ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೈವಕೃಪೆ

Last Updated 10 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಹಿರಿಯ ಸೂಫೀ ಸಂತ ಎಲ್-ಮಹದೀ ಅಬ್ಬಾಸಿ ತನ್ನ ಶಿಷ್ಯರೊಡನೆ ಕುಳಿತಿದ್ದ. ಆಗ ಶಿಷ್ಯನೊಬ್ಬ ಮಾತು ತೆಗೆದ,  `ಗುರುಗಳೇ ಮೊನ್ನೆ ನಿಮ್ಮ ಸಂಬಂಧಿಯೊಬ್ಬರು ಬಂದಿದ್ದರಲ್ಲವೇ? ಅವರು ತುಂಬ ಕಷ್ಟದಲ್ಲಿ ಇದ್ದ ಹಾಗಿತ್ತು.
 
ತಾವು ಮನಸ್ಸು ಮಾಡಿದ್ದರೆ ಅವರಿಗೆ ಸಹಾಯ ಮಾಡಬಹುದಿತ್ತಲ್ಲ? ತಾವು ಖಲೀಫರಿಗೆ ಒಂದು ಮಾತು ಹೇಳಿದರೂ ಸಾಕು, ನಿಮ್ಮ ಸಂಬಂಧಿಯ ಕಷ್ಟಗಳೆಲ್ಲ ಒಮ್ಮೆಲೇ ಕರಗಿ ಹೋಗುತ್ತಿದ್ದವು. ತಾವು ಯಾಕೆ ಸಹಾಯ ಮಾಡಲಿಲ್ಲ?~.
 
ಅದಕ್ಕೆ ಸಂತ ಹೇಳಿದ,  `ನಾನು ಸಹಾಯ ಮಾಡಿದೆ, ಇನ್ನಾರೋ ಸಹಾಯ ಮಾಡಿದರು ಎನ್ನುವುದು ಭ್ರಮೆ. ಸಹಾಯ ಮಾಡಲು ಯಾರೆಲ್ಲ ಪ್ರಯತ್ನಿಸಿದರೂ ಅದನ್ನು ಪಡೆಯುವುದು ಅವರ ದೈವದಲ್ಲಿ ಇಲ್ಲದೇ ಹೋದರೆ ಏನೂ ಮಾಡಲಾಗುವುದಿಲ್ಲ.

ದೈವಕೃಪೆ ಇದ್ದರೆ ಯಾರೇ ಸಹಾಯ ಮಾಡಲು ಪ್ರಯತ್ನಿಸದಿದ್ದರೂ ಹೇಗೊ ಸಹಾಯ ದೊರೆತೇ ತೀರುತ್ತದೆ~. ಕೆಲವು ಶಿಷ್ಯರಿಗೆ ಈ ಮಾತು ಸರಿ ಎನ್ನಿಸದಿದ್ದರೂ ಗುರುಗಳಿಗೆ ಎದುರು ಹೇಳಲಾರದೇ ಸುಮ್ಮನಿದ್ದರು.

ಮತ್ತೊಂದು ವಾರ ಕಳೆದ ಮೇಲೆ ಒಂದು ದಿನ ಮತ್ತೆ ಇದೇ ವಿಷಯದ ಬಗ್ಗೆ ಮಾತು ಬೆಳೆಯಿತು. ಆಗ ಗುರು ಅಬ್ಬಾಸಿ ಹೇಳಿದರು, `ನೀವು ಒಬ್ಬ ಅತ್ಯಂತ ಬಡವನನ್ನು ಕರೆದು ತನ್ನಿ. ಅವನಿಗೆ ಹಣದ ಅವಶ್ಯಕತೆ ತುಂಬ ಹೆಚ್ಚಾಗಿರಬೇಕು. ನಾನು ಅವನಿಗೆ ಸಹಾಯ ಮಾಡಲು ಪ್ರಯತ್ನಿಸುತ್ತೇನೆ. ಅವನ ದೈವದಲ್ಲಿ ಏನಿದೆಯೋ ನೋಡೋಣ~.

ಒಬ್ಬ ಶಿಷ್ಯ ಅತ್ಯಂತ ಬಡವನೊಬ್ಬನ್ನು ಹುಡುಕಿ ತಂದ. ಆತನನ್ನು ಒಂದು ಸೇತುವೆಯ ಇನ್ನೊಂದು ಬದಿಯಿಂದ ಕರೆದುಕೊಂಡು ಬರಲು ಗುರುಗಳು ಹೇಳಿದರು. ಅವನು ಬರುವುದಕ್ಕೆ ಮೊದಲೇ ಸೇತುವೆಯ ಮಧ್ಯಭಾಗದಲ್ಲಿ ರಸ್ತೆಯ ನಡುವೆಯೇ ಒಂದು ರೇಷ್ಮೆಯ ಚೀಲದಲ್ಲಿ ನೂರು ಬಂಗಾರದ ನಾಣ್ಯಗಳನ್ನು ಹಾಕಿ ಇಟ್ಟರು ಅಬ್ಬಾಸಿ.
 
ಆತ ಬರುವ ಸಮಯದಲ್ಲಿ ಯಾರೂ ಸೇತುವೆಯ ಮೇಲೆ ಹೋಗದಂತೆ ನೋಡಿಕೊಂಡರು. ಯಾಕೆಂದರೆ ಬೇರೆ ಯಾರಾದರೂ ಸೇತುವೆಯ ಮೇಲೆ ಹೋದರೆ ಅವರೇ ಚೀಲ ತೆಗೆದುಕೊಂಡು ಬಿಡಬಹುದಲ್ಲ?

ಬಡವ ಸೇತುವೆಯ ಆ ಬದಿಯಿಂದ ಬರತೊಡಗಿದ. ಗುರುಗಳು, ಶಿಷ್ಯರು ಸೇತುವೆಯ ಈ ಬದಿಯಲ್ಲಿ ಅಡಗಿ ಕುಳಿತಿದ್ದರು. ಶಿಷ್ಯರೆಲ್ಲರಿಗೂ ಖಚಿತವಾಗಿತ್ತು, ಬಡವ ಸೇತುವೆ ದಾಟುವುದರೊಳಗೆ ಶ್ರೀಮಂತನಾಗುತ್ತಾನೆ ಎಂದು.

ಆತ ನಿಧಾನವಾಗಿ ನಡೆದುಬರುತ್ತಿದ್ದಾನೆ. ರಸ್ತೆಯ ಮಧ್ಯದಲ್ಲೆೀ ನಡೆಯುತ್ತಿದ್ದಾನೆ. ಸೇತುವೆಯ ಮಧ್ಯದಲ್ಲಿ ರೇಷ್ಮೆಯ ಚೀಲದ ಪಕ್ಕದಲ್ಲೆೀ ಕಾಲಿಟ್ಟು ನಡೆದು ಬಂದ. ಆದರೆ ಬಗ್ಗಿ ಚೀಲವನ್ನು ತೆಗೆದುಕೊಳ್ಳಲಿಲ್ಲ.

ಸೇತುವೆಯ ಈ ಬದಿಗೆ ಬಂದಾಗ ಅವನನ್ನು ಕರೆದುಕೊಂಡು ಬಂದ ಶಿಷ್ಯ ಆತಂಕದಿಂದ ಕೇಳಿದ, `ನಿನಗೆ ಸೇತುವೆಯ ಮಧ್ಯದಲ್ಲಿ ಏನೂ ಕಾಣಲಿಲ್ಲವೇ?~.  ಅದಕ್ಕೆ ಆತ ಉತ್ತರಿಸಿದ, ಸೇತುವೆಯ ಮೇಲೆ ಬರುತ್ತಿದ್ದಂತೆ ಒಂದು ವಿಶೇಷ ಕಂಡಿತು. ಯಾರೂ ಸೇತುವೆಯ ಮೇಲೆ ಅಡ್ಡಾಡುತ್ತಿಲ್ಲ, ನಾನೊಬ್ಬನೇ ಇರುವುದು.

ಈ ಸಂತೋಷವನ್ನು ಅನುಭವಿಸಲು ನಾನು ನನ್ನ ಕಣ್ಣುಗಳನ್ನು ಭದ್ರವಾಗಿ ಮುಚ್ಚಿಕೊಂಡು ನಡೆದು ಬಂದೆ. ಯಾರೂ ಎದುರು ನಡೆದು ಬರಲೇ ಇಲ್ಲ . ಗುರುಗಳು ನಕ್ಕರು. ದೈವಕೃಪೆ ಇದ್ದರೆ ಮರುಭೂಮಿಯಲ್ಲೂ ಐಶ್ವರ್ಯ ಸಿಕ್ಕೀತು. ಅದಿಲ್ಲದಿದ್ದರೆ ಬಂಗಾರದ ಹುಡಿಯಲ್ಲಿ ಹೊರಳಾಡಿದರೂ ಒಂದು ಕಣವೂ ಮೈಗೆ ಅಂಟದೇ ಹೋಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT