ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ನೆಚ್ಚಿನ ಕೇಸರಿ ಮೇಡಂ...

Last Updated 24 ಮಾರ್ಚ್ 2012, 19:30 IST
ಅಕ್ಷರ ಗಾತ್ರ

ಬೋಧನೆ ನನ್ನ ಅಚ್ಚುಮೆಚ್ಚಿನ ಕೆಲಸವಾಗಿದ್ದರೆ, ವಿದ್ಯಾರ್ಥಿಗಳು (ಅದರಲ್ಲೂ ಶಿಶುವೈದ್ಯಕೀಯದ ಸ್ನಾತಕೋತ್ತರ ವಿದ್ಯಾರ್ಥಿಗಳು) ನನಗೆ ಸ್ಫೂರ್ತಿದಾಯಕರು.
2009ರ ಬ್ಯಾಚಿನ ನನ್ನ ಪ್ರೀತಿಪಾತ್ರ ವಿದ್ಯಾರ್ಥಿಗಳನ್ನು ಕಳಿಸಿಕೊಡುವ ಸಂದರ್ಭದಲ್ಲಿ ಮಧುರ ಬಾಂಧವ್ಯದ ಭಾವನೆ ಮತ್ತು ಉದ್ವೇಗಗಳನ್ನು ಬಲವಂತವಾಗಿ ಹತ್ತಿಕ್ಕಿಕೊಂಡಿದ್ದೆ. ಅವರು ನನ್ನ ಕೊಠಡಿಯಿಂದ ಹೊರಹೋಗುತ್ತಿದ್ದಂತೆ ದುಃಖ ತಡೆಯಲಾರದೆ ಕಣ್ಣೀರು ಉಮ್ಮಳಿಸಿ ಬಂದಿತ್ತು. ಅವರಿಗೆ ಆತ್ಮಸ್ಥೈರ್ಯ ತುಂಬುತ್ತಿದ್ದ ನಾನು ಹನಿಗಣ್ಣಾದರೆ, ವಿದ್ಯಾರ್ಥಿಗಳೂ ದುಃಖಿತರಾಗುವ ಸಾಧ್ಯತೆ ಇತ್ತು. ಆ ಕಾರಣದೊಂದಿಗೆ ಅವರ ಎದುರಿನಲ್ಲಿ ನನ್ನ ಭಾವನೆಗಳನ್ನು ತಡೆಹಿಡಿದಿದ್ದೆ.

ವಿದ್ಯಾರ್ಥಿಗಳೊಂದಿಗೆ ನಾನು ಆತ್ಮೀಯ ಸಂಬಂಧ ಹೊಂದಿರುತ್ತೇನೆ. ಅವರ ಸಹಾಯವಿಲ್ಲದೆ ವಿವಿಧ ಕಾಯಿಲೆಗಳಿಂದ ನರಳುತ್ತಿರುವ ಮಕ್ಕಳನ್ನು ಉಳಿಸುವುದು ಅಥವಾ ಆರೈಕೆ ಮಾಡುವುದು ಸಾಧ್ಯವಾಗುತ್ತಿರಲಿಲ್ಲ. ಜ್ಞಾನಕ್ಕಾಗಿ ಹಂಬಲಿಸುವ ಅವರ ಮನೋಭಾವ ಮತ್ತು ಹಗಲು ರಾತ್ರಿ ಶ್ರಮವಹಿಸಿ ಕೆಲಸ ಮಾಡುವ ಅವರು ಪ್ರತಿ ಆಸ್ಪತ್ರೆಯ ಬೆನ್ನುಮೂಳೆ ಇದ್ದಂತೆ.

ವಿದ್ಯಾರ್ಥಿ ದೆಸೆಯನ್ನು ನೆನಪಿಸಿಕೊಂಡಾಗ ನನ್ನ ಶಿಕ್ಷಕಿಯಾಗಿದ್ದ ಪ್ರೊ. ನಿರ್ಮಲಾ ಕೇಸರಿ ಅವರು ನೆನಪಾಗುತ್ತಾರೆ. ಶೇಕಡಾ 0.1 ಅಂಕಗಳಿಂದ ಸರ್ಕಾರಿ ಸೀಟಿನಿಂದ ವಂಚಿತಳಾದ ನನಗೆ `ಬಾಪೂಜಿ ಎಜುಕೇಶನ್ ಸೊಸೈಟಿ~ಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಸಹಾಯದಿಂದ, ಅಪ್ಪಾಜಿ ದಾವಣಗೆರೆಯ ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ಎಂಡಿ ಶಿಶುವೈದ್ಯಕೀಯಕ್ಕೆ ಸೀಟು ಕೊಡಿಸುವಲ್ಲಿ ಯಶಸ್ವಿಯಾದರು.

ಮುಖ್ಯವಾಗಿ ಶಿವಶಂಕರಪ್ಪ ಅವರ ಅಣ್ಣ ಶಾಮನೂರು ಬಸಪ್ಪ, `ಡಾ. ಬೆನಕಪ್ಪ ಅವರ ಮಗಳಿಗೆ ಸೀಟು ಕೊಡಲೇಬೇಕು, ಅವರನ್ನು ಅತ್ತಿಂದಿತ್ತ ಅಲೆದಾಡುವಂತೆ ಮಾಡಬಾರದು~ ಎಂದು ಹಟ ಹಿಡಿದು ಸೀಟು ಕೊಡಿಸಿದ್ದರು. ಹೆಚ್ಚುಕಡಿಮೆ ಪ್ರತೀ ದಿನ ಅವರ ಸಹಾಯವನ್ನು ನೆನೆದು ಕೃತಜ್ಞಳಾಗುತ್ತೇನೆ. ಅವರ ನೆರವಿಲ್ಲದಿದ್ದರೆ ಯಾವುದೋ ಇಷ್ಟವಲ್ಲದ ವಿಭಾಗದಲ್ಲಿ ಕೆಲಸ ಮಾಡುವ ಅಸಂತುಷ್ಟ ವ್ಯಕ್ತಿಯಾಗಿರುತ್ತಿದ್ದೆ. ನಾನು ಸದಾ ಮಕ್ಕಳ ಜೊತೆ ಇರಲು ಬಯಸುವವಳು- ಮಕ್ಕಳ ತಜ್ಞರ ವಿಶೇಷತೆಯೂ ಇದೇ.

ಪ್ರೊ. ನಿರ್ಮಲಾ ಕೇಸರಿ ದಕ್ಷಿಣ ಕರ್ನಾಟಕದಲ್ಲಿ ಅಪ್ಪಾಜಿಗೆ ಸಮಸ್ಥಾನಿಕರಾಗಿದ್ದರು. ಅವರೂ ಸಹ ಯುಎಸ್‌ಎಯಿಂದ ಹಿಂದಿರುಗಿ ಮಕ್ಕಳ ಚಿಕಿತ್ಸೆಗೆ ವಿಶೇಷ ಸಂಸ್ಥೆಯನ್ನು ಸ್ಥಾಪಿಸಿದವರು. ಹಿರಿಯ ಶಿಶುವೈದ್ಯೆಯಾದ ಅವರು ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರಾಗಿಯೂ ಕೆಲಸ ನಿರ್ವಹಿಸಿದವರು.
 
ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದ ಮಗನೂರು ಬಸಪ್ಪ ಅವರ ಒತ್ತಾಸೆ ಮೇರೆಗೆ 1967ರಲ್ಲಿ ಅಪ್ಪಾಜಿ ಅವರೂ ಈ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಕೇಂದ್ರ ಸಚಿವರಾದ ಕೊಂಡಜ್ಜಿ ಬಸಪ್ಪ ಅವರ ಸಲಹೆ ಮೇರೆಗೆ ಸಂದರ್ಶನದಿಂದ ಹಿಂದೆ ಸರಿದಿದ್ದರು. ಅಪ್ಪಾಜಿ ಸರ್ಕಾರಿ ಸೇವೆಯಲ್ಲಿರಬೇಕೆನ್ನುವುದು ಸಚಿವ ಬಸಪ್ಪ ಅವರ ಬಯಕೆಯಾಗಿತ್ತು.

ಒಂಬತ್ತು ತಿಂಗಳು ಮಾತ್ರವಾದರೂ ಪ್ರೊ. ನಿರ್ಮಲಾ ಕೇಸರಿ ಅವರಿಂದ ತರಬೇತಿ ಪಡೆಯುವ ಸೌಭಾಗ್ಯ ನನ್ನದಾಗಿತ್ತು. ಬಳಿಕ ಅವರು ತಮ್ಮ 54ನೇ ವಯಸ್ಸಿನಲ್ಲಿ ಶಿಶುವೈದ್ಯಕೀಯದ ನರವಿಜ್ಞಾನ ವಿಭಾಗದಲ್ಲಿ ವಿಶೇಷ ಪರಿಣತಿ ಪಡೆಯಲು ಯುಎಸ್‌ಎಗೆ ತೆರಳಿದರು.
 
ಒಂಬತ್ತು ತಿಂಗಳು ಮಾತ್ರ ನಾನು ಅವರೊಟ್ಟಿಗೆ ಇದ್ದರೂ, ಅವರು ನನ್ನ ಮೇಲೆ ಬೀರಿದ ಪ್ರಭಾವ ಅಪಾರ. ಆ ಪ್ರಭಾವದ ಅಲೆಯಲ್ಲಿ ಅವರಂತೆ ನಾನೂ ಅವಿವಾಹಿತಳಾಗಿಯೇ ಇರಲು ಬಯಸಿದ್ದೆ. ಆದರೆ ನನಗೆ ಮದುವೆ ಮಾಡಬೇಕೆಂದು ಬಯಸಿದ್ದ ಅಪ್ಪಾಜಿ ಆಕೆಯ ಮೇಲೆ ಕೋಪಗೊಂಡಿದ್ದರು.

1982ರ ಸೆಪ್ಟೆಂಬರ್‌ನಲ್ಲಿ ನಾನು ಎಂಡಿ ವಿದ್ಯಾರ್ಥಿಯಾಗಿ ಶಿಶುವೈದ್ಯಕೀಯ ವಿಭಾಗವನ್ನು ಸೇರಿಕೊಂಡೆ. ಪ್ರೊ. ನಿರ್ಮಲಾ ಕೇಸರಿ ಅವರೊಂದಿಗಿನ ನನ್ನ ಮೊದಲ ಭೇಟಿ ಅಂದುಕೊಂಡಷ್ಟು ಹಿತಕರವಾಗಿರಲಿಲ್ಲ! ತೋಳಿಲ್ಲದ ರವಿಕೆ ಧರಿಸಿದ್ದ `ಬಾಬ್‌ಕಟ್~ನ ಮಹಿಳೆಯನ್ನು ನೋಡಿ (ಇಂದಿಗೂ ಅವರದು ಅದೇ ವೇಷಭೂಷಣ) ದಂಗಾಗಿದ್ದೆ. `ಫಾರಿನ್‌ನವರಂತೆ ಕಾಣುವ ಮಹಿಳೆ~ ನನಗೆ ಶಿಶುವೈದ್ಯದ ಎಂಥ ಪಾಠ ಕಲಿಸುತ್ತಾರೆ ಎಂಬುದು ಆ ಕ್ಷಣದಲ್ಲಿ ನನ್ನ ಮುಂದೆ ಮೂಡಿದ ಪ್ರಶ್ನೆ. `ನೀವು ಒಬ್ಬ ಪ್ರಭಾವಿ ವ್ಯಕ್ತಿ ಮತ್ತು ಮಕ್ಕಳ ತಜ್ಞರ ಮಗಳು. ಹೀಗಾಗಿ ವಿನಾಯಿತಿ ಮತ್ತು ಸ್ವಾತಂತ್ರ್ಯವನ್ನು ನಿರೀಕ್ಷಿಸಬೇಡಿ~ ಎಂದು ತೀಕ್ಷ್ಣವಾಗಿ ಹೇಳಿ ಅವರು ಪರಿಸ್ಥಿತಿಯನ್ನು ಇನ್ನಷ್ಟು ಕೆಟ್ಟದಾಗಿಸಿದರು!

ಇದು ಅವರ ಬಗ್ಗೆ ನನ್ನಲ್ಲಿ ಕಹಿ ಭಾವನೆ ಮೂಡಿಸಿತು. ಹದಿನೈದು ದಿನಗಳ ಒಳಗೇ ಅವರು ತಮ್ಮ ತಪ್ಪನ್ನು ಅರಿತರು. ಅಂದಿನಿಂದ ಇಂದಿಗೂ ನಾನು ಅವರ ಅತ್ಯಂತ ಅಚ್ಚುಮೆಚ್ಚಿನ `ಶಿಷ್ಯ~ರಲ್ಲಿ ಒಬ್ಬಳಾಗಿದ್ದೇನೆ. ಸಾಮಾಜಿಕ ಶಿಶುಚಿಕಿತ್ಸೆ ಮತ್ತು ಪೌಷ್ಟಿಕತೆಯೆಡೆಗಿನ ಅವರ ಒಲವು ನನಗೂ ದಾಟಿತು.

ಶಿಶುವೈದ್ಯವನ್ನು ನಾನು ಅಪ್ಪಾಜಿಯ ಬಳಿಯಲ್ಲಿ ಕಲಿತುಕೊಳ್ಳಬೇಕೆಂಬ ಬಯಕೆ ಹೊಂದಿದ್ದರೂ, `ಎನ್‌ಕೆ~ಯವರ ವಿದ್ಯಾರ್ಥಿಯಾಗಿದ್ದಕ್ಕೆ ನನಗೆ ಕೊಂಚವೂ ಪಶ್ಚಾತ್ತಾಪವಿಲ್ಲ. ದಕ್ಷಿಣ ಕರ್ನಾಟಕದಲ್ಲಿ ಮೇಡಂ ಕೇಸರಿ ವರ್ಚಸ್ಸಿನ ವ್ಯಕ್ತಿಯಾಗಿದ್ದರು. ಶಿಶು ಕಾಯಿಲೆಗಳಿಗೆ ಸಂಬಂಧಿಸಿದಂತೆ ಸೋಂಕಿನಿಂದ ರಕ್ಷಣೆ, ಪೌಷ್ಟಿಕತೆ ಮುಂತಾದವುಗಳ ಕುರಿತು ಅವರು ಸಾಕಷ್ಟು ಕೆಲಸ ಮಾಡಿದ್ದರು. ಸಾಮಾಜಿಕ ಶಿಶುವೈದ್ಯಕೀಯಕ್ಕೆ ಅವರು ಸಲ್ಲಿಸಿದ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿ ಗೌರವ ಸಂದಿದೆ.

ದಿನಗಳು ಉರುಳಿದಂತೆ ನಾನು ಅವರ ಅತ್ಯಂತ ನಂಬಿಕೆಯ ಅನುಯಾಯಿಯಾದೆ. ಅವರ ಕರ್ತವ್ಯದ ಅವಧಿ ಮತ್ತು ಕೆಲಸ ಮುಗಿದ ಬಳಿಕವೂ ಹೆಚ್ಚಿನ ಸಮಯ ಅವರೊಟ್ಟಿಗೆ ಕಳೆಯತೊಡಗಿದೆ. ನಿಧಾನವಾಗಿ ಮತ್ತು ಗಾಢವಾಗಿ ಅವರ ಬೋಧನೆ ಮತ್ತು ನೀತಿಯನ್ನು ಅಳವಡಿಸಿಕೊಳ್ಳಲಾರಂಭಿಸಿದೆ.

ಅವರು ಅತ್ಯಂತ ಸರಳಜೀವಿಯಾಗಿದ್ದರು. ಅವರಿಗೆ ಗೌರವ ಅರ್ಪಿಸುವ ಅನೇಕ ಕಾರ್ಯಕ್ರಮಗಳಲ್ಲಿ ಹಾರ ಹಾಕಿಸಿಕೊಳ್ಳುವುದನ್ನು ನಿರಾಕರಿಸುತ್ತಿದ್ದರು. `ನಾನು ಮೂವರು ಅನುಯಾಯಿಗಳನ್ನು ಸಂಪಾದಿಸಿಕೊಳ್ಳುವವರೆಗೆ ಹೂವಿನ ಹಾರವನ್ನು ಸ್ವೀಕರಿಸುವುದಿಲ್ಲ~ ಎಂದು ಹೇಳುತ್ತಿದ್ದರು. ಅವರು 30 ವರ್ಷದ ವೃತ್ತಿ ಬದುಕಿನಲ್ಲಿ ಕೇವಲ ಮೂವರು ಶಿಷ್ಯಂದಿರನ್ನು ಸಂಪಾದಿಸಲು ಸಾಧ್ಯವಾಗಿಲ್ಲವೇ? ಎಂದು ನಾನು ಆಶ್ಚರ್ಯಚಕಿತಳಾಗಿದ್ದೆ.

ಅವರು ನಮಗೆ ಯಾವಾಗಲೂ ಹೇಳುತ್ತಿದ್ದ ಮಾತು, `ದಿನದಲ್ಲಿ ಒಂದು ಗಂಟೆ ಮತ್ತು ಒಂದು ರೂಪಾಯಿಯನ್ನು ಸಮಾಜ ಸೇವೆಗೆ ಉಳಿಸಿ~. ಅದನ್ನು ನಾನು ಇಂದಿಗೂ ಪಾಲಿಸಿಕೊಂಡು ಬಂದಿದ್ದೇನೆ. ತಮ್ಮ ಸಂಬಳವನ್ನು ಮುಟ್ಟದೆ ಅದನ್ನು `ಮಕ್ಕಳ ಟ್ರಸ್ಟ್~ ಆಗಿ ಪರಿವರ್ತಿಸಿ ಹೊಸ ಹಾದಿ ಹಾಕಿಕೊಟ್ಟಿದ್ದರು.

ಯಾವುದೇ ಅಡಚಣೆ ಇಲ್ಲದೆ ಈ ಹಣವನ್ನು ಶಿಶು ರೋಗಿಗಳ ಔಷಧ, ಪರೀಕ್ಷೆ, ಬಟ್ಟೆಗಳು, ಆಹಾರ, ಚುಚ್ಚುಮದ್ದು ಮುಂತಾದವುಗಳಿಗಾಗಿ ಪಡೆದು ಕೊಳ್ಳಬಹುದಾಗಿತ್ತು.
ಕೆಲವು ಸಂದರ್ಭದಲ್ಲಿ ನಾವು ದಾವಣೆಗೆರೆಯಲ್ಲಿ ಸಾಧ್ಯವಾಗದ ಪರೀಕ್ಷೆಗಳನ್ನು ಬೆಂಗಳೂರಿನಲ್ಲಿ ಮಾಡಿಸುವ ಅನಿವಾರ್ಯತೆ ಇರುತ್ತಿದ್ದರಿಂದ ಮಕ್ಕಳನ್ನು ಕರೆದೊಯ್ಯಲು ಈ ಹಣವನ್ನು ಬಳಸುತ್ತಿದ್ದೆವು. ನಾನು ಅಲ್ಲಿ ಇರುವವರೆಗೂ ಅದರ ಮುಖ್ಯ ನಿರ್ವಾಹಕಳಾಗಿದ್ದೆ. ನನ್ನ ಮೇಲೆ ಅವರಿಗಿದ್ದ ನಂಬಿಕೆ ದೊಡ್ಡದು.

ಅವರು ತಮ್ಮ ಜಮೀನನ್ನು ಅರಣ್ಯ ಇಲಾಖೆಗೆ ದಾನ ಮಾಡಿದ್ದಲ್ಲದೆ, ತಮಗೆ ಸೇರಿದ್ದ ಎಲ್ಲಾ ಹಿಡುವಳಿಗಳನ್ನೂ ಬಡಮಕ್ಕಳ ಕಲ್ಯಾಣಕ್ಕಾಗಿ `ಲೀಲಾ ನಿರ್ಮಲಾ ಕೇಸರಿ ಟ್ರಸ್ಟ್~ ಎಂದು ಪರಿವರ್ತಿಸಿದ್ದರು. ಅದು ಅವರ ಮಾನವೀಯತೆಯ ದ್ಯೋತಕ.

ಒಂದು ದಿನ ನಾನು ವಾರ್ಡ್ ನಂ.58ರಲ್ಲಿ ರಾತ್ರಿ ಪಾಳಿಯಲ್ಲಿದ್ದಾಗ, ಸುಮಾರು 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಬೆಳಿಗ್ಗೆ 4.30ರ ವೇಳೆಯಲ್ಲಿ ರಸ್ತೆ ದಾಟಿ ನಡೆದು (ಅವರ ಮನೆ `ಕೇಸರಿ~ ಚಿಗಟೇರಿ ಜನರಲ್ ಆಸ್ಪತ್ರೆಗೆ ತುಂಬಾ ಸಮೀಪವಿತ್ತು), ಅವರ ಮನೆ ಕಾಲಿಂಗ್ ಬೆಲ್ ಒತ್ತಿ, ಅವರು ಬಾಗಿಲು ತೆರೆಯುತ್ತಿದ್ದಂತೆ `ನನ್ನಿಂದಾಗುತ್ತಿಲ್ಲ~ ಎಂದು ಹೇಳಿದ್ದೆನಷ್ಟೇ.
 
ಮಧ್ಯಾಹ್ನದಿಂದ ನಿರಂತರವಾಗಿ ಕರ್ತವ್ಯ ನಿರ್ವಹಿಸಿದ್ದ ನಾನು ತೀವ್ರ ಆಯಾಸಗೊಂಡಿದ್ದೆ. ಅವರು ನಿಧಾನವಾಗಿ ನನ್ನನ್ನು ಅವರ ಕೋಣೆಗೆ ಕರೆದೊಯ್ದು, ಮಲಗಿಸಿದ್ದರು.
 
ಇಡೀ ದೇಹ ನೋವು ತಿನ್ನುತ್ತಿದ್ದಂತೆ ಅನುಭವವಾಗುತ್ತಿದ್ದ ನನಗೆ ಎಚ್ಚರವಾಗಿದ್ದು ಸಂಜೆ ಹೊತ್ತಿಗೆ. ನಾನು ಎಲ್ಲಿದ್ದೇನೆ ಎಂಬುದು ತಿಳಿದು ಆಶ್ಚರ್ಯವಾಯಿತು! `ಅಮ್ಮ ಕೇಸರಿಯ~ ಮೃದು ಕೈಗಳಲ್ಲಿ ಆರೈಕೆ ಪಡೆದದ್ದಕ್ಕೆ ನನಗೆ ಪರಮಾನಂದವಾಗಿತ್ತು.

ಅಂದಿನಿಂದ ನಾವಿಬ್ಬರೂ ಅಮ್ಮ ಮಗಳಾದೆವು. ಅವರು ತಮ್ಮ ಪೋಷಕರ ಸ್ಮರಣಾರ್ಥ ಕೊಂಡಾಜಿಯಲ್ಲಿ ನಿರ್ಮಿಸಿರುವ ಗ್ರಂಥಾಲಯಕ್ಕೆ ಮತ್ತು ಹಿರಿಯೂರಿನ ವಾಣಿವಿಲಾಸ ಆಸ್ಪತ್ರೆಗೆ ವಾರಾಂತ್ಯದಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಇದು ನಮ್ಮಿಬ್ಬರ ಬಾಂಧವ್ಯವನ್ನು ಸಾರುತ್ತದೆ.

ಒಮ್ಮೆ ಅವರ ಬಳಿ `ಫಣಿಯಮ್ಮ~ ಚಿತ್ರ ನೋಡಬೇಕೆಂಬ ಅಭಿಲಾಷೆ ವ್ಯಕ್ತಪಡಿಸಿದೆ. ಅವರು ಕೂಡಲೇ ಅವರ ಅಂಬಾಸೆಡರ್ ಕಾರಿನಲ್ಲಿ ಚಿತ್ರಮಂದಿರಕ್ಕೆ ಕರೆದೊಯ್ದರು. ಆ ದಿನ ಇಂದಿಗೂ ಯಾರಿಗೂ ತಿಳಿದಿರದ ಅವರ ಬದುಕಿನ ಒಂದು ಮುಖ ಪ್ರಕಟವಾಯಿತು. 54ರ ಹರೆಯದ ಅವರನ್ನು ಒಂಟಿತನ ಕಾಡುತ್ತಿತ್ತು!
 
ಮರುದಿನ ಕರ್ನಾಟಕ ವಿಶ್ವವಿದ್ಯಾಲಯದ ಹಿಂದಿನ ಕುಲಸಚಿವರಾಗಿದ್ದ ಅವರ ಅಕ್ಕ ಲೀಲಾ ಕೇಸರಿ ಅವರಿಗೆ ಪತ್ರ ಬರೆದೆ. ತಕ್ಷಣವೇ ಅದಕ್ಕೆ ಸ್ಪಂದಿಸಿದ ಲೀಲಕ್ಕಯ್ಯ, ಧಾರವಾಡದಲ್ಲಿರುವ ಅವರ ಮನೆಯನ್ನು ಮಾರಿ ತಮ್ಮ ತಂಗಿ ನಿರ್ಮಲಾ ಅವರನ್ನು ಸೇರಿಕೊಂಡರು. ವಿಧಿಯಾಟವನ್ನು ಯಾರಿಗೂ ಮುಂಗಾಣಲು ಸಾಧ್ಯವಿಲ್ಲ!

ಮೇಡಂ ಕೇಸರಿ ಅವರ ಶಿಕ್ಷಕರಾಗಿದ್ದ ಅಮೆರಿಕನ್ ಪ್ರೊ. ವೂಲಿ ಪಿವಿ ಬಗ್ಗೆ ನನ್ನಲ್ಲಿ ಹಲವಾರು ಬಾರಿ ಹೇಳಿದ್ದರು. “ನೀವು ನಿಮ್ಮ ವಿದ್ಯಾರ್ಥಿಗಳನ್ನು ನಿಮ್ಮ ಜೊತೆಗೇ ಕರೆದೊಯ್ದರೆ, ಅವರು ವೃತ್ತಿಯಲ್ಲಿ ಬೆಳೆದಂತೆ ನಿಮ್ಮ ಹೆಸರನ್ನೂ ತಮ್ಮಟ್ಟಿಗೆ ಕೊಂಡೊಯ್ಯುತ್ತಾರೆ.

ಆದರೆ ಅವರನ್ನು ಕೆಳಮಟ್ಟದಲ್ಲಿಯೇ ಇರಿಸಿದರೆ ಅವರು ಬೆಳೆದಾಗ ನಿಮ್ಮನ್ನು ಕೆಳಗೆ ತಳ್ಳುತ್ತಾರೆ” ಎಂದು ವೂಲಿ ಅವರಿಗೆ ಹೇಳುತ್ತಿದ್ದ ಮಾತುಗಳನ್ನು ನನಗೆ ಹೇಳಿದ್ದು ನೆನಪಿಗೆ ಬರುತ್ತದೆ. ಅದನ್ನು ಇಂದಿಗೂ ನೆನಪಿಸಿಕೊಂಡು ನನ್ನ ವಿದ್ಯಾರ್ಥಿಗಳನ್ನು ಗೌರವದಿಂದ ನಡೆಸಿಕೊಳ್ಳುತ್ತೇನೆ.

ಅವರು ಯುಎಸ್‌ಎಗೆ ತೆರಳುವ ಒಂದು ತಿಂಗಳ ಮುಂಚೆ ವೂಲಿ ನಿಧನರಾದರು. ಅವರನ್ನು ಭೇಟಿ ಮಾಡುವ ಅವಕಾಶ ಕೈತಪ್ಪಿ ಹೋಗಿದ್ದರಿಂದ ಅವರು ಹತಾಶರಾದರು.
ಪ್ರೊ.ವೂಲಿ ಜೊತೆಗೂಡಿ ತೀರಾ ಅಪರೂಪವಾದ `ಪೆಂಟಾ ಎಕ್ಸ್ ಸಿಂಡ್ರೋಮ್~ ಎಂಬ ಕಾಯಿಲೆಯನ್ನು ಮೇಡಂ ಸಂಶೋಧಿಸಿದ್ದಲ್ಲದೆ, ಆಸ್ಪಿರಿನ್ ವಿಷಕ್ಕೆ ಚಿಕಿತ್ಸೆಯನ್ನು ಮತ್ತು ಯುಂಬಿಲಿಕಲ್ ಗ್ರಾನುಲೊಮಾ (ಹೊಕ್ಕಳಿನಲ್ಲಿ ಬೆಳೆಯುವ) ಕಾಯಿಲೆಗೆ ಸಾಮಾನ್ಯ ಉಪ್ಪಿನ ಚಿಕಿತ್ಸೆಯನ್ನು ಅವರಿಬ್ಬರೂ ಕಂಡುಹಿಡಿದಿದ್ದರು.

ಅವರು ವಿದ್ಯಾರ್ಥಿಗಳನ್ನು ಪ್ರೀತಿ ಮತ್ತು ವಾತ್ಸಲ್ಯದಿಂದ ನಡೆಸಿಕೊಳ್ಳುತ್ತಿದ್ದರು. ನಾವು ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟಗಳಿಗೆ ಅವರ ಮನೆಗೆ ಹೋಗಬಹುದಾಗಿತ್ತು. ಅವರ ಅಡುಗೆಯಾಕೆ ಪಾರ್ವತಮ್ಮ ಮತ್ತು ಸಹಾಯಕಿ ಸರೋಜಮ್ಮ ಸಂತೋಷದಿಂದ ನಮಗೆ ಔತಣ ಬಡಿಸಿ ಸತ್ಕರಿಸುತ್ತಿದ್ದರು. ನನ್ನ ಎಂ.ಡಿ ಕಲಿಕೆ ಮುಗಿದ ಬಳಿಕವೂ ನಮ್ಮ ಸಂಬಂಧ ಹೀಗೆಯೇ ಮುಂದುವರೆದಿತ್ತು.

ಬೆಂಗಳೂರಿನಲ್ಲಿ ನಡೆಯುವ ರಾಷ್ಟ್ರೀಯ ವಾರ್ಷಿಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಬರುವ ಮೇಡಂ ಮತ್ತು ಅವರ ತಂಡವನ್ನು ಬೆಂಗಳೂರಿನಲ್ಲೇ ಎದುರುಗೊಳ್ಳುವ ಬದಲು ನಾನು 1995ರವರೆಗೂ ದಾವಣಗೆರೆಗೆ ಹೋಗಿ ಸೇರಿಕೊಳ್ಳುತ್ತಿದ್ದೆ. ಏಕೆಂದರೆ ದಾವಣಗೆರೆಯಿಂದ ಬೆಂಗಳೂರಿಗೆ ಬರುವ ಅವರ ಜೊತೆಗೆ ಕಳೆಯುವ ಆರು ತಾಸಿನ ಅವಧಿಯನ್ನು ತಪ್ಪಿಸಿಕೊಳ್ಳಲು ನನಗೆ ಇಷ್ಟವಿರಲಿಲ್ಲ.
 
ಈ ದೀರ್ಘ ಪಯಣದಲ್ಲಿ ಅವರ ವಿದ್ಯಾರ್ಥಿಗಳೆಲ್ಲರೂ ನಮ್ಮನ್ನು ರೈಲ್ವೆ ನಿಲ್ದಾಣದಲ್ಲಿ ಭೇಟಿ ಮಾಡಿ ಪ್ರಯಾಣದ ಉಲ್ಲಾಸಕ್ಕೆ ಸಾಕಷ್ಟು `ತಿನಿಸು~ಗಳನ್ನು ನೀಡುತ್ತಿದ್ದರು. ಅವರು ನಮ್ಮ ವಿಳಾಸಗಳಿಗೆ ಅಂಚೆ ಕಾರ್ಡುಗಳನ್ನು ಕಳುಹಿಸುತ್ತಿದ್ದರು. ಎಲ್ಲಾ ವಿದ್ಯಾರ್ಥಿಗಳ ವಿಳಾಸವಿರುವ ಪುಸ್ತಕ ಅವರ ಬಳಿ ಇದೆ.

ವಿವಿಧ ಸಭೆಗಳಿಗೆ ಬೆಂಗಳೂರಿಗೆ ಹಲವು ಬಾರಿ ಬಂದಿದ್ದ ಅವರು ನನ್ನ ಜೊತೆಯಲ್ಲಿಯೇ ಉಳಿದುಕೊಂಡಿದ್ದರು. ನಾವು ಮುಂಚೆ ಪ್ರತಿನಿತ್ಯವೂ ಮಾತನಾಡುತ್ತಿದ್ದೆವು, ಕ್ರಮೇಣ ಅದು ವಾರ, ನಂತರ ತಿಂಗಳು ಹೀಗೆ ಕಡಿಮೆಯಾಗತೊಡಗಿ, ಬಳಿಕ ನಿಂತೇ ಹೋಯಿತು.

ಒಮ್ಮೆ ರೇಷ್ಮೆ ಕಾರ್ಖಾನೆಯೊಂದಕ್ಕೆ ಭೇಟಿ ನೀಡಿದ ಅವರು ರೇಷ್ಮೆ ಸೀರೆ ಉಡುವುದನ್ನೇ ಸಂಪೂರ್ಣವಾಗಿ ನಿಲ್ಲಿಸಿಬಿಟ್ಟರು. ಒಂದು ರೇಷ್ಮೆ ಸೀರೆ ತಯಾರಿಸುವುದಕ್ಕೆ ಸಾವಿರಾರು ಹುಳುಗಳು ತಮ್ಮ ಜೀವ ತ್ಯಾಗಮಾಡುತ್ತವೆ ಎಂಬ ನೋವು ಅವರನ್ನು ಕಾಡಿತ್ತು. ಇಂತಹ ಕಾರಣಕ್ಕಾಗಿ ಅವರು ಮತ್ತಷ್ಟು ಮಹಾನ್ ವ್ಯಕ್ತಿಯಾಗಿ ಕಾಣುತ್ತಾರೆ.

ನಾವಿಬ್ಬರೂ ಕೊನೆಯ ಬಾರಿಗೆ ಒಟ್ಟಿಗೆ ಪ್ರಯಾಣ ಬೆಳೆಸಿದ್ದು 2007ರಲ್ಲಿ. ಭುವನೇಶ್ವರದಲ್ಲಿ ಶಿಶುವೈದ್ಯರ ರಾಷ್ಟ್ರೀಯ ಸಮ್ಮೇಳನ ನಡೆದಾಗ. ಭಾರತೀಯ ಶಿಶುವೈದ್ಯ ಅಕಾಡೆಮಿ ನೀಡುವ ಅತ್ಯುನ್ನತ ಪ್ರಶಸ್ತಿ ಎಫ್‌ಐಎಪಿಯನ್ನು ನಾನು ಸ್ವೀಕರಿಸುವ ಸಮಾರಂಭವದು. ಆ ಗೌರವಕ್ಕೆ ಪಾತ್ರರಾದ ಕರ್ನಾಟಕದ ಎರಡನೇ ಮಹಿಳೆ ನಾನು. ಮೊದಲನೆಯವರು ಮೇಡಂ ಕೇಸರಿ. ನಾವಿಬ್ಬರೂ ಗುರು ಶಿಷ್ಯರಾಗಿದ್ದಕ್ಕೆ ಹೆಮ್ಮೆ ಪಡುತ್ತೇನೆ.

2011ರ ಜುಲೈ 27ರಂದು ನಾನು ಅವರನ್ನು ಭೇಟಿ ಮಾಡಲು ಹೋಗಿದ್ದೆ. ದೈಹಿಕವಾಗಿ ಗಟ್ಟಿಯಾಗಿದ್ದ ಅವರು ಮರೆವಿನ ಕಾಯಿಲೆ `ಅಲ್ಝೈಮರ್~ನಿಂದ ಬಳಲುತ್ತಿದ್ದರು. 84 ವರ್ಷದ ಲೀಲಕ್ಕಯ್ಯ ಮಾನಸಿಕವಾಗಿ ಸದೃಢವಾಗಿದ್ದರೂ ದೈಹಿಕವಾಗಿ ಕ್ಷೀಣಿಸಿದ್ದರು.

ನನ್ನ ಗುರುವಿಗೆ `ನಿಮ್ಮ ಅನುಯಾಯಿ ಆಶಾ ಬೆನಕಪ್ಪ ನಿಮ್ಮನ್ನು ನೋಡಲು ಬಂದಿದ್ದಾಳೆ~ ಎಂದು ಹಲವು ಬಾರಿ ಹೇಳಿದಾಗಲೂ ಅವರು ನಗುತ್ತಾ, `ಯಾರು ನೀನು? ಯಾಕೆ ಅಳುತ್ತಿದ್ದೀಯಾ?~ ಎಂದು ಪದೇ ಪದೇ ಪ್ರಶ್ನಿಸುತ್ತಿದ್ದರು. ನಾನು ಇಂದಿಗೂ ಪ್ರತಿನಿತ್ಯ ಪೂಜಿಸುವ ಗುರು ಇವರೇನಾ? ಇಂದಿಗೂ ನಾನು ತತ್ವಾದರ್ಶಗಳನ್ನು ಪಾಲಿಸುವಂತೆ ಮಾಡಿದ ಪ್ರೀತಿಯ ಶಿಕ್ಷಕಿ ನನ್ನನ್ನು ಗುರುತಿಸುತ್ತಿಲ್ಲವೇಕೆ? ಎಂದು ಹಲವು ಬಾರಿ ಅತ್ತಿದ್ದೇನೆ. ಈಗ ನಿಮಗೆ ಅರ್ಥವಾಗಬಹುದು, ನಮ್ಮಿಬ್ಬರ ಮಾತುಕತೆ ಮತ್ತು ಭೇಟಿ ಯಾಕೆ ಕಡಿಮೆಯಾಗತೊಡಗಿತು ಎಂಬುದು.

ಅವರು ಆ ಮಾಂತ್ರಿಕ ಸಂಖ್ಯೆ ಮೂರನ್ನು ತಲುಪಿದ್ದರೇ? ಹೌದು. ಆದರೆ ತುಂಬಾ ತಡವಾಗಿ... ಈಗ ಅವರು ಅಭಿನಂದನೆ ಸ್ವೀಕರಿಸಲು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಥವಾ ಹೂವಿನ ಹಾರ ಸ್ವೀಕರಿಸುವ ಸ್ಥಿತಿಯಲ್ಲಿ ಇಲ್ಲ. ಅವರು ಕೊನೆಗೂ ಪಡೆದ ಮೂವರು ಶಿಷ್ಯರೆಂದರೆ (ಅವರು ಭುವನೇಶ್ವರದಲ್ಲಿ ನನಗೆ ಹೇಳಿದ್ದು)- ಡಾ. ಸಿ.ಆರ್. ಬನಾಪುರ್‌ಮಠ್, ಡಾ. ಆಶಾ ಬೆನಕಪ್ಪ ಮತ್ತು ಡಾ. ಜಿ.ಗುರುಪ್ರಸಾದ್. ಅವರು ದೊಡ್ಡಮನೆ ಕುಟುಂಬದ ಮೂವರು ಶಿಶುವೈದ್ಯರನ್ನು ತರಬೇತಿಗೊಳಿಸಿದವರು- ನವೀನ್, ಗುರುಪ್ರಸಾದ್ (ಅಪ್ಪಾಜಿಯ ಸಹೋದರಿಯ ಮಗ) ಮತ್ತು ನಾನು.

ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಭಾರವಾದ ಹೃದಯದಿಂದ ಶುಭಾಶಯ ಕೋರಿ, ತಮ್ಮ ಜೀವನ ಮತ್ತು ಪರೀಕ್ಷೆಯಲ್ಲಿ ಉತ್ತಮವಾದುದ್ದನ್ನು ಸಾಧಿಸುವಂತೆ ಹಾರೈಸುವಾಗ ನನ್ನ ಗುರು ಕೇಳಿದ ಮಾತನ್ನು ನೆನಪಿಸಿಕೊಂಡೆ- `ಯಾರು ನೀನು?~. ದೈಹಿಕವಾಗಿ ಚೆನ್ನಾಗಿಯೇ ಇದ್ದರೂ, ನಾನು ಅವರೊಂದಿಗೆ ನಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಸಾಧ್ಯವಾಗದಂತೆ ದೇವರು ಅಥವಾ ವಿಧಿ ನನ್ನ ಪ್ರೀತಿಯ ಗುರುವಿಗೆ ಯಾಕೆ ಹೀಗೆ ಮಾಡಿದ?

ನನ್ನ ದುಃಖವನ್ನು ಬದಿಗಿಟ್ಟು, ಶಿಶುವೈದ್ಯ ಸ್ನಾತಕೋತ್ತರದ ಎ, ಬಿ, ಸಿ  ವಿಭಾಗದ 2012ರ ಹೊಸ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧಿಸಲು ಹೊರಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT