ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಪರಿಹಾರವಾದ'ದಲ್ಲಿ ಕಳೆದುಹೋದ ಖಾಸಗಿತನ

Last Updated 29 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಇಂಗ್ಲಿಷ್‌ನಲ್ಲಿ ‘Solutionism’ ಎಂಬ ಪದವಿದೆ. ಇದಕ್ಕೆ ಬಹುದೊಡ್ಡ ಇತಿಹಾಸವೇನೂ ಇಲ್ಲ. ಇದು ಮಾಹಿತಿ ತಂತ್ರಜ್ಞಾನೋತ್ತರ ಕಾಲಘಟ್ಟದಲ್ಲಿ ಸೃಷ್ಟಿಯಾದ ಪದ. ಇದನ್ನು ಒಂದು ಪಾರಿಭಾಷಿಕವಾಗಿ ರೂಪಿಸಿದ್ದು ಬೆಲಾರಸ್‌ನ ಲೇಖಕ ಯೆವ್ಗೆನಿ ಮೊರೊಜೊವ್. ಇದನ್ನು ‘ಪರಿಹಾರವಾದ’ ಎಂದು ಕನ್ನಡಕ್ಕೆ ಅನುವಾದಿಸಿಕೊಳ್ಳಬಹುದು ಅನ್ನಿಸುತ್ತದೆ. ‘ಪರಿಹಾರವಾದ’ವನ್ನು ಹಿಂದೆ ಬೇರೆ ಹೆಸರುಗಳಿಂದಲೂ ಗುರುತಿಸಲಾಗುತ್ತಿತ್ತು. ಬಹಳ ಹೆಚ್ಚಾಗಿ ಬಳಕೆಯಲ್ಲಿದ್ದ ಪದ ‘technological determinism’. ಇದನ್ನು ತಂತ್ರಜ್ಞಾನ ವಿಧಿವಾದ ಎಂದು ಕನ್ನಡಕ್ಕೆ ಅನುವಾದಿಸಿಕೊಳ್ಳಬಹುದು. ತಂತ್ರಜ್ಞಾನದ ವಿಮರ್ಶೆಯ ಕ್ಷೇತ್ರಕ್ಕೆ ಬಂದರೆ ಈಗ ‘ತಂತ್ರಜ್ಞಾನ ವಿಧಿವಾದ’ ಮತ್ತು ‘ಪರಿಹಾರವಾದ’ಗಳೆರಡೂ ಒಂದೇ ಅರ್ಥಕೊಡುವ ಪದಗಳು.

ಈ ‘ಪರಿಹಾರವಾದ’ಕ್ಕೆ ದೊಡ್ಡ ಇತಿಹಾಸವಿದೆ. ಬಹುಶಃ ಮನುಷ್ಯ ತಾನು ಮಾಡುವ ಕೆಲಸಗಳನ್ನು ಸುಲಭ ಮಾಡಿಕೊಳ್ಳಲು ವಿವಿಧ ಉಪಕರಣಗಳನ್ನು ಸೃಷ್ಟಿಸಿಕೊಳ್ಳಲು ಹೊರಟ ಕ್ಷಣದಲ್ಲಿಯೇ ‘ಪರಿಹಾರವಾದ’ದ ಬೀಜಗಳಿವೆ. ಆದರೆ ಇದೊಂದು ವಿಮರ್ಶಿಸಲೇ ಬೇಕಾದ ವಿದ್ಯಮಾನವಾಗಿ ಬೆಳೆದದ್ದು ಆಧುನಿಕ ತಂತ್ರಜ್ಞಾನದ ಸಂದರ್ಭದಲ್ಲಿ. ಅಣುಬಾಂಬು, ಹೈಡ್ರೋಜನ್ ಬಾಂಬುಗಳಂಥ ಪರಿಕಲ್ಪನೆಗಳ ಹಿಂದೆ ಕೇವಲ ಯುದ್ಧಕ್ಕೆ ಬೇಕಾದ ಒಂದು ಅಸ್ತ್ರವನ್ನು ತಯಾರಿಸುವ ಉದ್ದೇಶವಷ್ಟೇ ಇರಲಿಲ್ಲ. ಇಂಥದ್ದೊಂದು ಶಕ್ತಿಶಾಲಿ ಅಸ್ತ್ರವನ್ನು ತಯಾರಿಸಿಟ್ಟುಕೊಂಡರೆ ವಿಶ್ವಶಾಂತಿಯನ್ನು ಖಾತರಿ ಪಡಿಸುವುದು ಸುಲಭ ಎಂಬ ಸರಳೀಕೃತ ಸೈದ್ಧಾಂತಿಕ ನಿಲುವೂ ಇತ್ತು.

ಹಿರೋಷಿಮಾ ಮತ್ತು ನಾಗಾಸಾಕಿಯ ಮೇಲೆ ಹಾಕಿದ ಅಣುಬಾಂಬುಗಳನ್ನು ಅಭಿವೃದ್ಧಿ ಪಡಿಸಿದ ಮ್ಯಾನ್ ಹಟ್ಟನ್ ಯೋಜನೆಗೆ ನಿರಂತರವಾಗಿ ಜನರ ತೆರಿಗೆಯ ಹಣ ಪೂರೈಕೆಯಾದದ್ದೂ ಇದೇ ನಂಬಿಕೆಯಲ್ಲಿ. ಈ ಬಗೆಯ ಯೋಜನೆಗಳ ಹಿಂದೆ ಹೊಸ ಆವಿಷ್ಕಾರಕ್ಕೆ ತುಡಿಯುವ ಉತ್ಸಾಹಿ ತಂತ್ರಜ್ಞರಿರುತ್ತಾರೆ, ಇವರಿಗೆ ಬೆಂಬಲವಾಗಿ ನಿಲ್ಲುವ ಅಧಿಕಾರಶಾಹಿಯಿರುತ್ತದೆ. ಈ ತಂತ್ರಜ್ಞರು ಮತ್ತು ಅಧಿಕಾರಶಾಹಿಯ ಕೂಟ ಎಷ್ಟು ಪರಿಣಾಮಕಾರಿಯಾಗಿ ತನ್ನ ವಾದವನ್ನು ಮಂಡಿಸುತ್ತದೆ ಎಂದರೆ ಈ ಬಗೆಯ ಯೋಜನೆಗಳನ್ನು ಸಂಶಯದಿಂದ ಕಾಣಬೇಕಾದ ಶಾಸಕಾಂಗ ಪರಿಹಾರವನ್ನು ನಂಬಿಬಿಡುತ್ತದೆ. ಹೀಗೆ ನಂಬದೇ ಉಳಿಯುವ ಒಬ್ಬಿಬ್ಬರು ಅವರನ್ನು ಆರಿಸಿದ ಜನರಿಂದಲೇ ಗೇಲಿಗೊಳಗಾಗುವ ಸಾಧ್ಯತೆಯೂ ಇರುತ್ತದೆ. 19 ಮತ್ತು 20ನೇ ಶತಮಾನದಲ್ಲಿ ಬೃಹತ್ ನೀರಾವರಿ ಯೋಜನೆಗಳು, ಅಣುಶಕ್ತಿಯಂಥ ಪರಿಕಲ್ಪನೆಗಳು ಭಾರೀ ಮಹತ್ವ ಪಡೆದುಕೊಂಡದ್ದು ಇದೇ ಕಾರಣದಿಂದ.

21ನೇ ಶತಮಾನದಲ್ಲಿ ಅಣುಶಕ್ತಿಯ ಪ್ರಭಾವ ಸ್ವಲ್ಪ ಮಟ್ಟಿಗೆ ಕುಂದಿದೆ. ಆ ಸ್ಥಾನದಲ್ಲಿ ಈಗ ಮಾಹಿತಿ ತಂತ್ರಜ್ಞಾನ ಬಂದು ಕುಳಿತಿದೆ. ಇದು ಈ ಹಿಂದಿನ ಎಲ್ಲಾ ಆವಿಷ್ಕಾರಗಳಿಗಿಂತ ಹೆಚ್ಚು ಆಕರ್ಷಕವಾಗಿದೆ. ಇದನ್ನು ಬಳಸಿಕೊಂಡು ಎಲ್ಲವನ್ನೂ ಸಾಧಿಸಬಹುದು ಎಂಬುದನ್ನು ತಂತ್ರಜ್ಞರು, ಅಧಿಕಾರಶಾಹಿ ಮತ್ತು ರಾಜಕಾರಣಿಗಳು ನಂಬಿಬಿಟ್ಟಿದ್ದಾರೆ. ಇದು ಸಹಜ. ಏಕೆಂದರೆ ಎಲ್ಲಾ ಆಡಳಿತಗಾರರ ಬಹುದೊಡ್ಡ ಕನಸು ಎಂದರೆ ಕೇಂದ್ರೀಕೃತ ವ್ಯವಸ್ಥೆಯೊಂದರಲ್ಲಿ ವಿಕೇಂದ್ರೀಕರಣದ ಎಲ್ಲಾ ಅನುಕೂಲಗಳನ್ನು ಪಡೆದುಕೊಳ್ಳುವುದು. ಮಾಹಿತಿ ತಂತ್ರಜ್ಞಾನ ಇದನ್ನು ಸಾಧ್ಯ ಮಾಡುತ್ತಿದೆ. ಹಾಗಾಗಿಯೇ ಇದನ್ನು ಸರ್ವಾನುಮತದಿಂದ ಒಪ್ಪಲಾಗುತ್ತಿದೆ. ವಿಕೇಂದ್ರೀಕರಣದ ಅನುಕೂಲದ ಹಿಂದೆ ಕೇಂದ್ರೀಕರಣದ ಅಪಾಯಗಳನ್ನು ಒಡಲಲ್ಲಿ ಇಟ್ಟುಕೊಂಡಿರುವ ವ್ಯವಸ್ಥೆ ಎಂಬುದನ್ನು ಎಲ್ಲರೂ ಮರೆಯುತ್ತಿದ್ದಾರೆ. ಇದರಿಂದಾಗಿಯೇ ಮಾಹಿತಿ ತಂತ್ರಜ್ಞಾನ ಎಂಬುದು ಒಂದು ಪರಿಹಾರವಾಗಿಯಷ್ಟೇ ಉಳಿಯದೇ ‘ಪರಿಹಾರವಾದ’ವಾಗುತ್ತಿದೆ.

ಭಾರತದ ಸರ್ವೋನ್ನತ ನ್ಯಾಯಾಲಯದ ಸಾಂವಿಧಾನಿಕ ಪೀಠದ ಎದುರು ‘ಖಾಸಗಿತನ ಒಂದು ಮೂಲಭೂತ ಹಕ್ಕೇ?’ ಎಂಬ ಪ್ರಶ್ನೆ ಬಂದಾಗ ಅನಾವರಣಗೊಂಡದ್ದು ಸರ್ಕಾರ ನಂಬಿರುವ ‘ಪರಿಹಾರವಾದ’. ವಿರೋಧ ಪಕ್ಷದಲ್ಲಿದ್ದಾಗ ‘ಖಾಸಗಿತನ ಮೂಲಭೂತ ಹಕ್ಕು’ ಎಂದು ನಂಬಿದ್ದ ರಾಜಕೀಯ ಪಕ್ಷ ಕೂಡಾ ಅಧಿಕಾರಕ್ಕೆ ಬಂದ ಮೇಲೆ ಪರಿಹಾರವಾದಕ್ಕೇ ಜೋತು ಬಿದ್ದ ಅಸಂಗತವನ್ನೂ ಈ ಪ್ರಕರಣದ ವಿಚಾರಣೆ ನಮ್ಮ ಎದುರು ತೆರೆದಿಟ್ಟಿತು. ಎಲ್ಲಾ ಪ್ರಭುತ್ವಗಳೂ ಕೇಂದ್ರೀಕೃತವಾದ ನಿಯಂತ್ರಣವನ್ನು ಬಯಸುತ್ತವೆ ಎಂಬುದಕ್ಕೂ ಇದನ್ನು ಸಾಕ್ಷಿಯಾಗಿ ಬಳಸಬಹುದೇನೋ?

ದೇಶದ ಪ್ರತಿ ನಾಗರಿಕರನ್ನೂ ಒಂದು ವಿಶಿಷ್ಟ ಸಂಖ್ಯೆಯ ಮೂಲಕ ಗುರುತಿಸುವ ‘ಆಧಾರ್’ ಯೋಜನೆ ತಾಂತ್ರಿಕ ದೃಷ್ಟಿಯಿಂದ ಒಂದು ಅದ್ಭುತವಾದ ಆವಿಷ್ಕಾರ. ಈ ಸಂಖ್ಯೆಗೆ ವ್ಯಕ್ತಿಯ ಬೆರಳಚ್ಚು ಮತ್ತು ಕಣ್ಣಿನ ಪಾಪೆಯ ಮಾಹಿತಿಯನ್ನು ಸೇರಿಸಿಕೊಂಡು ಸಂಗ್ರಹಿಸಿಟ್ಟರೆ ಆ ವ್ಯಕ್ತಿ ಯಾರೆಂದು ಕಂಡುಕೊಳ್ಳುವುದು ಸುಲಭ. ಸರ್ಕಾರದ ಕಲ್ಯಾಣ ಯೋಜನೆಗಳನ್ನು ಯಾವುದೇ ಭ್ರಷ್ಟಾಚಾರಕ್ಕೆ ಎಡೆಕೊಡರೆ ನೇರವಾಗಿ ಫಲಾನುಭವಿಗೆ ತಲುಪಿಸಲು ಇದರಿಂದ ಸಾಧ್ಯ. ಯಾರದೋ ಹೆಸರಿನಲ್ಲಿ ಮತ್ಯಾರೋ ಸವಲತ್ತುಗಳನ್ನು ಪಡೆದುಕೊಳ್ಳದಂತೆ ತಡೆಯಬಹುದು ಹೀಗೆ ಅನುಕೂಲಗಳ ದೊಡ್ಡದೊಂದು ಪಟ್ಟಿಯೇ ಇದೆ. ಹೀಗೆ ವ್ಯಕ್ತಿಯನ್ನು ಗುರುತಿಸಲು ಸಾಧ್ಯವಾಗುವಂಥ ಮಾಹಿತಿಯನ್ನು ಪಡೆದುಕೊಂಡು ಒಂದು ದತ್ತಸಂಚಯದಲ್ಲಿ ಸಂಗ್ರಹಿಸಿಟ್ಟುಕೊಳ್ಳುವುದರ ಅಪಾಯಗಳ ಬಗ್ಗೆ ಯಾರೂ ಆಲೋಚಿಸಲಿಲ್ಲ. ಹೀಗೆ ಪಡೆಯಲಾದ ಮಾಹಿತಿಯನ್ನು ಯಾವೆಲ್ಲಾ ಉದ್ದೇಶಕ್ಕೆ ಯಾರು ಬಳಸಿಕೊಳ್ಳಬೇಕು ಎಂಬುದರ ಬಗ್ಗೆ ಸಂಸತ್ತಿನ ಚರ್ಚೆಯ ನಿಕಷಕ್ಕೆ ಒಡ್ಡದೆಯೇ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಯಿತು. ಈ ಕುರಿತಂತೆ ಪ್ರಶ್ನಿಸಿದವರನ್ನೆಲ್ಲಾ ‘ಅಭಿವೃದ್ಧಿ ವಿರೋಧಿಗಳು’ ಎಂದೋ ‘ಕಲ್ಯಾಣ ಕಾರ್ಯಮಕ್ರಗಳ ವಿರೋಧಿಗಳು’, ‘ತಂತ್ರಜ್ಞಾನವನ್ನು ಅರ್ಥ ಮಾಡಿಕೊಳ್ಳದ ಮೂಢರು’ ಎಂದು ಬಿಂಬಿಸಲಾಯಿತು.

ಈ ಯೋಜನೆ ಕಾರ್ಯರೂಪಕ್ಕೆ ತರುವುದಕ್ಕೆ ನಾಲ್ಕು ವರ್ಷಗಳ ಹಿಂದೆಯೇ ಸಂಸತ್ತಿನಲ್ಲಿ ಖಾಸಗಿತನ ಮತ್ತು ದತ್ತಾಂಶ ಸಂರಕ್ಷಣೆಗೆ ಸಂಬಂಧಿಸಿದ ಮಸೂದೆಯೊಂದನ್ನು ಮಂಡಿಸಲಾಗಿತ್ತು. ದೇಶದ ಎಲ್ಲಾ ನಾಗರಿಕರ ವೈಯಕ್ತಿಕ ವಿವರಗಳನ್ನು  ವಿದ್ಯುನ್ಮಾನ ರೂಪದಲ್ಲಿ ಸಂಗ್ರಹಿಸಿಡುವ ಯೋಜನೆಯನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಈ ಮಸೂದೆಯನ್ನು ಅಂದಿನ ಸರ್ಕಾರ ನೆನಪಿಸಿಕೊಳ್ಳಲೇ ಇಲ್ಲ. ‘ಆಧಾರ್’ ಯೋಜನೆಯನ್ನೇ ಶಾಸನವೊಂದರ ನೆರವಿಲ್ಲದೆ ಜಾರಿಗೆ ತಂದ ಸರ್ಕಾರದಿಂದ ಇದನ್ನು ನಿರೀಕ್ಷಿಸಲೂ ಸಾಧ್ಯವಿರಲಿಲ್ಲವೇನೋ?

ವಿರೋಧ ಪಕ್ಷಗಳು ಇದರ ವಿರುದ್ಧ ಮಾತನಾಡಿದವು. ಆದರೆ ಈ ವಿರೋಧ ವ್ಯಕ್ತಿಯ ಖಾಸಗಿತನದ ರಕ್ಷಣೆಗಿಂತ ಹೆಚ್ಚಾಗಿ ಕಲ್ಯಾಣ ಕಾರ್ಯಕ್ರಮಗಳಿಗೆ ಇದು ಕಡ್ಡಾಯವಾಗಬಾರದು ಎಂಬುದಕ್ಕೆ ಸೀಮಿತವಾಗಿತ್ತು. ಈ ವಿರೋಧವನ್ನು ತೋರಿದ ಪಕ್ಷಗಳಲ್ಲಿ ಮುಖ್ಯವಾದ ಬಿಜೆಪಿ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಾಗ ಯೋಜನೆಯನ್ನು ಪುನರ್ ವಿಮರ್ಶಿಸುವುದರ ಬದಲಿಗೆ ಅದರ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸಿತು. ಶಾಸನದ ಬೆಂಬಲವಿಲ್ಲದ ಯೋಜನೆ ಎಂಬ ಟೀಕೆಯನ್ನು ನಿವಾರಿಸಿಕೊಳ್ಳುವುದಕ್ಕೆ ಶಾಸನವೊಂದನ್ನೇನೋ ರೂಪಿಸಿತು. ಆದರೆ ಅದನ್ನು ‘ಹಣಕಾಸೂ ಮಸೂದೆ’ಯ ರೂಪದಲ್ಲಿ ಮಂಡಿಸಿತು. ಅಂದರೆ ತನಗೆ ಬಹುಮತವಿಲ್ಲದ ಮೇಲ್ಮನೆ ಈ ಮಸೂದೆಯಲ್ಲಿ ಯಾವುದೇ ತಿದ್ದುಪಡಿಗಳನ್ನು ತರಬಾರದು ಎಂಬ ಉದ್ದೇಶ ಸರ್ಕಾರಕ್ಕೆ ಇತ್ತು. ಕಳೆದ ಮೂರು ವರ್ಷಗಳಲ್ಲಿ ‘ಸ್ವಯಂ ಪ್ರೇರಿತ’ವಾಗಿದ್ದ ‘ಆಧಾರ್’ ಈಗ ಎಲ್ಲದಕ್ಕೂ ಅಗತ್ಯ ಮತ್ತು ಅನಿವಾರ್ಯವಾಗಿರುವ ದಾಖಲೆಯಾಗಿಬಿಟ್ಟಿದೆ.

ದೇಶದ ಶೇಕಡಾ 87ರಷ್ಟು ನಾಗರಿಕರ ಬೆರಳಚ್ಚು ಮತ್ತು ಕಣ್ಣಿನ ಪಾಪೆಯ ವಿವರಗಳು ಈಗ ಆಧಾರ್ ದತ್ತ ಸಂಚಯದಲ್ಲಿವೆ. ಇದರ ಬಳಕೆಯ ಕುರಿತಂತೆ ಇನ್ನೂ ಸ್ಪಷ್ಟತೆಯಿಲ್ಲ. ಆಧಾರ್ ಕಾಯ್ದೆಯಂತೂ ಈ ಮಾಹಿತಿಯ ಬಳಕೆಯನ್ನು ಎಷ್ಟು ವಿಶಾಲಾತ್ಮಕವಾಗಿ ಅರ್ಥೈಸಿದೆ ಎಂದರೆ ಸರ್ಕಾರ ತನಗೆ ತೋಚಿದಂತೆ ಈ ವಿವರಗಳನ್ನು ಬಳಸಬಹುದು. ‘ಆಧಾರ್’ ಯೋಜನೆಯ ಕಟು ಟೀಕಾಕಾರ ಪಕ್ಷವೂ ಆಧಾರ್ ಕಾಯ್ದೆಯನ್ನು ಕಾರ್ಯರೂಪಕ್ಕೆ ತರುವ ಮೊದಲು ಖಾಸಗಿತನ ಮತ್ತು ದತ್ತಾಂಶ ಸಂರಕ್ಷಣಾ ಕಾಯ್ದೆಗೆ ಒಪ್ಪಿಗೆ ಪಡೆಯಬೇಕು ಎಂದು ಭಾವಿಸದೇ ಇದ್ದುದರಲ್ಲಿಯೂ ಕಾಣಸಿಗುವುದು ಪರಿಹಾರವಾದದ ವಿಜೃಂಭಣೆ ಮಾತ್ರ. ‘ಖಾಸಗಿತನ’ದ ಬಗ್ಗೆ ಮಾತನಾಡುವವರನ್ನೆಲ್ಲಾ ಸರ್ಕಾರಕ್ಕೆ ತಿಳಿಯಬಾರದ ಯಾವುದೋ ಗುಟ್ಟನ್ನು ಇಟ್ಟುಕೊಂಡವರು ಎಂಬಂತೆ ಬಿಂಬಿಸಲಾಗುತ್ತದೆ. ಇದು ಅಷ್ಟು ಸರಳ ವಿಚಾರವಲ್ಲ. ಪ್ರಜಾಪ್ರಭುತ್ವವೊಂದು ಪರಿಣಾಮಕಾರಿಯಾಗುವುದೇ ಈ ಬಗೆಯ ‘ಖಾಸಗಿ’ಯಾದ ನಿರ್ಣಯದ ಮೂಲಕ. ಇಲ್ಲವಾದರೆ ‘ರಹಸ್ಯ ಮತದಾನ’ದ ಅಗತ್ಯವೆಲ್ಲಿ ಬರುತ್ತಿತ್ತು.

ಹಾಗಿದ್ದರೆ ‘ಆಧಾರ್’ನಂಥ ವ್ಯವಸ್ಥೆಯೊಂದರ ಮೂಲಕ ಸರ್ಕಾರಕ್ಕೆ ಅನುಕೂಲಗಳೂ ನಿಜವಲ್ಲವೇ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಖಾಸಗಿತನ ಮತ್ತು ದತ್ತಾಂಶ ಸಂರಕ್ಷಣೆಯ ಪರವಾಗಿ ವಾದಿಸುವ ಯಾರೂ ಸರ್ಕಾರ ಮಾಹಿತಿಯನ್ನು ಸಂಗ್ರಹಿಸಕೂಡದು ಎನ್ನುತ್ತಿಲ್ಲ. ಈ ಮಾಹಿತಿ ಸಂಗ್ರಹಣೆ ಮತ್ತು ಬಳಕೆಗೆ ನಿರ್ದಿಷ್ಟ ನಿಯಮಗಳ ಅಗತ್ಯವಿದೆ ಎಂದಷ್ಟೇ ಪ್ರತಿಪಾದಿಸುತ್ತಿದ್ದಾರೆ. ಆಧಾರ್ ಸಂಖ್ಯೆಯನ್ನು ಯಾರು, ಯಾವಾಗ, ಯಾವ್ಯಾವ ಕಾರಣಕ್ಕೆ ಕೇಳಬಹುದು. ಆ ಮಾಹಿತಿಯನ್ನು ಅವರು ಹೇಗೆಲ್ಲಾ ಬಳಸಿಕೊಳ್ಳಬಹುದು ಅಥವಾ ಬಳಸಿಕೊಳ್ಳಬಾರದು ಎಂಬುದನ್ನು ಸ್ಪಷ್ಟವಾಗಿ ನಿರ್ವಚಿಸದೇ ಹೋದರೆ ಭವಿಷ್ಯದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಖಾಸಗಿತನ ಮತ್ತು ದತ್ತಾಂಶ ಸಂರಕ್ಷಣೆಗೆ ಸಂಬಂಧಿಸಿದ ಕಾನೂನೊಂದು ಇದ್ದಿದ್ದರೆ ಇತ್ತೀಚೆಗೆ ಆಧಾರ್ ಮಾಹಿತಿಗಳು ಬಯಲಾದಾಗ ಅದನ್ನು ಬಳಕೆದಾರರು ಅದನ್ನು ಸಂಗ್ರಹಿಸಿಟ್ಟುಕೊಂಡಿದ್ದವರಿಂದ ಪರಿಹಾರ ಕೇಳಿ ಮೊಕದ್ದಮೆ ಹೂಡಬಹುದಿತ್ತು. ಈಗ ಇರುವ ಆಧಾರ್ ಕಾಯ್ದೆಯಂತೆ ಹೀಗೆ ಮೊಕದ್ದಮೆ ಹೂಡಲು ಸಾಧ್ಯವಿರುವುದು ವಿಶಿಷ್ಟ ಗುರುತು ಪ್ರಾಧಿಕಾರಕ್ಕೆ ಮಾತ್ರ. ಮಾಹಿತಿಯನ್ನು ಕೊಟ್ಟ ಪ್ರಜೆಗಲ್ಲ. ಸದ್ಯ ದೇಶದ ಸರ್ವೋನ್ನತ ನ್ಯಾಯಾಲಯ ಖಾಸಗಿತವನ್ನು ಮೂಲಭೂತ ಹಕ್ಕು ಎಂದು ಹೇಳಿರುವುದರಿಂದ ಈ ಸ್ಥಿತಿಯನ್ನು ಏನಾದರೂ ಬದಲಾವಣೆ ಬರಬಹುದು ಎಂದು ನಿರೀಕ್ಷಿಸಬಹುದು. ಆದರೆ ‘ಆಧಾರ್’ ಅನ್ನು ಉಳಿಸಿಕೊಳ್ಳುವುದಕ್ಕೆ ಸರ್ಕಾರ ಈ ತನಕ ನಡೆಸಿರುವ ಸರ್ಕಸ್ ನೋಡಿದರೆ ಈ ಬದಲಾವಣೆ ಅಷ್ಟು ಸುಲಭವಲ್ಲ ಅನ್ನಿಸುತ್ತದೆ. ಇನ್ನುಳಿದಿರುವ ಏಕೈಕ ನಿರೀಕ್ಷೆ ಎಂದರೆ ‘ಆಧಾರ್’ ಕುರಿತಂತೆ ಸುಪ್ರೀಂ ಕೋರ್ಟ್‌ನಲ್ಲಿರುವ ಮೊಕದ್ದಮೆಯ ತೀರ್ಪು ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT