ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿರಯೌವನದ ಗುಟ್ಟು

Last Updated 15 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಜಗತ್ತು ಬದಲಾಗುತ್ತಿರುವ ರೀತಿ ಮತ್ತು ವೇಗಗಳು ದಿಗ್ಭ್ರಮೆ ಹುಟ್ಟಿ­ಸುತ್ತವೆ. ನಾವು ಯಾವುದನ್ನೂ ಕಲ್ಪನೆ ಕೂಡ ಮಾಡಲು ಸಾಧ್ಯವಿಲ್ಲ ಎಂದುಕೊಂಡಿದ್ದೆವೋ ಅವೆಲ್ಲ ಇಂದು ವಾಸ್ತವ, ಸಾಧಾರಣವಾಗಿ ಬಿಟ್ಟಿವೆ. ಅಂತೆಯೇ ನಮ್ಮ ನಾಳೆಗಳು ಹೀಗೆಯೇ ಇರಬಹುದು ಎಂದು ಹೇಳಲಾಗದಷ್ಟು ರಭಸ ಈ ಪ್ರಪಂಚದ್ದು!

ಹತ್ತೊಂಬತ್ತನೇ ಶತಮಾನದ ಕೊನೆಯ ಭಾಗದಲ್ಲಿ ಒಂದು ಮೆಥೋಡಿಸ್ಟ ಚರ್ಚ್‌ನಲ್ಲಿ ಒಂದು ಗೋಷ್ಠಿ ಏರ್ಪಟ್ಟಿತ್ತು. ಅದರಲ್ಲಿ ಭಾಗವಹಿಸಿದವರು ಮುಂದೆ ಜಗತ್ತು ಹೇಗೆ ಬದಲಾಗಬಹುದು ಮತ್ತು ಅದಕ್ಕೆ ತಕ್ಕಂತೆ ಚರ್ಚುಗಳ ವಿಧಿ ವಿಧಾನಗಳು ಹೇಗೆ ಹೊಂದಿಕೊಳ್ಳಬೇಕು ಎಂಬುದರ ಬಗ್ಗೆ ತಮ್ಮ ತಮ್ಮ ಚಿಂತನೆಗಳನ್ನು ಮಂಡಿಸುತ್ತಿದ್ದರು.

  ಆಗ ಕಿರಿಯ ಪಾದ್ರಿ­ಯೊಬ್ಬರು ಬದಲಾಗುತ್ತಿರುವ ತಂತ್ರಜ್ಞಾನದ ಬಗ್ಗೆ, ವಿಜ್ಞಾನದ ಆವಿಷ್ಕಾರಗಳ ಬಗ್ಗೆ ಬೆರಗನ್ನು ಹಂಚಿಕೊಳ್ಳುತ್ತ, ಇದು ಹೀಗೆಯೇ ಮುಂದುವರೆದರೆ ಮನುಷ್ಯ ಗಾಳಿಯಲ್ಲಿ ಹಾರಾಡುವ ದಿನಗಳು ದೂರವಿಲ್ಲ ಎಂದರು. ಇನ್ನು ಮುಂದೆ ಕುದುರೆ ಸವಾರಿ ಯಾರು ಮಾಡಿಯಾರು ಎಂದು ತಮಾಷೆ ಮಾಡಿದರು. ಅಲ್ಲಿದ್ದ ಹೆಚ್ಚಿನ ಹಿರಿಯರಿಗೆ ಈ ಮಾತು ಒಪ್ಪಿತವಾದಂತೆ ತೋರಲಿಲ್ಲ. ಅದರಲ್ಲಿ ಒಬ್ಬ ಹಿರಿಯ ಪಾದ್ರಿ ಎದ್ದು ನಿಂತು ತೀವ್ರವಾಗಿ ಪ್ರತಿಭಟಿಸಿದರು.

ಇದೆಲ್ಲ ಧರ್ಮಲಂಡರ ಮಾತು. ಆಕಾಶದಲ್ಲಿ ಹಾರಾಡುವುದು ಕೇವಲ ದೇವತೆಗಳಿಗೆ ಮಾತ್ರ ಸಾಧ್ಯ. ಮನುಷ್ಯರೂ ಹಾರಾಡಬೇಕೆಂಬುದು ಭಗವಂತನ ಇಚ್ಛೆಯಾ­ಗಿದ್ದಲ್ಲಿ ಆತ ಅವರಿಗೆಲ್ಲ ರೆಕ್ಕೆಗಳನ್ನು ಕೊಡುತ್ತಿ­ರಲಿಲ್ಲವೇ? ಅವರಿಗೆ ಕೋಪ ತಡೆದುಕೊಳ್ಳುವುದು ಅಸಾಧ್ಯವಾಗಿ ಸಭೆಯಿಂದ ಹೊರಗೆ ಹೊರಟರು. 

ಹೋಗುವಾಗ ಅವರಿಗೆಂದೇ ಕಾದು ಕುಳಿತಿದ್ದ ತಮ್ಮ ಇಬ್ಬರು ಗಂಡು­ಮಕ್ಕಳನ್ನು ಎಳೆದುಕೊಂಡು ಹೋದರು.  ಹಿರಿಯ ಪಾದ್ರಿಯ ಹೆಸರು ಬಿಷಪ್ ರೈಟ್ ಮತ್ತು ಮಕ್ಕಳ ಹೆಸರುಗಳು ಆರ್ವಿಲ್ ರೈಟ್ ಮತ್ತು ವಿಲ್ಬರ್ ರೈಟ್. ತಮ್ಮ ಊಹೆ ಸರಿ.  ಇದೇ ಹುಡುಗರು ಬೆಳೆದು ದೊಡ್ಡವರಾಗಿ ೧೯೦೩ ರ ಡಿಸೆಂಬರ್ ೧೭ ರಂದು ಯಾವುದನ್ನು ತಮ್ಮ ತಂದೆ ಅಸಾಧ್ಯವೆಂದು ಸಾಧಿಸಿದ್ದರೋ ಅಂಥ ಪ್ರಪ್ರಥಮ ಮಾನವ ವಿಮಾನಯಾನವನ್ನು ಸಾಧಿಸಿ ತೋರಿಸಿದರು!

ಕಳೆದ ರಾತ್ರಿಯೇ ನಿನ್ನೆ ಮುಗಿದು­ಹೋಯಿತು. ನಾಳೆ, ನಿನ್ನೆಯ ಮುಂದುವರಿಕೆ­ಯಾಗಲಾರದು. ನಾವು ಹಿನ್ನಡೆದು ಭವಿಷ್ಯವನ್ನು ಸೇರಲಾರೆವು. ಕಾರನ್ನು ನಡೆಸುವಾಗ ಹಿಂದಿನದನ್ನು ನೋಡಲು ಕನ್ನಡಿಯನ್ನಿಟ್ಟಿರುತ್ತಾರೆ. ಮುಂದೆ ಹೋಗುವಾಗ ಆಗಾಗ ಹಿಂದೆ ನೋಡುವುದು ವಾಸಿ. ಆದರೆ ಬರೀ ಹಿಂದೆಯೇ ನೋಡುತ್ತಿದ್ದರೆ ಮುಂದೆ ಅಪಘಾತವಾಗುವುದು ಖಂಡಿತ. ನಮ್ಮ ಭೂತಕಾ­ಲದಲ್ಲಿ ತಪ್ಪಾಗಿರಬಹುದು, ಸೋಲುಂಟಾಗಿರಬಹುದು.

ನಮ್ಮ ಹಿಂದಿನ ತಪ್ಪುಗಳಿಗೆ ಸ್ಮಾರಕಗಳನ್ನು ಕಟ್ಟಿಕೊಂಡು ಅವುಗಳಲ್ಲೇ ವಾಸಿಸುವುದು ತಪ್ಪು. ನಮ್ಮ ಆಗಿಹೋದ ತಪ್ಪುಗಳ ಶವಗಳಿಗೆ ಔಷಧಿ ಹಾಕಿ ಸಂರಕ್ಷಿಸು­ವುದಕ್ಕಿಂತ ಸುಟ್ಟು­ಬಿಡುವುದೇ ಲೇಸು. ನಾಳೆಯನ್ನು ಅವಕಾಶದ ಕಣ್ಣುಗಳಿಂದ, ಆಶಾವಾದದಿಂದ, ಸಂತೋಷದಿಂದ ಸ್ವಾಗತಿ­ಸಿ­ದಾಗ ನಾವು ಬೇಗ ಹಳಬರಾ­ಗುವುದು ತಪ್ಪುತ್ತದೆ.

ಯಾರು ತುಂಬಾ ಭೂತಕಾಲದ ಬಗ್ಗೆಯೇ ಮಾತನಾಡು­ತ್ತಾರೋ ಅವರು ಹಿಂದೆಯೇ ಉಳಿಯುತ್ತಾರೆ. ಯಾರು ವರ್ತ­ಮಾನದ ಬಗ್ಗೆಯೇ ಚಿಂತಿಸು­ತ್ತಾರೋ ಅವರು ಪ್ರಸ್ತುತರಾಗಿರುತ್ತಾರೆ. ಯಾರು ಸದಾಕಾಲ ಭವಿಷ್ಯದ ಬಗ್ಗೆ ಆಸೆಯಿಂದ ಶ್ರಮಿಸುತ್ತಾರೋ ಅವರು ಬೆಳೆ­ಯುತ್ತಾರೆ.

ಅದಕ್ಕೇ ದಾರ್ಶನಿಕ­ರೊಬ್ಬರು ಹೇಳಿದ್ದಾರೆ, ‘ಎಲ್ಲಿಯವರೆಗೂ ಮನುಷ್ಯನ ಮನಸ್ಸಿನಲ್ಲಿ ಕನಸುಗಳಿ­ವೆಯೋ ಮತ್ತು ಆ ಕನಸುಗಳ ಸ್ಥಳದಲ್ಲಿ ಪಶ್ಚಾತ್ತಾಪ, ವಿಷಾದಗಳು ಆವರಿಸಿಕೊ­ಳ್ಳುವು­ದಿಲ್ಲವೋ, ಅಲ್ಲಿಯವರೆಗೆ ಅವನಿಗೆ ವಯಸ್ಸಾಗುವುದಿಲ್ಲ. ಇದು ಚಿರಯೌವನದ ಗುಟ್ಟು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT