ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಿಕ ಸಂಹಿತೆ ಮತ್ತು ವೈಯಕ್ತಿಕ ಹಕ್ಕು

Last Updated 17 ಅಕ್ಟೋಬರ್ 2016, 3:02 IST
ಅಕ್ಷರ ಗಾತ್ರ

ಭಾರತ ಇಂದು ಸಿದ್ಧಾಂತವೊಂದನ್ನು ಹೊಂದಿರುವ ಪಕ್ಷದ ಆಡಳಿತದಲ್ಲಿದೆ. ಆ ಸಿದ್ಧಾಂತದ ಹೆಸರು ಹಿಂದುತ್ವ. ಈ ಸಿದ್ಧಾಂತವು ಮೂರು ಬೇಡಿಕೆಗಳನ್ನು ಹೊಂದಿದೆ: ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡುವುದು, ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಮಂದಿರ ನಿರ್ಮಿಸುವುದು ಮತ್ತು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವುದು.

ಈ ಮೂರೂ ಬೇಡಿಕೆಗಳು ಈಡೇರಬೇಕು ಎಂದಾದರೆ ಅಲ್ಪಸಂಖ್ಯಾತ ಸಮುದಾಯದಿಂದ ಏನಾದರೊಂದನ್ನು ಬಯಸಬೇಕಾಗುತ್ತದೆ. 370ನೇ ವಿಧಿ ರದ್ದು ಮಾಡಬೇಕು ಎಂದಾದರೆ, ಕಾಶ್ಮೀರದ ಮುಸ್ಲಿಂ ಬಹುಸಂಖ್ಯಾತರು ತಮ್ಮ ಸಾಂವಿಧಾನಿಕ ಸ್ವಾಯತ್ತ ಸ್ಥಾನವನ್ನು ಬಿಟ್ಟುಕೊಡಬೇಕಾಗುತ್ತದೆ. ಮಂದಿರ ನಿರ್ಮಿಸಬೇಕು ಎಂದರೆ, ಮುಸ್ಲಿಮರು ಮಸೀದಿಯ ವಿಚಾರ ಕೈಬಿಡಬೇಕಾಗುತ್ತದೆ. ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಬೇಕು ಎಂದರೆ, ಮುಸ್ಲಿಮರು ತಮ್ಮ ವೈಯಕ್ತಿಕ ಕಾನೂನು ತ್ಯಜಿಸಬೇಕಾಗುತ್ತದೆ.

ಈ ಕಾರಣಗಳಿಂದಾಗಿ, ಮೂರೂ ಬೇಡಿಕೆಗಳು ನಕಾರಾತ್ಮಕವಾದವು, ಬಹುಸಂಖ್ಯಾತ ಪ್ರಾಧಾನ್ಯದ ಸಂವೇದನೆಯಿಂದ ಹುಟ್ಟಿರುವ ಬೇಡಿಕೆಗಳು ಎಂದು ಹೇಳಲು ಸಾಧ್ಯವಿದೆ. ಹಾಗಾಗಿ, ಈ ಬೇಡಿಕೆಗಳು ಅಷ್ಟೊಂದು ಒಳ್ಳೆಯ ಉದ್ದೇಶ ಹೊಂದಿಲ್ಲ ಎಂದು ಭಾಸವಾಗುತ್ತದೆ. ಮಸೀದಿಯನ್ನು ಉರುಳಿಸಿದ ನಂತರ, ಮಂದಿರ ಚಳವಳಿ ಏನಾಯಿತು ಎಂಬುದನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಮಂದಿರ ಚಳವಳಿಯು ಒಳ್ಳೆಯ ಅಂಶಗಳಿಗಿಂತ ಹೆಚ್ಚಾಗಿ ನಕಾರಾತ್ಮಕ ಅಂಶಗಳನ್ನು ಒಳಗೊಂಡಿತ್ತು. ಅಂದರೆ ಅದು, ಮಂದಿರ ಕಟ್ಟುವುದಕ್ಕಿಂತ ಹೆಚ್ಚಾಗಿ ಮಸೀದಿಯ ವಿರುದ್ಧವಾಗಿತ್ತು.

370ನೇ ವಿಧಿಯ ವಿಚಾರದಲ್ಲಿ ಹೇಳುವುದಾದರೆ, ಜಮ್ಮು ಮತ್ತು ಕಾಶ್ಮೀರ ಭಾರತದಲ್ಲಿ ಸಂಪೂರ್ಣವಾಗಿ ವಿಲೀನ ಆಗದಂತೆ ತಡೆಯುವ ಅನೇಕ ಕಾನೂನು ಸಂಗತಿಗಳಿವೆ. ಆದರೆ, ಆಡಳಿತ ಪಕ್ಷದ ಸಿದ್ಧಾಂತದ ಉದ್ದೇಶ ಏನು ಎಂಬುದು, ಇಂದಿನ ಕಾಶ್ಮೀರದ ಸ್ಥಿತಿಯನ್ನು ಕಂಡರೆ ತುಸುವಾದರೂ ತಿಳಿಯುತ್ತದೆ.

ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಂಡ ನಂತರ ಮೂಡಿರುವ ರಾಷ್ಟ್ರೀಯ ಹೆಮ್ಮೆಯ ಭಾವ ಈಗ ಕಾಶ್ಮೀರದ ಸಂಗತಿಗಳಿಗಿಂತ ಹೆಚ್ಚಾಗಿ ಆವರಿಸಿಕೊಂಡಿದೆ. ಆದರೆ, ಇಂದಲ್ಲ ನಾಳೆ, ಕಾಶ್ಮೀರದ ಪರಿಸ್ಥಿತಿ ನಿಭಾಯಿಸುವುದು ಹೇಗೆ ಎಂಬ ಬಗ್ಗೆ ನಾವು ಅವಲೋಕಿಸಲೇಬೇಕಾಗುತ್ತದೆ.

ಏಕರೂಪ ನಾಗರಿಕ ಸಂಹಿತೆಯ ವಿಚಾರ ಈಗ ಕಾವು ಪಡೆಯುತ್ತಿದೆ. ಇದು ಎರಡು ಹಂತಗಳಲ್ಲಿ ನಡೆಯುತ್ತಿದೆ. ಮೊದಲನೆಯದು, ಏಕಕಾಲದಲ್ಲಿ ಮೂರು ಬಾರಿ ತಲಾಖ್‌ ಹೇಳಿ ಪತ್ನಿಗೆ ವಿಚ್ಛೇದನ ನೀಡುವ ಪದ್ಧತಿ ವಿರುದ್ಧ ತಳೆದಿರುವ ನಿಲುವು. ಈ ಪದ್ಧತಿಯನ್ನು ಉಳಿಸಿಕೊಳ್ಳಬೇಕು ಎಂದು ಪುರುಷರಿಂದ ತುಂಬಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೇಳುತ್ತಿದೆ.

ತ್ರಿವಳಿ ತಲಾಖ್‌ ಮೂಲಕ ಪುರುಷರು ತ್ವರಿತವಾಗಿ ವಿಚ್ಛೇದನ ಪಡೆಯಬಹುದು. ಆದರೆ ಪಾಕಿಸ್ತಾನ ಸೇರಿದಂತೆ ಹಲವು ಮುಸ್ಲಿಂ ರಾಷ್ಟ್ರಗಳೇ ಈ ಪದ್ಧತಿಯನ್ನು ಒಪ್ಪುವುದಿಲ್ಲ. ತ್ರಿವಳಿ ತಲಾಖ್‌ ಪದ್ಧತಿಯನ್ನು ಕಾನೂನುಬಾಹಿರಗೊಳಿಸಬೇಕು ಎಂದು ಸರ್ಕಾರ ಬಯಸುತ್ತಿದೆ. ನ್ಯಾಯಾಲಯಗಳು ಕೂಡ ಸರ್ಕಾರದ ಪರ ಇವೆ.

ಇದು ಕಾರ್ಯರೂಪಕ್ಕೆ ಬಂದರೆ, ಬಂಧನಗಳು ಹೆಚ್ಚಾಗುತ್ತವೆ. ಅದಕ್ಕೆ ನಾವು ಸಿದ್ಧರಿರಬೇಕು. ಎರಡನೆಯ ವಿಚಾರ, ಬಹುಪತ್ನಿತ್ವಕ್ಕೆ ಸಂಬಂಧಿಸಿದೆ. ಹಿಂದುತ್ವದ ನೈಜ ಹಿತಾಸಕ್ತಿ ಇರುವುದೂ ಇಲ್ಲಿಯೇ. ಬಹುಪತ್ನಿತ್ವದ ಕಾರಣದಿಂದ ಮುಸ್ಲಿಮರ ಜನಸಂಖ್ಯೆ ಬೆಳವಣಿಗೆ ಪ್ರಮಾಣ ಹೆಚ್ಚಿದೆ ಎಂಬ ನಂಬಿಕೆ ಇದೆ.

ಮುಂದೊಂದು ದಿನ ಮುಸ್ಲಿಮರು ದೇಶದಲ್ಲಿ ಬಹುಸಂಖ್ಯಾತರಾಗುತ್ತಾರೆ ಎಂಬ ನಂಬಿಕೆಯೂ ಇದೆ. ಆದರೆ ವಾಸ್ತವದಲ್ಲಿ, ಬಹುಪತ್ನಿತ್ವವು ಮುಸ್ಲಿಮರಿಗಿಂತ ಹಿಂದೂಗಳಲ್ಲೇ ಹೆಚ್ಚಿದೆ ಎಂಬುದನ್ನು ಅಂಕಿ–ಅಂಶಗಳು ಹೇಳುತ್ತವೆ. ಆದರೆ, ಈಗಿನ ನಂಬಿಕೆಗಳು ಏಕರೂಪ ನಾಗರಿಕ ಸಂಹಿತೆಗೆ ಒತ್ತಾಯಿಸುವಷ್ಟು ಶಕ್ತಿಯುತವಾಗಿವೆ.

ಉದಾರವಾದಿಗಳು ಹಾಗೂ ಎಡಪಂಥೀಯರು (ಈ ಮಾತನ್ನು ಕಮ್ಯುನಿಸ್ಟರನ್ನು ಉದ್ದೇಶಿಸಿ ಆಡಿದ್ದು ಎಂಬುದು ನನ್ನ ಭಾವನೆ. ನಾನು ಅಂದುಕೊಂಡಿದ್ದರಲ್ಲಿ ತಪ್ಪಿರಬಹುದು) ಏಕೆ ಬಹುಪತ್ನಿತ್ವವನ್ನು ವಿರೋಧಿಸಬೇಕು, ಏಕರೂಪ ನಾಗರಿಕ ಸಂಹಿತೆಯನ್ನು ಬೆಂಬಲಿಸಬೇಕು ಎಂಬ ಬಗ್ಗೆ ಇತಿಹಾಸಕಾರ ರಾಮಚಂದ್ರ ಗುಹಾ ಕೆಲವು ದಿನಗಳ ಹಿಂದೆ ಬರೆದಿದ್ದರು. ಇವರು ಹಿಂದುತ್ವದ ಬೇಡಿಕೆಗಳಿಗೆ ವ್ಯಕ್ತಪಡಿಸುತ್ತಿರುವ ವಿರೋಧವು, ಈ ಏಳು ಅಂಶಗಳಲ್ಲಿ ಒಂದು ಎಂದು ಗುಹಾ ಹೇಳಿದ್ದರು:

1) 1950ರ ದಶಕದಲ್ಲಿ ಹಿಂದೂ ವೈಯಕ್ತಿಕ ಕಾನೂನಿಗೆ ತಂದ ಸುಧಾರಣೆಗಳು ಈಗ ಹೇಳುತ್ತಿರುವಷ್ಟೇನೂ ಪ್ರಗತಿಪರ ಆಗಿರಲಿಲ್ಲ.

2) ಹಿಂದೂಗಳ ಸಾಂಪ್ರದಾಯಿಕ ಕಾನೂನುಗಳು ಬಹುತೇಕ ಸಂದರ್ಭಗಳಲ್ಲಿ ಪ್ರತಿಗಾಮಿಯಾಗಿವೆ. ಉದಾಹರಣೆಗೆ: ಖಾಪ್‌ ಪಂಚಾಯಿತಿಗಳು.

3) ಸುಧಾರಣೆಗೆ ಒಳಗಾಗಿರದ ಮುಸ್ಲಿಂ ವೈಯಕ್ತಿಕ ಕಾನೂನುಗಳು ಅಂದುಕೊಂಡಷ್ಟು ಪ್ರತಿಗಾಮಿ ಅಲ್ಲ. ಅವು ಹಲವು ಸಂದರ್ಭಗಳಲ್ಲಿ, ಅಥವಾ ಬಹುತೇಕ ಸಂದರ್ಭಗಳಲ್ಲಿ ಮಹಿಳೆಯರಿಗೆ ತಕ್ಕಮಟ್ಟಿಗಿನ ಹಕ್ಕುಗಳನ್ನು ನೀಡುತ್ತವೆ.

4) ಮುಸ್ಲಿಮರ ಸಾಂಪ್ರದಾಯಿಕ ಆಚರಣೆಗಳು ಹೇಳಿಕೊಳ್ಳುವಷ್ಟೇನೂ ಕೆಟ್ಟವಲ್ಲ. ಹಿಂದೂಗಳಲ್ಲಿನ ಬಹುಪತ್ನಿತ್ವವು ಮೊದಲನೆಯ ಹಾಗೂ ನಂತರದ ಪತ್ನಿಯರಲ್ಲಿ ತಂದ ತಾರತಮ್ಯವನ್ನು ಮುಸ್ಲಿಂ ಬಹುಪತ್ನಿತ್ವವು ತಂದಿಲ್ಲ.

5) ಏಕರೂಪ ನಾಗರಿಕ ಸಂಹಿತೆಗೆ ಬಂದಿರುವ ಬೇಡಿಕೆಯು ಬಿಜೆಪಿಯ ರಾಜಕೀಯ ಅಜೆಂಡಾದಿಂದ ಪ್ರೇರಿತವಾಗಿದೆ.

6) ಏಕರೂಪ ನಾಗರಿಕ ಸಂಹಿತೆಯನ್ನು ಪ್ರತಿಪಾದಿಸುವ ಸಂವಿಧಾನದ 44ನೇ ವಿಧಿ ಹಾಗೂ ಧರ್ಮಪ್ರಚಾರದ ಹಕ್ಕನ್ನು ನೀಡುವ 25ನೇ ವಿಧಿ ನಡುವೆ ಸಾಮ್ಯ ಇಲ್ಲ.

7) ಸಂವಿಧಾನದ ಹಲವು ವಿಧಿಗಳ ಆಶಯ ಈಡೇರಿಲ್ಲ. ಈಗ ಒಂದು ವಿಧಿಯನ್ನು ಮಾತ್ರ ಮುಂದಿಡುವುದು ಏಕೆ?
ನನ್ನ ಅಭಿಪ್ರಾಯದಲ್ಲಿ, ಗುಹಾ ಅವರು ಒಂದು ಅಂಶವನ್ನು ಬಿಟ್ಟಿದ್ದಾರೆ. ಕೆಲವು ಉದಾರವಾದಿಗಳು (ನಾಗರಿಕ ವೈಯಕ್ತಿಕ ಹಕ್ಕುಗಳ ಪರ ಇರುವವರು) ಈ ಸುಧಾರಣೆಯನ್ನು ವಿರೋಧಿಸುತ್ತಾರೆ ಎಂಬಲ್ಲಿ ಇದು ಬಹಳ ಪ್ರಮುಖ ವಿಚಾರ. ಇಲ್ಲಿ ಎರಡನೆಯ ಪತ್ನಿ ಅಥವಾ ಎರಡನೆಯ ಪತ್ನಿಯಾಗುವ ಮಹಿಳೆ/ ಪುರುಷನ ಹಕ್ಕಿನ ವಿಚಾರ ಇದೆ (ದೇಶದ ಕೆಲವು ಪ್ರದೇಶಗಳಲ್ಲಿ ಬಹುಪತಿತ್ವ ಕೂಡ ಆಚರಣೆಯಲ್ಲಿದೆ). ಸಮೀಕ್ಷೆಯೊಂದರ ಪ್ರಕಾರ ಮುಸ್ಲಿಂ ಮಹಿಳೆಯರಲ್ಲಿ ಶೇಕಡ 90ರಷ್ಟು ಮಂದಿ ಬಹುಪತ್ನಿತ್ವ ವಿರೋಧಿಸುತ್ತಾರೆ ಎಂಬುದು ನಿಜ. ಹಾಗೆಯೇ, ಮುಸ್ಲಿಂ ಮಹಿಳೆಯರಲ್ಲಿ ಶೇಕಡ 90ರಷ್ಟು ಜನ ಬಹುಪತ್ನಿತ್ವದ ವಿವಾಹ ಬಂಧನದಲ್ಲಿ ಇಲ್ಲ ಎಂಬುದೂ ನಿಜ. ಬಹುಪತ್ನಿತ್ವದ ವ್ಯವಸ್ಥೆಯಲ್ಲಿ ಬದುಕುತ್ತಿರುವವರು, ಆ ವ್ಯವಸ್ಥೆಯನ್ನು ಯಾವ ದೃಷ್ಟಿಯಿಂದ ನೋಡುತ್ತಾರೆ ಎಂಬುದು ಕುತೂಹಲಕರ.

ಬಹುಪತ್ನಿತ್ವ ಎಂಬುದು ‘ಹೇಯ ಆಚರಣೆ. ಇದನ್ನು ಒಂದು ಬಾರಿಗೆ ನಿಷೇಧಿಸಬೇಕು’ ಎನ್ನುತ್ತಾರೆ ಗುಹಾ. ಇದು ನನ್ನ ಅಭಿಪ್ರಾಯದಲ್ಲಿ ನೈತಿಕ ತೀರ್ಪಿನಂತೆ ಇದೆ. ಇದೇ ಮಾತನ್ನು ಭಾರತ ಕಾನೂನು ಹಾಗೂ ಹಲವು ಸರ್ಕಾರಗಳು ಸಲಿಂಗ ಕಾಮದ ಬಗ್ಗೆಯೂ ಹೇಳಿವೆ. ಆದರೆ ಆಗ ಕೂಡ ಉದಾರವಾದಿಗಳು ವೈಯಕ್ತಿಕ ಹಕ್ಕುಗಳ ಪರವಾಗಿ ನಿಲ್ಲುತ್ತಾರೆ.

ತ್ರಿವಳಿ ತಲಾಖ್‌ ಹಾಗೂ ಬಹುಪತ್ನಿತ್ವದ ವಿಚಾರದಲ್ಲಿ ಹಿಂದುತ್ವವು ತನ್ನನ್ನು ತೊಡಗಿಸಿಕೊಳ್ಳಲಿದೆ. ಬೇರೆ ವಿಚಾರಗಳಲ್ಲಿ ಆದಂತೆ ಈ ವಿಚಾರದಲ್ಲೂ ಒಂದಿಷ್ಟು ಸಮಸ್ಯೆಗಳು ಸೃಷ್ಟಿಯಾಗುವ ನಿರೀಕ್ಷೆ ಹೊಂದಬಹುದು.
(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT