ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತ್ಯತೀತ ದೇಶದ ಧಾರ್ಮಿಕ ಕಾನೂನುಗಳು!

Last Updated 2 ಏಪ್ರಿಲ್ 2017, 20:24 IST
ಅಕ್ಷರ ಗಾತ್ರ

ಗೋಹತ್ಯೆಗೆ ಸಂಬಂಧಿಸಿದಂತೆ ಗುಜರಾತ್ ವಿಧಾನಸಭೆಯು ಅಸಾಮಾನ್ಯ ಮಸೂದೆಯೊಂದನ್ನು ಅನುಮೋದಿಸಿದೆ. ಪ್ರಾಣಿ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ತಂದಿರುವ ಸರ್ಕಾರ, ಎತ್ತು ಮತ್ತು ಆಕಳನ್ನು ಕೊಂದವರಿಗೆ ಶಿಕ್ಷೆಯ ಪ್ರಮಾಣವನ್ನು ಬದಲಾಯಿಸಿದೆ.

ಈ ಕೃತ್ಯಕ್ಕೆ ಈಗ ಜೀವಾವಧಿ ಶಿಕ್ಷೆ ಮತ್ತು ಕನಿಷ್ಠ 10 ವರ್ಷಗಳ ಶಿಕ್ಷೆ ನಿಗದಿ ಮಾಡಲಾಗಿದೆ. ಅಂದರೆ, ಮನುಷ್ಯನನ್ನು ಹಾಗೂ ಪ್ರಾಣಿಯೊಂದನ್ನು ಕೊಲ್ಲುವುದು ಸಮಾನ ಅಪರಾಧಗಳು ಎಂದು ಗುಜರಾತ್ ತೀರ್ಮಾನಿಸಿದೆ. ಗುಜರಾತನ್ನು ಸಸ್ಯಾಹಾರಿ ರಾಜ್ಯವನ್ನಾಗಿಸುವ ಉದ್ದೇಶ ತಮ್ಮದು ಎಂದು ಅಲ್ಲಿನ ಮುಖ್ಯಮಂತ್ರಿ ಹೇಳಿದ್ದಾರೆ. ತುಸು ಅಸಾಮಾನ್ಯ ಎನ್ನಬಹುದಾದ ರೀತಿಯಲ್ಲಿ ಅವರು, ‘ನಾನು ಯಾವುದೇ ಆಹಾರ ಪದ್ಧತಿಯ ವಿರೋಧಿಯಲ್ಲ’ ಎಂದೂ ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಹೊರಗಿನ ವ್ಯಕ್ತಿಯೊಬ್ಬ ಹೀಗೆ ಕೇಳಬಹುದು: ಆಹಾರ ಕ್ರಮಕ್ಕೆ ವಿರೋಧವಿಲ್ಲ ಎಂದಾದರೆ, ಮುಖ್ಯಮಂತ್ರಿಯವರ ಪಕ್ಷ ಬಿಜೆಪಿಗೆ ಕೂಡ ಗೋಮಾಂಸದ ಬಗ್ಗೆ ತಕರಾರು ಇಲ್ಲವೇ?

‘ತಕರಾರು ಇದೆ’ ಎಂಬುದೇ ಇದಕ್ಕೆ ಉತ್ತರವಾಗಿರುತ್ತದೆ. ಈ ರೀತಿಯ ತಿದ್ದುಪಡಿ ತಂದಿರಲು ಕಾರಣ ಗೋಮಾಂಸವೇ ವಿನಾ ಕಾನೂನಿನ ಸಮಸ್ಯೆಗಳಲ್ಲ. ಗೋಹತ್ಯೆ ತಡೆಗೆ ಕಾನೂನು ರೂಪಿಸಲು ನೆಲೆ ಸಿಗುವುದು ಸಂವಿಧಾನದ ನಿರ್ದೇಶನಾ ತತ್ವಗಳಲ್ಲಿ. ಆರ್ಥಿಕ ಕಾರಣಗಳಿಗಾಗಿ ಆಕಳು ಮತ್ತು ಎತ್ತುಗಳನ್ನು ಸಂರಕ್ಷಿಸಬೇಕು ಎಂದು ಅದು ಹೇಳುತ್ತದೆ. ಉಳುಮೆಗೆ ಎತ್ತುಗಳನ್ನು ಬಳಸುತ್ತಿದ್ದ ಕಾಲದಲ್ಲಿ ಹುಟ್ಟಿದ ತರ್ಕ ಇದು. ಆದರೆ ಆ ಕಾಲವನ್ನು ನಾವು ಕ್ರಮಿಸಿಯಾಗಿದೆ. ಬೇರೆ ಯಾವ ದೇಶದಲ್ಲೂ ಇಂಥ ಆರ್ಥಿಕ ತರ್ಕ ಇಲ್ಲ. ಇದು ಇರುವುದು ಭಾರತದಲ್ಲಿ ಮಾತ್ರ. ಅದಕ್ಕೆ ಕಾರಣ ಗೋಮಾಂಸ ಭಕ್ಷಣೆಯ ಬಗ್ಗೆ ಇರುವ ‘ಹಿಂದೂ ಅಸಮಾಧಾನ’.

ಯಾವುದೇ ಧರ್ಮದ ಜೊತೆ ನಂಟು ಹೊಂದಿರದ ಸಂವಿಧಾನ ತನ್ನದು ಎಂದು ಭಾರತ ಸೋಗು ಹಾಕುತ್ತದೆ. ಧರ್ಮದ ಸುತ್ತ ದೇಶ ಕಟ್ಟಿದ ಪಾಕಿಸ್ತಾನಿಗಳಿಗಿಂತ ತೀರಾ ಭಿನ್ನರು ನಾವು ಎಂಬ ಹೆಮ್ಮೆ ನನ್ನಂತಹ ಭಾರತೀಯರಲ್ಲಿ ಯಾವತ್ತೂ ಇರುತ್ತದೆ ಎಂಬುದು ನಿಜ. ಆದರೆ ಭಾರತದ ಕಾನೂನುಗಳು ಹಿಂದೂ ಮೇಲ್ಜಾತಿಗಳ ಆಚರಣೆಗಳ ಸಣ್ಣ ಪ್ರಭಾವಕ್ಕೆ ಒಳಗಾಗಿರುವುದು ವಾಸ್ತವ. ಇದಕ್ಕೆ ಇನ್ನೊಂದು ಉದಾಹರಣೆ ಪಾನ ನಿಷೇಧ. ಸಂವಿಧಾನ ಕೂಡ ಪಾನ ನಿಷೇಧದ ಪರ ಇದೆ. ಪಾನ ನಿಷೇಧವು ಸಂಸ್ಕೃತೀಕರಣದ ಕೃತ್ಯ ಎಂದು ಸಮಾಜಶಾಸ್ತ್ರಜ್ಞ ಎಂ.ಎನ್. ಶ್ರೀನಿವಾಸ್ ಹೇಳುತ್ತಾರೆ. ಇದು ಸತ್ಯ.

ಗೋಮಾಂಸಕ್ಕೆ ನಿಷೇಧ, ನಿರ್ಬಂಧ ವಿಧಿಸಿದಂತೆ ಮದ್ಯಪಾನಕ್ಕೆ ಕೂಡ ಬೇರೆ ಕಾರಣಗಳನ್ನು ಮುಂದಿಟ್ಟು ನಿರ್ಬಂಧ, ನಿಷೇಧ ವಿಧಿಸಲಾಗಿದೆ. ಪಾನ ನಿಷೇಧ ಜಾರಿಗೆ ಭಾರತದ ಹಲವು ರಾಜ್ಯಗಳು ಯತ್ನಿಸಿವೆ, ಸೋತಿವೆ. ಮದ್ಯವನ್ನು ಇಟ್ಟುಕೊಳ್ಳುವುದು ಕೂಡ ಅಪರಾಧ ಎನ್ನುವ ಕಾನೂನನ್ನು ಬಿಹಾರ ಜಾರಿಗೆ ತಂದಿತು. ಇದರ ಅರ್ಥ, ನನ್ನ ಮನೆಯಲ್ಲಿ ಮದ್ಯದ ಬಾಟಲಿ ಸಿಕ್ಕಿದರೆ, ನಾನು, ನನ್ನ ಪತ್ನಿ, ನನ್ನ ಮನೆಯಲ್ಲಿ ಇರುವ ಇತರರು ಕೂಡ ಪೊಲೀಸ್ ಪ್ರಕರಣ ಎದುರಿಸಬೇಕು. ಈ ಕಾನೂನು ಅದೆಷ್ಟು ಹಾಸ್ಯಾಸ್ಪದವಾಗಿತ್ತು ಎಂದರೆ, ರಾಜ್ಯಗಳು ಇಂಥದ್ದೊಂದು ಕಾನೂನನ್ನು ಪರಿಗಣಿಸುತ್ತವೆ ಎನ್ನುವುದನ್ನು ನಂಬುವುದೂ ಕಷ್ಟ. ಕೊನೆಗೆ, ನ್ಯಾಯಾಲಯ ಮಧ್ಯಪ್ರವೇಶ ಮಾಡಿ ಈ ಕಾನೂನನ್ನು ತಡೆಹಿಡಿಯಿತು. ಆದರೆ ಇನ್ನೊಂದು ರೂಪದಲ್ಲಿ ಕಾನೂನು ಜಾರಿಗೊಳಿಸಲಾಯಿತು. ಹಿಂದುತ್ವ ರಾಜಕಾರಣಕ್ಕೆ ನಿತೀಶ್ ಕುಮಾರ್ ಅವರು ದೊಡ್ಡ ಪರ್ಯಾಯ ಎನ್ನುವವರು ಈ ವಿಚಾರವನ್ನು ಗಮನದಲ್ಲಿ ಇರಿಸಿಕೊಳ್ಳಬೇಕು.

ವ್ಯಕ್ತಿಯ ಸ್ವಾತಂತ್ರ್ಯವನ್ನು ನ್ಯಾಯಾಲಯಗಳು ಎಲ್ಲ ಸಂದರ್ಭಗಳಲ್ಲೂ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಹೆದ್ದಾರಿಗಳ ಪಕ್ಕ 500 ಮೀಟರ್‌ ವ್ಯಾಪ್ತಿಯಲ್ಲಿ ಮದ್ಯ ಮಾರಾಟ, ಪೂರೈಕೆ ಮಾಡುವಂತಿಲ್ಲ ಎಂದು ನ್ಯಾಯಾಲಯ ಹೊರಡಿಸಿರುವ ಆದೇಶವನ್ನು ಈಗ ದೇಶದಲ್ಲಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಬೆಟ್ಟ–ಗುಡ್ಡಗಳೇ ಹೆಚ್ಚಿರುವ, ಹೆದ್ದಾರಿಗಳು ಕಡಿಮೆ ಇರುವ ಈಶಾನ್ಯ ಭಾರತದ ಕೆಲವು ರಾಜ್ಯಗಳಲ್ಲಿ ಬಹುತೇಕ ಮದ್ಯದಂಗಡಿಗಳನ್ನು ಮುಚ್ಚಬೇಕಾಗುತ್ತದೆ. ಆದರೆ ಈ ರಾಜ್ಯಗಳಿಗೆ ನ್ಯಾಯಾಲಯ ಕೆಲವು ವಿನಾಯಿತಿಗಳನ್ನು ನೀಡಿದೆ. ವಿನಾಯಿತಿಗಳ ಹಿಂದಿನ ತರ್ಕವನ್ನು ಪೂರ್ತಿಯಾಗಿ ಅರ್ಥ ಮಾಡಿಕೊಳ್ಳಲು ನನಗೆ ಸಾಧ್ಯವಾಗಿಲ್ಲ. ಇದು ಸುರಕ್ಷತೆಯ ದೃಷ್ಟಿಯಿಂದ ಎಂದಾದರೆ, ಅದರ ಜೊತೆ ರಾಜಿಯಾಗಲು ಸಾಧ್ಯವಿಲ್ಲ.

ಆದರೆ ನನಗೆ ಇದು ವೈಯಕ್ತಿಕ ಸ್ವಾತಂತ್ರ್ಯದ ವಿಚಾರವಾಗಿ ಕಾಣುತ್ತಿದೆ. ತನ್ನ ಪ್ರಜೆಗಳು ಜವಾಬ್ದಾರಿಯಿಂದಲೇ ಮದ್ಯಪಾನ ಮಾಡುತ್ತಾರೆ ಎಂದು ಪ್ರಭುತ್ವ ಭಾವಿಸಬೇಕು. ಬೇಜವಾಬ್ದಾರಿಯಿಂದ ಮದ್ಯಪಾನ ಮಾಡಿ ಇನ್ನೊಬ್ಬರನ್ನು ಅಪಾಯಕ್ಕೆ ಸಿಲುಕಿಸುವವರನ್ನು ಶಿಕ್ಷೆಗೆ ಗುರಿಪಡಿಸುವ ಸಾಮರ್ಥ್ಯ ಕೂಡ ಪ್ರಭುತ್ವಕ್ಕೆ ಇರಬೇಕಾಗುತ್ತದೆ. ಆದರೆ, ಈ ರೀತಿಯ ನಿರ್ಬಂಧಗಳನ್ನು ವಿಧಿಸುವ ಮೂಲಕ ಪ್ರಭುತ್ವವು ತನ್ನ ಪ್ರಜೆಗಳು ಸಾಮಾನ್ಯವಾಗಿ ಬೇಜವಾಬ್ದಾರಿಯಿಂದಲೇ ಇರುತ್ತಾರೆ ಎಂದು ಭಾವಿಸಿರುವಂತಿದೆ. ವೈಯಕ್ತಿಕ ಹಕ್ಕುಗಳ ಮೇಲೆ ಆಕ್ರಮಣ ನಡೆಸಿ, ಇಂತಹ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ.

ಇಂತಹ ಬೇರೆ ಬೇರೆ ಕ್ರಮಗಳ ಮೂಲಕ ಧರ್ಮವು ನಮ್ಮ ಗಣತಂತ್ರದ ಚೌಕಟ್ಟಿನೊಳಗೆ ನುಸುಳುತ್ತಿದೆ. ಇಂತಹ ಕೃತ್ಯಗಳನ್ನು ಬೇರೆ ದೇಶಗಳೂ ಮಾಡುತ್ತವೆ ಎಂಬುದು ನಿಜ. ಬಸಂತ್‌ ಹಬ್ಬದ ವೇಳೆ ಗಾಳಿಪಟ ಹಾರಿಸುವುದನ್ನು ಪಾಕಿಸ್ತಾನಿಯರು ಇಷ್ಟಪಡುತ್ತಾರೆ. ಆದರೆ ಇದು ಇಸ್ಲಾಮಿಕ್‌ ಪದ್ಧತಿಗಳಿಗೆ ಅನುಗುಣವಾಗಿಲ್ಲ ಎಂದು ಕೆಲವರು ಭಾವಿಸುತ್ತಾರೆ. ಕಾನೂನಿನ ಜೊತೆ ಸಂಘರ್ಷಕ್ಕೆ ಇಳಿಯುತ್ತಾರೆ. ಗಾಳಿಪಟ ಹಾರಿಸುವುದರಿಂದ ಹಕ್ಕಿಗಳಿಗೆ ಅಪಾಯ ಉಂಟಾಗುತ್ತದೆ, ಜನರ ಸುರಕ್ಷತೆಗೆ ಧಕ್ಕೆಯಾಗುತ್ತದೆ. ಹಾಗಾಗಿ ಅದನ್ನು ನಿಷೇಧಿಸಬೇಕು ಎಂದು ಅಲ್ಲಿನ ಕೋರ್ಟ್‌ಗಳು ಹೇಳುತ್ತವೆ. ಭಾರತದಲ್ಲಿ ಕಾಣುತ್ತಿರುವಂತಹ ಪ್ರವೃತ್ತಿಯಿಂದಲೇ ಇಂತಹ ಆದೇಶಗಳು ಬರುತ್ತವೆ ಎಂಬುದು ನನ್ನ ನಂಬಿಕೆ.

ಆದರೆ ಇಲ್ಲೊಂದು ವ್ಯತ್ಯಾಸವಿದೆ. ತನ್ನ ಸಂವಿಧಾನ ಮತ್ತು ಕಾನೂನು ಜಾತ್ಯತೀತವಾಗಿವೆ ಎಂದು ಪಾಕಿಸ್ತಾನ ಹೇಳಿಕೊಳ್ಳುವುದಿಲ್ಲ. ಅವು ಇಸ್ಲಾಮಿಕ್‌ ಆಗಿವೆ. ಆಧುನಿಕ ಸರ್ಕಾರಗಳಿಗೆ ಅಗತ್ಯವಿರುವ ಚೌಕಟ್ಟುಗಳನ್ನು ಧರ್ಮವೊಂದರಿಂದಲೇ ಪಡೆಯಲು ಆಗದು ಎಂಬ ವಿಚಾರದಲ್ಲಿ ಅಲ್ಲಿನ ಕೆಲವರಿಗೆ ಅಸಮಾಧಾನ ಇರಬಹುದು. ಆದರೆ ಭಾರತದಲ್ಲಿ ಇದು ತದ್ವಿರುದ್ಧ. ಗಣರಾಜ್ಯವು ಇನ್ನಷ್ಟು ಹಿಂದೂ ಆಗಿರಬೇಕಿತ್ತು, ಆಗಿರಬಹುದಾಗಿತ್ತು. ಆದರೆ ಹಾಗೆ ಆಗುತ್ತಿಲ್ಲ ಎಂಬ ಕಾರಣಕ್ಕೆ ಭಾರತದಲ್ಲಿ ಹಲವರಿಗೆ ಅಸಮಾಧಾನ ಇದೆ. ಈ ಅಸಮಾಧಾನವೇ ಗುಜರಾತ್‌ನಲ್ಲಿ ಈಗ ಬಂದಿರುವಂತಹ ಕಾನೂನುಗಳನ್ನು ಹುಟ್ಟುಹಾಕುತ್ತಿದೆ.

ಇದು ತೀರಾ ಸಂಕುಚಿತ ಹಿಂದುತ್ವ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಈ ಸಂಕುಚಿತ ಹಿಂದುತ್ವವನ್ನು ಬಿಜೆಪಿಯು ಭಾರತೀಯ ಪ್ರಜೆಗಳ ಮೇಲೆ ಹೇರುತ್ತಿದೆ. ಮಾಂಸ ಮತ್ತು ಚರ್ಮದ ಜೊತೆ ಕೆಲಸ ಮಾಡುವ ದಲಿತರು, ಮುಸ್ಲಿಮರಂತಹ ಭಾರತೀಯರು ಈ ಹೊಸ ಕಾನೂನಿನ ಬಿಸಿ ಅನುಭವಿಸುತ್ತಾರೆ.

ಆದರೆ ಅಧಿಕೃತವಾಗಿ ನಾವು ಜಾತ್ಯತೀತ ದೇಶದವರು, ಇಲ್ಲಿನ ಕಾನೂನುಗಳು ಅವರನ್ನು ಗುರಿಯಾಗಿಟ್ಟುಕೊಂಡು ಮಾಡಿರುವಂಥವಲ್ಲ ಎಂದು ನಾವು ಅವರಿಗೆ ಭರವಸೆ ನೀಡುತ್ತಿರಬಹುದು!

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT