ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನಾಧಾರಿತ ಆರ್ಥಿಕತೆಗೀಗ ಜ್ಞಾನವೇ ಸವಾಲು

Last Updated 28 ಏಪ್ರಿಲ್ 2017, 12:51 IST
ಅಕ್ಷರ ಗಾತ್ರ

ತಂತ್ರಜ್ಞಾನೋದ್ಯಮದಲ್ಲಿ ತೊಡಗಿಕೊಂಡವರ ಬಳಿ ‘ಬದಲಾವಣೆಯೊಂದೇ ಸ್ಥಿರ’ ಎಂದರೆ ಸೂರ್ಯನಿಗೆ ಬೆಳಕಿನ ಕುರಿತು ಬೋಧಿಸಿದಂತಾಗುತ್ತದೆ. ಆದರೆ ಭಾರತೀಯ ಮಾಹಿತಿ ತಂತ್ರಜ್ಞಾನೋದ್ಯಮದ ವರ್ತಮಾನದ ತಲ್ಲಣಗಳನ್ನು ಕಂಡರೆ ಹಾಗನ್ನಿಸುವುದಿಲ್ಲ. ಎರಡು ದಶಕಗಳ ಹಿಂದಷ್ಟೇ ಈ ಕ್ಷೇತ್ರದ ವಾಣಿಜ್ಯ ಸಾಧ್ಯತೆಗಳನ್ನು ಹೊಸ ಬಗೆಯಲ್ಲಿ ಕಂಡುಕೊಂಡಿದ್ದ ಉದ್ಯಮ ಈಗ ಹೊಸ ಆವಿಷ್ಕಾರಗಳನ್ನು ಕಂಡು ತನ್ನ ಭವಿಷ್ಯದ ಕುರಿತು ಆತಂಕಿತವಾಗಿದೆ. ಹೊಸ ಕೌಶಲಗಳನ್ನು ಅಭಿವೃದ್ಧಿ ಪಡಿಸಲು, ಹೊಸ ವಾಣಿಜ್ಯಿಕ ಸವಾಲುಗಳನ್ನು ಎದುರಿಸುವುದಕ್ಕೆ ತನ್ನದೇ ಆದ ರೀತಿಯ ಆವಿಷ್ಕಾರಗಳಿಗೆ ಮುಂದಾಗಿದ್ದ ಉದ್ಯಮ ಈಗ ಷೇರುದಾರರನ್ನು ಸಮಾಧಾನ ಪಡಿಸುವ ಸರ್ಕಸ್‌ಗಳಲ್ಲಿ ತೊಡಗಿಕೊಂಡಂತೆ ಕಾಣಿಸುತ್ತದೆ.

ಕಳೆದ ಒಂದುವರೆ ದಶಕಗಳ ಅವಧಿಯಲ್ಲಿ ಷೇರುಗಳ ಮರು ಖರೀದಿಯನ್ನು ಪ್ರಸ್ತಾಪಿಸದೇ ಇದ್ದ ಭಾರತದ ಪ್ರಮುಖ ಮಾಹಿತಿ ತಂತ್ರಜ್ಞಾನ ಉದ್ಯಮ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ ಎರಡು ತಿಂಗಳ ಹಿಂದಷ್ಟೇ 16 ಸಾವಿರ ಕೋಟಿ ರೂಪಾಯಿಗಳಷ್ಟು ಮೌಲ್ಯದ ಷೇರು ಮರು ಖರೀದಿಗೆ ಮುಂದಾಯಿತು. ಎಚ್‌ಸಿಎಲ್ ಕೂಡಾ 3500 ಕೋಟಿ ರೂಪಾಯಿಗಳ ಷೇರು ಮರು ಖರೀದಿಗೆ ಮುಂದಾಗಿದೆ. ಇದೇ ದಾರಿಯನ್ನೂ ಇನ್ನಷ್ಟು ದೊಡ್ಡ ಕಂಪೆನಿಗಳೂ ತುಳಿಯಬಹುದೆಂದು ಷೇರು ಮಾರುಕಟ್ಟೆ ಪಂಡಿತರು ಅಭಿಪ್ರಾಯ ಪಡುತ್ತಿದ್ದಾರೆ. ಈಗ ನಡೆಯುತ್ತಿರುವ ಷೇರು ಮರು ಖರೀದಿಯ ಹಿಂದೆ ಇರುವ ಉದ್ದೇಶ ಒಂದೇ. ಮಾರುಕಟ್ಟೆಯಲ್ಲಿ ತಮ್ಮ ಷೇರುಗಳ ಬೆಲೆಯನ್ನು ಸ್ಥಿರಗೊಳಿಸುವುದು ಮಾತ್ರ. ಅಮೆರಿಕ ಮೂಲಕ ಬಹುರಾಷ್ಟ್ರೀಯ ಹೂಡಿಕೆ ನಿರ್ವಹಣಾ ಕಂಪೆನಿ ಗೋಲ್ಡ್‌ಮನ್ ಸಾಕ್ಸ್ ಇತ್ತೀಚೆಗೆ ಬಿಡುಗಡೆ ಮಾಡಿದ ಅಂದಾಜುಗಳಂತೆ ಭಾರತದ ಪ್ರಮುಖ ಐಟಿ ಕಂಪೆನಿಗಳ ವರ್ತಮಾನದ ಪ್ರಗತಿ ದರ ಶೇಕಡಾ 8ರಷ್ಟಿದೆ. ಇದು 2011ರಿಂದ 2016ರ ಅವಧಿಯಲ್ಲಿ ಶೇಕಡಾ 11ರಷ್ಟಿತ್ತು. ಡೀಪ್ ಡೈವ್ ಎಂಬ ಮತ್ತೊಂದು ಸಂಸ್ಥೆಯಂತೂ ಒಟ್ಟಾರೆ ಪ್ರಗತಿಯ ಪ್ರಮಾಣ ಶೇಕಡಾ 5.3ರಷ್ಟಿರುತ್ತದೆ ಎನ್ನುತ್ತಿದೆ.

ಈ ಎಲ್ಲಾ ಅಂಕಿ ಅಂಶಗಳಿಗಿಂತ ಭಯ ಹುಟ್ಟಿಸುವ ಲೆಕ್ಕಾಚಾರವನ್ನು ಮುಂದಿಟ್ಟದ್ದು ಮೆಕಿನ್ಸಿಯ ವರದಿ. ಈ ವರ್ಷ ಫೆಬ್ರುವರಿಯಲ್ಲೇ ಹೊರಬಂದ ಈ ವರದಿಯಂತೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳು ಗಾಬರಿ ಬೀಳುವಂತಿತ್ತು. ಮೆಕಿನ್ಸಿಯ ಅಂದಾಜುಗಳ ಪ್ರಕಾರ ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದುಡಿಯುತ್ತಿರುವ 39 ಲಕ್ಷ ಉದ್ಯೋಗಿಗಳ ಪೈಕಿ ಅರ್ಧದಷ್ಟು ಜನರು ಮುಂದಿನ ಮೂರು-ನಾಲ್ಕು ವರ್ಷಗಳಲ್ಲಿ ಅಪ್ರಸ್ತುತರಾಗುತ್ತಾರೆ.

ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆಯುವ ಬದಲಾವಣೆ ಉದ್ಯೋಗಗಳಿಗೆ ಕುತ್ತು ತರುವುದು ಅಥವಾ ಈಗಾಗಲೇ ಇರುವ ಔದ್ಯಮಿಕ ಮಾದರಿಗಳಿಗೆ ಅಸ್ತಿತ್ವದ ಸವಾಲನ್ನೊಡುವುದು ಹೊಸ ವಿಚಾರವೇನೂ ಅಲ್ಲ. ಈ ಬಗೆಯ ಬದಲಾವಣೆಗಳನ್ನು ಉತ್ಪಾದನಾ ಕ್ಷೇತ್ರದ ಉದ್ಯಮಗಳು ಸಾಕಷ್ಟು ಅನುಭವಿಸಿವೆ. ಕೆಲವು ಉದ್ಯಮಗಳು ಶಾಶ್ವತವಾಗಿ ಇಲ್ಲವಾಗಿವೆ. ಜ್ಞಾನಾಧಾರಿತ ಆರ್ಥಿಕತೆ ಎಂದು ಕರೆಯಿಸಿಕೊಳ್ಳುತ್ತಿದ್ದ ಮಾಹಿತಿ ತಂತ್ರಜ್ಞಾನ ಕ್ಷೇತ್ರವೂ ಇದೇ ಬಗೆಯ ಸವಾಲನ್ನು ಎದುರಿಸುತ್ತಿರುವುದಷ್ಟೇ ಇಲ್ಲಿರುವ ವಿಶೇಷ.

ಜ್ಞಾನವನ್ನು ಆಧಾರವಾಗಿಟ್ಟುಕೊಂಡ ಉದ್ಯಮವೊಂದು ಸಹಜವಾಗಿಯೇ ಇಂಥ ಬದಲಾವಣೆಗಳಿಗೆ ತನ್ನನ್ನು ಒಡ್ಡಿಕೊಂಡಿರುತ್ತದೆ. ಅರ್ಥಾತ್ ಸತತವಾಗಿ ಹೊಸ ಆವಿಷ್ಕಾರಗಳಿಗೆ ತನ್ನನ್ನು ಒಡ್ಡಿಕೊಂಡು ಪ್ರತೀ ಬದಲಾವಣೆಯಲ್ಲಿಯೂ ತಾನು ಪ್ರಸ್ತುತವಾಗಿರಲು ಬೇಕಿರುವ ಸಾಧ್ಯತೆಯೊಂದನ್ನು ಶೋಧಿಸಿಕೊಳ್ಳುತ್ತದೆ. ಭಾರತದ ಮಾಹಿತಿ ತಂತ್ರಜ್ಞಾನೋದ್ಯಮ ಕೂಡಾ ಇಂಥದ್ದನ್ನು ಈ ಹಿಂದೆ ಎದುರಿಸಿ ಗೆದ್ದಿತ್ತು. ಆದರೆ ಈಗ ಎದುರಾಗಿರುವ ಸವಾಲು ಬಹುಮುಖೀ ಸ್ವರೂಪದ್ದು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುವ ಬದಲಾವಣೆಯ ವೇಗಕ್ಕೆ ಹೊಂದಿಕೊಳ್ಳುವುದು ಸಾಮಾನ್ಯ ಸಂಗತಿಯಲ್ಲ. ಇದು ನೂರು ಕಿಲೋಮೀಟರ್ ವೇಗದಲ್ಲಿ ಓಡುತ್ತಿರುವ ವಾಹನವನ್ನು ನಿಲ್ಲಿಸದೆಯೇ ಚಕ್ರಗಳನ್ನು ಬದಲಾಯಿಸುವಂಥ ಸವಾಲಿನ ಕೆಲಸ. ಇಂಥದ್ದೊಂದು ಇಕ್ಕಟ್ಟಿನ ಪರಿಸ್ಥಿತಿಗೆ ಉದ್ಯಮ ತನ್ನನ್ನು ತಾನೇ ಒಡ್ಡಿಕೊಂಡಿತು ಎಂಬುದು ಮತ್ತೊಂದು ಸತ್ಯ. ಇದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ನಮ್ಮ ಮಾಹಿತಿ ತಂತ್ರಜ್ಞಾನೋದ್ಯಮದ ಈ ಹಿಂದೆ ಸವಾಲುಗಳನ್ನು ಎದುರಿಸಿದ ಸಂದರ್ಭವನ್ನು ಗಮನಿಸಬೇಕಾಗುತ್ತದೆ.

ತೊಂಬತ್ತರ ದಶಕದ ಮಧ್ಯಭಾಗದಲ್ಲಿಯೇ ಪ್ರಬಲಗೊಳ್ಳ ತೊಡಗಿದ ಭಾರತೀಯ ಮಾಹಿತಿ ತಂತ್ರಜ್ಞಾನೋದ್ಯಮ ಇಲ್ಲಿಯ ತನಕ ಮೂರು ಅಪಾಯಕಾರಿ ಕಂದಕಗಳನ್ನು ಬಹಳ ಸುಲಭವಾಗಿ ದಾಟಿತು. 1997ರಲ್ಲಿ ಸಂಭವಿಸಿದ ಏಷ್ಯಾ ಆರ್ಥಿಕ ಬಿಕ್ಕಟ್ಟು ಈ ಕಂಪೆನಿಗಳ ಮೇಲೆ ಪರಿಣಾಮ ಬೀರಲಿಲ್ಲ. ಪೂರ್ವ ಏಷ್ಯಾದ ರಾಷ್ಟ್ರಗಳಲ್ಲಿ ಸಂಭವಿಸಿದ ಈ ಬಿಕ್ಕಟ್ಟು ಜಾಗತಿಕ ಆರ್ಥಿಕತೆಯ ಮೇಲೆ ಅರ್ಥಶಾಸ್ತ್ರಜ್ಞರು ಊಹಿಸಿದಂಥ ಪರಿಣಾಮವನ್ನೇನೂ ಬೀರಲಿಲ್ಲ. ಭಾರತೀಯ ಮಾಹಿತಿ ತಂತ್ರಜ್ಞಾನೋದ್ಯಮದ ಸೇವೆಯನ್ನು ಪಡೆಯುತ್ತಿದ್ದವರೆಲ್ಲರೂ ಅಮೆರಿಕ ಮತ್ತು ಯೂರೋಪ್‌ಗಳಲ್ಲಿದ್ದರು. 2001ರಲ್ಲಿ ಡಾಟ್ ಕಾಮ್ ಗುಳ್ಳೆ ಒಡೆದಾಗಲೂ ಭಾರತೀಯ ಐ.ಟಿ. ಉದ್ಯಮದ ಮೇಲೆ ದೊಡ್ಡ ಪರಿಣಾಮವಾಗಲಿಲ್ಲ. ಡಾಟ್ ಗುಳ್ಳೆಯನ್ನು ನಂಬಿದ್ದವರಷ್ಟೇ ಸೋತರು. 2008ರ ಆರ್ಥಿಕ ಹಿಂಜರಿತವನ್ನೂ ಈ ಉದ್ಯಮ ಗೆದ್ದು ನಿಂತಿತು.

ಈ ಎಲ್ಲಾ ಸವಾಲುಗಳು ಎದುರಾದಾಗ ಭಾರತೀಯ ಮಾಹಿತಿ ತಂತ್ರಜ್ಞಾನೋದ್ಯಮದ ಎದುರು ಅವಕಾಶಗಳೂ ತೆರೆದಿದ್ದವು. ಸರಳವಾಗಿ ಹೇಳುವುದಾದರೆ ಅವಕಾಶಗಳ ಅಲೆಗಳ ಮೇಲೆ ಉದ್ಯಮ ಮುಂದಕ್ಕೆ ಸಾಗುತ್ತಿತ್ತು. ಮೈನ್ ಫ್ರೇಂ ಕಂಪ್ಯೂಟರುಗಳು ಸರ್ವರ್ ಮತ್ತು ಕ್ಲೈಂಟ್‌ಗಳಾಗಿ ಬದಲಾದಾಗ, ವೈ2ಕೆ ಸಮಸ್ಯೆ ಎದುರಾದಾಗ, ಇ-ಕಾಮರ್ಸ್, ಇಂಟರ್ನೆಟ್, ಸೋಷಿಯಲ್ ಮೀಡಿಯಾ ವಿಸ್ತರಿಸಿಕೊಂಡಾಗ, ಮೊಬೈಲ್‌ಗಳು ಸ್ಮಾರ್ಟ್ ಆದಾಗ ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯಮಕ್ಕೆ ತೆರೆದುಕೊಂಡದ್ದು ಅವಕಾಶಗಳು. ಉದ್ಯೋಗಿಗಳ ಕೌಶಲದಲ್ಲಿ ಮೂಲಭೂತವಾದ ಬದಲಾವಣೆಗಳೇನೂ ಅಗತ್ಯವಿರಲಿಲ್ಲ. ಹಾಗಾಗಿ ಈ ಕಂಪೆನಿಗಳು ಬದಲಾವಣೆಯನ್ನೇ ಅವಕಾಶವನ್ನಾಗಿ ಮಾರ್ಪಡಿಸಿಕೊಳ್ಳಲು ಸುಲಭವಾಯಿತು.

ಆದರೆ ಈಗ ಎದುರಾಗಿರುವ ಸವಾಲು ಹೀಗೆ ಸರಳ ರೇಖಾತ್ಮಕವಾಗಿಲ್ಲ. ತಂತ್ರಜ್ಞಾನದಲ್ಲಿ ಮೂಲಭೂತವಾದ ಮಟ್ಟದಲ್ಲಿಯೇ ಒಂದು ಸ್ಥಿತ್ಯಂತರ ಸಂಭವಿಸಿದೆ. ಭಾರತೀಯ ಉದ್ಯಮಗಳ ಗ್ರಾಹಕರು ಬಳಸುವ ತಂತ್ರಾಂಶ ಮತ್ತು ಮೂಲಸೌಕರ್ಯಗಳೆರಡರ ಸ್ವರೂಪವೇ ಬದಲಾಗಿದೆ. ಹಿಂದಿನಂತೆ ಯಂತ್ರಾಂಶಗಳನ್ನು ಖರೀದಿಸಿ ಇಟ್ಟುಕೊಳ್ಳಬೇಕಾದ ಅಗತ್ಯ ಈ ಗ್ರಾಹಕರಿಗಿಲ್ಲ. ಅಂದರೆ ಅವರ ಯಂತ್ರಾಂಶಗಳೆಲ್ಲವೂ ಈಗ ‘ಕ್ಲೌಡ್’ ಸೇವೆಗಳಾಗಿ ಬದಲಾಗಿವೆ. ತಂತ್ರಾಂಶವನ್ನು ಖರೀದಿಸಿ ಬಳಸುವ ಬದಲಿಗೆ ಅದನ್ನು ಒಂದು ಸೇವೆಯಂತೆ ಪಡೆಯುವ ಮಾದರಿ ಬಂದಿದೆ. ಇದರೊಂದಿಗೆ ಬಳಕೆಯ ಚಲನಶೀಲತೆ, ಸೈಬರ್ ಭದ್ರತೆ, ಅನಲಿಟಿಕ್ಸ್ ಹೀಗೆ ಹೊಸ ಬಗೆಯ ಅಗತ್ಯಗಳು ಗ್ರಾಹಕರಿಗಿವೆ.

ಇದರ ಜೊತೆಯಲ್ಲೇ ಸಂಭವಿಸಿರುವ ಮತ್ತೊಂದು ದೊಡ್ಡ ಬದಲಾವಣೆ ಎಂದರೆ ‘ಜ್ಞಾನಾಧಾರಿತ ಉದ್ಯೋಗ’ ಎಂದು ಭಾವಿಸುತ್ತಿದ್ದ ಕೆಲಸಗಳ ಆಟೋಮೇಷನ್. ಅಂದರೆ ಸಾಫ್ಟ್‌ವೇರ್‌ಗಳನ್ನು ಪರೀಕ್ಷಿಸುವಂಥ ಕೆಲಸಗಳನ್ನು ಕ್ಷಣಾರ್ಧದಲ್ಲಿ ಮುಗಿಸುವ ಸಾಫ್ಟ್‌ವೇರ್‌ ಸೇವೆಗಳೇ ಬಂದುಬಿಟ್ಟಿವೆ. ಇದು ‘ಜ್ಞಾನಾಧಾರಿತ ಉದ್ಯೋಗ’ಗಳ ಸಂಖ್ಯೆಯನ್ನು ಕಡಿತಗೊಳಿಸಿವೆ. ತಂತ್ರಜ್ಞಾನದ ಸವಾಲಿನ ಜೊತೆಗೆ ರಾಜಕೀಯ ಮುಂದಿಡುತ್ತಿರುವ ಸವಾಲುಗಳನ್ನು ಎದುರಿಸುವ ಸಂಕಷ್ಟ ಭಾರತದ ಮಾಹಿತಿ ತಂತ್ರಜ್ಞಾನೋದ್ಯಮಿಗಳಿಗೆ ಬಂದೊದಗಿದೆ. ಅಮೆರಿಕ, ಆಸ್ಟ್ರೇಲಿಯಾ, ಕೆನಡಾ ಹೀಗೆ ಒಂದೊಂದೇ ದೇಶಗಳ ಆಡಳಿತರೂಢ ರಾಜಕಾರಣಿಗಳು ಹೊರಗುತ್ತಿಗೆ ಮತ್ತು ಭಾರತೀಯ ತಂತ್ರಜ್ಞಾನೋದ್ಯಮಿಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸುತ್ತಿದ್ದಾರೆ.

ಭಾರತೀಯ ಉದ್ಯಮಗಳ ಬಹುಪಾಲು ಗ್ರಾಹಕರು ಯೂರೋಪ್ ಮತ್ತು ಅಮೆರಿಕಗಳಲ್ಲಿರುವುದು ಒಂದು ಸಮಸ್ಯೆ. ಈಗ ಎದುರಾಗಿರುವ ಸವಾಲಿನ ರಾಜಕೀಯ ಆಯಾಮ ಭಾರತೀಯ ಉದ್ಯಮಗಳಿಗೆ ಹೊಸ ಪ್ರದೇಶಗಳನ್ನು ಶೋಧಿಸುವ ಅವಕಾಶವನ್ನು ಕಲ್ಪಿಸಿದೆ ಎಂದುಕೊಳ್ಳಬಹುದು. ಆದರೆ ತಂತ್ರಜ್ಞಾನದ ಸವಾಲನ್ನು ಎದುರಿಸುವುದು ಅಷ್ಟೇನೂ ಸುಲಭವಾಗಿಲ್ಲ. ಮೆಕಿನ್ಸಿ ವರದಿ ಹೇಳುತ್ತಿರುವುದೂ ಅದನ್ನೇ. ಉದ್ಯೋಗಿಗಳ ಕೌಶಲವನ್ನು ಹೆಚ್ಚಿಸುವ ಕೆಲಸವನ್ನು ಈ ಕಂಪೆನಿಗಳು ಬಹಳ ಹಿಂದೆಯೇ ಮಾಡಬೇಕಾಗಿತ್ತು. ಆದರೆ ಅವುಗಳಿಗೆ ಇದ್ದ ಒಟ್ಟಾರೆ ಕೆಲಸದ ಒತ್ತಡ ಅದನ್ನು ಆಗಗೊಳಿಸಲಿಲ್ಲ.

ಮತ್ತೊಂದು ಸಮಸ್ಯೆ ಭಾರತದ ವೃತ್ತಿ ಶಿಕ್ಷಣ ಕ್ಷೇತ್ರದ ಕಳಪೆ ಗುಣಮಟ್ಟ. ಹೊಸ ಪರಿಕಲ್ಪನೆಗಳನ್ನು ಮತ್ತು ಕೌಶಲಗಳನ್ನು ಕಲಿಯಲು ಬೇಕಿರುವ ಶಕ್ತಿಯನ್ನು ಶಿಕ್ಷಣ ನೀಡಿಲ್ಲ. ತಂತ್ರಾಂಶಗಳ ಪರೀಕ್ಷೆಯಂಥ ಸುಲಭದ ಕೆಲಸವನ್ನು ಮಾಡುವುದಕ್ಕಷ್ಟೇ ಸೀಮಿತವಾಗಿ ಉಳಿದು ಈಗ ಮಧ್ಯಮ ಹಂತದ ನಾಯಕತ್ವಕ್ಕೆ ಬಂದಿರುವ ಬಹುದೊಡ್ಡ ವರ್ಗವೊಂದು ಹೊಸ ಕೌಶಲಗಳನ್ನು ಕಲಿಯಲು ಬೇಕಾಗಿರುವ ಮನಃಸ್ಥಿತಿಯನ್ನೂ ಹೊಂದಿಲ್ಲ ಎಂದು ಭಾವಿಸಲಾಗುತ್ತಿದೆ. ಅದಕ್ಕಿಂತ ಹೆಚ್ಚಾಗಿ ಈ ಹಂತದಲ್ಲಿರುವ ಕೆಲಸಗಾರರು ಪಡೆಯುತ್ತಿರುವ ಸಂಬಳ ಎಲ್ಲಾ ಕಂಪೆನಿಗಳಿಗೆ ದೊಡ್ಡ ಹೊರೆಯಂತೆ ಕಾಣಿಸುತ್ತಿದೆ.

ವರ್ತಮಾನದ ಸವಾಲುಗಳನ್ನು ಎದುರಿಸಲು ಮಾಹಿತಿ ತಂತ್ರಜ್ಞಾನ ಕಂಪೆನಿಗಳ ಮಾಡಿಕೊಳ್ಳುತ್ತಿರುವ ಬದಲಾವಣೆಗಳಿಂದ ಕೆಲಸ ಕಳೆದುಕೊಳ್ಳುವ ಹೆಚ್ಚಿನವರು ತಮ್ಮ ವೃತ್ತಿ ಜೀವನದ ಮಧ್ಯಮ ಹಂತದಲ್ಲಿರುವರು. ಅವರಿಗೆ ಹೊಸತೊಂದು ಕೆಲಸ ಹುಡುಕಿಕೊಳ್ಳಲು ಕಷ್ಟ. ಇನ್ನೂ ದೊಡ್ಡ ಸಮಸ್ಯೆ ಇರುವುದು ಈ ಉದ್ಯಮದ ಸುತ್ತ ಹುಟ್ಟಿಕೊಂಡಿರುವ ಇತರ ಸೇವೆಗಳ ಭವಿಷ್ಯ. ಇಲ್ಲಿ ದುಡಿಯುತ್ತಿರುವವರ ಸಂಖ್ಯೆ ಇನ್ನೂ ದೊಡ್ಡದು. ಈ ಹಿಂದೆ ಸವಾಲುಗಳನ್ನು ಅವಕಾಶವಾಗಿ ಬಳಸಿಕೊಂಡ ಉದ್ಯಮಕ್ಕೆ ಈಗಿನ ಸವಾಲು ಎದುರಿಸಲಾಗದಷ್ಟು ದೊಡ್ಡದಲ್ಲ. ಇಲ್ಲಿಯ ತನಕ ತಮ್ಮ ಗ್ರಾಹಕರು ಕೇಳಿದ್ದನ್ನು ಮಾಡಿಕೊಡುತ್ತಿದ್ದ ಕಂಪೆನಿಗಳು ಈಗ ಗ್ರಾಹಕರಿಗೆ ಏನು ಮಾಡಬೇಕು ಮತ್ತು ಯಾಕೆ ಮಾಡಬೇಕು ಎಂಬುದನ್ನು ಹೇಳುವ ಮಟ್ಟಕ್ಕೆ ಬೆಳೆಯಬೇಕಾಗಿದೆ. ಇದು ಅಸಾಧ್ಯವಲ್ಲ. ಆದರೆ ಅದಕ್ಕೆ ಬೇಕಿರುವ ಔದ್ಯಮಿಕ ನಾಯಕತ್ವ ಇದೆಯೇ ಎಂಬುದು ಮಾತ್ರ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT