ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸಗಳ ಬೆನ್ನಿಗೆ ಬಿದ್ದು...

Last Updated 15 ಜೂನ್ 2013, 20:00 IST
ಅಕ್ಷರ ಗಾತ್ರ

ನಾನು ಪ್ರೌಢಶಾಲೆ ಕಲಿತದ್ದು ಎಸ್.ಆರ್. ಹೈಸ್ಕೂಲ್‌ನಲ್ಲಿ. ಚಿಕ್ಕೋಡಿ ತಮ್ಮಣ್ಣಪ್ಪನವರು ಕನ್ನಡ ಉಳಿಸಬೇಕು ಎಂಬ ಉದ್ದೇಶದಿಂದ 1937ರಲ್ಲಿ ಸ್ಥಾಪಿಸಿದ್ದ ಶಾಲೆ ಅದು. ಅಲ್ಲಿಯೂ ಉತ್ತಮ ಶಿಕ್ಷಕವರ್ಗ ಇತ್ತು. ಆರು ತಿಂಗಳಿಗೆ ನಾವು ಭರಿಸುತ್ತಿದ್ದ ಶುಲ್ಕ ಕೇವಲ ಮೂರು ರೂಪಾಯಿ. ಭೌತವಿಜ್ಞಾನ, ರಾಸಾಯನಿಕ ವಿಜ್ಞಾನಕ್ಕೆ ಸಂಬಂಧಿಸಿದ ಪ್ರಯೋಗಗಳನ್ನು ಆ ಕಾಲದಲ್ಲಿ ನಾವೇ ಮಾಡುತ್ತಿದ್ದೆವು. ಸುಸಜ್ಜಿತವಾದ ಪ್ರಯೋಗಶಾಲೆ ಶಾಲೆಯಲ್ಲಿ ಇತ್ತು. ಚರ್ಚಾಸ್ಪರ್ಧೆಗಳನ್ನು ಏರ್ಪಡಿಸುವುದು ಅಲ್ಲಿನ ಸಂಸ್ಕೃತಿ. ಆ ಸ್ಪರ್ಧೆಗಳಲ್ಲಿ ನನಗೆ ಮೊದಲ ಸ್ಥಾನ ಬರುತ್ತಿತ್ತು.

ಮಾಧ್ಯಮಿಕ ಶಾಲೆಯಲ್ಲಿದ್ದಾಗ ನಾವು ಹೆಚ್ಚಾಗಿ ಕಬಡ್ಡಿ, ಕೋ ಕೋ ಆಡುತ್ತಿದ್ದೆವು. ಹೈಸ್ಕೂಲ್‌ನಲ್ಲಿ ವಾಲಿಬಾಲ್, ಬೇಸ್‌ಬಾಲ್ ಆಡುವ ಅವಕಾಶ ಸಿಕ್ಕಿತು. ಆಗಿನ್ನೂ ಕ್ರಿಕೆಟ್ ಜನಪ್ರಿಯವಾಗಿರಲಿಲ್ಲ. 

ಅಲ್ಲಿನ ಶಿಕ್ಷಕರು ಎಷ್ಟರ ಮಟ್ಟಿಗೆ ತಯಾರಾಗುತ್ತಿದ್ದರೆಂದರೆ, ಒಮ್ಮೆ ಇಂಗ್ಲಿಷ್ ಪದ್ಯವೊಂದರಲ್ಲಿ `ಡೆಫೊಡಿಲ್ಸ್' ಎಂಬ ಪ್ರಸ್ತಾಪವಿತ್ತು. ಅದೊಂದು ಹೂವಿನ ಬಗೆ. ಅದು ಹೇಗಿರುತ್ತದೆ, ಎಲ್ಲಿ ಬೆಳೆಯುತ್ತದೆ ಮೊದಲಾದ ಮಾಹಿತಿ ಒದಗಿಸಲು ಮಾಸ್ತರು ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ ತಂದಿದ್ದರು. ಆ ಹೂವು ಹೇಗಿರುತ್ತದೆ ಎಂದು ಅದರಲ್ಲಿ ಚಿತ್ರ ತೋರಿಸಿ ಹೇಳಿದ್ದರು. ಶಿಕ್ಷಕರ ಕರ್ತವ್ಯ ನಿಷ್ಠೆ, ಕಳಕಳಿ, ವಿಶೇಷ ಆಸಕ್ತಿಯನ್ನು ಎಷ್ಟು ಹೊಗಳಿದರೂ ಸಾಲದು.

ತೋಟದ ಬಾವಿಗಳಲ್ಲಿ ಈಜಲು ಹೋಗುವುದು ನಮ್ಮ ಹವ್ಯಾಸವಾಗಿತ್ತು. ಸುಮಾರು ಇಪ್ಪತ್ನಾಲ್ಕು ಇಂಚಿನ ಅಳತೆಯ ಕಟ್ಟಿಗೆಗಳನ್ನು ಬಂಡಲ್ ಮಾಡಿ ಬೆನ್ನಿಗೆ ಕಟ್ಟಿಕೊಂಡು, ಮುಳುಗದೇ ಇರುವಂತೆ ಎಚ್ಚರ ವಹಿಸಿ ಈಜುತ್ತಿದ್ದೆವು. ನಾವು ಬೆನ್ನಿಗೆ ಕಟ್ಟಿಕೊಳ್ಳುತ್ತಿದ್ದ ಕಟ್ಟಿಗೆಗಳನ್ನು `ಆರೇಳು ಕಟ್ಟಿಗೆ' ಎಂದು ಕರೆಯುತ್ತಿದ್ದರು. ನಮ್ಮೂರಲ್ಲಿ ಕೌಟಾಳ್ ಎಂಬ ವೈದ್ಯರಿದ್ದರು. ಅವರ ಮಗ ಪ್ರಹ್ಲಾದ್. ನನಗೆ ಚೆನ್ನಾಗಿ ಈಜು ಬರುತ್ತದೆ ಎಂಬ ಆತ್ಮವಿಶ್ವಾಸವಿತ್ತು. ಅವನಿಗೆ ಕಲಿಸಲು ಹೋದೆ. ಬಾವಿಗಿಳಿದದ್ದೇ ಹೆದರಿ ಪ್ರಹ್ಲಾದ್ ನನ್ನ ಬೆನ್ನನ್ನು ಏರಿಬಿಟ್ಟ. ಅವನ ಭಾರ ಹೊರಲಾಗದೆ ನಾನು ಮುಳುಗಿದೆ. ಕಟ್ಟಿಗೆ ಕಟ್ಟಿದ್ದರಿಂದ ಅವನು ಬಚಾವಾದ. ಆಮೇಲೆ ಅಲ್ಲಿದ್ದ ಊರಿನ ಒಬ್ಬರು ನನ್ನನ್ನು ಮೇಲೆತ್ತಿ ಬದುಕಿಸಿದರು.

ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದ್ದೇ ಅಲ್ಲದೆ ತಾಲ್ಲೂಕಿಗೆ ಮೊದಲಿಗನಾದೆ. ಕನ್ನಡ ಹಾಗೂ ಸಮಾಜ ವಿಜ್ಞಾನ ವಿಷಯಗಳಲ್ಲಿ ರಾಜ್ಯಕ್ಕೇ ಮೊದಲಿದ್ದೆ. ಹಾಗಾಗಿ ಮನೆಯಲ್ಲಿ ಪಟ್ಟು ಸಡಿಲಿಸಿ ಪಿಯುಸಿ ಓದಿಸಲು ಒಪ್ಪಿದರು. ನಿಪ್ಪಾಣಿಯ ಜಿ.ಎ. ಬಾಗೇವಾಡಿ ಕಾಲೇಜಿಗೆ ಪಿಯುಸಿ ಕಲಿಯಲು ಸೇರಿದೆ. ನಿಪ್ಪಾಣಿ ಗಡಿ ಪ್ರದೇಶದಲ್ಲಿದ್ದ ಪಟ್ಟಣ. ಅಲ್ಲಿನ ಕಾಲೇಜಿನಲ್ಲಿ ಪ್ರೊ. ಕರಬಂಟ್‌ನಾಳ್ ಎಂಬ ಪ್ರಾಂಶುಪಾಲರಿದ್ದರು. ಎಲ್ಲಾ ವಿದ್ಯಾರ್ಥಿಗಳಿಗೂ ಅವರು ಅಗತ್ಯ ಅನುಕೂಲ ಕಲ್ಪಿಸಿಕೊಡುತ್ತಿದ್ದರು. ಒಂದೂವರೆ ತಿಂಗಳು ಅಲ್ಲಿನ ಸಮಾಧಿ ಮಠದಲ್ಲಿ ಬೋರ್ಡಿಂಗ್‌ನಲ್ಲಿದ್ದೆ. ಅದು ಕಾಲೇಜಿನಿಂದ ದೂರವಿತ್ತು. ಓಡಾಡಲು ತೊಂದರೆ ಆಗುತ್ತಿತ್ತು. ಜೊತೆಗೆ ನನ್ನ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಆಮೇಲೆ ಪ್ರತ್ಯೇಕ ರೂಮ್ ಮಾಡುವ ನಿರ್ಧಾರಕ್ಕೆ ಬಂದೆ. ಮಾಲಿಂಗಪುರದ ವಿದ್ಯಾರ್ಥಿ ಆಗ ಬಿ.ಎ. ಅಂತಿಮ ಪದವಿ ಓದುತ್ತಿದ್ದ. ಅವನ ಜೊತೆ ನಾನು ರೂಮ್ ಹಂಚಿಕೊಂಡೆ.

ನಮ್ಮೂರಿನಿಂದ ನಿಪ್ಪಾಣಿ ಎಪ್ಪತ್ತು ಕಿ.ಮೀ. ದೂರವಿತ್ತು. ನಿತ್ಯವೂ ವಿಜಾಪುರ-ಕೊಲ್ಹಾಪುರ ಬಸ್‌ನಲ್ಲಿ ನನಗೆ ಬುತ್ತಿ ಬರುತ್ತಿತ್ತು. ಹಾಗೆ ಆ ಬಸ್ ದಿನಕ್ಕೆ ಐವತ್ತು ಅರುವತ್ತು ಬುತ್ತಿಗಳನ್ನು ಸಾಗಿಸಿಕೊಂಡು ಬರುತ್ತಿತ್ತು. ಅದನ್ನು ಸಾಗಿಸಲು ವಿಶೇಷ ಪಾಸ್ ವ್ಯವಸ್ಥೆ ಇರುತ್ತಿತ್ತು. ತಿಂಗಳಿಗೆ ಇಷ್ಟು ಎಂದು ಹಣ ಕೊಟ್ಟರೆ ಚಾಚೂ ತಪ್ಪದೆ ಅದು ನಮ್ಮನ್ನು ಸೇರುತ್ತಿತ್ತು. ಮರಳಿ ಅದೇ ಬಸ್‌ನಲ್ಲಿ ಖಾಲಿ ಡಬ್ಬ ಕಳುಹಿಸುವಾಗ, ಮನೆಗೆ ಏನಾದರೂ ವಿಷಯ ಮುಟ್ಟಿಸಬೇಕೆಂದಿದ್ದರೆ ಡಬ್ಬಿಯಲ್ಲಿ ಚೀಟಿ ಬರೆದು ಹಾಕುತ್ತಿದ್ದೆವು. ಆ `ಬುತ್ತಿ ಸಾರಿಗೆ ಪದ್ಧತಿ' ನಮ್ಮ ಹೊಟ್ಟೆ ತುಂಬಿಸಲು ಇದ್ದ ವ್ಯವಸ್ಥೆಯಷ್ಟೆ ಆಗಿರಲಿಲ್ಲ, ಅಂಚೆ ಸೌಕರ್ಯವೂ ಆಗಿತ್ತು.

ಪಿಯುಸಿಯಲ್ಲಿ ನಾನು ವಿಜ್ಞಾನ ಆಯ್ದುಕೊಂಡೆನಾದರೂ ಆ ವಿಷಯಗಳಲ್ಲಿ ಅಷ್ಟೇನೂ ಆಸಕ್ತಿ ಇರಲಿಲ್ಲ. ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳ ಕಡೆಗೆ ಮನಸ್ಸು ವಾಲಿತು. ನಿಪ್ಪಾಣಿ ಪಟ್ಟಣದ ಮಧ್ಯಭಾಗದಲ್ಲಿ ಒಂದು ಒಳ್ಳೆಯ ಗ್ರಂಥಾಲಯವಿತ್ತು. ಕಾಲೇಜು ತರಗತಿಗಳಿಗಿಂತ ನಾನು ಅಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿದ್ದೆ. ಕನ್ನಡ, ಮರಾಠಿ, ಹಿಂದಿ ಎಲ್ಲಾ ಪತ್ರಿಕೆಗಳನ್ನು ಓದುತ್ತಿದ್ದೆ. ಕೈಗೆ ಸಿಕ್ಕಿದ ನಿಯತಕಾಲಿಕೆಗಳ ಮೇಲೆ ಕಣ್ಣಾಡಿಸುತ್ತಿದ್ದೆ. ವಿಜ್ಞಾನ ವಿಷಯಗಳಲ್ಲಿ ಆಸಕ್ತಿ ಇಲ್ಲದೇ ಹೋದದ್ದರಿಂದ ನಾನು ಪಿಯುಸಿಯಲ್ಲಿ ಸೆಕೆಂಡ್ ಕ್ಲಾಸ್ ಬಂದೆನಷ್ಟೆ.

ಪಿಯುಸಿ ಆದಮೇಲೆ ಊರಿಗೆ ಹೋದೆ. ಮತ್ತೆ ಓದುವ ಪರಿಸ್ಥಿತಿ ಇರಲಿಲ್ಲ. ತಂದೆಯವರ ಆರೋಗ್ಯದಲ್ಲಿ ಏರುಪೇರಾಯಿತು. ಅವರಿಗೆ ಚಿಕಿತ್ಸೆ ಕೊಡಿಸಲು ಬೆಳಗಾವಿಗೆ ಕರೆದುಕೊಂಡು ಹೋದೆವು. ಅವರಿಗೆ ಪಾರ್ಶ್ವವಾಯು ಸಂಬಂಧಿ ಸಮಸ್ಯೆ ಇದ್ದಿದ್ದರಿಂದ ಊರಿಗೆ ಮರಳಿದ ನಂತರವೂ ಎರಡು ಮೂರು ತಿಂಗಳು ಅವರ ಕಡೆ ನಿಗಾ ಮಾಡಬೇಕಾಯಿತು. ನಮ್ಮ ತಂದೆ ಹಾಗೂ ಅವರ ಸಹೋದರರ ನಡುವೆ ಆಸ್ತಿ ಪಾಲಾದ್ದರಿಂದ ಮನೆಯ ಆರ್ಥಿಕ ಪರಿಸ್ಥಿತಿ ಉತ್ತಮವಾಗಿ ಉಳಿದಿರಲಿಲ್ಲ. ಹಾಗಾಗಿ ಕೆಲಸ ಮಾಡುವುದು ಅನಿವಾರ್ಯವಾಯಿತು.

ನಾನು ಮುಂಬೈಗೆ ಹೋದೆ. ವಾರಪತ್ರಿಕೆಯೊಂದರಲ್ಲಿ `ಡಿಸ್‌ಪ್ಯಾಚ್ ಅಸಿಸ್ಟೆಂಟ್' ಕೆಲಸ ಸಿಕ್ಕಿತು. ಮಂಗಳವಾರ ಮಾತ್ರ ನನ್ನ ಕೆಲಸ. 20 ರೂಪಾಯಿ ದಿನದ ಸಂಬಳ. ತಿಂಗಳಿಗೆ ನಾಲ್ಕು ಮಂಗಳವಾರ ಬಂದರೆ 80, ಐದು ಬಂದರೆ 100 ರೂಪಾಯಿ ಸಿಗುತ್ತಿತ್ತು. ಕಟ್ಟಿದ ವಾರಪತ್ರಿಕೆಯ ಬಂಡಲ್‌ಗಳನ್ನು ಮೂರು ರಾಜ್ಯಗಳಿಗೆ `ಡಿಸ್‌ಪ್ಯಾಚ್' ಮಾಡುವುದು ನನ್ನ ಕೆಲಸ. ಒಂದು ಟಾಂಗಾ ಬರುತ್ತಿತ್ತು. ಅದಕ್ಕೆ ಬಂಡಲ್‌ಗಳನ್ನು ಹಾಕುತ್ತಿದ್ದರು. ಅದರಲ್ಲಿ ಹೋಗಿ, ರೈಲ್ವೆ ಇಲಾಖೆಯವರಲ್ಲಿ ಒಂದು ಸ್ವೀಕೃತಿ ಚೀಟಿ ಪಡೆದು ಬರುವುದು ಕೆಲಸ.

ವಾರಕ್ಕೊಮ್ಮೆ ಕೆಲಸ ಇರುತ್ತಿದ್ದರೂ ನಾನು ಆ ವಾರಪತ್ರಿಕೆ ಕಚೇರಿಗೆ ದಿನವೂ ಹೋಗುತ್ತಿದ್ದೆ. ಅಲ್ಲೂ ಗ್ರಂಥಾಲಯವಿತ್ತು. ಕಮ್ಯುನಿಸ್ಟ್ ಸಿದ್ಧಾಂತದ ಕೃತಿಗಳು ಅಲ್ಲಿದ್ದವು. ಕಾರ್ಲ್ ಮಾರ್ಕ್ಸ್, ಕಾರ್ಮಿಕ ಕಾನೂನು ಮೊದಲಾದ ವಿಷಯಗಳು ನನಗೆ ಅರ್ಥವಾದದ್ದೇ ಅಲ್ಲಿ. ಆ ಪುಸ್ತಕಗಳನ್ನು ರಾತ್ರಿ ಓದುತ್ತಾ ಕೂರುತ್ತಿದ್ದೆ. ಕೊಲ್ಹಾಪುರದ ಗಾಡ್ಗೆ ಎಂಬುವನು ಅಲ್ಲಿ ವಾಚ್‌ಮನ್ ಕೆಲಸ ಮಾಡುತ್ತಿದ್ದ. ಅವನಿಗೆ ಓದಲು ಬರೆಯಲು ಬರುತ್ತಿರಲಿಲ್ಲ. ನಾನು ಓದುತ್ತಿದ್ದುದನ್ನು ಅವನು ಆಸಕ್ತಿಯಿಂದ ನೋಡುತ್ತಿದ್ದ.

ಎರಡು ಮೂರು ತಿಂಗಳು ಕಳೆದಿತ್ತು. ಗಾಡ್ಗೆ ಪೇಡೆ ಸಿಹಿ ತಂದುಕೊಟ್ಟ. ತನ್ನ ತಮ್ಮನಿಗೆ ಒಳ್ಳೆಯ ಕೆಲಸ ಸಿಕ್ಕಿದೆಯೆಂದೂ, ತಿಂಗಳಿಗೆ 233 ರೂಪಾಯಿ ಸಂಬಳವೆಂದೂ ಹೇಳಿದ. ದಲಿತ ಜನಾಂಗಕ್ಕೆ ಸೇರಿದ ಅವನ ತಮ್ಮ ಎಸ್ಸೆಸ್ಸೆಲ್ಸಿಯಲ್ಲಿ ಶೇ 61 ಅಂಕ ಗಳಿಸಿದ್ದ. ನಾನು ಶೇ 87 ಅಂಕ ಗಳಿಸಿರುವುದನ್ನು ಗಾಡ್ಗೆಗೆ ತಿಳಿಸಿ, ಮತ್ತೆ ಕೆಲಸಕ್ಕೆ ಕರೆ ಬಂದರೆ ತಿಳಿಸುವಂತೆ ಕೇಳಿಕೊಂಡೆ. ಒಂದು ತಿಂಗಳ ನಂತರ ಕೆಲಸಕ್ಕೆ ಕರೆ ಬಂದಿದೆ ಎಂದು ತನ್ನ ತಮ್ಮ ತಿಳಿಸಿದ್ದಾಗಿ ಅವನು ನನ್ನ ಕಿವಿಗೆ ಹಾಕಿದ. ನಾನೂ ಅರ್ಜಿ ತುಂಬಿದೆ. ಟೆಲಿಕಾಂ ಇಲಾಖೆಯಲ್ಲಿ ಇದ್ದ ಅವಕಾಶ ಅದು. ಟೆಲಿಫೋನ್ ಆಪರೇಟರ್ ಆಗಿ ನನಗೆ ಕೆಲಸ ಸಿಕ್ಕಿತು. ಬೆಂಗಳೂರಿನ ಕಿನೊ ಚಿತ್ರಮಂದಿರದ ಪಕ್ಕ ಇದ್ದ ಕಚೇರಿಯಲ್ಲಿ ಆಗ ಮೂರು ತಿಂಗಳು ತರಬೇತಿ. ತಿಂಗಳಿಗೆ 80 ರೂಪಾಯಿ ಸ್ಟೈಫಂಡ್ ಕೊಟ್ಟರು. ತಾಯಿ ಖರ್ಚಿಗೆಂದು 300 ರೂಪಾಯಿ ಕೊಟ್ಟಿದ್ದರು. ಅದು ನನಗೆ ಆಗ ದೊಡ್ಡ ಮೊತ್ತ. ನಮ್ಮ ಜಿಲ್ಲೆಯಲ್ಲಿ ಇಂಡಿಯಲ್ಲಿ ಮಾತ್ರ ಒಂದು ಪೋಸ್ಟ್ ಖಾಲಿ ಇತ್ತು. ನಾನು ಅದನ್ನೇ ಆರಿಸಿಕೊಂಡೆ. ಉಳಿದವರು ಹುಮ್ನಾಬಾದ್, ಗಂಗಾವತಿ ಮೊದಲಾದ ಕಡೆಗೆ ಹೋದರು. ಆ ತರಬೇತಿಯಲ್ಲೂ ನಾನು ಮೊದಲಿಗನಾಗಿದ್ದೆ.

1971ರ ಅಕ್ಟೋಬರ್ 19ರ ಮುಂಜಾನೆ ಬಾಗಲಕೋಟೆ ತಲುಪಿದೆ. ಅಲ್ಲಿಂದ ಸಂಜೆ ರೈಲಿನಲ್ಲಿ ಹೊರಟು ಇಂಡಿ ತಲುಪುವವನಿದ್ದೆ. ಅವತ್ತು ದೀಪಾವಳಿ ಅಮಾವಾಸ್ಯೆ. ರೈಲಿನಲ್ಲಿ ಇದ್ದ ಗೆಳೆಯನಿಗೆ ಇನ್ನೊಂದು ಊರಿಗೆ ಪೋಸ್ಟ್ ಆಗಿತ್ತು. ಅವನು ಹೋಳಿಗೆ ಕಟ್ಟಿಸಿಕೊಂಡು ಬಂದಿದ್ದ. ಇಬ್ಬರೂ ತಿಂದು, ಖುಷಿಯಿಂದ ಪ್ರಯಾಣ ಮಾಡಿದೆವು. ಇಂಡಿ ತಲುಪಿದಾಗ ನೀರಡಿಕೆ ಆಗಿತ್ತು. ಟ್ರಂಕ್ ಸಮೇತ ಇಳಿದು, ನಿಲ್ದಾಣದ ಕೊನೆಯಲ್ಲಿದ್ದ ನಲ್ಲಿಯಲ್ಲಿ ನೀರು ಕುಡಿಯಲು ಹೋದೆ. ಮರಳುವಷ್ಟರಲ್ಲಿ ಇದ್ದ ಟಾಂಗಾಗಳೆಲ್ಲಾ ಹೊರಟು ಹೋಗಿದ್ದವು. ಅಲ್ಲಿಂದ ಇಂಡಿಗೆ ನಾಲ್ಕು ಮೈಲು ದೂರ. ಮತ್ತೊಂದು ರೈಲು ಬರುವವರೆಗೆ ಟಾಂಗಾಗೆ ಕಾಯಬೇಕಷ್ಟೆ ಎಂದು ಸ್ಟೇಷನ್ ಮಾಸ್ಟರ್ ಹೇಳಿದರು. ಆದರೆ ನಾನು ಕಾಯಲಿಲ್ಲ.

ಇಂಡಿ ಯಾವ ದಿಕ್ಕಿನಲ್ಲಿದೆ ಎಂದು ಕೇಳಿಕೊಂಡು, ಹೊರಟೇಬಿಟ್ಟೆ. ಊರನ್ನು ಪ್ರವೇಶಿಸುವಾಗ ಜಹಾಂಗೀರ್ ಎಂಬ ಪೊಲೀಸ್, ಟ್ರಂಕ್ ಹೊತ್ತುಕೊಂಡು ಹೋಗುತ್ತಿದ್ದ ನನ್ನನ್ನು ತಡೆದ. ಯಾರು, ಏನು, ಟ್ರಂಕ್‌ನಲ್ಲಿ ಏನಿದೆ ಎಂದೆಲ್ಲಾ ವಿಚಾರಿಸಿದ. ಆಗ ಬಾಂಗ್ಲಾ-ಭಾರತದ ನಡುವೆ ಸಮಸ್ಯೆ ಇತ್ತು. ಯುದ್ಧ ಶುರುವಾದೀತೆಂಬ ಆತಂಕ. ಹಾಗಾಗಿ ಟೆಲಿಫೋನ್ ಎಕ್ಸ್‌ಚೇಂಜ್ ಇರುವ ಕಡೆಯೆಲ್ಲಾ ಪೊಲೀಸರನ್ನು ನಿಯೋಜಿಸಿದ್ದರು. ನನಗೆ ಟೆಲಿಫೋನ್ ಎಕ್ಸ್‌ಚೇಂಜ್‌ನಲ್ಲೇ ಕೆಲಸ ಸಿಕ್ಕಿದೆ ಎಂಬುದನ್ನು ಜಹಾಂಗೀರ್‌ಗೆ ಮನದಟ್ಟು ಮಾಡಿಸಿದ ಮೇಲೆ ಅವನೇ ಅಲ್ಲಿಗೆ ನನ್ನನ್ನು ಕರೆದುಕೊಂಡು ಹೋದ. 

ಮುಂದಿನ ವಾರ: ಇಂಡಿಯಿಂದ ಭಾಗ್ಯೋದಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT