ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಜಾಣಕಳ್ಳರ ಜಾಡು

Last Updated 7 ಜುಲೈ 2013, 19:59 IST
ಅಕ್ಷರ ಗಾತ್ರ

ಕೇವಲ 18 ದಿನದಲ್ಲಿ ಆರು ಎಟಿಎಂ ಕಳ್ಳತನವಾಗಿರುವ ವರದಿಯನ್ನು ಗಮನಿಸಿರುತ್ತೀರಿ. ಚಾಕು, ಗನ್ ಹಿಡಿದು ಬ್ಯಾಂಕ್ ದರೋಡೆ ಮಾಡುವವರಿಗೆ ರಿಸ್ಕ್-ಫ್ರೀ ಎನಿಸುವ ಇನ್ನೊಂದು ಮಾರ್ಗ ಈಗ ಗೋಚರವಾದ ಹಾಗೆ ಕಾಣುತ್ತದೆ. ನಗರದ ಹೊರಭಾಗಗಳಿಗೆ ಹೋಗಿ ಇಡೀ ಎಟಿಎಂ ಹೊತ್ತು ಪರಾರಿಯಾಗುತ್ತಿದ್ದಾರೆ. 

ಕೆಲವು ಪ್ರಕರಣಗಳಲ್ಲಿ ಅಪರಾಧಿಗಳನ್ನು ಪೊಲೀಸರು ಹಿಡಿದಿದ್ದಾರೆ. (ಕ್ಯಾಮೆರಾ ಕಣ್ಣಿಗೆ ಚೂಯಿಂಗ್ ಗಮ್ ಅಂಟಿಸುತ್ತಿದ್ದ ಒಬ್ಬನನ್ನು ಬಂಧಿಸಿ ಕೆಲವು ಗುಟ್ಟುಗಳನ್ನು ಅರ್ಥ ಮಾಡಿಕೊಂಡಿದ್ದಾರೆ). ಎಷ್ಟು ಹೊತ್ತಿಗೆ ಹೋಗಿ ಎಂಥ ಕಡೆ ಲೂಟಿ ಮಾಡಬೇಕು ಎಂದು ಪ್ಲಾನ್ ಮಾಡುವ ಸುಮಾರು ಹತ್ತು ಸದಸ್ಯರ ಗ್ಯಾಂಗ್ ಒಂದು ಈ ಕೆಲವು ಕಳವುಗಳಿಗೆ ಕಾರಣ ಎಂದು ಪೊಲೀಸರು ನಂಬಿದ್ದಾರೆ. ದುಡ್ಡು ಸಾಗಿಸುವವರು, ಕ್ಯಾಶ್ ಯಂತ್ರ ಅಳವಡಿಸುವವರು, ಬ್ಯಾಂಕ್ ಸಿಬ್ಬಂದಿಗೆ ಮಾತ್ರ ತಿಳಿದಿರುವ ಗುಪ್ತ ವಿಷಯಗಳು ಈ ತಂಡಕ್ಕೆ ಹೇಗೋ ಹಸ್ತಾಂತರವಾಗುತ್ತಿದೆ. ಅಪರಾಧಗಳ ವರಸೆ ನೋಡಿದರೆ ಸೂಕ್ಷ್ಮ ವಿಷಯಗಳನ್ನು ಬಲ್ಲ ಜಾಣಕಳ್ಳರು ಇದರ ಹಿಂದಿದ್ದಾರೆ ಎಂದು ತೋರುತ್ತದೆ.  
    
ಗಡಾರಿ, ಗ್ಯಾಸ್ ಕಟರ್ ಒಯ್ಯುವ ಈ ತಂಡಕ್ಕೆ ಎಲ್ಲಿ ಕಟ್ ಮಾಡಬೇಕು, ಕ್ಯಾಶ್ ಮಷೀನ್ ನೆಲದಿಂದ  ಹೇಗೆ ಎಬ್ಬಬೇಕು ಎಂದೆಲ್ಲ ಗೊತ್ತಿದೆಯಂತೆ. ಒಂದು ಕ್ಯಾಶ್ ಯಂತ್ರ 140ರಿಂದ 220 ಕೆ.ಜಿ. ಭಾರ ಇರುತ್ತದೆ. ಬಹುಪಾಲು ಇಂಥ ಯಂತ್ರಗಳನ್ನು ಕ್ಲಾಂಪ್ ಹಾಕಿ ಜಗ್ಗದಂತೆ ಮಾಡಿರುತ್ತಾರೆ. ಕ್ಲಾಂಪ್ ಹಾಕದ ಯಂತ್ರಗಳು ಎಲ್ಲಿವೆ ಎಂದು ತಿಳಿದ ಗ್ಯಾಂಗ್ ಅಂಥವನ್ನೇ ಗುರಿ ಮಾಡಿಕೊಳ್ಳುತ್ತಿದೆಯಂತೆ.

ಇದೆಲ್ಲಕ್ಕಿಂತ ಮುಖ್ಯವಾಗಿ ಕಳ್ಳರಿಗೆ ಪತ್ತೇದಾರಿ ವಿಧಾನ, ತಂತ್ರಜ್ಞಾನದ ಅರಿವಿದೆ. ಒಂದು ಉದಾಹರಣೆ: ಮುಖವಾಡ ಧರಿಸಿಕೊಂಡು ಒಂದೇ ಕಣ್ಣಿಗೆ ತೂತು ಮಾಡಿಕೊಂಡು ಎಟಿಎಂ ಕೋಣೆಯೊಳಗೆ ನುಗ್ಗುತ್ತಿದ್ದಾರೆ. ಇದರ ಅರ್ಥ ಬಯೊಮಿಟ್ರಿಕ್ಸ್ ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿದುಕೊಂಡಿದ್ದಾರೆ. ಪೊಲೀಸರು ಕಣ್ಣಿನ ಮಾಹಿತಿ ಪಡೆದು ಗುರುತು ಹಿಡಿಯುವ ಸಾಧ್ಯತೆ ಇದೆ ಎಂದು ಗೊತ್ತಿರುವ ಕಳ್ಳರು ಇವರು. ಕೆಲವು ಬ್ಯಾಂಕಿನವರು ಎಟಿಎಂಗಳಲ್ಲಿ ಜಿಪಿಎಸ್ ಅಳವಡಿಸಿರುತ್ತಾರಂತೆ. ಇದರಿಂದ ಕಳುವಾದ ನಗದು ಯಂತ್ರ ಎಲ್ಲಿದೆ ಎಂದು ತಿಳಿಯುವುದು ಸಾಧ್ಯ.

ಬಲವಾಗಿ ಎಟಿಎಂ ಜಗ್ಗಿದರೆ ಬ್ಯಾಂಕಿಗೆ, ಪೊಲೀಸರಿಗೆ ಅಲರ್ಟ್ ಹೋಗುವ ವ್ಯವಸ್ಥೆಯನ್ನೂ ಮಾಡಿರುತ್ತಾರೆ. ಇಂಥ ವಿಷಯಗಳನೆಲ್ಲ ಗಮನದಲ್ಲಿಟ್ಟು, ಬುದ್ಧಿವಂತಿಕೆಯಿಂದ ನಿಯೋಜಿಸಿದ ಅಪರಾಧಗಳು ನಡೆಯುತ್ತಿವೆ. ಕ್ಯಾಶ್ ಯಂತ್ರ ಕೊಂಡೊಯ್ಯಲು ಸರಿಯಾದ ವಾಹನ ಬಳಸುವುದು, ತಂಡದ ನಾಲ್ಕು ಸದಸ್ಯರನ್ನು ಯಂತ್ರ ಹೊರಲು ಕಳಿಸಿ, ಹೊರಗೆ ಕಣ್ಣಿಡಲು ಕೆಲವರನ್ನು ನಿಲ್ಲಿಸುವುದು... 

ಇಂಥ ವಿಷಯಗಳನ್ನೆಲ್ಲ ಚುರುಕುತನನಿಂದ ಮಾಡುತ್ತಿರುವ ಈ ತಂಡದ ಮುಖಂಡ ವಿದ್ಯಾವಂತನಿರುವಂತೆ ಕಾಣುತ್ತದೆ. ಯಂತ್ರ ಹಾರಿಸಿಕೊಂದು ಹೋದ ಮೇಲೆ ಮೊಬೈಲ್ ಫೋನ್ ಕರೆಗಳನ್ನು ಮಾಡಬಾರದು ಎಂದು ಆದೇಶ ನೀಡಿರುವ ಸಾಧ್ಯತೆಯೂ ಇದೆಯಂತೆ.

ತೋಳ್ಬಲಕ್ಕಿಂತ ಮಿದುಳನ್ನು ಹೆಚ್ಚು ಬಳಸುತ್ತಿರುವ ಈ ಅಪರಾಧಿಗಳು ಒಂದನ್ನಂತೂ ತೋರಿಸಿಕೊಡುತ್ತಿದ್ದಾರೆ: ಬೆಂಗಳೂರಿನಂಥ ಮಹಾನಗರದಲ್ಲಿ ಈಗ ತಂತ್ರಜ್ಞಾನ ಬಲ್ಲ ಧೂರ್ತರ ಯುಗ ಪ್ರಾರಂಭವಾಗಿದೆ. ತಮ್ಮ ಬುದ್ಧಿವಂತಿಕೆಯನ್ನು ಹೀಗೆ ದುರುಪಯೋಗ ಮಾಡಿಕೊಳ್ಳುವ  ವೈಟ್ ಕಾಲರ್ ದರೋಡೆಕೋರರು ಸಾಫ್ಟ್‌ವೇರ್ ನಗರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಷ್ಟೇನೂ ಆಶ್ಚರ್ಯದ ವಿಷಯವಲ್ಲವೇನೋ.

ಡಾ. ಬರ್ನ್‌ಸ್ಟೈನ್ ಬರೆದ ಡಯಾಬಿಟಿಸ್ ಪುಸ್ತಕ
ಹೋದವಾರ ನಾನು ಡಾ. ಬನ್‌ಸ್ಟೈನ್ ಎಂಬ ವೈದ್ಯರ ಬಗ್ಗೆ ಬರೆದಿದ್ದೆ. ಈ ಅಮೆರಿಕನ್ ವೈದ್ಯ ಸ್ವತಃ  ಪ್ರಯೋಗಪಶುವಾಗಿ ಡಯಾಬಿಟಿಸ್ ಕಾಯಿಲೆಯನ್ನು ನಿಯಂತ್ರಿಸುವ ವಿಧಾನವನ್ನು ಕಂಡು ಹಿಡಿದಿದ್ದಾರೆ. ಈ ವಿಧಾನದ ಸಾರ: ಆಹಾರದಲ್ಲಿ ಪ್ರೊಟೀನ್ (ಮೀನು, ಮಾಂಸ, ಮೊಟ್ಟೆ, ಚೀಸ್) ಹೆಚ್ಚಿಸಿಕೊಳ್ಳುವುದು, ಕಾರ್ಬೋಹೈಡ್ರೇಟ್ (ಅನ್ನ, ಬಿಸ್ಕೆಟ್, ಬ್ರೆಡ್)  ವರ್ಜ್ಯ ಮಾಡುವುದು.

ಎಂಜಿನಿಯರ್ ಆಗಿದ್ದ ಅವರು ತಮ್ಮ ಅನುಭವದ ಕಾಣ್ಕೆಗಳನ್ನು ಇತರರಿಗೆ ತಲುಪಿಸಲು ಪ್ರಯತ್ನಿಸಿದಾಗ ಒಂದು ತೊಡಕಾಯಿತು: ಅವರ ಬಳಿ  ವೈದ್ಯಕೀಯ ಡಿಗ್ರಿ ಇರಲಿಲ್ಲ. ಈ ತೊಡಕನ್ನು ನಿವಾರಿಸಲು ಎಂಬಿಬಿಎಸ್ ವ್ಯಾಸಂಗ ಮಾಡಿದರು.  ನಂತರ ಎಂಡಿ ಮಾಡಿ ನ್ಯೂ ಯಾರ್ಕ್‌ನಲ್ಲಿ ಕ್ಲಿನಿಕ್ ತೆರೆದರು. ತಮ್ಮ ವಿಶಿಷ್ಟ ವಿಧಾನದಲ್ಲಿ ಡಯಾಬಿಟಿಸ್ ಪೀಡಿತರನ್ನು ಟ್ರೀಟ್ ಮಾಡುತ್ತಾ ಬಂದಿದ್ದಾರೆ. ಡಾ ಬರ್ನ್‌ಸ್ಟೈನ್  40 ವರ್ಷದ ಪ್ರಾಕ್ಟೀಸ್‌ನಲ್ಲಿ ಕಂಡ ಅಪರೂಪದ ಸಂಗತಿಗಳನ್ನು ಪುಸ್ತಕವೊಂದರಲ್ಲಿ ದಾಖಲಿಸಿದ್ದಾರೆ.  ಕಾರ್ಬೋಹೈಡ್ರೇಟ್ ಬಿಡುವುದರಿಂದ ಹೇಗೆ ಗುಣಮುಖವಾಗುತ್ತದೆ ಎಂದು ವಿವರಿಸಿದ್ದಾರೆ. ಇದರ ಬಗ್ಗೆ ನಾನು ಈ ಅಂಕಣದಲ್ಲಿ ಪ್ರಸ್ತಾಪಿಸಿದ್ದೆ. ಪುಸ್ತಕ ಎಲ್ಲಿ ಸಿಗುತ್ತದೆ ಎಂದು ಕೇಳಿ ಕೆಲವು ಓದುಗರು ನನ್ನನ್ನು ಸಂಪರ್ಕಿಸಿದ್ದಾರೆ.

`ದಿ ಡಯಾಬಿಟಿಸ್ ಸಲ್ಯೂಶನ್: ದಿ ಕಂಪ್ಲೀಟ್ ಗೈಡ್ ಟು ಅಚೀವಿಂಗ್ ನಾರ್ಮಲ್ ಬ್ಲಡ್ ಶುಗರ್ಸ್'ಎಂಬ ಅವರ ಪುಸ್ತಕ ಮೊದಲು ಪ್ರಕಟವಾದದ್ದು 1997ರಲ್ಲಿ. ಅದರ ನಾಲ್ಕನೇ ಆವತ್ತಿ ಈಗ ಮಾರಾಟವಾಗುತ್ತಿದೆ. ಬೆಂಗಳೂರಿನ ಪುಸ್ತಕದ ಅಂಗಡಿಗಳಲ್ಲಿ ನಾನು ಇದನ್ನು ಕಂಡಿಲ್ಲ. ಆದರೆ ಫ್ಲಿಪ್‌ಕಾರ್ಟ್ ((www.flipkart.com, ರೂ. 1,401) ಮತ್ತು `ಇನ್ಫಿ ಬೀಮ್' ((www.infibeam.com, ರೂ. 1,438) ಥರದ ಆನ್‌ಲೈನ್ ಪುಸ್ತಕದ ಅಂಗಡಿಗಳಲ್ಲಿ ಇದು ಲಭ್ಯ. ಅಮೆರಿಕದಿಂದ ನೇರವಾಗಿ ರವಾನಿಸುವ ಕೆಲವು ಅಂಗಡಿಗಳ ಪಟ್ಟಿ `ಇನ್ಫಿ ಬೀಮ್'ನಲ್ಲಿ ಕಾಣುತ್ತದೆ. ಅಲ್ಲಿ ಅದರ ಬೆಲೆ  ರೂ. 1,011. ಅಮೆರಿಕದಿಂದ ತರಿಸಲು ನಿರ್ಧರಿಸಿದರೆ ಸ್ವಲ್ಪ ಹೆಚ್ಚು ದಿನ ಕಾಯಬೇಕಾಗುತ್ತದೆ.

`ದಿ ಡಯಾಬಿಟಿಸ್ ಡಯಟ್' ಎಂಬ ಇನ್ನೊಂದು ಪುಸ್ತಕವನ್ನೂ ಡಾ .ಬರ್ನ್‌ಸ್ಟೈನ್ ಬರೆದಿದ್ದಾರೆ. ಅದು ಲೋ ಕಾರ್ಬ್ ತಿನಿಸುಗಳ ಅಡುಗೆ ಪುಸ್ತಕ. ಅಮೆರಿಕದಲ್ಲಿ ಜನಪ್ರಿಯವಾಗಿರುವ ಮತ್ತು ಆ ದೇಶದಲ್ಲಿ ಸುಲಭವಾಗಿ ತಯಾರಿಸಬಹುದಾದ ಮಾಂಸಾಹಾರಿ ತಿನಿಸುಗಳು ಹೆಚ್ಚಾಗಿ ಇದರಲ್ಲಿವೆ.

ನನ್ನ ಟಿಪ್ಪಣಿ ಓದಿ ಇತಿಹಾಸತಜ್ಞ ಎಚ್.ಎಸ್. ಗೋಪಾಲ ರಾವ್ ಕೂಡ ಫೋನ್ ಮಾಡಿದ್ದರು. ಮಂಗಳೂರಿನ ಡಾ. ಬೇವಿಂಜೆ ಶ್ರೀನಿವಾಸ ಕೆಕ್ಕಿಲಾಯ ಅವರ ವಿಧಾನದತ್ತ ಗಮನ ಸೆಳೆದರು. ಕೆಕ್ಕಿಲಾಯ ಅವರು ಕೂಡ  ಕಾರ್ಬೋಹೈಡ್ರೇಟ್ ಕಡಿಮೆ ಮಾಡುವ ವಿಧಾನವನ್ನು ಅನುಸರಿಸುತ್ತಾರೆ. ಜೊತೆಗೆ ಹಾಲಿನ ಪದಾರ್ಥಗಳನ್ನೂ ಕೈಬಿಡುವಂತೆ ಸಲಹೆ ಮಾಡುತ್ತಾರೆ.  ಆಧುನಿಕ ಯುಗದಲ್ಲಿ ಹೆಚ್ಚಾಗುತ್ತಿರುವ ಕಾಯಿಲೆಗಳಿಗೆ ಕಾರಣ ತಪ್ಪು ಆಹಾರ ಕ್ರಮ ಎಂದು ಮನಗಂಡಿದ್ದಾರೆ.

ಈ ಕಾಯಿಲೆಗಳನ್ನು ಗುಣಪಡಿಸಲು ತಮ್ಮದೇ ಚಿಕಿತ್ಸಾ ವಿಧಾನವನ್ನು ಬಳಸುತ್ತಿದ್ದಾರೆ. `ಸ್ಪಂದನ ಸೆಂಟರ್ ಫಾರ್ ಮೆಟಾಬಾಲಿಕ್ ಮೆಡಿಸಿನ್' ಎಂಬ ಸಂಸ್ಥೆಯನ್ನು ಮಂಗಳೂರಿನಲ್ಲಿ ನಡೆಸುತ್ತಿದ್ದಾರೆ. ಸಂಸ್ಥೆಯ ಫೋನ್ ಸಂಖ್ಯೆ 82424 22972, 82424 41772.

ಆಹಾರ ಕ್ರಮದಲ್ಲಿ ಬದಲಾವಣೆ ಮಾಡುವುದರಿಂದ ಮಧುಮೇಹದ ನಿಯಂತ್ರಣ ಸಾಧ್ಯ ಎಂದು ಕೇಳುತ್ತಿರುತ್ತೇವೆ.
ಆದರೆ ನಾವು ಕಾಣುವ ಅತಿ ಸಾಮಾನ್ಯ ಧೋರಣೆ: `ಔಷಧಿ ತೆಗೆದುಕೊಂಡರೆ ಎಂದಿನಂತೆ ಊಟ ತಿಂಡಿ ಮಾಡಬಹುದು.' ಡಾ. ಬರ್ನ್‌ಸ್ಟೈನ್ ಮತ್ತು ಡಾ. ಕೆಕ್ಕಿಲಾಯ ಅವರಂಥ ವೈದ್ಯರು ಔಷಧ ತಯಾರಿಕಾ ಸಂಸ್ಥೆಗಳ ಮತ್ತು ರೋಗಿಗಳ ಈ ಧೋರಣೆಯನ್ನು ಒಪ್ಪದೇ ತಮ್ಮದೇ ಚಿಕಿತ್ಸಾ ಪದ್ಧತಿಯನ್ನು ರೂಪಿಸಿದ್ದಾರೆ.

ಸಕ್ಕರೆ ಕಾಯಿಲೆ ರೋಗಿಗಳ ಆರೋಗ್ಯಕ್ಕೆ ಮಾರಕ. ಆದರೆ ಫಾರ್ಮಾ ಸಂಸ್ಥೆಗಳ ಆರೋಗ್ಯಕ್ಕೆ ಲಾಭದಾಯಕ! ಗುಣಪಡಿಸುವ, ಅರೋಗ್ಯ ಸುಧಾರಿಸುವ ಅಪರೂಪದ ವಿಧಾನಗಳು ವೈಯಕ್ತಿಕ ವೈದ್ಯರ ಪ್ರಯೋಗಗಳಿಂದ ಮೂಡಿಬರುತ್ತಿವೆಯೇ ಹೊರತು ದೊಡ್ಡ ಸಂಶೋಧನಾ ಸಂಸ್ಥೆಗಳ ಪ್ರಯತ್ನದಿಂದ ಅಲ್ಲ.

ಟೆಲಿಗ್ರಾಂ ಕಥೆ
ಜುಲೈ 12ರಿಂದ ಟೆಲಿಗ್ರಾಂ ಸೇವೆ ಸ್ಥಗಿತವಾಗಲಿದೆ. ಇ-ಮೇಲ್ ಮತ್ತು ಮೊಬೈಲ್ ಯುಗದಲ್ಲಿ ಇನ್ನು ಯಾರಾದರೂ ಟೆಲಿಗ್ರಾಂ ಕಳಿಸುತ್ತಾರೆಯೇ ಎಂದು ಹಲವರು ಕೇಳುತ್ತಿದ್ದಾರೆ. ಕಾನೂನಿನ ದೃಷ್ಟಿಯಿಂದ ಸೇವೆ ತುಂಬ ಉಪಯುಕ್ತವಾಗಿತ್ತಂತೆ. ಸೇನೆಯವರು, ವಾಹನ ಜಪ್ತಿ ಮಾಡುವವರು ಟೆಲಿಗ್ರಾಂ ಕಳಿಸುತ್ತಲೇ ಇದ್ದರಂತೆ. ನೆನಪಿಗೆ ಇರಲಿ ಎಂದು ಈಗ ಕೆಲವರು ತಮಗೆ ತಾವೇ ಟೆಲಿಗ್ರಾಂ ಕಳಿಸಿಕೊಳ್ಳುತ್ತಿದ್ದಾರೆ.

ಇದು ಕೇಳಿ ಒಂದು ಜೋಕ್ ನೆನಪಿಗೆ ಬಂತು. ಹುಚ್ಚಾಸ್ಪತ್ರೆಯಲ್ಲಿ ಒಬ್ಬ ಇನ್‌ಲ್ಯಾಂಡ್ ಲೆಟರ್ ಬರೆಯುತ್ತಾ ಕೂತಿರುತ್ತಾನೆ. ಡಾಕ್ಟರ್: ಯಾರಿಗೆ ಪತ್ರ ಬರೆಯುತ್ತಿದ್ದೀಯ? ಹುಚ್ಚ: ನನಗೇ ಬರೆದುಕೊಳ್ಳುತ್ತಿದ್ದೇನೆ. ಡಾಕ್ಟರ್: ಏನು ಅದರಲ್ಲಿ ವಿಷಯ? ಹುಚ್ಚ: ಪತ್ರ ಬಂದಮೇಲೆ ತಾನೇ ಗೊತ್ತಾಗೋದು!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT