ ಮತ್ತು ಜೀವಜಾಲದ ನಡುವೆ ಅಂತರ್‌ ಸಂಬಂಧ ಬೆಸೆದುಕೊಂಡಿರುತ್ತದೆ. ಏಕೆಂದರೆ, ನದಿ ವಿನ್ಯಾಸಗೊಂಡಿರುವುದೇ ಹೀಗೆ.

ಏಳು ಸಾವಿರ ಕಿಲೊಮೀಟರ್ ಉದ್ದದ ‘ನೈಲ್‌’ ಮಹಾನದಿಯ ಪಾತ್ರದಲ್ಲಿ 400 ಕ್ಕೂ ಹೆಚ್ಚು ಪ್ರಭೇದದ ಹಕ್ಕಿಗಳು ಇವೆ. ಆ ಹಕ್ಕಿಗಳಿಗೆ ಯಾವ ಮೀನು ಎಲ್ಲಿ ಸಿಗುತ್ತದೆ ಎನ್ನುವುದು ಚೆನ್ನಾಗಿ ಗೊತ್ತು. ಇದೇ ನದಿ ದಂಡೆ ಮೇಲೆ ಪ್ರಾಚೀನ ನಾಗರಿಕತೆಗಳು ಅರಳಿವೆ.

ನಾವು ಯಾವಾಗ ನದಿಗಳನ್ನು ಗೌರವಿಸುವುದಿಲ್ಲವೋ ಆಗ ನಾಗರಿಕತೆಗಳು ನಾಶವಾಗುತ್ತವೆ. ಈಗ ನದಿಗೆ ಪರ್ಯಾಯವಾಗಿ ನೀರಿನ ಮೂಲಗಳನ್ನು ಕಂಡುಕೊಳ್ಳುವ ಮೂಲಕ ಐವತ್ತೋ, ಅರವತ್ತೋ ವರ್ಷಗಳು ಸಮಸ್ಯೆಯನ್ನು ಮುಂದೂಡಬಹುದು. ಆದರೆ, ಇದು ಶಾಶ್ವತವಲ್ಲ. ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ಈ ಅವಧಿ ತುಂಬಾ ಕಿರಿದು. ಯಾವುದೇ ಒಂದು ಸಾಮ್ರಾಜ್ಯದ ಹುಟ್ಟು ಮತ್ತು ಪತನದ ಅವಧಿ ಹೆಚ್ಚು ಎಂದರೆ ಐದುನೂರು ವರ್ಷಗಳು ಇರಬಹುದು. ಆದರೆ, ವಿಕಾಸವಾದದಲ್ಲಿ ಒಂದು ನದಿಯ ಹುಟ್ಟು ಮತ್ತು ಕಣ್ಮರೆಗೆ ಐವತ್ತರಿಂದ ಅರವತ್ತು ಸಾವಿರ ವರ್ಷಗಳು ಬೇಕಾಗುತ್ತದೆ. ವಿಕಾಸದ ಹಾದಿಯಲ್ಲಿ ಈ ಅವಧಿ ಏನೇನು ಅಲ್ಲ. ಆದ್ದರಿಂದ ಇದರ ಅರಿವು ನಮಗೆ ಇರಬೇಕು.

ಆದರೆ ನೀರನ್ನು ‘ಗಂಗೆ’ ಎಂದು, ನದಿಯನ್ನು ‘ಪವಿತ್ರ’ವೆಂದು ಪೂಜಿಸುತ್ತೇವೆ. ನಮಗೆ ನದಿಗಳ ಬಗೆಗೆ ಧಾರ್ಮಿಕ ಭಾವನೆ ಇದೆಯೇ ಹೊರತು, ವೈಜ್ಞಾನಿಕ ಮನೋಭಾವ ಅಲ್ಲ!

ಪ್ರಕೃತಿ ನದಿಗೆ ಜನ್ಮ ನೀಡುತ್ತದೆ. ನಾವು ಅದನ್ನು ಬಳಸುತ್ತೇವೆ. ಕೆಡಿಸುತ್ತೇವೆ. ಖ್ಯಾತಿ, ಅಪಖ್ಯಾತಿಯನ್ನು ಅಂಟಿಸುತ್ತೇವೆ, ಆರೋಪಿಸುತ್ತೇವೆ.

ಪ್ರಕೃತಿಗೆ ಎಲ್ಲವೂ ಒಂದೆ. ನಮ್ಮಲ್ಲಿ ಮಾತ್ರ ಹೆಚ್ಚು–ಕಡಿಮೆ ಎನ್ನುವ ಭಾವ. ಆದ್ದರಿಂದ ಒಂದೇ ರಾಜ್ಯದಲ್ಲಿ ಹರಿಯುವ ಒಂದು ನದಿಯನ್ನು ‘ಜೀವನದಿ’ ಎಂದು ವಿಜೃಂಭಿಸುತ್ತೇವೆ. ಆದರೆ, ನಿಸರ್ಗ ಇದೆಲ್ಲವನ್ನೂ ತಿರಸ್ಕರಿಸುತ್ತದೆ.

ಹೇಮಾವತಿ, ಶರಾವತಿ, ಕಾಳಿ, ತುಂಗಾ, ಭದ್ರಾ, ಮಲಪ್ರಭಾ, ಘಟಪ್ರಭಾ, ಮಹದಾಯಿ ಇಷ್ಟೇ ಏಕೆ? ಭೂಮಂಡಲದಲ್ಲಿ ನಲಿದಾಡುತ್ತಾ ಹರಿಯುವ ಪ್ರತಿಯೊಂದು ನದಿಯೂ ಜೀವನದಿಯೇ ತಾನೆ?

ಕುವೆಂಪು ‘ಮಲೆಗಳಲ್ಲಿ ಮದುಮಗಳು’ ಮಹಾಕಾದಂಬರಿಯ ಆರಂಭದಲ್ಲಿ ಬರೆದಿರುವ ‘ಇಲ್ಲಿ ಯಾರು ಮುಖ್ಯರಲ್ಲ; ಯಾರೂ ಅಮುಖ್ಯರಲ್ಲ, ಹರಿಯುವ ನೀರೆಲ್ಲವೂ ತೀರ್ಥ’ ಎನ್ನುವ ಸಾಲುಗಳು ಮುಖ್ಯ ಎನಿಸುತ್ತದೆ.

ಕುವೆಂಪು ಅವರ ಮಾತಿನಲ್ಲಿ ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ಸ್ಥಾನ–ಮಾನವಿದೆ ಎನ್ನುವ ಪೂರ್ಣದೃಷ್ಟಿ ಇದೆ. ಹೀಗಾಗಿ ನಮಗೆ ಸಿಗುವ ಪ್ರತಿ ಹನಿಯೂ ಜೀವಜಲ, ಹರಿಯುವ ಎಲ್ಲ ನದಿಗಳೂ ಜೀವನದಿಗಳೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT