ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತವಕ್ಕುಲ್: ಹೋರಾಟಕ್ಕೆ ಒಂದು ನಂಬಿಗೆ

Last Updated 15 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಆಕೆಯಿನ್ನೂ ತನ್ನ ತಾಯಿಯ ಗರ್ಭದಲ್ಲಿ  ಮೂರು ತಿಂಗಳ ಶಿಶು. ಆಗಲೇ ಆಕೆಯ ದೇಶದ ಅಧ್ಯಕ್ಷ ಪದವಿಯಲ್ಲಿ ಕುಳಿತ ಒಬ್ಬ ವ್ಯಕ್ತಿ ಆಕೆಗೆ 33 ವರ್ಷಗಳಾದರೂ ತನ್ನ ಕುರ್ಚಿಯನ್ನು ಬಿಟ್ಟುಕೊಟ್ಟಿಲ್ಲ. ನಿರಂಕುಶವಾದ ನಿರಂತರ ಅಧಿಕಾರ ಸರ್ವಾಧಿಕಾರವಾಗಿ ಬದಲಾಗಿದೆ. ಅಧ್ಯಕ್ಷನನ್ನು ಕೇಳುವವರೂ ಇಲ್ಲ.
 
ಆತನಿಗೆ ಹೇಳುವವರೂ ಇಲ್ಲ. ವ್ಯಕ್ತಿ ಸ್ವಾತಂತ್ರ್ಯಕ್ಕೆ ಆ ದೇಶದಲ್ಲಿ ಕಿಂಚಿತ್ತೂ ಬೆಲೆಯಿಲ್ಲ. ಸ್ವಾತಂತ್ರ್ಯ ಕೇಳಿದವರನ್ನು ಚೆನ್ನಾಗಿ ಥಳಿಸಿ ಕಂಬಿಗಳ ಹಿಂದೆ ತಳ್ಳಲಾಗಿದೆ. ಕಳೆದ ಆರು ವರ್ಷಗಳಿಂದ ದೇಶದ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿ ಬಂದು ನಿಂತಿರುವ 33 ವರ್ಷದ ಸುಂದರ ಮಹಿಳೆಗೆ ಇದೀಗ ನೊಬೆಲ್ ಶಾಂತಿ ಪ್ರಶಸ್ತಿ ಒಲಿದು ಬಂದಿದೆ. ಆಕೆಯ ಹೆಸರು ತವಕ್ಕುಲ್ ಕರ್ಮಾನ್. ಆಕೆಯ ದೇಶದ ಹೆಸರು ಯೆಮನ್. ಆ ದೇಶದ ಸರ್ವಾಧಿಕಾರಿ ಅಧ್ಯಕ್ಷನ ಹೆಸರು ಅಲಿ ಅಬ್ದುಲ್ ಸಾಲೆಹ್.

ತವಕ್ಕುಲ್ ಒಬ್ಬ ಪತ್ರಕರ್ತೆ. `ಸರಪಳಿ ರಹಿತ ಮಹಿಳಾ ಪತ್ರಕರ್ತರ ಸಂಘ~ದ ಅಧ್ಯಕ್ಷೆ. ಅಭಿವ್ಯಕ್ತಿಗೆ  ಸರ್ವಾಧಿಕಾರ ಹೇಗೆ ಅಡ್ಡಿ ಮಾಡುತ್ತದೆ ಎಂಬುದು ಪತ್ರಕರ್ತರಿಗೇ ಹೆಚ್ಚು ಅರ್ಥವಾಗುತ್ತದೆ. 2005ರಿಂದ ತಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಬೇಕು ಎಂದು ತವಕ್ಕುಲ್, ಪ್ರತಿ ಮಂಗಳವಾರ ಯೆಮನ್‌ನ ರಾಜಧಾನಿ ಸನಾ ನಗರದ ವಿಶ್ವವಿದ್ಯಾಲಯದ ಮುಂದೆ  ಪ್ರತಿಭಟನೆ ಮಾಡುತ್ತಿದ್ದಾರೆ.
 
ಕಳೆದ ಆರು ವರ್ಷಗಳಲ್ಲಿ ಅದು ನಿರಂತರವಾಗಿ ನಡೆದುಕೊಂಡು ಬಂದಿದೆ. ಅನೇಕ ಸಾರಿ ತವಕ್ಕುಲ್ ಬಂಧನಕ್ಕೆ ಒಳಗಾಗಿದ್ದಾರೆ. ಅವರ ಮೇಲೆ ಸರ್ವಾಧಿಕಾರಿಯ ಬಂಟರು ದೈಹಿಕ ಹಲ್ಲೆ ಮಾಡಿದ್ದಾರೆ. ಆದರೂ ತವಕ್ಕುಲ್ ನಿರಾಶರಾಗಿಲ್ಲ. ಪಕ್ಕದ ಈಜಿಪ್ಟ್‌ನಲ್ಲಿ, ಟ್ಯುನಿಶಿಯಾದಲ್ಲಿ ಸರ್ವಾಧಿಕಾರಿಗಳ ಆಡಳಿತ ಅಂತ್ಯಗೊಂಡುದು ಅವರಿಗೆ ಒಂದು ಆಶಾಕಿರಣದಂತೆ ಗೋಚರಿಸುತ್ತಿದೆ.
 
ಈಜಿಪ್ಟ್‌ನಲ್ಲಿ ಹೋಸ್ನಿ  ಮುಬಾರಕ್ ಅಧಿಕಾರ ವಹಿಸಿಕೊಂಡುದು ಯೆಮನ್‌ನಲ್ಲಿ ಸಾಲೆಹ್ ಅಧಿಕಾರ ವಹಿಸಿಕೊಂಡ ಒಂದು ವರ್ಷದ ನಂತರ. ಹಾಗೆ ನೋಡಿದರೆ ಯೆಮನ್‌ನಲ್ಲಿಯೇ ಸರ್ವಾಧಿಕಾರ ಮೊದಲು ಅಂತ್ಯಗೊಳ್ಳಬೇಕಿತ್ತು. ಹೋಸ್ನಿ, ಅಧಿಕಾರ ತ್ಯಾಗ ಮಾಡಲು ಒತ್ತಡ ಹೇರಿದ ಅಮೆರಿಕ, ಯೆಮನ್ ಸರ್ವಾಧಿಕಾರಿ ವಿರುದ್ಧ ಅದೇ ಒತ್ತಡ ಹೇರುತ್ತಿಲ್ಲ.

ಅಮೆರಿಕವೇ ಹಾಗೆ. ಅದರ ನಡೆಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಅಮೆರಿಕ ಅಲಿ ಅಬ್ದುಲ್ ಸಾಲೆಹ್‌ಗೆ ಅಧಿಕಾರ ತ್ಯಜಿಸಲು ಹೇಳುವುದನ್ನು ಬಿಡಲಿ, ಆದರೆ ಯೆಮನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನೂ ಗೌಣ ಎನ್ನುವಂತೆ ಬಿಂಬಿಸುತ್ತಿದೆ. ಯೆಮನ್‌ನಲ್ಲಿ ಹೆಣ್ಣುಮಕ್ಕಳು ಪ್ರತಿಭಟನೆಯ ಮುಂಚೂಣಿಯಲ್ಲಿ ಇರುವುದನ್ನೂ `ನ್ಯೂಯಾರ್ಕ್ ಟೈಮ್ಸ~ ಪತ್ರಿಕೆ ಸರಿಯಾಗಿ ಬಿಂಬಿಸುತ್ತಿಲ್ಲ ಎಂಬ ಅಳಲು ತವಕ್ಕುಲ್ ಅವರದು.

ಯೆಮನ್ ಅಂಥ ದೊಡ್ಡ ದೇಶವೇನೂ ಅಲ್ಲ. ಗಾತ್ರದಲ್ಲಿ ಫ್ರಾನ್ಸ್‌ನಷ್ಟು ಚಿಕ್ಕದು. ದೇಶದಲ್ಲಿ ಬಡವರೇ ಹೆಚ್ಚು. ಅವರ ಸಂಖ್ಯೆ ಅರ್ಧ ಕೋಟಿಗಿಂತ ಹೆಚ್ಚು ಎಂದು ಒಂದು ಅಂದಾಜು. ಅವರಲ್ಲಿ ಅನಕ್ಷರಸ್ಥರೇ ಜಾಸ್ತಿ. ತೈಲ ಬಾವಿಗಳ ದೃಷ್ಟಿಯಿಂದಲೂ ದೇಶ ಸಮೃದ್ಧವಲ್ಲ.

ದೇಶದ ಸಂಪತ್ತನ್ನು ಅಧಿಕಾರಸ್ಥರೇ ಕೊಳ್ಳೆ ಹೊಡೆದುದೇ ಜಾಸ್ತಿ. 2025ರ ವೇಳೆಗೆ ಆ ದೇಶದಲ್ಲಿ ಕುಡಿಯುವ ನೀರು ಸಿಗುವುದಿಲ್ಲ. ಇಡೀ ವಿಶ್ವದಲ್ಲಿ ಕುಡಿಯುವ ನೀರು ಇಂಗಿ ಹೋಗುವ ಮೊದಲ ದೇಶವದು ಎಂಬ ಕುಖ್ಯಾತಿ ಅದಕ್ಕೆ. ಆದರೂ ಸರ್ವಾಧಿಕಾರಿ ಸಾಲೆಹ್ ಏನೂ ಮಾಡುತ್ತಿಲ್ಲ ಎಂಬ ಆತಂಕ ತವಕ್ಕುಲ್ ಮತ್ತು ಗೆಳತಿಯರದು.
 
ಅಲ್ಲಿನ ಹೆಣ್ಣು ಮಕ್ಕಳ ಸ್ಥಿತಿ ಇನ್ನೂ ದಾರುಣ. ದೇಶದ ಒಟ್ಟು ಜನಸಂಖ್ಯೆಯ ಮೂರರಲ್ಲಿ ಎರಡರಷ್ಟು ಇರುವ ಹೆಣ್ಣು ಮಕ್ಕಳಿಗೆ ಅಲ್ಲಿ ಯಾವ ಸ್ವಾತಂತ್ರ್ಯವೂ ಇಲ್ಲ. ಹುಟ್ಟಿದ ಗಂಡುಮಕ್ಕಳ ಸಲುವಾಗಿ ಹೆಣ್ಣು ಮಕ್ಕಳಿಗೆ ತಂದೆ ತಾಯಿಯರು ಪೌಷ್ಟಿಕ ಆಹಾರ ಕೊಡುವುದಿಲ್ಲ. ಹಾಗಾಗಿ ಮಹಿಳೆಯರಲ್ಲಿ ಪೌಷ್ಟಿಕಾಂಶಗಳ ಕೊರತೆ ಹೆಚ್ಚು.
 
ಬಟ್ಟೆ ಧರಿಸುವ ವಿಚಾರದಲ್ಲಿಯೂ ನಿರ್ಬಂಧ ಜಾಸ್ತಿ. ತವಕ್ಕುಲ್ ಅವಕುಂಠನವನ್ನು ಕಿತ್ತು ಹಾಕುವ ಮೂಲಕವೇ  ಪ್ರತಿಭಟನೆ ಆರಂಭಿಸಿದರು. ಅವಕುಂಠನ ಧರಿಸದೆಯೇ ಟಿ.ವಿ ಮಾಧ್ಯಮದ ಮುಂದೆ ಕಾಣಿಸಿಕೊಂಡಾಗ ಇಡೀ ಯೆಮನ್ ಬೆಚ್ಚಿ ಬಿತ್ತು. ಅವಕುಂಠನ ಸಾಂಸ್ಕೃತಿಕವಾದುದೇ ಹೊರತು ಧಾರ್ಮಿಕ ನಿರ್ಬಂಧವಲ್ಲ ಎಂಬುದು ಅವರ ವಾದ.

ಹಾಗೆಂದು ಅವಕುಂಠನವನ್ನು ಪೂರ್ತಿ ತೆಗೆದುಹಾಕಿಲ್ಲ. ಅವರು ತಲೆಗೆ ಸ್ಕಾರ್ಫ್ ಸುತ್ತಿಕೊಳ್ಳುತ್ತಾರೆ. ಆದರೆ, ಮುಖ ಮುಚ್ಚಿಕೊಳ್ಳುವುದಿಲ್ಲ. ಆ ಸ್ಕಾರ್ಫ್ ಸದಾ ಗುಲಾಬಿ ಬಣ್ಣದ್ದೇ ಆಗಿರುವಂತೆಯೂ ನೋಡಿಕೊಳ್ಳುತ್ತಾರೆ. ಅದಕ್ಕೆ ವಿಶೇಷ ಅರ್ಥ ಇದ್ದರೂ ಇದ್ದೀತು! 17 ವರ್ಷಕ್ಕಿಂತ ಮುಂಚೆ ಹೆಣ್ಣು ಮಕ್ಕಳಿಗೆ ಮದುವೆ ಮಾಡಬಾರದು ಎಂದೂ ತವಕ್ಕುಲ್ ಅವರೇ ತಮ್ಮ ದೇಶದಲ್ಲಿ ಮೊದಲು ದನಿ ಎತ್ತಿದವರು.

ತವಕ್ಕುಲ್ ನೋಡುತ್ತಲೇ ಇದ್ದರು: ದೇಶದಲ್ಲಿನ ದುರಾಡಳಿತ, ಭ್ರಷ್ಟಾಚಾರ ಅವರ ರಕ್ತವನ್ನು ಕುದಿಸುತ್ತಿತ್ತು. ಒಂದು ದಿನ ಸರ್ವಾಧಿಕಾರಿ ಸಾಲೆಹ್‌ಗೆ ನಿಕಟವಾದ ಬುಡಕಟ್ಟು ನಾಯಕನೊಬ್ಬನಿಗಾಗಿ ಜಾ~ಅಷಿನ್ ಎಂಬ ಸಮುದಾಯದ 30 ಕುಟುಂಬಗಳನ್ನು  ಅವರ ಹಳ್ಳಿಯಿಂದ ಎತ್ತಂಗಡಿ ಮಾಡಿ ಅವರು ಉಳುಮೆ ಮಾಡುತ್ತಿದ್ದ ಭೂಮಿಯನ್ನು ಬುಡಕಟ್ಟು ನಾಯಕನಿಗೆ ವಿತರಿಸಲಾಯಿತು. ಜಾ~ಅಷಿನ್ ಸಮುದಾಯದವರು ತಮ್ಮ ಭೂಮಿಯನ್ನು ತಮಗೆ ಮರಳಿ ಕೊಡಿಸಬೇಕು ಎಂದು ಮಾಡಿಕೊಂಡ ಮನವಿ ಸರ್ವಾಧಿಕಾರಿಯ ಕಿವಿಯ ಮೇಲೆ ಬೀಳಲೇ  ಇಲ್ಲ. ಬೀಳುವುದು ಸಾಧ್ಯವೂ ಇರಲಿಲ್ಲ. ಏಕೆಂದರೆ, ಆತ ಬೇಕೆಂದೇ ಆ ಕೆಲಸ ಮಾಡಿದ್ದ. ಅವರ ಕಾರಣವನ್ನು ಮುಂದಿಟ್ಟುಕೊಂಡು, ಅವರ ಭೂಮಿಯನ್ನು ಅವರಿಗೆ ಮರಳಿಸಬೇಕು ಎಂದು ತವಕ್ಕುಲ್ ಹೋರಾಟ ಆರಂಭಿಸಿದರು. ಅದು ಅವರಿಗೆ ಒಂದು ನೆಪವಾಗಿತ್ತು. ತಾವು ಒಂದು ಪತ್ರಿಕೆ ಶುರು ಮಾಡಬೇಕು ಎಂದು ತವಕ್ಕುಲ್ ಕೇಳಿದಾಗಲೂ ಅಧ್ಯಕ್ಷರು ಅನುಮತಿ ಕೊಡಲಿಲ್ಲ. ಟ್ಯುನಿಶಿಯಾದಲ್ಲಿ ಮಾಡಿದ ಹಾಗೆ ಸ್ವಾತಂತ್ರ್ಯಪರ ಎಸ್‌ಎಂಎಸ್ ಕಳುಹಿಸಲು ಅನುಮತಿ ಕೊಡಬೇಕು ಎಂದಾಗಲೂ ಅನುಮತಿ ಸಿಗಲಿಲ್ಲ.

ಆದರೂ ಅವರು ನಂಬಿಗೆ ಕಳೆದುಕೊಂಡಿಲ್ಲ. ತವಕ್ಕುಲ್ ಎಂದರೆ ಅರೆಬಿಕ್ ಭಾಷೆಯಲ್ಲಿ ನಂಬಿಗೆ ಎಂದೇ ಅರ್ಥ. ಅಲಿ ಅಬ್ದುಲ್ ಸಾಲೆಹ್ ಅಧಿಕಾರ ಬಿಟ್ಟುಕೊಡದೇ ತನ್ನ ದೇಶದ ಜನರಿಗೆ ನಂಬಿಗೆ ದ್ರೋಹ ಮಾಡಿದ್ದಾರೆ ಎಂದೇ ತವಕ್ಕುಲ್ ವಾದಿಸುತ್ತಿದ್ದಾರೆ. ತಮ್ಮ ಮೇಲೆ ಅನೇಕ ಸಾರಿ ದೈಹಿಕ ಹಲ್ಲೆ ನಡೆದು ತಮ್ಮನ್ನು ಹಲವು ಸಾರಿ ಕಾರಾಗೃಹಕ್ಕೆ ತಳ್ಳಿದಾಗಲೂ, ನಿತ್ಯ ಪ್ರಾಣಭಯದ ಕರೆಗಳು ಬರುತ್ತಿದ್ದರೂ, ಅಂತರ್‌ರಾಷ್ಟ್ರೀಯ ಸಮುದಾಯ ನಿರೀಕ್ಷಿತ ರೀತಿಯಲ್ಲಿ ತನ್ನ ದೇಶದ ಹೋರಾಟಗಾರರ ಪರವಾಗಿ ನಿಲ್ಲದ ನಿರಾಶೆಯಿದ್ದಾಗಲೂ ತವಕ್ಕುಲ್ ಅವರಿಗೆ ಹಿಂಸೆಯ ಮಾರ್ಗ ತುಳಿಯಬೇಕು ಎಂದು ಅನಿಸಿಲ್ಲ. ಅವರ ಕಚೇರಿಯಲ್ಲಿ ಮಾರ್ಟಿನ್ ಲೂಥರ್ ಕಿಂಗ್ (ಜೂ), ಮಹಾತ್ಮ ಗಾಂಧಿ ಮತ್ತು ನೆಲ್ಸನ್ ಮಂಡೇಲಾ ಅವರ ಭಾವಚಿತ್ರಗಳು ಇವೆ. ಈ ಮೂವರೂ ಹಾಕಿಕೊಟ್ಟ ಅಹಿಂಸೆಯ ಮಾರ್ಗದಲ್ಲಿಯೇ ಅವರು ತಮ್ಮ ಹೋರಾಟವನ್ನು ನಡೆಸುತ್ತಿದ್ದಾರೆ.

ಈ ಹೆಣ್ಣು ಮಗಳು ತನ್ನ ದೇಶದ ಮಹಿಳೆಯರಲ್ಲಿ ತುಂಬಿದ ನಂಬಿಗೆಯೂ ಅಸಾಧಾರಣವಾದುದು. `ನಾವು ಸಮಸ್ಯೆಯ ಒಂದು ಭಾಗ ಎಂದೂ ಭಾವಿಸಬಾರದು. ಬದಲಿಗೆ ಪರಿಹಾರದ ಒಂದು ಭಾಗ ಎಂದು ಭಾವಿಸೋಣ. ಅನೇಕ ವರ್ಷಗಳಿಂದ ಅಂಚಿನಲ್ಲಿಯೇ ಬದುಕು ಸಾಗಿಸುತ್ತಿದ್ದೇವೆ. ಈಗ ಎದ್ದು ನಿಲ್ಲೋಣ. ಯಾರ ಅನುಮತಿಯನ್ನೂ ಕೇಳದೆ ಅಥವಾ ಅವರು ಒಪ್ಪಿಕೊಳ್ಳುತ್ತಾರೆಯೋ ಇಲ್ಲವೋ ಎಂದು ಚಿಂತಿಸದೇ ಸಕ್ರಿಯರಾಗೋಣ. ಆ ಮೂಲಕ ಇಷ್ಟು ವರ್ಷ ನಮ್ಮನ್ನು ಹತ್ತಿಕ್ಕಿದ ಸಮಾಜಕ್ಕೆ ಬುದ್ಧಿ ಹೇಳೋಣ; ಇಷ್ಟು ವರ್ಷ ಸರ್ವಾಧಿಕಾರಿ ತೊತ್ತಳದುಳಿತಕ್ಕೆ ಸಿಕ್ಕು ನಲುಗಿರುವ ದೇಶ ಮತ್ತೆ ಪ್ರಗತಿ ಪಥದಲ್ಲಿ ಸಾಗುವುದನ್ನು ಕಾಣೋಣ~ ಎಂದು ಆಕೆ ಕೊಟ್ಟ ಕರೆ ಎಲ್ಲ ಮಹಿಳೆಯರ ಹೃದಯವನ್ನು ಗೆದ್ದಿದೆ. ಈಗ ಯೆಮನ್‌ನ ಪ್ರತಿಭಟನೆಯಲ್ಲಿ ಹೆಣ್ಣು ಮಕ್ಕಳದೇ ದೊಡ್ಡ ಸಂಖ್ಯೆ; ಪಾತ್ರ.

ನಿನ್ನೆ ಮೊನ್ನೆವರೆಗೆ ತವಕ್ಕುಲ್ ಅವರಿಗೆ ಭವಿಷ್ಯದಲ್ಲಿ ಏನಾಗಬಹುದು ಎಂಬ ನಂಬಿಕೆ ಇರಲಿಲ್ಲ. ಆದರೆ, ಎಲ್ಲ ಹೋರಾಟಗಾರರಲ್ಲಿ ಇರುವಂಥದೇ ಕೆಚ್ಚೆದೆ, ವಿಶ್ವಾಸ ಅವರಲ್ಲಿಯೂ ಇತ್ತು. `ನೋಡೋಣ, ಟ್ಯುನಿಶಿಯಾದಲ್ಲಿ, ಈಜಿಪ್ಟ್‌ನಲ್ಲಿ ಆದ ಹಾಗೆ ಇಲ್ಲಿಯೂ ಸರ್ವಾಧಿಕಾರಿಯ ಪತನ ಆದೀತು. ಅಲ್ಲಿನ ಗೆಲುವು ಇಲ್ಲಿನ ಹೋರಾಟಗಾರರ ವಿಶ್ವಾಸವನ್ನು ಹೆಚ್ಚಿಸಿದೆ. ಈಗ ಇರುವುದು ಅಲ್ಜೀರಿಯಾದಲ್ಲಿ ಮೊದಲು ಸರ್ವಾಧಿಕಾರದ ಪತನ ಆಗುತ್ತದೆಯೋ ಅಥವಾ ಯೆಮನ್‌ನಲ್ಲಿ ಆಗುತ್ತದೆಯೋ ಎಂಬ ಕುತೂಹಲ ಅಷ್ಟೇ. ಒಂದು ಸಾರಿ ಅಲ್ಜೀರಿಯಾ ಮತ್ತು ಯೆಮನ್‌ನಲ್ಲಿಯೂ ಸರ್ವಾಧಿಕಾರಿಗಳ ಪತನವಾದರೆ, ಪ್ರತಿ ಅರಬ್ ರಾಷ್ಟ್ರಗಳಲ್ಲಿಯೂ ಇಂಥದೇ ಹೋರಾಟಕ್ಕೆ ಚಾಲನೆ ಸಿಗುತ್ತದೆ~ ಎಂಬ ನಂಬಿಗೆಯಲ್ಲಿ ಇದ್ದ ತವಕ್ಕುಲ್ ಅವರಿಗೆ ನೊಬೆಲ್ ಶಾಂತಿ ಪಾರಿತೋಷಕ ದೊಡ್ಡ ಭರವಸೆಯನ್ನು ತುಂಬಿದೆ. ಅಂತರರಾಷ್ಟ್ರೀಯ ಸಮುದಾಯ ಇದಕ್ಕಿಂತ ಬೇರೆ ರೀತಿಯಲ್ಲಿ ಅವರ ಬೆಂಬಲಕ್ಕೆ ನಿಲ್ಲಲು ಸಾಧ್ಯವಿರಲಿಲ್ಲ.

ತವಕ್ಕುಲ್, ನೊಬೆಲ್ ಪ್ರಶಸ್ತಿ ಪಡೆಯುತ್ತಿರುವ ಮೊದಲ ಅರಬ್ ಮಹಿಳೆ. ನೊಬೆಲ್ ಇತಿಹಾಸದಲ್ಲಿಯೇ ಇಷ್ಟು ಚಿಕ್ಕ ವಯಸ್ಸಿನಲ್ಲಿ ಪ್ರಶಸ್ತಿ ಪಡೆಯುತ್ತಿರುವ ಎರಡನೇ ವ್ಯಕ್ತಿ. ತವಕ್ಕುಲ್ ತಂದೆ ಅಬ್ದೆಲ್ ಸಲಾಂ ಕರ್ಮಾನ್ ಕೆಲವು ವರ್ಷಗಳ ಹಿಂದೆ ಸರ್ವಾಧಿಕಾರಿ ಸಾಲೆಹ್ ಸರ್ಕಾರದಲ್ಲಿ ಕಾನೂನು ಸಚಿವರಾಗಿ ಕೆಲಸ ಮಾಡಿದ ನಂತರ ರಾಜೀನಾಮೆ ಕೊಟ್ಟು ಹೊರಗೆ ಬಂದವರು. ಸೋದರ ತಾರೀಖ್ ಕರ್ಮಾನ್ ಕವಿಯಾಗಿ ಹೆಸರು ಮಾಡಿದ್ದಾರೆ. ಗಂಡನ ಹೆಸರು ಮೊಹ್ಮದ್ ಅಲ್-ನಹ್ಮಿ. ತವಕ್ಕುಲ್‌ಗೆ ಮೂವರು ಮಕ್ಕಳೂ ಇದ್ದಾರೆ. ಬರೀ ಪತ್ರಕರ್ತೆ ಮಾತ್ರವೇ ಆಗಿರದ ತವಕ್ಕುಲ್ ರಾಜಕೀಯವಾಗಿಯೂ ಸಕ್ರಿಯರಾಗಿದ್ದಾರೆ. ಅವರು ತಮ್ಮ ದೇಶದ ಸಂಸತ್ತಿನಲ್ಲಿ ವಿರೋಧ ಪಕ್ಷವಾಗಿರುವ ಅಲ್- ಇಸ್ಲಾಹ್ ಪಕ್ಷದ ಪ್ರತಿನಿಧಿ. ದೇಶದ ಶೂರಾ ಕೌನ್ಸಿಲ್‌ನ (ಕೇಂದ್ರ ಸಮಿತಿಯ) ಅಧಿಕಾರ ಹುದ್ದೆಯಲ್ಲಿಯೂ ಇದ್ದಾರೆ.

ಪತ್ರಕರ್ತೆಯೊಬ್ಬರು ಈಚಿನ ದಶಕದಲ್ಲಿ, ಒಂದು ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಹೀಗೆ ಮುಂಚೂಣಿಯಲ್ಲಿ ಇರುವ ನಿದರ್ಶನ ವಿರಳ ಅಥವಾ ಇಲ್ಲವೇ ಇಲ್ಲ ಎಂದರೂ ನಡೆದೀತು. ಹೋರಾಟವನ್ನು ದೂರ ನಿಂತು ಮಾತ್ರ ವರದಿ ಮಾಡುವ ಸ್ವಾತಂತ್ರ್ಯಕ್ಕಿಂತ ಅದರ ಒಳಗೇ ಇದ್ದು ವರದಿ ಮಾಡುವುದು ಮಹಾತ್ಮ ಗಾಂಧಿ ತೋರಿದ ದಾರಿ. ತವಕ್ಕುಲ್ ನಮ್ಮಂಥ ಎಲ್ಲ ಪತ್ರಕರ್ತರಿಗೆ ಒಂದು ದೊಡ್ಡ ಮಾದರಿ, ಭರವಸೆ ಮತ್ತು ನಂಬಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT