ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ ಸೇನೆಯ ಭಸ್ಮಾಸುರ ಪಾತ್ರ

Last Updated 24 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಪಾಕಿಸ್ತಾನದ ಸೇನೆಯ ಬಗ್ಗೆ ಈ ಅಂಕಣದ ಓದುಗರಾದ ನಿಮ್ಮ ಅಭಿಪ್ರಾಯ ಏನಿರಬಹುದು?  ಅದೊಂದು ಉತ್ತಮ, ಕೆಟ್ಟ, ಶ್ರೇಷ್ಠ, ದುಷ್ಟ, ಅಜೇಯ, ಸುಲಭವಾಗಿ ಸದೆಬಡಿಯಬಹುದಾದ ಪಾಕಿಸ್ತಾನದ ರಾಷ್ಟ್ರೀಯವಾದಿ ಸೇನೆಯೇ ಅಥವಾ ಸೇನಾ ಸಮವಸ್ತ್ರದಲ್ಲಿರುವ ಅಣ್ವಸ್ತ್ರ ಸಜ್ಜಿತ ಇಸ್ಲಾಂ ಲಷ್ಕರ್‌ ಸಂಘಟನೆಯೇ?

ಹೀಗೆ ಅದರ ಬಗ್ಗೆ ಕೊನೆ ಮೊದಲು ಇಲ್ಲದೆ ಮಾತನಾಡುತ್ತಲೇ ಇರಬಹುದು. ಸದ್ಯಕ್ಕೆ ನಡೆಯುತ್ತಿರುವ ತೀವ್ರ ಸ್ವರೂಪದ ರಾಷ್ಟ್ರೀಯವಾದದ ಚರ್ಚೆಯಲ್ಲಿ ನೀವು ಯಾವ ನಿಲುವು ತಳೆದಿರುವಿರಿ ಎನ್ನುವುದರ ಆಧಾರದ ಮೇಲೆ ನಿಮ್ಮ ಉತ್ತರ ಅವಲಂಬಿತವಾಗಿರುತ್ತದೆ.

ಭಾರತೀಯನಾಗಿರುವ ನಾನು, ಇಲ್ಲಿ ಉಲ್ಲೇಖಿಸಿರುವ ಅನೇಕ ಸಕಾರಾತ್ಮಕ ಆಯ್ಕೆಗಳ ಬಗ್ಗೆ ಒಲವು ತೋರಿಸಿದ್ದೇ ಆದರೆ ನಾನು ವಿಶ್ವದ ಇನ್ನೆಲ್ಲಿಯಾದರೂ ದೇಶಾಂತರದಲ್ಲಿ ಇರಬೇಕಾಗುತ್ತದೆಯಷ್ಟೆ ಅಥವಾ ನಾವು ನಮ್ಮ ಟೆಲಿವಿಷನ್ ಚರ್ಚಾಗೋಷ್ಠಿಗಳ ಸಮರ ಸೇನಾನಿಗಳ ಅಭಿಪ್ರಾಯಗಳ ಪರ ನಿಲುವು ತಳೆಯಬೇಕಾಗುತ್ತದೆ.

ಯುದ್ಧಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ನಲ್ಲಿ ಬಂದಿರುವ ಚಲನಚಿತ್ರಗಳಲ್ಲಿ ಪಾಕಿಸ್ತಾನದ ಸೇನೆಯನ್ನು ಕಳಪೆಯಾಗಿ ಬಿಂಬಿಸಲಾಗಿದೆ. ಸೇನಾ ಗುಣಮಟ್ಟಕ್ಕೆ ಹೊರತಾದ ಸನ್ನಿವೇಶಗಳಲ್ಲಿ ಸನ್ನಿ ಡಿಯೋಲ್‌, ಸುನೀಲ್‌ ಶೆಟ್ಟಿ ಅಥವಾ ಅಕ್ಷಯ್‌ ಕುಮಾರ್‌ ಅವರಿಂದ ಸೋಲು ಕಾಣುವ ಮತ್ತು ಸುಲಭವಾಗಿ ಸದೆಬಡಿಯಬಹುದಾದ ಸೇನಾಪಡೆ ಅದಾಗಿದೆ.

ಪಾಕಿಸ್ತಾನದ ಸೇನಾ ಸಾಮರ್ಥ್ಯವನ್ನು ನಿರ್ಲಿಪ್ತ ಧೋರಣೆಯಿಂದ ಮತ್ತು ವೃತ್ತಿಪರತೆಯಿಂದ ಅಂದಾಜು ಮಾಡಿದರೆ ಅದರ ಮನಸ್ಥಿತಿ, ಉದ್ದೇಶ, ಹಿಂದಿನ ಸಾಧನೆ ಮತ್ತು ಸದ್ಯದ ಚಿಂತನಾ ಕ್ರಮಗಳನ್ನು ಭಾರತದ ರಾಷ್ಟ್ರೀಯ ಹಿತಾಸಕ್ತಿ ರಕ್ಷಣೆಯ ಹಿತದೃಷ್ಟಿಯಿಂದಲೇ ವಿಶ್ಲೇಷಿಸಬೇಕಾಗುತ್ತದೆ.  ಪಾಕಿಸ್ತಾನದ ಜತೆ ವ್ಯವಹರಿಸುವುದು ಎಂದರೆ ಅದೊಂದು ತುಂಬ ಸಂಕೀರ್ಣವಾದ, ಉಭಯ ಸಂಕಟದ ಬಿಕ್ಕಟ್ಟು ಬಗೆಹರಿಸುವ ವಿಶಿಷ್ಟ ಸಂದರ್ಭ ಆಗಿರುತ್ತದೆ.

ಪಾಕಿಸ್ತಾನವು ಸೈದ್ಧಾಂತಿಕ ದೇಶವಾಗಿದೆಯೇ ಮತ್ತು ಅದರ ಸೇನೆಯು ಕೂಡ ಅದೇ ಬಗೆಯ ನಿಲುವು ತಳೆದಿರುವುದೇ ಅಥವಾ ಭಿನ್ನವಾಗಿದೆಯೇ, ಸೇನೆಯನ್ನು ಬದಿಗೊತ್ತಿ ಪಾಕಿಸ್ತಾನದ ಜನರ ಜತೆ ಸುಲಭವಾಗಿ ವ್ಯವಹರಿಸಬಹುದೇ ಅಥವಾ  ಪಾಕಿಸ್ತಾನದ ಪ್ರಜೆಗಳನ್ನು ನಿರ್ಲಕ್ಷಿಸಿ ಸೇನೆ ಜತೆ ಬಾಂಧವ್ಯ ಸುಧಾರಿಸಬಹುದೇ?

ಸೇನೆ ಮತ್ತು ಜನರ ಜತೆಗೂ ಏಕಕಾಲಕ್ಕೆ ವ್ಯವಹರಿಸಬಹುದಾದರೆ ನಿಮ್ಮ ಮೊದಲ ಆದ್ಯತೆ ಏನಾಗಿರಬಹುದು? ಹಾಗೆ ಮಾಡಲು ಸಾಧ್ಯವಿದೆಯೇ ಎಂಬಂತಹ ಪ್ರಶ್ನೆಗಳು ಎದುರಾಗುತ್ತವೆ. ಈ ಅನುಮಾನಗಳಿಗೆ ಉತ್ತರ ಕಂಡುಕೊಳ್ಳುವುದು ಅಷ್ಟು ಸುಲಭವೂ ಅಲ್ಲ.

ಪ್ರತಿ ಶುಕ್ರವಾರ ಮಧ್ಯಾಹ್ನ ನಾನು ಈ ಅಂಕಣ ಬರೆಯಲು ಕುಳಿತಾಗ ನನ್ನ ಅಂತಃಪ್ರಜ್ಞೆಯೂ ತುಂಬ ಸಂಕೀರ್ಣಗೊಂಡಿರುತ್ತದೆ. ನನ್ನಂತಹ ವೃತ್ತಿನಿರತ ಬರಹಗಾರರು ಭಾಷಾ ಪ್ರಾವೀಣ್ಯದಿಂದ ಸುಲಭವಾಗಿ ಅಂಕಣ ಬರೆಯಬಹುದು.  ಆದರೆ, ಕೆಲ ಸಂದೇಹಗಳಿಗೆ ಉತ್ತರ ಕಂಡುಕೊಳ್ಳುವಾಗ ಸಂಕೀರ್ಣತೆಯ ಸವಾಲು ಎದುರಾಗುತ್ತದೆ. ಅದರ ಬಗ್ಗೆ  ನಿಮಗೆ ಖಚಿತತೆ ಇರದಿದ್ದರೂ ನಮ್ಮ ಮನಸ್ಸು ತೃಪ್ತಿದಾಯಕವಾದ ಉತ್ತರದ ಹುಡುಕಾಟದಲ್ಲಿ ಇರುತ್ತದೆ.

ಪ್ರಾಮಾಣಿಕವಾಗಿ ಹೇಳುವುದಾದರೆ ಉದಾಹರಣೆಗೆ, ಪಾಕಿಸ್ತಾನದ ಸೇನೆಗೆ ಸಂಬಂಧಿಸಿದ ಗುಣವಾಚಕಗಳಾದ ಕೆಟ್ಟ, ದುಷ್ಟ, ಸೋಲಿಸಬಹುದಾದ, ಇಸ್ಲಾಮಿಕ್‌ ಸಂಘಟನೆ– ಹೀಗೆ ಪ್ರತಿ ಪ್ರಶ್ನೆಗೆ ನಾನು ‘ಹೌದು’ ಎಂದು ಉತ್ತರಿಸಲಾರೆ.

ಹೌದು ಎಂದು ಉತ್ತರಿಸುವುದು ಇಂದು ಹೆಚ್ಚು ಸುಲಭವೂ, ಜನಪ್ರಿಯವೂ ಆಗಿದೆ. ತಮ್ಮ ಪರಮ ಶತ್ರುಗಳ ಬಗ್ಗೆ ನಮ್ಮ ಸೇನೆಯ ವೃತ್ತಿನಿರತ ಸೈನಿಕರ ಧೋರಣೆಯೂ ಇದೇ ಆಗಿದೆ. ಇದೇ ಕಾರಣಕ್ಕೆ 1947ರಿಂದೀಚೆಗೆ ಪಾಕಿಸ್ತಾನದ ಜತೆಗಿನ ಪ್ರತಿ ಯುದ್ಧದ ಅಂತಿಮ ವಿಶ್ಲೇಷಣೆಯಲ್ಲಿ ನಮ್ಮ ಸೇನೆ ಮುಂಚೂಣಿ ಸ್ಥಾನ ಕಾಯ್ದುಕೊಂಡು ಬಂದಿದೆ.

ಸಂದೇಹ ಎದುರಾದಾಗ, ಅದರಲ್ಲೂ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಅನಿವಾರ್ಯ ಎದುರಾದಾಗ ಅನ್ಯರ ಆಶ್ರಯ ಪಡೆಯುವುದು ಅನಿವಾರ್ಯವಾಗುತ್ತದೆ. ಅದೇ ಕಾರಣಕ್ಕೆ ನಾನು ಕೂಡ ಪ್ರೊ. ಸ್ಟೀಫನ್‌ ಪಿ. ಕೊಹೆನ್‌ ಅವರ ಮಾತನ್ನು ಇಲ್ಲಿ ಉಲ್ಲೇಖಿಸ ಬಯಸುತ್ತೇನೆ.

ಭಾರತ ಮತ್ತು ಪಾಕಿಸ್ತಾನದ ಬಾಂಧವ್ಯಕ್ಕೆ ಸಂಬಂಧಿಸಿದಂತೆ, ಅದರಲ್ಲೂ ವಿಶೇಷವಾಗಿ ಎರಡೂ ದೇಶಗಳ ಸೇನೆಗಳ ಕುರಿತ ವಿಶ್ಲೇಷಣೆಗೆ, ವಿಶ್ವದಾದ್ಯಂತ ಮನ್ನಣೆಗೆ ಪಾತ್ರರಾಗಿರುವ ಗೌರವಾನ್್ವಿತ ವಿದ್ವಾಂಸರಾಗಿರುವ ಕೊಹೆನ್‌, ಹಿಮಾಲಯನ್‌ ಬುಕ್ಸ್‌ 1984ರಲ್ಲಿ ಪ್ರಕಟಿಸಿರುವ ತಮ್ಮ ‘ದ ಪಾಕಿಸ್ತಾನ್‌ ಆರ್ಮಿ’ ಗ್ರಂಥದಲ್ಲಿ, ‘ಪಾಕಿಸ್ತಾನದ ಸೇನೆಯು ವಿಶ್ವದಲ್ಲಿನ ಅತ್ಯಂತ ಶ್ರೇಷ್ಠ ಸೇನಾಪಡೆಗಳಲ್ಲಿ ಒಂದಾಗಿದ್ದರೂ, ಯಾವತ್ತೂ ಒಂದೇ ಒಂದು ಯುದ್ಧವನ್ನೂ ಗೆದ್ದಿಲ್ಲ’ ಎಂದು ಬಣ್ಣಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಉಪಕಥೆ ಒಂದಿದೆ. ಆ ಸಂದರ್ಭದಲ್ಲಿ ಪಾಕಿಸ್ತಾನದ ಅಧ್ಯಕ್ಷರಾಗಿದ್ದ ಜಿಯಾ ಉಲ್‌ ಹಕ್‌ ಅವರು ಈ ಗ್ರಂಥದ ಮೇಲೆ ನಿಷೇಧ ವಿಧಿಸಿದ್ದರೂ ಗ್ರಂಥಕರ್ತೃ ಕೊಹೆನ್‌ ಅವರನ್ನು ತುಂಬ ಗೌರವದಿಂದ ಕಂಡಿದ್ದರು.  ಔತಣಕೂಟದಲ್ಲಿ ಭಾಗಿಯಾಗಿ ತಮ್ಮ ಆತಿಥ್ಯ ಸ್ವೀಕರಿಸಬೇಕು ಎಂದು ಕೊಹೆನ್‌ ಅವರಿಗೆ ಆಹ್ವಾನವನ್ನೂ ನೀಡಿದ್ದರು.

‘ನಿಮ್ಮ ಧೋರಣೆಯಲ್ಲಿ ಈ ಬಗೆಯ ವಿರೋಧಾಭಾಸಗಳು ಇರುವುದೇಕೆ’ ಎಂದು ಹಕ್‌ ಅವರನ್ನು ಕೊಹೆನ್‌ ನೇರವಾಗಿಯೇ ಪ್ರಶ್ನಿಸಿದ್ದರು. ‘ಈ ಒಂದು ಸಾಲನ್ನು ಹೊರತುಪಡಿಸಿ ನಿಮ್ಮ ಈ ಇಡೀ ಕೃತಿಯನ್ನು ನಾನು ಖಂಡಿತವಾಗಿಯೂ ಇಷ್ಟಪಡುವೆ’ ಎಂದು ಹಕ್‌ ಅದಕ್ಕೆ ಪ್ರತಿಕ್ರಿಯಿಸಿದ್ದರು.

1965ರಲ್ಲಿ ಭಾರತದ ವಿರುದ್ಧದ ಸಮರದಲ್ಲಿ ಗೆಲುವು ಸಾಧಿಸಿರುವುದಾಗಿ ಪಾಕಿಸ್ತಾನ ಸೇನೆ ಬಲವಾಗಿ ನಂಬಿರುವಾಗ, ಯಾವುದೇ ಯುದ್ಧ ಗೆದ್ದಿಲ್ಲ ಎಂದು ಕೊಹೆನ್‌ ಹೇಗೆ ಹೇಳಲು ಸಾಧ್ಯ ಎನ್ನುವುದು ಹಕ್‌ ಅವರ ನಿಲುವಾಗಿತ್ತು.

ಆಫ್ಘಾನಿಸ್ತಾನದಲ್ಲಿ ಅಂದಿನ ಸೋವಿಯತ್‌ ಒಕ್ಕೂಟದ ವಿರುದ್ಧದ ಯುದ್ಧವನ್ನೂ ಗೆದ್ದಿರುವುದಾಗಿ ಪಾಕಿಸ್ತಾನ ಸೇನೆ ನಂಬಿದೆ. ಅದು ತನ್ನ ಎರಡನೇ ಗೆಲುವು ಆಗಿದೆ ಎನ್ನುವುದು ಅದರ ವಾದವಾಗಿದೆ. ಇದೇ ಕಾರ್ಯತಂತ್ರವನ್ನು ಅದು ತನ್ನ ನಿಜವಾದ ಶತ್ರುವಾಗಿರುವ ಭಾರತದ ವಿರುದ್ಧವೂ ಅನ್ವಯಿಸುತ್ತಿದೆ.

ಪಾಕಿಸ್ತಾನದ ಸೇನೆಯ ನಿಜವಾದ ಸಮಸ್ಯೆಯೇ ಇದಾಗಿದೆ. ನಿಜಕ್ಕೂ ಅದೊಂದು ಭ್ರಮೆ. 1965ರ ಯುದ್ಧದಲ್ಲಿ ಭಾರತದ ವಿರುದ್ಧ ಗೆಲುವು ಸಾಧಿಸಲಾಗಿದೆ ಎನ್ನುವ ಚಿಂತನೆಯನ್ನು ಅದು ಹೊಸ ತಲೆಮಾರುಗಳ ಉದ್ದಕ್ಕೂ ಬಲವಾಗಿ ಪ್ರತಿಪಾದಿಸುತ್ತಲೇ ಬಂದಿದೆ.

ಸೆಪ್ಟೆಂಬರ್‌ 6ರಂದು ‘ಪಾಕಿಸ್ತಾನದ ರಕ್ಷಣಾ ದಿನ’ ಆಚರಿಸುತ್ತ, ಈ ಕಟ್ಟುಕಥೆಯ ಗೆಲುವಿನ ಸಂಭ್ರಮ ಆಚರಿಸುತ್ತಿದೆ. ಪಾಕಿಸ್ತಾನದಲ್ಲಿನ ಪ್ರಮುಖ ಸಮಸ್ಯೆ ಏನೆಂದರೆ, 1965ರಿಂದೀಚೆಗೆ ಯಾವುದೇ ಸಂದರ್ಭದಲ್ಲಿಯೂ ಯಾರೊಬ್ಬರೂ ಸೇನೆಯ ವಾದವನ್ನು ಪ್ರಶ್ನಿಸುವ ಧೈರ್ಯವನ್ನೇ ಪ್ರದರ್ಶಿಸಿಲ್ಲ. ಭಾರತದ ಅನೇಕ ಶ್ರೇಷ್ಠ ಸೈನಿಕರು, 1965ರ ಯುದ್ಧವು ಸಮಬಲ ಹೊಂದಿರದ ಸೇನೆಗಳ ನಡುವೆ ನಡೆದ ಸಮರವಾಗಿತ್ತು ಎಂದು ದಾಖಲಿಸಿದ್ದಾರೆ. 

ಪಾಕಿಸ್ತಾನದ ಸೇನೆಯು ಅಸಾಧಾರಣ ಸಾಮರ್ಥ್ಯದ ಹೋರಾಟ ನಡೆಸುವ ಪಡೆಯಾಗಿದ್ದು, ಸೇನಾಪಡೆಗಳ ಜಾಗತಿಕ ಸ್ಥಾನಮಾನಗಳ ವಿಷಯದಲ್ಲಿ ಭಾರತಕ್ಕೆ ತೀರ ಹತ್ತಿರದಲ್ಲಿದೆ. ವಿಶ್ವದ ಐದು ಅಥವಾ ಆರನೇ ಅತಿದೊಡ್ಡ ಸೇನಾಪಡೆ ಅದಾಗಿದೆ. ಹೊಸ ತಂತ್ರಜ್ಞಾನ ಅಳವಡಿಸಿಕೊಂಡಿರುವ ವೃತ್ತಿನಿರತ ಕಮಾಂಡರುಗಳಿಂದ ಆದೇಶ ಪಾಲಿಸುವ, ಗಾತ್ರದಲ್ಲಿ ಸಾಕಷ್ಟು ದೊಡ್ಡದಾದ ಇಸ್ಲಾಮಿಕ್‌ ಸೇನೆಯಾಗಿದೆ.

ವಿಶ್ವದ ಇತರ ವೃತ್ತಿಪರ ಸೇನಾಪಡೆಗಳಿಗಿಂತ ಹೆಚ್ಚು ಶ್ರೇಷ್ಠ, ನೈತಿಕತೆ ಒಳಗೊಂಡ, ಪವಿತ್ರವಾದ ಮತ್ತು ಸಿದ್ಧಾಂತಗಳಿಗೆ ಬದ್ಧವಾಗಿರುವುದಾಗಿ ಪಾಕಿಸ್ತಾನದ ಸೇನೆ ಹೇಳಿಕೊಳ್ಳುತ್ತಿದೆ. ಸೇನಾಪಡೆಗಳಿಗೆ ಹೊರತಾದ ವಿಷಯಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಮೂಗು ತೂರಿಸಲು ಹೊರಟಿರುವುದೇ ಅದರ ನಿಜವಾದ ಸಮಸ್ಯೆಯಾಗಿದೆ.

ತನಗೆ ಸಂಬಂಧಪಡದ ವಿಷಯಗಳಲ್ಲಿ ಹಸ್ತಕ್ಷೇಪ ನಡೆಸಲು ಮುಂದಾಗುವ ಪಾಕಿಸ್ತಾನದ ಸೇನೆಯ ಇಂತಹ ಅನಪೇಕ್ಷಿತ ನಡವಳಿಕೆಯೇ ಸ್ವದೇಶದಲ್ಲಿ  ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಜತೆಗೆ ಭಾರತಕ್ಕೂ ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಈಗ ನಾವೆಲ್ಲ ಇಂತಹ ಸಮಸ್ಯೆಯ ದಿನಗಳನ್ನು ಎದುರಿಸುತ್ತಿದ್ದೇವೆ.

ತನ್ನ ರಾಜಕೀಯ ಮತ್ತು ಸೇನಾ ಇತಿಹಾಸದಲ್ಲಿ ಪಾಕಿಸ್ತಾನವು ಸದ್ಯಕ್ಕೆ ವಿಶಿಷ್ಟ ಹಂತವೊಂದನ್ನು ಹಾದು ಹೋಗುತ್ತಿದೆ. ರಾವಲ್ಪಿಂಡಿಯಲ್ಲಿ ಇರುವ ಪಾಕಿಸ್ತಾನ ಸೇನೆಯ ಪ್ರಧಾನ ಕಚೇರಿಯು (ಜಿಎಚ್‌ಕ್ಯು) ಪ್ರಜಾಸತ್ತಾತ್ಮಕವಾಗಿ ಚುನಾಯಿತವಾಗಿರುವ ಸರ್ಕಾರದ ಅಧಿಕಾರವನ್ನು ಬಹಿರಂಗವಾಗಿಯೇ ತನ್ನ ವಶಕ್ಕೆ ತೆಗೆದುಕೊಂಡಿದೆಯಷ್ಟೇ ಅಲ್ಲ, ಸರ್ಕಾರವನ್ನೇ ಸಂಪೂರ್ಣವಾಗಿ ನಿಯಂತ್ರಿಸುತ್ತಿದೆ ಎಂದರೆ ತಪ್ಪಲ್ಲ.

ನವಾಜ್‌ ಷರೀಫ್‌ ಅವರು ಚುನಾವಣೆಯಲ್ಲಿ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದಿದ್ದರೂ, ಸೇನೆಯು ಸರ್ಕಾರದ ರಾಜಕೀಯ ಅಧಿಕಾರವನ್ನಷ್ಟೇ ಅಲ್ಲದೆ ನೈತಿಕತೆಯನ್ನೂ ಹಾಳು ಮಾಡಿದೆ. ಸೇನೆಯು ಈಗ ರಾಷ್ಟ್ರೀಯ ಆಂತರಿಕ, ಬಾಹ್ಯ ಭದ್ರತೆ ಮತ್ತು ವಿದೇಶಿ ನೀತಿಯನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತಿದೆ.

ಸೇನೆ ಬೆಂಬಲಿತ ತಹಿರುಲ್‌ ಖಾದ್ರಿ ಮತ್ತು ಇಮ್ರಾನ್‌ ಖಾನ್‌ ತಮ್ಮ ಬೆಂಬಲಿಗರೊಂದಿಗೆ ಇಸ್ಲಾಮಾಬಾದ್‌ಗೆ ದಿಗ್ಬಂಧನ ಹಾಕಿದಾಗಲೇ ಚುನಾಯಿತ ಸರ್ಕಾರದ ಪತನ ಆರಂಭಗೊಂಡಿತ್ತು. ನವಾಜ್‌ ಷರೀಫ್‌ ಕುಟುಂಬವು ಪನಾಮಾ ಪೇಪರ್ಸ್‌ ಹಗರಣದಲ್ಲಿ ಭಾಗಿಯಾಗಿರುವುದು ಬಹಿರಂಗಗೊಳ್ಳುತ್ತಿದ್ದಂತೆ ಈ ಪ್ರಕ್ರಿಯೆ ಪೂರ್ಣಗೊಂಡಿತ್ತು.

ಪಾಕಿಸ್ತಾನದ ಅನೇಕ ಬುದ್ಧಿಜೀವಿಗಳೂ ಸೇರಿದಂತೆ ಬಹುತೇಕ ಜನರು ‘ಮೈಗಳ್ಳ ಕಳ್ಳರ’ ಚುನಾಯಿತ ಸರ್ಕಾರಕ್ಕಿಂತ ಸೇನೆಯಲ್ಲಿಯೇ ಹೆಚ್ಚು ನಂಬಿಕೆ ಇರಿಸಿದ್ದಾರೆ. ಸೇನಾ ಮುಖ್ಯಸ್ಥರಾಗಿರುವ ಜನರಲ್‌ ರಹೀಲ್‌ ಷರೀಫ್‌ ಅವರು ಪಾಕಿಸ್ತಾನದ ಖ್ಯಾತ ಸಮರ ವೀರರ ಕುಟುಂಬದಿಂದ ಬಂದವರಾಗಿದ್ದು, ಪ್ರಭಾವಿ ವ್ಯಕ್ತಿಯಾಗಿ  ಬೆಳೆದಿದ್ದಾರೆ. ಬಹುಶಃ ಇದುವರೆಗಿನ ಅತ್ಯಂತ ಜನಪ್ರಿಯ ಮತ್ತು ವಿಶ್ವಾಸಾರ್ಹವಾದ ಸೇನಾ ಮುಖ್ಯಸ್ಥರು ಅವರಾಗಿದ್ದಾರೆ.

ಪಾಕಿಸ್ತಾನ ಸೇನೆಯು ಈ ಬಗೆಯ ಭಯಮಿಶ್ರಿತ ಗೌರವ ಪಡೆಯುವುದಕ್ಕೆ ನಿಜವಾಗಿಯೂ ಅರ್ಹವಾಗಿದೆಯೇ ಎನ್ನುವ ಪ್ರಶ್ನೆಗೆ, ಪಾಕಿಸ್ತಾನ ಸೇನೆ ಯಾವ ಭರವಸೆ ನೀಡುತ್ತಿದೆ ಎನ್ನುವುದನ್ನು ಆಧರಿಸಿ ತೀರ್ಮಾನಕ್ಕೆ ಬರಬೇಕಾಗುತ್ತದೆ. ಪಾಕಿಸ್ತಾನದ ರಾಜಕೀಯ ಅಧಿಕಾರ ವ್ಯವಸ್ಥೆ ಮತ್ತು ನೀತಿ ನಿರೂಪಣೆಯಲ್ಲಿ ಕಾಶ್ಮೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸೇನೆಗೆ ಸಾಧ್ಯವಾಗಲಿದೆಯೇ ಎನ್ನುವುದನ್ನೂ ನಾವು ಇಲ್ಲಿ ಮುಖ್ಯವಾಗಿ ಪರಿಗಣಿಸಬೇಕಾಗುತ್ತದೆ.

70 ವರ್ಷಗಳಿಂದ ನಿರಂತರವಾಗಿ ಪ್ರಯತ್ನಿಸುತ್ತ, ಹೋರಾಡುತ್ತಲೇ ಇರುವ ಅದು ಇದುವರೆಗೂ ತನ್ನ ಉದ್ದೇಶ ಸಾಧನೆಯಲ್ಲಿ ವೈಫಲ್ಯ ಕಾಣುತ್ತಲೇ ಬಂದಿದೆ.

1948ರಲ್ಲಿ ಪಾಕಿಸ್ತಾನದ ವಶದಲ್ಲಿದ್ದ ಕಾಶ್ಮೀರ ಭೂಭಾಗಕ್ಕಿಂತ ಈಗ ಅದರ ಬಳಿ ಇರುವ ಭೂಪ್ರದೇಶ ಕಡಿಮೆ. ಕದನ ವಿರಾಮದ ಸಂದರ್ಭದಲ್ಲಿ ಪಾಕಿಸ್ತಾನವು ಸಿಯಾಚಿನ್‌, ಕಾರ್ಗಿಲ್‌, ತುರ್ತುಕ್‌ ಮತ್ತಿತರ ಪ್ರದೇಶಗಳನ್ನು ಕಳೆದುಕೊಂಡಿತ್ತು.

ಪಾಕಿಸ್ತಾನದ ಭೂಪ್ರದೇಶ ಮತ್ತು ಸೈದ್ಧಾಂತಿಕ ಗಡಿಯನ್ನು ರಕ್ಷಿಸುವುದೇ ಸೇನೆಯ ಉದ್ದೇಶವಾಗಿದ್ದರೆ, ಬಾಂಗ್ಲಾದೇಶದ ಹೆಸರು ಪ್ರಸ್ತಾಪಿಸುತ್ತಿದ್ದಂತೆ ಈ ಮಾತು ತನ್ನ ಅರ್ಥವನ್ನೇ ಕಳೆದುಕೊಳ್ಳುತ್ತದೆ. ಬಾಂಗ್ಲಾದೇಶದ ರೂಪದಲ್ಲಿ ಪಾಕಿಸ್ತಾನವು ತನ್ನ ಅತಿ ದೊಡ್ಡ ಭೂಭಾಗವನ್ನು ಮತ್ತು ಗಮನಾರ್ಹ ಪ್ರಮಾಣದ ಜನಸಂಖ್ಯೆಯನ್ನು ಕಳೆದುಕೊಂಡಿತ್ತು.

ಸೋವಿಯತ್‌ ಒಕ್ಕೂಟವನ್ನೂ ಸೋಲಿಸಿರುವುದು ತನ್ನ ಹೆಗ್ಗಳಿಕೆಯಾಗಿದೆ ಎಂದು ಹೇಳಿಕೊಳ್ಳುತ್ತಿದ್ದರೂ, ಪಾಕಿಸ್ತಾನ ಸೇನೆಯು ಈಗಲೂ ತನ್ನ ನೆಲದಲ್ಲಿಯೇ ಚಿಗುರೊಡೆದ ತಾಲಿಬಾನ್‌ ಬಂಡುಕೋರರ ವಿರುದ್ಧ ಹೋರಾಟ ನಡೆಸುತ್ತಿರುವುದು ಸದ್ಯದ ವಾಸ್ತವ ಸಂಗತಿಯಾಗಿದೆ.

ಬಡಾಯಿ ಕೊಚ್ಚಿಕೊಳ್ಳುವ ಪಾಕಿಸ್ತಾನದ ಸೇನೆಯು ದಶಕಗಳ ಉದ್ದಕ್ಕೂ ತನ್ನ ಭೂಪ್ರದೇಶ ಕಳೆದುಕೊಳ್ಳುವುದರ ಜತೆಗೆ ಜಿಹಾದ್‌ (ಧರ್ಮಯುದ್ಧ) ಅನ್ನು ಪೋಷಿಸುತ್ತಿದೆ ಎಂದು ವಿಶ್ವದಾದ್ಯಂತ ಟೀಕೆಗೆ ಗುರಿಯಾಗುತ್ತಿದೆ. ಒಂದೆಡೆ ದೇಶದ ಸೇನಾಪಡೆಗಳ ಬಜೆಟ್‌ ವೆಚ್ಚ ಹೆಚ್ಚುತ್ತಿದ್ದರೆ ಇನ್ನೊಂದೆಡೆ ವಿಶ್ವದ ಸದ್ಭಾವನೆಗೂ ಎರವಾಗುತ್ತಿದೆ.

ನಾನು ಮೇಲಿಂದ ಮೇಲೆ ಹೇಳುವ ಒಂದು ಮಾತನ್ನು ಇಲ್ಲಿ ಮತ್ತೆ ಉಲ್ಲೇಖಿಸ ಬಯಸುತ್ತೇನೆ. 1985ರಲ್ಲಿ ನಾನು ಮೊದಲ ಬಾರಿಗೆ ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ, ಆ ದೇಶ ಭಾರತಕ್ಕಿಂತ ಹೆಚ್ಚು ಶ್ರೀಮಂತವಾಗಿದ್ದುದರ ಜತೆಗೆ ಹೆಚ್ಚು  ಆಧುನಿಕತೆಯನ್ನೂ ಮೈಗೂಡಿಸಿಕೊಂಡಿತ್ತು.

ಅಲ್ಲಿನ ತಲಾ ಆದಾಯವು ಭಾರತಕ್ಕಿಂತ ಶೇ 65ರಷ್ಟು ಹೆಚ್ಚಾಗಿತ್ತು. ಅದೇ ಹೊತ್ತಿನಲ್ಲಿ ಪಾಕಿಸ್ತಾನವು ಆಫ್ಘಾನಿಸ್ತಾನದ ಬೆಂಬಲದಿಂದ ಭಾರತದ ವಿರುದ್ಧ  ಗಡಿಯಾಚೆಗಿನ ಭಯೋತ್ಪಾದನೆಯ ಅಸ್ತ್ರ ಬಳಸಲು ಆರಂಭಿಸಿತ್ತು. ಇದರಿಂದ ಭಾರತದಲ್ಲಿ ರಕ್ತಪಾತ ನಡೆದು ಅವಸಾನ ಹೊಂದಲಿದೆ ಎಂದು ಎಣಿಕೆ ಹಾಕಿತ್ತು.

ಪಾಕಿಸ್ತಾನದ ನಿರೀಕ್ಷೆಗೆ ವ್ಯತಿರಿಕ್ತವಾಗಿ ಭಾರತವು ನಂತರದ ವರ್ಷಗಳಲ್ಲಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಲೇ ಸಾಗಿತು. ಪಾಕಿಸ್ತಾನವು ನಿರಂತರವಾಗಿ ಪತನದ ಹಾದಿಯತ್ತ ನಡೆಯಿತು. ತಲಾ ಆದಾಯದಲ್ಲಿನ ಶೇ 65ರಷ್ಟು ಮುನ್ನಡೆಯು ಈಗ ಭಾರತದ ತಲಾ ಆದಾಯಕ್ಕಿಂತ ಶೇ 20ರಷ್ಟು ಕಡಿಮೆ ಪ್ರಮಾಣಕ್ಕೆ ಇಳಿದಿದೆ.

ಅಲ್ಲೊಮ್ಮೆ, ಇಲ್ಲೊಮ್ಮೆ ಕೆಲ ಭಾರತೀಯರನ್ನು ಬಲಿ ತೆಗೆದುಕೊಳ್ಳುವುದರಲ್ಲಿಯೇ ಬೀಗುವ ಪಾಕಿಸ್ತಾನದ ಸೇನೆಯು, ಭಾರತದ ವಿರುದ್ಧ ಹಗೆತನ ಸಾಧಿಸುವ  ಕಾರ್ಯದಲ್ಲಿ ವಿಫಲಗೊಳ್ಳುತ್ತಲೇ ಇದೆ. ವಿಶ್ವದ ಅತ್ಯಂತ ಶ್ರೇಷ್ಠ ಸೇನಾಪಡೆಗಳಲ್ಲಿ ಒಂದಾಗಿದ್ದರೂ, ತನ್ನದೇ ಸ್ವಂತ ದೇಶವನ್ನು ನಾಶ ಮಾಡಲು ಅದು ಹೊರಟಿದೆ. 
(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT