ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆರಹಿತವಾದ ‘ರೆಕ್ಕೆ’ಗಳನ್ನು ಕೊಡಿ...

Last Updated 10 ಜುಲೈ 2017, 19:30 IST
ಅಕ್ಷರ ಗಾತ್ರ

ಬಹಳ ದಿನಗಳಿಂದ ನಿರೀಕ್ಷಿಸಲಾಗುತ್ತಿದ್ದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜುಲೈ 1ರಿಂದ ರಾಷ್ಟ್ರದಾದ್ಯಂತ ಜಾರಿಗೆ ಬಂದಿದೆ.   ಜಿಎಸ್‌ಟಿ  ಎಂದರೆ ‘ಗುಡ್ ಅಂಡ್ ಸಿಂಪಲ್ ಟ್ಯಾಕ್ಸ್’ ಎಂದೂ ಬಣ್ಣಿಸಲಾಗುತ್ತಿದೆ.  ತತ್ವಶಃ ಇದು ಒಳ್ಳೆಯದೇ. ಆದರೆ ಈ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಲು ಸರ್ಕಾರ ಯತ್ನಿಸುತ್ತಿರುವ ರೀತಿ ಸರಳವಾಗಿದೆಯೆ? ವಿವಿಧ ಜನವರ್ಗಗಳ ಮೇಲೆ ಬೀರುವ ಪರಿಣಾಮಗಳೇನು? ಎಂಬುದು ಇನ್ನೂ ಪೂರ್ಣ ಅರಿವಿಗೆ ನಿಲುಕಿಲ್ಲ. ಆದರೆ ಲಿಂಗತ್ವದ ಮಸೂರವನ್ನು ಹಿಡಿದು ನೋಡಿದಾಗ ಮಹಿಳಾ ಸಬಲೀಕರಣ ಕುರಿತಂತಹ ಸರ್ಕಾರದ ನೀತಿ ಎಲ್ಲಿ ಹೋಯಿತು ಎಂಬ ಪ್ರಶ್ನೆಯನ್ನಂತೂ ಕೇಳಲೇಬೇಕಾಗುತ್ತದೆ.  ಸರಕು ಮತ್ತು ಸೇವೆಗಳಿಗೆ ನಾಲ್ಕು ಹಂತಗಳಲ್ಲಿ ತೆರಿಗೆ ವಿಧಿಸುವ ಹೊಸ ತೆರಿಗೆ   ವ್ಯವಸ್ಥೆಯಲ್ಲಿ ಸ್ಯಾನಿಟರಿಪ್ಯಾಡ್ ಅಥವಾ  ನ್ಯಾಪ್‌ಕಿನ್‌ಗಳಿಗೆ ಶೇ 12ರಷ್ಟು ತೆರಿಗೆ ವಿಧಿಸಿರುವುದರ ವಿರುದ್ಧ ಮಹಿಳೆಯರು ಗಟ್ಟಿಯಾಗಿ ದನಿ ಎತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ವಾಗ್ವಾದಗಳ ಬಿಸಿ ಏರುತ್ತಿರುವಂತೆಯೇ ಕೆಲವೆಡೆ  ಪ್ರತಿಭಟನಾ ಪ್ರದರ್ಶನಗಳೂ ನಡೆಯುತ್ತಿವೆ. ವೈಯಕ್ತಿಕ ಆರೋಗ್ಯ ಹಾಗೂ ಸ್ವಚ್ಛತೆಯ ಸಾಧನವಾದ ಸ್ಯಾನಿಟರಿ ನ್ಯಾಪ್‌ಕಿನ್‌ಗಳು ಶೇ12ರಷ್ಟು ತೆರಿಗೆ ಆಕರ್ಷಿಸುವಂತಹ ಲಕ್ಷುರಿ ವಸ್ತುವಾಗುವುದು ಹೇಗೆ ಸಾಧ್ಯ ಎಂಬ ಮಹಿಳೆಯರ ಪ್ರಶ್ನೆ ಪ್ರಸ್ತುತವಾದುದು. ಭಾರತದ ಮಹಿಳೆಯರಷ್ಟೇ ಅಲ್ಲ ಬ್ರಿಟನ್ ಹಾಗೂ ಅಮೆರಿಕ ಮಹಿಳೆಯರೂ  ಇಂತಹ ತೆರಿಗೆ ವಿರುದ್ಧ ಹೋರಾಡುತ್ತಿದ್ದಾರೆ.

ಮುಟ್ಟಿನ ದಿನಗಳಲ್ಲಿ ಬಳಸಲಾಗುವ  ಸಾಧನ ಟ್ಯಾಂಪೂನ್ ಮೇಲೆ ತೆರಿಗೆ ವಿಧಿಸುವ ಅಗತ್ಯದ ಬಗ್ಗೆ ಪ್ರಶ್ನೆ ಕೇಳಿದಾಗ ಆಗ ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ನೀಡಿದ್ದ  ಉತ್ತರ ಇದು:   ‘ಇವನ್ನು ‘ಲಕ್ಷುರಿ’ ವಸ್ತುಗಳೆಂದು ರಾಜ್ಯಗಳು ಏಕೆ ತೆರಿಗೆ ವಿಧಿಸುತ್ತವೆ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಇವು ಜಾರಿಗೊಂಡಾಗ ಬಹುಶಃ ಪುರುಷರು ಕಾನೂನು ಮಾಡುತ್ತಿದ್ದರೇನೊ ಎಂದು ನಾನು ಶಂಕಿಸುತ್ತೇನೆ’.

ಭಾರತದಲ್ಲಿನ ಸ್ಥಿತಿ ನೋಡಿ. ರಾಜಸ್ಥಾನದಲ್ಲಿ ಹಣಕಾಸು ಖಾತೆಯನ್ನೂ ನಿರ್ವಹಿಸುವ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ  ಅವರನ್ನು ಬಿಟ್ಟರೆ ಜಿಎಸ್‌ಟಿ ಮಂಡಳಿಯ ಎಲ್ಲಾ ಸದಸ್ಯರೂ (ರಾಜ್ಯಗಳ ಹಣಕಾಸು ಸಚಿವರುಗಳು) ಪುರುಷರೇ.   ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮುಖ್ಯಸ್ಥರಾಗಿರುವ ಈ ಮಂಡಳಿ, ನಾಲ್ಕು ಹಂತಗಳ ತೆರಿಗೆ ವ್ಯಾಪ್ತಿಗೆ ಬರುವ ಸರಕುಗಳು ಹಾಗೂ ಸೇವೆಗಳನ್ನು ಗುರುತಿಸುವ ಕೆಲಸ ನಡೆಸಿದೆ.

ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡಬೇಕು ಎಂಬ ಬಗ್ಗೆ ಮಹಿಳಾ ಕಾರ್ಯಕರ್ತರು ಹಾಗೂ ಮಹಿಳಾ ರಾಜಕೀಯ ನಾಯಕರು ಸುದೀರ್ಘ ಕಾಲದಿಂದ ಅಭಿಯಾನ ನಡೆಸಿಕೊಂಡು ಬಂದಿದ್ದಾರೆ.   ಅಸ್ಸಾಂನ ಕಾಂಗ್ರೆಸ್ ಸಂಸತ್ ಸದಸ್ಯೆ ಸುಷ್ಮಿತಾ ದೇವ್  ಅವರು ಈ ಬಗ್ಗೆ ಫೆಬ್ರುವರಿಯಲ್ಲೇ ಸಚಿವ ಅರುಣ್ ಜೇಟ್ಲಿ ಅವರಿಗೆ ಪತ್ರ ಬರೆದಿದ್ದರು. ಸ್ವಚ್ಛತೆಯ ಅಗತ್ಯದ ವಸ್ತುವಿನ ಮೇಲೆ ತೆರಿಗೆ ಹೇರುವುದರಿಂದ ಅವುಗಳನ್ನು ಪಡೆದುಕೊಳ್ಳಲು ಮಹಿಳೆಗೆ ಆರ್ಥಿಕ ಅಡ್ಡಿ ಉಂಟುಮಾಡಿದಂತಾಗುತ್ತದೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದರು.  ಅಷ್ಟೇ ಅಲ್ಲ ಸಂವಿಧಾನದ 14, 15, 21 ಹಾಗೂ 47ನೇ ವಿಧಿಗಳು ಎಲ್ಲರಿಗೂ ಸಮಾನತೆಯನ್ನು ನೀಡುತ್ತವೆ. ಲಿಂಗಾಧಾರಿತ ತಾರತಮ್ಯ ನಿಷೇಧಿಸುತ್ತದೆ. ಮತ್ತು ನಾಗರಿಕರ ಜೀವನಮಟ್ಟ ಸುಧಾರಣೆ ಎತ್ತರಿಸಲು ನಿರ್ದೇಶಿಸುತ್ತದೆ ಎಂಬಂತಹ ಮಾತುಗಳನ್ನು ಉಲ್ಲೇಖಿಸಿದ್ದ ಸುಷ್ಮಿತಾ ದೇವ್ ಅವರು ಮರುಬಳಕೆ ಮಾಡಬಹುದಾದ ಹತ್ತಿ ಪ್ಯಾಡ್‌ಗಳಿಗೆ  ಶೇ100ರಷ್ಟು  ತೆರಿಗೆ ವಿನಾಯಿತಿಯನ್ನು  ಕೋರಿದ್ದರು. ಜೊತೆಗೆ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ವಿಲೇವಾರಿಗೆ ಹೊಸತನದ ವಿಧಾನ ಅಳವಡಿಸಿಕೊಳ್ಳುವ ಸಲಹೆಯನ್ನೂ ನೀಡಿದ್ದರು. ಹಾಗೆಯೇ ಬಳಸಿ ಬಿಸಾಡುವ  ಪ್ಯಾಡ್‌ಗಳಿಗೆ ಕನಿಷ್ಠ ತೆರಿಗೆ ವಿಧಿಸಿ ಹೆಚ್ಚು ಪರಿಸರ ಸ್ನೇಹಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ತಯಾರಿಕೆಗೆ ನೆರವಿನ ಹಸ್ತ ನೀಡಬೇಕೆಂಬುದು ಅವರ ಮನವಿಯಾಗಿತ್ತು. ಆದರೆ ಈ ಪತ್ರಕ್ಕೆ ಯಾವುದೇ ಸ್ಪಂದನ ದೊರೆಯದಿದ್ದಾಗ ಮಾರ್ಚ್ 8ರ ಅಂತರರಾಷ್ಟ್ರೀಯ  ಮಹಿಳಾ ದಿನದಂದು change.orgಯಲ್ಲಿ ಆನ್‌ಲೈನ್ ಅಭಿಯಾನವನ್ನು ಅವರು  ಆರಂಭಿಸಿದ್ದಾರೆ. ಇದಕ್ಕೆ ಈವರೆಗೆ ಮೂರು ಲಕ್ಷಕ್ಕೂ ಹೆಚ್ಚು ಮಂದಿ ಸಹಿ ಹಾಕಿದ್ದಾರೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಅವರೂ  ಈ ಬೇಡಿಕೆಯ ಪರವಾಗಿದ್ದಾರೆ. ಹೀಗಿದ್ದೂ ಶೇ 12ರ ತೆರಿಗೆ ವ್ಯಾಪ್ತಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ ಹಾಗೂ ಟ್ಯಾಂಪೂನ್‌ಗಳನ್ನು ಸೇರಿಸಲಾಗಿದೆ.

ಋತುಬಂಧಕ್ಕೊಳಗಾದ ಮಹಿಳೆಯರು ಹಾಗೂ ಇನ್ನೂ ಋತುಮತಿಯಾಗದ  ಹೆಣ್ಣುಮಕ್ಕಳನ್ನು ಹೊರತುಪಡಿಸಿದರೆ ರಾಷ್ಟ್ರದಲ್ಲಿ 35.5 ಕೋಟಿ ಮಹಿಳೆಯರು ಪ್ರತಿತಿಂಗಳೂ ಋತುಚಕ್ರದ ತಿರುಗಣಿಯಲ್ಲಿ ಹಾದು ಬರಲೇಬೇಕು. ಆದರೆ ಈ ಪೈಕಿ, ಶೇ 88ರಷ್ಟು ಮಹಿಳೆಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್ ಲಭ್ಯತೆ ಇಲ್ಲ. ಹಳೆ ಬಟ್ಟೆ, ಎಲೆ, ಮರಳು, ಬೂದಿ, ಬೆರಣಿ ಬಳಸುವವರಿದ್ದಾರೆ.  ಇದು ಸೃಷ್ಟಿಸುವ ಮುಜುಗರ, ರಕ್ತದ ಕಲೆ ಕಾಣಿಸಬಹುದೆಂಬ ಆತಂಕ,  ಪ್ರಜನನಾಂಗಗಳಿಗೆ ತಗುಲಬಹುದಾದ ಸೋಂಕುಗಳು ಸಾರ್ವಜನಿಕ ಪರಿಧಿಯಲ್ಲಿ ಚರ್ಚೆಯಾದದ್ದು ಕಡಿಮೆ. ಕುಗ್ಗಿಸುವ, ಕೀಳರಿಮೆ ಹೆಚ್ಚಿಸುವ ಪ್ರತಿತಿಂಗಳ ಮುಟ್ಟಿನ ಸಂಕಟಕ್ಕೆ  ವಿದಾಯ ಹೇಳಿದ್ದು ಕಳೆದ ಶತಮಾನದ 70ರ ದಶಕದಲ್ಲಿ  ಭಾರತೀಯ ಮಾರುಕಟ್ಟೆಗೆ ಧಾಂಗುಡಿ ಇಟ್ಟ ‘ಕೇರ್ ಫ್ರೀ’ ಎಂಬುದನ್ನಿಲ್ಲಿ ನೆನೆಯಬೇಕು. ನಿಯತಕಾಲಿಕೆಗಳಲ್ಲಿನ  ಜಾಹೀರಾತುಗಳ ಮೂಲಕ ಮಧ್ಯಮ ವರ್ಗದ ಮಹಿಳೆಯರ ಮನ ಸೆಳೆದ  ಈ ಸ್ಯಾನಿಟರಿ ನ್ಯಾಪ್‌ಕಿನ್‌ಗಳು ಮಹಿಳೆಗೆ  ಮುಟ್ಟಿನ ಸಂಕಟದಿಂದ ನೀಡಿದ ಬಿಡುಗಡೆ ಬಹು ದೊಡ್ಡದು. ಆಕೆಯ ಚಲನಶೀಲತೆಗೆ  ಹೊಸ ರೆಕ್ಕೆಗಳು ಆಗ ಮೂಡಿದ್ದು  ನಿಜ.  ಇಂತಹ ಬಿಡುಗಡೆಯ ಸ್ವಾತಂತ್ರ್ಯ ಎಲ್ಲರಿಗೂ ದಕ್ಕುವುದು ಅವಶ್ಯವಲ್ಲವೆ? ಏಕೆಂದರೆ ಈಗಲೂ  ಅನೇಕ ಹದಿಹರೆಯದ ಹುಡುಗಿಯರು ತಿಂಗಳಲ್ಲಿ ಕನಿಷ್ಠ 5 ದಿನ ಶಾಲೆ ತಪ್ಪಿಸಿಕೊಳ್ಳುತ್ತಾರೆ. ಶೇ 23ರಷ್ಟು ಬಾಲೆಯರು ಋತುಚಕ್ರ ಆರಂಭವಾದ ನಂತರ ಶಾಲೆ ಬಿಟ್ಟುಬಿಡುವುದು ಇನ್ನೂ ನಿಂತಿಲ್ಲ. ಇಂತಹ ಸಂದರ್ಭದಲ್ಲಿ ಭಾರತದಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್ ಕ್ರಾಂತಿ ಅಗತ್ಯ. ಇವು ಎಲ್ಲಾ ಹೆಣ್ಣುಮಕ್ಕಳಿಗೂ  ಸಿಗುವುದು ಅವಶ್ಯ. ಮಹಿಳೆಯ ಖಾಸಗಿತನ, ಘನತೆ ರಕ್ಷಣೆಗೂ ಇದು ಅಗತ್ಯ. ಸಬ್ಸಿಡಿ ನೀಡಿ ಬಳಕೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕಾದುದು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಸರ್ಕಾರದ ಕರ್ತವ್ಯವಾಗಿತ್ತು.  ಆದರೆ ಮಾಡಿದ್ದೇನು?

ಪ್ಯಾಡ್ ಮೇಲಿನ ಈ ತೆರಿಗೆ ಸಂವಿಧಾನಬದ್ಧವಾದುದೆ? ಇದಕ್ಕೆ ವಕೀಲ ಗೌತಮ್ ಭಾಟಿಯಾ ಹೀಗೆ ಬರೆಯುತ್ತಾರೆ: ‘ನಡೆನುಡಿಗಳನ್ನು ರೂಪಿಸಲು ಪ್ರಭುತ್ವಕ್ಕೆ ಸಶಕ್ತ ಆಯುಧವನ್ನು  ತೆರಿಗೆ ಆಡಳಿತ  ನೀಡುತ್ತದೆ. ಸಾಂವಿಧಾನಿಕ ನೀತಿಗಳಡಿ ತೆರಿಗೆ ಆಡಳಿತವನ್ನು ಪರೀಕ್ಷೆಗೊಳಪಡಿಸ ಬೇಕು’ ಎಂದು ಅವರು ಹೇಳುತ್ತಾರೆ. ಹೀಗಾಗಿ ತೆರಿಗೆ ವ್ಯವಸ್ಥೆಯನ್ನು ತಾರತಮ್ಯಕ್ಕೆ ಸಂಬಂಧಿಸಿದ  ಕಾನೂನು ಹಾಗೂ ನೀತಿಗಳ ಅನ್ವಯ  ಪರೀಕ್ಷೆಗೊಳಪಡಿಸಬಹುದು. ಪ್ಯಾಡ್‌ಗಳ ಮೇಲೆ ಜಿಎಸ್‌ಟಿ ವಿಧಿಸಿರುವುದು ಸಂವಿಧಾನದ 15(1)ನೇ ವಿಧಿಯನ್ನು  ಉಲ್ಲಂಘಿಸುತ್ತದೆ. ಇದು ಮಹಿಳೆಗೆ ತಾರತಮ್ಯ ಮಾಡುವಂತಹದ್ದು ಎಂಬುದು ಅವರ ವಾದ.  ಏಕೆಂದರೆ, ಶಾಲೆಗಳು, ಕಚೇರಿ  ಮತ್ತಿತರ ಸಾರ್ವಜನಿಕ ಸ್ಥಳಗಳು ಋತುಚಕ್ರದ ದೇಹವನ್ನು ಒಳಗೊಳ್ಳುವುದಕ್ಕೆ ಪೂರಕವಾಗಿಲ್ಲ.   ವ್ಯವಸ್ಥೆಯಲ್ಲಿರುವ ಈ ಅನನುಕೂಲಗಳ ಜೊತೆಗೆ ಪ್ಯಾಡ್‌ಗಳ ಮೇಲಿನ ಈ ಹೆಚ್ಚಿನ ತೆರಿಗೆ ಮಹಿಳೆ ಮೇಲಿನ ಹೊರೆ ಹೆಚ್ಚಿಸುತ್ತದೆ. ಮಹಿಳೆ ಮಾತ್ರ ಸ್ಯಾನಿಟರಿ ಪ್ಯಾಡ್ ಬಳಸುವುದರಿಂದ ಲಿಂಗಾಧಾರಿತವಾದ  ಈ ತೆರಿಗೆ ತಾರತಮ್ಯವನ್ನೂ ಮಾಡುವಂತಹದ್ದು  ಎಂಬುದು ಅವರ ವಾದ.

ಮಹಿಳೆಯ ದೇಹಕ್ಕಿಂತ, ಭಾರತೀಯ ಹೆಣ್ಣಿನ ಕುರಿತಾದ ಆದರ್ಶದ ನೆಲೆಯೇ ತೆರಿಗೆ ವಿಧಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಮುಖ್ಯವಾಗಿರುವುದು ಎದ್ದು ಕಾಣಿಸುವಂತಹ ಮತ್ತೊಂದು ವಿಪರ್ಯಾಸ. ಕುಂಕುಮ, ಬಳೆ, ಆಲ್ತಾದಂತಹ ಮುತ್ತೈದೆಗೆ ಸಂಬಂಧಿಸಿದ ವಸ್ತುಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಆದರೆ ಈ ಕೃಪಾಕಟಾಕ್ಷ ಅವಿವಾಹಿತ ಮಹಿಳೆಯರತ್ತ ಇದ್ದಂತೆ ಇಲ್ಲ. ಆದರ್ಶ ಭಾರತೀಯ ಮಹಿಳೆಯ ಕುರಿತಾದ ಈ ಪುರುಷ ಪ್ರಧಾನ  ಭ್ರಮಾತ್ಮಕತೆಯಲ್ಲಿ ಋತುಸ್ರಾವದ  ದೇಹ ಮೈಲಿಗೆಯದಾಗಿ ಬಿಡುತ್ತದೆ. ಹೀಗಾಗಿಯೇ. ‘ಬೊಕ್ಕಸದ ಮೇಲೆ ಬೀಳುವ ಹೊರೆ ಬಗ್ಗೆ ಅರಿವಿದೆಯೇ’ ಎಂದೂ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಮೇಲಿನ ತೆರಿಗೆ ವಿನಾಯಿತಿಗೆ ಒತ್ತಾಯಿಸುತ್ತಿರುವ ಸುಷ್ಮಿತಾ ದೇವ್ ಅವರಿಗೆ ಅರುಣ್ ಜೇಟ್ಲಿ ಅವರು  ಕೇಳಿದ್ದರು.  ಆದರೆ ಮಹಿಳೆ ಮದುವೆಯಾಗಿರಲಿ ಇಲ್ಲದಿರಲಿ, ಯಾವುದೇ ಜಾತಿ, ಧರ್ಮಕ್ಕೆ ಸೇರಿರಲಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳು ಹೆಚ್ಚು ಅಗತ್ಯವಲ್ಲವೆ? ತೆರಿಗೆ ವಿಧಿಸುವಿಕೆಯಲ್ಲಿ ತೋರಿಸಲಾಗಿರುವ ಈ ಆದ್ಯತೆಗಳು ಬಿಂಬಿಸುವುದಾದರೂ ಏನನ್ನು? ಮಹಿಳೆಯ ಆರೋಗ್ಯ ಹಾಗೂ ಆಕೆಯ ಅಸ್ತಿತ್ವದ ಮೇಲೆ ಯಾವುದೇ ನೇರ ಪರಿಣಾಮ ಬೀರದ ಸಾಂಕೇತಿಕ ವಸ್ತುಗಳಾದ ಬಳೆ, ಕುಂಕುಮಕ್ಕೆ ಹೆಚ್ಚಿನ ಪ್ರಾಮುಖ್ಯ ಏಕೆ? ಮಹಿಳೆಯ ಆರೋಗ್ಯಕ್ಕಿಂತ ಸಾಂಪ್ರದಾಯಿಕತೆಗೇ ಹೆಚ್ಚಿನ ಒತ್ತು ನೀಡಿದಂತಾಗಿಲ್ಲವೆ?  ಹಾಗೆಯೇ ನಾಲ್ಕು ಹಂತಗಳ ತೆರಿಗೆ ವ್ಯಾಪ್ತಿಯಿಂದ  ಚಿನ್ನವನ್ನು ಹೊರಗಿರಿಸಿ ವಿಶೇಷವಾದ ಶೇ 3ರಷ್ಟು ತೆರಿಗೆ ವಿಧಿಸಲಾಗಿದೆ.

ಆದರೆ ಫ್ರಿಜ್, ವಾಷಿಂಗ್ ಮೆಷಿನ್,  ಫುಡ್ ಪ್ರೊಸೆಸರ್‌ಗಳು, ವ್ಯಾಕ್ಯೂಮ್ ಕ್ಲೀನರ್‌ನಂತಹ ಗೃಹೋಪಕರಣಗಳನ್ನು  ಶೇ 28ರಷ್ಟು ಹೆಚ್ಚಿನ ತೆರಿಗೆ ವ್ಯಾಪ್ತಿಗೆ ತರಲಾಗಿದೆ.  ಪ್ರತಿ ಉದ್ಯೋಗಸ್ಥ ಮಹಿಳೆಗೂ ಅಗತ್ಯ ಪರಿಕರಗಳು ಇವು. ಆದರೆ ಈ ಸಾಧನಗಳ ಮೇಲೆ  ಈಗ ಶೇ 2– 3ರಷ್ಟು ತೆರಿಗೆ  ಹೆಚ್ಚಾಗಿದೆ. ಮನೆಯೊಳಗೆ ಬಂದಿಯಾಗಿದ್ದ ಮಹಿಳೆ ಹೊರಜಗತ್ತಿಗೆ ಕಾಲಿಡಲು ತಂತ್ರಜ್ಞಾನದ ಬೆಳವಣಿಗೆಯಿಂದ ಸಾಧ್ಯವಾದ ಈ ಗೃಹೋಪಯೋಗಿ ಉಪಕರಣಗಳದ್ದೂ ಪ್ರಮುಖ ಕೊಡುಗೆ ಎಂಬುದನ್ನು ಮರೆಯುವುದಾದರೂ ಹೇಗೆ? ಪುನರಾವರ್ತನೆಯ ಮನೆಗೆಲಸಗಳ ಶ್ರಮ,  ಒತ್ತಡಗಳಿಂದ ಮಹಿಳೆಗೆ ಇಂತಹ ಸಾಧನಗಳು ಮುಕ್ತಿ ನೀಡಿವೆ.  ಆಕೆ  ಹೊರಗೆ ದುಡಿಯಲು ಹಾಗೂ ಆರ್ಥಿಕ ಶಕ್ತಿ ಗಳಿಸಿಕೊಳ್ಳಲು ಇಂತಹ ಸಾಧನಗಳು ಆಕೆಗೆ ನೆರವಾಗಿವೆ. ಮನೆಗೆಲಸಗಳಲ್ಲಿ ಪುರುಷರ ಪಾಲ್ಗೊಳ್ಳುವಿಕೆಗೂ ಸಹಕಾರಿಯಾಗಿವೆ. ಆದರೆ ಇಂತಹ ಗೃಹೋಪಯೋಗಿ ಸಾಧನಗಳ ಮೇಲೆ ತೆರಿಗೆ ಹೆಚ್ಚಳ  ಲಿಂಗತ್ವ ದೃಷ್ಟಿಕೋನದಿಂದ ಪ್ರತಿಗಾಮಿಯಾದುದು.

ತೆರಿಗೆ ಹಾಗೂ ಮಹಿಳಾ ಹಕ್ಕುಗಳು ಪರಸ್ಪರ ಹೆಣೆದುಕೊಂಡಿವೆ. ತೆರಿಗೆಯನ್ನು ಹೇಗೆ ಸಂಗ್ರಹಿಸಲಾಗುತ್ತದೆ ಹಾಗೂ ವ್ಯಯ ಮಾಡಲಾಗುತ್ತದೆ  ಎಂಬುದು ಮಹಿಳೆ ಬದುಕಿನ ಮೇಲೆ ಪರಿಣಾಮ ಬೀರಬಹುದು. ಪುರುಷರಿಗೆ ಹೋಲಿಸಿದರೆ ಮಹಿಳೆಯರು ನಮ್ಮ ಸಮಾಜದಲ್ಲಿ ಅನನುಕೂಲ ಪರಿಸ್ಥಿತಿಯಲ್ಲಿ ಇದ್ದಾರೆ. ತೆರಿಗೆಗಳನ್ನು ವಿಧಿಸುವಾಗ ಇಂತಹ ವಿಚಾರಗಳು ಅರಿವಿನ ಪರಿಧಿಯಲ್ಲಿರಬೇಕು.

ಕಾಂಡೋಮ್‌ಗಳು ಹಾಗೂ ಗರ್ಭ ನಿರೋಧಕಗಳಿಗೆ ತೆರಿಗೆ ವಿನಾಯಿತಿ ಇದೆ.  ಹಾಗೆಯೇ ಮಹಿಳೆಗೆ ಅಗತ್ಯವಾದ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನೂ ಇದೇ ವರ್ಗದಡಿ  ಸೇರಿಸಲು ಇರುವ ಅಡ್ಡಿ ಏನು ಎಂಬ ಮಹಿಳೆಯರ ಪ್ರಶ್ನೆಗೆ ಸರ್ಕಾರ ಉತ್ತರಿಸಬೇಕು.  ಇಂತಹ ಕ್ರಮ ಬೇಟಿ ‘ಬಚಾವೊ ಬೇಟಿ ಪಢಾವೊ’ ಹಾಗೂ ‘ಸ್ವಚ್ಛ ಭಾರತ’ ಘೋಷಣೆಗೆ ಹೆಚ್ಚಿನ ಬಲ ತುಂಬುವಂತಹದ್ದು. ಏಕೆಂದರೆ ಶಾಲೆಗಳಲ್ಲಿ ಆಗ ಸಹಜವಾಗಿ ಬಾಲಕಿಯರ ಹಾಜರಿ ಹೆಚ್ಚಾಗುತ್ತದೆ.  ಔದ್ಯೋಗಿಕ ರಂಗದಲ್ಲಿ ಕೇವಲ ಶೇ 21.9ಕ್ಕಿಳಿದಿರುವ ಮಹಿಳೆಯರ ಪಾಲ್ಗೊಳ್ಳುವಿಕೆ ಪ್ರಮಾಣವೂ ಏರಿಕೆ ಕಾಣಬಹುದು. ಬೆಂಗಳೂರಿನ ಮಹಾನಗರಪಾಲಿಕೆ ಶಾಲೆ, ಕಾಲೇಜುಗಳಲ್ಲಿ ವೆಂಡಿಂಗ್ ಮೆಷಿನ್ ಮೂಲಕ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ವಿದ್ಯಾರ್ಥಿನಿಯರಿಗೆ ವಿತರಿಸುವ ವಿನೂತನ ಯೋಜನೆಯನ್ನು ಈ ಹಿಂದೆ ಪ್ರಕಟಿಸಲಾಗಿತ್ತು. ಆದರೆ ಇದು ಪೂರ್ಣಪ್ರಮಾಣದಲ್ಲಿ ಜಾರಿಯಾಗಿಲ್ಲ. ಕನಿಷ್ಠ ಹೆಣ್ಣುಮಕ್ಕಳ ಋತುಚಕ್ರದ ಕುರಿತಾಗಿ ಆವರಿಸಿದ್ದ ಮೌನ ಮುರಿದಿದೆ ಎಂಬುದಷ್ಟೇ  ಈಗ ದೊಡ್ಡ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT