ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಮೆರಾ ಈ ಫೋನಿನ ಅತ್ಯುತ್ತಮ ಅಂಶ

Last Updated 26 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಎಲೆಕ್ಟ್ರಾನಿಕ್ ಸಾಧನಗಳನ್ನು ತಯಾರಿಸುವ ಕೆಲವು ಕಂಪೆನಿಗಳು ಇತ್ತೀಚೆಗೆ ಸ್ಮಾರ್ಟ್‌ಫೋನ್ ತಯಾರಿಸಲು ಪ್ರಾರಂಭಿಸಿದ್ದಾರೆ. ಅವುಗಳ ಸಾಲಿಗೆ ಇತ್ತೀಚೆಗೆ ಸೇರಿದ ಇನ್ನೊಂದು ಕಂಪೆನಿ ಚೀನಾ ದೇಶದ ಝಡ್‌ಟಿಇ.

ರೂಟರ್, ಹಬ್, ಮೋಡೆಮ್ ಇತ್ಯಾದಿಗಳ ಮೂಲಕ ಹೆಸರುವಾಸಿಯಾಗಿರುವ ಅದು ಈಗ ಸ್ಮಾರ್ಟ್‌ಫೋನ್‌ಗಳು ತುಂಬಿದ ಮಾರುಕಟ್ಟೆಗೆ ನಾನೂ ಇದ್ದೇನೆ ಎಂದು ಪ್ರವೇಶ ಮಾಡಿದೆ.
 
ಈ ಕಂಪೆನಿಯ ಝಡ್‌ಟಿಇ ಬ್ಲೇಡ್ ಎ2 ಪ್ಲಸ್ ಎಂಬ ಫೋನಿನ ವಿಮರ್ಶೆ ಇದೇ ಅಂಕಣದಲ್ಲಿ ಪ್ರಕಟವಾಗಿತ್ತು. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಝಡ್‌ಟಿಇ ಕಂಪೆನಿಯ ನುಬಿಯ ಝಡ್11 ಮಿನಿಎಸ್ (Nubia Z11 MiniS) ಎಂಬ ಸ್ಮಾರ್ಟ್‌ಫೋನನ್ನು.
 
ಗುಣವೈಶಿಷ್ಟ್ಯಗಳು
2 ಗಿಗಾಹರ್ಟ್ಸ್ ವೇಗದ 8 ಹೃದಯಗಳ  ಪ್ರೊಸೆಸರ್, 4+64 ಗಿಗಾಬೈಟ್ ಮೆಮೊರಿ, 200 ಗಿಗಾಬೈಟ್ ತನಕ ಮೈಕ್ರೊಎಸ್‌ಡಿ ಕಾರ್ಡ್ ಮೂಲಕ ಅಧಿಕ ಮೆಮೊರಿ ಹಾಕಿಕೊಳ್ಳಬಹುದು, ಯುಎಸ್‌ಬಿ ಓಟಿಜಿ, 2/3/4ಜಿ, ವಿಓಎಲ್‌ಟಿ (VoLTE), ಎರಡು ನ್ಯಾನೋ ಸಿಮ್, 5.2 ಇಂಚು ಗಾತ್ರದ 1920x1080 ಎಲ್‌ಟಿಪಿಎಸ್ ಪರದೆ, 23 ಮೆಗಾಪಿಕ್ಸೆಲ್‌ ರೆಸೊಲೂಶನ್‌ನ ಪ್ರಾಥಮಿಕ ಮತ್ತು 13 ಮೆಗಾಪಿಕ್ಸೆಲ್ ರೆಸೊಲೂಶನ್‌ನ ಸ್ವಂತಿ ಕ್ಯಾಮೆರಾಗಳು, ಬೆರಳಚ್ಚು ಸ್ಕ್ಯಾನರ್, ಎಫ್‌ಎಂ ರೇಡಿಯೊ, 3000 mAH ಶಕ್ತಿಯ ತೆಗೆಯಲಸಾಧ್ಯವಾದ ಬ್ಯಾಟರಿ, 146 x 72 x 7.6 ಮಿ.ಮೀ. ಗಾತ್ರ, 158 ಗ್ರಾಂ ತೂಕ, ಆಂಡ್ರಾಯ್ಡ್‌ 6.0.1, ಇತ್ಯಾದಿ. ನಿಗದಿತ ಬೆಲೆ ₹16,999.
 
ರಚನೆ ಮತ್ತು ವಿನ್ಯಾಸ ಚೆನ್ನಾಗಿದೆ. ಲೋಹದ ದೇಹವಿದೆ. ಮೇಲ್ದರ್ಜೆಯ ಫೋನನ್ನು ಕೈಯಲ್ಲಿ ಹಿಡಿದುಕೊಂಡ ಅನುಭವ ಆಗುತ್ತದೆ. ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಎಡ ಭಾಗದಲ್ಲಿ ಸಿಮ್ ಮತ್ತು ಮೆಮೊರಿ ಕಾರ್ಡ್‌ಹಾಕಲು ಪಿನ್ ಮೂಲಕ ಚುಚ್ಚಿದರೆ ಹೊರಬರುವ ಟ್ರೇ ಇದೆ. ಈ ಟ್ರೇಯಲ್ಲಿ ಎರಡು ನ್ಯಾನೋ ಸಿಮ್ ಅಥವಾ ಒಂದು ನ್ಯಾನೋ ಸಿಮ್ ಮತ್ತು ಒಂದು ಮೈಕ್ರೊಎಸ್‌ಡಿ ಕಾರ್ಡ್ ಹಾಕಬಹುದು.
 
ಅಂದರೆ ಎರಡು ಸಿಮ್ ಬಳಸುವಾಗ ಅಧಿಕ ಮೆಮೊರಿ ಇಲ್ಲ. ಕೆಳಭಾಗದಲ್ಲಿ ಯುಎಸ್‌ಬಿ-ಸಿ ಕಿಂಡಿ ಇದೆ. ಮೇಲ್ಭಾಗದಲ್ಲಿ 3.5 ಮಿ.ಮೀ. ಇಯರ್‌ಫೋನ್ ಕಿಂಡಿಯಿದೆ. ಹಿಂಭಾಗದಲ್ಲಿ ಮೇಲ್ಭಾಗದ ಮೂಲೆಯಲ್ಲಿ ಕ್ಯಾಮೆರಾ ಇದೆ. ಪಕ್ಕದಲ್ಲಿ ಫ್ಲಾಶ್ ಇದೆ. ಈ ರೀತಿ ಮೂಲೆಯಲ್ಲಿ ಕ್ಯಾಮೆರಾ ಇರುವುದು ನನಗೆ ಇಷ್ಟವಿಲ್ಲ.

ಯಾಕೆಂದರೆ ಫೋಟೊ  ತೆಗೆಯುವಾಗ ಎಚ್ಚರ ವಹಿಸದಿದ್ದರೆ ಎಡಗೈ ಬೆರಳು ಈ ಕ್ಯಾಮೆರಾ ಅಥವಾ ಅದರ ಪಕ್ಕದಲ್ಲಿರುವ ಫ್ಲಾಶ್ ಅನ್ನು ಮುಚ್ಚುವ ಸಾಧ್ಯತೆಗಳಿರುತ್ತವೆ. ಹಿಂಭಾಗದ ಮಧ್ಯದಲ್ಲಿ ಬೆರಳಚ್ಚು ಸ್ಕ್ಯಾನರ್ ಇದೆ.  
 
ಹಿಂಭಾಗದ ಕವಚ ತುಂಬ ನುಣುಪೂ ಅಲ್ಲ, ತುಂಬ ದೊರಗೂ ಅಲ್ಲ ಎಂಬಂತಿದೆ. ಫೋನ್ ದೊಡ್ಡದಾಗಿಲ್ಲದಿರುವುದರಿಂದ ಮತ್ತು ಕಡಿಮೆ ತೂಕದ್ದಾಗಿರುವುದರಿಂದ ಒಂದೇ ಕೈಯಲ್ಲಿ ಹಿಡಿದು ಕೆಲಸ ಮಾಡುವುದು ಸುಲಭ.
 
ಇದರ ಪ್ರೊಸೆಸರ್ ಮಧ್ಯಮ ಶಕ್ತಿಯ ಪ್ರೊಸೆಸರ್. ಅತಿಯಾದ ಶಕ್ತಿಯ ಫೋನ್ ಬೇಕು ಎನ್ನುವವರಿಗೆ ಈ ಫೋನ್ ಹೇಳಿದ್ದಲ್ಲ. ಹಾಗೆಂದು ಹೇಳಿ ಸಾಮಾನ್ಯ ಬಳಕೆಯಲ್ಲಿ ಅಂತಹ ತೊಂದರೆಯೇನೂ ಕಂಡುಬರುವುದಿಲ್ಲ.
 
ಎಲ್ಲ ನಮೂನೆಯ ಆಟಗಳನ್ನು ಅಷ್ಟೇನೂ ತೊಂದರೆಯಿಲ್ಲದೆ ಆಡಬಹುದು. ವಿಡಿಯೊ ವೀಕ್ಷಣೆ ಕೂಡ ಚೆನ್ನಾಗಿದೆ. ಹೈಡೆಫಿನಿಶನ್ ವಿಡಿಯೊ ಮಾತ್ರವಲ್ಲದೆ 4k ವಿಡಿಯೊ ಕೂಡ ಪ್ಲೇ ಆಗುತ್ತದೆ. ಇದರ ಆಡಿಯೊ ಇಂಜಿನ್ ಪರವಾಗಿಲ್ಲ. ಮೇಲ್ಮಟ್ಟದ್ದಂತೂ ಅಲ್ಲ. 
 
ಒಂದು ಮಟ್ಟಿಗೆ ತೃಪ್ತಿದಾಯಕವಾಗಿದೆ ಎನ್ನಬಹುದು. ಫೋನ್ ಜೊತೆ ಯಾವುದೇ ಇಯರ್‌ಫೋನ್ ನೀಡಿಲ್ಲ. ಅಂದರೆ ಸಿನಿಮಾ ನೋಡಲು, ಆಟ ಆಡಲು ಇದು ಪರವಾಗಿಲ್ಲ ಎನ್ನಬಹುದು.
 
ಇದರ ಪ್ರಾಥಮಿಕ ಮತ್ತು ಸ್ವಂತಿ ಕ್ಯಾಮೆರಾ ಎರಡೂ ಚೆನ್ನಾಗಿವೆ. ಪ್ರಾಥಮಿಕ ಕ್ಯಾಮೆರಾ 23 ಮೆಗಾಪಿಕ್ಸೆಲ್‌ನದು. f/2 ಲೆನ್ಸ್ ಇದೆ. ಇದರ ಕ್ಯಾಮೆರಾ ಕಿರುತಂತ್ರಾಂಶದಲ್ಲಿ (ಆ್ಯಪ್) ಹಲವು ಆಯ್ಕೆಗಳಿವೆ. ಪ್ರೋ ಎಂಬ ವಿಧಾನವನ್ನು ಆಯ್ಕೆ ಮಾಡಿಕೊಂಡರೆ ಐಎಸ್‌ಒ, ಷಟ್ಟರ್ ವೇಗ, ಫೋಕಸ್ ಎಲ್ಲವನ್ನು ಮ್ಯಾನ್ಯುಯಲ್ ಆಗಿ ನಾವೇ ಆಯ್ಕೆ ಮಾಡಿಕೊಳ್ಳಬಹುದು. 
 
ಮ್ಯಾಕ್ರೊ, ಬೆಳಕಿನ ಕಿರಣಗಳ ನೃತ್ಯ, ನಿಧಾನ ಚಲನೆ, ಹೀಗೆ ಹಲವಾರು ಆಯ್ಕೆಗಳಿವೆ. ಎಲ್ಲ ನಮೂನೆಯ ಫೋಟೊಗಳು ಚೆನ್ನಾಗಿ ಬರುತ್ತವೆ. ಉತ್ತಮ ಬೆಳಕಿನಲ್ಲಂತೂ ಉತ್ತಮ ಫೋಟೊ ಬರುತ್ತವೆ. ಅತಿ ಕಡಿಮೆ ಬೆಳಕಿನಲ್ಲಿ ಮಾತ್ರ ಇನ್ನೂ ಸ್ವಲ್ಪ ಚೆನ್ನಾಗಿ ಬಂದಿದ್ದರೆ ಉತ್ತಮವಿತ್ತು ಎಂಬ ಭಾವನೆ ಬರುತ್ತದೆ. ಇದರ ಸ್ವಂತಿ ಕ್ಯಾಮೆರಾ ಕೂಡ ಚೆನ್ನಾಗಿದೆ. 
 
ಅದರಲ್ಲೂ ಉತ್ತಮ ಸ್ವಂತಿ ತೆಗೆಯಲು ಹಲವು ವಿಶೇಷ ಸವಲತ್ತುಗಳಿವೆ. ಒಟ್ಟಿನಲ್ಲಿ ಈ ಬೆಲೆಗೆ ಇದು ಒಂದು ಉತ್ತಮ ಕ್ಯಾಮೆರಾ ಫೋನ್ ಎನ್ನಬಹುದು. ಕ್ಯಾಮೆರಾ ನಿಮ್ಮ ಪ್ರಥಮ ಆದ್ಯತೆಯಾಗಿದ್ದು, ₹17,000 ನಿಮ್ಮ ಬಜೆಟ್ ಆಗಿದ್ದಲ್ಲಿ ಈ ಫೋನ್ ನೀವು ಕೊಳ್ಳಬಹುದು.
 
ಈ ಫೋನಿನಲ್ಲಿ ಕೆಲವು ವಿಶೇಷ ಸವಲತ್ತುಗಳಿವೆ. ಫೋನಿನ ಪರದೆಯ ಬದಿಯನ್ನು ಬೇರೆ ಬೇರೆ ರೀತಿಯಲ್ಲಿ ಸವರಿದರೆ ಬೇರೆ ಬೇರೆ ಕೆಲಸಗಳನ್ನು ಮಾಡುವ ಆಯ್ಕೆಗಳಿವೆ. ಉದಾಹರಣೆಗೆ ಫೋಟೊ ಗ್ಯಾಲರಿಯನ್ನು ತೆರೆಯುವುದು, ಪರದೆಯ ಪ್ರಖರತೆಯನ್ನು ಹೆಚ್ಚು ಕಡಿಮೆ ಮಾಡುವುದು, ಇತ್ಯಾದಿ. ಬೆರಳಚ್ಚು ಸ್ಕ್ಯಾನರ್ ಅನ್ನು ಕೂಡ ಹಲವು ಕೆಲಸಗಳಿಗೆ ಬಳಸಬಹುದು. 
 
ಬ್ಯಾಟರಿ ಬಳಕೆ ಚೆನ್ನಾಗಿದೆ. ಒಂದೂವರೆಯಿಂದ ಎರಡು ದಿನ ಬಾಳಿಕೆ ಬರುತ್ತದೆ. ಆದರೆ ಇವರು ವೇಗವಾಗಿ ಚಾರ್ಜ್ ಮಾಡುವ ಸವಲತ್ತು ನೀಡಿಲ್ಲ. 
 
ಇದರಲ್ಲಿರುವುದು ಆಂಡ್ರಾಯ್ಡ್‌ 6.0.1. ಆದ್ದರಿಂದ ಕನ್ನಡದ ತೋರುವಿಕೆ ಸರಿಯಾಗಿದೆ. ಕನ್ನಡದ ಯೂಸರ್ ಇಂಟರ್‌ಫೇಸ್ ಮಾತ್ರ ಇಲ್ಲ. ಹಿಂದಿ ಮಾತ್ರ ಇದೆ. ಭಾರತೀಯ ಭಾಷೆ ಎಂದರೆ ಹಿಂದಿ ಮಾತ್ರ ಎಂದು ನಂಬಿದಂತಿದೆ. ವಿಓಎಲ್‌ಟಿ (VoLTE) ಸೌಲಭ್ಯ ಇದೆ. ಅಂದರೆ ರಿಲಯನ್ಸ್ ಜಿಯೋ ಸಿಮ್ ಕೆಲಸ ಮಾಡುತ್ತದೆ. ಇದರ ವಿಡಿಯೋ ವಿಮರ್ಶೆ ನೋಡಬೇಕಿದ್ದರೆ bit.ly/gadgetloka275v ಜಾಲತಾಣಕ್ಕೆ ಭೇಟಿ ನೀಡಿ.
***
ವಾರದ ಆ್ಯಪ್: ಹೊಟ್ಟೆಬಾಕ ಶಾರ್ಕ್
ಶಾರ್ಕ್ ಮೀನು ತುಂಬ ಕ್ರೂರ ಎಂಬ ಪ್ರತೀತಿ ಇದೆ. ಅದಕ್ಕೆ ಹಸಿವು ಜಾಸ್ತಿ. ಸಿಕ್ಕಿದ ಎಲ್ಲ ಪ್ರಾಣಿಗಳನ್ನೂ ತಿನ್ನುತ್ತದೆ. ಈಜಲು ಹೋದ ಹಲವು ಮನುಷ್ಯರನ್ನು ಶಾರ್ಕ್ ಮೀನು ನುಂಗಿದ ದಾಖಲೆಗಳಿವೆ.

ಶಾರ್ಕ್ ಮೀನಿನಂತೆ ಇತರೆ ಮೀನುಗಳನ್ನು, ಪ್ರಾಣಿಗಳನ್ನು ತಿನ್ನುವ ಒಂದು ಆಟ ಬೇಕೆ? ಹೌದಾದಲ್ಲಿ ನೀವು ಗೂಗಲ್‌ ಪ್ಲೇ ಸ್ಟೋರಿಗೆ ಭೇಟಿ ನೀಡಿ Hungry Shark Evolution ಎಂದು ಹುಡುಕಬೇಕು ಅಥವಾ bitly.com/gadgetloka275 ಜಾಲತಾಣಕ್ಕೆ ಭೇಟಿ ನೀಡಬೇಕು. ಈ ಆಟದಲ್ಲಿ ನೀವು ಒಂದು ಶಾರ್ಕ್ ಮೀನನ್ನು ನಿಯಂತ್ರಿಸುತ್ತೀರಿ. ಅದನ್ನು ಅತ್ತಿತ್ತ ಓಡಾಡಿಸಿ ಇತರೆ ಮೀನುಗಳನ್ನು ನುಂಗಬೇಕು. ಎಲ್ಲ ಆಟಗಳಲ್ಲಿರುವಂತೆ ಇದರಲ್ಲೂ ಹಲವು ಹಂತಗಳಿವೆ. ಇದರ ಗ್ರಾಫಿಕ್ಸ್ ಚೆನ್ನಾಗಿದೆ. ಸಮಯ ಹಾಳು ಮಾಡಲು ಒಂದು ಉತ್ತಮ ಆಟ.
 
 
ಗ್ಯಾಜೆಟ್‌ ಸುದ್ದಿ: ಎಲುಬಿನ ಮೂಲಕ ಸಂವಹನದ ಹೆಡ್‌ಫೋನ್
ಕಿವಿಯ ತಮಟೆ ಇಲ್ಲದವರಿಗೆ ಎಲುಬಿನ ಮೂಲಕ ಧ್ವನಿಯನ್ನು ನೇರ ಒಳಕಿವಿಗೆ ತಲುಪಿಸುವಂತಹ ಹೆಡ್‌ಫೋನ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಈಗ ಅಂತಹ ಹೆಡ್‌ಫೋನ್ ಹೊಸ ವಿನ್ಯಾಸದಿಂದ ಬರುತ್ತಿದೆ. ಕಿವಿ ಸರಿ ಇರುವವರೂ ಕಿವಿಯ ಹೊರಗೆ ಈ ಹೆಡ್‌ಫೋನ್ ಅನ್ನು ಇಟ್ಟುಕೊಂಡು ಸಂಗೀತ, ಮಾತುಕತೆಗಳನ್ನು ಆಲಿಸಬಹುದು.

ಕಿವಿಯ ಹೊರಗೆ ಇದು ಇರುವುದರಿಂದ ಹೊರಗಿನ ಧ್ವನಿಯನ್ನೂ ನೀವು ಆಲಿಸುತ್ತಿರಬಹುದು. ಪಾರ್ಕಿನಲ್ಲಿ ಓಡುವಾಗ ಯಾರಾದರೂ ನಿಮ್ಮನ್ನು ಕರೆದರೆ ಆಗ ಈ ಹೆಡ್‌ಫೋನ್ ಇದ್ದರೂ ನಿಮಗೆ ಕರೆದುದು ಕೇಳಿಸುತ್ತದೆ. ಇದು ಸ್ಮಾರ್ಟ್‌ಫೋನಿಗೆ ಬ್ಲೂಟೂತ್ ಮೂಲಕ ಸಂಪರ್ಕಗೊಳ್ಳುತ್ತದೆ.
 
****
ಗ್ಯಾಜೆಟ್‌ ಸಲಹೆ
ಕಿರಣ ಅವರ ಪ್ರಶ್ನೆ: ಕನ್ನಡ, ತೆಲುಗು ಹಾಗೂ ಹಿಂದಿ ಭಾಷೆಯ ಹಳೆಯ ಹಾಗೂ ಇತ್ತೀಚಿನ ಚಲನಚಿತ್ರಗಳ ಹಾಡುಗಳನ್ನು ಅತ್ಯಂತ ವೇಗವಾಗಿ ಡೌನ್‌ಲೋಡ್ ಮಾಡಲು ಒಂದು ಉತ್ತಮ ಗುಣಮಟ್ಟದ ಸರಳ ಆ್ಯಪ್ ಇದ್ದರೆ ತಿಳಿಸಿ.

ಉ: ನೀವು ಎಲ್ಲಿಂದ ಡೌನ್‌ಲೋಡ್ ಮಾಡುತ್ತೀರಿ ಎಂಬುದನ್ನು ತಿಳಿಸಿಲ್ಲ. ಬಹುತೇಕವಾಗಿ ಟೊರೆಂಟ್ ಮೂಲಕ ಡೌನ್‌ಲೋಡ್ ಮಾಡುವವರಾದರೆ ಅದು ಕಾನೂನು ಪ್ರಕಾರ ಹಕ್ಕುಸ್ವಾಮ್ಯದ ಉಲ್ಲಂಘನೆಯಾಗುತ್ತದೆ ಹಾಗೂ ಅದು ಅಪರಾಧವಾಗುತ್ತದೆ. ಡೌನ್‌ಲೋಡ್ ಮಾಡುವ ವೇಗ ಬಳಸುವ ಆ್ಯಪ್ ಅನ್ನು ಹೊಂದಿಕೊಂಡು ಹೆಚ್ಚು ಕಡಿಮೆಯಾಗುವುದಕ್ಕಿಂತಲೂ ಹೆಚ್ಚಾಗಿ ನಿಮ್ಮ ಅಂತರಜಾಲ ಸಂಪರ್ಕದ ವೇಗಕ್ಕೆ ಅನುಗುಣವಾಗಿ ಹೆಚ್ಚು ಕಡಿಮೆಯಾಗುತ್ತದೆ.
***
ಗ್ಯಾಜೆಟ್‌ ತರ್ಲೆ
ಐಫೋನ್‌ನಲ್ಲಿ Find my iPhone ಎಂಬ ಸೌಲಭ್ಯ ಇದೆ. ಅಮೆರಿಕದಲ್ಲಿ ಒಬ್ಬಾತ ಐಫೋನ್ ಕದಿಯುವುದನ್ನೇ ತನ್ನ ಹವ್ಯಾಸ ಮಾಡಿಕೊಂಡಿದ್ದ. ಒಂದು ಸಮಾರಂಭದಲ್ಲಿ ಒಂದೇ ಕಡೆ ಸಾವಿರಾರು ಜನ ಸೇರಿದ್ದಲ್ಲಿ ಒಟ್ಟು 130 ಐಫೋನ್ ಕದ್ದಿದ್ದ. ಆದರೆ ಐಫೋನ್‌ನಲ್ಲಿರುವ ಈ ಸೌಲಭ್ಯವನ್ನು ಫೋನ್ ಕಳೆದುಕೊಂಡ ಕೆಲವರು ಬಳಸಿದಾಗ ಆತ ಸಿಕ್ಕಿಬಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT