ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಾಶ್ರಿತರು ಎಂಬ ವಲಸಿಗರನ್ನು ಕಾಣುವ ಬಗೆ

Last Updated 17 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಒಂದು ಭಾಷೆಯನ್ನು ಅಲ್ಪಸ್ವಲ್ಪ ಮಾತನಾಡುವುದನ್ನು ಕಲಿತುಕೊಂಡರೆ, ನೀವು ರೋಮ್, ವೆನಿಸ್, ಮಿಲಾನ್, ಬೊಲೊನ್ಯಾ ಸೇರಿದಂತೆ ಇಟಲಿಯ ಎಲ್ಲೆಡೆ ಪ್ರವಾಸ ಹೋಗಬಹುದು. ಇಲ್ಲಿ ನಾನು ಹೇಳುತ್ತಿರುವುದು ಇಟಾಲಿಯನ್ ಭಾಷೆಯ ಬಗ್ಗೆ ಅಲ್ಲ, ಬದಲಿಗೆ ಬಂಗಾಳಿ ಭಾಷೆಯ ಬಗ್ಗೆ. ಈ ದೇಶದಲ್ಲಿ ಬಾಂಗ್ಲಾದೇಶದ ವಲಸಿಗರು ತುಂಬಿಕೊಂಡಿದ್ದಾರೆ. ಈ ವಲಸಿಗರೆಲ್ಲರೂ ಪುರುಷರು, ಯುವಕರು (24-25ರಿಂದ 30-32 ವರ್ಷ ವಯಸ್ಸಿನವರು), ಇವರೆಲ್ಲರೂ ಸಾಮಾನ್ಯವಾಗಿ ದೈಹಿಕವಾಗಿ ಒಂದೇ ರೀತಿ ಕಾಣುತ್ತಾರೆ (ಇವರು ಸಣ್ಣ ಹಾಗೂ ಸಪೂರ ದೇಹ, ಗಾಢ ಮೈಬಣ್ಣ ಹೊಂದಿರುವವರು).

ಇವರೆಲ್ಲರೂ ಕಷ್ಟಪಟ್ಟು ದುಡಿಯುವವರು ಎಂಬುದು ಇವರಲ್ಲಿ ಕಂಡುಬರುವ ಇನ್ನೊಂದು ಸಾಮಾನ್ಯ ಅಂಶ. ತೀರಾ ಈಚೆಗೆ ಈ ದೇಶಕ್ಕೆ ಬಂದವರು, ಏನಾದರೂ ಮಾಡಲು ಬಂಡವಾಳ ಇಲ್ಲದವರು, ಬೇರೆ ರೂಪದ ಬೆಂಬಲ ಅಷ್ಟಾಗಿ ಇಲ್ಲದವರು ಬೀದಿ ಬದಿಯಲ್ಲಿ ಅದು-ಇದು ಮಾರುತ್ತಿರುತ್ತಾರೆ. ಸೆಲ್ಫಿ ಸ್ಟಿಕ್‌ಗಳನ್ನು, ಪ್ಲಾಸ್ಟಿಕ್‌ನಿಂದ ತಯಾರಿಸಿದ ಆಟಿಕೆಯ ಹೆಲಿಕಾಪ್ಟರ್‌ಗಳನ್ನು, ತಂಪಾದ ನೀರನ್ನು, ತಾತ್ಕಾಲಿಕ ರೇನ್‌ ಕೋಟ್‌ಗಳನ್ನು ಹಾಗೂ ಇಂತಹ ಇತರ ವಸ್ತುಗಳನ್ನು ಇವರು ಪ್ರವಾಸಿಗರಿಗೆ ಮಾರುತ್ತಾರೆ. ಇಟಲಿಯಲ್ಲಿ ತುಸು ದೀರ್ಘ ಅವಧಿಯಿಂದ ಇರುವವರು ವೇಟರ್‌ಗಳಾಗಿ, ಹೋಟೆಲ್‌ ಅಡುಗೆಯವರಾಗಿ, ಇಟಲಿಯವರ ಮಾಲೀಕತ್ವದ ತಿನಿಸುಗಳನ್ನು ಹಾಗೂ ಇನ್ನಿತರ ವಸ್ತುಗಳನ್ನು ಮಾರುವ ಅಂಗಡಿಗಳಲ್ಲಿ ಕೆಲಸ ಮಾಡುತ್ತಾರೆ.

ನಾನು ನನ್ನ ಹರಕು-ಮುರುಕು ಬಾಂಗ್ಲಾ ಭಾಷೆ ಬಳಸಿ ಅವರ ಬದುಕಿನ ಬಗ್ಗೆ ಕೇಳುತ್ತೇನೆ. ಅವರ ಜೀವನ ಕಷ್ಟಕರವಾಗಿದೆ ಎಂಬುದನ್ನು ಓದುಗರಿಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅವರಲ್ಲಿನ ಧೈರ್ಯ ಹಾಗೂ ಬದ್ಧತೆ ಬಗ್ಗೆ ನನಗೆ ಅಪಾರ ಗೌರವ ಇದೆ. ಹಾಗೆಯೇ, ಅವರು ಎದುರಿಸುತ್ತಿರುವ ಸ್ಥಿತಿ ಬಗ್ಗೆ ಮರುಕವೂ ಇದೆ. ನಮ್ಮ ಮನೆಯಿಂದ, ನಮ್ಮ ಸುತ್ತಲಿನ ವಾತಾವರಣದಿಂದ ದೂರವಾಗಿ ವಿದೇಶಿ ನೆಲದಲ್ಲಿ ಇರುವುದು ನಮ್ಮಲ್ಲಿನ ಬಹುತೇಕರ ಪಾಲಿಗೆ ಸುಲಭದ ಸಂಗತಿ ಅಲ್ಲ. ಈ ವಿಚಾರದಲ್ಲಿ ಮನುಷ್ಯರೆಲ್ಲರೂ ಒಂದೇ. ಜೀವನೋಪಾಯ ಕಂಡುಕೊಳ್ಳಲು ಇಟಲಿಯಲ್ಲಿ ತುಸು ಹೆಚ್ಚಿನ ಅವಕಾಶ ಇದ್ದರೂ, ಅಲ್ಲಿ ಪೂರ್ತಿಯಾಗಿ ಖುಷಿ ಅನುಭವಿಸುತ್ತಿರುವ ಹಾಗೂ ಮಾತೃಭೂಮಿಗೆ ಮರಳಲು ಇಚ್ಛಿಸದ ಬಾಂಗ್ಲಾ ವಲಸಿಗರು ಸಿಗುವುದು ಅಪರೂಪ.

ಬಹು ಹಿಂದಿನಿಂದಲೂ ಅಷ್ಟೇನೂ ಶಿಕ್ಷಣ ಪಡೆದಿಲ್ಲದ, ಆದರೆ ಉದ್ಯಮಶೀಲರಾದ ಹಾಗೂ ಕಷ್ಟದ ಕೆಲಸಗಳನ್ನು ಕೈಗೆತ್ತಿಕೊಳ್ಳಲು ಹಿಂಜರಿಯದ ಗುಜರಾತಿನ ಒಂದು ಸಮುದಾಯಕ್ಕೆ ಸೇರಿದವನು ನಾನು. ಈ ಗುಣಗಳಿಂದಾಗಿಯೇ ಜಗತ್ತು 'ಪಟೇಲ್ ಮೋಟೆಲ್' ಎಂಬ ಪದಗಳ ಬಗ್ಗೆ ತಿಳಿದಿದೆ. ಆದರೆ ಅಮೆರಿಕಕ್ಕೆ ಬರುವ ಬಹುತೇಕ ಪಟೇಲರು ಬಂಡವಾಳ ಹಿಡಿದುಕೊಂಡು ಬಂದಿರುವುದಿಲ್ಲ ಎಂಬುದು ಹೆಚ್ಚಿನವರಿಗೆ ಗೊತ್ತಿರುವುದಿಲ್ಲ. ಸ್ಥಳೀಯವಾಗಿ ಅವಕಾಶಗಳ ಕೊರತೆ ಇರುವ ಪಟ್ಟಣ ಹಾಗೂ ಹಳ್ಳಿಗಳಿಂದ ಇವರು ಅಮೆರಿಕಕ್ಕೆ ಬಂದಿರುತ್ತಾರೆ. ಅಮೆರಿಕದಲ್ಲಿ ಇವರು ದೈಹಿಕ ಶ್ರಮ ಬೇಡುವ ಕೆಲಸಗಳನ್ನೂ ಮಾಡಬೇಕಾಗುತ್ತದೆ. ನನ್ನ ಪೋಷಕರು ಹಾಗೂ ಸಹೋದರಿ ಅಮೆರಿಕದಲ್ಲಿ ಇನ್ನೊಬ್ಬರ ಮಾಲೀಕತ್ವದ ಮೋಟೆಲ್‌ಗಳಲ್ಲಿ (ಮೋಟಾರು ವಾಹನಗಳ ನಿಲುಗಡೆಗೆ ಸ್ಥಳ ಇರುವ ಹೋಟೆಲ್‌) ಕೆಲಸ ಮಾಡಿದ್ದರು. ಕೊಠಡಿಗಳನ್ನು ಸ್ವಚ್ಛಗೊಳಿಸುವುದು ಸೇರಿದಂತೆ, ಭಾರತದ ಮಧ್ಯಮ ವರ್ಗದವರು ಯಾವತ್ತಿಗೂ ಮಾಡದಂತಹ ಕೆಲಸಗಳೂ ಇವುಗಳಲ್ಲಿ ಸೇರಿದ್ದವು. ಅಮೆರಿಕದಲ್ಲಿನ ಕೆಲವೇ ಕೆಲವು ಪಟೇಲರು ಮಾತ್ರ ಸ್ಥಳಗಳ ಮಾಲೀಕತ್ವ ಹೊಂದಿದ್ದಾರೆ.

ವಲಸಿಗರಲ್ಲಿ ಹೆಚ್ಚಿನವರ ಪಾಡು ಇದೇ ಆಗಿರುತ್ತದೆ. ಇಂದಿನ ಸಂದರ್ಭದಲ್ಲಿ ಭಾರತದಲ್ಲಿ ಹಾಗೂ ಜಗತ್ತಿನ ಇತರ ಕಡೆಗಳಲ್ಲಿ ನಾವು 'ನಿರಾಶ್ರಿತರು' ಎಂಬ ಇನ್ನೊಂದು ಬಗೆಯ ವಲಸಿಗರನ್ನು ನಿಭಾಯಿಸಬೇಕಾಗಿದೆ. ಅದು ರೋಹಿಂಗ್ಯಾ ಮುಸ್ಲಿಮರು ಇರಬಹುದು ಅಥವಾ ಸಿರಿಯಾದವರು ಇರಬಹುದು- ಅವರು ಅತ್ಯಂತ ತೀವ್ರವಾದ ಹಿಂಸೆಯನ್ನು ತಾಳಲಾರದೆ ತಮ್ಮ ಪ್ರದೇಶಗಳನ್ನು ಬಿಟ್ಟು ಓಡುತ್ತಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಯುದ್ಧ ಶುರು ಮಾಡಿದ್ದು ಅಮೆರಿಕ ಮತ್ತು ಬ್ರಿಟನ್. ನಂತರದ ದಿನಗಳಲ್ಲಿ ಫ್ರಾನ್ಸ್‌ನಂತಹ ಇತರ ಐರೋಪ್ಯ ರಾಷ್ಟ್ರಗಳೂ ಅಲ್ಲಿ ಸೇರಿಕೊಂಡವು. ಆದರೆ ಈ ದೇಶಗಳು ತಾವು ಎಸಗಿದ ಕೃತ್ಯಗಳಿಂದ ಆಗುವ ಪರಿಣಾಮಗಳು ತಮ್ಮ ಹೆಗಲೇರದಂತೆ ಬಹುತೇಕ ನೋಡಿಕೊಂಡಿವೆ. ತಾನು ಮಾಡಿದ ಕೃತ್ಯಗಳ ಪರಿಣಾಮಗಳ ಜೊತೆ ಏಗಬೇಕಾದ ಸ್ಥಿತಿ ಎರಡು ದಿಕ್ಕುಗಳಲ್ಲಿ ವಿಶಾಲ ಸಮುದ್ರಗಳಿಂದ ರಕ್ಷಣೆ ಪಡೆದಿರುವ ದೂರದ ಅಮೆರಿಕಕ್ಕೆ ಇಲ್ಲ. ಅಮೆರಿಕವು ಕೊರಿಯಾ ಅಥವಾ ವಿಯೆಟ್ನಾಂ ಜೊತೆ ಯುದ್ಧ ಮಾಡಿಯೂ, ಆ ಯುದ್ಧದ ಪರಿಣಾಮಗಳು ತನ್ನ ದೇಶದಲ್ಲಿ ಆಗದಂತೆ ನೋಡಿಕೊಳ್ಳಬಹುದು.

ಜಗತ್ತಿನಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ನಾನು ಸುದ್ಧಿಸಂಸ್ಥೆಗಳು ಹೊತ್ತು ತರುವ ಚಿತ್ರಗಳನ್ನು ಆಗಾಗ ಗಮನಿಸುತ್ತ ಇರುತ್ತೇನೆ. ಸಿರಿಯಾ ದೇಶದವರು ಎದುರಿಸುತ್ತಿರುವ ಹಿಂಸಾಚಾರದ ತೀವ್ರತೆಯನ್ನು ಕಂಡರೆ ಬಹುತೇಕ ಓದುಗರು ಆಘಾತಕ್ಕೆ ಒಳಗಾಗುತ್ತಾರೆ. ಇಂಥ ಜನರ ಬಗ್ಗೆ ನಮಗೆ ಇಷ್ಟು ಕನಿಷ್ಠ ಕರುಣೆ ಏಕೆ? ನಾವು ಅವರ ಧರ್ಮವನ್ನು ಒಂದು ನಿರ್ದಿಷ್ಟ ರೀತಿಯಿಂದ ನೋಡುತ್ತಿರುವುದೇ ಇದಕ್ಕೆ ಕಾರಣವೇ?

ರೋಹಿಂಗ್ಯಾ ಸಮುದಾಯದವರ ಮೇಲೆ ನಡೆದ ಪಾಶವೀ ಕೃತ್ಯಕ್ಕೆ ಕೇಂದ್ರ ಸರ್ಕಾರ ವ್ಯಕ್ತಪಡಿಸಿದ ತಣ್ಣನೆಯ ಪ್ರತಿಕ್ರಿಯೆಯು ನನ್ನನ್ನು ನಿರಾಶನನ್ನಾಗಿ ಮಾಡಿದೆ. ಮ್ಯಾನ್ಮಾರ್‌ ಪ್ರಭುತ್ವವು ಈ ಸಮುದಾಯದವರ ಮೇಲೆ ನಡೆಸಿದ ದೌರ್ಜನ್ಯಗಳಿಗೆ ಸಂಬಂಧಿಸಿದ ವರದಿಗಳನ್ನು ನಂಬಲು ನಾವು ಸಿದ್ಧರಿಲ್ಲವೇ? ಭಾರತದಲ್ಲಿನ ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸುವುದು ಖುಷಿಯ ವಿಚಾರ ಎಂಬ ಕಾರಣಕ್ಕೇ ಅವರು ತಮ್ಮ ಮನೆಗಳನ್ನು ತೊರೆಯುತ್ತಿದ್ದಾರೆ ಎಂದು ನಾವು ನಂಬುತ್ತೇವೆಯೇ? ಆ ರೀತಿ ಭಾವಿಸುವುದು ಭ್ರಮೆಯಾದೀತು.

ರೋಹಿಂಗ್ಯಾಗಳು ಮುಸ್ಲಿಮರು ಎಂಬ ಒಂದೇ ಕಾರಣಕ್ಕೆ ಅವರು ಭಯೋತ್ಪಾದಕರಾಗಿರಬಹುದು ಎಂದು ನಾವು ಭಾವಿಸುತ್ತಿದ್ದೇವೆಯೇ - ನಮ್ಮ ಸರ್ಕಾರ ಹಾಗೆ ಭಾವಿಸುತ್ತಿರುವಂತಿದೆ. ಜಗತ್ತು ಹಾಗೂ ಇತರ ಮನುಷ್ಯರ ಬಗ್ಗೆ ನಾವು ಇಂಥದ್ದೊಂದು ಒರಟು ದೃಷ್ಟಿಕೋನವನ್ನು ಬೆಳೆಸಿಕೊಂಡಿರುವುದು ಗಮನಾರ್ಹ. ಇಂತಹ ವಿಚಾರಗಳ ಬಗ್ಗೆ ಸರಿಯಾಗಿ ಆಲೋಚನೆ ಮಾಡದ ಇಂದಿನ ಸರ್ಕಾರ ಈಗಾಗಲೇ ಗಂಭೀರ ತಪ್ಪು ಮಾಡಿಯಾಗಿದೆ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳ ಅಲ್ಪಸಂಖ್ಯಾತ ನಿರಾಶ್ರಿತರನ್ನು ಮಾತ್ರ ದೇಶದಲ್ಲಿ ಇಟ್ಟುಕೊಳ್ಳುವ ನೀತಿಯನ್ನು ಸರ್ಕಾರ ಘೋಷಿಸಿದೆ. ಹೀಗೆ ಮಾಡುವ ಮೂಲಕ ಸರ್ಕಾರವು, 'ಭಾರತದಲ್ಲಿ ಮುಸ್ಲಿಮೇತರರಿಗೆ ಮಾತ್ರ ಸ್ವಾಗತವಿದೆ' ಎಂದು ಘೋಷಿಸಿದಂತೆ ಆಯಿತು. ಮ್ಯಾನ್ಮಾರ್‌ ಬೌದ್ಧ ರಾಷ್ಟ್ರ. ಅಲ್ಲಿ ಅಲ್ಪಸಂಖ್ಯಾತ ಮುಸ್ಲಿಮರು ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಈಗ ನಮ್ಮ ನೀತಿ ಏನಿರುತ್ತದೆ? ಮಹಾನ್ ಪ್ರಜಾತಂತ್ರ ರಾಷ್ಟ್ರವಾಗಿರುವ ನಾವು ಜವಾಬ್ದಾರಿಯುತವಾಗಿರಬೇಕು. ಆಶ್ರಯ ಕೋರಿ ಬಂದವರ ಹಕ್ಕುಗಳನ್ನು ಎತ್ತಿಹಿಡಿಯುವ ಕೆಲಸ ಮಾಡಬೇಕು. ಇದು ನಾವು ಮಾಡಲೇಬೇಕಾದ ಕೆಲಸ ಎಂದು ಹಿಂದೂ ನಂಬಿಕೆಗಳು ಹೇಳುತ್ತವೆ. ನಮ್ಮಲ್ಲಿಂದ ವಲಸೆ ಹೋದ ಸಮುದಾಯಗಳ ಬಗ್ಗೆ ಹೆಮ್ಮಪಡುತ್ತ (ಇವರಲ್ಲಿ ಕೆಲವರು ವೈಯಕ್ತಿಕವಾಗಿ ಅಕ್ರಮ ವಲಸಿಗರೂ ಹೌದು), ಬೇರೆ ದೇಶಗಳ ವಲಸಿಗರನ್ನು ಭಯೋತ್ಪಾದಕರು, ನಮ್ಮ ಸಂಪನ್ಮೂಲಗಳನ್ನು ತಿಂದುಹಾಕಲು ಬಂದವರು ಎಂಬಂತೆ ಕಾಣುತ್ತಿದ್ದರೆ ನಾವು ಆಷಾಢಭೂತಿಗಳಾಗುತ್ತೇವೆ.

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT