ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ರವ ಸ್ಫಟಿಕ ಸೃಸ್ಟಿಸುವ ಮಾಯಾ ಬಿಂಬ

Last Updated 9 ಜನವರಿ 2013, 19:59 IST
ಅಕ್ಷರ ಗಾತ್ರ

ಎಲ್‌ಸಿಡಿ (Liquid Crystal Display)  ಪರದೆಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿವೆ. ಬೆಳಿಗ್ಗೆ ಎಚ್ಚರಿಸುವ ಅಲಾರಂ ಗಡಿಯಾರ, ವಾಶಿಂಗ್ ಮೆಶಿನ್. ಮೈಕ್ರೋವೇವ್ ಓವನ್, ರೇಡಿಯೊ, ಮೊಬೈಲ್ ಫೋನ್, ಕ್ಯಾಲ್ಕುಲೇಟರ್, ಎಂಪಿ3 ಪ್ಲೇಯರ್, ಲ್ಯಾಪ್‌ಟಾಪ್ ಪರದೆ -ಹೀಗೆ ಬಹುತೇಕ ಎಲ್ಲ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಲ್ಲಿ ಎಲ್‌ಸಿಡಿ ಪರದೆ ಇರುತ್ತದೆ. ಎಲ್‌ಸಿಡಿಯನ್ನು ಶಬ್ದಾನುವಾದ ಮಾಡಿದರೆ ದ್ರವಸ್ಫಟಿಕ ಪರದೆ ಎನ್ನಬಹುದು. ದ್ರವ ಮತ್ತು ಸ್ಫಟಿಕ ಒಟ್ಟಿಗೆ ಎನ್ನುವುದೇ ವಿರೋಧಾಭಾಸ. ಸ್ಫಟಿಕ ಪದವನ್ನು ಘನ ವಸ್ತುಗಳಿಗೆ ಬಳಸುವುದು. ಆದರೂ ಎಲ್‌ಸಿಡಿಯಲ್ಲಿ ಅದನ್ನು ದ್ರವಕ್ಕೆ ಬಳಸಲಾಗಿದೆ.

ಈ ಎಲ್‌ಸಿಡಿಗಳು ಹೇಗೆ ಕೆಲಸ ಮಾಡುತ್ತವೆ ಎಂಬುದರ ಬಗ್ಗೆ ಸ್ಥೂಲವಾಗಿ ತಿಳಿದುಕೊಳ್ಳೋಣ. ಸ್ಫಟಿಕ ಎಂದರೆ ಒಂದು ವ್ಯವಸ್ಥಿತ ರೀತಿಯಲ್ಲಿ ಹೊಂದಾಣಿಕೆಯಲ್ಲಿರುವ ಅಣು ಪರಮಾಣುಗಳು. ಇದು ಸಾಮಾನ್ಯವಾಗಿ ಘನ ವಸ್ತುಗಳಿಗೆ ಅನ್ವಯಿಸುತ್ತದೆ. ಕೆಲವು ದ್ರವಗಳಲ್ಲೂ ಒಂದು ಮಟ್ಟಿನ ವ್ಯವಸ್ಥಿತ ಹೊಂದಾಣಿಕೆ ಇದ್ದಲ್ಲಿ ಅದನ್ನು ದ್ರವಸ್ಫಟಿಕ ಎನ್ನುತ್ತಾರೆ. ದ್ರವಸ್ಫಟಿಕಗಳಿಗೆ ಕೆಲವು ವಿಶೇಷ ಗುಣಗಳಿವೆ. ಅವುಗಳಿಗೆ ವಿದ್ಯುತ್ ಒತ್ತಡ ನೀಡಿದಾಗ ಅವುಗಳಲ್ಲಿಯ ಅಣು ಪರಮಾಣುಗಳ ಹೊಂದಾಣಿಕೆಯಲ್ಲಿ ಬದಲಾವಣೆಯಾಗುತ್ತದೆ. ಇದರಿಂದಾಗಿ ಅವುಗಳ ಪಾರದರ್ಶಕತ್ವದಲ್ಲಿ ಮಾರ್ಪಾಡಾಗುತ್ತದೆ.

ಸರಳವಾಗಿ ಹೇಳುವುದಾದರೆ ಸೂಕ್ತ ವಿದ್ಯುತ್ ಒತ್ತಡ ನೀಡುವ ಮೂಲಕ ದ್ರವ ಸ್ಫಟಿಕದ ಪಾರದರ್ಶಕತ್ವ ಮತ್ತು ಅದು ಹಾಯಲು ಬಿಡುವ ಬಣ್ಣದಲ್ಲಿ ಬದಲಾವಣೆ ಮಾಡಬಹುದು. ದ್ರವಸ್ಫಟಿಕ ಪರದೆಯ ಪ್ರತಿ ಚಿತ್ರಘಟಕವೂ (ಪಿಕ್ಸೆಲ್) ಕೆಂಪು, ಹಸಿರು ಮತ್ತು ನೀಲಿ ಬಣ್ಣದ ಮತ್ತೆ ಮೂರು ಘಟಕಗಳಿಂದಾಗಿರುತ್ತದೆ. ಇವುಗಳಿಗೆ ನೀಡುವ ವಿದ್ಯುತ್ ಒತ್ತಡವನ್ನು ಸೂಕ್ತವಾಗಿ ನಿಯಂತ್ರಿಸಿ ಬೇಕಾಗಿರುವ ಬಣ್ಣವನ್ನು ಪಡೆಯಬಹುದು. ಪ್ರತಿ ದ್ರವಸ್ಫಟಿಕವೂ ತನ್ನದೇ ಬೆಳಕನ್ನು ಹೊಂದಿರುವುದಿಲ್ಲ. ಅದರ ಮೂಲಕ ಹಾಯುವ ಬೆಳಕನ್ನು ಅದು ಬೇಕಾದ ಬಣ್ಣಕ್ಕೆ ಪರಿವರ್ತಿಸುತ್ತದೆ.

ಎಲ್‌ಸಿಡಿಗಳಲ್ಲಿ ಪರದೆಯ ಹಿಂದೆ ಫ್ಲೋರಸೆಂಟ್ ಬೆಳಕಿನ ಆಕರವಿರುತ್ತದೆ. ಇವು ನಾಲ್ಕು ಬದಿಗಳಲ್ಲೂ ಇರುತ್ತವೆ. ಇವುಗಳ ಬೆಳಕು ಎಲ್ಲ ಕಡೆ ಸಮಾನವಾಗಿ ಪಸರಿಸುವಂತೆ ವ್ಯವಸ್ಥೆ ಮಾಡಿರುತ್ತಾರೆ. ಪ್ರತಿ ಚಿತ್ರಘಟಕವೂ ಈ ಬೆಳಕಿನಲ್ಲಿ ಅಗತ್ಯವಾದುದನ್ನು ಹೀರಿಕೊಂಡು ಉಳಿದವನ್ನು ಹಾಯ್ದು ಹೋಗಲು ಬಿಡುತ್ತದೆ. ಒಂದು ಎಲ್‌ಸಿಡಿಯಲ್ಲಿ ಅದರ ರೆಸೊಲೂಶನ್‌ಗೆ ಹೊಂದಿಕೊಂಡು ಲಕ್ಷಗಟ್ಟಲೆ ಚಿತ್ರಘಟಕಗಳಿರುತ್ತವೆ. ಇವು ಬೆಳಕನ್ನು ಹೀರಿ ತಡೆಯುವ ಮೂಲಕ ಚಿತ್ರವನ್ನು ಮೂಡಿಸುತ್ತವೆ. ಇದೇ ಕಾರಣದಿಂದ ಎಲ್‌ಸಿಡಿಗಳಿಗೆ ಒಂದು ಬಹುಮುಖ್ಯ ಕೊರತೆ ಉಂಟಾಗುತ್ತದೆ. ಅವನ್ನು ಎಲ್ಲ ಕೋನಗಳಿಂದಲೂ ನೋಡಲು ಸಾಧ್ಯವಿಲ್ಲ (viewing angle). 

ಎಲ್‌ಸಿಡಿ ಟಿ.ವಿ.ಗಳಲ್ಲಿ ಚಿತ್ರವನ್ನು ಮೂಡಿಸುವುದು ದ್ರವಸ್ಫಟಿಕ ಪರದೆಯ ಕೆಲಸ. ಈ ಪರದೆ ತುಂಬ ತೆಳ್ಳಗಾಗಿರುತ್ತದೆ. ಲ್ಯಾಪ್‌ಟಾಪ್ ಪರದೆಗಳು ತುಂಬ ತೆಳ್ಳಗಾಗಿರುವುದನ್ನು ಗಮನಿಸಿರಬಹುದು. ಪರದೆ ಮತ್ತು ಎಲೆಕ್ಟ್ರಾನಿಕ್ ಸರ್ಕ್ಯೂಟ್ ಎಲ್ಲ ಸೇರಿ ಎಲ್‌ಸಿಡಿ ಟಿ.ವಿ.ಯ ದಪ್ಪ ಆರೇಳು ಸೆ.ಮೀ. ಮಾತ್ರ ಇರುತ್ತದೆ. ಆರಾಮವಾಗಿ ಗೋಡೆಗೆ ನೇತುಹಾಕಬಹುದು. ಇವು ಎಲ್ಲ ಗಾತ್ರಗಳಲ್ಲಿ ದೊರೆಯುತ್ತವೆ. ಕಾರುಗಳಲ್ಲಿ ಅಳವಡಿಸಲು 7 ಇಂಚು ಗಾತ್ರದ ಟಿ.ವಿ. ಕೂಡ ಲಭ್ಯವಿದೆ. ಅಂತೆಯೇ 46 ಇಂಚು ಗಾತ್ರದ ಟಿ.ವಿ.ಗಳೂ ಲಭ್ಯ.

​ ಎಲ್‌ಸಿಡಿ ಟಿ.ವಿ.ಗಳ ಒಂದು ಉತ್ತಮ ಗುಣ ಎಂದರೆ ಅವು ಅತಿ ಕಡಿಮೆ ವಿದ್ಯುತ್ ಬಳಸುತ್ತವೆ. ಸಿಆರ್‌ಟಿ ಟಿ.ವಿ.ಗಳಷ್ಟು ಬಿಸಿ ಆಗುವುದೂ ಇಲ್ಲ.  ಎಲ್‌ಸಿಡಿ ಟಿ.ವಿ.ಗಳನ್ನು ಗಣಕಕ್ಕೆ ಮತ್ತು ಗೇಮ್ ಕನ್ಸೋಲ್‌ಗಳಿಗೆ (ಉದಾ -ಮೈಕ್ರೋಸಾಫ್ಟ್ ಎಕ್ಸ್‌ಬಾಕ್ಸ್, ಸೋನಿ ಪ್ಲೇಸ್ಟೇಶನ್, ಇತ್ಯಾದಿ) ಮಾನಿಟರ್ ಆಗಿಯೂ ಬಳಸಬಹುದು. ಕಡಿಮೆ ಮಂದಿ ಪ್ರೇಕ್ಷಕರಿಗೆ ಗಣಕ ಬಳಸಿ ಪ್ರೆಸೆಂಟೇಶನ್ ನೀಡಬೇಕಾದಾಗ ಪ್ರೊಜೆಕ್ಟರ್ ಬದಲಿಗೆ ಎಲ್‌ಸಿಡಿ ಟಿ.ವಿ. ಬಳಸಿದ್ದೇನೆ. ಎಲ್‌ಸಿಡಿಗಳಿಂದ ಯಾವುದೇ ಹಾನಿಕಾರಕ ವಿದ್ಯುತ್ಕಾಂತೀಯ ತರಂಗಗಳ ಉತ್ಸರ್ಜನೆ ಆಗುವುದಿಲ್ಲ. ಇವುಗಳನ್ನು ವೀಕ್ಷಿಸುವುದರಿಂದ ಕಣ್ಣಿಗೆ ಹಾನಿಯಿಲ್ಲ.

ಎಲ್‌ಸಿಡಿ ಟಿ.ವಿ.ಗಳ ಪ್ರಮುಖ ಕೊರತೆಗಳು ಎರಡು. ಅವುಗಳ ವ್ಯೆವಿಂಗ್ ಆ್ಯಂಗಲ್ ತುಂಬ ಕಡಿಮೆ ಇರುತ್ತದೆ. ಎಲ್ಲ ಕೋನಗಳಿಂದಲೂ ನೋಡಲು ಅಸಾಧ್ಯ. ಮನೆಮಂದಿಯೆಲ್ಲ ಟಿ.ವಿ.ಯ ಎದುರು ಕುಳಿತಿರಬೇಕಾಗಿರುತ್ತದೆ. ಇನ್ನೊಂದು ಪ್ರಮುಖ ಕೊರತೆ ಎಂದರೆ ಬಹುತೇಕ ಎಲ್‌ಸಿಡಿ ಟಿ.ವಿ.ಗಳು ಶುದ್ಧ ಕಪ್ಪು ಬಣ್ಣದವಾಗಿರುವುದಿಲ್ಲ. ಟಿ.ವಿ. ಆಫ್ ಇದ್ದಾಗ ಪರದೆ ಸಂಪೂರ್ಣ ಕಪ್ಪಾಗಿ ಕಾಣಿಸುವುದಿಲ್ಲ. ಸಿನಿಮಾ ನೋಡುವಾಗ ಪ್ಲಾಸ್ಮ ಟಿ.ವಿ.ಯಷ್ಟು ಉತ್ತಮ ಅನುಭವ ನೀಡುವುದಿಲ್ಲ. ಆದರೆ ಇವುಗಳ ಬೆಲೆ ಪ್ಲಾಸ್ಮ ಟಿ.ವಿ.ಗೆ ಹೋಲಿಸಿದರೆ ತುಂಬ ಕಡಿಮೆ.

ಎಲ್‌ಸಿಡಿ ಟಿ.ವಿ.ಗಳಲ್ಲಿ ಹೈಡೆಫಿನಿಶನ್ ರೆಸೊಲೂಶನ್ (1920x 1080 ಪಿಕ್ಸೆಲ್) ಲಭ್ಯ. ಹಲವು ಸಿನಿಮಾಗಳು ಮತ್ತು ಟಿ.ವಿ. ವಾಹಿನಿಗಳು ಈ ಅನುಪಾತದಲ್ಲಿರುತ್ತವೆ. ಈ ಮಾದರಿಗಳಲ್ಲಿ ಉದ್ದ ಮತ್ತು ಅಗಲದ ಅನುಪಾತ 16:9 ಇರುತ್ತದೆ. ಹೈಡೆಫಿನಿಶನ್ ಸಿನಿಮಾ ನೋಡಲು ಈ ಅನುಪಾತ ಸರಿಯಾಗಿರುತ್ತದೆ. ಆದರೆ ಹಳೆಯ 4:3 ಅನುಪಾತದ ಸಿನಿಮಾ ನೋಡುವಾಗ ಎಡಗಡೆ ಮತ್ತು ಬಲಗಡೆ ಉದ್ದಕ್ಕೆ ಕಪ್ಪು ಪಟ್ಟಿ ಇರುತ್ತದೆ. ಇದು ಎಲ್ಲ ಹೈಡೆಫಿನಿಶನ್ ಟಿ.ವಿ.ಗಳ ಸಾಮಾನ್ಯ ಗುಣ. ಎಲ್‌ಸಿಡಿ ಟಿ.ವಿ.ಗಳು 100% ಸಪಾಟಾಗಿರುತ್ತವೆ. ಕಡಿಮೆ ಗುಣಮಟ್ಟದ ಎಲ್‌ಸಿಡಿ ಪರದೆಗಳಲ್ಲಿ ಘೋಸ್ಟ್ ಎಫೆಕ್ಟ್ ಕಂಡುಬರುತ್ತದೆ. ಪರದೆಯಲ್ಲಿ ವಸ್ತುಗಳು ವೇಗವಾಗಿ ಚಲಿಸುತ್ತಿದ್ದರೆ ಅವು ಒಂದು ಸ್ಥಳದಿಂದ ಚಲಿಸಿದ ನಂತರವೂ ಅವುಗಳ ಒಂದು ರೀತಿಯ ನೆರಳು ಸ್ವಲ್ಪ ಸಮಯ ಉಳಿದು ಭೂತದಂತೆ ಕಂಡುಬರುತ್ತದೆ. ಇದೇ ಘೋಸ್ಟ್ ಎಫೆಕ್ಟ್. ಅತಿ ಬೆಳಕಿದ್ದಲ್ಲಿ ಇವುಗಳನ್ನು ನೋಡುವುದು ಉತ್ತಮ ಅನುಭವ ನೀಡುವುದಿಲ್ಲ. 

ಎಲ್‌ಸಿಡಿ ಟಿ.ವಿ. ಕೊಳ್ಳುವುದು ಹೇಗೆ?
ಕಳೆದವಾರ ಪ್ಲಾಸ್ಮ ಟಿ.ವಿ. ಕೊಳ್ಳುವಾಗ ಏನೇನೆಲ್ಲ ಗಮನಿಸಬೇಕು ಎಂದು ತಿಳಿಸಲಾಗಿತ್ತು. ಈ ಸಲಹೆಗಳು ಎಲ್‌ಸಿಡಿ ಟಿ.ವಿ.ಗಳಿಗೂ ಅನ್ವಯಿಸುತ್ತವೆ. ಎಲ್‌ಸಿಡಿ ಟಿ.ವಿ.ಗಳಿಗೇ ಪ್ರತ್ಯೇಕವಾದ ಮಾನದಂಡಗಳೆಂದರೆ ಪರದೆ ಎಷ್ಟು ಶುದ್ಧ ಕಪ್ಪಾಗಿದೆ, ಘೋಸ್ಟ್ ಎಫೆಕ್ಟ್ ಕಂಡುಬರುತ್ತದೆಯೇ, ವ್ಯೆವಿಂಗ್ ಆ್ಯಂಗಲ್ ಎಷ್ಟಿದೆ, ಇತ್ಯಾದಿಗಳು. ಎಲ್‌ಸಿಡಿ ಟಿ.ವಿ.ಗಳ ಕೊರತೆಗಳನ್ನು ತುಂಬಲೆಂದೇ ಎಲ್‌ಇಡಿ ಟಿ.ವಿ.ಗಳು ಬಂದಿವೆ. ಅವುಗಳ ಬಗ್ಗೆ ಮುಂದೆ ತಿಳಿಯೋಣ.

ಗ್ಯಾಜೆಟ್ ಸಲಹೆ
ಮೈಸೂರಿನ ರುಕ್ಮಿಣಿಮಾಲಾ ಅವರ ಪ್ರಶ್ನೆ: ಒಂದು ಕ್ಯಾಮೆರಾ ಕೊಳ್ಳಬೇಕು. ಹೆಚ್ಚಾಗಿ ಪ್ರಕೃತಿಯಲ್ಲಿರುವ ಪ್ರಾಣಿ ಪಕ್ಷಿ ಇತ್ಯಾದಿ ಕ್ಲಿಕ್ಕಿಸಲು ಆಸೆ. ಅದಕ್ಕೆ ಯಾವ ಕ್ಯಾಮೆರಾ ಕೊಂಡರೆ ಒಳ್ಳೆಯದು? 15ರಿಂದ 20 ಸಾವಿರ ರೂಪಾಯಿ ಒಳಗಡೆ ಇರುವ ಕ್ಯಾಮೆರಾ ಇದೆಯೇ?

ಉ: ವನ್ಯಜೀವಿ ಛಾಯಾಗ್ರಹಣ ಮಾಡಲು ಎಸ್‌ಎಲ್‌ಆರ್ ಕ್ಯಾಮೆರಾ ಒಳಿತು. ಕ್ಯಾನನ್ 550ಡಿ ಅಥವಾ ನಿಕಾನ್ ಡಿ5100 ಕೊಳ್ಳಬಹುದು. ಇವನ್ನು ಕೊಳ್ಳಲು ಬಜೆಟ್ ಇಲ್ಲವಾದಲ್ಲಿ ಕ್ಯಾನನ್ 1100ಡಿ ಅಥವಾ ನಿಕಾನ್ ಡಿ3100 ಕೊಳ್ಳಬಹುದು. ಕೇವಲ ಕ್ಯಾಮೆರಾ ಸಾಲದು. 300 ಮಿ.ಮೀ. ಅಥವಾ ಅಧಿಕ ನಾಭಿ ಬಿಂದು (ಫೋಕಲ್ ಲೆಂತ್) ಇರುವ ಲೆನ್ಸ್(ಗಳು) ಬೇಕು. ಕ್ಯಾಮೆರಾ ಮತ್ತು ಲೆನ್ಸ್ ಸೇರಿ ಕನಿಷ್ಠ 70 ಸಾವಿರ ರೂ ಆಗಬಹುದು. ನಿಮ್ಮ ಬಜೆಟ್‌ನಲ್ಲಿ ಈ ಬಗೆಯ ಕ್ಯಾಮೆರಾಗಳನ್ನು ಕೊಳ್ಳಲು ಸಾಧ್ಯವಿಲ್ಲ.

ಆದ್ದರಿಂದ ನೀವು ಕ್ಯಾನನ್, ನಿಕಾನ್ ಮತ್ತು ಸೋನಿ ಕಂಪೆನಿಗಳು ತಯಾರಿಸುವ ಸೂಪರ್ ಜೂಮ್ ಕ್ಯಾಮೆರಾಗಳನ್ನು ಪರಿಶೀಲಿಸುವುದು ಒಳಿತು. ಇವುಗಳನ್ನು ಅಂಗಡಿಗೇ ಹೋಗಿ ನೋಡಿ ಪರೀಕ್ಷಿಸಿ ಕೊಳ್ಳುವುದೇ ಸರಿ. ನಿಮ್ಮ ಅನುಕೂಲಕ್ಕೆ ಇದು ಹೊಂದಿಕೆಯಾಗುತ್ತದೆಯೇ ಇಲ್ಲವೇ ಎಂಬುದನ್ನು ನೀವು ಪ್ರಾಯೋಗಿಕವಾಗಿ ತಿಳಿದುಕೊಳ್ಳಲು ಇರುವುದು ಇದೊಂದೇ ಮಾರ್ಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT