ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸ್ಸಿದ್ದರೆ ವಿವಾದ ಇತ್ಯರ್ಥಕ್ಕೆ ಮಾರ್ಗವೂ ಇದೆ

Last Updated 14 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕಾವೇರಿ ನೀರು ಹಂಚಿಕೆಯ ವಿಷಯ ರಾಷ್ಟ್ರದ ಗಮನ ಸೆಳೆಯುವುದು ವಿವಾದ ಉಲ್ಬಣಗೊಂಡಾಗ ಮಾತ್ರ. ಈ ಸಂದರ್ಭದಲ್ಲಿ  ದಿಢೀರ್ `ಕಾವೇರಿ ತಜ್ಞ~ರಾಗಿಬಿಡುವ ರಾಜಕಾರಣಿಗಳು, ಕನ್ನಡ ಹೋರಾಟಗಾರರು ಮತ್ತು ಚಲನಚಿತ್ರ ನಟ-ನಟಿಯರ ಅರೆಬೆಂದ ತಿಳಿವಳಿಕೆ ಮಾತುಗಳ ಮೂಲಕವೇ ಈ ವಿವಾದವನ್ನು ಇತರರು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ.

`ಪ್ರಾಣ ಕೊಡುವ~ `ರಕ್ತ ಹರಿಸುವ~... ಇವರ ವೀರಾವೇಶದ ಮಾತುಗಳ ಅಬ್ಬರದ ನಡುವೆ ಸಮಚಿತ್ತದ ಮತ್ತು ಪ್ರಜ್ಞಾವಂತಿಕೆಯ ಮಾತುಗಳು ನಮ್ಮವರಿಗೂ ರುಚಿಸುವುದಿಲ್ಲ. ಬೆಂಕಿ ಕಾರುವ ಮಾತುಗಳನ್ನೆಲ್ಲ ಕೇಳುವಾಗ ಸಂಘರ್ಷದ ಹಾದಿಯಲ್ಲದೆ ವಿವಾದ ಇತ್ಯರ್ಥಕ್ಕೆ ಬೇರೆ ದಾರಿಯೇ ಇಲ್ಲವೇನೋ ಎಂದು ಅನಿಸುವ ಅಪಾಯ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆಯ ಪ್ರಮುಖ ಅಭಿವ್ಯಕ್ತಿಯಾದ ಬಂದ್, ಧರಣಿ, ಮುಷ್ಕರ-  ಒಂದು ಹಂತದವರೆಗೆ ಅವಶ್ಯಕವಾದರೂ ಅದರಿಂದಲೇ ವಿವಾದ ಇತ್ಯರ್ಥ ಸಾಧ್ಯ ಇಲ್ಲ.  ಬೇರೆ ಮಾರ್ಗಗಳೂ ಇವೆ, ಮನಸ್ಸು ಮಾಡಬೇಕು ಅಷ್ಟೆ. ಅಂತಹ  ಏಳು ಮಾರ್ಗಗಳು ಇಲ್ಲಿವೆ:

1. ನೀರನ್ನು ಮಂತ್ರದ ಮೂಲಕ ಸೃಷ್ಟಿಸಲಾಗುವುದಿಲ್ಲ, ಯಂತ್ರದ ಮೂಲಕ ಉತ್ಪಾದಿಸಲೂ ಆಗುವುದಿಲ್ಲ. ನೀರಿಗೆ ಇರುವ ಏಕೈಕ ಮೂಲ ಮಳೆ ಮಾತ್ರ. ಇದರಿಂದಾಗಿ ನಮ್ಮ ಬಳಕೆಗೆ ಅಗತ್ಯ ಇರುವಷ್ಟು ನೀರನ್ನು ಪಡೆಯಲು ಇರುವುದು ಎರಡೇ ಮಾರ್ಗ - ಒಂದು ಮಳೆ, ಇನ್ನೊಂದು ಮಳೆಯಿಂದ ಪಡೆದ ನೀರಿನ ವೈಜ್ಞಾನಿಕ ಬಳಕೆ. ಕಾವೇರಿ ಉಳಿದ ನದಿಗಳಂತಲ್ಲ, ಇದರಲ್ಲಿ ಲಭ್ಯ ಇರುವ ನೀರು ಕೇವಲ 740 ಟಿಎಂಸಿ. ಎಷ್ಟೇ ಮಳೆ ಬಂದರೂ ಕಾವೇರಿ ಕಣಿವೆಯ ನಾಲ್ಕು ರಾಜ್ಯಗಳು ಕೇಳುತ್ತಿರುವ ಸುಮಾರು 1200 ಟಿಎಂಸಿಗಳಷ್ಟು ನೀರನ್ನು ಒದಗಿಸುವುದು ಸಾಧ್ಯವೇ ಇಲ್ಲ.

ಈ ಹಿನ್ನೆಲೆಯಲ್ಲಿ ನೀರಿನ ವೈಜ್ಞಾನಿಕ ಬಳಕೆಯ ಬಗ್ಗೆ ಯೋಚಿಸಲೇಬೇಕಾಗಿದೆ. ಇದಕ್ಕೆ ಇರುವ ಒಂದು ದಾರಿ ಬೆಳೆ ಪರಿವರ್ತನೆ. ಕಾವೇರಿ ಕಣಿವೆಯಲ್ಲಿರುವ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಬಹುಪಾಲು ರೈತರು ಬೆಳೆಯುತ್ತಿರುವುದು ಹೆಚ್ಚು ನೀರಿನ ಅಗತ್ಯ ಇರುವ ಭತ್ತ ಮತ್ತು ಕಬ್ಬು. ಒಂದು ಅಂದಾಜಿನ ಪ್ರಕಾರ ಎರಡೂ ರಾಜ್ಯಗಳ ಕನಿಷ್ಠ ಶೇಕಡಾ 30ರಷ್ಟು ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಮತ್ತು ಕಬ್ಬು ಬೆಳೆಯ ಬದಲಿಗೆ ಕಡಿಮೆ ನೀರನ್ನು ಬಳಸಿ ಹತ್ತಿ, ಸೂರ್ಯಕಾಂತಿ ಮತ್ತು ನೆಲಗಡಲೆ ಬೆಳೆಸಲು ಸಾಧ್ಯ.

2. ಬೆಳೆ ಪರಿವರ್ತನೆ ಸಾಧ್ಯವೇ ಇಲ್ಲದ ಕಾವೇರಿ ಕೊಳ್ಳದ ಶೇಕಡಾ 70ರಷ್ಟು ಪ್ರದೇಶದಲ್ಲಿ ನೀರು ಪೋಲಾಗುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕು. ನಮ್ಮಲ್ಲಿ ಕೃಷಿನೀರು ಬಳಕೆಯ ಬಗ್ಗೆ `ಸಾಮಾಜಿಕ ಲೆಕ್ಕಪರಿಶೋಧನೆ~ (ಸೋಷಿಯಲ್ ಅಡಿಟ್) ನಡೆದೇ ಇಲ್ಲ.

 ಹೆಚ್ಚಿನ ನೀರಾವರಿ ಯೋಜನೆಗಳಲ್ಲಿ ರೈತರ ಗದ್ದೆಗಳಿಗೆ ಹರಿಯುವುದಕ್ಕಿಂತ ಹೆಚ್ಚು ನೀರು ಕಾಲುವೆಗಳಲ್ಲಿ ಪೋಲಾಗುತ್ತದೆ. ಶೇಕಡಾ 40ರಷ್ಟು ನೀರು ಇಂಗಿ ನಷ್ಟವಾಗುತ್ತಿದೆ ಎಂದು ಅಂದಾಜು ಮಾಡಲಾಗಿದೆ. ಕಾಲುವೆಗಳ ಸಿಮೆಂಟ್ ಲೈನಿಂಗ್, ಸ್ಲ್ಯೂಸ್‌ಗಳ ದುರಸ್ತಿ, ಬೇಕಾಬಿಟ್ಟಿ ಕೆರೆಗಳಿಗೆ ಹರಿಸುವ ಬದಲಿಗೆ ಗದ್ದೆಕಾಲುವೆಗಳ (ಫೀಲ್ಡ್ ಚಾನೆಲ್) ನಿರ್ಮಾಣ ಇತ್ಯಾದಿ ಕ್ರಮಗಳ ಮೂಲಕ ನೀರು ಉಳಿಸಲು ಸಾಧ್ಯ. ಸಹಜವಾಗಿಯೇ ಇದಕ್ಕೆ ಹಣ ಎಲ್ಲಿದೆ ಎನ್ನುವ ಪ್ರಶ್ನೆ ಎದುರಾಗುತ್ತದೆ. ಇದಕ್ಕೂ ದಾರಿಗಳಿವೆ. ಅಂತಹದ್ದೊಂದು ದಾರಿ ಅಂದಾಜು 5,100 ಕೋಟಿ ರೂಪಾಯಿ ವೆಚ್ಚದ ವಿಶ್ವಸಂಸ್ಥೆ ನೆರವಿನ `ಕಾವೇರಿ ಆಧುನೀಕರಣ ಯೋಜನೆ~. ಇದು ಮೂರು ದಶಕಗಳಿಂದ ದೂಳು ತಿನ್ನುತ್ತಾ ಬಿದ್ದಿದೆ. ನ್ಯಾಯಮಂಡಳಿ ಮತ್ತು ನ್ಯಾಯಾಲಯದಲ್ಲಿ ಕಾವೇರಿ ವಿವಾದ ಇರುವವರೆಗೆ ಈ ಯೋಜನೆಯನ್ನು ಜಾರಿಗೆ ತರುವುದು ಸಾಧ್ಯ ಇಲ್ಲ.

3. ಕಾವೇರಿ ನ್ಯಾಯಮಂಡಳಿಯಿಂದ ರಾಜ್ಯದ ಕುಡಿಯುವ ನೀರಿನ ಪಾಲಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಸುಪ್ರೀಂಕೋರ್ಟ್‌ಗೆ ಮೊರೆಹೋಗಲು ಅವಕಾಶ ಇದೆ. ರಾಷ್ಟ್ರೀಯ ಜಲನೀತಿಯಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಲಾಗಿದೆ. ಆದರೆ ನ್ಯಾಯಮಂಡಳಿ ಇದಕ್ಕೆ ಕೊನೆಯ ಆದ್ಯತೆ ನೀಡಿರುವುದು ಮಾತ್ರವಲ್ಲ ನೀರಿನ ಲೆಕ್ಕಾಚಾರದಲ್ಲಿಯೂ ಎಡವಿದೆ.  ಬೆಂಗಳೂರು ಮಹಾನಗರ ಸೇರಿದಂತೆ ಕಾವೇರಿ ಕಣಿವೆಯ ಎಲ್ಲ ಹಳ್ಳಿ-ಪಟ್ಟಣಗಳ ಕುಡಿಯುವ ನೀರಿಗಾಗಿ ಕರ್ನಾಟಕ ಕೇಳಿದ್ದು 50 ಟಿಎಂಸಿ. ನ್ಯಾಯಮಂಡಳಿ ಗುರುತಿಸಿರುವುದು 17.22 ಟಿಎಂಸಿ.

ಇದರಲ್ಲಿ ಬೆಂಗಳೂರಿಗೆ 8.70 ಮತ್ತು ಇತರ ಪ್ರದೇಶಕ್ಕೆ 8.52 ಟಿಎಂಸಿ. ಈ 17.22 ಟಿಎಂಸಿಯಲ್ಲಿ ಅರ್ಧದಷ್ಟು ನೀರು ಅಂತರ್ಜಲದಿಂದ ಲಭ್ಯ ಎಂದು ನ್ಯಾಯಮಂಡಳಿ ಹೇಳಿದೆ. ಅಷ್ಟಕ್ಕೆ ಸುಮ್ಮನಾಗದೆ ನೀರು ಬಳಕೆಯಾದ ನಂತರ ಶೇಕಡಾ 80 ಭಾಗ ಭೂಮಿ ಸೇರಿ ಅಂತರ್ಜಲವಾಗುವುದರಿಂದ ಬೆಂಗಳೂರು ಸೇರಿದಂತೆ ಕಾವೇರಿ ಕಣಿವೆ ಪ್ರದೇಶದ ಕುಡಿಯುವ ನೀರಿನ ಅವಶ್ಯಕತೆ  1.75 ಟಿಎಂಸಿ ಮಾತ್ರ ಎಂದು ಹೇಳಿ ಗಾಯದ ಮೇಲೆ ಬರೆ ಹಾಕಿದೆ. ಈ ಅನ್ಯಾಯಕ್ಕೆ ಅವೈಜ್ಞಾನಿಕವಾದ ಲೆಕ್ಕಾಚಾರ ಮಾತ್ರ ಕಾರಣ ಅಲ್ಲ, ಬೆಂಗಳೂರು ನಗರದ ಮೂರನೆ ಎರಡು ಭಾಗ ಪೆನ್ನಾರ್ ನದಿ ಕಣಿವೆಯಲ್ಲಿದೆ ಎಂಬ ಅಭಿಪ್ರಾಯವೂ ಕಾರಣ.

ಇಷ್ಟು ಮಾತ್ರವಲ್ಲ ಕುಡಿಯುವ ನೀರನ್ನು ಲೆಕ್ಕಹಾಕುವಾಗ ಬೆಂಗಳೂರು ಮಹಾನಗರದ 2011ರ ಜನಸಂಖ್ಯೆಯನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗಿದೆ. ಯಾವ ಕೋನದಿಂದ ಈ ನೀರು ವಿತರಣೆಯ ಕ್ರಮವನ್ನು ನೋಡಿದರೂ ಇದರಿಂದ ಅನ್ಯಾಯವಾಗಿರುವುದು ಸ್ಪಷ್ಟ. 

ಕುಡಿಯುವ ನೀರಿನ ವಿಚಾರದಲ್ಲಿ ನದಿ ಕಣಿವೆಯ ಗಡಿಗಳನ್ನು ಎಂದೋ ಉಲ್ಲಂಘಿಸಿಯಾಗಿದೆ. ಕಾವೇರಿ ನ್ಯಾಯಮಂಡಳಿ ಕಾರ್ಯನಿರ್ವಹಿಸುತ್ತಿದ್ದ ದೆಹಲಿ ಮಹಾನಗರ ಯಮುನಾ ನದಿ ಕಣಿವೆಗೆ ಸೇರಿದ್ದು, ಅಲ್ಲಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿರುವುದು ರಾವಿ-ಬಿಯಾಸ್‌ನಿಂದ ಎಂಬುದನ್ನು ನ್ಯಾಯಮೂರ್ತಿಗಳು ಹೇಗೆ ಮರೆತರೋ ಗೊತ್ತಿಲ್ಲ. ಆಂಧ್ರಪ್ರದೇಶ ಮತ್ತು ಕರ್ನಾಟಕ ತಮ್ಮ ಪಾಲನ್ನೂ ಮದ್ರಾಸ್ ನಗರದ ಕುಡಿಯುವ ನೀರಿಗಾಗಿ ನೀಡಿಲ್ಲವೇ? ಕಾವೇರಿ ಕಣಿವೆಯಿಂದ ಬೆಂಗಳೂರು ನಗರಕ್ಕೆ ನೀರು ಪೂರೈಸಲು ಕಣಿವೆಯ ಗಡಿ ಅಡ್ಡಿ ಆಗಲೇ ಬಾರದು.ಇದರ ಜತೆಗೆ ನ್ಯಾಯಮಂಡಳಿಯೇ ಬೆಂಗಳೂರು ನಗರದ ಮೂರನೆ ಎರಡು ಭಾಗ ಪೆನ್ನಾರ್ ನದಿ ಕಣಿವೆಗೆ ಸೇರಿದೆ ಎಂದು ಹೇಳಿರುವ ಕಾರಣ ಪೆನ್ನಾರ್-ಕಾವೇರಿ ನದಿಗಳ ಜೋಡಣೆಯ ಯೋಜನೆಗೆ ಚಾಲನೆ ನೀಡಬಹುದು.

4. ಈಗಿನ ವ್ಯವಸ್ಥೆಯಲ್ಲಿ ಕೃಷ್ಣರಾಜ ಸಾಗರದಿಂದ ಬಿಟ್ಟನೀರು ಬಿಳಿಗುಂಡ್ಲು ಮೂಲಕ ನೇರವಾಗಿ ಮೆಟ್ಟೂರು ಜಲಾಶಯಕ್ಕೆ ಹೋಗುತ್ತದೆ, ಅಲ್ಲಿಂದ ಸಮುದ್ರಕ್ಕೆ. ಕೆ.ಆರ್.ಸಾಗರದಿಂದ ಬಿಳಿಗುಂಡ್ಲು ವರೆಗಿನ ನಡುಹಾದಿಯಲ್ಲಿ ಯಾವ ಬ್ಯಾರೇಜ್ ಇಲ್ಲವೆ ಆಣೆಕಟ್ಟು ಇಲ್ಲ. ಈ ನಡುಮಾರ್ಗದಲ್ಲಿ ಬರುವ ಮೇಕೆದಾಟು, ಶಿವನಸಮುದ್ರ, ಹೊಗೆನಕಲ್ ಮತ್ತು ರಾಸಿಮಲೆಯಲ್ಲಿ ಆಣೆಕಟ್ಟುಗಳನ್ನು ನಿರ್ಮಿಸಿ ವಿದ್ಯುತ್ ಉತ್ಪಾದಿಸುವ ಯೋಜನೆಯನ್ನು ರಾಷ್ಟ್ರೀಯ ಜಲವಿದ್ಯುತ್ ನಿಗಮ ತಯಾರಿಸಿತ್ತು. ಮೇಕೆದಾಟು ಮತ್ತು ಶಿವನಸಮುದ್ರ ಕರ್ನಾಟಕದ ಗಡಿಯೊಳಗೆ ಬರುವುದರಿಂದ ಇವುಗಳನ್ನು ನಾವೇ ಅನುಷ್ಠಾನಗೊಳಿಸುತ್ತೇವೆ ಎಂದು ಕರ್ನಾಟಕ ಸರ್ಕಾರ ಬಹಳ ಹಿಂದೆಯೇ ಹೇಳಿತ್ತು.

ಆದರೆ ಈ ಯೋಜನೆಗಳಿಗೆ ನಮ್ಮಿಂದ ಅನುಮತಿ ಪಡೆಯಬೇಕೆಂದು ತಮಿಳುನಾಡು ಹಟ ಹಿಡಿದು ಕೂತಿದೆ. ಮೇಕೆದಾಟುವಿನಲ್ಲಿ 60ರಿಂದ 80 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯ ನಿರ್ಮಿಸಿದರೆ ಅವಶ್ಯಕತೆ ಇದ್ದಾಗ ಮೆಟ್ಟೂರಿಗೆ ಅಲ್ಲಿಂದ ನೀರು ಹರಿಸಬಹುದು ಇಲ್ಲದಿದ್ದರೆ ಅದರಿಂದ ವಿದ್ಯುತ್ ಉತ್ಪಾದನೆ ಮಾಡಬಹುದು. ಈ ಯೋಜನೆಗಳಿಗೆ ತಮಿಳುನಾಡು ರಾಜ್ಯದ ಒಪ್ಪಿಗೆ ಪಡೆಯಲು ಕೇಂದ್ರ ಸರ್ಕಾರ ಮಧ್ಯಸ್ತಿಕೆ ವಹಿಸಬೇಕೆಂದು ಕರ್ನಾಟಕ ಸರ್ಕಾರ ಕೋರಬಹುದು.

5. ಮೆಟ್ಟೂರು ಆಣೆಕಟ್ಟು ಮತ್ತು ಅದರ ಮೂಲಕ ನಿರ್ಮಿಸಲಾಗಿರುವ ಸ್ಟಾನ್ಲಿ ಜಲಾಶಯ ಸುಮಾರು 78 ವರ್ಷಗಳಷ್ಟು ಹಳೆಯದು. ಇತ್ತೀಚಿನ ವರ್ಷಗಳಲ್ಲಿ ಹೂಳು ತುಂಬಿ ಜಲಾಶಯದ ಸಂಗ್ರಹ ಸಾಮರ್ಥ್ಯ ಗಣನೀಯವಾಗಿ ಕುಸಿದಿದ್ದು ದುರಸ್ತಿ ಮಾಡುವ ಪ್ರಯತ್ನ ನಡೆದಿಲ್ಲ. ಇದರಿಂದಾಗಿ ತನ್ನ ಮೂಲ ಸಾಮರ್ಥ್ಯದಷ್ಟನ್ನು ಸಂಗ್ರಹಿಸಿಟ್ಟುಕೊಳ್ಳಲಾಗದೆ ಜಲಾಶಯದಿಂದ ಬಿಟ್ಟ ನೀರು ಸಮುದ್ರದ ಪಾಲಾಗುತ್ತಿದೆ. ಜಲಾಶಯದ ಹೂಳು ತೆಗೆದು ದುರಸ್ತಿ ಮಾಡುವ ಮೂಲಕ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸಬಹುದು.

6. `ಕಾವೇರಿ ಕುಟುಂಬ~ವನ್ನು ಸಕ್ರಿಯಗೊಳಿಸುವ ಪ್ರಯತ್ನಕ್ಕೆ ಚಾಲನೆ ನೀಡಬೇಕಾಗಿದೆ. ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ರೈತರ ಮುಖಂಡರನ್ನೊಳಗೊಂಡ ಈ ಸಂಘಟನೆಯನ್ನು ಹುಟ್ಟುಹಾಕಿದ್ದು `ಮದ್ರಾಸ್ ಅಭಿವೃದ್ಧಿ ಅಧ್ಯಯನ ಸಂಸ್ಥೆ~. 2003-04ರಲ್ಲಿ ಎರಡೂ ರಾಜ್ಯಗಳ ನಡುವಿನ ನೀರಿನ ವ್ಯಾಜ್ಯ ತಾರಕಕ್ಕೇರಿದಾಗ ಸೌಹಾರ್ದಯುತ ವಾತಾವರಣ ನಿರ್ಮಾಣಕ್ಕೆ ಈ ಸಂಘಟನೆ ಶ್ರಮಿಸಿತ್ತು.

ತಮಿಳುನಾಡಿನ ರೈತ ನಾಯಕ ರಂಗನಾಥನ್ ನೇತೃತ್ವದ ತಂಡ ಕರ್ನಾಟಕದ ಕಾವೇರಿ ಕಣಿವೆ ಪ್ರದೇಶಕ್ಕೆ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಪುಟ್ಟಣ್ಣಯ್ಯ, ಸಾಹಿತಿ ಎಚ್.ಎಲ್. ಕೇಶವಮೂರ್ತಿ, ಬೋರಯ್ಯ ಮತ್ತಿತರನ್ನೊಳಗೊಂಡ ತಂಡ ತಮಿಳುನಾಡಿನ ಕಾವೇರಿ ಕಣಿವೆ ಪ್ರದೇಶಕ್ಕೆ ಭೇಟಿ ನೀಡಿತ್ತು. ಎರಡೂ ರಾಜ್ಯಗಳ ರೈತನಾಯಕರು ಸೇರಿ ಈಗಾಗಲೇ ಹದಿನಾಲ್ಕು ಸಭೆಗಳನ್ನು ನಡೆಸಿದ್ದಾರೆ. ಈ ವರ್ಷದ ಆಗಸ್ಟ್ ತಿಂಗಳಲ್ಲಿ ನಿಗದಿಗೊಳಿಸಲಾಗಿದ್ದ ಸಭೆ ನಡೆದಿದ್ದರೆ ಈಗಿನ ಸಂಘರ್ಷದ ಕಾವು ಕಡಿಮೆಯಾಗುತ್ತಿತ್ತೋ ಏನೋ?

7. ಕಾವೇರಿ ನದಿ ನೀರಿನ ವಿವಾದವೂ ಸೇರಿದಂತೆ ರಾಜ್ಯದ ನೆಲ-ಜಲ-ಭಾಷೆಗಳ ರಕ್ಷಣೆಯ ಜವಾಬ್ದಾರಿ ಆಯಾ ಕ್ಷೇತ್ರಗಳ ಹೋರಾಟಗಾರರಿಗೆ ಒಪ್ಪಿಸಿಬಿಟ್ಟು ಉಳಿದವರು ಆರಾಮವಾಗಿ ಇದ್ದು ಬಿಟ್ಟಿದ್ದಾರೆ. ಬೆಂಗಳೂರಿನಲ್ಲಿ ರಸ್ತೆ ಕೆಟ್ಟುಹೋಗಿದೆ, ವಾಹನ ದಟ್ಟಣೆ ಹೆಚ್ಚಾಗಿದೆ ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಎಂಟು ವರ್ಷಗಳ ಹಿಂದೆ ಭೂಮಿ-ಆಕಾಶ ಒಂದು ಮಾಡಿಬಿಟ್ಟಿದ್ದರು.
 
ದೆಹಲಿಯ ಪತ್ರಿಕೆಗಳಲ್ಲಿಯೂ ಇದು ದೊಡ್ಡ ಸುದ್ದಿಯಾಗಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಎನ್.ಧರ್ಮಸಿಂಗ್ ಎದ್ದೆನೋ, ಬಿದ್ದೆನೋ ಎಂದು ದೆಹಲಿಗೆ ಓಡಿಹೋಗಿ ಪ್ರಧಾನಿಯಿಂದ ಹಿಡಿದು ಅವರ ಪಕ್ಷದ ನಾಯಕ-ನಾಯಕಿಯರವರೆಗೆ ಎಲ್ಲರಿಗೂ ಸ್ಪಷ್ಟೀಕರಣ ಕೊಟ್ಟಿದ್ದರು. ಪತ್ರಿಕಾ ಸಂಪಾದಕರನ್ನು ಭೇಟಿ ಮಾಡಿ ಕೈಜೋಡಿಸಿ ಬೇಡಿಕೊಂಡಿದ್ದರು. ರಸ್ತೆಗಳು ಇಂದಿಗೂ ಹಾಗೆಯೇ ಇವೆ ಎನ್ನುವುದು ಬೇರೆ ಮಾತು. ನಾರಾಯಣ ಮೂರ್ತಿಗಳು ಮಾತ್ರ ನಂತರ ಯಾಕೋ ಮೌನವಾಗಿಬಿಟ್ಟರು. 

ಈ ರೀತಿಯ ಪ್ರಭಾವಶಾಲಿ ಗಣ್ಯರ ದೊಡ್ಡ ದಂಡು ನಮ್ಮಲ್ಲಿದೆ. (ತಮಿಳುನಾಡಿನಲ್ಲಿ ಇಲ್ಲ). ರಾಜಕಾರಣಿಗಳ ವಿಶ್ವಾಸಾರ್ಹತೆ ಪಾತಾಳ ತಲುಪಿರುವುದರಿಂದ ಅವರನ್ನು ನೆಚ್ಚಿಕೊಳ್ಳುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ನಾರಾಯಣಮೂರ್ತಿ, ಅಜೀಂ ಪ್ರೇಮ್‌ಜಿ, ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ, ಯು.ಆರ್.ಅನಂತಮೂರ್ತಿ, ಚಂದ್ರಶೇಖರ ಕಂಬಾರ, ಗಿರೀಶ್ ಕಾರ್ನಾಡ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಡಾ.ದೇವಿಪ್ರಸಾದ್ ಶೆಟ್ಟಿ ಮೊದಲಾದವರು ನಿಯೋಗ ಹೋಗಿ ಕಾವೇರಿ ನದಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಪ್ರಧಾನಿ ಮನಮೋಹನ್‌ಸಿಂಗ್ ಅವರಿಗೆ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಮನವರಿಕೆ ಮಾಡಿಕೊಡಬಾರದೇಕೆ? ಕಾವೇರಿ ಕಣಿವೆಯ ಕುಡಿಯುವ ನೀರಿಗೆ 1.75 ಟಿಎಂಸಿ, ಕೈಗಾರಿಕಾ ಬಳಕೆಗಾಗಿ 0.10 ಟಿಎಂಸಿ ನೀಡಿರುವುದು ನ್ಯಾಯವೇ ಎಂದಾದರೂ ಕೇಳಬಹುದಲ್ಲವೇ?
                                                                                      
 ನಿಮ್ಮ ಅನಿಸಿಕೆ ತಿಳಿಸಿ:
editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT