ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ಟಿನ ಸ್ವಾರಸ್ಯಕರ ಪ್ರಸಂಗಗಳು ಭಾಗ-98

Last Updated 23 ಏಪ್ರಿಲ್ 2011, 19:00 IST
ಅಕ್ಷರ ಗಾತ್ರ

ನಾನು ಇಲಾಖೆಗೆ ಸೇರಿದ ಹೊಸತರಲ್ಲಿ ಇನ್ಸ್‌ಪೆಕ್ಟರ್‌ಗಳಾದ ಮಣ್ಣಪ್ಪ, ಶಿವಸ್ವಾಮಿ ಹಾಗೂ ಕೆ.ಎನ್‌.ವೀರಪ್ಪ ಎಂಬುವರ ಮಾರ್ಗದರ್ಶನದಲ್ಲಿ ಪಳಗಿದೆ. ಕೋರ್ಟಿನ ವಿಚಾರದಲ್ಲಿ ಬಹಳ ಮುತುವರ್ಜಿಯಿಂದ ನಡೆದು ಕೊಳ್ಳಬೇಕು ಎಂಬುದನ್ನು ಮೊದಲು ಹೇಳಿ ಕೊಟ್ಟಿದ್ದೇ ಅವರು. ಹಾಗಾಗಿ ಕೋರ್ಟಿನ ಬಗ್ಗೆ ನನಗೆ ಮೊದಲಿನಿಂದಲೂ ಕಾಳಜಿ, ಕುತೂಹಲ, ಗೌರವ. ನನ್ನ ಸರ್ವಿಸ್‌ನ ಕಾಲಘಟ್ಟದಲ್ಲಿ ಮೂರೂವರೆ ವರ್ಷ ಹೈಕೋರ್ಟ್‌ ಜಾಗೃತ ದಳದಲ್ಲಿ ಇನ್ಸ್‌ಪೆಕ್ಟರ್‌ ಆಗಿ ಕೆಲಸ ಮಾಡುವ ಭಾಗ್ಯವೂ ನನ್ನದಾಗಿತ್ತು.

1998ರಿಂದ 2001 ರವರೆಗೆ ನಾನು ಅಲ್ಲಿ ಕೆಲಸ ಮಾಡಿದ್ದೆ. ಜಡ್ಜ್‌ಗಳು ಪೊಲೀಸರನ್ನು ನಡೆಸಿಕೊಳ್ಳುವ ರೀತಿ, ಅವರ ತಾಳ್ಮೆ, ಸೌಮ್ಯ ಮನೋಭಾವ ಎಲ್ಲವನ್ನೂ ಕಂಡು ನನಗೆ ಕೋರ್ಟ್‌ ಬಗ್ಗೆ ಇದ್ದ ಗೌರವ ಇಮ್ಮಡಿಯಾಗಿತ್ತು. ಆಗ ಅನೇಕ ಹಾಸ್ಯ ಪ್ರಸಂಗಗಳನ್ನು ನಾನು ಕೋರ್ಟ್‌ನಲ್ಲಿ ಕಂಡೆ. ನನ್ನ ಸೇವಾವಧಿಯಲ್ಲಿ ಅನೇಕ ಸಲ ಪಾಟೀ ಸವಾಲಿಗೆ ಒಳಪಟ್ಟಿರುವುದರಿಂದ ಅನೇಕ ಕ್ಲಿಷ್ಟ ಕೇಸುಗಳ ಭಾಗವೂ ಆಗಿದ್ದೇನೆ.
ನಾನು ಸಬ್‌ ಇನ್ಸ್‌ಪೆಕ್ಟರ್‌ ಆಗಿದ್ದಾಗ ನನ್ನ ಸ್ನೇಹಿತರ ಚಿಕ್ಕಪ್ಪ ಪ್ರಸಾದ್‌ ಎಂಬುವರು ಅಮೆರಿಕದಿಂದ ಕೆಲಸ ತೊರೆದು ಇಲ್ಲಿಗೆ ಬಂದರು. ಇಲ್ಲಿಯೇ ಏನಾದರೂ ಕೆಲಸ ಪ್ರಾರಂಭಿಸುವುದು ಅವರ ಉದ್ದೇಶವಾಗಿತ್ತು. ಆ ಓಡಾಟದಲ್ಲಿದ್ದಾಗ ಅಕಸ್ಮಾತ್ತಾಗಿ ಅವರ ಕಾರು ಒಂದು ಅಪಘಾತಕ್ಕೆ ಕಾರಣವಾಯಿತು. ಅದೊಂದು ಸಣ್ಣ ಪ್ರಕರಣ.

ಆದರೂ ಪ್ರಕರಣವು ಕೋರ್ಟಿನ ಕಟೆಕಟೆ ಹತ್ತಿತು. ಅದೇ ವೇಳೆಯಲ್ಲಿ ಕೊತ್ವಾಲ ರಾಮಚಂದ್ರನನ್ನು ನಾವು ಬಂಧಿಸಿ ಆಗಿತ್ತು. ಅವನು ಆರೋಪಿಯಾಗಿದ್ದ ಪ್ರಕರಣಗಳ ವಿಚಾರಣೆಯೂ ನಡೆಯುತ್ತಿತ್ತು. ಕೇಸುಗಳ ವಿಚಾರಣೆ ಪದೇಪದೇ ಮುಂದಕ್ಕೆ ಹೋಗುತ್ತಿದ್ದುದು ಮಾಮೂಲು. ಕಾಕತಾಳೀಯ ವೆಂಬಂತೆ ಯಾವಾಗ ಪ್ರಸಾದ್‌ ಅವರು ಕೋರ್ಟಿಗೆ ಹಾಜರಾಗುತ್ತಿದ್ದರೋ, ಅದೇ ದಿನಗಳಲ್ಲಿ ಕೊತ್ವಾಲನೂ ತನ್ನ ಪ್ರಕರಣದ ನಿಮಿತ್ತ ಅಲ್ಲಿಗೆ ಬರುತ್ತಿದ್ದನಂತೆ. ಆಗ ಪ್ರಸಾದ್‌ ನನಗೆ ಅಲ್ಲಿನ ಪ್ರಸಂಗಗಳನ್ನು ಹೇಳುತ್ತಿದ್ದರು.

`ಅಲ್ಲಾ ಸರ್‌, ನಾನು ಒಂದು ಸಣ್ಣ ಅಪಘಾತ ಪ್ರಕರಣದಲ್ಲಿ ಸಿಕ್ಕಿರುವುದು.ಕೋರ್ಟ್‌ನಲ್ಲಿ ದಲಾಯತ್‌ ನನ್ನನ್ನು ಪ್ರಸಾದ್‌... ಪ್ರಸಾದ್‌... ಪ್ರಸಾದ್‌ ಎಂದು ದೊಡ್ಡ ದನಿಯಲ್ಲಿ ಕರೆಯುತ್ತಿದ್ದ. ವಿಚಾರಣೆಯನ್ನು ಮುಂದಕ್ಕೆ ಹಾಕಿದ್ದೆ ತಡ, ಹೂಂ... ಹೊರಡ್ರೀ ಸ್ವಾಮಿ ಎಂದು ದೂಡುವಂತೆ ಮಾತಾಡುತ್ತಿದ್ದ. ಫೊರೆನ್ಸಿಕ್‌ ಲ್ಯಾಬ್‌ನ ಚಂದ್ರೇಗೌಡ ಎಂಬ ವೈದ್ಯರಿಗೂ ಅವನು ಮರ್ಯಾದೆ ಕೊಡುತ್ತಿರಲಿಲ್ಲ. ಅಷ್ಟೇ ಅಲ್ಲ, ಪೊಲೀಸ್‌ ಅಧಿಕಾರಿಗಳ ವಿಷಯದಲ್ಲೂ ದಲಾಯತ್‌ ವರ್ತನೆ ಭಿನ್ನವಾಗಿಯೇನೂ ಇರಲಿಲ್ಲ. ಅದೇ ಕೊತ್ವಾಲ ಬಂದರೆ ತನ್ನ ಎಲ್ಲಾ ದನಿಯನ್ನೇ ಉಡುಗಿಸಿಕೊಂಡು, ಕೊತ್ವಾಲ್‌ ರಾಮಚಂದ್ರಪ್ಪ ನವರು... ಎಂದು ಸಂಬೋಧಿಸುತ್ತಿದ್ದ. ಏನು ಕಾಲ ಬಂತು, ನೋಡಿ~ ಎಂದು ಅವರು ಹೇಳಿಕೊಂಡಿದ್ದರು.

ಆಲೈಮಣಿ ಎಂಬ ಕುಖ್ಯಾತ ರೌಡಿಯೊಬ್ಬನಿದ್ದ. ಲಂಪಟನೂ ಆಗಿದ್ದ. ಕೊಳೆಗೇರಿಯಲ್ಲಿ ಬೆಳಕು ಹರಿಯುವ ಮೊದಲೇ ಹೆಣ್ಣುಮಕ್ಕಳು ಬಹಿರ್ದೆಸೆಗೆ ಹೋಗುತ್ತಾರೆ.

ಸುಸಜ್ಜಿತವಾದ ಶೌಚಾಲಯ ವ್ಯವಸ್ಥೆ ಇಲ್ಲದಿರುವುದರಿಂದ ದೂರಕ್ಕೆ ಚೊಂಬು ಹಿಡಿದುಕೊಂಡು ಬೆಳಕಿನಲ್ಲಿ ಓಡಾಡುವುದು ಅವರಿಗೆ ಮುಜುಗರದ ಸಂಗತಿಯಾದದ್ದರಿಂದ ಬೆಳಗಿನ ಜಾವವೇ ಹೋಗುವುದು ಅನಿವಾರ್ಯವಾಗಿತ್ತು. ಹಾಗೆ ಶೌಚ ಮಾಡಲೆಂದು ಮರೆಗೆ ಹೋಗುತ್ತಿದ್ದ ಹೆಣ್ಣುಮಕ್ಕಳನ್ನು ಆಲೈಮಣಿ ಅತ್ಯಾಚಾರ ಮಾಡುತ್ತಿದ್ದ. ಒಮ್ಮೆ ಅವನು ದಸ್ತಗಿರಿಯಾಗಿ ತನಿಖೆಗೆ ಹೋಗುತ್ತಿದ್ದಾಗ, ಪೊಲೀಸರ ರಿವಾಲ್ವರನ್ನೇ ಕಿತ್ತುಕೊಂಡು ಗುಂಡು ಹಾರಿಸಲು ಯತ್ನಿಸಿದ್ದ. ಹಾಗಾಗಿ ಕೃಷ್ಣಪ್ಪ ಎಂಬ ಪೊಲೀಸ್‌ ಅಧಿಕಾರಿ ಎನ್‌ಕೌಂಟರ್‌ನಲ್ಲಿ ಅವನನ್ನು ಮುಗಿಸಿದ್ದರು. ಅಷ್ಟು ನಟೋರಿಯಸ್‌ ಆಗಿದ್ದ ಆಲೈಮಣಿ ಕೋರ್ಟ್‌ನಲ್ಲಿ ತನ್ನ ಪ್ರಕರಣಗಳ ವಿಚಾರಣೆ ನಡೆಯುವಾಗ ವಾದ ಮಾಡಲು ವಕೀಲರನ್ನು ಇಟ್ಟುಕೊಳ್ಳುತ್ತಿರಲಿಲ್ಲ.

ತಾನೇ ತನ್ನ ಪರವಾಗಿ ವಾದ ಮಂಡಿಸುತ್ತಿದ್ದ. ಒಂದು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಸಾಕ್ಷಿಯಾಗಿದ್ದೆ. ಅವನು ಆರೋಪಿ. ಕೋರ್ಟ್‌ಗೆ ನಾನು ಸಾಕ್ಷಿ ನೀಡಲು ಹೋದೆ. ಬಾಕ್ಸ್‌ನಲ್ಲಿ ನಿಂತಿದ್ದ ನನ್ನನ್ನು ಆಲೈಮಣಿಯೇ ಪ್ರಶ್ನಿಸಿದ. ಅವನು ಕೇಳಿದ್ದು ಐದಾರು ಪ್ರಶ್ನೆಗಳೇ ಆದರೂ, ವಾದ ಮಾಡುವುದರಲ್ಲಿ ಅವನು ಸಾಕಷ್ಟು ಪಳಗಿದ್ದಾನೆಂಬುದು ಸ್ಪಷ್ಟವಾಯಿತು. ಅವನು ಎಷ್ಟೋ ಪೊಲೀಸರನ್ನು ಹಾಗೆ ಪಾಟೀ ಸವಾಲಿನಲ್ಲಿ ಸಿಕ್ಕುಹಾಕಿಸಿದ್ದಾನೆಂದು ಆಮೇಲೆ ನನಗೆ ಗೊತ್ತಾಯಿತು. ತನಿಖೆಯಲ್ಲಿ ಸಣ್ಣ ಲೋಪವಿದ್ದರೂ ಅವನು ಪೊಲೀಸರನ್ನು ಸಲೀಸಾಗಿ ಸಿಕ್ಕಿಸುತ್ತಿದ್ದ. `ಹೊಸ ವೈದ್ಯರಿಗಿಂತ ಹಳೆ ರೋಗಿ ಮೇಲು~ ಎಂಬ ನಾಣ್ಣುಡಿ ಆಲೈಮಣಿ ತರಹದವರನ್ನು ನೋಡಿಯೇ ಹುಟ್ಟಿಕೊಂಡಿರಬೇಕು. ವಕೀಲರ ಪರಿಭಾಷೆಯಲ್ಲಿ `ಲೋಡೆಡ್‌ ಪ್ರಶ್ನೆಗಳು~ ಇರುತ್ತವೆ. ಉದಾಹರಣೆಗೆ, ವಿವಾಹ ವಿಚ್ಛೇದನದ ಪ್ರಕರಣದ ವಿಚಾರಣೆ ನಡೆಯುವಾಗ, `ನಿನ್ನ ಹೆಂಡತಿಯನ್ನು ಇತ್ತೀಚೆಗೆ ನೀವು ಹೊಡೆಯುತ್ತಿದ್ದೀರಾ?~ ಎಂದು ವಕೀಲರು ಒಬ್ಬನನ್ನು ಕೇಳುತ್ತಾರೆ ಎಂದಿಟ್ಟುಕೊಳ್ಳೋಣ. ಒಂದೋ ಆ ವ್ಯಕ್ತಿ `ಹೌದು~ ಎನ್ನಬೇಕು ಅಥವಾ `ಇಲ್ಲ~ ಎನ್ನಬೇಕು. ಉತ್ತರ ಯಾವುದೇ ಆದರೂ ಅವನು ಸಿಕ್ಕಿಬೀಳುತ್ತಾನೆ.

ಇಲ್ಲ ಎಂದು ಹೇಳಿದರೆ, `ಇತ್ತೀಚೆಗೆ ಹೊಡೆಯುತ್ತಿಲ್ಲ ಅಂದಮೇಲೆ, ಹಿಂದೆ ಹೊಡೆಯುತ್ತಿದ್ದಿರಿ ಎಂದಾಯಿತು~ ಎಂದು ವಕೀಲರು ತೀರ್ಮಾನಕ್ಕೆ ಬರುತ್ತಾರೆ. ಇಂಥ ಪ್ರಶ್ನೆಯನ್ನೇ `ಲೋಡೆಡ್‌ ಪ್ರಶ್ನೆ~ ಎನ್ನುವುದು. ಆಲೈಮಣಿ ಪೊಲೀಸರಿಗೆ ಹಾಕುತ್ತಿದ್ದದ್ದೂ ಇಂಥ ಪ್ರಶ್ನೆಗಳನ್ನೇ! ಜೈಲಿನಲ್ಲಿ ಕೆಲವು ಬುದ್ಧಿವಂತ ಕಳ್ಳರಿರುತ್ತಾರೆ. ಅಂಥವರ ನೆರವು ಪಡೆದು ಹೋಂವರ್ಕ್‌ ಮಾಡಿಕೊಂಡು ಆಲೈಮಣಿ ತರಹದವರು ಕೋರ್ಟಿಗೆ ಬರುತ್ತಾರೆ.
ನಾನು ಕೆ.ಜಿ.ಹಳ್ಳಿ ಪೊಲೀಸ್‌ ಠಾಣೆಯಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಆಗಿದ್ದಾಗ ಕೋಮುಗಲಭೆ ಭೀಕರ ಸ್ವರೂಪಕ್ಕೆ ತಿರುಗಿತ್ತು. ಆ ಗಲಭೆಯಲ್ಲಿ ಮೂವರು ಮೃತಪಟ್ಟಿದ್ದರು. ಗಲಭೆ ಉಳಿದ ಪ್ರದೇಶಕ್ಕೂ ಹರಡಿ ಕಲಾಸಿಪಾಳ್ಯದಲ್ಲೂ ಇಬ್ಬರು ಸತ್ತಿದ್ದರು.

ರಾಮಕೃಷ್ಣ ಹೆಗಡೆಯವರ ಸರ್ಕಾರ ಇದ್ದ ಕಾಲವದು. ಆಗ ಪೊಲೀಸ್‌ ಫೈರಿಂಗ್‌ ಅವಶ್ಯಕತೆ ಇತ್ತೆ ಎಂಬ ಪ್ರಶ್ನೆ ಎದ್ದಿತು. ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರಿಂದ ನಡೆದ ನ್ಯಾಯಾಂಗ ವಿಚಾರಣೆ ನಡೆಸಲು ತೀರ್ಮಾನವಾಯಿತು. ಕೋಮುಗಲಭೆ ವಿಚಾರದಲ್ಲಿ ಆ ರೀತಿಯ ತನಿಖೆ ನಮ್ಮ ರಾಜ್ಯದಲ್ಲಿ ನಡೆದದ್ದು ಅದೇ ಮೊದಲು. ಜಸ್ಟಿಸ್‌ ಪಿ.ಕುಲಕರ್ಣಿ ಆಯೋಗವು ವಿಚಾರಣೆ ನಡೆಸಿತು. ನಾವು ಅಫಿಡವಿಟ್‌ಗಳನ್ನು ಸಲ್ಲಿಸಿ ಕೋರ್ಟಿಗೆ ಹೋಗುತ್ತಿದ್ದೆವು. ಪೊಲೀಸರ ಪರವಾಗಿ ವಾದ ಮಾಡಲು ನಿವೃತ್ತ ಜಡ್ಜ್‌ ಒಬ್ಬರಿದ್ದರು.ವಿವಿಧ ಸಂಘಟನೆಗಳು ವಾದ ಮಾಡಲು ಅನೇಕ ವಕೀಲರನ್ನು ಕೋರ್ಟಿಗೆ ಇಳಿಸಿದ್ದವು. ಆಯೋಗದ ಪರವಾಗಿಯೂ ಒಬ್ಬ ವಕೀಲರಿದ್ದರು. ಆಗ ಜೋರು ಜೋರು ವಾದ, ಪ್ರತಿವಾದಗಳು ನಡೆಯುತ್ತಿದ್ದವು.

`ಪೊಲೀಸರು ಕೈಮೀರಿ ಬೇಕಾಬಿಟ್ಟಿ ಗುಂಡು ಹಾರಿಸಿದ್ದಾರೆ. ಅದರ ಅವಶ್ಯಕತೆಯೇ ಇರಲಿಲ್ಲ. ಮೊದಲಿಗೆ ಪೊಲೀಸರು ವಾರ್ನಿಂಗ್‌ ಕೊಡಬೇಕು. ಆಮೇಲೆ ಅಶ್ರುವಾಯು ಪ್ರಯೋಗ ಮಾಡಬೇಕು. ಅದರಿಂದಲೂ ಗಲಾಟೆ ತಗ್ಗದೇ ಇದ್ದರೆ ಲಾಠಿ ಚಾರ್ಜ್‌ ಮಾಡಬೇಕು. ಕೆಂಪು ಬಾವುಟ ಹಿಡಿದು ಮೈಕ್‌ನಲ್ಲಿ ಅನೌನ್ಸ್‌ ಮಾಡಬೇಕು. ಆದರೂ ಜನ ಚದುರದೇ ಹೋದಲ್ಲಿ ಮೊದಲಿಗೆ ಗಾಳಿಯಲ್ಲಿ ಗುಂಡು ಹಾರಿಸಬೇಕು.

ನಂತರವಷ್ಟೇ ಜನರತ್ತ ಗುಂಡು ಹಾರಿಸಬೇಕು. ಇದು ನಿಯಮ~ ಎಂದು ಗಲಭೆಕೋರರ ಪರವಾಗಿ ವಾದ ಮಾಡುತ್ತಿದ್ದವರು ಪಾಯಿಂಟ್‌ ಹಾಕಿದರು. ಕೋಮುಗಲಭೆ ನಡೆದಾಗ ಇಂಥ ನಿಯಮಗಳು ಸಿನಿಮೀಯ ಎಂಬುದು ನಮ್ಮ ಅನುಭವಕ್ಕೆ ಎಷ್ಟೋ ಸಲ ಬಂದಿದೆ. ಗಲಭೆ ನಡೆದ ಜಾಗದಲ್ಲಿ ಪೊಲೀಸರು ಜೀಪಿನಿಂದ ಕೆಳಗಿಳಿಯುವುದೇ ಕಷ್ಟ.

ಹಾಗಿರುವಾಗ ಇಷ್ಟೆಲ್ಲಾ ನಿಯಮಗಳನ್ನು ಅನುಷ್ಠಾನಗೊಳಿಸುವುದು ಸುಲಭವಲ್ಲ. ಇದು ಜಸ್ಟಿಸ್‌ ಕುಲಕರ್ಣಿಯವರಿಗೂ ಗೊತ್ತಿತ್ತು. 1984ರ ಮಾರ್ಚ್‌ 9ರಿಂದ ಮೂರು ದಿನ ನಡೆದಿದ್ದ ಕೋಮುಗಲಭೆಯು `ಮುನ್ನಾ ಸಾವಿನ ಪ್ರಕರಣ~ ಎಂದೇ ಮಾಧ್ಯಮದಲ್ಲಿ ಸುದ್ದಿಯಾಗಿತ್ತು. ಸೂಕ್ಷ್ಮವಾದ ಪ್ರದೇಶಗಳಲ್ಲಿ ಕರ್ಫ್ಯೂ ವಿಧಿಸಲಾಗಿತ್ತು. ಅಲ್ಲಲ್ಲಿ ಸೆಕ್ಷನ್‌ 144 ಅನ್ವಯ ನಿಷೇಧಾಜ್ಞೆಯನ್ನೂ ವಿಧಿಸಲಾಗಿತ್ತು. ಹಾಗಾಗಿ ಗಲಭೆಯ ತೀವ್ರತೆಯು ಕುಲಕರ್ಣಿಯವರಿಗೆ ಚೆನ್ನಾಗಿ ಗೊತ್ತಿತ್ತು. ಗಲಭೆಕೋರರ ಪರ ವಾದ ಮಾಡುತ್ತಿದ್ದ ವಕೀಲರ ವಾದ ಕೇಳಿ, `ಗಲಭೆ ಆದದ್ದು ಮೂರು ದಿನ... ಅಲ್ಲೋ? ಅಂದಮ್ಯಾಲೆ ಮಂದಿ ಹಾದಿಗ್ಯಾಕಪಾ ಬಂದ್ರು~ ಎಂದು ಪ್ರಶ್ನಿಸಿದರು.

`ಪಾಪ, ಅಮಾಯಕ ಜನ ಏನು ನಡೆಯುತ್ತಿದೆಯೋ ಅಂತ ನೋಡೋಕೆ ಬಂದರಿಬೇಕು~ ಎಂದು ವಕೀಲರು ಸಮರ್ಥಿಸಿಕೊಳ್ಳಲು ಯತ್ನಿಸಿದರು. `ಎಷ್ಟು ಸುತ್ತು ಟಿಯರ್‌ ಗ್ಯಾಸ್‌ ಒಡೆದಾರೆ ಅಂತ ಪೊಲೀಸರು ಬರೆದಾರ. ಹುಬ್ಬಳ್ಳಿ, ಮೈಸೂರು, ಶಿವಮೊಗ್ಗ ಎಲ್ಲಾ ಕಡೀಯಿಂದ ವ್ಯಾನುಗಳು ಬಂದಾವು ಅಂತಲೂ ನಮೂದಾಗದ.  ಪೊಲೀಸರ ಕೈಯಾಗ ಬಂದೂಕ ಇರೋದಾ ಖರೆ ಅ್ಲ್ಲಲೇನಾ?~ ಕುಲಕರ್ಣಿಯವರು ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕತೊಡಗಿದರು. ವಕೀಲರು, `ಆದರೂ...~ ಎಂದು ಕೊಸರಾಡತೊಡಗಿದರು.

`ಅಲ್ಲಪಾ... ಪೊಲೀಸರ ಬಂದೂಕ ಏನ ಟಾಯ್‌ ಪಿಸ್ತೂಲಾ? ಅದು ಖರೇನೇ ಫೈರ್‌ ಮಾಡೂದ ಅಲ್ವಾ? ಅಂದಮ್ಯಾಗ ಮಂದಿಗ ಅದು ಗೊತ್ತಿರಾಕ ಉಂಟು. ಪೊಲೀಸರು ಅದರಾಗ ಏನು ಚಾಕೊಲೋಟ್‌ ಇಟ್ಟು ಹೊಡೀತಾರ ಅಂತ ಮಾಡಿಯೇನು?~ ಎಂದು ಕುಲಕರ್ಣಿಯವರು ಮಾಂಝಾ ಕೊಟ್ಟರು. ಕೋರ್ಟಿನಲ್ಲಿದ್ದ ಎಲ್ಲರೂ ಗೊಳ್ಳೆಂದು ನಕ್ಕರು. ಆ ವಕೀಲರು ಪೆಚ್ಚುಮೋರೆ ಹಾಕಿಕೊಂಡರು. ಆದರೆ, ಕುಲಕರ್ಣಿಯವರು ಮಾತ್ರ ಗಂಭೀರವದನರಾಗಿಯೇ ಇದ್ದರು.

ಮುಂದಿನ ವಾರ: ಇನ್ನಷ್ಟು ಕೋರ್ಟಿನ ಪ್ರಸಂಗಗಳು
ಶಿವರಾಂ ಅವರ ಮೊಬೈಲ್‌ ನಂಬರ್‌ 94483 13066

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT