ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಸವಾಲಿನ ಜತೆ ಸೆಣಸುತ್ತ...

Last Updated 5 ಜುಲೈ 2011, 19:30 IST
ಅಕ್ಷರ ಗಾತ್ರ

ಅತ್ಯಂತ ಬೆಲೆಬಾಳುವ ದ್ರವವಾಗಿರುವ ನೀರು ಇಂದು ಭಾರತದಲ್ಲಿ ರೂ 25 ಸಾವಿರ ಕೋಟಿಗಳಷ್ಟು ವಹಿವಾಟು ನಡೆಸುತ್ತಿದ್ದು, ಅದರ ಪ್ರಮಾಣ ಹೆಚ್ಚುತ್ತಲೇ ಹೋಗುತ್ತಿದೆ.

ನೀರು ಬಹುದೊಡ್ಡ ಉದ್ಯಮವಾಗಿ ಬೆಳೆಯುತ್ತಿದೆ. ಆದರೆ, ದೇಶದಲ್ಲಿ ಇನ್ನೂ ಅದು ದೊಡ್ಡ ಉದ್ಯಮವಾಗಿ ಬೆಳೆದಿಲ್ಲ. ಮಾರುಕಟ್ಟೆಯ್ಲ್ಲಲಿ ಇಂದು ಅಂತಹ ದೊಡ್ಡ ನೀರಿನ ವ್ಯವಹಾರಸ್ಥರೂ ಇಲ್ಲ.

ನೀರಿನ ಶುದ್ಧೀಕರಣದಲ್ಲಿ ತೊಡಗಿರುವ ದೆಹಲಿ ಮೂಲದ ಕಂಪೆನಿಯೊಂದರ ಸಭೆ ಈಚೆಗೆ ನಡೆದಾಗ ಕಂಪೆನಿಯ ವ್ಯವಹಾರ ಕಳೆದ 6-7 ವರ್ಷದಲ್ಲಿ ಅಷ್ಟಾಗಿ ಬೆಳೆಯದೆ ಇರುವುದು ಗಮನಕ್ಕೆ ಬಂತು.

ಈ ಕಂಪೆನಿ ವಾರ್ಷಿಕ ರೂ 1 ಕೋಟಿಗಳಿಗೂ ಕಡಿಮೆ ವ್ಯವಹಾರ ನಡೆಸುತ್ತಿದೆ ಅಷ್ಟೇ. ಬೃಹತ್ ಯೋಜನಾ ಆಧಾರಿತ ನೀರಿನ ಶುದ್ಧೀಕರಣ ವ್ಯವಸ್ಥೆ ಅವರಲ್ಲಿ ಇದ್ದರೂ ವಹಿವಾಟು ಮಾತ್ರ ಬಹಳ ಕಡಿಮೆ ಇದೆ.

ಆದರೆ, ನಮಗೆ ಗೊತ್ತಿಲ್ಲದಿದ್ದರೂ ಬಹುರಾಷ್ಟ್ರೀಯ ಕಂಪೆನಿಗಳು ನೀರಿನ ಶಕ್ತಿಯನ್ನು ಈಗಾಗಲೇ ಕಂಡುಕೊಂಡಿವೆ. ಕೋಕಾ ಕೋಲಾದಂತಹ ಕಂಪೆನಿಗಳು ವಾರ್ಷಿಕ 20 ಶತಕೋಟಿ ಡಾಲರ್‌ಗಳ ವಹಿವಾಟು ನಡೆಸುತ್ತಿದ್ದು, ಅವುಗಳ ಒಟ್ಟು ವರಮಾನದಲ್ಲಿ ಶೇ 30ರಷ್ಟು ವರಮಾನ ಕೇವಲ ನೀರಿನ ಮಾರಾಟದಿಂದಲೇ ಬರುತ್ತಿದೆ. ನೀರಿಗೆ ಅಭಾವ ಎದುರಾಗುತ್ತಿರುವುದರಿಂದ ಜಗತ್ತಿನಾದ್ಯಂತ ನೀರಿನ ಶುದ್ಧೀಕರಣ, ಮರುಬಳಕೆಗೆ ಮಹತ್ವ ನೀಡಲೇಬೇಕಾಗುತ್ತದೆ.

ತಲಾ ನೀರಿನ ಅಭಾವ ವಿಚಾರ ಬಂದಾಗ ಭಾರತ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ.ನಮ್ಮಲ್ಲಿ ಪ್ರತಿ ಕಿಲೋಮೀಟರ್‌ಗೆ ಲೆಕ್ಕ ಹಾಕಿದರೆ ಜನಸಾಂದ್ರತೆ ಅಧಿಕ ಇದೆ.ಹೀಗಾಗಿ ನೀರಿಗೆ ಭಾರಿ ಬೇಡಿಕೆ ಇದೆ. ಇದಕ್ಕೆ ತಕ್ಕಂತೆ ನೀರಿನ ಪೂರೈಕೆ ಮಾತ್ರ ಆಗುತ್ತಿಲ್ಲ.

ಹೀಗಿದ್ದರೂ ನೀರಿನ ಶುದ್ಧೀಕರಣಕ್ಕೆ ಅಂತಹ ಬೇಡಿಕೆ ಹೆಚ್ಚಿಲ್ಲ. ಅದೆಷ್ಟೋ ಮನೆಗಳಲ್ಲಿ, ಉದ್ಯಮಗಳಲ್ಲಿ ನೀರಿನ ಶುದ್ಧೀಕರಣ, ಅದು ಹೇಗೆ ನೀರಿನ ಲಭ್ಯತೆ ಪ್ರಮಾಣ ಹೆಚ್ಚಿಸುತ್ತದೆ ಎಂಬ ಬಗ್ಗೆ ಗೊತ್ತೇ ಇಲ್ಲ.

ಒಟ್ಟು ನೀರಿನ ಬಳಕೆಯಲ್ಲಿ ಮನೆ ಬಳಕೆಗೆ ಶೇ 20ರಷ್ಟು ಖರ್ಚಾಗುತ್ತದೆ. ಉತ್ಪಾದನಾ ರಂಗ ಶೇ 30ರಷ್ಟು  ಬಳಸುತ್ತದೆ. ಉಕ್ಕು, ಅಲ್ಯುಮಿನಿಯಂ, ಪ್ಲಾಸ್ಟಿಕ್, ಗ್ಲಾಸ್ ತಯಾರಿಕೆಗೆ ಭಾರಿ ಪ್ರಮಾಣದಲ್ಲಿ ನೀರು ಬೇಕು.

ಉದಾಹರಣೆಗೆ ಒಂದು ಕಾರಿನ ಟಯರ್ ಅನ್ನೇ ತೆಗೆದುಕೊಳ್ಳಿ, ಅದರ ತಯಾರಿಕೆಗೆ 1800 ಲೀಟರ್ ನೀರು ಬೇಕಾಗುತ್ತದೆ. ಒಂದು ಟನ್ ಉಕ್ಕಿನ ಉತ್ಪಾದನೆಗೆ 2 ಲಕ್ಷ ಲೀಟರ್ ನೀರು ಅಗತ್ಯ. ಕಂಪ್ಯೂಟರ್‌ಗಳಿಗೆ ಅಗತ್ಯವಾದ 200 ಮಿ.ಮೀ. ಗಾತ್ರದ ಸೆಮಿಕಂಡಕ್ಟರ್ ತಯಾರಿಕೆಗೆ 24 ಸಾವಿರ ಲೀಟರ್ ನೀರು ಬೇಕಾಗುತ್ತದೆ.
 
ಮೇಲಾಗಿ ಇಂತಹ ಅತ್ಯಂತ ಶುದ್ಧ ನೀರನ್ನು ಭೂಮಿಯ ಆಳದಿಂದ ಶಿಲಾಪದರದಿಂದ ತರಬೇಕಾಗುತ್ತದೆ. ಇಷ್ಟೆಲ್ಲ ಇದ್ದರೂ ಈಗಲೂ ಅತಿ ಹೆಚ್ಚು ನೀರು ಬಳಸುವ ಕ್ಷೇತ್ರ ಕೃಷಿಯೇ ಆಗಿದೆ.

ಪ್ರತಿ ಮನೆ, ಕಚೇರಿ, ಆಸ್ಪತ್ರೆ, ಹೋಟೆಲ್‌ಗಳಿಂದ ಹೊರಬರುವ ಮಲಿನ ನೀರನ್ನು ಶುದ್ಧೀಕರಿಸುವ ಮಹತ್ವ ನಮಗೆ ಗೊತ್ತೇ ಇಲ್ಲ. ನಮ್ಮ ಮನೆಯ ಮಲಿನ ನೀರು ಒಳಚರಂಡಿಗೆ ಸೇರಿಬಿಟ್ಟರೆ ಆಯಿತು, ಉಳಿದುದು ಏನಿದ್ದರೂ ಸ್ಥಳೀಯಾಡಳಿತ ಸಂಸ್ಥೆ, ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ನಾವು ಭಾವಿಸುತ್ತೇವೆ.

ಆದರೆ, ಮುಂದಿನ 5-10 ವರ್ಷದಲ್ಲಿ ಇದೆಲ್ಲ ಬದಲಾಗಲಿದೆ. ನೀರಿನ ವಿಚಾರದಲ್ಲಿ ನಮ್ಮ ಧೋರಣೆ ಬದಲಿಸಿಕೊಳ್ಳದಿದ್ದರೆ ಶುದ್ಧ ನೀರಿನ ಲಭ್ಯತೆ ಕಠಿಣವಾಗಲಿದೆ. ನೀರಿನ ಶುದ್ಧೀಕರಣಗೊಳಿಸುವ ಯಂತ್ರವನ್ನು ಬೃಹತ್ ಯೋಜನೆಯ ಒಂದು ಭಾಗವಾಗಿ ಮಾಡುವ ಬದಲಿಗೆ ಪ್ರತಿಯೊಬ್ಬ ಮನೆ ಮಾಲೀಕನೂ ಇದನ್ನು ಒಂದು `ಉತ್ಪನ್ನ~ ಎಂಬ ನೆಲೆಯಲ್ಲಿ ನೋಡಿದಾಗ ಅದರ ಬಳಕೆ ಹೆಚ್ಚುವುದು ಖಂಡಿತ.
 
`1960ರ ದಶಕದಲ್ಲಿ ಧೋಬಿ ಘಾಟ್‌ಗಳಲ್ಲಿ ಬಟ್ಟೆ ತೊಳೆಯುವ ಪ್ರಸಂಗವನ್ನು ಗಮನಿಸಿದ ಮಂದಿ ದೊಡ್ಡ ಪ್ರಮಾಣದಲ್ಲಿ ವಾಷಿಂಗ್ ಮೆಷಿನ್ ತಯಾರಿಸಿ ಮನೆ ಮನೆಗೆ ಧೋಭಿ ಘಾಟ್ ತರುವಲ್ಲಿ ಸಫಲರಾದರು~ ಎಂದು ಬಿಸಿಐಎಲ್‌ನ ಮುಖ್ಯ ಸಂಶೋಧನಾ ಅಧಿಕಾರಿ ದಿನೇಶ್ ಹೇಳುತ್ತಾರೆ. ನೀರಿನ ಉದ್ಯಮವೂ ಪ್ರಗತಿ ಕಾಣಬೇಕೆಂದಾದರೆ ದಿನಕ್ಕೆ ಕನಿಷ್ಠ 1000 ಲೀಟರ್‌ನಷ್ಟು ಪ್ರಮಾಣದ ನೀರನ್ನು ಸಹ ಶುದ್ಧಗೊಳಿಸುವಂತಿದ್ದರೆ ಅದು ಹೆಚ್ಚು ಜನಪ್ರಿಯಗೊಳ್ಳುತ್ತದೆ.

ಉದ್ಯಮಗಳು ಮತ್ತು ಹಲವು ಮನೆಗಳು ಒಂದೆಡೆ ಇರುವಂತಹ ವಸತಿ ಸಂಕೀರ್ಣಗಳಲ್ಲಿ ಯೋಜನೆ ಆಧಾರಿತ ನೀರಿನ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸುವುದಕ್ಕಿಂತ ವೈಯಕ್ತಿಕ ಮನೆಗಳಲ್ಲಿ, ನೀರು ಸಂಸ್ಕರಿಸುವಂತಹ ವ್ಯವಸ್ಥೆ ರೂಪಿಸಿಕೊಳ್ಳಬೇಕಾದ ಕಾಲ ಬಂದಿದೆ.

ಮನೆಗಳಿಂದ ಹೊರ ಹೋಗುವ ವ್ಯರ್ಥ ನೀರನ್ನು ಸಂಸ್ಕರಿಸಿ, ಅದನ್ನು ಮತ್ತೆ ನಿಮ್ಮ ಫ್ಲಷ್ ಟ್ಯಾಂಕ್‌ಗೋ, ಉದ್ಯಾನಕ್ಕೋ ಬಳಸುವಂತಾದರೆ ಅದೆಷ್ಟು ಅನುಕೂಲ ನೋಡಿ. ಫ್ಲಷ್ ಟ್ಯಾಂಕ್‌ಗೆ ಸಹ ಶುದ್ಧ ನೀರನ್ನು ಬಳಸದೆ ಇರುವುದರಿಂದಲೇ ಮನೆಗಳಲ್ಲಿ ನೀರಿನ ಬೇಡಿಕೆ ಶೇ 40ರಷ್ಟು ಕಡಿಮೆಯಾಗುತ್ತದೆ. ಇದನ್ನು ಬೆಂಗಳೂರಿನಂತಹ ಮಹಾನಗರಗಳಲ್ಲಿ ಜಾರಿಗೆ ತಂದರೆ ದಿನಕ್ಕೆ 400 ದಶಲಕ್ಷ ಲೀಟರ್ ಶುದ್ಧ ನೀರಿನ ಬೇಡಿಕೆ ಕಡಿಮೆಯಾಗುತ್ತದೆ.

ಪ್ರತಿ ಮನೆಯಲ್ಲೂ ಸ್ಥಾಪಿಸಬಹುದಾದಂತಹ ನೀರು ಶುದ್ಧೀಕರಣ ಘಟಕಗಳು ಮಾರುಕಟ್ಟೆಗೆ ಬರಬೇಕಾದರೆ ಇನ್ನೂ ಹಲವು ವರ್ಷಗಳೇ ಬೇಕಾಗಬಹುದು. ಇದೊಂದು ಅತ್ಯಂತ ವೇಗವಾಗಿ ಆಗಬೇಕಾದ ಕಾರ್ಯ. ಸಂಬಂಧಪಟ್ಟವರು ಇತ್ತ ತ್ವರಿತವಾಗಿ ಗಮನಹರಿಸಬೇಕಿದೆ.

ಒಂದು ಲೀಟರ್ ಸಾಮರ್ಥ್ಯದ ನೀರಿನ ಶುದ್ಧೀಕರಣ ವ್ಯವಸ್ಥೆಗೆ ರೂ 30 ಬಂಡವಾಳ ಬೇಕು ಎಂಬ ಲೆಕ್ಕ ಹಾಕಿಕೊಂಡರೂ ದೇಶದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ವ್ಯವಸ್ಥೆಯೊಂದರಲ್ಲೇ ರೂ 50 ಸಾವಿರ ಕೋಟಿ ರೂಪಾಯಿಗಳ ಬೃಹತ್ ಮಾರುಕಟ್ಟೆ ನಿರ್ಮಾಣವಾಗಿಬಿಡುತ್ತದೆ.
 
ಇಂತಹ ನೀರಿನ ಸಂಸ್ಕರಣಾ ಘಟಕಗಳು ಮೊದಲು ಹತ್ತು ಮಹಾನಗರಗಳಿಗೇ ಸೀಮಿತ ಎಂಬುದನ್ನು ಗಮನಿಸಿದರೆ ಮುಂದಿನ 10 ವರ್ಷಗಳಲ್ಲಿ ಇದೊಂದು ಅಗಾಧ ಮಾರುಕಟ್ಟೆಯಾಗುವುದನ್ನು ನಾವು ಈಗಲೇ ನಿರೀಕ್ಷಿಸಬಹುದು.

ನೀರಿನ ಸಂಸ್ಕರಣೆಯಲ್ಲಿ ಇರುವ ವಿಧಗಳಾವುವು? ನಮ್ಮ ನಗರಗಳಲ್ಲಿನ ಸವಾಲುಗಳ ಆಯಾಮಗಳೇನು? 1950ರ ದಶಕದಿಂದೀಚೆಗೆ ನಾವು ನೀರಿನ ಶುದ್ಧೀಕರಣಕ್ಕೆ ಮುಂದಾಗಿದ್ದೇವೆ.
 
ಪ್ರಾಚೀನ ಕಾಲದಿಂದ ಜಾರಿಯಲ್ಲಿದ್ದ ಪಟಿಕವನ್ನು ಬಳಸಿ ಅಥವಾ ವಿದ್ಯುನ್ಮಾನ ಉಪಕರಣದ ಮೂಲಕ ನೀರು ಸಂಸ್ಕರಿಸುವ ವಿಧಾನ  ಅಳವಡಿಸಿಕೊಳ್ಳುವುದು ನಮ್ಮ ಮುಂದಿರುವ ಆಯ್ಕೆ.

15 ವರ್ಷಗಳಿಂದೀಚೆಗೆ ಹಲವು ಮೈಕ್ರೋಬ್‌ಗಳ ಮಿಶ್ರಣದೊಂದಿಗೆ ಜೈವಿಕ ಪರಿಹಾರ ಆಶಾರಿತ (ಬಯೋರೆಮಿಡಿಯೇಟರ್) ನೀರಿನ ಶುದ್ಧೀಕರಣ ವ್ಯವಸ್ಥೆ ಜಾರಿಯಲ್ಲಿದೆ. ಪ್ರಕೃತಿ ಒಂದು ತಿಂಗಳಲ್ಲಿ ಸಂಸ್ಕರಿಸುವುದನ್ನು ಈ ವ್ಯವಸ್ಥೆಯಲ್ಲಿ ಕೆಲವೇ ವಾರಗಳಲ್ಲಿ ಸಂಸ್ಕರಿಸಿ ಶುದ್ಧೀಕರಿಸುತ್ತದೆ.

ಬಯೋ ರೆಮಿಡಿಯೇಟರ್ ಅಥವಾ ಎಂಬಿಬಿಆರ್ ಅಥವಾ ಎಂಬಿಆರ್‌ಗಳಿರಲಿ, ಇವುಗಳೆಲ್ಲ ನೀರಿನ ಶುದ್ಧೀಕರಣಕ್ಕೆ ಇರುವಂತಹ ವ್ಯವಸ್ಥೆಗಳು. ಇವುಗಳೆಲ್ಲ ಮುಂದಿನ ದಿನಗಳಲ್ಲಿ ದೊಡ್ಡ ಪಾತ್ರ ವಹಿಸಲಿವೆ. ನಗರಗಳಲ್ಲಿ ಇಂದು ನೀರಿನ ಗುಣಮಟ್ಟ ಕುಸಿಯತೊಡಗಿದೆ.

ಅಂತರ್ಜಲವೇ ಮಲಿನಗೊಳ್ಳುತ್ತಿದ್ದು, ಬಹುತೇಕ ಎಲ್ಲಾ ಬಗೆಯ ನೀರು ಸಹ ಕುಡಿಯಲು ಅಸುರಕ್ಷಿತವೇ ಆಗಿವೆ. ಹೀಗಾಗಿ ಸರ್ಕಾರ, ಉದ್ಯಮಗಳು, ಮನೆಗಳಲ್ಲಿ ನೀರನ್ನು ಸಂಸ್ಕರಿಸಿಯೇ ಬಳಸಬೇಕಾದ ಸ್ಥಿತಿ ಬಂದೊದಗಿದೆ.

ರೈತರು ಬಳಸುವ ರಸಗೊಬ್ಬರ ಮತ್ತು ಕೀಟನಾಶಕಗಳು ಅಂತರ್ಜಲ  ವಿಷಮಯ ಮಾಡುತ್ತಿವೆ. ನೀರಿನಲ್ಲಿ ಫ್ಲೋರೈಡ್ ಅಂಶ ಅಥವಾ ಎಂಡೋಸಲ್ಫಾನ್‌ನಂತಹ ರಾಸಾಯನಿಕಗಳ ಸೇರ್ಪಡೆಯಿಂದ ಕಳೆದ ಎರಡು ದಶಕಗಳಿಂದ ನೀರಿನ ಗುಣಮಟ್ಟ ಮತ್ತಷ್ಟು ಕೆಟ್ಟುಹೋಗಿದೆ.

ನೀರಿನ ಶುದ್ಧೀಕರಣ ಯಂತ್ರಗಳನ್ನು ಭಾರತಕ್ಕೆ ತರಲು ಜಗತ್ತಿನ ಹಲವು ರಾಷ್ಟ್ರಗಳು ಪ್ರಯತ್ನಿಸುತ್ತಲೇ ಇವೆ. ಯಾಕೆಂದರೆ ಅವುಗಳಿಗೆ ದೊಡ್ಡ ಮಾರುಕಟ್ಟೆ ಬೇಕಾಗಿದೆ. ಆದರೆ, ಭಾರತ, ಚೀನಾಗಳಂತಹ ದೇಶಗಳು ತಂತ್ರಜ್ಞಾನಕ್ಕಿಂತಲೂ ವೆಚ್ಚವನ್ನು ಅತಿಯಾಗಿ ಗಮನಿಸುತ್ತವೆ.

ತಂತ್ರಜ್ಞಾನ ಅತಿ ಬಳಕೆಯ ಬಳಿಕವೂ ದೀರ್ಘ ಕಾಲ ಬಾಳಿಕೆ ಬರುವಂತಿರಬೇಕು ಎಂಬ ಮನೋಭಾವವೂ ಇರುತ್ತದೆ. ಉತ್ತಮ ತಂತ್ರಜ್ಞಾನದ ಸಾಧನಗಳಿಗೆ ದರ ಹೆಚ್ಚಿರುತ್ತದೆ, ಅದರ ನಿರ್ವಹಣಾ ವೆಚ್ಚವೂ ಅಧಿಕ ಇರುತ್ತದೆ.

ಪೇಟೆಂಟ್ ಹಿಡಿದುಕೊಂಡು ಬರುವ ಕಂಪೆನಿಗಳು ತಂತ್ರಜ್ಞಾನವನ್ನು ರೂ 10ರಿಂದ ರೂ 25 ಸಾವಿರದೊಳಗೆ ಅಥವಾ ಅದಕ್ಕಿಂತಲೂ ಕಡಿಮೆಗೆ ನೀಡುತ್ತವೆಯೇ ಎಂಬುದು ಮುಖ್ಯ.ಈ ವಿಚಾರದಲ್ಲಿ ಸರ್ಕಾರ ಈಗಲೂ ದೂರದೃಷ್ಟಿ ಪ್ರದರ್ಶಿಸುತ್ತಿಲ್ಲ.  ಅದಕ್ಕೆ ಯಾವುದೇ ವಿಚಾರವೂ ಗೊತ್ತಿದ್ದಂತೆ ಇಲ್ಲ.

ಕೆರೆಗಳು ಮತ್ತು ನದಿಗಳ ಶುದ್ಧೀಕರಣಕ್ಕೆ ಸರ್ಕಾರ ಕೋಟಿಗಟ್ಟಲೆ ಹಣ ವ್ಯಯಿಸುತ್ತದೆ, ಆದರೆ, ಇದೇ ಶುದ್ಧೀಕರಣ ಕಾರ್ಯದಲ್ಲಿ ನಿರತವಾಗುವ ಉದ್ಯಮಗಳಿಗೆ ಯಾವ ಸಹಾಯವೂ ಸಿಗದೆ ನಿರ್ದಿಷ್ಟ ಉದ್ದೇಶ ಈಡೇರದೆ ಹೋಗುತ್ತಿದೆ. ಭಾರಿ ದುಡ್ಡು ವ್ಯಯಿಸಿದರೂ ನಮ್ಮ ಜಲಮಂಡಳಿ ಪೂರೈಸುವ ನೀರು ಮಾಲಿನ್ಯದಿಂದ ಮುಕ್ತವಾಗಿಲ್ಲ.

ಕೆಲವು ಯೋಜನೆಗಳನ್ನು ಸರ್ಕಾರ ಕೈಗೆತ್ತಿಕೊಂಡ ಬಳಿಕ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಬೇಡವೆಂದು ಎಸೆದುಬಿಟ್ಟ ತಂತ್ರಜ್ಞಾನಗಳನ್ನು ಸರ್ಕಾರಿ ಎಂಜಿನಿಯರ್‌ಗಳು ನಮ್ಮಲ್ಲಿ ಬಳಸಲು ಮುಂದಾಗುತ್ತಾರೆ. ನಮ್ಮಲ್ಲಿನ ವಾಸ್ತವಾಂಶಗಳನ್ನು ತಿಳಿದುಕೊಳ್ಳದೆ ಅವುಗಳನ್ನು ಇಲ್ಲಿ ಬಳಸಲು ಯತ್ನಿಸುತ್ತಿದ್ದಾರೆ.

ನೀರಿನ ವ್ಯವಹಾರದಲ್ಲಿ ತಿಳಿದುಕೊಳ್ಳಬೇಕಾದ ಮುಖ್ಯ ವಿಚಾರ ಎಂದರೆ ದೊಡ್ಡದೆಲ್ಲವೂ ಸುಂದರವಲ್ಲ ಎಂಬುದು. ದಿನಕ್ಕೆ 50 ಸಾವಿರ ಲೀಟರ್‌ಗಿಂತ ಅಧಿಕ ಪ್ರಮಾಣದಲ್ಲಿ ನೀರು ಶುದ್ಧೀಕರಿಸುವ ಘಟಕಗಳು ಉತ್ತಮ ಕೆಲಸ ಮಾಡಬಹುದು, ಆದರೆ, ನಮಗಿಂದು ಬೇಕಾಗಿರುವುದು ಸಣ್ಣ ಪ್ರಮಾಣದಲ್ಲಿ ಅಂದರೆ ದಿನಂಪ್ರತಿ 500 ಲೀಟರ್‌ನಿಂದ 1000 ಲೀಟರ್ ತನಕ ನೀರನ್ನು ಸಂಸ್ಕರಿಸಿ ಶುದ್ಧೀಕರಿಸುವ ಸಣ್ಣಪುಟ್ಟ ತಾಂತ್ರಿಕ ಕೌಶಲ್ಯ.

ಮುಂದಿನ ದಿನಗಳಲ್ಲಿ ನೀರು ದುರ್ಲಭವಾಗುತ್ತದೆ. ಇರುವ ನೀರನ್ನು ಸಮರ್ಥವಾಗಿ ಬಳಸಬೇಕಾದರೆ ಮನೆ ಮನೆಯಲ್ಲಿ ನೀರಿನ ಶುದ್ಧೀಕರಣ ಘಟಕ ಸ್ಥಾಪಿಸುವತ್ತ ಈಗಿನಿಂದಲೇ ಗಂಭೀರ ಚಿಂತನೆ ಅಗತ್ಯ.       

(ಲೇಖಕರನ್ನು 99010 54321 ಕರೆ ಮಾಡಿ ಸಂಪರ್ಕಿಸಬಹುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT