ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪು ಸಂದೇಶ ನೀಡಿದ ‘ಉಡುಗೊರೆ’

Last Updated 20 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಫೆಬ್ರುವರಿ 4ರಿಂದ ಪಂಚ ರಾಜ್ಯಗಳ ವಿಧಾನಸಭೆ  ಚುನಾವಣೆ ಪ್ರಕ್ರಿಯೆ ರಾಷ್ಟ್ರದಲ್ಲಿ ಜಾರಿಯಲ್ಲಿದೆ. ಈಗಾಗಲೇ ಗೋವಾ, ಪಂಜಾಬ್‍ ಹಾಗೂ ಉತ್ತರಾಖಂಡಗಳಲ್ಲಿ ಚುನಾವಣೆಗಳು ಮುಕ್ತಾಯವಾಗಿವೆ. ಏಳು ಹಂತಗಳಲ್ಲಿ ಉತ್ತರ ಪ್ರದೇಶದಲ್ಲಿ  ಚುನಾವಣೆಗಳು ನಡೆಯುತ್ತಿದ್ದು 3ನೇ ಹಂತದ ಮತದಾನ ಮೊನ್ನೆ ಭಾನುವಾರ (ಫೆ.19) ಅಂತ್ಯವಾಗಿದೆ. 

ಮಾರ್ಚ್ 8ರಂದು ಮಣಿಪುರ ಹಾಗೂ ಉತ್ತರಪ್ರದೇಶಗಳಲ್ಲಿ ಅಂತಿಮ ಹಂತದ ಮತದಾನ ನಡೆಯಲಿದ್ದು ಮಾರ್ಚ್ 11ರಂದು ಫಲಿತಾಂಶಗಳು ಪ್ರಕಟವಾಗಲಿವೆ. ಈಗ, ಚುನಾವಣೆ ಪ್ರಕ್ರಿಯೆ ವಿಚಾರ ಹಾಗಿರಲಿ, ಈ ಚುನಾವಣೆಗಳಲ್ಲಿ  ಮಹಿಳಾ ಮತದಾರರ ಓಲೈಕೆ ಪಡೆದುಕೊಂಡ ರೀತಿ ಮಾತ್ರ ವಿಚಿತ್ರ ಹಾಗೂ ವಿವಾದಾಸ್ಪದ.

ಮಹಿಳೆಗೆ ದೈವತ್ವದ ಪಟ್ಟ ನೀಡುವುದು ಅಥವಾ ಭೋಗದ ಸರಕಿನಂತೆ ಆಕೆಯನ್ನು ಕಾಣುವುದು ಇದೇ ಮೊದಲೂ ಅಲ್ಲ ಕೊನೆಯೂ ಅಲ್ಲ ಎಂಬಂಥ ಸ್ಥಿತಿ ಈ 21ನೇ ಶತಮಾನದಲ್ಲೂ ಮುಂದುವರಿದಿದೆ. ಆಕೆಯನ್ನು ಅನುಗ್ರಹಪೂರ್ವಕವಾಗಿ ಕಾಣುವಂತಹ ದೃಷ್ಟಿಕೋನ ಬದಲಾಗಲೇ ಇಲ್ಲ.

ತನ್ನನ್ನೂ ಸ್ವತಂತ್ರ ವ್ಯಕ್ತಿಯಾಗಿ ಸಹಜೀವಿಯಾಗಿ ಪರಿಭಾವಿಸುವ ಧೋರಣೆ, ನೀತಿನಿರೂಪಕರಲ್ಲಿ ಮೂಡಲು ಇನ್ನೂ ಎಷ್ಟು ಕಾಲ ಕಾಯಬೇಕಿದೆಯೊ ಎಂಬಂಥ ಪ್ರಶ್ನೆಗೆ ಮಹಿಳೆ ಪದೇ ಪದೇ ಮುಖಾಮುಖಿಯಾಗುತ್ತಲೇ ಇರಬೇಕಾಗುತ್ತದೆ. ಇಂತಹದೊಂದು ಅನುಗ್ರಹಪೂರ್ವಕ ಧೋರಣೆ ಫೆ.4ರಂದು ನಡೆದ ಗೋವಾ ಹಾಗೂ ಪಂಜಾಬ್ ವಿಧಾನಭೆ ಚುನಾವಣೆಗಳಲ್ಲಿ ಮತ್ತೊಮ್ಮೆ ವ್ಯಕ್ತವಾಗಿದೆ.

ಮಹಿಳೆಗೆ ಮಾತ್ರ ಎಂಬಂಥ ಮಾದರಿ ಮತಗಟ್ಟೆಗಳನ್ನು ಎರಡೂ ರಾಜ್ಯಗಳಲ್ಲಿ ನಿರ್ಮಿಸಲಾಗಿತ್ತು. ಈ ಮತಗಟ್ಟೆಗಳಲ್ಲಿ ಎಲ್ಲವೂ ನಸುಗೆಂಪು (ಪಿಂಕ್) ಬಣ್ಣದಾಗಿತ್ತು. ಚುನಾವಣಾ ಅಧಿಕಾರಿಗಳ ಉಡುಗೆ ತೊಡುಗೆ ಸೇರಿದಂತೆ ಮತಗಟ್ಟೆಗಳಿಗೆ ಬಳಿದ ಬಣ್ಣ, ಹೊದಿಸಿದ ಬಟ್ಟೆ, ಕಟ್ಟಿದ ಬಲೂನುಗಳ ಅಲಂಕಾರ ಎಲ್ಲವೂ ನಸುಗೆಂಪಿನದೇ ಆಗಿದ್ದವು. ಗೋವಾದಲ್ಲಂತೂ ಮೊದಲ ಬಾರಿಗೆ ಮತ ಚಲಾಯಿಸಿದ ಮಹಿಳೆಯರಿಗೆ ‘ಪಿಂಕ್ ಟೆಡ್ಡಿಬೇರ್‍’ಗಳನ್ನೂ ಚುನಾವಣಾ ಆಯೋಗ ಉಡುಗೊರೆಯಾಗಿ ನೀಡಿದ್ದು ಅತಿರೇಕದ ಪ್ರತೀಕ.

‘ಮೊದಲನೇ ಬಾರಿಗೆ ಮತ ಚಲಾಯಿಸುತ್ತಿರುವ ಯುವ ಮಹಿಳಾ ಮತದಾರರಿಗೆ ಟೆಡ್ಡಿ ಬೇರ್ ಉಡುಗೊರೆ ನೀಡಿ ಮತದಾನದ ಅನುಭವವನ್ನು ಹಿತಕರವಾಗಿಸುವುದು ಮುಖ್ಯ ಉದ್ದೇಶವಾಗಿತ್ತು’ ಎಂದಿದ್ದಾರೆ ಗೋವಾದ ಮುಖ್ಯ ಚುನಾವಣಾ ಅಧಿಕಾರಿ ಕುನಾಲ್. ಆದರೆ  ಈ ಐಎಎಸ್ ಅಧಿಕಾರಿಯ  ಈ ಹೊಸ ಪರಿಕಲ್ಪನೆ ಎಲ್ಲರ ಕಣ್ಣರಳಿಸಿಲ್ಲ ಎಂಬುದಂತೂ ನಿಜ. ಬೇಗನೇ ಬಂದು ಮತ ಚಲಾಯಿಸಿದ ಸುಮಾರು 600 ಯುವತಿಯರಿಗೆ  ಉಡುಗೊರೆಯಾಗಿ ತಲಾ ಒಂದೊಂದು ಟೆಡ್ಡಿ ಬೇರ್‌ ವಿತರಿಸಲಾಗಿದೆ. 

ಮಹಿಳೆಯ ಸಬಲೀಕರಣದ ನೆಪ ಒಡ್ಡಿ ಇಂತಹ  ಕಾರ್ಯಕ್ರಮ ನಡೆಸಿರುವುದು ವಿಪರ್ಯಾಸ. ಜೊತೆಗೆ ಈ ಬಗೆಯ ಪ್ರೋತ್ಸಾಹಕ ಉಡುಗೊರೆಗಳನ್ನು ಚುನಾವಣಾ ಆಯೋಗ ನೀಡಬಹುದೆ ಎಂಬುದೂ ಪ್ರಶ್ನೆ. ಮತದಾರರನ್ನು ಒಲಿಸಿಕೊಳ್ಳಲು ರಾಜಕೀಯ ಪಕ್ಷಗಳು ನಡೆಸುವ ಕಸರತ್ತುಗಳು  ಗೊತ್ತಿರುವಂತಹದ್ದೆ. ಹಣ, ಹೆಂಡ, ಉಡುಗೊರೆ ಹಂಚುವುದೂ ಎಲ್ಲರಿಗೂ ತಿಳಿದದ್ದೆ. ಇಂತಹ ಸನ್ನಿವೇಶದಲ್ಲಿ ಚುನಾವಣಾ ಆಯೋಗ ನೀಡಿದ ಈ ಉಡುಗೊರೆ ವಿಚಿತ್ರ. 

ಮತದಾನ ಮಾಡಲು ಯುವ ಮಹಿಳೆಯರನ್ನು ಪ್ರೇರೇಪಿಸಲು ಬೇರೆ ರೀತಿಯ ಕಾರ್ಯಕ್ರಮಗಳೇ ಇರಲಿಲ್ಲವೆ? ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಅಭಿಯಾನ ಕೈಗೊಳ್ಳಬಹುದಿತ್ತಲ್ಲವೆ? ಇದು ಸಾಧ್ಯವಾಗಲಿಲ್ಲ ಎಂದರೆ ಬಿಡಿ. ಆದರೆ ಮಹಿಳೆಯರಿಗೆ ನೀಡಿದ ಉಡುಗೊರೆ ಎಂತಹದ್ದು?  ನಸುಗೆಂಪಿನ ಟೆಡ್ಡಿ ಬೇರ್‌ಗಳು ಸಶಕ್ತತೆಯ ಸಂಕೇತವಾಗುವುದು ಎಂದಾದರೂ ಸಾಧ್ಯವೆ? 

‘ಕೆಂಪು ಬಣ್ಣ ತೀರಾ ಬಲವಾದುದಾಯಿತು’ ಎಂದು ಮುಖ್ಯ ಚುನಾವಣಾ ಅಧಿಕಾರಿಗಳು ತಿರಸ್ಕರಿಸಿದರು ಎಂಬಂಥ  ವರದಿಯೂ ಇದೆ. ಜೊತೆಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲು ಈ ಅಧಿಕಾರಿಗೆ ಸ್ಫೂರ್ತಿಯಾದದ್ದು ಅವರ 8 ವರ್ಷದ ಮಗಳು.

ಯುವ ಮತದಾರರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಲು ಚುನಾವಣಾ ಆಯೋಗ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದು ಶ್ಲಾಘನೀಯ. ಆದರೆ ಮತದಾನ ಮಾಡಿದ್ದಕ್ಕೆ ಪ್ರತಿಯಾಗಿ ಉಡುಗೊರೆ ನೀಡುವ ಕ್ರಮ ಮಾತ್ರ ತಪ್ಪು ಹೆಜ್ಜೆ ಎಂದೇ ಹೇಳಬೇಕಾಗುತ್ತದೆ. ಮಹಿಳೆಯರಿಗೆ ಟೆಡ್ಡಿ ಬೇರ್ ನೀಡಿದಂತೆ ಮೊದಲ ಬಾರಿಗೆ ಮತ ಚಲಾಯಿಸಿದ ಪುರುಷ ಮತದಾರರಿಗೆ ಪೆನ್ ಉಡುಗೊರೆ ನೀಡಲಾಗಿದೆ.

ಯಾವ ಕಾಲದಲ್ಲಿದ್ದೇವೆ ನಾವು?  ಇಂತಹ ಉಡುಗೊರೆಗಳು ಧ್ವನಿಸಬಹುದಾದ ಲಿಂಗ ತಾರತಮ್ಯದ ಸಂಕೇತಗಳನ್ನು ಗ್ರಹಿಸಲಾರದಷ್ಟು ಜಡ್ಡುಗಟ್ಟಿದೆಯೆ ನಮ್ಮ ಸಂವೇದನೆಗಳು? ಪುರುಷ ಮತದಾರರಿಗೆ ನೀಡಿದಂತೆ ಮಹಿಳಾ ಮತದಾರರಿಗೂ ಪೆನ್ ನೀಡುವ ಬಗ್ಗೆ ಯಾಕೆ ಆಲೋಚಿಸಲಾಗುವುದಿಲ್ಲ? ಲಿಂಗತ್ವ ಪೂರ್ವಗ್ರಹ ಎಂಬುದು ಹೇಗೆ ಸಾಂಸ್ಥಿಕವಾಗಿ ನೆಲೆಗೊಂಡಿದೆ ಎಂಬುದಕ್ಕೆ ಇದಕ್ಕಿಂತ ಪುರಾವೆ ಬೇಕೆ?

ಗೋವಾದಲ್ಲಿ ಲಿಂಗ ಸಮಾನತೆ ಎಂಬುದೇ ದ್ವಂದ್ವಮಯ. ಅನೇಕ ಮನೆಗಳಲ್ಲಿ ಮಹಿಳೆಯರದೇ ಯಜಮಾನಿಕೆ ಇದೆ. ಹೀಗಿದ್ದೂ ಉದ್ಯೋಗ ಕ್ಷೇತ್ರದಲ್ಲಿ ಗೋವಾ ಮಹಿಳೆಯರ ಪಾಲ್ಗೊಳ್ಳುವಿಕೆ  ಪ್ರಮಾಣ ತೀರಾ ಕಡಿಮೆ. 2011–12ರ ಎನ್‌ಎಸ್ಎಸ್ ಅಂಕಿ ಅಂಶಗಳ ಪ್ರಕಾರ, ಗೋವಾದ ಶೇ 28ರಷ್ಟು ಮಹಿಳೆಯರು ಮಾತ್ರ ಉದ್ಯೋಗ ಕ್ಷೇತ್ರದಲ್ಲಿದ್ದಾರೆ. ಇತರ ರಾಜ್ಯಗಳಲ್ಲಿ ಈ ಪ್ರಮಾಣ ಶೇ 31. ಜೊತೆಗೆ ಗೋವಾ ಮಹಿಳೆಯರಿಗೆ ಆಸ್ತಿ ಹಕ್ಕು ಇಲ್ಲದಿರುವುದಕ್ಕೆ ಸಾಂಸ್ಕೃತಿಕ ಅಂಗೀಕಾರ ಇದೆ.

ಕೌಟುಂಬಿಕ ಹಿಂಸೆ, ದ್ವಿಪತ್ನಿತ್ವ ಇತ್ಯಾದಿ ಸಮಸ್ಯೆಗಳನ್ನು ತೀವ್ರವಾಗಿಯೇ ಇಲ್ಲಿನ ಮಹಿಳೆಯರು ಎದುರಿಸುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಪ್ರಜಾಸತ್ತಾತ್ಮಕ ಸಬಲೀಕರಣದ ಸಂಕೇತವಾಗಿ ನಸುಗೆಂಪಿನ ಟೆಡ್ಡಿಬೇರ್‌ನಂತಹ ಆಟಿಕೆ ವಸ್ತು ನೀಡುವುದು ಹೆಣ್ಣಿನ ಕುರಿತಾದ ಲಿಂಗತ್ವದ ಪಡಿಯಚ್ಚುಗಳನ್ನು ಸ್ಥಿರೀಕರಿಸುವಂತಹದ್ದೇ ಅಲ್ಲವೆ? ಅದೂ ಅತ್ಯಂತ ಪ್ರಜಾಸತ್ತಾತ್ಮಕ ಎನಿಸಿದ ಚುನಾವಣೆಯ ಕಸರತ್ತಿನಲ್ಲೇ ಈ ಪೂರ್ವಗ್ರಹ ಧ್ವನಿತವಾದದ್ದು ದುರದೃಷ್ಟಕರವಲ್ಲದೆ ಮತ್ತಿನ್ನೇನು?

ಮಹಿಳಾ ಸಬಲೀಕರಣದ ಈ ಅಣಕಕ್ಕೆ ಸಾಕ್ಷಿಯಾದ ಗೋವಾ ರಾಜಕೀಯ ಸಂಸ್ಕೃತಿಯಲ್ಲೂ  ದ್ವಿಮುಖ ಧೋರಣೆ ಎದ್ದು ಕಾಣಿಸುವಂತಹದ್ದು.  40 ಸದಸ್ಯ ಬಲದ ಗೋವಾ ವಿಧಾನಸಭೆ ಚುನಾವಣೆಗೆ ಈ ಬಾರಿ ಸ್ಪರ್ಧಿಸಿದ 251 ಅಭ್ಯರ್ಥಿಗಳಲ್ಲಿ 19 ಮಂದಿ ಮಾತ್ರ ಮಹಿಳೆಯರು. ಇವರಲ್ಲಿ ಅರ್ಧದಷ್ಟು ಮಂದಿ ಸ್ವತಂತ್ರ ಅಭ್ಯರ್ಥಿಗಳು. ಹೆಚ್ಚಿನವರು ಗೆಲ್ಲುವ ಸಾಧ್ಯತೆ ಅಲ್ಲ. 40 ಸ್ಥಾನಗಳ ಪೈಕಿ 29 ಸ್ಥಾನಗಳಿಗೆ ಮಹಿಳಾ ಉಮೇದುವಾರರೂ ಇಲ್ಲ ಎಂದರೆ ಸಂವಿಧಾನದ ಆಶಯವಾದ ಸಮಾನತೆ ಎಲ್ಲಿದೆ?

ಗೋವಾ ಸಚಿವ ಸಂಪುಟದಲ್ಲಿದ್ದ ಅಲಿನಾ ಸಾಲ್ಡಾನಾ ಅವರನ್ನ ಆಡಳಿತಾರೂಢ ಬಿಜೆಪಿ ಕಣಕ್ಕಿಳಿಸಿದೆ. ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಏಕೈಕ ಮಹಿಳೆ ಅವರು. ಕಾಂಗ್ರೆಸ್ ಪಕ್ಷದಿಂದ ಮೂವರು ಮಹಿಳೆಯರು ಕಣಕ್ಕಿಳಿದಿದ್ದಾರೆ. ಇರುವುದರಲ್ಲಿ ಸ್ವಲ್ಪ ಹೆಚ್ಚು ಎಂದರೆ ಐವರು ಮಹಿಳೆಯರನ್ನು ಕಣಕ್ಕಿಳಿಸಿರುವುದು  ಆಮ್ ಆದ್ಮಿ ಪಕ್ಷ (ಎಎಪಿ).

ಗೋವಾದಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ. ಮಹಿಳಾ ಸಾಕ್ಷರತೆ 2011ರ ಜನಗಣತಿ ಪ್ರಕಾರ ಶೇ 82. ಇದು ಭಾರತದ  ಇತರ ರಾಜ್ಯಗಳಿಗಿಂತ ಹೆಚ್ಚಿನದು. ಹೀಗಿದ್ದೂ  ರಾಜಕೀಯ ಪ್ರಾತಿನಿಧ್ಯದಲ್ಲಿ ಮಹಿಳೆಯರ ಅಗೋಚರತೆ ಎದ್ದು ಕಾಣಿಸುವಂತಹದ್ದು. ಗೋವಾದ ಏಕೈಕ ಮಹಿಳಾ  ಮುಖ್ಯಮಂತ್ರಿ ಎಂದರೆ ಶಶಿಕಲಾ ಕಾಕೋಡ್ಕರ್.

ಗೋವಾದ ಮೊದಲ ಮುಖ್ಯಮಂತ್ರಿಯಾಗಿದ್ದ ದಯಾನಂದ ಬಾಂಡೋಡ್ಕರ್ ಅವರು ನಿಧನರಾದ ನಂತರ ಅವರ ಪುತ್ರಿ ಶಶಿಕಲಾ ಅವರು 1973ರಲ್ಲಿ ಮುಖ್ಯಮಂತ್ರಿ ಗದ್ದುಗೆಗೇರಿದ್ದರು. ಗೋವಾ ವಿಧಾನಭೆಯಲ್ಲಿ ಮಹಿಳೆಯರ ಸಂಖ್ಯೆ ಎಂದಿಗೂ ಎರಡು ದಾಟಿಲ್ಲ. ಸದನದಲ್ಲಿ ಅವರ ಸರಾಸರಿ ಹಾಜರಿ ಎಂದರೆ ಒಬ್ಬರು ಶಾಸಕಿ ಅಷ್ಟೆ. ಲೋಕಭೆಯಲ್ಲೇನು ಸಂಸದೆಯರ ಸಂಖ್ಯೆ ಹೆಚ್ಚಿದೆಯೆ?  543 ಸಂಸದರಲ್ಲಿ ಕೇವಲ 62 ಮಂದಿ ಮಹಿಳೆಯರು ಎಂಬುದನ್ನು ನಾವು ನೆನಪಿಸಿಕೊಳ್ಳಬೇಕು.

ಈಗ ಚುನಾವಣೆ ನಡೆಯುತ್ತಿರುವ ಈ ಐದೂ ರಾಜ್ಯಗಳಲ್ಲಿನ ವಿಧಾನಸಭೆಗಳಲ್ಲಿನ ಶಾಸಕಿಯರ ಪ್ರಮಾಣವೂ ಶೇ 10 ದಾಟಿಲ್ಲ. ಕಳೆದ ಅನೇಕ ವರ್ಷಗಳಲ್ಲಿ  ವಿವಿಧ ರಾಜ್ಯಗಳ ವಿಧಾನಸಭೆಗಳಿಗೆ ಒಬ್ಬರೇ ಒಬ್ಬರು ಮಹಿಳೆಯೂ ಆಯ್ಕೆಯಾಗದ ಸಂದರ್ಭಗಳೂ ಇವೆ. ಸುಮಾರು ರಾಜ್ಯಗಳಲ್ಲಿ ಚುನಾವಣೆಗೆ ಮಹಿಳೆಗೆ ಟಿಕೆಟ್ ನೀಡಿದ ಪ್ರಮಾಣ  ಸುಮಾರು ಶೇ 5ಕ್ಕಿಂತ ಸ್ವಲ್ಪವೇ ಹೆಚ್ಚಿರುವ ಸ್ಥಿತಿಯೂ ಇದೆ.

2012ರಲ್ಲಿ ಉತ್ತರ ಪ್ರದೇಶ ವಿಧಾನಸಭೆಗೆ 405 ಶಾಸಕರ ಪೈಕಿ 35 ಮಹಿಳೆಯರು ಮಾತ್ರ ಆಯ್ಕೆಯಾಗಿದ್ದರು. ಹೀಗಿದ್ದೂ  ಇದು ಉತ್ತರಪ್ರದೇಶ ವಿಧಾನಸಭೆಯ ಆವರೆಗಿನ ಇತಿಹಾಸದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಾಗಿತ್ತು. ರಾಷ್ಟ್ರಕ್ಕೆ ಮೊದಲ ಹಾಗೂ ಏಕೈಕ ಮಹಿಳಾ ಪ್ರಧಾನಿಯನ್ನು ನೀಡಿದ ರಾಜ್ಯ ಉತ್ತರ ಪ್ರದೇಶ. ಆದರೆ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಮಹಿಳೆಯರ ಪ್ರಾತಿನಿಧ್ಯ ಅತ್ಯಲ್ಪ ಎಂಬುದು ವಿಪರ್ಯಾಸ.

ಇಂತಹ ಸನ್ನಿವೇಶದಲ್ಲಿ ಮತದಾನದ ಮಹತ್ವವನ್ನು ಮಹಿಳೆಯರು ಅರಿತುಕೊಳ್ಳುತ್ತಿದ್ದಾರೆ ಎಂಬುದು ಮಹತ್ವದ ಬೆಳವಣಿಗೆ. ನಿಧಾನವಾಗಿಯಾದರೂ ಮತದಾನದ ಅಗತ್ಯದ ಅರಿವು ಮಹಿಳೆಯರಲ್ಲಿ ಮೂಡುತ್ತಿದೆ. ಅನೇಕ ಮಹಿಳೆಯರು ಮತದಾನದ ಕುರಿತು ಸ್ವತಂತ್ರ ನಿರ್ಧಾರ ಕೈಗೊಳ್ಳುತ್ತಿದ್ದು ಅನೇಕ ಕಡೆ ಚುನಾವಣಾ ಫಲಿತಾಂಶದ ಮೇಲೂ ಪರಿಣಾಮ ಬೀರಿದ್ದಾರೆ ಎಂಬುದು ಮುಖ್ಯ.

ಬಿಹಾರದಲ್ಲಿ 2015ರಲ್ಲಿ ನಿತೀಶ್ ಕುಮಾರ್ ಪಕ್ಷದ ಗೆಲುವಿಗೆ ಕಾರಣವಾದದ್ದು  ‘ಮಹಿಳಾ ಮತ ಬ್ಯಾಂಕ್’ ಎಂಬುದನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ. ಹೀಗಾಗಿ ಮಹಿಳಾ ಮತದಾರಿಗೆ ಭರವಸೆ ನೀಡಿದಂತೆ ಸಂಪೂರ್ಣ ಪಾನ ನಿಷೇಧವನ್ನು ಕಳೆದ ವರ್ಷ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜಾರಿಗೊಳಿಸಿದ್ದಾರೆ.

ಪಂಜಾಬ್‌ನಲ್ಲಿ 1000 ಪುರುಷರಿಗೆ ಕೇವಲ 895 ಮಹಿಳೆಯರಿದ್ದಾರೆ. ಈ ಮಟ್ಟದ ಲಿಂಗಾನುಪಾತ ಕುಸಿತ ಕಳವಳಕಾರಿಯಾದದ್ದು. ಪಂಜಾಬ್‌ನಲ್ಲಿನ ಮಹಿಳೆಯ ಸ್ಥಿತಿಗತಿಗೆ ಇದು ದ್ಯೋತಕ. ಆದರೆ, ಮತದಾರರಾಗಿ ಪುರುಷ ಮತದಾರರಿಗಿಂತ ಹೆಚ್ಚಿನ ಹೊಣೆಗಾರಿಕೆ ಪ್ರದರ್ಶಿಸಿದ್ದಾರೆ ಪಂಜಾಬ್‌ ಮಹಿಳೆಯರು. ಚುನಾವಣಾ ಆಯೋಗದ ಅಂಕಿ ಅಂಶಗಳ ಪ್ರಕಾರ, ಈ ತಿಂಗಳು 4ರಂದು ನಡೆದ ಮಹಿಳಾ ಮತದಾನದ ಪ್ರಮಾಣ ಶೇ 78.14ರಷ್ಟಿತ್ತು. ಪುರುಷರ ಮತದಾನ ಪ್ರಮಾಣ ಶೇ 76.69ರಷ್ಟಿತ್ತು.

ಮಹಿಳೆಯರು ಅತ್ಯುತ್ಸಾಹದಿಂದ ಚುನಾವಣೆಗಳಲ್ಲಿ ಮತದಾನ ಮಾಡುವುದು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. 1962ರಿಂದ 2012ರವರೆಗೆ 16 ರಾಜ್ಯಗಳಲ್ಲಿ ನಡೆದ ಚುನಾವಣೆಗಳ ಅಂಕಿಅಂಶಗಳನ್ನು ಆಧರಿಸಿ ಹೇಳುವುದಾದರೆ ಮಹಿಳಾ ಮತದಾನ ಪ್ರಮಾಣ ಹೆಚ್ಚಾಗುತ್ತಿದೆ. ಆದರೆ ಪುರುಷರ ಮತದಾನ ಪ್ರಮಾಣ ಒಂದೇ ರೀತಿಯಲ್ಲಿದೆ.

2014ರ ಲೋಕಸಭೆ ಚುನಾವಣೆಯಲ್ಲಂತೂ 9 ರಾಜ್ಯಗಳಲ್ಲಿ ಪುರುಷರಿಗಿಂತ ಮಹಿಳಾ ಮತದಾರರು ಮತ ಚಲಾಯಿಸಿದ ಪ್ರಮಾಣ ಹೆಚ್ಚಿತ್ತು. ಉತ್ತರ ಪ್ರದೇಶದಲ್ಲಿ ಮೊನ್ನೆ ಭಾನುವಾರ (ಫೆ 19) ನಡೆದ ಮೂರನೇ ಹಂತದ ಮತದಾನದಲ್ಲಿ ಅಪಾರ ಸಂಖ್ಯೆಯ ಮಹಿಳೆಯರು ಮತಗಟ್ಟೆಗಳ ಮುಂದೆ ಸಾಲುಗಟ್ಟಿ ನಿಂತಿದ್ದರು. ಬದಲಾಗುತ್ತಿರುವ ಕಾಲಕ್ಕೆ ಮಾದರಿ ಇದು.

ನಿಜ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ  ಮತದಾನ ಮಾಡಲು ಮತಗಟ್ಟೆಗಳಿಗೆ ಬರುತ್ತಿದ್ದಾರೆ. ಆದರೆ ಚುನಾವಣಾ ಕಣದಲ್ಲಿ ಮಾತ್ರ  ಮಹಿಳೆಯರ ಪಾಲ್ಗೊಳ್ಳುವಿಕೆಯಲ್ಲಿ ಗಣನೀಯ ಏರಿಕೆ ಕಂಡುಬರುತ್ತಿಲ್ಲ.  ಕಳೆದ ಆಗಸ್ಟ್‌ನಲ್ಲಿ 16 ವರ್ಷಗಳ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಇರೊಮ್ ಶರ್ಮಿಳಾ ಸೇರಿದಂತೆ ಬೆರಳೆಣಿಕೆಯ ಮಹಿಳೆಯರು ಮುಂದಿನ ತಿಂಗಳು ನಡೆಯಲಿರುವ ಮಣಿಪುರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

ಮಹಿಳೆಯರ ಮತಶಕ್ತಿಯಿಂದ ಆಯ್ಕೆಯಾದ ಜನಪ್ರತಿನಿಧಿಗಳು ಮಹಿಳೆಯರ ಬೇಡಿಕೆಗಳಿಗೆ ಕಿವಿಗೊಡದಿದ್ದಲ್ಲಿ ಪರಿಸ್ಥಿತಿ ಸುಧಾರಿಸುವುದಿಲ್ಲ. ಹಾಗೆಯೇ ಆಯ್ಕೆಯಾದ ಶಾಸಕಿಯರೂ ಪುರುಷ ಬಂಧುಗಳ ರಬ್ಬರ್‌ಸ್ಟಾಂಪ್‌ಗಳಾಗಿ ಉಳಿಯುವ ವಿಪರ್ಯಾಸವನ್ನೂ ನಮ್ಮ ಸದ್ಯದ ರಾಜಕೀಯ ರಂಗದಲ್ಲಿ ಕಾಣುತ್ತಿದ್ದೇವೆ. ಇವು ಬದಲಾಗುವುದು ಎಂದಿಗೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT