ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಧ್ವಜವೂ ಅನನ್ಯ ಅಸ್ಮಿತೆಯ ಅಭಿವ್ಯಕ್ತಿಯೂ

Last Updated 23 ಜುಲೈ 2017, 19:42 IST
ಅಕ್ಷರ ಗಾತ್ರ

ಮೂಲತಃ ಗುಜರಾತಿಯಾದ ನಾನು ಕರ್ನಾಟಕದಲ್ಲಿ ನೆಲೆಸಿದ್ದೇನೆ. ಈ ಎರಡೂ ರಾಜ್ಯಗಳು ಪ್ರತ್ಯೇಕ ಅಸ್ಮಿತೆಯನ್ನು ಹೊಂದಿವೆ. ಈಗಲೂ ನನ್ನ ಪೋಷಕರು ವಾಸಿಸುತ್ತಿರುವ ಸೂರತ್, ಸುಮಾರು 1700ರ ವರೆಗೂ ಅಂತರರಾಷ್ಟ್ರೀಯ ಬಂದರು ಪಟ್ಟಣವಾಗಿತ್ತು. ಶತಶತಮಾನಗಳಿಂದಲೂ ಎಲ್ಲ ಬಗೆಯ ಜಾತಿ ಹಾಗೂ ಸಮುದಾಯಗಳ ಜನ ಇಲ್ಲಿಗೆ ಭೇಟಿ ನೀಡಿದ್ದಾರೆ ಮತ್ತು ಇಲ್ಲಿ ನೆಲೆ ನಿಂತಿದ್ದಾರೆ. ಬನಿಯಾ, ಜೈನ, ಷಿಯಾ ಬೊಹ್ರಾಗಳು ಮತ್ತು ಖೋಜಾಗಳು, ಸುನ್ನಿ ಬೊಹ್ರಾಗಳು ಹಾಗೂ ಮೆಮನ್‌ಗಳು, ಪಾರ್ಸಿಗಳಂತಹ ವಿವಿಧ ಜನಾಂಗಗಳಿಗೆ ಸೇರಿದ ವರ್ತಕರನ್ನು ಹೊಂದಿದ ನಗರ ಇದು. 1970ರಿಂದ ಈಚೆಗೆ ಅಗರವಾಲ್‌ ಮತ್ತು ಓಸ್ವಾಲ್‌ಗಳು ಸಹ ಸಾವಿರಾರು ಸಂಖ್ಯೆಯಲ್ಲಿ ಇಲ್ಲಿ ಬೀಡುಬಿಟ್ಟಿದ್ದಾರೆ.

ಹಿಂದಿನ ಶತಮಾನಗಳಲ್ಲಿ ವಿದೇಶಿಯರು ಕೂಡ ಈ ನಗರದಲ್ಲಿ ನೆಲೆ ನಿಂತು ವ್ಯಾಪಾರ ಮಾಡುತ್ತಿದ್ದರು. ಲಿಯೊ ಟಾಲ್‌ಸ್ಟಾಯ್ ‘ದಿ ಕಾಫಿ ಹೌಸ್ ಆಫ್ ಸೂರತ್’ ಎಂಬ ಕಿರುಕಥೆಯೊಂದನ್ನು ಬರೆದಿದ್ದಾರೆ. ಅದರಲ್ಲಿ ಬರುವ ಕೆಫೆಯೊಂದರಲ್ಲಿ ಸೂರತ್‌ನವ, ಪರ್ಷಿಯಾದವ, ಆಫ್ರಿಕಾದವ, ಭಾರತೀಯ, ಇಟಲಿ ವ್ಯಕ್ತಿ ಮತ್ತು ಯಹೂದಿ ಎಲ್ಲರೂ ಕುಳಿತು ದೇವರ ಸ್ವರೂಪದ ಬಗ್ಗೆ ಚರ್ಚಿಸುತ್ತಾರೆ. ಆದರೆ ಈ ಕಥೆ ಬರೆದು 150 ವರ್ಷಗಳಾಗಿರುವ ಇಂದಿನ ಸಂದರ್ಭದಲ್ಲಿ, ಅಂತಹ ಸಮಾಗಮವೊಂದನ್ನು ಕಲ್ಪಿಸಿಕೊಳ್ಳುವುದು ಕಷ್ಟಸಾಧ್ಯ. ಅಷ್ಟೇ ಏಕೆ, 1800ರ ಕಾಲಘಟ್ಟದಲ್ಲೂ ಇಂತಹದ್ದೊಂದು ಊಹೆ ಅಸಾಧ್ಯವೇ ಆಗಿತ್ತು. ಏಕೆಂದರೆ ಆ ಹೊತ್ತಿಗೆ ತಪತಿ ನದಿಯ ಬಂದರಿನಲ್ಲಿ ಹೂಳು ತುಂಬಿಕೊಂಡಿದ್ದರಿಂದ, ಬೃಹತ್ ಹಡಗುಗಳು ಅರಬ್ಬಿ ಸಮುದ್ರದ ಮೂಲಕ ಸೂರತ್‌ವರೆಗೆ ಬರಲು ಸಾಧ್ಯವಾಗುತ್ತಿರಲಿಲ್ಲ.

ಪಶ್ಚಿಮ ಕರಾವಳಿಯಲ್ಲಿ ಹೊಸದಾಗಿ ರೂಪುಗೊಂಡದ್ದು ಮುಂಬೈ ಬಂದರು. ಅಲಿನ ರೆಸ್ಟೋರೆಂಟ್‌ನಲ್ಲಿ ವಿವಿಧ ರಾಷ್ಟ್ರಗಳ ಆ ಎಲ್ಲ ನಾಗರಿಕರು ಅಚಾನಕ್ಕಾಗಿ ಸಮಾಗಮಗೊಳ್ಳಬಹುದಾದ ಸಾಧ್ಯತೆಯನ್ನು ನಾವೀಗ ಕಲ್ಪಿಸಿಕೊಳ್ಳಬಹುದು.

ಸೂರತ್‌ಗೆ ಹೋಲಿಸಿದರೆ ಬೆಂಗಳೂರು ತೀರಾ ಇತ್ತೀಚೆಗೆ ರೂಪುಗೊಂಡ ನಗರ. ಆದರೂ ಅದರ ಚರಿತ್ರೆ ಮಾತ್ರ ಸೂರತ್‌ನಷ್ಟೇ ಶ್ರೀಮಂತವಾಗಿದೆ. ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವ ನಗರ ಇದು. ನಾನು ಯುರೋಪ್, ಆಫ್ರಿಕಾ ಅಥವಾ ಆಗ್ನೇಯ ಏಷ್ಯಾಗೆ ಪ್ರವಾಸ ಹೋದಾಗ, ಎಲ್ಲಿಯವನೆಂದು ಜನ ನನ್ನನ್ನು ಕೇಳುತ್ತಾರೆ. ನಾನು ಬೆಂಗಳೂರಿನವ ಎಂದಷ್ಟೇ ಹೇಳಿದರೆ ಸಾಕು, ಅವರು ಅರ್ಥ ಮಾಡಿಕೊಳ್ಳುತ್ತಾರೆ. ಈ ನಗರ ಐ.ಟಿ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯೇ ಇದಕ್ಕೆ ಕಾರಣ. ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿ ಸಾಮರ್ಥ್ಯದ ಹೊರತಾಗಿಯೂ ಬೆಂಗಳೂರು ಹಲವು ಆಕರ್ಷಣೆಗಳನ್ನು ಹೊಂದಿದೆ.

ವಿವಿಧ ಭಾಷೆಗಳನ್ನು ಮಾತನಾಡಬಲ್ಲ ಜನ ಈ ಊರಿನಲ್ಲಿದ್ದಾರೆ. ನಮ್ಮ ಮನೆಗೆಲಸಕ್ಕೆ ಬರುವ ಮಹಿಳೆಯು ಅನಕ್ಷರಸ್ಥೆಯಾಗಿದ್ದರೂ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿಯನ್ನು ನಿರರ್ಗಳವಾಗಿ ಮಾತನಾಡಬಲ್ಲಳು. ಮಲಯಾಳಂ ಸಹ ಆಕೆಗೆ ಅರ್ಥವಾಗುತ್ತದೆ.  ಉತ್ತರ ಭಾರತೀಯರಲ್ಲಿ, ಅದರಲ್ಲೂ ಸಾಕ್ಷರತೆ ಹೆಚ್ಚಿರುವ ಅಲ್ಲಿನ ನಗರಗಳಲ್ಲೂ ಇಂತಹ  ಭಾಷಾ ವೈವಿಧ್ಯ ಇದೆ ಎಂದು ನನಗನಿಸುವುದಿಲ್ಲ. ಈ ಬಗ್ಗೆ ನಾವು ಬೆಂಗಳೂರಿಗರಂತೂ ಹೆಚ್ಚು ಹೆಮ್ಮೆಪಟ್ಟುಕೊಳ್ಳುತ್ತೇವೆ. ಕನ್ನಡಕ್ಕೆ ಅಗ್ರಸ್ಥಾನ ಸಲ್ಲಬೇಕೆಂಬ ಆಗ್ರಹದ (ನಾನಿದನ್ನು ಬೆಂಬಲಿಸುತ್ತೇನೆ) ನಡುವೆಯೂ ಇತರ ಭಾಷೆಗಳ ಬಗ್ಗೆ ಇಲ್ಲಿ ಸಾಕಷ್ಟು ಸಹಿಷ್ಣುತೆ ಇದೆ ಮತ್ತು ಅದು ಈ ನಗರದ ವೈಶಿಷ್ಟ್ಯ ಎನ್ನಬಹುದು. ನಮ್ಮ ನಗರ ಮತ್ತು ರಾಜ್ಯದ ಬಗ್ಗೆ ನಾವು ಸಂಭ್ರಮ ಆಚರಿಸಿಕೊಳ್ಳುವುದರಲ್ಲಿ  ಯಾವುದೇ ತಪ್ಪಿಲ್ಲ.

ಕರ್ನಾಟಕವು ಪ್ರತ್ಯೇಕ ನಾಡಧ್ವಜ ಹೊಂದುವುದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಉಂಟಾಗಿರುವ ವಿವಾದದ ಕಾರಣದಿಂದ  ನಾನು ಇದನ್ನೆಲ್ಲ ಬರೆಯುತ್ತಿದ್ದೇನೆ. ಇಂತಹದ್ದೊಂದು ಅಧಿಕೃತ ಧ್ವಜವನ್ನು ಹೊಂದುವ ಬಗ್ಗೆ ಪರಿಶೀಲನೆ ನಡೆಸುವಂತೆ, ಈ ಸಂಬಂಧ ರಚನೆಯಾಗಿರುವ ಸಮಿತಿಗೆ ಮುಖ್ಯಮಂತ್ರಿ ತಿಳಿಸಿದ್ದಾರೆ. ಎಲ್ಲ ಕನ್ನಡಿಗರೂ (ನನ್ನಂತಹ ಗುಜರಾತಿ ಕನ್ನಡಿಗರೂ ಸೇರಿದಂತೆ) ಮಾನ್ಯ ಮಾಡಿರುವ ಹಳದಿ ಮತ್ತು ಕೆಂಪು ಬಣ್ಣದ ಧ್ವಜ ರಾಜ್ಯದಲ್ಲಿ ಈಗಾಗಲೇ ಇದೆ. ನಮ್ಮ ಎಲ್ಲ ರಾಜಕೀಯ ಪಕ್ಷಗಳೂ ಅದನ್ನು ಒಪ್ಪಿಕೊಂಡಿವೆ ಮತ್ತು ಯಾರಿಗೂ ಅದರಲ್ಲಿ ಯಾವ ತಪ್ಪೂ ಕಂಡಿಲ್ಲ. ಕೇಸರಿ ಧ್ವಜದಂತೆ ಕರ್ನಾಟಕದ ಧ್ವಜ ಯಾವುದೋ ಒಂದು ಧರ್ಮವನ್ನು ಪ್ರತಿನಿಧಿಸುವುದಿಲ್ಲ.

ಈ ಧ್ವಜವನ್ನು ಕರ್ನಾಟಕದ ಹೆಮ್ಮೆ ಹಾಗೂ ಶ್ರೀಮಂತ ಪರಂಪರೆಯ ಸಂಕೇತವಾಗಿ ಬಳಸುವುದಕ್ಕೆ ರಾಜ್ಯದೊಳಗೆ ನಿಶ್ಚಿತವಾಗಿಯೂ ಯಾವುದೇ ಸಮಸ್ಯೆಯಿಲ್ಲ. ಹಿಂದಿ- ಹಿಂದೂ- ಹಿಂದುಸ್ತಾನದ ಪರಿಕಲ್ಪನೆಗಳನ್ನು ಹೇರಲು ಯತ್ನಿಸುತ್ತಿರುವ, ಸಂಕುಚಿತ ಮನೋಭಾವದ ಹುಸಿ ರಾಷ್ಟ್ರೀಯವಾದಿಗಳಿಂದ ನಾಡಧ್ವಜಕ್ಕೆ ವಿರೋಧ ಎದುರಾಗಿದೆ. ಏಕೈಕ ಭಾಷೆ, ಏಕೈಕ ಧರ್ಮದ ರಾಷ್ಟ್ರವಾಗಿ ಭಾರತವನ್ನು ತಪ್ಪಾಗಿ ಸಮೀಕರಿಸಲಾಗುತ್ತಿದೆ.

ಮುಖ್ಯವಾಗಿ, ಕಾಂಗ್ರೆಸ್ ಪಕ್ಷವನ್ನು ಹಣಿಯುವ ಸಲುವಾಗಿಯೇ ಇದನ್ನೊಂದು ದೊಡ್ಡ ವಿವಾದ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಧಿಕಾರದ ಪರಿಮಿತಿಯೊಳಗೇ ಇದ್ದಾರೆ. ಎತ್ತರದಲ್ಲಿ ಹಾರಾಡುವ ರಾಷ್ಟ್ರಧ್ವಜದ ಕೆಳಗೇ ನಾಡಧ್ವಜ ಇರಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಹೀಗೆ ಹೇಳುವ ಮೂಲಕ ಅವರು, ಪ್ರತ್ಯೇಕತೆಯ ವಿವಾದದತ್ತ ಇದೊಂದು ಮೊದಲ ಹೆಜ್ಜೆ ಎಂದು ಭಾವಿಸಿದ್ದವರನ್ನು ನಿರಾಯುಧರನ್ನಾಗಿಸಿದ್ದಾರೆ. ಸಂವಿಧಾನಾತ್ಮಕವಾಗಿಯೂ ಅವರದು ಸರಿಯಾದ ನಡೆಯಾಗಿದ್ದು, ಸಮಿತಿ ಸಹ ಅವರಿಗೆ ಇದನ್ನೇ ಹೇಳುತ್ತದೆ ಎಂಬುದು ನನ್ನ ಭಾವನೆ. ಭಾರತೀಯ ಸಂವಿಧಾನದ ಮೊದಲ ಸಾಲು ‘ಇಂಡಿಯಾ, ಅಂದರೆ ಭಾರತವು ರಾಜ್ಯಗಳ ಒಕ್ಕೂಟ’ ಎಂದು ಪ್ರತಿಪಾದಿಸುತ್ತದೆ. ನಾವು ರಾಜ್ಯಗಳ ಪರಿಕಲ್ಪನೆಯನ್ನು ಒಪ್ಪಿಕೊಂಡೇ ಒಂದು ರಾಷ್ಟ್ರವಾಗಿದ್ದೇವೆ ಎಂಬುದನ್ನು ಇದು ಎತ್ತಿ ತೋರಿಸುತ್ತದೆ.

ನಮ್ಮ ಸುತ್ತಮುತ್ತ ಗಮನಿಸಿದರೆ, ತಮ್ಮದೇ ಧ್ವಜಗಳೊಂದಿಗೆ ಉಪರಾಷ್ಟ್ರೀಯತೆಯ ಪರಿಕಲ್ಪನೆ ಅಸ್ತಿತ್ವದಲ್ಲಿರುವುದು ನಮಗೆ ಗೋಚರಿಸುತ್ತದೆ. ಉದಾಹರಣೆಗೆ, ನಗರ ಕೇಂದ್ರಿತ (ಚೆನ್ನೈ ಸೂಪರ್ ಕಿಂಗ್ಸ್) ಅಥವಾ ರಾಜ್ಯ ಕೇಂದ್ರಿತ (ಕಿಂಗ್ಸ್ ಇಲವೆನ್ ಪಂಜಾಬ್) ಐಪಿಎಲ್ ತಂಡಗಳು ನಮ್ಮಲ್ಲಿವೆ ಮತ್ತು ಅದೂ ಒಂದು ರೀತಿಯಲ್ಲಿ ಉಪರಾಷ್ಟ್ರೀಯತೆಯೇ ಆಗಿದೆ. ಈ ಎಲ್ಲ ತಂಡಗಳಿಗೂ ತಮ್ಮದೇ ಆದ ಧ್ವಜಗಳಿವೆ. ಈ ವಿಷಯದಲ್ಲೂ ನಮಗೆ ಯಾವುದೇ ಸಮಸ್ಯೆ ಎದುರಾಗಿಲ್ಲ. ರಾಜಕೀಯ ಪಕ್ಷಗಳು ಮತ್ತು ಅವುಗಳ ಧ್ವಜಗಳು ಸಹ ನಮಗೆ ಸಮಸ್ಯೆಯಾಗಿ ಕಂಡಿಲ್ಲ.

ನಮ್ಮದೇ ಮಾದರಿಯ ಇತರ ರಾಷ್ಟ್ರಗಳನ್ನು ಗಮನಿಸಿದರೆ, ಅಲ್ಲೂ ರಾಜ್ಯ ಅಥವಾ ಪ್ರಾಂತೀಯ ಅಸ್ಮಿತೆಗಳ ಪರಿಕಲ್ಪನೆ ಇದ್ದೇ ಇದೆ. ಅಮೆರಿಕದ ಎಲ್ಲಾ  ರಾಜ್ಯಗಳೂ ಪ್ರತ್ಯೇಕ ಧ್ವಜಗಳನ್ನು ಹೊಂದಿವೆ ಹಾಗೂ ಅದರಿಂದ ರಾಷ್ಟ್ರದ ಏಕತೆಗೆ ಧಕ್ಕೆಯುಂಟಾಗುತ್ತದೆ ಎಂಬ ಯಾವ ಆರೋಪಗಳೂ ಇಲ್ಲ. ನಮ್ಮ ಎಲ್ಲ ರಾಜ್ಯಗಳಿಗೂ ವಿಶಿಷ್ಟ ಇತಿಹಾಸವಿದೆ. ಈ ಕಾರಣಕ್ಕಾಗಿ ಅವು ತಮ್ಮದೇ ಆದ ಅನನ್ಯ ಅಸ್ಮಿತೆಯನ್ನು ಹೊಂದಿವೆ. ಈ ಅಸ್ಮಿತೆಗಳ ಅಭಿವ್ಯಕ್ತಿಗೆ ಯಾವುದೇ ಅಡೆತಡೆ ಇರಬಾರದು. ಇಂತಹ ಅಸ್ಮಿತೆಗಳು ನಮ್ಮ ಸಂವಿಧಾನಕ್ಕೆ ವ್ಯತಿರಿಕ್ತವಾದವಲ್ಲ. ಹೀಗಾಗಿ ಅವುಗಳನ್ನು ಹತ್ತಿಕ್ಕಲು ಯಾವುದೇ ಕಾರಣಗಳು ಸಹ ಇಲ್ಲ.

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT