ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೋಮಾದಿಂದ ಸ್ಮಾರ್ಟ್‌ಫೋನ್ ಸುಗ್ಗಿ

Last Updated 31 ಜುಲೈ 2013, 19:59 IST
ಅಕ್ಷರ ಗಾತ್ರ

ನನಗೆ ಮತ್ತೆ ಮತ್ತೆ ಬರುವ ಇಮೈಲ್‌ಗಳಲ್ಲಿ ಸಾಮಾನ್ಯ ಒಕ್ಕಣೆಯೆಂದರೆ ನನಗೆ ಕಡಿಮೆ ಬೆಲೆಯ ಆಂಡ್ರಾಯಿಡ್ ಫೋನ್ ಕೊಳ್ಳಬೇಕು. ಅದರಲ್ಲಿ ಅದಿರಬೇಕು, ಇದಿರಬೇಕು, ಆದರೆ ಕಡಿಮೆ ಬೆಲೆಯದಾಗಿರಬೇಕು - ಇತ್ಯಾದಿ. ಅಂದರೆ ಕಡಿಮೆ ಬೆಲೆಯ ಆಂಡ್ರಾಯಿಡ್ ಫೋನ್‌ಗಳಿಗೆ ತುಂಬ ಬೇಡಿಕೆ ಇದೆ ಎಂದು ತೀರ್ಮಾನಿಸಬಹುದು. ಮಾರುಕಟ್ಟೆಯ ಬೇಡಿಕೆಗನುಗುಣವಾಗಿ ಕಂಪೆನಿಗಳೂ ಈ ಆಂಡ್ರಾಯಿಡ್ ಫೋನ್ ಮಾರುಕಟ್ಟೆಗೆ ನುಗ್ಗುತ್ತಿದ್ದಾರೆ.

ಹೀಗೆ ನುಗ್ಗುತ್ತಿರುವವರ ಗುಂಪಿಗೆ ಹೊಸದಾಗಿ ಸೇರ್ಪಡೆಯಾಗಿರುವವರು ಭಾರತದ್ದೇ ಆಗಿರುವ ಟಾಟಾ ಸಮೂಹದ ಕ್ರೋಮಾ ಕಂಪೆನಿ. ಕ್ರೋಮಾ ಮೊದಮೊದಲು ಕೇವಲ ಎಲೆಕ್ಟ್ರಾನಿಕ್ ಉಪಕರಣಗಳನ್ನು ಮಾರುತ್ತಿತ್ತು. ನಿಧಾನಕ್ಕೆ ತನ್ನದೇ ಉತ್ಪನ್ನಗಳನ್ನು ಮಾರಲು ಪ್ರಾರಂಭಿಸಿತು.

ಈಗ ಫೋನ್‌ಗಳನ್ನೂ ತಯಾರಿಸಿದೆ (?). ಸದ್ಯಕ್ಕೆ ಮೂರು ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅದರಲ್ಲಿ ಎರಡು ಫೋನ್‌ಗಳು ಆಂಡ್ರಾಯಿಡ್ ಕಾರ್ಯಾಚರಣೆ ವ್ಯವಸ್ಥೆಯನ್ನು ಬಳಸುತ್ತಿರುವಂಥವು. ಅವುಗಳ ಕಡೆಗೆ ಸ್ವಲ್ಪ ವಿಮರ್ಶಾತ್ಮಕ ನೋಟ ಹರಿಸೋಣ.

ಮೇಲ್ನೋಟಕ್ಕೆ ಎರಡೂ ಆಧುನಿಕ ಆಂಡ್ರಾಯಿಡ್ ಫೋನ್ ಎನ್ನಬಹುದು. ಪ್ರಮುಖ ವ್ಯತ್ಯಾಸ ಇರುವುದು ಆಂಡ್ರಾಯಿಡ್ ಆವೃತ್ತಿ, ಪರದೆ ಗಾತ್ರ, ಪ್ರಾಥಮಿಕ ಮೆಮೊರಿ ಮತ್ತು ಬ್ಯಾಟರಿಗಳಲ್ಲಿ. ಆದರೆ ಕೆಲಸ ಮಾಡುವುದರಲ್ಲಿ ಕೆಲವು ಸಂದರ್ಭಗಳಲ್ಲಿ ಗಣನೀಯ ವ್ಯತ್ಯಾಸ ಕಂಡುಬಂತು.

ಎರಡರ ಕ್ಯಾಮೆರಾಗಳೂ ಬಹುತೇಕ ಒಂದೇ ನಮೂನೆಯಲ್ಲಿ ಕೆಲಸ ಮಾಡುತ್ತವೆ. ಹೆಸರಿಗೆ 8 ಮೆಗಾಪಿಕ್ಸೆಲ್ ಇದ್ದರೂ ಕ್ಯಾಮೆರಾ ಗುಣಮಟ್ಟ ಮಾತ್ರ ಏನೇನೂ ಸಾಲದು. ನಾನು ಹಲವು ಸಲ ಮತ್ತೆ ಮತ್ತೆ ಬರೆದಿದ್ದೇನೆ -ಏನೆಂದರೆ ಕೇವಲ ಮೆಗಾಪಿಕ್ಸೆಲ್ ಇದ್ದ ಮಾತ್ರಕ್ಕೆ ಕ್ಯಾಮೆರಾ ಚೆನ್ನಾಗಿರಬೇಕಾಗಿಲ್ಲ ಎಂದು. ಆ ಮಾತು ಈ ಫೋನ್ ಕ್ಯಾಮೆರಾಗಳಲ್ಲಿ ಮತ್ತೆ ಸಾಬೀತಾಗಿದೆ.

ಎರಡು ಫೋನ್‌ಗಳ ಆಡಿಯೊ ಎಂಜಿನ್‌ನ ಗುಣಮಟ್ಟ ಬಹುತೇಕ ಒಂದೇ ರೀತಿ ಇದೆ. ಬಹುಶಃ ಅವುಗಳ ಸರ್ಕ್ಯೂಟ್ ಮತ್ತು ಬಳಸಿರುವ ಚಿಪ್ ಒಂದೇ ಇರಬೇಕು. ಆಡಿಯೊ ಗುಣಮಟ್ಟ ಪರವಾಗಿಲ್ಲ. ಕಿವಿಗೆ ಆಲಿಸಲು ಕಷ್ಟವಾಗುವುದಿಲ್ಲ. ಅತಿ ಕಡಿಮೆ ಕಂಪನಾಂಕದ (treble) ಮತ್ತು ಅತಿ ಹೆಚ್ಚಿನ ಕಂಪನಾಂಕದ (bass) ಧ್ವನಿಗಳ ಪುನರುತ್ಪತ್ತಿ ಪರವಾಗಿಲ್ಲ ಎನ್ನಬಹುದು. ಎಫ್‌ಎಂ ರೇಡಿಯೊ ಮಾತ್ರ ಚೆನ್ನಾಗಿಲ್ಲ. ಮನೆಯ ಒಳಗೆ ಸರಿಯಾಗಿ ಕೆಲಸ ಮಾಡುವುದಿಲ್ಲ. ಎಂದರೆ ಅದರ ಗ್ರಾಹಕ ಅಷ್ಟು ಶಕ್ತಿಶಾಲಿಯಾಗಿಲ್ಲ ಎನ್ನಬಹುದು.

ಮಾದರಿ ಸಿಆರ್‌ಸಿಬಿ 2093ಯನ್ನು ಚಿಕ್ಕ ಮತ್ತು ಸಿಆರ್‌ಸಿಬಿ 2094ನ್ನು ದೊಡ್ಡ ಎಂದು ಕರೆಯೋಣ. ಈ ರೀತಿ ಹೆಸರಿಡಲು ಕಾರಣ ಅವುಗಳ ಪರದೆಯ ಗಾತ್ರ. ಚಿಕ್ಕ ಫೋನ್‌ನಲ್ಲಿ ವೀಡಿಯೊ ಪ್ಲೇ ಚೆನ್ನಾಗಿಲ್ಲ. ಹೈಡೆಫಿನಿಶನ್ ವೀಡಿಯೊ ಸರಿಯಾಗಿ ಪ್ಲೇ ಆಗುವುದಿಲ್ಲ. ಕೆಲವೊಮ್ಮ ಮಧ್ಯೆ ಮಧ್ಯೆ ನಿಂತು ನಿಂತು ಸಾಗುತ್ತದೆ ((jerky). ವೀಡಿಯೊದ ಗುಣಮಟ್ಟವೂ ಚೆನ್ನಾಗಿಲ್ಲ. ಮಧ್ಯೆ ಮಧ್ಯೆ ಜಾಳುಜಾಳಾಗಿ ಕಾಣಿಸುತ್ತದೆ (pixelation).

ಕೆಲವು ಆಟ ಆಡುವಾಗಲೂ ಇದೇ ರೀತಿಯ ಅನುಭವ ಆಗುತ್ತದೆ. ದೊಡ್ಡ ಫೋನಿನಲ್ಲಿ ಇಂತಹ ಅನುಭವ ಆಗಲಿಲ್ಲ. ಎರಡರ ಸಿಪಿಯು ಮತ್ತು ಅವುಗಳ ವೇಗ ಒಂದೇ ಆಗಿದ್ದರೂ ಮೆಮೊರಿ ಸ್ವಲ್ಪ ಜಾಸ್ತಿ ಇರುವುದರಿಂದ ದೊಡ್ಡ ಫೋನ್ ಸ್ವಲ್ಪ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂಬುದು ಸ್ವಲ್ಪ ಆಶ್ಚರ್ಯ. ಪರದೆಯ ಗುಣಮಟ್ಟವೂ ಇದಕ್ಕೆ ಕಾರಣ ಇರಬಹುದು.

ಫೋನ್‌ಗಳ ರಚನೆಯ ಗುಣಮಟ್ಟ ಚೆನ್ನಾಗಿದೆ. ಎರಡು ಫೋನ್‌ಗಳನ್ನೂ ಕೈಯಲ್ಲಿ ಹಿಡಿದಾಗಿನ ಅನುಭವ ಪರವಾಗಿಲ್ಲ. ಎರಡರ ನಡುವೆ ಹೋಲಿಸಿದರೆ ದೊಡ್ಡ ಫೋನಿನ ಅನುಭವ ಚಿಕ್ಕದಕ್ಕಿಂತ ಚೆನ್ನಾಗಿದೆ. ಆದರೆ ತೂಕ ಸ್ವಲ್ಪ ಜಾಸ್ತಿ ಅನ್ನಿಸುತ್ತದೆ.

ಚಿಕ್ಕ ಫೋನಿನಲ್ಲಿ ಬಳಸಿರುವುದು ಆಂಡ್ರಾಯಿಡ್ 4.0 (ಐಸ್‌ಕ್ರೀಂ). ಸಹಜವಾಗಿಯೇ ಇದರಲ್ಲಿ ಕನ್ನಡದ ಬೆಂಬಲ ಏನೇನೂ ಇಲ್ಲ. ಕ್ರೋಮಾದವರು ಅದನ್ನು ಸೇರಿಸಿಯೂ ಇಲ್ಲ. ದೊಡ್ಡ ಫೋನಿನಲ್ಲಿ ಬಳಸಿರುವುದು ಆಂಡ್ರಾಯಿಡ್ 4.1 (ಜೆಲ್ಲಿಬೀನ್).ಬ್ರೌಸರಿನಲ್ಲಿ ಕನ್ನಡ ಪಠ್ಯದ ರೆಂಡರಿಂಗ್ ಇದೆ. ಅಂದರೆ ಕನ್ನಡ ಜಾಲತಾಣಗಳನ್ನು ವೀಕ್ಷಿಸಬಹುದು.

ಜಾಲತಾಣ ಕನ್ನಡ ಯುನಿಕೋಡ್‌ನಲ್ಲಿರುವುದು ಅಗತ್ಯ. ಆದರೆ ಇತರೆ ಆಪ್‌ಗಳಲ್ಲಿ ಕನ್ನಡದ ರೆಂಡರಿಂಗ್ ಸರಿಯಿಲ್ಲ. ಕನ್ನಡದ ಕೀಲಿಮಣೆ ಹಾಕಿಕೊಂಡರೂ ಕನ್ನಡದಲ್ಲಿ ಬೆರಳಚ್ಚು ಮಾಡಿದರೆ ಗುಣಿತಾಕ್ಷರಗಳು ಸರಿಯಾಗಿ ಜೋಡಿಕೊಳ್ಳುವುದಿಲ್ಲ.

ಕ್ರೋಮಾದವರು ಒಂದು ವಿಚಿತ್ರ ಕೆಲಸ ಮಾಡಿದ್ದಾರೆ. ದೊಡ್ಡ ಫೋನಿನ ಪರದೆ ದೊಡ್ಡದಿರುವುದರಿಂದ ಸಹಜವಾಗಿಯೇ ಅದಕ್ಕೆ ಹೆಚ್ಚಿಗೆ ಬ್ಯಾಟರಿ ಬೇಕು. ಆದರೆ ಕ್ರೋಮಾದವರು ಚಿಕ್ಕ ಫೋನಿಗೆ ಹೆಚ್ಚು ಶಕ್ತಿಯ ಬ್ಯಾಟರಿ ಮತ್ತು ದೊಡ್ಡ ಫೋನಿಗೆ ಕಡಿಮೆ ಶಕ್ತಿಯ ಬ್ಯಾಟರಿ ಹಾಕಿದ್ದಾರೆ. ಅಂದರೆ ದೊಡ್ಡ ಫೋನಿನ ಬ್ಯಾಟರಿ ಬೇಗನೆ ಖಾಲಿಯಾಗುತ್ತದೆ.
ಗುಣಮಟ್ಟ ಮತ್ತು ಕೊಡುವ ಹಣಕ್ಕೆ ತುಲನೆ ಮಾಡಿದರೆ ಎರಡು ಫೋನ್‌ಗಳೂ ತೃಪ್ತಿ ನೀಡುವುದಿಲ್ಲ. ಆಂಡ್ರಾಯಿಡ್ ಕಾಲಕಾಲಕ್ಕೆ ನವೀಕರಣೆಗೊಳ್ಳುತ್ತದೆಯೇ ಇಲ್ಲವೇ ತಿಳಿದಿಲ್ಲ.

ಗ್ಯಾಜೆಟ್ ಸಲಹೆ
ಎ.ಪಿ. ಸುಬ್ರಹ್ಮಣ್ಯ ಅವರ ಪ್ರಶ್ನೆ:
ನಿಕಾನ್ ಕೂಲ್ ಪಿಕ್ಸ್ L120  ಮತ್ತು P100 -ಇವೆರಡರಲ್ಲಿ ಯಾವುದು ಉತ್ತಮ? ನಾನು ಹವ್ಯಾಸಿ.
ಉ:   P100
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT