ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಸಂಸ್ಕೃತಿ ಮಾಲೆಗೆ ನಾಡಾಡಿಯ ಹೂವು

ಅಕ್ಷರ ಗಾತ್ರ

ಇಟಲಿಯ ಯಾವುದೋ ನದಿಯ ತೀರವಿರಬೇಕು. ಅಲ್ಲಿ ವಿವಿಧ ರೀತಿಯ ಸೆಟ್ಟಿಂಗ್‌ಗಳನ್ನು ಇರಿಸಲಾಗಿತ್ತು. ಅಲ್ಲಿದ್ದ ನಿರ್ದೇಶಕರೊಬ್ಬರ ಪ್ರಕಾರ ಯಕ್ಷಗಾನದ ವಿವಿಧ ದೃಶ್ಯಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ನಿರ್ಮಿಸಿದ ರಂಗವೇದಿಕೆಗಳಲ್ಲಿ ಕಾಣಿಸುವುದು ಉದ್ದೇಶವಾಗಿತ್ತು. ಅಲ್ಲಿದ್ದ ಮಾಯಮಂಟಪಗಳಂಥ ಸಂಯೋಜನೆಗಳನ್ನು ಕಲಾವಿದರಾದ ನಾವೆಲ್ಲ ಬೆರಗಿನಿಂದ ನೋಡುತ್ತಿದ್ದೆವು. ಅಲ್ಲಿನ ನಿರ್ದೇಶಕರ ಸೃಜನಶೀಲ ಯೋಚನೆಗಳ ಬಗ್ಗೆ ನಾವು ನಾವೇ ಮಾತನಾಡಿಕೊಳ್ಳುತ್ತಿದ್ದೆವು. ನನಗೇಕೋ ಅನ್ನಿಸತೊಡಗಿತು- ಸಾಂಪ್ರದಾಯಿಕ ಯಕ್ಷಗಾನಕ್ಕೆಲ್ಲ ಇದು ಎಷ್ಟರ ಮಟ್ಟಿಗೆ ಒಗ್ಗುತ್ತದೆ; ಅದರಲ್ಲೂ ಶಿವರಾಮ ಕಾರಂತರಿಗೆ ಇದು ಒಪ್ಪುತ್ತದೆಯೋ ಇಲ್ಲವೊ...

ಅಷ್ಟರಲ್ಲಿ ಶಿವರಾಮ ಕಾರಂತರ ಪ್ರವೇಶವಾಯಿತು, ಎರಡು ಕೈಗಳನ್ನು ಬೆನ್ನ ಹಿಂದೆ ಬೆಸೆದ ಎಂದಿನ ನಡೆಯಲ್ಲಿ. ಜೊತೆಯಲ್ಲಿ ಪ್ರೊಫೆಸರ್ ಕು.ಶಿ. ಹರಿದಾಸ ಭಟ್ಟರು. ಗುಸುಗುಸು ಮಾತನಾಡಿಕೊಳ್ಳುತ್ತಿದ್ದ ನಮ್ಮ ನಡುವೆ ಮೌನ ಆವರಿಸಿತು. ಅಲ್ಲಿನ ನಿರ್ದೇಶಕರು ಕಾರಂತರಿಗೆ ಒಂದೊಂದನ್ನೇ ವಿವರಿಸುತ್ತ ಹೋದರು. ಅದೇನು ವಿವರಿಸಿದರೊ! ದೂರ ನಿಂತ ನಮಗಂತೂ ಕೇಳುತ್ತಿರಲಿಲ್ಲ. ಕೇಳಿದರೂ ನನ್ನಂಥವನಿಗೆ ಇಂಗ್ಲಿಷ್ ಅರ್ಥವಾಗುತ್ತಿರಲಿಲ್ಲವಲ್ಲ.

ಆ ಮೇಲೆ ಎಲ್ಲವೂ ಗೊತ್ತಾಯಿತು... ಜಲಕೇಳಿ ಒಂದೆಡೆ, ಯುದ್ಧ ಒಂದೆಡೆ, ಸ್ವಯಂವರ ಒಂದೆಡೆ... ಹೀಗೆ ಬೇರೆ ಬೇರೆ ರಂಗವೇದಿಕೆಗಳಲ್ಲಿ ಒಂದೇ ಪ್ರಸಂಗ ಪ್ರದರ್ಶನಗೊಳ್ಳುವುದು ಶಿವರಾಮ ಕಾರಂತರಿಗೆ ಸರಿಯೆನ್ನಿಸಲಿಲ್ಲವಂತೆ. `ಇವತ್ತು ನಾವು ನಿಮ್ಮೆದುರು ಪ್ರದರ್ಶಿಸುವುದು ಸಾಂಪ್ರದಾಯಿಕ ಶೈಲಿಯ ಯಕ್ಷಗಾನವನ್ನು. ಒಂದೇ ರಂಗಸ್ಥಳದಲ್ಲಿ ಎಲ್ಲವೂ ಆಗಬೇಕು. ಹೀಗೆ ಬೇರೆ ಬೇರೆ ಕಡೆ ಪ್ರದರ್ಶಿಸಿದರೆ ನೀವು ಯಕ್ಷಗಾನದ ಪಾರಂಪರಿಕ ಸೊಗಸನ್ನು ಗೌರವಿಸಿದ ಹಾಗಾಗುವುದಿಲ್ಲ... ಒಂದೋ ಒಪ್ಪಿಕೊಳ್ಳಿ. ಇಲ್ಲವೇ ಪ್ರದರ್ಶನವನ್ನೇ ರದ್ದುಪಡಿಸಿ'.
ಅದು ಇಟಲಿಯೇ ಇರಲಿ, ಸಹ್ಯಾದ್ರಿಯೇ ಇರಲಿ, ಕಾರಂತರದ್ದು ಮಾತು ಮಾತೇ. ಒಂದಿನಿತೂ ದಾಕ್ಷಿಣ್ಯವಿಲ್ಲ. ಕೊನೆಗೂ ಅಲ್ಲಿನ ನಿರ್ದೇಶಕರು ಕಾರಂತರಂದದ್ದಕ್ಕೆ ಮಣಿದು ಒಂದೇ ರಂಗಸ್ಥಳದಲ್ಲಿ ಪ್ರದರ್ಶನ ಏರ್ಪಡಿಸಲು ಒಪ್ಪಿಕೊಂಡರು. ಹಾಗೆ ಒಪ್ಪದಿದ್ದರೆ ಕಾರಂತರು ತಂಡ ಸಮೇತ ಅಂದೇ ಭಾರತಕ್ಕೆ ಹೊರಡಲೂ ಸಿದ್ಧವಾಗುತ್ತಿದ್ದರೇನೋ! ಅವರ ನಿಷ್ಠುರ ಸ್ವಭಾವವನ್ನು ಮೊದಲ ಬಾರಿಗೆ ಕಂಡದ್ದು ಅಲ್ಲಿಯೇ. ಹಾಗಾಗಿ, ನನಗೆ ಅವರ ಬಗೆಗಿನ ಭಯ ಇನ್ನಷ್ಟು ಹೆಚ್ಚಾಯಿತು.

ಮರುವರ್ಷವೇ ಅಂದರೆ 1983ರಲ್ಲಿ ಮತ್ತೊಂದು ವಿದೇಶ ಪ್ರವಾಸಕ್ಕೆ ತಂಡ ಸಿದ್ಧಗೊಂಡಿತು. ಈ ಸಲ ಲಂಡನ್‌ಗೆ ತೆರಳಿ ಅಲ್ಲಿಂದ ರಷ್ಯಾಕ್ಕೆ ಬರುವುದು ಎಂದೆಲ್ಲ ಯೋಜನೆ ಸಿದ್ಧಗೊಂಡಿತ್ತು. `ಅಭಿಮನ್ಯು ಕಾಳಗ' ಮತ್ತು `ಗಯಚರಿತ್ರೆ' ಪ್ರಸಂಗಗಳು. `ಹುಡುಗ ಅಡ್ಡಿಯಲ್ಲ' ಎಂಬ ಕಾರಣಕ್ಕೆ ನನಗೆ ಆ ಪ್ರವಾಸದಲ್ಲಿಯೂ ಅವಕಾಶ ಸಿಕ್ಕಿತ್ತು. ನನ್ನದು ಎಂದಿನಂತೆ ವೇಷದ ಸಾಮಾನುಗಳನ್ನು ನೇರ್ಪುಗೊಳಿಸುವುದು, ಪೆಟ್ಟಿಗೆ ಹೊರುವುದು, ತೆರೆ ಹಿಡಿಯುವುದು ಇತ್ಯಾದಿ ಕೆಲಸಗಳು. ಅಗತ್ಯ ಬಿದ್ದರೆ ಹಿಮ್ಮೇಳಕ್ಕೂ ಮುಮ್ಮೇಳಕ್ಕೂ ಸೈ. ಅಂತೂ ಮೂರನೆಯ ಬಾರಿಗೆ ನಾನು ಜಾಗತಿಕ ಮಟ್ಟದ ತಿರುಗಾಟಕ್ಕೆ ಹೊರಟು ನಿಂತಿದ್ದೆ...

........................................

`ಸಾಕು ಅನ್ನಿಸುತ್ತಿದೆ ಮಹಾರಾಯ ಈ ತಿರುಗಾಟ...' ಎಂದ
ರಾಮ ನಾರಿ.

`ನನಗೂ ಹಾಗನ್ನಿಸುತ್ತಿದೆ' ಎಂದೆ ನಾನು.

ಚೌಕಿಯ ಮೂಲೆಯಲ್ಲಿ ನಮ್ಮದು ಆಪ್ತ ಸಲ್ಲಾಪ. ಸಂಜೆಯ ಹೊತ್ತು ಪೆಟ್ಟಿಗೆಗಳನ್ನು ಸಾಲಾಗಿ ಇರಿಸಿದ್ದ ಚೌಕಿಯ ಮೂಲೆಯಲ್ಲಿ ಒರಗಿಕೊಂಡು ಇಬ್ಬರೂ ಗುಸುಗುಸು ಮಾತನಾಡುತ್ತಿದ್ದೆವು. ಆ ರಾತ್ರಿ ಹೇಗೂ ಕೋಡಂಗಿ ಕುಣಿದೆವು. ಎಂದಿನಂತೆ ನಮ್ಮ ಪಡೆಗಳೂ ರಂಗಕ್ಕೆ ಹೋಗಿಬಂದವು. ಒಂದೆಡೆ ಗುರು ವೀರಭದ್ರ ನಾಯಕರ ಭಯ, ಮತ್ತೊಂದೆಡೆ ರಂಗದ ಮೇಲೆ ಹಿರಿಯ ಕಲಾವಿದರ ಉಪಟಳ, ನಿದ್ದೆಯಿಲ್ಲದ ರಾತ್ರಿ ಹಗಲುಗಳ ದುಡಿತ, ಊರಿಂದ ಊರಿಗೆ ತೆರಳುವ ಜಂಗಮ ಬದುಕು! ಆವರೆಗೂ ನಾಡಾಡಿಯಂತೆ ಓಡಾಡುತ್ತಿದ್ದ ನನಗೆ ಮೇಳದ ಬದುಕು ಬಂಧನದಂತೆ ತೋರತೊಡಗಿತ್ತು. ಬೆಳಿಗ್ಗೆ ಎಲ್ಲ ಸಾಮಾನುಗಳನ್ನು ಲಾರಿಗೆ ಹತ್ತಿಸುವಾಗ ಗುರುಗಳಾದ ವೀರಭದ್ರ ನಾಯಕರಿಗೆ ಕಾಣಸಿಕ್ಕದಂತೆ ತಲೆಮರೆಸಿಕೊಂಡು ಓಡಾಡಿದೆ. ಮೇಳದಿಂದ ಓಡಿಹೋಗುವುದರ ಪೂರ್ವಸೂಚನೆ ಇದು!

ಕುಂದಾಪುರದ ಕಡೆಗೆ ಮರುದಿನದ ಕ್ಯಾಂಪು. ನಮ್ಮ ಲಾರಿ ಸಾಸ್ತಾನದ ಬಳಿ ಏತಕ್ಕೋ ನಿಂತಿತು. `ಇಳಿಯೋಣವಾ?' ಎಂದೆ ಮೆಲ್ಲನೆ ರಾಮನಾರಿಯೊಡನೆ. `ಸರಿ' ಎಂದವನೇ ಅವನು ತನ್ನ ಮೂಟೆಯೊಂದಿಗೆ ಇಳಿದೇ ಬಿಟ್ಟ. ನಾನೂ ಜಿಗಿದೆ. ಬೆಳಗ್ಗಿನ ಹೊತ್ತು. ಎಳೆಬಿಸಿಲಿನ ಶಾಖಕ್ಕೆ ಲಾರಿಯಲ್ಲಿದ್ದವರೆಲ್ಲ ಹದ ನಿದ್ರೆಗೆ ಜಾರಿದ್ದರು. ಎಚ್ಚರವಿದ್ದ ಡ್ರೈವರ್‌ಗೆ ನಾವು ಇಳಿದದ್ದು ಗೊತ್ತಾಗಲಿಲ್ಲ.
ಮತ್ತೆ ಮರಳಿ ಹೋಗಲೇ ಇಲ್ಲ... ಮೇಳಕ್ಕೆ.

ಭಯದಿಂದ ಗುರು ವೀರಭದ್ರ ನಾಯಕರಿಗೂ ಸಿಗಲಿಲ್ಲ.

ನಾನು ಎಂದಿನಂತೆ ಗುಂಡಿಬೈಲು ನಾರಾಯಣ ಶೆಟ್ಟರ ಮನೆಗೆ ಮರಳಿದೆ. ಹಗಲು, ಹೊಲದ ಕೆಲಸ, ಮನೆಗೆಲಸ. ರಾತ್ರಿ ಹವ್ಯಾಸಿ ತಂಡದ ಆಟಗಳು. ಬಂಧನದ ಭಯವಿಲ್ಲ.

ಅದಾಗಿ ಕೆಲವು ದೀಪಾವಳಿಗಳು ಬೆಳಗಿದವು! ಮೇಳದ ಕಲಾವಿದರ ಸವಾಲಿನ ಬದುಕನ್ನು ನಾನು ದಟ್ಟವಾಗಿ ಅನುಭವಿಸಿದುದರಿಂದಲೇ ಮುಂದೆಯೂ ಅವರೊಂದಿಗೆ ಬಹಳ ಸೂಕ್ಷ್ಮವಾಗಿ ವ್ಯವಹರಿಸುತ್ತಿದ್ದೆ. ನಾನು ಅತಿಥಿ ಕಲಾವಿದನಾಗಿ ಮೇಳವೊಂದಕ್ಕೆ ಹೋದಾಗ, `ಅವನಿಗೆ ಪ್ರಸಾದ ಕೊಡಬೇಡಿ' ಎಂದು ಮೇಳದ ಹಿರಿಯ ಕಲಾವಿದನೊಬ್ಬ ಆಕ್ಷೇಪಿಸಿದಾಗ, ಅದಕ್ಕೆ ನನ್ನ ಸಾಮಾಜಿಕ ಹಿನ್ನೆಲೆ ಕಾರಣವೆಂದು ಭಾವಿಸುವುದಕ್ಕಿಂತಲೂ ಕಾಲಪ್ರವಾಹದಲ್ಲಿ ಹಿಮ್ಮುಖವಾಗಿ ಚಲಿಸುತ್ತಿರುವ ಆ ಕಲಾವಿದನ ಅಜ್ಞಾನದ ಬಗ್ಗೆ ಕನಿಕರ ಮೂಡಿತ್ತು.
 
ಒಮ್ಮೆ ಕುಂದಾಪುರದಲ್ಲಿ ಗುರು ವೀರಭದ್ರ ನಾಯಕರಿಗೆ ಸನ್ಮಾನವಿತ್ತು. ಅವರು ಅನಾರೋಗ್ಯದಿಂದ ವೃತ್ತಿಪರ ತಿರುಗಾಟಕ್ಕೆ ವಿದಾಯ ಹೇಳಿದ್ದರು. ಪಾರ್ಶ್ವವಾಯು ತೊಂದರೆಯಿಂದಾಗಿ ಮನೆಯಲ್ಲಿಯೇ ಇದ್ದರು. ಮಂಗಳೂರಿನಲ್ಲಿ ಅವರ ತಮ್ಮನ ಮಗ ಅವರನ್ನು ನೋಡಿಕೊಳ್ಳುತ್ತಿದ್ದರಂತೆ. ಅವರೇ ಕುಂದಾಪುರಕ್ಕೆ ಸನ್ಮಾನಕ್ಕೆಂದು ಗುರುಗಳನ್ನು ಕರೆದುಕೊಂಡು ಬಂದಿದ್ದರು.

ಸನ್ಮಾನದ ಬಳಿಕ ಅಲ್ಲಿ ನಡೆಯಲಿರುವ ಆಟಕ್ಕೆ ನನ್ನನ್ನು ಚೆಂಡೆವಾದಕನನ್ನಾಗಿ ಆಹ್ವಾನಿಸಿದ್ದು ಕೇವಲ ಆಕಸ್ಮಿಕ. ಅಲ್ಲಿ ವೀರಭದ್ರ ನಾಯಕರಿದ್ದಾರೆ ಎಂದು ತಿಳಿದು ನನಗೇಕೋ ಮನಸ್ಸಿನ ತುಂಬ ಅಪರಾಧಿ ಭಾವ ಕಾಡುತ್ತಿತ್ತು. ಗುರುಗಳನ್ನು ಹೇಗೆ ಎದುರಿಸುವುದು? ಬೈದೇ ಬಿಟ್ಟಾರು ಎಂಬ ಆತಂಕ ಒಳಗೊಳಗೆ. ಅಂದು ಮೈರಾವಣ ಕಾಳಗ ಪ್ರಸಂಗ. ಗುರುಗಳದ್ದೇ ಮೈರಾವಣ. ಚೌಕಿಯಲ್ಲಿ ಬಣ್ಣ ಹಾಕುತ್ತಿದ್ದ ಅವರ ಬಳಿಗೆ ಹೋಗಿ ವಂದಿಸಿ ನಿಂತೆ. ತಲೆ ಎತ್ತಿ ಒಮ್ಮೆ ದಿಟ್ಟಿಸಿದರು. `ಸಂಜೀವನಾ... ಹೇಗಿದ್ದಿ ಮಗಾ?' ಎಂದು ವಿಚಾರಿಸಿದರು. ನಾನು ಸುಮ್ಮನೆ ನಿಂತಿದ್ದೆ. ಮೇಳ ಬಿಟ್ಟದ್ದೇ ಒಳ್ಳೆಯದಾಯಿತು ಎಂದು ಹೇಳಿ `ಇವತ್ತೇನು ನಿನ್ನದು...' ಎಂದು ಕೇಳಿದರು. `ಚೆಂಡೆ' ಎಂದೆ. `ಕೊನೆಗೂ ನನ್ನ ಶಿಷ್ಯನ ಚೆಂಡೆಗೆ ಕುಣಿಯುವ ಭಾಗ್ಯ ಬಂತು ನೋಡು. ಅಂದು ನಾನು ನಿನ್ನನ್ನು ಕುಣಿಸಿದೆ. ಇವತ್ತು ನಿನ್ನ ನುಡಿತಗಳಿಗೆ ನಾನು ಕುಣಿಯಬೇಕು...' ಎನ್ನುವ ಅವರ ಧ್ವನಿ ಕಂಪಿಸುತ್ತಿರುವುದನ್ನು ನೋಡಿ ನನ್ನ ಕಣ್ಣಲ್ಲಿ ನೀರು ಬಂತು. ಅಕ್ಷರಶಃ ಅತ್ತು ಬಿಟ್ಟೆ. ಕಾಡನ್ನಿಡೀ ನಡುಗಿಸಿದ ಸಿಂಹ ಮಾಗಿ ಮರದೆಡೆಯಲ್ಲಿ ಹಳೆಯದನ್ನು ನೆನೆಯುತ್ತ ವಿರಮಿಸುತ್ತಿರುವಂತೆ ತೋರುತ್ತಿತ್ತು. ಆ ದಿನ ಅವರು ಹೆಚ್ಚೇನೂ ಕುಣಿಯಲಿಲ್ಲ.

ಸಂವಹನ - ಸಂಪರ್ಕ ಬೆಳೆಯದಿದ್ದ ಕಾಲ. 1981ರ ಜನವರಿಯಲ್ಲಿ ಅವರು ನಿಧನರಾದ ವಾರ್ತೆ ನನಗೆ ಗೊತ್ತಾದದ್ದು ಒಂದು ತಿಂಗಳ ಬಳಿಕ. ಬದುಕಿನ ಮಂಡಲ ಕುಣಿತದ ಸುತ್ತನ್ನು ಮುಗಿಸಿದಂತೆ ಅವರು ನಿರ್ಗಮಿಸಿದ್ದರು. ಹಿನ್ನೆಲೆಯಲ್ಲಿ ಮಾತ್ರ ನಿರಂತರವಾಗಿ ನೆನಪಿನ ಚೆಂಡೆಧ್ವನಿ ಮೊರೆಯುತ್ತಲೇ ಇದೆ.

.........................................

`ಚೆಂಡೆ ಧ್ವನಿ ಮೊಳಗಲೇಬೇಕು... ಯಕ್ಷಗಾನದ ವಿಶೇಷ ವಾದ್ಯವಲ್ಲವೆ, ಅದು...' ಎಂದಿದ್ದರು ಮಾಯಾ ರಾವ್. ಹಾಗಾಗಿ, ಪಶ್ಚಿಮ ಜರ್ಮನಿಯಿಂದ ತೊಡಗಿ ಆಫ್ರಿಕಾದವರೆಗಿನ ಎಲ್ಲ ಪ್ರದರ್ಶನಗಳಲ್ಲಿ ಚೆಂಡೆಯನ್ನು ನುಡಿಸುತ್ತಿದ್ದೆ.

ನಮ್ಮ ತಂಡದಲ್ಲಿ ಒಡಿಸ್ಸಿ, ಭರತನಾಟ್ಯ, ಮಣಿಪುರಿ, ಕಥಕ್, ಕೂಚಿಪುಡಿ, ಮೋಹಿನಿಯಾಟ್ಟಂ ಪ್ರಕಾರಗಳ ಕಲಾವಿದರಿದ್ದರು. ಕೇಂದ್ರ ಸಂಗೀತ-ನಾಟಕ ಅಕಾಡೆಮಿಯ ಆಶ್ರಯದಲ್ಲಿ ಭಾರತೀಯ ಕಲಾಪ್ರಕಾರಗಳ ಈ ಸಂಯೋಜಿತ ಕಾರ್ಯಕ್ರಮದ `ಮೇಳ' ಪ್ರಪಂಚ ಪರ್ಯಟನೆಗೆ ಹೊರಟಿತ್ತು. ಎಲ್ಲ ಪ್ರದರ್ಶನಗಳಲ್ಲಿ ಯಕ್ಷಗಾನಕ್ಕೆಂದು ಅರ್ಧ ಗಂಟೆ ಮೀಸಲಿರಿಸಲಾಗಿತ್ತು. ಪ್ರಸಂಗ ಬಬ್ರುವಾಹನ ಕಾಳಗ. ನಾನೇ ಬಬ್ರುವಾಹನ. ಎಳ್ಳಂಪಳ್ಳಿ ವಿಠಲ ಆಚಾರ್ ಅವರೇ ಅರ್ಜುನ. ಭಾಗವತಿಕೆ ಕೆರೆಮನೆ ಮಹಾಬಲ ಹೆಗಡೆಯವರದ್ದು. ಮದ್ದಲೆಗೆ ಬಿರ್ತಿ ಬಾಲಕೃಷ್ಣರವರು. ಆರಂಭ-ಮುಕ್ತಾಯಗಳಲ್ಲಿ ಮತ್ತು ನನ್ನ ವೇಷ ರಂಗಸ್ಥಳದಲ್ಲಿಲ್ಲದಿರುವಾಗ ಚೆಂಡೆ ನುಡಿಸುತ್ತಿದ್ದೆ. ನನ್ನ ವೇಷ ರಂಗಸ್ಥಳ ಪ್ರವೇಶವಾದರೆ ಚೆಂಡೆ ಮೌನವಾಗುತ್ತಿತ್ತು. ಪ್ರದರ್ಶನಕ್ಕೆ ಮದ್ದಲೆಯಷ್ಟೇ ಸಾಕಾಗುತ್ತಿತ್ತಾದರೂ ಚೆಂಡೆ ಎಂಬ ವಾದ್ಯ ಪ್ರಕಾರವೂ ಇದೆ ಎಂಬುದು ಪ್ರೇಕ್ಷಕರಿಗೆ ತಿಳಿಯಲಿ ಎಂಬ ಕಾರಣಕ್ಕಾಗಿ ನಮ್ಮ ತಂಡದ ನಿರ್ದೇಶಕಿಯಾಗಿರುವ ಮಾಯಾ ರಾವ್ ಅವರು, `ಸಾಧ್ಯವಾದಾಗ ಚೆಂಡೆ ನುಡಿಸು' ಎಂದು ಸೂಚಿಸಿದ್ದರು.

ಪಶ್ಚಿಮ ಜರ್ಮನಿಯಿಂದ ನೆದರ್‌ಲೆಂಡ್‌ಗೆ ಹಾರಿ ಅಲ್ಲಿಂದ ಫ್ರಾನ್ಸ್‌ಗೆ. ಅಲ್ಲಿಂದ ಇಂಗ್ಲೆಂಡ್ ಮೂಲಕ ಈಜಿಪ್ತ್‌ಗೆ ಬಂದು ಮರಳಿ ಭಾರತಕ್ಕೆ. ಈಜಿಪ್ತ್‌ನಲ್ಲಿ ಬೃಹತ್ ಮಮ್ಮಿಗಳನ್ನು ನೋಡಿದ್ದೊಂದು ನನಗೆ ಚೆನ್ನಾಗಿ ನೆನಪಿದೆ. ಉಳಿದಂತೆ ಯಾವ ಸೂಕ್ಷ್ಮ ಸಂಗತಿಗಳೂ ಸರಿಯಾಗಿ ಸ್ಮೃತಿಯಲ್ಲಿಲ್ಲ. ಪ್ರವಾಸ ಅಶ್ವಮೇಧದ ದಿಗ್ವಿಜಯದಂತೆ ಸಾಗಿತು. ಹೋದಲ್ಲೆಲ್ಲ ನನ್ನ ಬಬ್ರುವಾಹನ ನೋಟಕರ ಮನದಲ್ಲಿ ನಿರಂತರ ಜಿಗಿಯುವಂತೆ ಮಾಡಿದೆ!

ಈ ಪ್ರವಾಸದಲ್ಲಿ ನಾನು ಮುಖ್ಯವಾಗಿ ಕಲಿತದ್ದು ಯಾವುದೇ ಕಲೆಯ ಗಡಿರೇಖೆಗಳನ್ನು ವಿಸ್ತರಿಸಿ ಮತ್ತೊಂದರ ಜೊತೆಗೆ ಹೊಂದಿಕೊಳ್ಳುವ ಕೌಶಲ. ಕಲೆಗಳನ್ನು ಹೆಣೆದು ಭಾರತೀಯ ಬಹುಸಂಸ್ಕೃತಿಯ ಮಾಲೆ ಕಟ್ಟುವ ಮನಸ್ಸನ್ನು ಕೊಟ್ಟ ಮಾಯಾ ರಾವ್ ಅವರನ್ನು ಎಷ್ಟು ನೆನೆದರೂ ಸಾಲದು. ನಮ್ಮ ತಂಡದಲ್ಲೊಂದು ವಿಶೇಷ ಕಲಾಪವಿತ್ತು. ಬಹು ವಾದ್ಯಗಳ ವಾದನ. ತಬಲಾ, ಮೃದಂಗ, ಡ್ರಮ್ಸ... ಜೊತೆಗೆ ಮದ್ದಲೆ, ಚೆಂಡೆ. ಬಹುಶಃ ಒಂಬತ್ತು ಬಗೆಯ ವಾದ್ಯಗಳು ಅಲ್ಲಿದ್ದವು. ಎಲ್ಲ ವಾದ್ಯಗಳ ನುಡಿತ ಮುಗಿದು ನನ್ನ ಸರದಿ ಬಂದಾಗ ಚೆಂಡೆಯ ಕೋಲುಗಳನ್ನು ಎತ್ತಿಕೊಳ್ಳುತ್ತಿದ್ದೆ. ಕೈ ನಡುಗುತ್ತಿತ್ತು. ಯಕ್ಷಗಾನಕ್ಕಲ್ಲದೆ ಬೇರೆ ಸಂದರ್ಭಗಳಲ್ಲಿ ಚೆಂಡೆ ನುಡಿಸಿ ಅನುಭವವಿಲ್ಲ. ಆ ಸರಣಿ ವಾದ್ಯನುಡಿತದ ತಾಳಗಳಿಗೆ ಹೊಂದಿಕೊಳ್ಳುವಾಗ ಮೊದಲೆರಡು ಬಾರಿ ತಪ್ಪಿದೆ. ಜೊತೆಗಿದ್ದವರು ತಿದ್ದಿದರು. ಹೊಂದಿಕೊಂಡೆ. ಹೋದಲ್ಲೆಲ್ಲ ಈ ವಿಶೇಷ ಬಹುವಾದ್ಯ ಪ್ರದರ್ಶನವನ್ನು ಏರ್ಪಡಿಸಲಾಗುತ್ತಿತ್ತು.

ಮರಳಿ ದೆಹಲಿಯಲ್ಲಿಳಿದು, ಮಾಯಾ ರಾವ್ ಅವರಿಗೆ ನಮಸ್ಕರಿಸಿ ಊರಿನ ದಾರಿ ಹಿಡಿದೆ. ಮಾಯಾ ರಾವ್ 38,000 ರೂಪಾಯಿಗಳನ್ನು ಗೌರವಧನವಾಗಿ ಕೊಟ್ಟಿದ್ದರು. ಬಹುಶಃ ಎಲ್ಲರಿಗೂ ಸಮಾನ ಮೊತ್ತದ ಗೌರವ ಧನ. 1982ರ ದಿನಗಳಲ್ಲವೆ? 38,000 ರೂಪಾಯಿಗಳ ದೊಡ್ಡ ಮೊತ್ತವನ್ನು ಕೈಯಲ್ಲಿ ಹಿಡಿದಾಗ ಬೆಚ್ಚಿಬಿದ್ದೆ. ಅಷ್ಟು ದೊಡ್ಡ ಮೊತ್ತವನ್ನು ಕನಸಿನಲ್ಲಿಯೂ ಆವರೆಗೆ ಕಂಡವನಲ್ಲ ನಾನು.

ದುಡ್ಡಿನ ಹಮ್ಮಿಣಿಯನ್ನು ಮೆಲ್ಲನೆ ತಡವಿದೆ. ಆ ಕ್ಷಣದಲ್ಲಿ `ಹಳೆಯ ಮನೆಯನ್ನು ಕೆಡವಿ ಹೊಸದೊಂದು ಹಂಚಿನ ಮನೆಯನ್ನು ಕಟ್ಟಬೇಕು...' ಎಂಬ ಆಸೆಯ ಗುಬ್ಬಚ್ಚಿಯ ಪುಕ್ಕಗಳು ಅರಳಲಾರಂಭಿಸಿದವು.

......................................................

ಮನೆಯ ಮೂಲೆಯಲ್ಲಿ ಗೂಡು ಕಟ್ಟಿದ್ದ ಗುಬ್ಬಚ್ಚಿ ರಿವ್ವನೆ ಹಾರಿತು. `ಮನೆಗೆ ಬೆಂಕಿ ಬಿದ್ದಿದೆ... ಅಯ್ಯ್!' ಎಂದು ಕೂಗುತ್ತ ಮನೆಯೊಳಗಿದ್ದವರೆಲ್ಲ ಹೊರಗೆ ಓಡಿಬಂದರು.

ಮನೆಯೆಂದರೇನು, ತೆಂಗಿನ ಮಡಲು ಹೊದೆಸಿದ ಗುಡಿಸಲು. ದೀಪಾವಳಿಯ ದಿನ. ಎಲ್ಲರ ಮನೆಯಲ್ಲಿ ಹಣತೆ ಉರಿದರೆ ನಮ್ಮ ಮನೆಯೇ ಉರಿಯಿತು. ಉಣಲು, ಉಡಲು ಕಷ್ಟವಿರುವಾಗ ಪಟಾಕಿ ಕೊಳ್ಳಲು ದುಡ್ಡೆಲ್ಲಿ? ಯಾರಾದರೂ ಪಟಾಕಿಯನ್ನು ದಾನವಾಗಿ ಕೊಟ್ಟರೆ ಅದು ಸಿಹಿ ತಿಂಡಿಗಿಂತ ಹೆಚ್ಚೆನಿಸಿ, ಕುತೂಹಲವನ್ನು ಅದುಮಿಟ್ಟುಕೊಂಡು ಮನೆಗೆ ಓಡಿ ಬರುತ್ತಿದ್ದೆ. ಇದು ನಡೆದದ್ದು 1965ಕ್ಕಿಂತ ಮೊದಲು. ನನಗೆ ಏಳೊ ಎಂಟೊ ಪ್ರಾಯ. ಸನಿಹದ ಪಟೇಲರ ಮನೆಯ ಹುಡುಗ ಕೊಟ್ಟ ಚಾಟಿ ಪಟಾಕಿಯನ್ನು ಚಡ್ಡಿಯ ಜೇಬಿನಲ್ಲಿರಿಸಿಕೊಂಡು ಮನೆಗೆ ಓಡಿಬಂದಿದ್ದೆ. ಮಧ್ಯಾಹ್ನದ ಹೊತ್ತು. ಸಂಜೆಯಾಗುವವರೆಗೆ ಮನಸ್ಸು ತಡೆಯುವುದೆ? ಒಲೆಯ ಬೆಂಕಿಗೆ ತಾಗಿಸಿ ಚಾಟಿಯನ್ನು ಉರಿಸಿದೆ. ಗರಗರನೆ ಸುತ್ತಿದೆ. ಚಾಟಿ ಕೈ ಜಾರಿತು. ಸರ್ರನೆ ಹಾರಿ ಮನೆಯ ಮಾಡಿಗೆ ಸಿಕ್ಕಿಕೊಂಡಿತು. ಎಷ್ಟು ಹೊತ್ತು ಬೇಕು, ಒಣ ಮಡಲಿಗೆ ಬೆಂಕಿ ತಾಕಲು! ಕ್ಷಣ ಮಾತ್ರದಲ್ಲಿ ಮನೆ ಉರಿಯತೊಡಗಿತು. ನಾನು ಹೆದರಿ ಟಣ್ಣನೆ ಜಿಗಿದು ಓಡಿದವನು ಪಟೇಲರ ಮನೆಯ ಹಟ್ಟಿಯಲ್ಲಿ ಅಡಗಿ ಕುಳಿತೆ. ಆಗ ಉಡುಪಿ ಮುನ್ಸಿಪಾಲಿಟಿ ಚುನಾವಣೆ ಪ್ರಚಾರಕ್ಕೆಂದು ಮನೆ ಮನೆಗೆ ಹೋಗುತ್ತಿದ್ದ ಐದಾರು ಮಂದಿ ಮನೆಯವರ ಬೊಬ್ಬೆಯನ್ನು ಕೇಳಿ ಬೆಂಕಿ ನಂದಿಸುವಲ್ಲಿ ಸೇರಿಕೊಂಡರಂತೆ. ಬೆಂಕಿಯೇನೋ ಶಮನವಾಯಿತು. ಆದರೆ, ಅಷ್ಟರಲ್ಲಿಯೇ ಮನೆ ಭಸ್ಮವಾಗಿತ್ತು. ನಾನು ಪಟೇಲರ ಮನೆಯ ಹಟ್ಟಿಯಿಂದ ಕದಲಲಿಲ್ಲ. ನನ್ನ ತಂದೆ, ನನಗಾಗಿ ಸುತ್ತಮುತ್ತಲೆಲ್ಲ ಹುಡುಕಿದರು. ಸಿಕ್ಕಿದರೆ ಸಿಗಿದು ತೋರಣ ಕಟ್ಟುವೆ ಎಂದು ಗುಡುಗಿದರು. ನಾನು ಸಿಗಲೇ ಇಲ್ಲ. ಕೊನೆಗೆ ಪಟೇಲರೇ ನನ್ನ ತಂದೆ-ತಾಯಿಯನ್ನು ತಮ್ಮ ಮನೆಗೆ ಕರೆಸಿ, `ಆದದ್ದಾಯಿತು... ಇನ್ನು ಬೈದಾಡಿ ಏನು ಪ್ರಯೋಜನ? ಹೊಸ ಮನೆ ಕಟ್ಟುವ ಬಗ್ಗೆ ಯೋಚನೆ ಮಾಡಿ. ಹುಡುಗನನ್ನು ಕರೆದುಕೊಂಡು ಹೋಗಿ... ಹೊಡೆಯಬೇಡಿ' ಎಂದು ಹೇಳಿದರು.

`ಕಲ್ಲಿನ ಕಂಬ ನೆಟ್ಟು ಮಾಡು ಮಾಡಿರಿ, ಸುಲಭವಾಗುತ್ತೆ' ಎಂದು ಸಲಹೆ ಕೊಟ್ಟವರು ಅನೇಕ ಮಂದಿ. ಆದರೆ, ಅದಕ್ಕಾದರೂ ಕೊಡಲು ದುಡ್ಡೆಲ್ಲಿ! ತಂದೆ ಅಲ್ಲಿಲ್ಲಿಂದ ಬಿದಿರ ಗಳಗಳನ್ನು ಹುಡುಕಿ ತಂದರು. ಬಿದಿರ ಕಂಬವನ್ನು ನೆಲಕ್ಕೆ ಊರಿ, ಮೂರ್ನಾಲ್ಕು ಅಡಿಗಳಷ್ಟು ಎತ್ತರಕ್ಕೆ ಮಣ್ಣು ಮೆತ್ತಿ ಅಂದಗೊಳಿಸಿದರು. ಕೆಳಗಿನಿಂದ ಗೆದ್ದಲು ಹತ್ತದಂತೆ ಡಾಂಬರು ಬಳಿದರು. ಕಂಬಗಳ ಮೇಲಿನಿಂದ ಎರಡೂ ದಿಕ್ಕಿಗೆ ಛಾವಣಿ ಇಳಿಬಿದ್ದಾಗ ಒಂದು ಮನೆಯ ಆಕಾರ ಬಂತು. ಛಾವಣಿಗೆ ಮುಳಿಹುಲ್ಲನ್ನು ಹೊದೆಸಲಾಯಿತು. ಅಮ್ಮ ಒಮ್ಮೆ ನನ್ನಲ್ಲಿ ಹೇಳಿದ್ದಳು, `ಮಡಲಿನ ಮನೆ ಸುಟ್ಟದ್ದೇ ಒಳ್ಳೆಯದಾಯಿತು ಬಿಡು, ಈಗ ಮುಳಿಹುಲ್ಲಿನ ಮನೆಯಾಯಿತಲ್ಲ...'.

ಮುಂದೆ ತಂದೆಯವರೇ ಒಂದೆರಡು ಅಡಿ ಎತ್ತರಕ್ಕೆ ಮಣ್ಣಿನ ಗೋಡೆ ಕಟ್ಟುವುದರೊಂದಿಗೆ ಬದುಕಿಗೊಂದು ಸುರಕ್ಷತೆ ಬಂತು. ಸನಿಹದ ಹೊಲಗಳಿಂದ ಮಣ್ಣು ತಂದು, ಅದನ್ನು ಒಂದೆರಡು ದಿನ ನೀರಿನಲ್ಲಿ ತೋಯಿಸಿ, ಹುಳಿ ಬರುವಂತೆ ಮಾಡಿ, ಮಣ್ಣಿನ ಮುದ್ದೆಗಳನ್ನು ಇರಿಸಿ ತಟ್ಟುತ್ತ ಗೋಡೆ ನಿರ್ಮಿಸುವಲ್ಲಿ  ತಂದೆಯವರು ಪಟ್ಟ ಶ್ರಮ ಇವತ್ತಿಗೂ ಕಣ್ಣೆದುರಿಗಿದೆ. ದುಂಡನೆಯ ಮಣ್ಣಿನ ಪಾತ್ರವನ್ನು ನೆಲದಲ್ಲಿಡುವಾಗ ಆಧಾರಕ್ಕೆಂದು ಬಳಸುವ ಚಕ್ರದಂಥ ಆಕಾರವನ್ನು ತೆಂಗಿನ ಸೋಗೆಯ ನಡುವೆ ಹೊಂದಿಸಿಟ್ಟಾಗ ಅದೇ ಕಿಟಕಿಯಾಯಿತು. ಒಂದೇ ಕೋಣೆಯ ಪುಟ್ಟ ಗುಡಿಸಲಿನಲ್ಲಿ ರಾತ್ರಿ-ಹಗಲುಗಳು ಉರುಳಿದವು. ಮರುವರ್ಷ ಮುಳಿಹುಲ್ಲಿನ ಬದಲಿಗೆ ಬೈಹುಲ್ಲನ್ನು ಹಾಸುವ ಯೋಜನೆಯನ್ನು ಹಾಕಿಕೊಳ್ಳಲಾಯಿತು. `ಇದಕ್ಕೂ ಬೆಂಕಿ ಕೊಡುತ್ತೇನೆ, ಆಗ ಹಂಚಿನ ಮನೆ ಕಟ್ಟಬಹುದು...' ಎಂದು ನಾನು ಅಮಾಯಕನಾಗಿ ತಮಾಷೆಯಿಂದ ಹೇಳಿದರೆ, ಮನೆಯವರೆಲ್ಲ ನನ್ನನ್ನು ಬಡಿಗೆ ಹಿಡಿದು ಓಡಿಸುತ್ತಿದ್ದರು. `ಅನಿಷ್ಟ ಮಾತನಾಡುತ್ತಾನೆ' ಎಂಬ ಬೈಗಳು ಬೇರೆ.

1982ರಲ್ಲಿ ಮಾಯಾರಾವ್ ತಂಡದಲ್ಲಿ ಸಿಕ್ಕಿದ ಸಂಭಾವನೆಯನ್ನು ಎರಡು ವರ್ಷ ಹಾಗೆಯೇ ತೆಗೆದಿರಿಸಿ, ಸಿಂಡಿಕೇಟ್ ಬ್ಯಾಂಕಿನಿಂದ ಮತ್ತೊಂದಿಷ್ಟು ಸಾಲ ಪಡೆದು ಎಲ್ಲವನ್ನೂ ಸೇರಿಸಿ, ಬಡಗಿಗಳನ್ನು ಕರೆದುಕೊಂಡು ಮನೆಗೆ ಹೋದೆ. ಮನೆಯನ್ನು ಹೇಗೆ ಮರುನಿರ್ಮಿಸಬಹುದೆಂದು ಪರಿಶೀಲಿಸುತ್ತಿರುವಾಗ ವೃದ್ಧೆಯಾಗಿದ್ದ ಅಮ್ಮ ಹೊರಬಂದು ನನ್ನನ್ನೇ ದಿಟ್ಟಿಸುತ್ತ ಕೇಳಿದಳು, `ಏನು ಮಾಡುತ್ತಿದ್ದಿ...?'

`ಮನೆಗೆ ಹಂಚು ಹಾಸೋಣ ಅಂತ' ಎಂದಷ್ಟೇ ಹೇಳಿದರೂ ಚಾಟಿಪಟಾಕಿಯಿಂದ ಮನೆಗೆ ಬೆಂಕಿ ಕೊಟ್ಟುದರ ಪರಿಮಾರ್ಜನೆ ಮಾಡಿಕೊಳ್ಳುತ್ತಿದ್ದೇನೆ ಎಂಬ ಭಾವ ನನ್ನ ಮನಸ್ಸಿನಲ್ಲಿ ಇದ್ದೇ ಇತ್ತು.

(ಸಶೇಷ)
ನಿರೂಪಣೆ: ಹರಿಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT