ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡಸರ ಹಕ್ಕುಗಳ ಸಂಸ್ಥೆಯ ಅತಿರೇಕಗಳು

Last Updated 23 ಜೂನ್ 2013, 19:59 IST
ಅಕ್ಷರ ಗಾತ್ರ

ಮಹಿಳಾ ಹಕ್ಕುಗಳಿಗಾಗಿ ಹೋರಾಡುವ ಸಂಸ್ಥೆಗಳು ಇಂದು ಸಾಕಷ್ಟಿವೆ. ಹಾಗೆಯೇ ಸ್ತ್ರೀವಾದದ ವಿರುದ್ಧ ಪುರುಷವಾದವನ್ನು ಮಂಡಿಸುವ ಸಂಸ್ಥೆಯೊಂದು ಬೆಂಗಳೂರಿನಲ್ಲಿ ಇದೆ. ಭಾರತದ ಅತಿ ದೊಡ್ಡ ಗಂಡಸರ ಹಕ್ಕುಗಳ ಸಂಸ್ಥೆ ಕೋರಮಂಗಲದಲ್ಲಿ ಕಚೇರಿ ತೆರೆದು ಬಿರುಸಾಗಿ ಕೆಲಸ ಮಾಡುತ್ತಿದೆ.
ಸೇವ್ ಇಂಡಿಯನ್ ಫ್ಯಾಮಿಲಿ ಫೌಂಡೇಶನ್ ಎಂಬ ಸಂಸ್ಥೆ ಸ್ಥಾಪನೆಯಾದದ್ದು 2003ರಲ್ಲಿ ಡೊಮೆಸ್ಟಿಕ್ ವಯೋಲೆನ್ಸ್ ಕಾಯ್ದೆಯಡಿ ಆಗುತ್ತಿದ್ದ ಅನ್ಯಾಯವನ್ನು ಪ್ರತಿಭಟಿಸಲು ಸಜ್ಜಾದ ಸಂಸ್ಥೆ ದೊಡ್ಡದಾಗಿ ಬೆಳೆದು ಈಗ ನೂರಾರು ಸದಸ್ಯರನ್ನು ಹೊಂದಿದೆ.

ಕೇವಲ ಐದಾರು ಜನ ಸೇರಿ ಪ್ರಾರಂಭಿಸಿದ ಈ ಸಂಸ್ಥೆಯನ್ನು ಮಾಧ್ಯಮದವರು `ಹೆಂಡತಿ ಪೀಡಿತರ ಸಂಘ' ಎಂದು ಕರೆದದ್ದು ಉಂಟು.  ವರದಕ್ಷಿಣೆಗಾಗಿ ಕಿರುಕುಳ ಕೊಡುತ್ತಿದ್ದಾರೆ ಎಂದು ಹೆಂಡತಿ ದೂರು ಕೊಟ್ಟ ಕೂಡಲೇ ಗಂಡ ಮತ್ತು ಆತನ ಅಪ್ಪ, ಅಪ್ಪ, ಸೋದರ ಸೋದರಿಯರನ್ನು ಪೊಲೀಸರು ಬಂಧಿಸುವ  ಕ್ರಮವನ್ನು ಪ್ರತಿಭಟಿಸಲು ಈ ಸಂಸ್ಥೆ ಮುಂದಾಯಿತು. ಸುಳ್ಳು ಆಪಾದನೆಗೆ ಒಳಗಾದವರನ್ನು ಬೆಂಬಲಿಸುವ, ಅವರಿಗೆ ಕಾನೂನು ಸಲಹೆ ಕೊಡುವ ಈ ಸಂಸ್ಥೆಯ ಪ್ರಭಾವ ಇಂದು ಉತ್ತರ ಭಾರತದ ಹಲವು ನಗರ ಪಟ್ಟಣಗಳಿಗೂ ಹರಡಿದೆ. ಇದರಿಂದ ಒಂದಂತೂ ಸ್ಪಷ್ಟ; ವರದಕ್ಷಿಣೆ ವಿರುದ್ಧದ ಕಾನೂನು ಎಷ್ಟು ಅಗತ್ಯವೋ, ಅದರ ದುರುಪಯೋಗ ಮಾಡುವವರನ್ನು ಮಟ್ಟ ಹಾಕುವುದೂ ಅಷ್ಟೇ ಅಗತ್ಯವಾಗಿದೆ. 

ಆದರೆ ಕೆಲವು ಪ್ರಕರಣಗಳಲ್ಲಿ ಯಶಸ್ಸು ಪಡೆದಿರುವ ಈ ಸಂಸ್ಥೆಗೆ ಹತ್ತು ವರ್ಷದಲ್ಲಿ ಏನಾಗಿದೆ ನೋಡಿ. ಪದಾಧಿಕಾರಿಗಳು ಹೇಳುತ್ತಿರುವುದು ಕೇಳಿ:  ಹುಡುಗಿಯರು ಆರು ಗಂಟೆಯ ಮೇಲೆ ಮನೆಯಿಂದ ಆಚೆ ಹೋಗಬಾರದು. ಸ್ಕರ್ಟ್ ರೀತಿಯ ಉಡುಪುಗಳನ್ನು ಧರಿಸಬಾರದು. ಸರ್ಕಾರ ಜಾರಿಗೊಳಿಸುತ್ತಿರುವ ಮಹಿಳಾ ಸಬಲೀಕರಣದ ಕಾರ್ಯಕ್ರಮಗಳು ರದ್ದಾಗಬೇಕು. ಏಕ್ತ ಕಪೂರ್ ತಯಾರಿಸುವ, ಅನುಕೂಲಸ್ಥರ ಮನೆಗಳನ್ನು ತೋರಿಸುವ ಟಿವಿ ಕಾರ್ಯಕ್ರಮಗಳು ಬಿತ್ತರವಾಗಬಾರದು. (ಇಂಥ ಸೀರಿಯಲ್ ಗಳನ್ನು ನೋಡಿ ಹೆಂಡತಿಯರು ಮದುವೆಯೆಂದರೆ ಸುಖದ ಸುಪ್ಪತ್ತಿಗೆ ಎಂದು ತಿಳಿದು, ಹಾಗಿರದಿದ್ದಾಗ ತಪ್ಪು ದಾರಿ ಹಿಡಿಯುತ್ತಾರಂತೆ!)

ಕಾನೂನು ಲಿಂಗಭೇದವಿಲ್ಲದೆ ವರ್ತಿಸಬೇಕು ಎಂಬ ಒಂದು ಒತ್ತಾಯ ಬಿಟ್ಟರೆ, ಇಂಥ ಗುಂಪುಗಳು ಮಾಡುವ ಬೇರೆ ಯಾವುದೇ ಬೇಡಿಕೆ ಚರ್ಚೆಗೂ ಯೊಗ್ಯವಲ್ಲ. ಅತಿ ಉತ್ಪ್ರೇಕ್ಷೆಯ ಬೇಡಿಕೆ ಸರ್ಕಾರದ ಮುಂದಿಟ್ಟರೆ ಅದರಲ್ಲಿ ಒಂದಿಷ್ಟಾದರೂ ಗಿಟ್ಟಬಹುದು ಎಂಬ ಧೋರಣೆ ಸಂಸ್ಥೆಯದ್ದು. 
 
ಸೇವ್ ಇಂಡಿಯನ್ ಫ್ಯಾಮಿಲಿ ಫೌಂಡೇಶನ್ ಎಂದು ಪ್ರಾರಂಭವಾದ, ಕುಟುಂಬವನ್ನು ಉಳಿಸಲು ಶ್ರಮಿಸುವ ಮೂಲ ಉದ್ದೆೀಶದ ಸಂಸ್ಥೆಯ ಪದಾಧಿಕಾರಿಗಳು ಕುಟುಂಬ ವ್ಯವಸ್ಥೆಯನ್ನೇ ಇಂದು ಧಿಕ್ಕರಿಸಿದ್ದಾರೆ. ಅವರ ಸದಸ್ಯರಲ್ಲಿ ವಿಚ್ಛೇದನ ಪಡೆದವರು ಹಲವರು. ಅವರಿಗೆ ಮರುಮದುವೆ  ಆಗಬೇಡಿ ಎಂದು ಬುದ್ಧಿವಾದ ಹೇಳುತ್ತಾರೆ. ಸಂಸ್ಥೆ ನಡೆಸುವ ಸಹಾಯವಾಣಿಗೆ ವಾರದಲ್ಲಿ ಕನಿಷ್ಠ 10 ಕರೆಗಳು ಬರುತ್ತವಂತೆ. ಕೇಸ್ ಹಾಕಿ ತೊಂದರೆ ಕೊಡುವ ಹೆಂಡತಿಯರ ಜೊತೆ ಹೇಗೆ ವರ್ತಿಸಬೇಕು ಎಂದು ಕಲಿಸಿಕೊಡುವುದು ಈ ಸಹಾಯವಾಣಿಯ ಒಂದು ಸೇವೆ.

ಇದರ ಸದಸ್ಯರು ಹಲವರು ದೊಡ್ಡ ಹುದ್ದೆಗಳಲ್ಲಿದ್ದಾರೆ. ಐಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಬುದ್ಧಿವಂತರು. ಆದರೆ ತಮ್ಮ ಚಳುವಳಿಗೆ ಒಂದು ಸುಸಂಬದ್ಧ ಸಿದ್ಧಾಂತ ಕಟ್ಟಿಕೊಳ್ಳಲಾರದೆ, ಸ್ತ್ರೀ ದ್ವೇಷವನ್ನೇ  ತಮ್ಮ ಲಾಂಛನವನ್ನಾಗಿಸಿಕೊಂಡಿದ್ದಾರೆ.     

ಹೀಗೇಕಾಗಿರಬಹುದು? ಕೆಲವು ಪದಾಧಿಕಾರಿಗಳು ಜೈಲು ಅನುಭವಿಸಿ, ಪೋಲೀಸರ ಜೊತೆ ಸೆಣಸಾಡಿ ಬೇಸರಗೊಂಡ ಕಾರಣವೋ ಏನೋ ತುಂಬ ಜಿಗುಪ್ಸೆಯ ನಿಲುವುಗಳನ್ನು ತಳೆಯುತ್ತಿರಬಹುದೇ. ಮಹಿಳೆಯರ ಬಗ್ಗೆ ಕೀಳಾಗಿ ಮಾತಾಡುವುದಕ್ಕೆ ಇದು ಕಾರಣವೇ? ಭ್ರೂಣ ಹತ್ಯೆಯ ಸರ್ಕಾರ ವಿರುದ್ಧ ರೂಪಿಸಿರುವ ಕಾನೂನು ಗಂಡು ವಿರೋಧಿ ಎಂದು ಬ್ಲಾಗ್ ಮಾಡುತ್ತಾರೆ. (2011 ಗಣತಿಯ ಪ್ರಕಾರ ಭಾರತದಲ್ಲಿ ಇಂದು ಸಾವಿರ ಗಂಡಿಗೆ ಇರುವುದು ಕೇವಲ 940 ಹೆಣ್ಣು. ಹರಿಯಾಣದಲ್ಲಿ ಪ್ರಮಾಣ ಇನ್ನೂ ಚಿಂತಾಜನಕವಾಗಿದೆ. ಆ ರಾಜ್ಯದಲ್ಲಿ ಸಾವಿರ ಗಂಡಿಗೆ ಕೇವಲ 877 ಹೆಣ್ಣು) 
ಹೀಗಿದ್ದರೂ ಇಂಥ ಸಂಸ್ಥೆಯವರು ಎಲ್ಲ ಕಾನೂನುಗಳಲ್ಲೂ ಗಂಡು-ವಿರೋಧಿ ಸಂಚನ್ನು ಕಾಣುತ್ತಾರೆ. ನೊಂದಿದ್ದಾರೆ ಅನ್ನುವ ಕಾರಣಕ್ಕೆ ನಿಜವನ್ನು ಮರೆಮಾಚಬಹುದೇ? ಜವಾಬ್ದಾರಿಯಿಲ್ಲದೆ ಮಾತಾಡಬಹುದೇ? ಸಂಸ್ಥೆಯ ಕೆಲವರು ಎಷ್ಟು ಕಹಿಯಾಗಿದ್ದಾರೆ ಅಂದರೆ ಅತ್ಯಾಚಾರ, ಲೈಂಗಿಕ ಕಿರುಕುಳದಂಥ ವಿಷಯಗಳ ವಿರುದ್ಧವೂ ಕಾನೂನಿರಬಾರದು ಅನ್ನುತ್ತಾರೆ.

  ಸುಮಾರು ಎಂಟು ವರ್ಷದಿಂದ ಈ ಸಂಸ್ಥೆಯ ಚಟುವಟಿಗೆ ಗಮನಿಸುತ್ತಿದ್ದ ವರದಿಗಾರ್ತಿ ಸ್ಯಾವಿ ಕರ್ನೆಲ್ ಮೊನ್ನೆ ಅವರನ್ನು ಭೇಟಿ ಮಾಡಿ ಅವರ ಮಾತಿನ ವರಸೆಯಿಂದ ನಿರಾಸೆಗೊಂಡು ಕಚೇರಿಗೆ ಮರಳಿದರು. `ನೀವು ಮಹಿಳಾ ವಿರೋಧಿಯೇ?' ಎಂದು ವರದಿಗಾರ್ತಿ ಕೇಳಿದರೆ' ಹೌದು ನಾವು ಮಹಿಳಾ ವಿರೋಧಿ' ಎಂದು ರಾಜಾರೋಷವಾಗಿ ಹೇಳಿದರು. ನಾನು ಸಂಪಾದಿಸುವ ವಾರಪತ್ರಿಕೆಯಲ್ಲಿ ಇವರ ಕಥೆಯನ್ನು ಕೊಲವೇರಿ ಕ್ಲಬ್ ಎಂದು ಶೀರ್ಷಿಕೆ ಕೊಟ್ಟು ಪ್ರಕಟಿಸಿದೆವು. (ಕೊಲವೇರಿ ಹಾಡು ಜನಪ್ರಿಯವಾಗಿದ್ದರಿಂದ ಆ ಪದವನ್ನು ಬಳಸಿದೆವು. ಕೊಲವೇರಿ ತಮಿಳು ಪದ. ಅದರ ಅರ್ಥ `ಕೊಂದು ಹಾಕಿಬಿಡುವಷ್ಟು ಕೋಪ'!) ಪದಾಧಿಕಾರಿಗಳು ಸ್ಯಾವಿ ಮಾಡಿದ ವರದಿಯನ್ನು ಓದಿದ ಕೂಡಲೇ ಹೌಹಾರಿದರು. ಅವರು ಇಂಥ ಮಾತುಗಳನ್ನು ಆಡೇ ಇಲ್ಲ ಎಂದು ವಾದಿಸತೊಡಗಿದರು. (ಅವರ ಬಾಗ್ಲ್‌ಗಳಲ್ಲಿ ಇಂಥ ವಾದಗಳೇ ರಾರಾಜಿಸುತ್ತಿವೆ!)

  ಮಾಧ್ಯಮ ಅಂದರೆ ಪಬಿಕ್ಲ್ ರಿಲೇಶನ್ಸ್ ಆಗಿರಬೇಕು ಎಂದು ಅಪೇಕ್ಷಿಸುವ ಈ ಸಂಸ್ಥೆಯವರು ವರದಿಯ ವಿಮರ್ಶಾತ್ಮಕ ಧ್ವನಿಯಿಂದ ಆಘಾತಗೊಂಡಂತೆ ಪ್ರತಿಕ್ರಿಯಿಸಿದರು. ಗಂಟೆಗೊಂದರಂತೆ ಸದಸ್ಯರಿಂದ ಇಮೇಲ್ ಪತ್ರಿಕೆಯ ಕಚೇರಿಗೆ ಬರುವಂತೆ ಮಾಡಿದರು. ಇಂಟರ್ನೆಟ್‌ನಿಂದ ವರದಿ ತೆಗೆಯಬೇಕೆಂದು ಎರಡು ಗಂಟೆಯ ಗಡುವು ಕೊಟ್ಟರು. ನಾವು ನಿರಾಕರಿಸಿದೆವು.

ಗಂಡಸರ ಹಕ್ಕಿನ ವಿಷಯಗಳನ್ನು ಜನ ಗಂಭೀರವಾಗಿ ಪರಿಗಣಿಸಬೇಕಾದರೆ ಇಂಥ ಸಂಸ್ಥೆಗಳು ಹೊಣೆಗಾರಿಕೆಯಿಂದ ನಡೆದುಕೊಳ್ಳಬೇಕು. ಕೊಲವೆರಿ ಕಬ್ಲ್ ಆದಷ್ಟೂ ಅವರ ಕ್ರೆಡಿಬಿಲಿಟಿ ಕಡಿಮೆಯಾಗಿಯೇ ಇರುತ್ತದೆ.

ಅಯ್ಯೋ ರಾಮ!
ಭಾರತ್ ನಿರ್ಮಾಣ್ ಟಿವಿ ಜಾಹಿರಾತುಗಳನ್ನು ನೀವು ನೋಡಿರಬಹುದು. ಕಾಂಗ್ರೆಸ್ ಪಕ್ಷದ ಸಾಧನೆಗಳಿಗೆ ಪ್ರಚಾರ ಕೊಡುವ ಸರಣಿ ಅದು. ಉತ್ತರಾಖಂಡದಲ್ಲಿ ಆಗಿರುವ ಅನಾಹುತವನ್ನು ನೋಡಲು ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ಹೊರಟಿದ್ದಾರಂತೆ. ಅಲ್ಲಿನ ಚಿತ್ರಗಳನ್ನು ತಂದು ಇನ್ನೊಂದು ಸರಣಿ ಮಾಡಬಹುದು ಎಂದು ಕುಹಕಿಗಳು ಆಡಿಕೊಳ್ಳುತ್ತಿದ್ದಾರೆ. ಅದರ ಹೆಸರು? ಭಾರತ ನಿರ್ನಾಮ್!


ಎಸ್‌ಐಎಫ್‌ಎಫ್ ಸದಸ್ಯರ ರ‌್ಯಾಲಿಎಸ್‌ಐಎಫ್‌ಎಫ್ ಸದಸ್ಯರ ರ‍್ಯಾಲಿ


ವರದಕ್ಷಿಣೆ ವಿರೋಧಿ ಕಾನೂನಿನಿಂದ ಶೋಷಣೆಗೊಳಗಾದ ಮಹಿಳೆಯರಿಂದ ಪ್ರತಿಭಟನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT