ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡೇಲಾರ ಭಾರತೀಯ ನಂಟು

Last Updated 12 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಈ ತಿಂಗಳ ಆರಂಭದಲ್ಲಿ ನೆಲ್ಸನ್‌ ಮಂಡೇಲಾ ಸತ್ತಾಗ ಭಾರತದ ಗಣ್ಯರು ಸಲ್ಲಿಸಿದ ಶ್ರದ್ಧಾಂಜಲಿಗಳಲ್ಲಿ ದೇಶಭಕ್ತಿ­ಯನ್ನು ಎತ್ತಿಹಿಡಿಯುವ ದನಿ ಇತ್ತು. ಮಂಡೇಲಾ ಅವರ ನೈತಿಕ ಸ್ಥೈರ್ಯ, ಸ್ನೇಹಪರತೆ ಹಾಗೂ ಹೊಂದಾ­ಣಿಕೆ ಗುಣ ಮಹಾತ್ಮ ಗಾಂಧಿ ಅವರಿಗೆ ಹೋಲಿಕೆ­ಯಾಗುವಂತಿವೆ ಎಂದು ಹೊಗಳ­ಲಾಯಿತು (ಅದು ಹಾಗಿರುವುದು ಸತ್ಯ). ಮತ್ತೆ ಕೆಲವರು ಮಂಡೇಲಾ ಅವರ ಹೀರೊ ನೆಹರೂ ಆಗಿದ್ದರೇ ವಿನಾ ಗಾಂಧೀಜಿ ಅಲ್ಲ ಎಂದು ಹೇಳಿದರು (ಅದೂ ನಿಜವೇ).

ಆದರೆ, ಈ ನುಡಿನಮನಗಳಲ್ಲಿ  ಮಹತ್ವದ ಅಂಶವೊಂದು ಬಿಟ್ಟುಹೋಗಿತ್ತು.   ಭಾರತೀಯ ಮೂಲದ ದಕ್ಷಿಣ ಆಫ್ರಿಕನ್ನರ ಜತೆ ಮಂಡೇಲಾ ಹೊಂದಿದ್ದ ಆಪ್ತ ಸಂಬಂಧವನ್ನು ವಿವರಿಸುವ ವಿವರಗಳು ಅಲ್ಲಿ ಕಾಣಲಿಲ್ಲ. 1940ರ ದಶಕ­ದಲ್ಲಿ ಮಂಡೇಲಾ, ಜೋಹಾನ್ಸ್‌ಬರ್ಗ್‌­ನಲ್ಲಿ ವಾಸಿ­ಸುತ್ತಿದ್ದಾಗ  ಅವರಿಗೆ ಯುವ  ಕ್ರಾಂತಿಕಾರಿ­ಗಳಾದ ಇಸ್ಮಾಯಿಲ್‌ ಮೀರ್‌ ಹಾಗೂ ಜೆ.ಎನ್‌. ಸಿಂಗ್‌ ಅವರ ಸ್ನೇಹ ಲಭಿಸಿತ್ತು.

ಅವರಿಬ್ಬರ ಮೂಲಕ ಮಂಡೇಲಾಗೆ ಭಾರತದ ಸ್ವಾತಂತ್ರ್ಯ ಚಳವಳಿ ಹಾಗೂ ಗಾಂಧೀಜಿ ಪ್ರಭಾವದ ಅರಿವಾಯಿತು. 1946ರಲ್ಲಿ ತಾರತಮ್ಯದಿಂದ ಕೂಡಿದ ಭೂಕಾಯ್ದೆಯ ವಿರುದ್ಧ  ನಟಾಲ್‌ ಹಾಗೂ ಟ್ರಾನ್ಸ್‌ವಾಲ್‌ನಲ್ಲಿ ಭಾರತೀಯರು ನಡೆಸಿದ ಅಸಹಕಾರ ಚಳವಳಿಯ ಸಂದರ್ಭದಲ್ಲಿ ಗಾಂಧಿ ಮಾದರಿಯ ಸತ್ಯಾಗ್ರಹ ವಿಧಾನ ಎಂಥದ್ದು ಎಂಬುದು ಅವರಿಗೆ ಮನದಟ್ಟಾಯಿತು.

ದಕ್ಷಿಣ ಆಫ್ರಿಕಾದಲ್ಲಿ ನಡೆದ ಅಸಹಕಾರ ಚಳವಳಿಯ ನೇತೃತ್ವವನ್ನು ವೈದ್ಯರಾದ ಯುಸೂಫ್‌ ದಾದೂ ಹಾಗೂ ಜಿ.ಎಂ. (ಮೊಂಟಿ) ನಾಯ್ಕರ್‌  ವಹಿಸಿದ್ದರು. ಯುಸೂಫ್‌ ಗುಜರಾತಿ ಮೂಲದವರಾಗಿದ್ದರು. ನಾಯ್ಕರ್‌ ತಮಿಳುನಾಡಿನವರು. ನಾಯ್ಕರ್‌ ಗಾಂಧಿವಾದಿಯಾದರೆ, ಯುಸೂಫ್‌ ಗಾಂಧಿ­ಯನ್ನು ಇಷ್ಟಪಡುತ್ತಿದ್ದ ಕಮ್ಯುನಿಸ್ಟರಾಗಿದ್ದರು. ಈ ಇಬ್ಬರೂ ಸಂಘಟಿಸಿದ ಚಳವಳಿ ಬಿಳಿಯರ ಆಡಳಿತದ ವಿರುದ್ಧ ನಡೆಸಿದ ಮೊದಲ ಮಹತ್ವದ ಜನಾಂದೋಲನವಾಗಿತ್ತು. ಈ ಚಳವಳಿಯ ಪ್ರಭಾವ­ವನ್ನು ಮೇರಿ ಬೆನ್ಸನ್‌ ಅವರ ‘ಹಿಸ್ಟರಿ ಆಫ್‌ ದಿ ಆಫ್ರಿಕನ್‌ ನ್ಯಾಷನಲ್‌ ಕಾಂಗ್ರೆಸ್‌’ ಪುಸ್ತಕದಲ್ಲಿನ ‘೧೯೪೬: ದಿ ಇಂಡಿಯನ್ಸ್‌ ಲೀಡ್‌ ದಿ ಸ್ಟ್ರಗಲ್‌’ ಎಂಬ ಅಧ್ಯಾಯದಲ್ಲಿ ವಿವರಿಸಲಾಗಿದೆ.

ಈ ಅಸಹಕಾರ ಚಳವಳಿ ಮಂಡೇಲಾ ಅವರ ಮೇಲೆ ಭಾರೀ ಪ್ರಭಾವ ಬೀರಿತ್ತು. ಅವರೇ ಮುಂದೆ ಹೇಳಿಕೊಂಡಂತೆ, ‘ವರ್ಣಭೇದದ ವಿರುದ್ಧ ಆಫ್ರಿಕನ್ನರು ಮತ್ತು ಆಫ್ರಿಕನ್‌ ನ್ಯಾಷ­ನಲ್‌ ಕಾಂಗ್ರೆಸ್‌ (ಎಎನ್‌ಸಿ) ಸಹ ಮಾಡದೇ ಇದ್ದಂಥ ಉಗ್ರ ಸ್ವರೂಪದ ಪ್ರತಿಭಟನೆಯನ್ನು ಭಾರತೀಯರು ನಡೆಸಿದ್ದರು’.  ಅವರು ನಡೆಸಿದ ಚಳವಳಿ ‘ಯೂತ್‌ ಲೀಗ್‌’ನಲ್ಲಿದ್ದ ಮಂಡೇಲಾ  ಮತ್ತವರ ಗೆಳೆಯರು ಆಯೋಜಿಸುತ್ತಿದ್ದ ಪ್ರತಿಭಟನೆ­ಗಳಿಗೆ ಮಾದರಿಯಾಯಿತು.  

‘ದಾದೂ ಹಾಗೂ ನಾಯ್ಕರ್ ರಂತಹ ಭಾರತೀಯ ನಾಯಕರು ಜನರಲ್ಲಿ ಕ್ರಾಂತಿ ಹಾಗೂ ಉಲ್ಲಂಘನೆಯ ಬೀಜ ಬಿತ್ತಿದರು. ಜೈಲಿನ ಬಗೆಗಿದ್ದ ಭಯವನ್ನೂ ನಿವಾರಿಸಿದರು... ಸ್ವಾತಂತ್ರ್ಯ ಹೋರಾಟ ಅಂದರೆ ಕೇವಲ ಭಾಷಣ­ಗಳನ್ನು ಮಾಡುವುದು, ಸಭೆಗಳನ್ನು ಕರೆಯು­ವುದು, ಗೊತ್ತುವಳಿ ಅಂಗೀಕರಿಸುವುದು ಅಷ್ಟೇ ಅಲ್ಲ, ಅತ್ಯಂತ ವ್ಯವಸ್ಥಿತವಾಗಿ ಸಂಘಟಿಸುವುದು, ಸಾಮೂಹಿಕವಾಗಿ ಉಗ್ರ ಹೋರಾಟ ನಡೆಸು­ವುದು. ಎಲ್ಲಕ್ಕಿಂತ ಹೆಚ್ಚಾಗಿ ತ್ಯಾಗ ಮಾಡುವುದು’ ಎಂಬುದನ್ನು ತೋರಿಸಿಕೊಟ್ಟರು ಎಂದಿದ್ದರು ಮಂಡೇಲಾ.

೧೯೦೦ರ ಆರಂಭದ ವರ್ಷಗಳಲ್ಲಿ ಮೋಹನ­ದಾಸ ಕೆ. ಗಾಂಧಿ ದಕ್ಷಿಣ ಆಫ್ರಿಕಾದಲ್ಲಿ ಕೆಲಸ ಮಾಡುತ್ತಿದ್ದಾಗ ಭಾರತೀಯರು ಮತ್ತು ಆಫ್ರಿಕ­ನ್ನರು ಪ್ರತ್ಯೇಕವಾಗಿದ್ದರು. ಆಫ್ರಿಕನ್ನರನ್ನು ಅನಾಗ­ರಿ­ಕರು ಎಂಬಂತೆ  ಭಾರತೀಯರು ನೋಡುತ್ತಿ­ದ್ದರು. ಆಫ್ರಿಕನ್ನರು ಭಾರತೀಯರನ್ನು ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ತಮ್ಮ ವೈರಿ­ಗಳು ಎಂಬುದಾಗಿ ಪರಿಗಣಿಸುತ್ತಿದ್ದರು. ನಟಾಲ್‌­ನಲ್ಲಿ ವಿಶೇಷವಾಗಿ ಗಣಿ, ಕಾರ್ಖಾನೆಗಳು ಹಾಗೂ ತೋಟಗಳಲ್ಲಿ ಭಾರತೀಯರು ಮತ್ತು ಆಫ್ರಿಕನ್ನರ ನಡುವೆ ಸ್ಪರ್ಧೆಯಿತ್ತು. ಗುತ್ತಿಗೆ ಮೂಲಕ  ಜಮೀನು ಪಡೆದು ಭಾರತೀಯರು  ಕ್ರಮೇಣ ಕೃಷಿ ಚಟುವಟಿಕೆಗಳನ್ನು ವಿಸ್ತರಿಸು­ತ್ತಿದ್ದುದು ಆಫ್ರಿಕನ್ನರ ಆತಂಕಕ್ಕೆ ಕಾರಣವಾಗಿತ್ತು.

19೪೦ರ ದಶಕದ ಅಂತ್ಯದ ವೇಳೆ ಇದು ಬದ­ಲಾಗಿತ್ತು. ಎರಡೂ ಸಮುದಾಯಗಳ ನಾಯ­ಕರು ಪರಸ್ಪರ ಸ್ನೇಹಹಸ್ತ ಕೈಚಾಚುವಷ್ಟಾ­ಗಿದ್ದರು.  ಅಸಹಕಾರ ಚಳವಳಿಯ ಸಂದರ್ಭ­ದಲ್ಲಿ ನಟಾಲ್‌ ಇಂಡಿಯನ್‌ ಕಾಂಗ್ರೆಸ್‌ ಮತ್ತು  ಟ್ರಾನ್ಸ್‌ವಾಲ್‌ ಇಂಡಿಯನ್‌ ಕಾಂಗ್ರೆಸ್‌ಗಳು (ನಾಯ್ಕರ್‌ ಹಾಗೂ ದಾದೂ ಮುಖ್ಯಸ್ಥರಾಗಿ­ದ್ದರು) ಆಫ್ರಿಕನ್‌ ನ್ಯಾಷನಲ್‌ ಕಾಂಗ್ರೆಸ್‌ ಅಧ್ಯಕ್ಷರ (ಎ.ಬಿ.ಕ್ಸುಮಾ) ಜತೆ ಒಪ್ಪಂದಕ್ಕೆ ಸಹಿ ಹಾಕಿ­ದವು.

ಈ ಒಪ್ಪಂದಕ್ಕೆ ಸಹಿ ಹಾಕಿದ ಎಲ್ಲರೂ ವೈದ್ಯರೇ ಆಗಿದ್ದರಿಂದ ಈ ಒಪ್ಪಂದ ‘ವೈದ್ಯರ ಒಪ್ಪಂದ’ ಎಂದು ಹೆಸರು ಪಡೆಯಿತು
ಬಿಳಿಯರ ಆಳ್ವಿಕೆಯಿದ್ದ ದಕ್ಷಿಣ ಆಫ್ರಿಕಾದಲ್ಲಿ ಆಫ್ರಿಕನ್ನರು ಬಹುಸಂಖ್ಯಾತರಾಗಿದ್ದರು. ಬಿಳಿ­ಯರ ವಿರುದ್ಧ ಹೋರಾಡಲು ಅವರಿಗೆ ಇತರ ಸಮುದಾಯಗಳ ಬೆಂಬಲದ ಅಗತ್ಯವೂ ಇತ್ತು. ಇತಿಹಾಸಕಾರ ಗೇಲ್‌ ಎಂ. ಗೆರ್ಹಾರ್ಟ್‌ ಹೇಳು­ವಂತೆ ಆಫ್ರಿಕನ್ನರು, ‘ಭಾರತೀಯರಿಂದ ಎರಡು ಮಹತ್ವದ ಮೌಲ್ಯಗಳನ್ನು ಕಲಿತು­ಕೊಂಡರು.

ಗಾಂಧಿಯವರ ಅಸಹಕಾರ ಚಳ­ವಳಿಯ ಮೂಲಕ ಪಡೆದಿದ್ದ ಆಂದೋಲನಗಳನ್ನು ನಿರ್ವ­ಹಿಸುವ ಅನುಭವ ಹಾಗೂ ಆರ್ಥಿಕತೆ’. ಭಾರ­ತೀಯ ಮಧ್ಯಮ ವರ್ಗದ ಜನ ಆಫ್ರಿಕಾದ ಮಧ್ಯಮ ವರ್ಗದವರಿಗಿಂತ ಸಿರಿವಂತರಾಗಿದ್ದರು. ಭಾರತೀಯರಿಗೆ ಅತಿಹೆಚ್ಚು ಜನಬೆಂಬಲದ ಅಗತ್ಯವಿತ್ತು. ಆಫ್ರಿಕನ್‌ ಹೋರಾಟಗಾರರಿಗೆ ಜಾಮೀನು ಪಡೆಯಲು ಹಾಗೂ ವಕೀಲರಿಗೆ ನೀಡಲು ಹಣದ ಅಗತ್ಯವಿತ್ತು. ಹಾಗಾಗಿ ಈ ಎರಡೂ ಸಮುದಾಯದ ನಡುವಿನ ಸ್ನೇಹ (ನೈತಿಕ ಹಾಗೂ ಲೌಕಿಕ) ಇಬ್ಬರ ಹಿತಾಸಕ್ತಿಗೂ ಪೂರಕವಾಗುವಂತಿತ್ತು.

೧೯೫೨ರಲ್ಲಿ ಆಫ್ರಿಕನ್‌ ಕಾಂಗ್ರೆಸ್‌ ಹಾಗೂ ಇಂಡಿಯನ್‌ ಕಾಂಗ್ರೆಸ್‌, ವರ್ಣಭೇದ ನೀತಿಯ ವಿರುದ್ಧ ಜಂಟಿಯಾಗಿ ದೇಶವ್ಯಾಪಿ ‘ಅಸಹಕಾರ ಚಳವಳಿ’ ಆಯೋಜಿಸಿದ್ದವು.  ಈ ಚಳವಳಿ ಅಪ್ಪಟ ಗಾಂಧಿ ಮಾರ್ಗದಲ್ಲಿತ್ತು. ಅವುಗಳೆಂದರೆ ಅನುಮತಿ ಇಲ್ಲದೇ ಯಾವುದೇ ಸ್ಥಳ ಪ್ರವೇಶಿಸು­ವುದು, ಕರ್ಫ್ಯೂ ಪಾಸ್‌ ಇಲ್ಲದೇ ರಾತ್ರಿ ವೇಳೆ ಹೊರಗೆ ಹೋಗುವುದು, ರೈಲುಗಳಲ್ಲಿ ಯುರೋಪಿ­ಯನ್ನರಿಗೆ ಮೀಸಲಾದ ಸೀಟುಗಳಲ್ಲಿ ಕುಳಿತುಕೊಳ್ಳುವುದು. ರೈಲು ನಿಲ್ದಾಣಗಳಲ್ಲಿ ಯುರೋಪಿಯನ್ನರ ವಿಶ್ರಾಂತಿ ಕೊಠಡಿಗಳನ್ನು ಬಳಸುವುದು. ಅಂಚೆ ಕಚೇರಿಗಳಲ್ಲಿ ಯುರೋಪಿ­ಯನ್ನ­ರಿಗೆ ಮೀಸಲಾದ ಭಾಗವನ್ನು ಪ್ರವೇಶಿಸುವುದು ಇತ್ಯಾದಿ.

ಟ್ರಾನ್ಸ್‌ವಾಲ್‌ನಲ್ಲಿ ನಡೆದ ಅಸಹಕಾರ ಚಳ­ವಳಿಯಲ್ಲಿ  ನೆಲ್ಸನ್‌ ಮಂಡೇಲಾ ಪ್ರಮುಖ ನಾಯಕ­ರಾಗಿದ್ದರು. ಗಾಂಧಿ ಅವರ ಆಪ್ತರಾಗಿದ್ದ ಎ.ಎಂ. ಕಚಾಲಿಯಾ ಅವರ ಮಗ ಮೊಲ್ವಿ ಕಚಾಲಿಯಾ ಜತೆ ಹೋರಾಟದಲ್ಲಿ ತೊಡಗಿ­ಕೊಂಡಿ­ದ್ದರು. ಮೊಲ್ವಿ ಅವರ ಸಹೋದರ ಯುಸೂಫ್‌ ಕಚಾಲಿಯಾ ಜೈಲಿನಲ್ಲಿ ಮಂಡೇಲಾ ಅವರ ಸಂಗಾತಿಯಾಗಿದ್ದರು. ಜೈಲಿ­ನಲ್ಲಿ ಕಳೆದ ಮೊದಲ ದಿನ ವಾರ್ಡರ್‌ ಭಾರ­ತೀಯ ಯುಸೂಫ್‌ಗೆ ಮೊಟ್ಟೆಗಳು, ಟೋಸ್ಟ್‌ ಹಾಗೂ ಚಹಾ ತಂದಿದ್ದ. ಆಫ್ರಿಕನ್‌ ಮಂಡೇಲಾಗೆ ಪುಟು (ಮೆಕ್ಕೆಜೋಳದ ಅಂಬಲಿ) ತಂದಿದ್ದ.

ಮಂಡೇಲಾ ಪ್ರತಿಭಟಿಸಿದಾಗ ಆ ವಾರ್ಡರ್‌  ಜೈಲಿನ ನಿಯಮಾವಳಿಯನ್ನು ತಾನು ಪಾಲಿಸುತ್ತಿರುವುದಾಗಿ ಹೇಳಿದ್ದ. ಆ ನಿಯಮದ ಅನ್ವಯ ಬೇರೆ ಬೇರೆ ಜನಾಂಗಗಳಿಗೆ ವಿಭಿನ್ನ ತಿಂಡಿ, ತಿನಿಸು ನೀಡಬೇಕಿತ್ತು. ವಾರ್ಡರ್‌ ತೆರಳಿದ ಮೇಲೆ ‘ನಾವು ನಕ್ಕುಬಿಟ್ಟೆವು ಮತ್ತು ಆಹಾರ ಹಂಚಿಕೊಂಡೆವು’ ಎಂದು ಕಚಾಲಿಯಾ ಹೇಳಿಕೊಂಡಿದ್ದಾರೆ.

ಜೈಲಿಗೆ ಹೋಗುವುದಕ್ಕಿಂತ ಮುಂಚೆಯೇ ಯುಸೂಫ್‌ ಮತ್ತು ಅವರ ಪತ್ನಿ ಅಮೀನಾ ಜತೆ ಮಂಡೇಲಾ ಅನೇಕ ಬಾರಿ ಊಟ ಮಾಡಿದ್ದರು. ಹಲವು ವರ್ಷಗಳ ಬಳಿಕ, ವರ್ಣಭೇದ ನೀತಿ ಅಂತ್ಯ­ವಾದ ನಂತರ ಅಮೀನಾ ಕಚಾಲಿಯಾ ಜನಾಂಗೀಯ ತಾರತಮ್ಯದ ಸಂಕಷ್ಟದ ದಿನ­ಗಳನ್ನು ನೆನಪಿಸಿಕೊಂಡಿದ್ದರು. ‘೧೯೫೧ರಲ್ಲಿ ನನಗೆ ೨೧ ವರ್ಷ ತುಂಬಿದಾಗ ನಾವು ಪಾರ್ಟಿ ಮಾಡಬೇಕು ಎಂದು ನೆಲ್ಸನ್‌ ಸಲಹೆ ನೀಡಿದ್ದರು. ಪಾರಿವಾಳದ ಅಡುಗೆ ಮಾಡೋಣ ಎಂದು ಯುಸೂಫ್‌ ಹೇಳಿದ್ದರು. ನೆಲ್ಸನ್‌ ಆಗ ೨೧ ಪಾರಿವಾಳಗಳನ್ನು ಹಿಡಿದುಕೊಂಡು ಬಂದರು. ಅಗ್ಗಿ ಪಟೇಲ್‌ ಅವರ ಫ್ಲ್ಯಾಟ್‌ನಲ್ಲಿ ಪಾರ್ಟಿ ನಡೆಯಿತು. ಆರ್ಥರ್‌ ಗೊಲ್ಡ್‌ರಿಚ್‌, ರೊಬಿ ರೇಶಾ, ದುಮಾ ನೊಕ್ವೆ ಮತ್ತು ಇಸೋಪ್‌ ನಗ್ಡಿ ಅಲ್ಲಿ ಒಟ್ಟಾಗಿದ್ದರು. ನೆಲ್ಸನ್‌ ಅಕ್ಕಿ ಸ್ವಚ್ಛ­ಗೊಳಿಸಿದ್ದು ನನಗಿನ್ನೂ ನೆನಪಿದೆ. ಸದ್ಯ, ಕುಡಿ­ಯಲು ಸಾಕಷ್ಟು ಮದ್ಯವೂ ಅವರ ಬಳಿ ಇತ್ತು’.

ವರ್ಣಭೇದ ನೀತಿ ಅಂತ್ಯಗೊಂಡಾಗ ಮಂಡೇಲಾ, ಕಚಾಲಿಯಾ ದಂಪತಿಯ ಜತೆ ಹೆಚ್ಚು ಸಮಯ ಕಳೆಯಲಾರಂಭಿಸಿದರು. ಯುಸೂಫ್‌ ಸತ್ತ ಮೇಲೆ ಅದಾಗಲೇ ಪತ್ನಿ ವಿನ್ನಿ ಅವರಿಂದ ದೂರವಾಗಿದ್ದ ಮಂಡೇಲಾ, ಅಮೀನಾ ಮುಂದೆ ಮದುವೆಯ ಪ್ರಸ್ತಾಪ ಇಟ್ಟಿದ್ದರಂತೆ. ಆಕೆ ಆ ಪ್ರಸ್ತಾಪವನ್ನು ತಳ್ಳಿಹಾಕಿ­ದ್ದರು. ಆದರೆ, ಆ ವಿಷಯವನ್ನು ಗುಟ್ಟಾಗಿ ಇಟ್ಟಿದ್ದರು. ಈ ವರ್ಷದ ಆರಂಭದಲ್ಲಿ ಅಮೀನಾ ಸಾಯುವ ಹೊತ್ತಿಗೆ ಈ ವಿಚಾರ ಬಹಿರಂಗಪಡಿಸಿ­ದ್ದರು. ಮಂಡೇಲಾ ತಮ್ಮ ತಾಯಿ­ಯನ್ನು ಮದು­ವೆ­ಯಾಗಲು ಉತ್ಸುಕ­ರಾಗಿದ್ದ ವಿಚಾರ ಅಮೀನಾ ಪುತ್ರಿ ಕೊಕೊ ಅವ­ರಲ್ಲಿ ಅಚ್ಚರಿ ಹುಟ್ಟಿಸಲಿಲ್ಲ. ‘ಅಮ್ಮನ ಕಾರಣ­ದಿಂದಲೇ ನಮ್ಮ ಮನೆಯಲ್ಲಿ ಮಂಡೇಲಾ ಸದಾ ಕಾಣಿಸಿಕೊಳ್ಳುತ್ತಿದ್ದರು. ಅಪ್ಪನ ಜತೆ ಅವರಿಗೆ ರಾಜಕೀಯ ನಂಟು ಇತ್ತು. ಆದರೆ, ಅದಕ್ಕಿಂತ ಹೆಚ್ಚಾಗಿ ಅಮ್ಮನ ಜತೆ ಅಕ್ಕರೆಯ ಸಂಬಂಧವಿತ್ತು’ ಎಂಬ ವಿಚಾರವನ್ನು ಕೊಕೊ, ಪತ್ರಕರ್ತರ ಜತೆ ಹಂಚಿಕೊಂಡಿದ್ದಾರೆ.

ಭಾರತೀಯರ ಪೈಕಿ ಯುಸೂಫ್‌ ದಾದೂ ಅವರನ್ನು ಮಂಡೇಲಾ ಅತಿ ಹೆಚ್ಚು ಹಚ್ಚಿಕೊಂಡಿ­ದ್ದರು. ಯುಸೂಫ್‌ ದೇಶಭ್ರಷ್ಟರಾಗಿ ಲಂಡನ್‌­ನಲ್ಲಿ ಸತ್ತುಹೋದರು. (ಗಾಂಧಿ ತಜ್ಞರು ಹಾಗೂ ವರ್ಣಭೇದ ನೀತಿಯ ಕಟು ಟೀಕಾಕಾರ ಇ.ಎಸ್‌. ರೆಡ್ಡಿ ಅವರ ಬಳಿ ಮಾತನಾಡುತ್ತ ಮಂಡೇಲಾ, ‘ಡಾ. ದಾದೂ  ಅವರಿಗೆ ನಾವು ಮಕ್ಕಳಂತೆ ಇದ್ದೆವು’ ಎಂದು ಹೇಳಿಕೊಂಡಿದ್ದರು).

ಮಂಡೇಲಾರ ಅತ್ಯಾಪ್ತ ಭಾರತೀಯ ಗೆಳೆಯ ಅಹಮದ್‌ ‘ಕ್ಯಾಥಿ’ ಕತ್ರಾಡ. ಕ್ಯಾಥಿ, ಗಾಂಧಿ ವಾದಕ್ಕಿಂತ ಕಮ್ಯುನಿಸಂ ಕುರಿತು ಒಲವುಳ್ಳವರು. ೧೯೬೩ರ ಪ್ರಸಿದ್ಧ ‘ರಿವೊನಿಯಾ’ ಪ್ರಕರಣದಲ್ಲಿ  ಇಬ್ಬರೂ ಆರೋಪಿಗಳಾಗಿದ್ದರು. ಈ ಪ್ರಕರಣ­ದಲ್ಲಿ ಅಪರಾಧ ಸಾಬೀತಾಗಿ ಇವರಿಬ್ಬರೂ ‘ರಾಬೆನ್‌’ ದ್ವೀಪದ ಜೈಲಿನಲ್ಲಿ ೨೦ ವರ್ಷ ಕೊಳೆಯಬೇಕಾಯಿತು. ಜೈಲಿನಿಂದ ಬಿಡುಗಡೆ­ಯಾದ ಮೇಲೆ ‘ಕ್ಯಾಥಿ’ ತಮ್ಮ ಹಳೆಯ ಸಂಗಾ­ತಿಯ ಜತೆ ಹಲವು ಸಂದರ್ಶನಗಳನ್ನು ರೆಕಾರ್ಡ್‌ ಮಾಡಿದರು. ಮಂಡೇಲಾರ ಹೆಸರಿನಲ್ಲಿ ಬಂದ ‘ಕಾನ್ವರ್ಸೇಷನ್ಸ್‌ ವಿತ್‌ ಮೈಸೆಲ್ಫ್‌’ ಪುಸ್ತಕದಲ್ಲಿ ಈ ಸಂದರ್ಶನದ ವಿವರಗಳು ಪ್ರಕಟವಾಗಿವೆ.

ಅಲ್ಲದೇ ರಾಬೆನ್‌ ದ್ವೀಪದಲ್ಲಿ ಮಂಡೇಲಾರ ಮತ್ತೊಬ್ಬ ಸಂಗಾತಿಯಾಗಿದ್ದ ಇಂದ್ರೆಸ್‌ ನಾಯ್ಡು ಅವರ ಅಜ್ಜ ತಂಬಿ ನಾಯ್ಡು ೧೯೦೭–0೯ ಮತ್ತು ೧೯೧೩–೧೪ರಲ್ಲಿ ಗಾಂಧಿ ನಡೆಸಿದ್ದ ಸತ್ಯಾ­ಗ್ರಹದಲ್ಲಿ ಪಾಲ್ಗೊಂಡಿದ್ದರು. ರಾಬೆನ್‌ ದ್ವೀಪದ  ಕಾರಾಗೃಹದಲ್ಲಿ ಬಂದಿಯಾಗುವ ಮುನ್ನ ನಾಯ್ಡು ಮನೆಗೆ ಮಂಡೇಲಾ ಪದೇ ಪದೇ ಭೇಟಿ ನೀಡುತ್ತಿದ್ದರು. ಇಂದ್ರೆಸ್‌ ಅವರ ತಾಯಿ ‘ಅಮಾ ನಾಯ್ಡು’ ಎಂದೇ ಖ್ಯಾತರಾಗಿದ್ದ ಮನೊನ್ಮೊಣಿ ಮಾಡುತ್ತಿದ್ದ ‘ಏಡಿ’ ಸಾರನ್ನು ಅವರು ಇಷ್ಟ­ಪಟ್ಟು ಸವಿಯುತ್ತಿದ್ದರು. ಆಕೆ ಸ್ವಾತಂತ್ರ್ಯ ಹೋರಾಟ­­ದಲ್ಲಿ ತೊಡಗಿಕೊಂಡಿದ್ದ ಬಹುತೇಕರಿಗೆ ತಾಯಿಯಾಗಿದ್ದರು.

೧೯೯೭ರಲ್ಲಿ ನಾನು ಮೊದಲ ಬಾರಿ ಮಂಡೇಲಾ ನಾಡಿಗೆ ಹೋಗಿದ್ದೆ. ಆಗ ಅಲ್ಲಿ ಭಾರತದ ಹೈಕಮಿಷನರ್‌ ಆಗಿದ್ದ ಗೋಪಾಲ­ಕೃಷ್ಣ ಗಾಂಧಿ ಜತೆ ಉಳಿದುಕೊಂಡಿದ್ದೆ. ನಾಗರಿಕ ಸೇವಾ ಅಧಿಕಾರಿಯಾಗಿದ್ದ ಗೋಪಾಲಕೃಷ್ಣ ಗಾಂಧಿ ವಿದ್ವಾಂಸರು ಹಾಗೂ ಅನುವಾದಕರು. ಅವರ ಮನೆಯಲ್ಲಿ ಏರ್ಪಡಿಸಿದ್ದ ಔತಣಕೂಟ­ದಲ್ಲಿ ನನಗೆ ಇಂದ್ರೆಸ್‌ ನಾಯ್ಡು ಅವರನ್ನು ಪರಿಚಯಿಸಲಾಯಿತು. ಆಫ್ರಿಕಾದ ನಕಾಶೆ­ಯನ್ನು ಹೋಲುವ ಕಪ್ಪುಶಿಲೆಯನ್ನು ಅಳವಡಿಸ­ಲಾದ ಲೋಹದ ಸ್ಮರಣಿಕೆಯೊಂದನ್ನು ಗಾಂಧೀಜಿ ಮನೆಯಲ್ಲಿ ನೋಡಿದೆ. ಅದು ಇಂದ್ರೆಸ್‌ ಅವರು ಗಾಂಧಿಯ ಮೊಮ್ಮಗನಿಗೆ ನೀಡಿದ್ದ ಉಡುಗೊರೆ.

ರಾಬೆನ್‌ ದ್ವೀಪದಿಂದ ಬಿಡುಗಡೆಯಾದಾಗ ಇಂದ್ರೆಸ್‌ ಹಾಗೂ ಇತರ  ಕೈದಿಗಳಿಗೆ ಅವರು ಜೈಲಿನಲ್ಲಿ ಆಹಾರ ಸೇವಿಸುತ್ತಿದ್ದ ಊಟದ ತಟ್ಟೆ­ಯನ್ನು ಹೋಲುವ ಸ್ಮರಣಿಕೆಯೊಂದನ್ನು ನೀಡ­ಲಾಗಿತ್ತು. ಆ ಸ್ಮರಣಿಕೆಯಲ್ಲಿ ಅದೇ ಕೈದಿಗಳು ಜೈಲಿನ ಆವರಣದಲ್ಲಿ ಕೆಲಸ ಮಾಡುತ್ತ ಹೊರ­ತೆಗೆದಿದ್ದ ಗ್ರಾನೈಟ್‌ನಿಂದ ಮಾಡ­ಲಾದ ಆಫ್ರಿ­ಕಾದ ನಕಾಶೆಯನ್ನು ಅಳವಡಿಸ­ಲಾಗಿತ್ತು. ತಂಬಿ ನಾಯ್ಡು ಅವರ ಮೊಮ್ಮಗ ಇಂದ್ರೆಸ್‌ ಅದನ್ನು ತಮ್ಮ ಬಳಿ ಇಟ್ಟುಕೊಳ್ಳದೇ ತಮ್ಮ ಕುಟುಂಬದ ನಡವಳಿಕೆ ಹಾಗೂ ತಮ್ಮ ಔದಾರ್ಯಕ್ಕೆ ತಕ್ಕಂತೆ ಅದನ್ನು ಮಹಾತ್ಮಾ ಗಾಂಧಿ ಅವರ ಮೊಮ್ಮಗ­ನಿಗೆ ನೀಡಿದ್ದರು.

ಅದೇ ಪ್ರವಾಸದ ವೇಳೆ ಸಾರ್ವಜನಿಕ ಸಭೆ­ಯೊಂದರಲ್ಲಿ ಬೆಳ್ಳಿಕೂದಲಿನ ಮಹಿಳೆ­ಯೊಬ್ಬರು ಮಾಡಿದ ಚಿಕ್ಕದಾದ  ಚೊಕ್ಕ ಭಾಷಣ ಕೇಳುವ ಅವಕಾಶ ದೊರಕಿತ್ತು. ಆ ಮಹಿಳೆ ಫ್ರೆನೆ ಗಿನ್ವಾಲಾ ಎಂಬ ಪಾರ್ಸಿ ಮಹಿಳೆ. ವರ್ಣಭೇದ ನೀತಿಯ ವಿರುದ್ಧ ಹೋರಾಡುತ್ತಿದ್ದ ಅವರು ಬಹುವರ್ಷಗಳ ಕಾಲ ದೇಶಭ್ರಷ್ಟರಾಗಿ ಕಾಲ­ಕಳೆದಿದ್ದರು. ಈ ಅವಧಿಯಲ್ಲಿ ದಕ್ಷಿಣ ಆಫ್ರಿಕಾ­ದಲ್ಲಿ ನೆಲೆಸಿದ್ದ ಭಾರತೀಯರ ಇತಿ­ಹಾಸದ ಕುರಿತು ಆಕ್ಸ್‌ಫರ್ಡ್‌ನಲ್ಲಿ ಡಾಕ್ಟರೇಟ್‌ ಪ್ರಬಂಧ ಬರೆಯುತ್ತಿದ್ದರು. ೧೯೯೭ರಲ್ಲಿ ಬಹು­ಜನಾಂಗೀಯ­­ರಿಂದ ಕೂಡಿದ್ದ ದಕ್ಷಿಣ ಆಫ್ರಿಕಾದ ಮೊದಲ ಸಂಸತ್ತಿನ ಸ್ಪೀಕರ್‌ ಆಗಿದ್ದರು.

ದಕ್ಷಿಣ ಆಫ್ರಿಕಾದ ಜನಸಂಖ್ಯೆಯಲ್ಲಿ ಭಾರ­ತೀಯರ ಸಂಖ್ಯೆ ಶೇ ೩ಕ್ಕಿಂತ ಕಡಿಮೆ. ಆದರೆ, ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಆ ಮೊದಲ ಸಂಸತ್ತಿನಲ್ಲಿ ೪೦ ಭಾರತೀಯ ಸಂಸ­ದರಿದ್ದರು. ಯಾರೋ ಈ ಬಗ್ಗೆ ಮಂಡೇಲಾ ಅವರಲ್ಲಿ ದೂರಿದಾಗ, ‘ಹೌದು ಜನಸಂಖ್ಯೆಗೆ ಹೋಲಿಸಿದಾಗ ಅವರಿಗೆ ಹೆಚ್ಚು ಸ್ಥಾನ ಸಿಕ್ಕಿದೆ. ಆದರೆ, ಸ್ವಾತಂತ್ರ್ಯ  ಹೋರಾಟಕ್ಕೆ ಅವರು ನೀಡಿದ ಕೊಡುಗೆ ಗಮನಿಸಿದಾಗ ಇದು ಕಡಿ­ಮೆಯೇ’ ಎಂದು ಹೇಳಿದರಂತೆ.  ಇಷ್ಟು ಸೊಗ­ಸಾದ ಉತ್ತರವನ್ನು ನಮ್ಮ ಕಾಲದ ಯಾವ ರಾಜಕಾರಣಿಯೂ ನೀಡಲು ಸಾಧ್ಯವಿಲ್ಲ ಅಥವಾ ಯಾರೂ ನೀಡಲು ಸಾಧ್ಯವಿಲ್ಲ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT