ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಪ್ರಾತಿನಿಧ್ಯ, ತಾರತಮ್ಯದ ರಾಜಕಾರಣ

Last Updated 3 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಕಮಲಾದೇವಿ ಚಟ್ಟೋಪಾಧ್ಯಾಯ ಅವರ 115ನೇ ಜನ್ಮದಿನವನ್ನು ನೆನಪಿಸಿ, ಗೂಗಲ್ ಡೂಡಲ್ ನಿನ್ನೆ (ಏ. 3) ಗೌರವ ಸಲ್ಲಿಸಿದೆ. ಕಮಲಾದೇವಿ ಅವರ ಬಹುಮುಖ ವ್ಯಕ್ತಿತ್ವವನ್ನು ಗೂಗಲ್ ಡೂಡಲ್ ಬಿಂಭಿಸಿದೆ. ನಮ್ಮ ರಾಷ್ಟ್ರಕ್ಕೆ ರಾಜಕೀಯ ಸ್ವಾತಂತ್ರ್ಯವನ್ನು ಗಾಂಧಿ ತಂದುಕೊಟ್ಟರೆ, ಸಾಂಸ್ಕೃತಿಕ ಸ್ವಾತಂತ್ರ್ಯವನ್ನು ಕಮಲಾದೇವಿ ಚಟ್ಟೋಪಾಧ್ಯಾಯ ತಂದುಕೊಟ್ಟರು ಎಂಬಂಥ ಮಾತನ್ನು ಹೇಳಲಾಗುತ್ತದೆ. ರಂಗಭೂಮಿ, ಕೈಮಗ್ಗ ಹಾಗೂ ಕರಕುಶಲ ವಲಯಗಳಲ್ಲಿ ಕಮಲಾದೇವಿ ಅವರ ಕೊಡುಗೆ ಅನನ್ಯ. ತಾವು ಬದುಕಿದ್ದ ಕಾಲಕ್ಕಿಂತ ಮುಂದೆ ಹೋಗಿ ಚಿಂತಿಸಿ ಹೊಸ ಆಲೋಚನೆ, ವಿಚಾರಗಳನ್ನು ಮುಂದಿಟ್ಟವರು ಅವರು. ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಬಂಧನಕ್ಕೊಳಗಾಗಿ ಸೆರೆವಾಸ ಅನುಭವಿಸಿದ ಮೊದಲ ಮಹಿಳೆ. ಅಷ್ಟೇ ಅಲ್ಲ, ಭಾರತದಲ್ಲಿ ಸಕ್ರಿಯ ರಾಜಕೀಯಕ್ಕೆ ಪ್ರವೇಶ ಪಡೆದ ಮೊದಲ ಮಹಿಳೆ ಅವರು. 1926ರಲ್ಲಿ ಮದ್ರಾಸ್ ಪ್ರಾಂತ ಲೆಜಿಸ್ಲೇಟಿವ್ ಕೌನ್ಸಿಲ್‍ಗೆ ಸ್ಪರ್ಧಿಸಿದಂತಹ ಪ್ರಥಮ ಮಹಿಳೆಯಾಗಿದ್ದರು ಅವರು ಎಂಬುದನ್ನು ನಾವಿಂದು ನೆನಪಿಸಿಕೊಳ್ಳಬೇಕು. ಕೇವಲ 55 ಮತಗಳ ಅಂತರದಲ್ಲಿ ಅವರು ಸೋಲಪ್ಪಿದ್ದರು. ಈಗಲೂ ರಾಜಕೀಯ ರಂಗದಲ್ಲಿ ಮಹಿಳೆಯರ ಪ್ರಾತಿನಿಧ್ಯ ಬೆರಳೆಣಿಕೆಯಲ್ಲೇ ಇರುವಾಗ ಆ ಕಾಲದಲ್ಲಿ ಕಮಲಾದೇವಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದು ದೊಡ್ಡ ಸಂಗತಿ. ಆ ನಂತರ ಸದನದಲ್ಲಿ ಮಹಿಳಾ ಪ್ರಾತಿನಿಧ್ಯಕ್ಕಾಗಿ ವಿಮೆನ್ಸ್ ಇಂಡಿಯನ್ ಅಸೋಸಿಯೇಷನ್ ಒತ್ತಾಯಿಸಿದಾಗ, ಡಾ.ಮುತ್ತುಲಕ್ಷ್ಮಿ ರೆಡ್ಡಿ ಅವರನ್ನು ಲೆಜಿಸ್ಲೇಟಿವ್ ಕೌನ್ಸಿಲ್‍ಗೆ ಮದ್ರಾಸ್ ಗವರ್ನರ್ ಅವರು ನಾಮಕರಣ ಮಾಡುತ್ತಾರೆ. ಶಾಸಕಿಯಾದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆ ಮುತ್ತುಲಕ್ಷ್ಮಿ ರೆಡ್ಡಿ ಅವರದಾಗುತ್ತದೆ. ಆ ನಂತರ, ಲೆಜಿಸ್ಲೇಟಿವ್ ಕೌನ್ಸಿಲ್‍ನ ಉಪಸಭಾಪತಿಯಾಗಿಯೂ ಅವರು ಸರ್ವಾನುಮತದಿಂದ ಆಯ್ಕೆಯಾಗುತ್ತಾರೆ. ವಿಶ್ವದಲ್ಲೇ ಇಂತಹ ಅಧಿಕಾರ ಸ್ಥಾನ ಪಡೆದ ಮೊದಲ ಮಹಿಳೆ ಅವರು. ದೇವದಾಸಿ ಪದ್ಧತಿ ರದ್ದು ಮಾಡುವ ಶಾಸನ ರೂಪಿಸುವಲ್ಲಿ ಮುತ್ತುಲಕ್ಷ್ಮಿ ರೆಡ್ಡಿ ಅವರ ಪಾತ್ರ ದೊಡ್ಡದು. ಹಾಗೆಯೇ ಬಾಲ್ಯ ವಿವಾಹಕ್ಕೆ ತಡೆ ಹಾಕಲು ಹೆಣ್ಣುಮಕ್ಕಳ ವಿವಾಹ ವಯಸ್ಸು ಏರಿಕೆಗೂ ಅವರು ಶ್ರಮಿಸಿದರು. ಇಂತಹ ಕ್ರಿಯಾಶೀಲ ಮಹಿಳಾ ನಾಯಕತ್ವದ ರಾಜಕೀಯ ಮಾದರಿಗಳು ನಮ್ಮ ಇತಿಹಾಸದಲ್ಲಿವೆ ಎಂಬುದು ನಮ್ಮ ಪ್ರಜ್ಞೆಯಲ್ಲಿರಬೇಕು. ಅದರಲ್ಲೂ ಮುಂದಿನ ತಿಂಗಳು ಮೇ 12ರಂದು ರಾಜ್ಯ ವಿಧಾನಸಭೆ ಚುನಾವಣೆಗೆ ಕರ್ನಾಟಕ ಸಜ್ಜಾಗುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಈ ಮಹಿಳಾ ಚೇತನಗಳು ನಮ್ಮ ರಾಜಕೀಯಕ್ಕೆ ಹೊಸ ಪರಿಭಾಷೆ ತುಂಬಲು ಪ್ರೇರಕರಾಗಬಹುದಲ್ಲವೇ?

ಕರ್ನಾಟಕದ ಮಂಗಳೂರು ಮೂಲದ ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಸಾರ್ವಜನಿಕ ಬದುಕಿಗೆ ನೀಡಿದಂತಹ ನಾಯಕತ್ವದ ಮಾದರಿ ಸ್ಮರಣೀಯವಾದದ್ದು. ಚುನಾವಣೆ ಭರಾಟೆ ದಿನೇ ದಿನೇ ರಾಜ್ಯದಲ್ಲಿ ಜೋರಾಗುತ್ತಿದೆ. ಆದರೆ ಈ ಭರಾಟೆಯಲ್ಲಿ ಮಹಿಳೆಯ ದನಿ ಕ್ಷೀಣವಾಗಿರುವುದನ್ನೂ ಕಾಣುತ್ತಿದ್ದೇವೆ. ರಾಜ್ಯದ ವಿಧಾನಸಭೆಯಲ್ಲಿ ಶಾಸಕಿಯರ ಸಂಖ್ಯೆ 1950 ಹಾಗೂ 1960ರ ದಶಕದಲ್ಲಿ ಇದ್ದಷ್ಟೂ ಈಗ ಇಲ್ಲ. ಹೀಗಿದ್ದೂ ಮಹಿಳೆಗೆ ಪ್ರಾತಿನಿಧ್ಯ ನೀಡುವ ವಿಚಾರದಲ್ಲಿ ರಾಜಕೀಯ ಪಕ್ಷಗಳೂ ಮುತುವರ್ಜಿ ವಹಿಸುತ್ತಿಲ್ಲ. ಈ ಸಂದರ್ಭಕ್ಕೆ ಮತ್ತೆ ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಮಾತುಗಳು ಇಲ್ಲಿ ಪ್ರಸ್ತುತವಾಗುತ್ತವೆ: ‘ಮಹಿಳಾ ಆಂದೋಲನ ಎಂಬುದು ಗಂಡು– ಹೆಣ್ಣು ನಡುವಿನ ಯುದ್ಧವಲ್ಲ. ಹಾಗೆಂದು ಅನೇಕ ಮಂದಿ ಯಾಂತ್ರಿಕವಾಗಿ ನಂಬಿಕೊಂಡಿದ್ದಾರೆ ಅಥವಾ ನಂಬುವಂತೆ ಮಾಡಲಾಗಿದೆ… ನಮ್ಮ ಸಮಾಜದ ಸ್ವರೂಪದಲ್ಲೇ ಸಮಸ್ಯೆ ಇದೆ. ಆ ದೋಷಪೂರ್ಣ ಸಾಮಾಜಿಕ ಸಂಸ್ಥೆಗಳ ವಿರುದ್ಧ ನಮ್ಮ ಹೋರಾಟ ಇರಬೇಕು’.

ಈ ಹೋರಾಟ ಅಂದಿನಿಂದ ನಿರಂತರವಾಗಿ ನಡೆಯುತ್ತಲೇ ಇದೆ. ಹೀಗಿದ್ದೂ ಮೂಲಭೂತ ಬದಲಾವಣೆಗೆ ಸಜ್ಜಾಗದ ಸಮಾಜದ ಸ್ವರೂಪವನ್ನು ಬದಲಿಸುವುದಾದರೂ ಹೇಗೆ? ರಾಜಕೀಯ ರಂಗದಲ್ಲಿ ನಾಯಕತ್ವದ ಬೆಳವಣಿಗೆಗೆ ಅವಕಾಶಗಳೇ ಸಿಗದಿದ್ದರೆ ಹೇಗೆ? ಎಂಬ ಪ್ರಶ್ನೆಗಳು ಇನ್ನೂ ಪ್ರಶ್ನೆಗಳಾಗಿಯೇ ಮುಂದುವರಿಯುತ್ತಿವೆ ಎಂಬುದು ವಿಪರ್ಯಾಸ.

‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಟಿಕೆಟ್‌ ನೀಡುವ ಜತೆಗೆ ಅವರನ್ನು ಗೆಲ್ಲಿಸಬೇಕು. ಸಚಿವ ಸಂಪುಟದಲ್ಲೂ ಹೆಚ್ಚು ಸ್ಥಾನ ನೀಡಬೇಕು’ ಎಂದು ಕಳೆದ ತಿಂಗಳು ರಾಜ್ಯ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ವಿಜಯಪುರದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಹಾಗೂ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರಿಗೆ ಸೂಚಿಸಿ ನಿರೀಕ್ಷೆಗಳನ್ನು ಹುಟ್ಟಿಸಿದ್ದರು. ಆದರೆ ಒಂದೇ ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಿಳೆಯರಿಗೆ ಹೆಚ್ಚಿನ ಟಿಕೆಟ್ ನೀಡಲು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ‘ಚುನಾವಣೆಗಳಲ್ಲಿ ಹೆಚ್ಚಿನ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು ಎಂದು ಹೇಳುವುದು ಸುಲಭ. ಆದರೆ, ಮಹಿಳಾ ಮೀಸಲು ಶಾಸನ ಜಾರಿಯಾಗದೆ ಇದನ್ನು ಅನುಷ್ಠಾನಕ್ಕೆ ತರುವುದು ಕಷ್ಟ. ಸದ್ಯದ ಸ್ಥಿತಿಯಲ್ಲಿ ಮಹಿಳೆಯರಿಗೆ ಶೇ 5 ಅಥವಾ ಶೇ 6ರಷ್ಟು ಸ್ಥಾನಗಳನ್ನು ನೀಡಬಹುದು. ಹೆಚ್ಚೆಂದರೆ ಇದು ಶೇ 10ರಷ್ಟಾಗಬಹುದು. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರಿಗೆ ಟಿಕೆಟ್ ನಿಡುವುದು ಸಾಧ್ಯವಿಲ್ಲ’ ಎಂದು ಬಹಿರಂಗವಾಗಿಯೇ ಹೇಳಿಯಾಗಿದೆ.

ಮಹಿಳಾ ಪ್ರಾತಿನಿಧ್ಯ ಹೆಚ್ಚಿಸಲು ರಾಜಕೀಯ ಪಕ್ಷಗಳು ಸ್ವಯಂಪ್ರೇರಿತವಾಗಿ ಟಿಕೆಟ್ ನೀಡುತ್ತವೆ ಎಂಬುದು ಇಲ್ಲಿಗೆ ಮುಗಿದ ಅಧ್ಯಾಯ. ಮಹಿಳೆಯರಿಗೆ ಹೆಚ್ಚು ಟಿಕೆಟ್ ನೀಡಬೇಕು ಎಂಬಂಥ ವೇದಿಕೆಯ ಭಾವಾವೇಶದ ಮಾತುಗಳ ಅನುಷ್ಠಾನ ಅಸಾಧ್ಯ ಎಂಬುದನ್ನಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ. ಬೇರೆ ರಾಜಕೀಯ ಪಕ್ಷಗಳದ್ದೂ ಇದೇ ಕಥೆ.

ವಿಧಾನಸಭಾ ಚುನಾವಣೆಯಲ್ಲಿ ಬ್ರಾಹ್ಮಣರಿಗೂ ಸೂಕ್ತ ಪ್ರಾತಿನಿಧ್ಯ ಸಿಗಬೇಕು ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಒತ್ತಾಯಿಸಿರುವುದು ಇತ್ತೀಚೆಗೆ ವರದಿಯಾಗಿದೆ. ‘….ರಾಜಕೀಯ ಪ್ರಾತಿನಿಧ್ಯದಲ್ಲಿ ಬ್ರಾಹ್ಮಣರಿಗೂ ಅನ್ಯಾಯವಾಗಬಾರದು, ಉಳಿದವರಿಗೂ ಅನ್ಯಾಯವಾಗಬಾರದು’ಎಂದಿದ್ದಾರೆ ಪೇಜಾವರ ಶ್ರೀಗಳು. ಆದರೆ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯವಿಲ್ಲ ಎಂಬ ಬಗ್ಗೆ ಇದೇ ಬಗೆಯ ಕಾಳಜಿ ಸಮಾಜದಲ್ಲಿರುವ ಪ್ರಬಲ ಶಕ್ತಿಗಳಿಂದ ಎಂದೂ ವ್ಯಕ್ತವಾಗುವುದಿಲ್ಲ. ಈ ಅಸಮಾನತೆಯನ್ನು ಸಮಾಜದ ಸಹಜ ವಿದ್ಯಮಾನವಾಗಿಯೇ ಪರಿಭಾವಿಸುವಂತಹದ್ದು ಈ ಸಮಸ್ಯೆಯ ಮೂಲ.

ಮಹಿಳೆಯರಿಗೆ ಟಿಕೆಟ್ ನೀಡಿದರೆ ಗೆಲುವು ಸಾಧ್ಯವಿಲ್ಲ ಎಂಬ ಮಿಥ್ಯೆಯನ್ನು ಭೇದಿಸಬೇಕಾದ ಸವಾಲು ಕೂಡ ದೊಡ್ಡದು. ‘ಮಹಿಳೆಯರು ಚುನಾವಣೆ ಗೆಲ್ಲಲಾಗದು ಎಂಬ ಭಾವನೆ ಸುಳ್ಳು’ ಎಂದು ಮಾಜಿ ಚುನಾವಣಾ ಕಮಿಷನರ್ ಎಸ್ ವೈ ಖುರೇಷಿ ಇತ್ತೀಚೆಗೆ ಮತ್ತೆ ಹೇಳಿದ್ದಾರೆ. ಇದಕ್ಕಾಗಿ ಕಳೆದ ಹಲವು ದಶಕಗಳ ಚುನಾವಣಾ ಇತಿಹಾಸದಲ್ಲಿನ ಅಂಕಿಅಂಶಗಳ ವಿವರಗಳನ್ನು ಅವರು ನೀಡಿದ್ದಾರೆ. ಪ್ರತಿ ಬಾರಿಯೂ ಮಹಿಳೆಯರಿಗೆ ಟಿಕೆಟ್ ನೀಡಿದ ಪ್ರಮಾಣಕ್ಕಿಂತ ಹೆಚ್ಚಿನ ಮಹಿಳೆಯರು ಗೆಲುವು ಸಾಧಿಸಿದ್ದಾರೆ. ಮಹಿಳೆಯರಿಗೆ ಶೇ 6ರಷ್ಟು ಟಿಕೆಟ್ ನೀಡಿದ್ದರೆ ಅದರಲ್ಲಿ ಶೇ 10ರಷ್ಟು ಗೆಲುವನ್ನು ಮಹಿಳೆಯರು ಸಾಧಿಸಿದ್ದಾರೆ. ಎಂದರೆ ಮಹಿಳೆಯರ ಗೆಲ್ಲುವಿಕೆ ಹೆಚ್ಚಿದೆ ಎಂದು ಖುರೇಷಿ ಅವರು ಪ್ರತಿಪಾದಿಸಿದ್ದಾರೆ. ‘ಸ್ಪರ್ಧಿಸುವ ಎಲ್ಲಾ ಮಹಿಳೆಯರ ಪೈಕಿ ಶೇ10ರಷ್ಟು ಮಹಿಳೆಯರು ಗೆಲುವು ಸಾಧಿಸುತ್ತಾರೆ. ಪುರುಷ ಅಭ್ಯರ್ಥಿಗಳಿಗೆ ಈ ಪ್ರಮಾಣ ಕೇವಲ ಶೇ 6’ ಎಂದು ಪಿಆರ್‌ಎಸ್‌ ಲೆಜಿಸ್ಲೇಟಿವ್ ರಿಸರ್ಚ್ ಅಧ್ಯಯನ ಒದಗಿಸಿರುವ ಅಂಕಿ ಅಂಶಗಳೂ ಸಾರಿವೆ. ಹೀಗಿದ್ದೂ ಚುನಾವಣೆಗಳಲ್ಲಿ ಮಹಿಳೆಯರನ್ನು ಕಣಕ್ಕಿಳಿಸಲು ರಾಜಕೀಯ ಪಕ್ಷಗಳು ಹಿಂಜರಿಯುತ್ತವೆ. ಅಧಿಕಾರ ಹಂಚಿಕೆಗೆ ಒಪ್ಪದ ಮನಸ್ಥಿತಿ ಅದು. ಪುರುಷಮಯವಾಗಿರುವ ರಾಜಕೀಯ ಪಕ್ಷಗಳು, ಮಹಿಳಾ ಮೀಸಲು ಮಸೂದೆ ವಿರೋಧಿಸಿಕೊಂಡೇ ಬಂದಿರುವ ಹಿಂದಿರುವ ತರ್ಕವೂ ಅದೇ.

ಇಂಟರ್ ಪಾರ್ಲಿಮೆಂಟರಿ ಯೂನಿಯನ್ (ಐಪಿಯು) ಮಾಡಿರುವ ಅಧ್ಯಯನದ ಪ್ರಕಾರ, 2017ರ ಜುಲೈ 1ರಲ್ಲಿ ಸಂಸತ್‌ನ ಕೆಳಮನೆ ಅಥವಾ ಚುನಾಯಿತ ಪ್ರತಿನಿಧಿಗಳಿರುವ ಸದನದಲ್ಲಿ (ಭಾರತದ ಸಂದರ್ಭದಲ್ಲಿ ಲೋಕಸಭೆ) ಮಹಿಳಾ ಪ್ರಾತಿನಿಧ್ಯ ಪ್ರಮಾಣದ ದೃಷ್ಟಿಯಿಂದ 193 ರಾಷ್ಟ್ರಗಳ ಪೈಕಿ ಭಾರತ 149ನೇ ಸ್ಥಾನದಲ್ಲಿದೆ. ರಾಷ್ಟ್ರದ 4,128 ವಿಧಾನಸಭಾ ಕ್ಷೇತ್ರಗಳಲ್ಲಿ, 364 ಕ್ಷೇತ್ರಗಳು ಮಾತ್ರ ಶಾಸಕಿಯರ ಪ್ರಾತಿನಿಧ್ಯ ಹೊಂದಿವೆ. ಎಂದರೆ ಒಟ್ಟು ಶೇ 8.81. ಹಾಗೆಯೇ ನಾಗಾಲ್ಯಾಂಡ್‌ನಲ್ಲಂತೂ ಈವರೆಗೆ ಒಬ್ಬ ಶಾಸಕಿಯೂ ಆಯ್ಕೆಯಾಗಿಲ್ಲ ಎಂಬುದನ್ನು ಹೇಗೆ ಜೀರ್ಣಿಸಿಕೊಳ್ಳುವುದು?

1963ರಲ್ಲಿ ನಾಗಾಲ್ಯಾಂಡ್‍ಗೆ ರಾಜ್ಯ ಸ್ಥಾನಮಾನ ದೊರೆಯಿತು. ಆ ನಂತರ ಕಳೆದ 55 ವರ್ಷಗಳಲ್ಲಿ 60 ಸದಸ್ಯ ಬಲದ ನಾಗಾಲ್ಯಾಂಡ್ ವಿಧಾನಸಭೆಗೆ ಈವರೆಗೆ ಒಬ್ಬ ಮಹಿಳೆಯೂ ಆಯ್ಕೆಯಾಗಿಲ್ಲ. ಈ ವರ್ಷ ಫೆಬ್ರುವರಿ 27ರಂದು ನಡೆದ ಚುನಾವಣೆಯಲ್ಲಿ ಐವರು ಮಹಿಳೆಯರು ಸ್ಪರ್ಧಿಸಿದ್ದು ದೊಡ್ಡ ನಿರೀಕ್ಷೆಯನ್ನು ಹುಟ್ಟು ಹಾಕಿತ್ತು. ಏಕೆಂದರೆ ಆ ರಾಜ್ಯದಲ್ಲಿ ಇಷ್ಟೊಂದು ಸಂಖ್ಯೆಯ ಮಹಿಳೆಯರು ಸ್ಪರ್ಧಿಸಿದ್ದೂ ಇದೇ ಮೊದಲು. ಆದರೆ ಯಾರೊಬ್ಬರೂ ಆಯ್ಕೆಯಾಗಲಿಲ್ಲ. ಪ್ರಣಾಳಿಕೆಗಳಲ್ಲಿ ರಾಜಕೀಯ ಪಕ್ಷಗಳು ಮಹಿಳಾ ಸಬಲೀಕರಣದ ಭರವಸೆ ನೀಡಿದ್ದರೂ ಮಹಿಳಾ ಅಭ್ಯರ್ಥಿಗಳಿಗೆ ಬೆಂಬಲ ತೋರುವಲ್ಲಿ ಅವು ವಿಫಲವಾಗಿದ್ದವು. ಕಳೆದ ವರ್ಷ ನಾಗಾಲ್ಯಾಂಡ್‌ನಲ್ಲಿ ನಡೆದ ವಿದ್ಯಮಾನಗಳನ್ನೇ ನೆನಪಿಸಿಕೊಳ್ಳಿ. ನಾಗಾಲ್ಯಾಂಡ್‌ನ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲು ನೀಡುವುದಕ್ಕೆ ಬುಡಕಟ್ಟು ಗುಂಪುಗಳ ಪ್ರತಿರೋಧ ಹಿಂಸೆಗೆ ತಿರುಗಿ ಕಡೆಗೆ ನಾಗಾಲ್ಯಾಂಡ್ ಮುಖ್ಯಮಂತ್ರಿ ಟಿ.ಆರ್. ಜೆಲಿಯಾಂಗ್  ರಾಜೀನಾಮೆ ನೀಡುವಂತಾಯಿತು. ಸಾಮಾಜಿಕ ಆಂದೋಲನವಾಗಬೇಕಿದ್ದ ಮಹಿಳಾ ಮೀಸಲು ವಿಚಾರ ದೊಡ್ಡ ವಿವಾದವಾಗಿಹೋಯಿತು. ಹಿಂಸಾಚಾರ ಘಟನೆಗಳಲ್ಲಿ ಇಬ್ಬರ ಸಾವೂ ಸಂಭವಿಸಿತು. ಕಡೆಗೆ ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳ ಚಿತಾವಣೆಯಿಂದ ಮುಖ್ಯಮಂತ್ರಿ ಗದ್ದುಗೆಗೇ ಮುಳುವಾಗುವಂತಹ  ತಿರುವು ಪಡೆದುಕೊಂಡಿತು. ಶೇ 33ರಷ್ಟು ಮೀಸಲು ನೀಡಲು ಜೆಲಿಯಾಂಗ್ ಅವರು ನಡೆಸಿದ ಯತ್ನ ಪ್ರಗತಿಪರ ಕ್ರಮವಾಗಿತ್ತು. ಸಂವಿಧಾನದ ಆದರ್ಶ ಹಾಗೂ ನಿಯಮಗಳಿಗೆ ಇದು ಅನುಗುಣವಾಗಿತ್ತು. ಆದರೆ ಮಹಿಳೆಯರಿಗೆ ಮೀಸಲು ನೀಡುವುದು ನಾಗಾ ಸಂಪ್ರದಾಯಗಳಿಗೆ ವಿರೋಧವಾಗಿದೆ ಎಂಬುದು ಬುಡಕಟ್ಟು ಗುಂಪುಗಳ ವಾದವಾಗಿತ್ತು. ಇಂತಹ ಸ್ಥಿತಿ ಇರುವ ಈ ರಾಜ್ಯದಿಂದ ಈವರೆಗೆ ಒಬ್ಬರೇ ಮಹಿಳಾ ಎಂ.ಪಿ. ಆಯ್ಕೆಯಾಗಿದ್ದಾರೆ ಅಷ್ಟೆ. 1977ರಲ್ಲಿ ರಾಜ್ಯದಿಂದ ಲೋಕಸಭೆಗೆ ಆಯ್ಕೆಯಾದ ಈ ಏಕೈಕ ಮಹಿಳೆ ರಾನೋ ಶೈಜಾ ಅವರು 2015ರಲ್ಲಿ ತೀರಿಕೊಂಡಿದ್ದಾರೆ. ಈ ವರ್ಷ ಸ್ಪರ್ಧಿಸಿದ್ದ ಐವರು ಮಹಿಳೆಯರೂ ಸೇರಿದಂತೆ ಇಲ್ಲಿಯವರೆಗೆ ಕೇವಲ 19 ಮಹಿಳೆಯರು ನಾಗಾಲ್ಯಾಂಡ್‍ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ತೀವ್ರ ಪ್ರತಿರೋಧಗಳ ನಡುವೆಯೂ ಚುನಾವಣೆಗೆ ಸ್ಪರ್ಧಿಸಲು ಮಹಿಳೆಯರು ಮುಂದೆ ಬರುತ್ತಿದ್ದಾರೆ ಎಂಬುದೇ ಈ ವರ್ಷದ ಚುನಾವಣೆಯಲ್ಲಿ ಮಹತ್ವದ ಬೆಳವಣಿಗೆ ಎಂದುಕೊಳ್ಳಬೇಕು.

ಸಮಾನತೆಯ ಹಕ್ಕನ್ನು ಮೂಲಭೂತ ಹಕ್ಕಾಗಿ ಸಂವಿಧಾನದ 14ನೇ ವಿಧಿ ಪರಿಭಾವಿಸುತ್ತದೆ. ಜೊತೆಗೆ, ಸಮಾನ ಅವಕಾಶಗಳಿರಬೇಕೆಂಬುದನ್ನೂ ಸಂವಿಧಾನದ ವಿಧಿ 15 (3) ಪ್ರತಿಪಾದಿಸುತ್ತದೆ. ಅಷ್ಟೇ ಅಲ್ಲ, ಜಾಗತಿಕ ನೆಲೆಯಲ್ಲಿ ಮಹಿಳೆ ವಿರುದ್ಧದ ತಾರತಮ್ಯ ನಿವಾರಣೆಯ ನಿರ್ಣಯಕ್ಕೆ (ಸೀಡಾ) ಭಾರತ ಸಹಿ ಹಾಕಿದೆ. ಈ ಪ್ರಕಾರ, 7ನೇ ವಿಧಿ ಅಡಿ, ರಾಜಕೀಯ ಹಾಗೂ ಸಾರ್ವಜನಿಕ ಬದುಕಿನಲ್ಲಿ ಮಹಿಳೆ ಮೇಲಿನ ಎಲ್ಲಾ ತಾರತಮ್ಯ ನಿವಾರಣೆಗೆ ಸೂಕ್ತ ಕ್ರಮಗಳನ್ನು ಪ್ರಭುತ್ವ ಕೈಗೊಳ್ಳಬೇಕು. ಆದರೆ ಈ ಪ್ರಕ್ರಿಯೆ ಸಂಕೀರ್ಣವಾದದ್ದು. ಜಾತಿ ಅಥವಾ ಧರ್ಮದ ನೆಲೆಯಲ್ಲಿ ಒಳಗೊಳ್ಳುವಂತಹ ಪ್ರಾತಿನಿಧ್ಯದ ಬಾವುಟಗಳನ್ನು ನಮ್ಮನ್ನಾಳುವವರು ಎತ್ತಿ ಹಿಡಿಯುತ್ತಲೇ ಇರುತ್ತಾರೆ. ಆದರೆ ಮಹಿಳಾ ಪ್ರಾತಿನಿಧ್ಯದ ಬಗ್ಗೆ ಮಾತ್ರ ಎದ್ದುಕಾಣುವ ನಿರ್ಲಕ್ಷ್ಯ ಮುಂದುವರಿದೇ ಇದೆ. ರಾಜ್ಯ ಚುನಾವಣೆ ಸಂದರ್ಭದಲ್ಲೂ ಬಹುಶಃ ಈ ಅನುಭವಕ್ಕೆ ಮಹಿಳೆಯರು ಮತ್ತೊಮ್ಮೆ ಮುಖಾಮುಖಿಯಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT