ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ಪೇಟೆಯಲ್ಲಿ ಬದಲಾವಣೆಯ ಗಾಳಿ

Last Updated 28 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ದೇಶದ ಹಣಕಾಸು ಮಾರುಕಟ್ಟೆಯಲ್ಲಿ  ಶೀಘ್ರದಲ್ಲಿಯೇ ಎರಡು ಹೊಸ ಷೇರು ವಿನಿಮಯ ಕೇಂದ್ರಗಳು ಆರಂಭಗೊಳ್ಳುವ ನಿರೀಕ್ಷೆ ಇದೆ. ಹೊಸ ಕೇಂದ್ರಗಳು ಕಾರ್ಯಾರಂಭಗೊಂಡರೆ ದೇಶದಲ್ಲಿನ ಷೇರು ವಹಿವಾಟಿನ ಸ್ವರೂಪ ಬದಲಾಗಲಿದ್ದು, ವಹಿವಾಟಿನ ಗಾತ್ರ ಕೂಡ ಹೆಚ್ಚಳಗೊಳ್ಳುವ ಸಾಧ್ಯತೆಗಳು ಇವೆ.

ಷೇರು ಪೇಟೆಗಳ ಆರೋಗ್ಯವು ದೇಶದ ಅರ್ಥ ವ್ಯವಸ್ಥೆ ಜತೆ ನೇರವಾಗಿ ತಳಕು ಹಾಕಿಕೊಂಡಿರುತ್ತದೆ. ಷೇರುಪೇಟೆಯನ್ನು ದೇಶದ ಆರ್ಥಿಕ ಚಟುವಟಿಕೆಗಳ ಮಾನದಂಡವಾಗಿಯೂ ಪರಿಗಣಿಸಲಾಗುತ್ತದೆ. ಅಸ್ತಿತ್ವಕ್ಕೆ ಬರಲಿರುವ ಹೊಸ ಷೇರುಪೇಟೆ ವಿನಿಮಯ ಕೇಂದ್ರಗಳ ವಹಿವಾಟು ಮತ್ತು ಅವು ಸಾಗಲಿರುವ ದಿಕ್ಕಿನ ಬಗ್ಗೆ ಊಹಿಸುವುದು ಈ ಹಂತದಲ್ಲಿ ಸಾಧ್ಯವಾಗಲಾರದು.

ಒಂದು ನೂರು ವರ್ಷಕ್ಕಿಂತ ಹೆಚ್ಚು ಹಳೆಯದಾದ ಮುಂಬೈ ಷೇರುಪೇಟೆ ವಿನಿಮಯ ಕೇಂದ್ರವು (ಬಿಎಸ್‌ಇ), 20 ವರ್ಷಗಳ ಹಿಂದಿನವರೆಗೆ  ದೇಶಿ ಷೇರುಪೇಟೆ ನಿಯಂತ್ರಿಸುವ ಏಕೈಕ ಸಂಸ್ಥೆಯಾಗಿ ಏಕಸ್ವಾಮ್ಯ ಹೊಂದಿತ್ತು. ಖಾಸಗಿ ಕ್ಲಬ್‌ನಂತೆಯೇ ಇದು ಕಾರ್ಯನಿರ್ವಹಿಸುತ್ತಿತ್ತು.

ವಿಶ್ವದ ಹಣಕಾಸು ಮಾರುಕಟ್ಟೆಯ ಜತೆಯಲ್ಲಿ ದೇಶಿ ಬಂಡವಾಳ ಪೇಟೆ ಬದಲಾವಣೆ ಹಾದಿಯಲ್ಲಿ ಸಾಗುತ್ತಿದ್ದರೂ `ಬಿಎಸ್‌ಇ~ ಮಾತ್ರ ಅದಕ್ಕೆ ತಕ್ಕಂತೆ ಹೆಜ್ಜೆ ಹಾಕಲಿಲ್ಲ. ಕೇಂದ್ರ ಸರ್ಕಾರವು `ಬಿಎಸ್‌ಇಗೆ~ ಸಕಲ ಸ್ವಾತಂತ್ರ್ಯ ನೀಡಿದ್ದರೂ ಅದನ್ನು ಸದುಪಯೋಗವನ್ನೂ ಮಾಡಿಕೊಳ್ಳಲಿಲ್ಲ. ಅದು ಹಳೆಯ ವ್ಯವಸ್ಥೆಗೇ ಜೋತು ಬಿದ್ದಿತ್ತು.

ವಂಚನೆ - ಕುತಂತ್ರ ಮತ್ತಿತರ ಪ್ರಶ್ನಾರ್ಹ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡುವ ಭೌತಿಕ ಸ್ವರೂಪದ ವಹಿವಾಟಿನ ಹಳೆ ವಿಧಾನಗಳಿಗೇ ಜೋತು ಬಿದ್ದಿತ್ತು. ಜಾಗತಿಕ ಬೆಳವಣಿಗೆಗಳ ಹೊರತಾಗಿಯೂ ತನ್ನೆಲ್ಲ ವಹಿವಾಟಿನ ಕಂಪ್ಯೂಟರೀಕರಣಕ್ಕೆ ಮನಸ್ಸು ಮಾಡಲೇ ಇಲ್ಲ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರವು, `ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸ್ಥಾಪಿಸುವುದು ಅನಿವಾರ್ಯವಾಯಿತು.

`ಎನ್‌ಎಸ್‌ಇ~ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಬಂಡವಾಳ ಮಾರುಕಟ್ಟೆಯ ಸ್ವರೂಪವೇ ಬದಲಾಯಿತು.ಶೇ 80ಕ್ಕಿಂತ ಷೇರು ವಹಿವಾಟು ಈಗ  `ಎನ್‌ಎಸ್‌ಇ~ಯಲ್ಲಿ ನಡೆಯುತ್ತಿದ್ದು, ಇತರ ಷೇರುಪೇಟೆಗಳಲ್ಲಿ ಸಣ್ಣ ಪ್ರಮಾಣದ ವಹಿವಾಟು ನಡೆಯುತ್ತಿದೆ. ಷೇರು ಸೂಚ್ಯಂಕವೂ ಈಗ ಸಾಕಷ್ಟು ಬದಲಾವಣೆಗಳಿಗೆ ಸಾಕ್ಷಿಯಾಗಿದೆ.

2012ರಲ್ಲಿ ಇನ್ನೂ ಎರಡು ಹೊಸ ಷೇರು ವಿನಿಮಯ ಕೇಂದ್ರಗಳು ಕಾರ್ಯಾರಂಭಗೊಳ್ಳಲಿದ್ದು, ವಹಿವಾಟಿನ ಸ್ವರೂಪ ಇನ್ನಷ್ಟು ಬದಲಾಗುವ ಸಾಧ್ಯತೆಗಳಿವೆ. ಆಹಾರ ಧಾನ್ಯ ಸೇರಿದಂತೆ ವಿವಿಧ ಬಗೆಯ ಪದಾರ್ಥಗಳ ವಿನಿಮಯ ವಹಿವಾಟು ನಡೆಸುವ ಮುಂಚೂಣಿ ಸಂಸ್ಥೆ `ಎಂಸಿಎಕ್ಸ್ ಎಕ್ಸ್‌ಚೇಂಜ್~, ಷೇರುಗಳ ವಹಿವಾಟಿಗೂ ಕಾಲಿಡಲಿದೆ.
 
ಇದುವರೆಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುವುದನ್ನೇ ಮರೆತು ಗಾಢ ನಿದ್ರೆಯಲ್ಲಿದ್ದ ನವದೆಹಲಿ ಷೇರು ವಿನಿಮಯ ಕೇಂದ್ರವು ಕೂಡ ಹಠಾತ್ತಾಗಿ  ಎಚ್ಚೆತ್ತುಕೊಂಡಿದೆ. ಲಂಡನ್ ಷೇರುಪೇಟೆ ಯ ನೆರವಿನಿಂದ ರಾಷ್ಟ್ರ ಮಟ್ಟದಲ್ಲಿ ವಹಿವಾಟು ನಡೆಸಲು ಮುಂದಾಗಿದೆ.

ಈ ಎಲ್ಲ ಬೆಳವಣಿಗೆಗಳನ್ನು ನೋಡಿದರೆ, ನಾವು ಇತಿಹಾಸದ ಪುನರಾವರ್ತನೆಗೆ ಸಾಕ್ಷಿಯಾಗಲಿದ್ದೇವೆಯೇ ಎನ್ನುವ ಅನುಮಾನ ನನಗೆ ಕಾಡುತ್ತಿದೆ. ಈ ಹೊಸ ವಿನಿಮಯ ಕೇಂದ್ರಗಳು, ಅತ್ಯಂತ ವೇಗದ  ವಹಿವಾಟಿಗೆ ಪೂರಕವಾದ ಮತ್ತು ಉತ್ಕೃಷ್ಟಮಯ ಸೌಲಭ್ಯಗಳನ್ನು ಒಳಗೊಂಡಿರಲಿವೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ವೇಗದ ವಹಿವಾಟು ಇವುಗಳ ಮುಖ್ಯ ಆಕರ್ಷಣೆಗಳಾಗಲಿವೆ.

ನಿರೀಕ್ಷೆಯಂತೆ ಈ ಹೊಸ ಸವಾಲು ಎದುರಿಸಲು `ಎನ್‌ಎಸ್‌ಇ~ ಮತ್ತು `ಬಿಎಸ್‌ಇ~ ಸಜ್ಜಾಗುತ್ತಿವೆ. ಹೊಸದಾಗಿ ಕಾರ್ಯಾರಂಭಗೊಳ್ಳಲಿರುವ ಷೇರು ವಿನಿಮಯ ಕೇಂದ್ರಗಳ ಗರಿಷ್ಠ ವೇಗದ ವಹಿವಾಟಿನ ಸಾಧ್ಯತೆಗಳನ್ನು ಅಲ್ಲಗಳೆಯುತ್ತಲೇ ತಮ್ಮ ವಹಿವಾಟಿನ ಸ್ವರೂಪವನ್ನು ಮೇಲ್ದರ್ಜೆಗೆ ಏರಿಸಲು ಸದ್ದಿಲ್ಲದೇ ಅಗತ್ಯ ಕ್ರಮ ಕೈಗೊಂಡಿವೆ.

ಮೂರು ವರ್ಷಗಳ ಹಿಂದೆಯೇ `ಬಿಎಸ್‌ಇ~ ಹೊಸ ನಿರ್ವಹಣಾ ತಂಡದ ಉಸ್ತುವಾರಿಯಲ್ಲಿ  ತನ್ನ ವಹಿವಾಟಿನ ಸ್ವರೂಪ ಬದಲಿಸಿಕೊಳ್ಳಲು ಕ್ರಮ ಕೈಗೊಂಡಿದೆ. ಸಾಕಷ್ಟು ಬದಲಾವಣೆಗಳನ್ನು ಕಾರ್ಯಗತಗೊಳಿಸುವ ನಿರೀಕ್ಷೆಗಳೂ  ಇವೆ. `ಎನ್‌ಎಸ್‌ಇ~ದ  ತಂತ್ರಜ್ಞಾನವೂ ಸಂಸ್ಥೆಯಷ್ಟೇ ಹಳೆಯದಾಗಿದ್ದರೂ ನಿರಂತರವಾಗಿ ಹೊಸತನ ಅಳವಡಿಸಿಕೊಳ್ಳುತ್ತ ಬಂದಿದೆ.

ಈ ಎರಡೂ ಕೇಂದ್ರಗಳ ಪ್ರಯತ್ನಗಳು ಹೊಸ ತಂತ್ರಜ್ಞಾನದ ಜೊತೆ ಸ್ಪರ್ಧಿಸಬಲ್ಲವೆ, ಕಾದು ನೋಡಬೇಕು. ದೆಹಲಿ ಷೇರು ವಿನಿಮಯ ಕೇಂದ್ರವು ಲಂಡನ್ ಷೇರು ಪೇಟೆಯ ಅಂಗಸಂಸ್ಥೆಯಾಗಿರುವ `ಮಿಲೆನಿಯಂ ಐ.ಟಿ~ ಜತೆ ಒಪ್ಪಂದ ಮಾಡಿಕೊಂಡಿದೆ. `ಮಿಲೆನಿಯಂ ಐ.ಟಿ~ಯ ಶಕ್ತಿ ಸಾಮರ್ಥ್ಯಗಳು ಈಗಾಗಲೇ ಪರೀಕ್ಷೆಗೆ ಒಳಪಟ್ಟಿವೆ.  ವಿಶ್ವದಲ್ಲಿನ ಅನೇಕ ಷೇರು ವಿನಿಮಯ ಕೇಂದ್ರಗಳು ಈ ತಂತ್ರಜ್ಞಾನವನ್ನೇ ಬಳಸುತ್ತಿವೆ.

ಷೇರುವಹಿವಾಟಿನಲ್ಲಿ ವೇಗ ಮತ್ತು ತಂತ್ರಜ್ಞಾನದ ಮಹತ್ವ ಅರಿತುಕೊಳ್ಳಬೇಕೆಂದರೆ,  ಇಂತಹ ವಹಿವಾಟಿನಲ್ಲಿ ಗಣಿತ ತುಂಬ ಮಹತ್ವ ಪಡೆದಿರುತ್ತದೆ. ಮಾನವರ ಹಸ್ತಕ್ಷೇಪ ಇಲ್ಲದೇ   ಪರಸ್ಪರ ಸಹಕರಿಸುವ ಕಂಪ್ಯೂಟರ್‌ಗಳು ಕ್ಷಣಾರ್ಧದಲ್ಲಿ ವಹಿವಾಟಿನ ಲೆಕ್ಕಾಚಾರವನ್ನು ಕರಾರುವಾಕ್ಕಾಗಿ ಕಾರ್ಯಗತಗೊಳಿಸುತ್ತವೆ.

ಇಂತಹ ವಹಿವಾಟುಗಳಲ್ಲಿ ಲಾಭದ ಪ್ರಮಾಣ ಕಡಿಮೆ ಇದ್ದರೂ ವಹಿವಾಟಿನ ಗಾತ್ರ ದೊಡ್ಡದಿರುತ್ತದೆ. ಈ ಬಗೆಯ ಬೃಹತ್ ಸ್ವರೂಪದ ವಹಿವಾಟಿನ ಬೆನ್ನೆಲುಬು ಆಗಿ ತಂತ್ರಜ್ಞಾನ ಕಾರ್ಯನಿರ್ವಹಿಸುತ್ತದೆ. ಈ ಕಾರಣಕ್ಕೆ ನಮ್ಮ ದೇಶಿ  ಷೇರು ವಿನಿಮಯ ಕೇಂದ್ರಗಳು ಹೊಸ ಸವಾಲನ್ನು ಎದುರಿಸಲು ಸಜ್ಜಾಗಬೇಕಾಗಿವೆ.

ಇಲ್ಲಿ ಎಚ್ಚರಿಕೆ ತೆಗೆದುಕೊಳ್ಳಬೇಕಾದ ಅಗತ್ಯವೂ ಇರುವುದನ್ನು ಯಾರೊಬ್ಬರೂ ಮರೆಯಬಾರದು.  ಕಂಪ್ಯೂಟರ್‌ಗಳು ಹಾಕುವ ಲೆಕ್ಕಾಚಾರಗಳು ಕೆಲವೊಮ್ಮೆ ಕಗ್ಗಂಟಾಗಿ ಪರಿಣಮಿಸಿ ಕೆಲವೇ ಕೆಲ ನಿಮಿಷಗಳಲ್ಲಿ  ಷೇರುಪೇಟೆಯ ವಹಿವಾಟಿನ ಒಟ್ಟು ಮೌಲ್ಯದಲ್ಲಿ ಕೋಟ್ಯಂತರ ರೂಪಾಯಿಗಳು ಕರಗಿ ಹೋಗುವ ಸಾಧ್ಯತೆಗಳೂ ಇರುತ್ತವೆ. ಷೇರು ವಿನಿಮಯ ಕೇಂದ್ರಗಳು  ಇಂತಹ ಸಂಭವನೀಯ ಗಂಡಾಂತರಗಳ ಬಗ್ಗೆ ಎಚ್ಚರದಿಂದ ಇರಬೇಕು.

ದೇಶಿ ಬಂಡವಾಳ ಮಾರುಕಟ್ಟೆಯಲ್ಲಿ ವಿಧಿಸಲಾಗುವ `ಷೇರು ವಹಿವಾಟು ತೆರಿಗೆಯು (ಎಸ್‌ಟಿಟಿ), ವಹಿವಾಟು ಹೆಚ್ಚಳಕ್ಕೆ ಪ್ರಮುಖ ಅಡ್ಡಿಯಾಗಿ ಪರಿಣಮಿಸಿದೆ. ಕೇಂದ್ರ ಸರ್ಕಾರವು ಈ ತೆರಿಗೆ ಪ್ರಮಾಣ ಕಡಿಮೆ ಮಾಡುವವರೆಗೆ ವಹಿವಾಟಿನ ಪ್ರಮಾಣ ಹೆಚ್ಚಲಾರದು. ಅಷ್ಟೇ ಅಲ್ಲದೆ, ಕಂಪ್ಯೂಟರ್ ಆಧಾರಿತ ಲೆಕ್ಕಾಚಾರಕ್ಕೆ ಸೂಕ್ತ ನ್ಯಾಯವನ್ನೂ ಒದಗಿಸಲಾರದು.

ರಾಷ್ಟ್ರ ಮಟ್ಟದಲ್ಲಿ ನಾಲ್ಕು ಷೇರು ವಿನಿಮಯ ಕೇಂದ್ರಗಳು ಕಾರ್ಯ ನಿರ್ವಹಿಸುವುದರಿಂದ ಸ್ಪರ್ಧೆ ತೀವ್ರಗೊಳ್ಳಲಿದೆ. ಬಂಡವಾಳ ಪೇಟೆಗೆ ಇನ್ನಷ್ಟು ಹೊಸ ಉತ್ಪನ್ನಗಳೂ ಸೇರ್ಪಡೆಗೊಳ್ಳಲಿವೆ. ಹೊಸ ಹೊಸ ವಹಿವಾಟುದಾರರು ನವ ನವೀನ ಉತ್ಪನ್ನಗಳು ಮತ್ತು ಆಕರ್ಷಕ ಬೆಲೆಗಳೊಂದಿಗೆ ಪೇಟೆ ಪ್ರವೇಶಿಸಲಿದ್ದಾರೆ. ಇದರಿಂದ ವಹಿವಾಟಿನ ಸ್ವರೂಪದಲ್ಲಿ ಗಮನಾರ್ಹ ಬದಲಾವಣೆ ಕಾಣಬಹುದು.

ಹೊಸ ಷೇರು ವಿನಿಮಯ ಕೇಂದ್ರಗಳು ತಾವು ಮಾತುಕೊಟ್ಟಂತೆ ನಿಗದಿಯಂತೆ ಕಾರ್ಯಾರಂಭ ಮಾಡಿದರೆ ಮಾರುಕಟ್ಟೆ ವಹಿವಾಟು ಹೆಚ್ಚಳಗೊಳ್ಳಲಿದೆ. ಇದರಿಂದ ವಹಿವಾಟಿನ ವೆಚ್ಚ ಕಡಿಮೆಯಾಗಿ ಹಾಲಿ ಮತ್ತು ಹೊಸ ಹೂಡಿಕೆದಾರರಿಗೆ ಹೆಚ್ಚು ಲಾಭವಾಗಲಿದೆ. ತಂತ್ರಜ್ಞಾನ ಪ್ರಿಯರಾದ ಹೊಸ ತಲೆಮಾರಿನ ಹೊಸ ಹೂಡಿಕೆದಾರರು ತಮ್ಮ ವರವಾನ ವೃದ್ಧಿಸಿಕೊಳ್ಳಲು ಒದಗಿ ಬರುವ ಸದವಕಾಶಕ್ಕಾಗಿ ತೆರೆಮರೆಯಲ್ಲಿ  ಇದ್ದುಕೊಂಡು ಕಾಯುತ್ತಿದ್ದಾರೆ.

ಇತರ ದೇಶಗಳಲ್ಲಿ ಇರುವಂತೆ ನಮ್ಮಲ್ಲೂ ಬೆರಳೆಣಿಕೆಯಷ್ಟು ವಿನಿಮಯ ಕೇಂದ್ರಗಳ ವಹಿವಾಟಿಗೆ ಮಾತ್ರ ಅವಕಾಶ ಇದೆ.ಭಾರತೀಯ ಷೇರು ನಿಯಂತ್ರಣ ಮಂಡಳಿಯು (ಸೆಬಿ) 1990ರಲ್ಲಿ ಅಸ್ತಿತ್ವಕ್ಕೆ ಬಂದ ದಿನದಿಂದ, ದೇಶಿ ಷೇರು ಪೇಟೆಯ ಬೆಳವಣಿಗೆಗೆ ಸಾಕಷ್ಟು ಶ್ರಮಿಸಿದೆ. ಈ ನಿಯಂತ್ರಣಾ ವ್ಯವಸ್ಥೆ ಇರುವ ಕಾರಣಕ್ಕೇನೆ, ದೇಶಿ ಷೇರುಪೇಟೆ ಸಾಕಷ್ಟು ಪ್ರಬುದ್ಧತೆಯನ್ನೂ ಮೈಗೂಡಿಸಿಕೊಂಡಿದೆ.

ಸದ್ಯದ ಬೆಳವಣಿಗೆಗಳೂ ಸರಿಯಾದ ದಿಕ್ಕಿನಲ್ಲಿಯೇ ಸಾಗುತ್ತಿವೆ. ಇದಕ್ಕೆ ಪೂರಕವಾಗಿ ಹಣಕಾಸು ಸಚಿವಾಲಯ, `ಸೆಬಿ~, ಹೂಡಿಕೆದಾರರ ಹಿತಾಸಕ್ತಿ ರಕ್ಷಿಸಲು, ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಬೆಲೆ ನಿಗದಿ  ಮತ್ತು ಮಾಹಿತಿ ಪ್ರಸಾರದಲ್ಲಿ ಇನ್ನಷ್ಟು ಪಾರದರ್ಶಕತೆ ಅಳವಡಿಕೆಗೆ ಕಾರ್ಯಪ್ರವೃತ್ತವಾಗಬೇಕಾಗಿದೆ.

ಬಂಡವಾಳ ಹೂಡಿಕೆಯ ಹೊಸ, ಹೊಸ ಅವಕಾಶಗಳಿಗಾಗಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ವಿವಿಧ ದೇಶಗಳಲ್ಲಿನ ಹೂಡಿಕೆಯಿಂದ ಬರುವ ಲಾಭದ ಬಗ್ಗೆ ನಿರಂತರವಾಗಿ ಮೌಲ್ಯಮಾಪನ ಮಾಡುತ್ತಲೇ ಇರುತ್ತಾರೆ. ಷೇರುಪೇಟೆಯ ಆಯ್ಕೆ ಪ್ರಕ್ರಿಯೆಯಲ್ಲಿ, ಬಂಡವಾಳ ಮಾರುಕಟ್ಟೆಯ ಆಳ - ವಿಸ್ತಾರ, ಸಾಮರ್ಥ್ಯವೇ ಮುಖ್ಯ ಅಳತೆಗೋಲು ಆಗಿರುತ್ತದೆ.

ಸದ್ಯಕ್ಕೆ ದೇಶದಲ್ಲಿ ನಡೆಯುತ್ತಿರುವ ಬದಲಾವಣೆಯ ಗಾಳಿಯು, ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್‌ಐಐ) ಮತ್ತು ವಿದೇಶಿ ನೇರ ಬಂಡವಾಳ ಹೂಡಿಕೆಯ  (ಎಫ್‌ಡಿಐ) ಆದ್ಯತಾ ಗುರಿಯಾಗಿ ಭಾರತದ ಸ್ಥಾನಮಾನವನ್ನು ಎತ್ತರಕ್ಕೆ ಏರಿಸುವಲ್ಲಿ ಖಂಡಿತವಾಗಿಯೂ ನೆರವಾಗಲಿವೆ.

ಇದರಿಂದ ಲಕ್ಷಾಂತರ ಹೂಡಿಕೆದಾರರಿಗೂ ಲಾಭ ಆಗುವ ನಿರೀಕ್ಷೆ ಇದೆ. ಹೀಗಾಗಿ ನಾವೆಲ್ಲ ಈ ಬೆಳವಣಿಗೆಗಳನ್ನು ಸ್ವಾಗತಿಸುತ್ತ, ಇದರಿಂದ ದೇಶಿ ಬಂಡವಾಳ ಮಾರುಕಟ್ಟೆಗೆ, ಸಾಮಾನ್ಯ ಹೂಡಿಕೆದಾರರಿಗೆ ಪ್ರಯೋಜನ ತರಲಿ ಎಂದೇ ಶುಭ ಹಾರೈಸೋಣ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT