ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಮ್ಮನೊಂದಿಗೆ ಒಂದು ದಿನ

Last Updated 26 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಆ ದಿನ ಕಾಡಿನಿಂದ ಮುದುಮಲೈ ಮನೆಗೆ ವಾಪಾಸಾದಾಗ ಬಾಗಿಲಿಗೆ ಒಂದು ನೋಟಿಸ್ ಚೀಟಿ ಅಂಟಿಸಿತ್ತು. ನಾಗರಿಕ ಸಮಾಜದ ಶಿಷ್ಟಾಚಾರಗಳಿಂದ ಬಹೂದೂರವಿದ್ದ ಈ ಮನೆಗೆ ನೋಟೀಸ್ ಹಚ್ಚಿದವರಾರೆಂದು ಆಶ್ಚರ್ಯವಾಯಿತು. ಆದರೆ ಆ ಚೀಟಿಗೆ ಪೊಲೀಸರ ಅಥವಾ ನ್ಯಾಯಾಲಯದ ತಲೆ ಬರಹಗಳಿರಲಿಲ್ಲ. ಬದಲಾಗಿ ಪೆನ್ಸಿಲ್‌ನಲ್ಲಿ ಬಿಡಿಸಿದ್ದ ಹಕ್ಕಿಯ ರೇಖಾಚಿತ್ರವಿತ್ತು. ಆ ಪತ್ರದ ಮೇಲ್ಭಾಗದಲ್ಲಿ ಬಾಣದ ಗುರುತೊಂದು ನಮೂದಾಗಿತ್ತು. ಹಕ್ಕಿಯ ಚಿತ್ರದ ಕೆಳಗೆ ಬಿಡಿ ಅಕ್ಷರಗಳಲ್ಲಿ ‘ಬೊಮ್ಮನ್’ ಎಂದು ಇಂಗ್ಲಿಷ್‌ನಲ್ಲಿ ಬರೆದಿತ್ತು. ಈ ಪತ್ರದ ಹಿನ್ನೆಲೆ ಏನೆಂದು ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ.

ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಕೂಡುವ ಭಾಗದಲ್ಲಿ ಮುದುಮಲೈ ಕಾಡು ಇರುವುದರಿಂದ, ತನ್ನ ಬೆಟ್ಟಕುರುಬರ ಆಡುಭಾಷೆಯ ಜೊತೆಗೆ ಕನ್ನಡ, ತಮಿಳು ಮತ್ತು ಮಲೆಯಾಳಂ ಭಾಷೆಗಳನ್ನು ಬೊಮ್ಮ ಮಾತನಾಡಬಲ್ಲವನಾಗಿದ್ದ. ಇದಲ್ಲದೆ ಇಂಗ್ಲಿಷ್ ಭಾಷೆಯನ್ನು ತಕ್ಕಮಟ್ಟಿಗೆ ಅರ್ಥಮಾಡಿಕೊಳ್ಳುತ್ತಿದ್ದ. ಶಾಲೆಯಲ್ಲಿ ಐದನೇ ತರಗತಿಯವರೆಗೆ ಕಲಿತಿದ್ದರಿಂದ ತಮಿಳನ್ನು ಬರೆಯಲು ಕಲಿತಿದ್ದ. ಆದರೆ ಅಲ್ಪಸ್ವಲ್ಪ ತಮಿಳನ್ನು ಮಾತ್ರ ಅರ್ಥಮಾಡಿಕೊಳ್ಳುತ್ತಿದ್ದ ನಮಗೆ ಆ ಜಿಲೇಬಿ ಅಕ್ಷರಗಳನ್ನು ಓದಲಾಗಲಿ, ಬರೆಯಲಾಗಲಿ ಬರುತ್ತಿರಲಿಲ್ಲ. ನಮ್ಮ ಭಾಷಾ ಜ್ಞಾನದ ಮಿತಿಯನ್ನು ಅರಿತಿದ್ದ ಬೊಮ್ಮ ನಮ್ಮನ್ನು ಅನಕ್ಷರಸ್ತರಂತೆ ಪರಿಗಣಿಸಿ, ನಮ್ಮೊಡನೆ ಸಂವಾದಿಸಲು ಹೊಸ ವಿಧಾನವನ್ನು ಆವಿಷ್ಕರಿಸಿದ್ದ.

ಮನೆಯ ಮಗ್ಗುಲಿನ ಕಾಡಿನಲ್ಲಿ ಉದ್ದ ಬಾಲದ ಕಾಜಾಣ ಹಕ್ಕಿಯ ಗೂಡು ಪತ್ತೆ ಹಚ್ಚಲು ಹೋಗೋಣವೆಂದು ಕೆಲ ದಿನಗಳ ಹಿಂದೆ ಅವನಿಗೆ ತಿಳಿಸಿದ್ದೆವು. ಈ ಕಾರಣದಿಂದ ಬೊಮ್ಮ ಬರೆದು ಅಂಟಿಸಿದ್ದ ಪತ್ರದಲ್ಲಿದ್ದ ವಿವರಗಳು ಗುಪ್ತಲಿಪಿಯ ಸಂಕೇತಗಳಂತೆ ಕಂಡರು ಕೂಡ, ಭೇದಿಸಲು ಹೆಚ್ಚು ಕಷ್ಟವಾಗಲಿಲ್ಲ. ಅವನ ಚೀಟಿಯಲ್ಲಿನ ಉದ್ದನೆಯ ಬಾಲದ ಹಕ್ಕಿ ಕಾಜಾಣವಾಗಿತ್ತು ಮತ್ತು ಬಾಣದ ಗುರುತು ಬೊಮ್ಮ ಹಕ್ಕಿಯನ್ನು ಹುಡುಕಿ ತೆರಳಿರುವ ದಿಕ್ಕನ್ನು ಸೂಚಿಸುತ್ತಿತ್ತು. ಆದರೆ ಆತ ಎಲ್ಲಿ ಕುಳಿತು ಆ ಬಾಣದ ಗುರುತನ್ನು ಬಿಡಿಸಿರಬಹುದೆಂಬುದನ್ನು ಮೊದಲು ಖಚಿತಪಡಿಸಿಕೊಳ್ಳುವ ಅಗತ್ಯವಿತ್ತು. ಅದು ತಪ್ಪಾದಲ್ಲಿ ಉತ್ತರದಲ್ಲಿದ್ದ ಬೊಮ್ಮನನ್ನು ದಕ್ಷಿಣದಲ್ಲೋ ಪೂರ್ವದಲ್ಲೋ ಹುಡುಕಾಡುವ ಸಮಸ್ಯೆ ಎದುರಾಗುವ ಎಲ್ಲಾ ಸಾಧ್ಯತೆಗಳಿದ್ದವು.

ಬೊಮ್ಮನ ಪ್ರಪಂಚವೇನಿದ್ದರೂ ಅದು ಅಡುಗೆ ಮನೆ ಮಾತ್ರ. ಸೌದೆ ಒಲೆಯಿಂದ ಮಸಿಯಾಗಿದ್ದ ಆ ಕೊಠಡಿಯಲ್ಲಿ ತರಕಾರಿ ಕತ್ತರಿಸುವ ಟೇಬಲ್ ಮಾತ್ರ ಶುಭ್ರವಾಗಿತ್ತು. ಆ ಟೇಬಲ್‌ನ ಹಿಂಬದಿಯ ಗೋಡೆಯಲ್ಲಿ ಬೊಮ್ಮ, ತುಂಡು ಅಂಗಿ ತೊಟ್ಟಿದ್ದ ಟೆನ್ನಿಸ್ ಆಟಗಾರ್ತಿ ಮಾರ್ಟಿನಾ ನವ್ರಾಟಿಲೋವಳ ಪೋಸ್ಟರ್ ಅಂಟಿಸಿಕೊಂಡಿದ್ದ. ಬೊಮ್ಮ ಆಕೆಯ ಸೌಂದರ್ಯಕ್ಕೆ ಮನಸೋತಿದ್ದನೋ ಅವಳ ಆಟಕ್ಕೆ ಮಾರುಹೋಗಿದ್ದನೋ ಅಥವ ಗೋಡೆಯ ಬಿರುಕನ್ನು ಮರೆಮಾಡಲು ಆ ಚಿತ್ರ ಹಾಕಿಕೊಂಡಿದ್ದನೋ ನಮಗೆ ತಿಳಿದಿರಲಿಲ್ಲ. ಒಟ್ಟಿನಲ್ಲಿ ಆತನ ದಿನದ ಹೆಚ್ಚಿನ ಕೆಲಸವನ್ನೆಲ್ಲ ಆ ಚಿತ್ರದ ಎದುರು ನಿಂತೇ ನಿರ್ವಹಿಸುತ್ತಿದ್ದ. ಹಾಗಾಗಿ ಅದೇ ಟೇಬಲ್ ಮೇಲೆ ಆ ಚಿತ್ರ ಬರೆದಿರಬಹುದೆಂದು ತೀರ್ಮಾನಿಸಿದೆವು.

ಬಾಣದ ಗುರುತನ್ನು ಆಧರಿಸಿ ತೆರಳಿದಾಗ ಬೊಮ್ಮ ಮನೆಯಿಂದ ಅರ್ಧ ಮೈಲು ದೂರದಲ್ಲಿ, ಮರಗಳ ನೆತ್ತಿಯತ್ತ ನೋಡುತ್ತಾ ನಿಂತಿದ್ದ. ಆತನನ್ನು ಸಮೀಪಿಸಿದಾಗ ನಮ್ಮತ್ತ ತಿರುಗಿ ಕೂಡ ನೋಡದೆ ‘ರಾಕೆಟ್ ಟೈಲ್ ಡ್ರಾಂಗೊ ಇಲ್ಲೇ ಎಲ್ಲೊ ಗೂಡ್‌ಕಟ್ಟಿರ್ ಬೇಕು ಸಾ...’ ಎಂದು ಕೈ ಎತ್ತಿ ಮುದುಮಲೈ ಕಾಡಿನ ಅರ್ಧ ಭಾಗವನ್ನೇ ತೋರಿಸಿದ. ಆತ ತೋರಿದ ಕಾಡು ಕನಿಷ್ಠ ಇನ್ನೂರು ಚದರ ಕಿಲೋಮೀಟರ್ ವಿಸ್ತಾರವಿತ್ತು. ಅಷ್ಟೂ ಕಾಡನ್ನು ಶೋಧಿಸಲು ಅರ್ಧ ಜೀವಮಾನವೇ ಬೇಕಾಗಿತ್ತು. ಮುಂದುವರೆದ ಬೊಮ್ಮ ಜುಟ್ಟಿನ ಹದ್ದನ್ನು ಡ್ರೋಂಗೊ ಹಕ್ಕಿಗಳು ಬೆನ್ನಟ್ಟಿ ಹೋದದ್ದನ್ನು ಕಂಡಿದ್ದಾಗಿ ತಿಳಿಸಿದ.

ಆತ ಗಮನಿಸಿದ್ದು ಸರಿ ಇರಬಹುದೆನಿಸಿತು. ಈ ಉದ್ದಬಾಲದ ಕಾಜಾಣ ಹಕ್ಕಿಗಳ ಸ್ವಭಾವವೆ ಹಾಗೆ. ತಮ್ಮ ಗೂಡುಗಳಲ್ಲಿ ಮೊಟ್ಟೆ–ಮರಿಗಳಿದ್ದಾಗ ಯಾವ ಶತ್ರುಗಳನ್ನು ಅಲ್ಲಿ ಸುಳಿಯಲು ಬಿಡುವುದಿಲ್ಲ. ತಮಗಿಂತ ಮೂರುಪಟ್ಟು ದೊಡ್ಡದಾದ ಬಲಶಾಲಿಯಾದ ಹದ್ದುಗಳೋ ಪ್ರಾಣಿಗಳೋ ಆ ದಿಕ್ಕಿಗೆ ಬಂದರೆ ಕಾಜಾಣಗಳು ಅವುಗಳನ್ನು ಅಟ್ಟಿಸಿಕೊಂಡು ಹೋಗುವುದು ಸಾಮಾನ್ಯ. ಈ ಎದೆಗಾರಿಕೆಯ ಪ್ರವೃತ್ತಿಯನ್ನು ಬಲ್ಲ ಹಲವಾರು ಸಣ್ಣಪುಟ್ಟ ಹಕ್ಕಿಗಳು ಕಾಜಾಣಗಳು ಗೂಡು ಕಟ್ಟಿರುವ ಆಸುಪಾಸಿನಲ್ಲೆ ಗೂಡು ಕಟ್ಟಿಕೊಂಡು ತಮ್ಮ ಮೊಟ್ಟೆ–ಮರಿಗಳನ್ನು ರಕ್ಷಿಸಿಕೊಳ್ಳುವ ತಂತ್ರವನ್ನು ಅಳವಡಿಸಿಕೊಂಡಿವೆ.

ಇದಲ್ಲದೆ ಕಪ್ಪು ಬಣ್ಣದ ಈ ಸುಂದರ ಕಾಡುಹಕ್ಕಿ ಅದ್ಭುತ ಹಾಡುಗಾರ. ಈ ಎಲ್ಲಾ ವಿಶಿಷ್ಟ ಸ್ವಭಾವಗಳನ್ನು ಮನಗಂಡ ಕುವೆಂಪುರವರು ತಮ್ಮ ಕೃತಿಗಳಿಗೆ ಲಾಂಛನವಾಗಿ ಕಾಜಾಣಗಳನ್ನು ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡಿಕೊಂಡಿರಬಹುದು.

ಕಾಜಾಣಗಳ ಬಗ್ಗೆ ವಿವರ ನೀಡುತ್ತಿದ್ದ ಬೊಮ್ಮ ಒಮ್ಮೆಲೆ ಮಾತು ನಿಲ್ಲಿಸಿದ. ಅವನ ಮನಸ್ಸು ಕಾಜಾಣಗಳಿಂದ ಬೇರೆಲ್ಲೊ ಸರಿದಿತ್ತು. ಶೂನ್ಯವನ್ನು ದೃಷ್ಟಿಸುತ್ತಿದ್ದಂತೆ ಕಂಡ ಅವನ ಕಣ್ಣುಗಳು ಏನನ್ನೋ ಹಿಂಬಾಲಿಸಿದ್ದವು, ಹಾಗೆ ಮುಂದುವರೆದ ಅವು ಮರದ ನೆತ್ತಿಯನ್ನು ತಲುಪಿ ಬಳಿಕ ನಮ್ಮತ್ತ ತಿರುಗಿ ಕಿರುನಗೆ ಬೀರಿದವು. ಮಾತಿಲ್ಲದ ಆ ಭಾಷೆ ನಮಗರ್ಥವಾಯಿತು.

‘ಐದ್ ಮಿನಿಟ್ಟು ಸಾ...’ ಎಂದು ಬೊಮ್ಮ ಎಡಗೈಯಲ್ಲಿ ಕತ್ತಿ ಹಿಡಿದು ಪಕ್ಕದ ದಿಂಡಲು ಮರದ ಬಳಿ ತೆರಳಿದ. ಮರದ ನಡುಭಾಗದ ಪೊಟರೆಯಲ್ಲಿ ಜೇನುಗಳು ಚಟುವಟಿಕೆಯಿಂದ ಹಾರುತ್ತಿದ್ದವು.

ರೆಂಬೆಕೊಂಬೆಗಳಿಲ್ಲದ ನುಣುಪಾದ ಹೊರಕವಚವಿರುವ ಈ ಮರಗಳನ್ನು ಏರುವುದು ಸ್ವಲ್ಪ ಕಷ್ಟದ ಕೆಲಸ. ಮರದ ನಡುಭಾಗದ ಪೊಟರೆಯಲ್ಲಿ ತುಡುವೆ ಜೇನನ್ನು ಕಂಡಿದ್ದ ಬೊಮ್ಮ, ತನ್ನ ಜೀನ್ಸ್ ಪ್ಯಾಂಟ್ ಮಡಚಿಕೊಂಡು ಮರವೇರಲು ಆರಂಭಿಸಿದ. ಮೂರು ಅಡಿ ಮೇಲೇರುತ್ತಿದ್ದ ಬೊಮ್ಮ ಮರುಕ್ಷಣ ಎರಡು ಅಡಿ ಜಾರುತ್ತಿದ್ದ. ಏರುವುದಕ್ಕಿಂತ ಹೆಚ್ಚಾಗಿ ಜಾರುತ್ತಲೇ ಇದ್ದ ಬೊಮ್ಮನನ್ನು ಕಂಡು ಆತ ಕಾಡು ಕುರುಬರ ಕುಲಕ್ಕೇ ಅವಮಾನ ಮಾಡುತ್ತಿದ್ದಾನೆಂದೆನಿಸಿ ನಗೆ ಮೂಡಿತು.

ಕಾಡು ಕುರುಬರನ್ನು ಹತ್ತಿರದಿಂದ ಬಲ್ಲವರಿಗೆಲ್ಲ ಅವರ ಮರವೇರುವ ಕೌಶಲ್ಯ ಬೆರಗು ಮೂಡಿಸುತ್ತದೆ. ಮಂಗಗಳಂತೆ ಮರಗಳನ್ನೇರುವ ಅವರ ಪ್ರತಿಭೆ ಚಮತ್ಕಾರದಂತೆ ಕಂಡರೆ ಆಶ್ಚರ್ಯವಿಲ್ಲ. ತುಂಡು ಕತ್ತಿಗಳನ್ನು ಹಿಡಿದು ದೈತ್ಯಮರಗಳನ್ನು ಏರುವಾಗ ಅವರ ಕೈಗಳಲ್ಲಿ ಅವು ಆಯುಧಗಳಂತೆ ಕಾಣುವುದಿಲ್ಲ. ಬದಲಿಗೆ ನುರಿತ ಕಲಾವಿದನ ಕುಂಚದಂತೆ ಕಾಣುತ್ತವೆ. ಕತ್ತಿಯಿಂದ ಪುಟ್ಟ ಕಚ್ಚು ಹಾಕಿ, ಕಚ್ಚಿನ ಗುರುತಿನ ಮೇಲೆ ಕಾಲಿನ ಹೆಬ್ಬೆರಳನ್ನೂರಿ, ಎಡಗೈನಿಂದ ಬಲಗೈಗೆ, ಬಲಗೈನಿಂದ ಎಡಗೈಗೆ ಕತ್ತಿ ಬದಲಾಯಿಸುತ್ತಾ ಗಗನಚುಂಬಿ ಮರಗಳನ್ನೇರುವಾಗ ಅವರು ಕುಶಲ ಕಲಾವಿದರಂತೆಯೇ ಕಾಣುತ್ತಾರೆ.

ಇದನ್ನೆಲ್ಲ ಕಂಡಿದ್ದ ನಮಗೆ ನಿರಂತರವಾಗಿ ಜಾರುತ್ತಲ್ಲೇ ಇದ್ದ ಬೊಮ್ಮನ ಪ್ರದರ್ಶನ ತೀರಾ ನಿರಾಶಾದಾಯಕವಾಗಿ ಕಂಡಿತ್ತು. ಮರದ ಕೆಳಗೆ ನಗುತ್ತಾ ನಿಂತಿದ್ದ ನಮ್ಮನ್ನು ಕಂಡ ಬೊಮ್ಮ ‘ಈ ಜೀನು ಸಾ... ಮೋಸ ಸಾ... ಆ ಮುಂಬೈಕಾರ್ ಸಾ...’ ಎಂದು ಅಮೆರಿಕ ದೇಶದ ಪ್ರತಿಷ್ಠಿತ ಬಟ್ಟೆ ತಯಾರಿಸುವ ಸಂಸ್ಥೆಯನ್ನು, ಆ ಪ್ಯಾಂಟ್ ಅನ್ನು ಉಡುಗೊರೆ ನೀಡಿದ ಮುಂಬೈ ವಿಜ್ಞಾನಿಯನ್ನು ಮನಸಾರೆ ದೂಷಿಸಿದ. ಬೊಮ್ಮನ ಭಾಷೆಯೆ ಹಾಗೆ, ಜಾರುವ ಮಣ್ಣು, ನದಿಯಲ್ಲಿ ಮಾಯವಾಗುವ ಮೀನು, ಕೈಗೆಟುಕದ ಜೇನು ಎಲ್ಲದಕ್ಕೂ ಅವನ ಪದಕೋಶದಲ್ಲಿ ‘ಮೋಸ’ ಎಂದೇ ಹೆಸರು.

ಆದರೆ ಬೊಮ್ಮ ಜೀನ್ಸ್ ಪ್ಯಾಂಟ್‌ ಅನ್ನು ನಿರ್ಧಾಕ್ಷಿಣ್ಯವಾಗಿ ಹೊಣೆ ಮಾಡುತ್ತಿದ್ದುದರಲ್ಲಿ ಸ್ವಲ್ಪ ಸತ್ಯವಿತ್ತು. ಚರ್ಮಕ್ಕೆ ಅಂಟಿಕೊಂಡಂತೆ ಬಿಗಿಯಾಗಿದ್ದ ಆ ಪ್ಯಾಂಟಿನಲ್ಲಿ ಮೊಣಕಾಲುಗಳನ್ನು ಸುಲಭವಾಗಿ ಮಡಚಲು ಸಾಧ್ಯವಾಗುತ್ತಿರಲಿಲ್ಲ. ಪೇಟೆಯ ವಿಜ್ಞಾನಿಗಳೊಂದಿಗೆ ಸೇರಿ ತುಂಡು ಪಂಚೆ ಮಾಯವಾದದ್ದು, ನಂತರ ಅಡಿಗೆ ಮನೆ ಸೇರಿದ್ದು ಕೂಡ ಬೊಮ್ಮನ ಮೇಲೆ ಪರಿಣಾಮ ಬೀರಿರಬಹುದು. ಕಾಡಿನಲ್ಲಿ ಬದುಕುಳಿಯುವ ಕೌಶಲ್ಯಗಳು ಕೆಲಮಟ್ಟಿಗೆ ಮಾಸಲು ಇವೆಲ್ಲವೂ ಕಾರಣವಾಗಿರಬಹುದು.

ಕಡೆಗೂ ಬೊಮ್ಮ ಮರವೇರಲು ಯಶಸ್ವಿಯಾದ. ಜಾರುತ್ತಿದ್ದ ಹೆಜ್ಜೆಗಳನ್ನು ಬಿಗಿಗೊಳಿಸುತ್ತಾ ಜೇನಿನ ಬಳಿ ಸಾಗಿ ಬಾಗಿದ ರೆಂಬೆಗೆ ಜೋತುಬಿದ್ದು ಆಯತಪ್ಪಿದವನಂತೆ ವಾಲಾಡುತ್ತಾ ಪೊಟರೆಯೊಳಗೆ ಇಣುಕಿದ. ಆಗಾಗಲೇ ಜೇನೊಂದು ಅವನ ಮೂಗಿಗೆ ಕಚ್ಚಿತ್ತು. ಆದರೆ ಈ ತುಡುವೆ ಜೇನುಗಳು ನಿಜವಾದ ಜೇನುಗಳಂತೆ ದಾಳಿ ನಡೆಸಿ ತೀವ್ರವಾಗಿ ಘಾಸಿಗೊಳಿಸುವುದಿಲ್ಲ. ವೈರಿಗಳಿಗೆ ವಿಷ ಉಣಿಸಲು ಅಗತ್ಯವಿರುವ ಸೂಜಿಗಳಂತಹ ಅಂಗಾಂಗಗಳೇ ಅವುಗಳಲ್ಲಿ ರೂಪುಗೊಂಡಿಲ್ಲ.

ಜೀವ ಪರಿಸರದಲ್ಲಿ ಜೇನುಹುಳುಗಳ ಪಾತ್ರ ಮಹತ್ವವಾದದ್ದು. ಬಗೆಬಗೆಯ ಗಿಡಬಳ್ಳಿಗಳ ಕಣ ಗಾತ್ರದ ಅಸಂಖ್ಯಾತ ಹೂವುಗಳಿಗೆ ಮುತ್ತುತ್ತಾ ಪರಾಗಸ್ಪರ್ಶ ಕ್ರಿಯೆಯನ್ನು ನೆರವೇರಿಸುತ್ತವೆ. ಇದರಿಂದ ಭೂಮಂಡಲದ ಜೀವವೈವಿಧ್ಯತೆಯನ್ನು ಕಾಯ್ದುಕೊಳ್ಳುವಲ್ಲಿ ಜೇನುಗಳ ಪಾತ್ರ ನಿಣಾರ್ಯಕ. ಅವುಗಳ ನೆರವಿಲ್ಲದಿದ್ದಾಗ ಕೃಷಿ ಕೂಡ ಅಪೂರ್ಣ. ಇಡೀ ವಿಶ್ವದ ಸಂಕೀರ್ಣ ಜೀವಪರಿಸರದ ಉಳಿವಿಗೆ ನೇರವಾಗಿ ಕಾರಣವಾಗಿರುವ ಜೇನುಹುಳುಗಳು ಮಾನವ ಸೃಷ್ಟಿಸಿದ ಕೀಟನಾಶಕಗಳ ಮುಂದೆ ಮಾತ್ರ ಅತ್ಯಂತ ದುರ್ಬಲ.

ಪ್ರಪಂಚದಾದ್ಯಂತ ಕೀಟನಾಶಕ ಸಿಂಪಡಿಸಿದ ಹೊಲ, ಗದ್ದೆ, ತೋಟಗಳಲ್ಲಿ ಹೂವಿಗೆ ಬರುವ ಜೇನುಹುಳುಗಳು ಪ್ರತಿನಿತ್ಯ ಕೋಟ್ಯಂತರ ಸಂಖ್ಯೆಯಲ್ಲಿ ಸಾಯುತ್ತಿವೆ. ಉಸಿರಾಡುವ ಗಾಳಿಯನ್ನು, ಕುಡಿಯುವ ನೀರನ್ನು ವಿಷವಾಗಿಸುತ್ತಿರುವ ಮಾನವನಿಗೆ ಮುಂಬರಲಿರುವ ದಿನಗಳ ಭವಿಷ್ಯವನ್ನು ಸಾರಿ ಸಾರಿ ಹೇಳುತ್ತಾ ಸಾವನ್ನಪ್ಪುತ್ತಿವೆ.

ಮರವೇರಿದ್ದ ಬೊಮ್ಮ ಜೇನಿದ್ದ ಪೊಟರೆಯೊಳಗೆ ಇಣುಕಿ, ಮೆಲ್ಲನೆ ಗಾಳಿ ಊದುತ್ತಾ ತನ್ನ ವಾಸನೆಗೆ ಅವುಗಳು ಹೊಂದುಕೊಳ್ಳುವವರೆಗೆ ಕಾಯ್ದ. ಬೊಮ್ಮನ ಆ ಪ್ರಯತ್ನವನ್ನು ಲೆಕ್ಕಿಸದೆ ಸಾವಿರಾರು ಜೇನುಗಳು ಪ್ರವಾಹದಂತೆ ಒಳ ಹೊಕ್ಕಿ ಹೊರ ನಡೆದು ಪ್ರತಿಭಟಿಸುತ್ತಿದ್ದವು. ನಂತರ ಮೆಲ್ಲನೆ ತನ್ನ ಬೆರಳನ್ನು ತೂರಿಸಿ ಜೇನು ಶೇಖರಗೊಂಡಿರುವುದನ್ನು ಖಾತರಿಪಡಿಸಿಕೊಂಡ. ಕಿರಿದಾಗಿದ್ದ ಪೊಟರೆಯ ಬಾಯಿಯನ್ನು ಕತ್ತಿಯಿಂದ ಅಗಲಿಸಲು ಆರಂಭಿಸಿದ. ಸಿಟ್ಟಿಗೆದ್ದ ಜೇನುಹುಳುಗಳು ಗುಂಯ್‌ಗುಟ್ಟುತ್ತಾ ಬೊಮ್ಮನ ಸುತ್ತ ಗಿರಕಿ ಹಾಕುತ್ತಿದ್ದವು.

ನಾಲ್ಕೈದು ನಿಮಿಷಗಳಲ್ಲಿ ಬೊಮ್ಮ ಮಂಜಿನಲ್ಲಿ ಮುಳುಗಿದಂತೆ ಕಂಡ. ಕತ್ತಿಯನ್ನು ಮೆಲ್ಲಗೆ ಎಡಗೈಯಿಂದ ಕುಟ್ಟುತ್ತಾ ಪೊಟರೆಯ ಬಾಯನ್ನು ಅಗಲಿಸುತ್ತಿದ್ದ ಬೊಮ್ಮನ ಕಾಲು ಸಹ ನಡುನಡುವೆ ಜಾರುತ್ತಿತ್ತು. ಹಾಗಾಗಿ ಸೋತಿದ್ದ ಕೈಗಳನ್ನು ಬದಲಿಸುವ ಪ್ರಯತ್ನಕ್ಕೆ ಅವನಿಗೆ ಅವಕಾಶವೇ ಇರಲಿಲ್ಲ. ಬೊಮ್ಮನ ಸಾಹಸ ಸದ್ಯಕ್ಕೆ ಮುಗಿಯುವಂತೆ ಕಾಣಲಿಲ್ಲ. ಆ ಹೊತ್ತಿಗೆ ನಮ್ಮ ತಾಳ್ಮೆ ಮುಗಿಯುತ್ತಾ ಬಂದಿತ್ತು. ಬೊಮ್ಮ ಸಹ ದಣಿದಿದ್ದ.

ಆ ಪ್ರಯತ್ನವನ್ನು ಕೈ ಬಿಡುವಂತೆ ಒತ್ತಾಯಿಸಿದಾಗ, ಅರೆ ಮನಸ್ಸಿನಿಂದ ಪ್ಯಾಂಟನ್ನು ಸರಿಪಡಿಸಿಕೊಂಡು ಕೆಳಗಿಳಿದ. ಹತ್ತಾರು ಹುಳುಗಳು ಅವನ ಮುಖದ ಮೇಲೆ ಆಕ್ರಮಣ ನಡೆಸಿದ್ದವು. ನೋವಿದ್ದ ಭಾಗಗಳತ್ತ ಬೆರಳಾಡಿಸುತ್ತಾ ಮತ್ತೆ ಮರದ ನೆತ್ತಿ ನೋಡುತ್ತಾ ನಿಂತ.

‘ಇನ್ನೊಂದ್ ಐದ್ ನಿಮಿಷ ಸಾ... ಎಲ್ಲಾ ಮುಗಿದಿತ್ತು ಸಾ...’ ಎಂದು ಪುನಃ ಮರವೇರುವಂತೆ ಪ್ರೋತ್ಸಾಹಿಸಬಹುದೆಂಬ ನಿರೀಕ್ಷೆಯಿಂದ ನಮ್ಮತ್ತ ನೋಡಿದ. ಸೊನ್ನೆಗಳ ಕಲ್ಪನೆ ಇಲ್ಲದ ಬೊಮ್ಮನ ಐದು ನಿಮಿಷ ಎಷ್ಟೆಂದು ಹಲವಾರು ವರ್ಷಗಳ ಅನುಭವದಿಂದ ತಿಳಿದಿದ್ದ ನಾವು ಅಪಾಯವನ್ನು ಆಹ್ವಾನಿಸಿಕೊಳ್ಳಲು ಸಿದ್ಧರಿರಲಿಲ್ಲ.

ಅಲ್ಲಿಂದ ಕದಲಿ ಸ್ವಲ್ಪ ದೂರ ಸಾಗುವಾಗ ಇದ್ದಕ್ಕಿದ್ದಂತೆ ಬೊಮ್ಮ ಹಿಂದಿರುಗಿ ನೋಡುತ್ತಾ ನಿಂತ. ಮೂರು ಸಾಕಾನೆಗಳು ನಮ್ಮತ್ತ ಬರುತ್ತಿದ್ದವು. ಬಹುಶಃ ಮಾವುತರಿಗೆ ಯಾರೋ ಜೇನು ತೆಗೆಯಲು ಪ್ರಯತ್ನಿಸುತ್ತಿದ್ದ ಸುಳಿವು ದೂರದಲ್ಲೇ ಸಿಕ್ಕಿರಬಹುದು. ‘ಈ ಆನೆಕಾರ್ರು ಸಾ... ರುಂಬ ಮೋಸ ಸಾ...’ ಎಂದು ಬೊಮ್ಮ ಮೆಲ್ಲನೆ ಗೊಣಗಿದ.

ಆನೆಯನ್ನು ದಿಂಡಲು ಮರದ ಬುಡಕ್ಕೆ ತಂದು ನಿಲ್ಲಿಸಿದ ಮಾವುತನೊಬ್ಬ, ಆನೆಯ ಮೇಲೆ ನಿಂತು, ರೆಂಬೆ ಹಿಡಿದು ಮರವೇರಿ ಜೇನಿದ್ದ ಪೊಟರೆಯನ್ನು ಅಗಲಿಸಿ ಕಣ್ಣುಮಿಟಕಿಸುವ ಹೊತ್ತಿಗೆ ಜೇನನ್ನು ಹೊರತೆಗೆದ.

ಎಲ್ಲವನ್ನು ನೋಡುತ್ತಿದ್ದ ಬೊಮ್ಮ ‘ತುಂಬ ಮೋಸ ಸಾ...’ ಎಂದು ಹಾಗೆಯೇ ನಿಂತಿದ್ದ. ಮಾವುತರ ನಗು ಮತ್ತು ಆನೆಗಳ ಕೊರಳಿನ ಗಂಟೆಯ ಸದ್ದು ನಿಧಾನವಾಗಿ ದೂರ ಸರಿದು ಕಾಡಿನಲ್ಲಿ ಅಂತರ್ಧಾನಗೊಂಡಿತು. ಬೊಮ್ಮನನ್ನು ಅಣಕಿಸಲಷ್ಟೇ ಮಾವುತರು ಹಾಗೆ ಮಾಡಿದಂತಿತ್ತು.

ಅಲ್ಲಿಂದ ಮುಂದೆ, ತನಗಾದ ಅನ್ಯಾಯವನ್ನು ಯೋಚಿಸುತ್ತಾ ಬೊಮ್ಮ ತಲೆಯಾಡಿಸುತ್ತಾ ನಡೆದಿದ್ದ. ಆದರೆ ಒಮ್ಮೆಲೆ ಕಾಜಾಣ ಹಕ್ಕಿಗಳ ಕೂಗು ಕಾಡನ್ನು ತುಂಬಿಕೊಂಡಾಗ ಬೊಮ್ಮ ಜೇನಿನ ಘಟನೆಯನ್ನು ಕ್ಷಣದಲ್ಲಿ ಮರೆತಿದ್ದ.

ಉದ್ದ ಬಾಲದ ಕಾಜಾಣಗಳ ಜೋಡಿ ಅಲ್ಲಿ ಚಟುವಟಿಕೆಯಿಂದ ಹಾರಾಡುತ್ತಿದ್ದವು. ತುಂಬಿದ ಕಾಡಿನಲ್ಲಿ ರೆಂಬೆಕೊಂಬೆಗಳ ನಡುವೆ ಈಜಿದಂತೆ, ತೇಲಿದಂತೆ ಹಾರುವ ಈ ಕಾಜಾಣಗಳ ಹಾರಾಟವೇ ರೋಮಾಂಚಕ. ಮೂವತ್ತಕ್ಕೂ ಹೆಚ್ಚು ಹಕ್ಕಿಗಳ ಹಾಡನ್ನು ಅನುಕರಿಸುವ ಪ್ರತಿಭೆ ಇವುಗಳದ್ದು. ಕವಿಗಳನ್ನು ಆಕರ್ಷಿಸಿದಂತೆಯೇ ವಿಜ್ಞಾನಿಗಳನ್ನೂ ಪ್ರಚೋದಿಸಿರುವುದು ಇವುಗಳ ವಿಶೇಷ.

ಕಾಜಾಣಗಳೇಕೆ ಕಾಡಿನ ಇತರ ಹಕ್ಕಿಗಳ ಕರೆಗಳನ್ನು ಅನುಕರಿಸುತ್ತವೆ? ಇದರ ಕಂಠ ಹೀಗೆ ವಿಕಾಸವಾಗಿರುವುದಕ್ಕೆ ಏನಾದರೂ ನಿರ್ದಿಷ್ಟ ಕಾರಣಗಳಿರಬಹುದೆ? ಗಂಡು–ಹೆಣ್ಣು ಹಕ್ಕಿಗಳೆರಡಕ್ಕೂ ಉದ್ದದ ಬಾಲಗಳಿರುವುದರಿಂದ ಅದರ ಪಾತ್ರ ಮತ್ತು ಪಾಮುಖ್ಯತೆ ಏನಿರಬಹುದು? – ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಎಷ್ಟೋ ವಿಜ್ಞಾನಿಗಳು ಕಾಡುಗಳಲ್ಲಿ ಕಳೆದುಹೋಗಿದ್ದಾರೆ.

ಕಾಜಾಣಗಳನ್ನು ಹುಡುಕುತ್ತಾ ಕಾಡಿನಲ್ಲಿ ಸಾಗುವಾಗ ಬೊಮ್ಮ ಚಿಗುರೊಡೆದ ಸಾಗುವಾನಿ ಸಸಿಯೊಂದನ್ನು ಮುರಿದುಕೊಂಡ. ಅದು ಏಕೆಂದು ಅರ್ಥವಾಗಲಿಲ್ಲ. ಅಷ್ಟರಲ್ಲಿ ದೂರದಲ್ಲೆಲ್ಲೋ ಸದ್ದು ಹರಿದಂತಾಯಿತು. ಜಲಪಾತಗಳು ಧುಮುಕಿದಂತೆ, ಗೂಡ್ಸ್ ರೈಲುಗಳು ತೆವಳಿದಂತಹ ಸದ್ದು ನಮ್ಮತ್ತ ಬರುತ್ತಿರುವ ಅನುಭವವಾಗತೊಡಗಿತು. ತಟ್ಟೆಯಂತೆ ಅಗಲವಾದ ಎಲೆಗಳಿರುವ ಸಾಗುವಾನಿ ಕಾಡಿನಲ್ಲಿ ಇದು ಸಾಮಾನ್ಯ. ಎಲೆಗಳ ಮೇಲೆ ಬೀಳುವ ಮಳೆ ಹನಿಗಳ ಸದ್ದು ಹಲವಾರು ಕಿ.ಮೀ. ದೂರದವರೆಗೆ ಕೇಳಿಬರುತ್ತದೆ. ಆಕಾಶದಿಂದ ಕಾಲೂರಿ ಬರುತ್ತಿರುವ ಮಳೆಯನ್ನು ಮುಂಚಿತವಾಗಿ ಸೂಚಿಸುತ್ತದೆ. ಗಾಳಿ ನಮ್ಮತ್ತ ಬೀಸುವಾಗ ಈ ಸದ್ದು ಇನ್ನಷ್ಟು ತೀಕ್ಷ್ಣವಾಗಿರುತ್ತದೆ.

ಕತ್ತರಿಸಿದ್ದ ಸಾಗುವಾನಿ ರೆಂಬೆಯ ತುದಿಯನ್ನು ಪೆನ್ಸಿಲ್ ಮೊನೆಯನ್ನು ಚೂಪುಗೊಳಿಸಿದಂತೆ ಬೊಮ್ಮ ಕತ್ತಿಯಲ್ಲಿ ಮೊನಚುಗೊಳಿಸಿದ. ಬಳಿಕ ಇನ್ನೊಂದು ಗಿಡದ ದೊಡ್ಡ ಎಲೆಗಳನ್ನು ಹೆಕ್ಕಿ ಒಂದರಮೇಲೊಂದರಂತೆ ಮೊನಚುಗೊಳಸಿದ ಕಡ್ಡಿಗೆ ಪೋಣಿಸುತ್ತಾ ಸುಂದರವಾದ ಕೊಡೆಯನ್ನು ವಿನ್ಯಾಸಗೊಳಿಸಿದ. ಮಳೆ ಹೆಚ್ಚಾಗತೊಡಗಿತು. ಬರುವ ಮಳೆಯನ್ನು ನಿರೀಕ್ಷಿಸಿ ನಮಗೆಂದೇ ಕೊಡೆಯನ್ನು ಸಿದ್ಧಪಡಿಸುತ್ತಿದ್ದಾನೆಂದು ತಿಳಿದಿದ್ದೆವು. ‘ಅಷ್ಟೇ ಸಾಕು ಬೊಮ್ಮ... ಕೊಡು’ ಎನ್ನುವ ನಮ್ಮ ಧ್ವನಿ ಮಳೆಯಲ್ಲಿ ಕರಗಿಹೋಗಿತ್ತು. ಬೊಮ್ಮ ಸಿದ್ಧಪಡಿಸಿದ್ದ ಕೊಡೆಯನ್ನು ಈಗ ನೀಡುತ್ತಾನೆ, ಮಳೆಯಿಂದ ಸ್ವಲ್ಪವಾದರೂ ಪಾರಾಗಬಹುದೆಂದು ಯೋಚಿಸಿದೆವು. ಬೊಮ್ಮ ನಮ್ಮತ್ತ ತಿರುಗಲೂ ಇಲ್ಲ.

ಮಳೆ ಇನ್ನಷ್ಟು ಹೆಚ್ಚಾಯಿತು. ಬೊಮ್ಮ ಕೊಡೆ ಕೊಡಲೇ ಇಲ್ಲ. ಮಳೆಯಿಂದ ಆಶ್ರಯ ಪಡೆಯಲು ದೊಡ್ಡ ಸಾಗುವಾನಿ ಮರದ ನೆರಳಿಗೆ ಓಡಿದೆವು. ಹಿಂದಿರುಗಿ ನೋಡಿದರೆ ಕೊಡೆಯನ್ನು ಹೆಗಲ ಮೇಲಿರಿಸಿದ ಬೊಮ್ಮ ಕಾಜಾಣಗಳಿಗಾಗಿ ಕಣ್ಣಾಡಿಸುತ್ತಿದ್ದ.

ಮಳೆ ನಿಂತಾಗ ಕ್ಯಾಮೆರಾ ಬ್ಯಾಗ್ ಸಹ ಒದ್ದೆಯಾಗಿತ್ತು. ಹಸಿದಿದ್ದ ನಾವು ಮನೆಗೆ ಹಿಂದಿರುಗಲು ತೀರ್ಮಾನಿಸಿದೆವು. ನಾವಿದ್ದ ಸ್ಥಳದಿಂದ ಮನೆ ತಲುಪಲು ಹೊಳೆಯನ್ನು ದಾಟಬೇಕಿತ್ತು. ಬಿದ್ದ ಮಳೆಗೆ ಅದು ಉಬ್ಬಿ ಹರಿದಿತ್ತು. ಬದುಕನ್ನು ಆ ಹೊಳೆಯಲ್ಲಿ ಕಳೆದ, ಆ ಹೊಳೆಯ ನಾಡಿಮಿಡಿತವನ್ನು ಬಲ್ಲ ಬೊಮ್ಮನಿಗೆ ಸುಲಭದ ಮಾರ್ಗದಲ್ಲಿ ಕರೆದೊಯ್ಯುವಂತೆ ಹೇಳಿದೆವು. ಹುಟ್ಟಿದ ಮಗುವನ್ನೇ ಮೊಯಾರ್ ಹೊಳೆಯಲ್ಲಿ ಮುಳುಗಿಸಿ ಸ್ನಾನ ಮಾಡಿಸುವ ಈ ಮಂದಿಗೆ ನದಿ ಚೆನ್ನಾಗಿ ಪರಿಚಯವಿರಬೇಕೆಂದು ಯಾವ ಸಂಶಯಗಳಿಲ್ಲದೆ ಬೊಮ್ಮನನ್ನು ಹಿಂಬಾಲಿಸಿದೆವು.

ಪ್ಯಾಂಟ್ ಮಡಚಿದ ಬೊಮ್ಮ ನೀರಿಗಿಳಿದ. ಹತ್ತು ಮೀಟರ್ ಸಾಗುವ ಹೊತ್ತಿಗೆ ಅವನ ಸೊಂಟ ನೀರಿನಲ್ಲಿ ಮುಳುಗಿತ್ತು. ನಮಗಿದ್ದ ಭರವಸೆ ಎಂದರೆ ಬೊಮ್ಮ ನಮಗಿಂತ ಕುಳ್ಳಗಿದ್ದದ್ದು. ಆತ ಸಾಗಿದ ದಾರಿಯಲ್ಲಿ ನಾವು ನಿರಾಯಾಸವಾಗಿ ಹೋಗಬಹುದೆಂದು. ಆದರೂ ಮುಂಜಾಗ್ರತೆಯಿಂದ ಬೊಮ್ಮನಿಗೆ ಸುಲಭದ ದಾರಿ ಹಿಡಿಯುವಂತೆ ತಿಳಿಸಿ, ನಮಗೆ ಈಜು ಬರುವುದಿಲ್ಲವೆಂದು ಮತ್ತೆ ನೆನಪಿಸಿದೆವು. ರಭಸದಲ್ಲಿ ಹರಿಯುತ್ತಿದ್ದ ಹೊಳೆಯ ಜಾರುವ ಬಂಡೆಗಳ ಮೇಲೆ ಕಾಲುಗಳನ್ನು ಭದ್ರಪಡಿಸಿ, ನಮ್ಮತ್ತ ತಿರುಗಿ, ಅಣಕಿಸುವಂತೆ ನಕ್ಕು ಮುಂದುವರಿದ. ಮತ್ತೆ ಎರಡು ಹೆಜ್ಜೆ ಇರಿಸಿ ‘ನಿಮಗೆ ಈಸು ಬರಲ್ವಾ ಸಾ...’ ಎಂದು ಕೆಣಕಿದ.

ಮಳೆಯಲ್ಲಿ ತೋಯ್ದಿದ್ದ ನಾವು ನದಿ ದಾಟಿದ ಬಳಿಕ ಮತ್ತೆ ಸಂಪೂರ್ಣವಾಗಿ ಒದ್ದೆಯಾದೆವು. ಜೊತೆಗೆ ಮುಂಜಾನೆಯಿಂದ ದಣಿದಿದ್ದ ನಾವು ಹಸಿದಿದ್ದೆವು. ಇದಲ್ಲದೆ ಬೊಮ್ಮ ಮುದುಮಲೈ ಕಾಡಿಗೆ, ಹಾಡಿಯ ಜನರಿಗೆಲ್ಲ ನಮಗೆ ಈಜು ಬರುವುದಿಲ್ಲವೆಂದು ತಮಟೆ ಬಾರಿಸಿಕೊಂಡು ಎರಡು ತಿಂಗಳು ತಿರುಗುತ್ತಾನೆಂದು ಒಳಗೊಳಗೆ ಅಂಜಿಕೆಯಾಗುತ್ತಿತ್ತು.

ಒದ್ದೆಯಾದ ಬಟ್ಟೆಗಳನ್ನು ಕಳಚಿ ಹಿಂಡುತ್ತಿರುವಾಗ ಏನೋ ಸಂಶಯವಾಗಿ ‘ಬೊಮ್ಮ ನಿನಗೆ ಈಜು ಬರುತ್ತದೆಯೇ?’ ಎಂದೆ.
‘ನೀರು ಈಸದ ಸಾ... ನಂಗ್ ಬರಂಗಿಲ್ಲ ಸಾ...’ ಎಂದು ಬೊಮ್ಮ ನಿರ್ಲಿಪ್ತವಾಗಿ ಉತ್ತರಿಸಿದ.

ಹಿಂದೊಮ್ಮೆ ಹಿರಿಯರೊಬ್ಬರನ್ನು ‘ಜೆನ್ ಬುದ್ಧಿಸಂ’ ಎಂದರೇನು? – ಎಂದು ಕೇಳಿದ್ದೆವು. ಹರಿವ ನದಿಗೆ ಮರಳ ಸೇತುವೆಯ ಕಟ್ಟಿ ಹಿಂದಿರುಗಿ ನೋಡದೆ ನಡೆದುಹೋಗುವುದೇ ‘ಜೆನ್ ಬುದ್ಧಿಸಂ’ ಎಂದು ಅವರು ಹೇಳಿದ್ದು ಜ್ಞಾಪಕಕ್ಕೆ ಬಂತು. ಕಾಡಿನ ಕಾಲುದಾರಿಯಲ್ಲಿ ಆಗಲೇ ಬೊಮ್ಮ ಬಹಳ ಮುಂದೆ ಸಾಗಿದ್ದ. ಅವನನ್ನು ಸೇರಿಕೊಳ್ಳುವ ಪ್ರಯತ್ನದಲ್ಲಿ ನಮ್ಮ ನಡಿಗೆಯನ್ನು ಚುರುಕುಗೊಳಿಸಿದೆವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT