ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತು ಅರ್ಥ ಕಳೆದುಕೊಂಡ ಭಾರತದಲ್ಲಿ...

Last Updated 25 ಫೆಬ್ರುವರಿ 2017, 20:53 IST
ಅಕ್ಷರ ಗಾತ್ರ

ಇದು ಮಾತು ಸೋತ ಭಾರತದ ಮುಂದುವರಿದ ಕಥೆ ಅಥವಾ ಇನ್ನೊಂದು ಕಥೆ. ಇಲ್ಲಿ ಸಂವಾದ ಸಾಧ್ಯವಿಲ್ಲ, ಚರ್ಚೆ ಸಾಧ್ಯವಿಲ್ಲ, ಆರೋಗ್ಯಕರ ಭಿನ್ನಾಭಿಪ್ರಾಯ ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ನಾವು ಬಂದು ಬಿಟ್ಟಂತೆ ಕಾಣುತ್ತದೆ.  ಭಾರತ ಪ್ರಜಾಪ್ರಭುತ್ವ ಇರುವ ದೇಶ. ಪ್ರಜಾಪ್ರಭುತ್ವದ ಮುಖ್ಯ ಲಕ್ಷಣ ವಾಕ್‌ ಸ್ವಾತಂತ್ರ್ಯ. ಎಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಸಂವಿಧಾನ ಅವಕಾಶ ಕಲ್ಪಿಸಿಕೊಟ್ಟಿದೆ. ನಮ್ಮ ನಡುವೆ ಭಿನ್ನಾಭಿಪ್ರಾಯ ಇರಲು ಸಾಧ್ಯ; ಆದರೆ, ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಂಡೂ ನಾವು ಸೌಹಾರ್ದದಿಂದ, ಪ್ರೀತಿಯಿಂದ ಇರಲು ಸಾಧ್ಯ ಎಂದು ಸಂವಿಧಾನ ನಮಗೆ ಹೇಳಿಕೊಟ್ಟಿದೆ. ಅಂದರೆ ನಮ್ಮ ಅಭಿಪ್ರಾಯವನ್ನು ಹೇಳುವಾಗ, ಸಮರ್ಥಿಸಿಕೊಳ್ಳುವಾಗ ನಾವು ಕೈ ಕೈ ಮಿಲಾಯಿಸಬೇಕಿಲ್ಲ. 

ವೇದಿಕೆಯ ಮಾತುಗಳನ್ನು ಬಿಟ್ಟು ಬಿಡೋಣ. ವೇದಿಕೆಗಳಲ್ಲಿ ಒಂದೇ ಬಗೆಯ ಅಭಿಪ್ರಾಯ ಇರಬೇಕು ಎಂದು ಕೆಲವರು ತೀರ್ಮಾನಕ್ಕೆ ಬಂದು ಬಿಟ್ಟಂತೆ ಆಗಿ ಬಿಟ್ಟಿದೆ. ‘ನೋಡಿ ಅಲ್ಲಿ ಬರೀ ಅವರೇ ಇದ್ದರು, ಅಥವಾ ಅವರು ಬರುತ್ತಾರೆ ಎಂದು ನಾನು ಅಲ್ಲಿಗೆ ಹೋಗುವುದಿಲ್ಲ’ ಎಂಬುದೂ ಈಗ ಸಹಜ ಸಾಮಾನ್ಯ ಎನ್ನುವಂತೆ ಆಗಿದೆ. ಹಾಗೆ ಹೇಳುವವರು ಒಂದೋ ಹಿಟ್ಲರ್‌ನ ಸಮಕಾಲೀನರು ಆಗಿರಬಹುದು ಅಥವಾ ಸ್ಟಾಲಿನ್‌ ಕಾಲಕ್ಕೆ ಸೇರಿದವರು ಆಗಿರಬಹುದು. ‘ಭಾರತ ಒಂದು ಪ್ರಜಾಪ್ರಭುತ್ವ ದೇಶ, ಇಲ್ಲಿ ಎಲ್ಲ ಅಭಿಪ್ರಾಯಗಳಿಗೆ ಅವಕಾಶ ಇದೆ’ ಎಂಬ ಮೂಲಭೂತ ಅಂಶವನ್ನೇ ಅವರು ಮರೆತು ಬಿಡುತ್ತಾರೆ.

ಇದು ಅಸಹನೆಯ ಕಾಲ. ಅದಕ್ಕೆ ವಾಸ್ತವವನ್ನು ಎದುರಿಸುವ ಧೈರ್ಯ ಇಲ್ಲದೇ ಇರುವುದು ಅಥವಾ ವಿನಯ ಇಲ್ಲದೇ ಇರುವುದು ಕಾರಣ ಆಗಿರಬಹುದು. ಮಾತು ಮೊದಲು ಎಲ್ಲಿ ಅರ್ಥ ಕಳೆದುಕೊಂಡಿರಬಹುದು? ಅದು ಸಮಾಜದಲ್ಲಿ ಅರ್ಥ ಕಳೆದುಕೊಂಡಿತೇ ಅಥವಾ ಸಂಸತ್ತಿನಲ್ಲಿ ಅರ್ಥ ಕಳೆದುಕೊಂಡಿತೇ? ಈಗ ನೋಡಿದರೆ ಎರಡೂ ಕಡೆ ಅರ್ಥ ಕಳೆದುಕೊಂಡಂತೆ ಕಾಣುತ್ತದೆ. ಆದರೆ, ಎರಡಕ್ಕೂ ಎಲ್ಲಿಯೋ ಒಂದು ಕೊಂಡಿ ಇದ್ದಂತೆಯೂ ಭಾಸವಾಗುತ್ತದೆ.

ನಿನ್ನೆ ಗುಜರಾತಿನ ವಿಧಾನಸಭೆಯಲ್ಲಿ ಮಾರಾಮಾರಿ ಆಗಿದೆ. ಮೊನ್ನೆ ತಮಿಳುನಾಡಿನ ವಿಧಾನಸಭೆಯಲ್ಲಿ ಕುರ್ಚಿಗಳು ಕೈಗೆ ಬಂದಿದ್ದುವು. ಅದಕ್ಕೆ ಹಿಂದಿನ ದಿನ ಕರ್ನಾಟಕದ ವಿಧಾನ ಮಂಡಲದ ಎರಡೂ ಮನೆಗಳಲ್ಲಿ ನೊಣ ಹೊಡೆಯಲೂ ಯಾರೂ ಇರಲಿಲ್ಲ. ಅದರ  ಹಿಂದಿನ ದಿನ ಸಂಸತ್ತಿನ ಎರಡೂ ಸದನಗಳಲ್ಲಿ ಮಾತು ಅರ್ಥ ಕಳೆದುಕೊಂಡು ಗದ್ದಲ ವಿಜೃಂಭಿಸುತ್ತಿತ್ತು. ನಮ್ಮ ಊರಿನ ಪುರಸಭೆಯ, ತಾಲ್ಲೂಕು ಪಂಚಾಯ್ತಿಯ ಸಭೆ ಒಪ್ಪವಾಗಿ ನಡೆಯಬೇಕು ಎಂದು ನಾವು ಹೇಗೆ  ಬಯಸುವುದು?

ಈಚೆಗೆ ಮುಕ್ತಾಯಗೊಂಡ ಸಂಸತ್ತಿನ ಅಧಿವೇಶನ ಕಳೆದ ಹದಿನೈದು ವರ್ಷಗಳಲ್ಲಿ ಅತಿ ಕಡಿಮೆ ಕಲಾಪ ಮಾಡಿದ ವಿಶಿಷ್ಟ ದಾಖಲೆಯನ್ನು ಸ್ಥಾಪಿಸಿದೆ. ಲೋಕಸಭೆಯಲ್ಲಿ ಕೇವಲ ಶೇಕಡ 17 ರಷ್ಟು ಮತ್ತು ರಾಜ್ಯಸಭೆಯಲ್ಲಿ ಕೇವಲ ಶೇಕಡ 18ರಷ್ಟು ಕಾಲ ಕಲಾಪ ನಡೆಯಿತು. ಸಂಸತ್ತಿನ ಅಧಿವೇಶನ ನಡೆಯುವಾಗ, ಕಲಾಪ ನಡೆಯಲಿ ಅಥವಾ ನಡೆಯದೇ ಇರಲಿ, ಪ್ರತಿ ನಿಮಿಷಕ್ಕೆ ₹2.5 ಲಕ್ಷ ಖರ್ಚು ಬರುತ್ತದೆ. ಕಲಾಪ ನಡೆಸದೇ ಇರುವುದಕ್ಕೆ ವಿರೋಧ ಪಕ್ಷವಾದ  ಕಾಂಗ್ರೆಸ್ಸಿಗೆ ಕಾರಣ ಇರಬಹುದು. ಆದರೆ, ಕಲಾಪ ನಡೆಯುವಂತೆ ನೋಡಿಕೊಳ್ಳಬೇಕಾದುದು ಆಡಳಿತ ಪಕ್ಷದ ಹೊಣೆಗಾರಿಕೆ. ಈಚಿನ ವರ್ಷಗಳ ವಿದ್ಯಮಾನ ನೋಡಿದರೆ  ಕಲಾಪ ನಡೆಯುವುದು ಆಡಳಿತ ಪಕ್ಷಕ್ಕೇ ಬೇಡ ಎನ್ನುವಂತೆ ಆಗಿದೆ.

ಹಾಗೆ ನೋಡಿದರೆ ವಿಧಾನ ಮಂಡಲದ ಅಥವಾ ಸಂಸತ್ತಿನ ಅಧಿವೇಶನ ಸರಿಯಾಗಿ ನಡೆಯುವುದು ವಿರೋಧ ಪಕ್ಷಕ್ಕೆ ವರದಾನ ಇದ್ದಂತೆ. ಸರ್ಕಾರದ ಆಡಳಿತ ವೈಖರಿಯನ್ನು, ಲೋಪಗಳನ್ನು ಮತ್ತು ಅಕ್ರಮಗಳನ್ನು ಬಯಲು ಮಾಡಲು ಒಳ್ಳೆಯ ಮಾತುಗಾರರಿಗೆ ಸುವರ್ಣ ಅವಕಾಶ ಒದಗಿದಂತೆ. ಆದರೆ, ಈಗ ವಿರೋಧ ಪಕ್ಷಗಳೇ ಅಂಥ ಅವಕಾಶವನ್ನು ಗಲಾಟೆ ಮಾಡಿ ಕಳೆದುಕೊಳ್ಳುತ್ತಿರುವಂತೆ ಕಾಣುತ್ತದೆ. ಅಧಿವೇಶನ ಸೇರಿದ ತಕ್ಷಣ ಸಭಾಧ್ಯಕ್ಷರ ಮುಂದಿನ ಅಂಗಳಕ್ಕೆ ನುಗ್ಗುವುದೇ ಅವರಿಗೆ ಮೊದಲ ಆಯ್ಕೆ ಎನ್ನುವಂತೆ ಆಗಿದೆ. ಅಲ್ಲಿಗೆ, ಮಾತಿಗೆ ಅವಕಾಶವೇ ಕಳೆದು ಹೋಗುತ್ತದೆ. ಇದನ್ನು ಲೋಕಸಭೆಯಲ್ಲಿ ಕಾಂಗ್ರೆಸ್ಸಿಗರು ಮಾತ್ರ ಮಾಡುತ್ತಾರೆ ಎಂದು ಅಲ್ಲ. ಕರ್ನಾಟಕದ ವಿಧಾನಸಭೆಯಲ್ಲಿ ಬಿಜೆಪಿಯವರಷ್ಟೇ ಈ ತಪ್ಪು ಮಾಡುತ್ತಾರೆ ಎಂದೂ ಅಲ್ಲ. ಕೇಂದ್ರದಲ್ಲಿ ಯುಪಿಎ–2 ಸರ್ಕಾರ ಇದ್ದಾಗ ಬಿಜೆಪಿಯವರೂ ಇದನ್ನೇ ಮಾಡಿದ್ದರು. ಸುಷ್ಮಾ ಸ್ವರಾಜ್‌ ಅವರಂಥ ಅದ್ಭುತ ಮಾತುಗಾರರು ವಿರೋಧ ಪಕ್ಷದಲ್ಲಿ ಇದ್ದಾಗಲೂ ಇದೇ ಆಗಿತ್ತು. ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ಇದೇ ಆಗಿತ್ತು.

ಅಧಿವೇಶನ ನಡೆಯುವ ಸಮಯದಲ್ಲಿ ಒಂದಲ್ಲ ಒಂದು ಹಗರಣ ಬಯಲಿಗೆ ಬಂದಿರುತ್ತದೆ. ಅದು ಚರ್ಚೆಗೆ ಅವಕಾಶ ಕಲ್ಪಿಸಬೇಕೇ ಹೊರತು ಗಲಾಟೆಗೆ, ಧರಣಿಗೆ ಅಲ್ಲ. ಈಗ ಏನಾಗಿದೆ ಎಂದರೆ  ಏನಾದರೂ ಮಾಡಿ ಅಧಿವೇಶನ ನಡೆಯದಂತೆ ನೋಡಿಕೊಳ್ಳುವುದೇ ವಿರೋಧ ಪಕ್ಷಗಳ ಗುರಿ ಮತ್ತು ಸಾಧನೆ ಎನ್ನುವಂತೆ ಆಗಿದೆ. ಅದಕ್ಕೆ ಲೋಕಸಭೆಯೇ ಮಾದರಿ ಹಾಕಿಕೊಟ್ಟಿರುವಂತಿದೆ. ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಎಂದು ಹಿರಿಯರು ಸುಮ್ಮನೆ ಹೇಳಲಿಲ್ಲ.

ಹಗರಣಗಳು ಮಾತ್ರವಲ್ಲ ಒಂದು ಸಣ್ಣ ಮಾತನ್ನೂ ಈಗ ಯಾರೂ ಸಹಿಸಿಕೊಳ್ಳುವಂಥ ಸ್ಥಿತಿಯಲ್ಲಿ ಇಲ್ಲ. ಅಧಿವೇಶನ ಎಂದರೆ ವಾಗ್ವಿಲಾಸಕ್ಕೆ ಒಂದು ವೇದಿಕೆ. ಒಬ್ಬರನ್ನು ಮತ್ತೊಬ್ಬರು ಮಾತಿನ ಕೂರಂಬಿನಿಂದಲೇ ಚುಚ್ಚಬೇಕು. ಹೇಗೆ ಚುಚ್ಚಬೇಕು ಎಂದರೆ ಅವರು ಇಡೀ ದಿನ ಚೇತರಿಸಿಕೊಂಡಿರಬಾರದು. ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದ ಶಾಂತವೇರಿ ಗೋಪಾಲಗೌಡರು ಒಂದು ರೀತಿ ಅರಾಜಕ ವ್ಯಕ್ತಿ. ಆದರೆ, ಅವರು ಮಾತಿನಲ್ಲಿಯೇ ಮುಖ್ಯಮಂತ್ರಿಗಳನ್ನು ಸಾಯಿಸುತ್ತಿದ್ದರು. ‘ನೀವು ಒಬ್ಬ ಮಹಾ ಭ್ರಷ್ಟ ಎಂದು ಹೇಳಬೇಕು ಎಂದು ನನಗೆ ಅನಿಸುತ್ತದೆ. ಆದರೆ, ನಾನು ಹಾಗೆ ಹೇಳುವುದಿಲ್ಲ!’ ಎಂದು ಹೇಳುವಂಥ ವಾಗ್ವೈಖರಿ ಅವರಿಗೆ ಇತ್ತು. ಅಂದರೆ ಒಡೆದು ಹೇಳದೆಯೂ ಹೇಳುವ ಮಾತುಗಳು ಇವು!

ಇದು 70ರ ದಶಕದ ಮಾತು.‘ವಿರೋಧ ಪಕ್ಷದವರು ಸಿಐಎ ಎಜೆಂಟರು’ ಎಂದು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ನೇರವಾಗಿ ಆರೋಪ ಮಾಡಿದರು. ಮರುದಿನ ರಾಜ್ಯಸಭೆಯ ಅಧಿವೇಶನ ಸೇರಿತ್ತು. ಸ್ವತಂತ್ರ  ಪಕ್ಷದ ಪಿಲೂ ಮೋದಿ ತಮ್ಮ ಕೊರಳಿಗೆ ಒಂದು ಫಲಕ ನೇತು ಹಾಕಿಕೊಂಡು ಒಳಗೆ ಬಂದರು. ಅದರಲ್ಲಿ ‘ನಾನು ಸಿಐಎ ಏಜೆಂಟ್‌!’ ಎಂದು ಬರೆದಿತ್ತು. ಎಲ್ಲರೂ ಹೊಟ್ಟೆ ಹುಣ್ಣಾಗುವ ಹಾಗೆ  ನಕ್ಕರು. ಅದಕ್ಕಿಂತ ಚೆನ್ನಾಗಿ ಅವರು ಇಂದಿರಾ ಅವರ ಆರೋಪಕ್ಕೆ ಉತ್ತರ ಕೊಡಲು ಸಾಧ್ಯ ಇರಲಿಲ್ಲ. ಅಲ್ಲಿಗೆ ವಿವಾದ ಮುಗಿಯಿತು. ಆದರೆ, ಸಂಸತ್ತಿನಲ್ಲಿ ಮಾತಿನ ಮಹಿಮೆಗೆ, ಸಾಮರ್ಥ್ಯಕ್ಕೆ ಹಾಗೂ ನಗುವಿಗೆ ಇರುವ ಅವಕಾಶಕ್ಕೆ ಇಂದಿಗೂ ನಿದರ್ಶನವಾಗಿ ಪಿಲೂ ಮೋದಿ ನಿಂತರು. ಈಗ ಯಾರಾದರೂ ಯಾರನ್ನಾದರೂ ಸಿಐಎ ಏಜೆಂಟ್‌ ಎಂದು ಹೇಳಿ ದಕ್ಕಿಸಿಕೊಳ್ಳಲು ಆಗುತ್ತದೆಯೇ? ‘ಹುಚ್ಚುಚ್ಚಾರ ಮಾತಾಡಬೇಡಿ’ ಎಂಬ ಒಂದು ಸಾಮಾನ್ಯ ಮಾತೇ ಕೆಲವೇ ವರ್ಷಗಳ ಹಿಂದೆ ಕರ್ನಾಟಕದ ವಿಧಾನ ಪರಿಷತ್ತಿನಲ್ಲಿ ಇಡೀ ದಿನದ ಕಲಾಪ ಹಾಳು ಮಾಡಿತ್ತು.

ಒಂದು ಸಾರಿ ಮಾತು ಸೋತ ಕೂಡಲೇ ಅದರ ಪರಿಣಾಮ ಏನಾಗುತ್ತದೆ ಎಂದರೆ ಅದು ಕೈ ಕೈ ಮಿಲಾಯಿಸುವ ಹಂತಕ್ಕೆ ಬರುತ್ತದೆ. ಅಂಗಿ ಹರಿಯುತ್ತಾರೆ, ಸೀರೆ  ಎಳೆಯುತ್ತಾರೆ; ಕುರ್ಚಿಗಳನ್ನು ಕೈಗೆ ತೆಗೆದುಕೊಳ್ಳುತ್ತಾರೆ. ಮತ್ತು ನಮ್ಮ ಒಳಗಿನ ದುಶ್ಶಾಸನರು ಹೊರಗೆ ಬರುತ್ತಾರೆ! ತಮಿಳುನಾಡಿನಲ್ಲಿ ಇಂಥ ದುಶ್ಶಾಸನ ವರ್ತನೆಯೇ ಜಯಲಲಿತಾ ಅವರಂಥ ನಾಯಕಿಯ ಹುಟ್ಟಿಗೆ  ಕಾರಣವಾಯಿತು. ಡಿಎಂಕೆ ಸದಸ್ಯರು ಅವರ ಸೀರೆಗೆ  ಕೈ ಹಾಕಿದ್ದರು. ಜಯಾ ಅಳುತ್ತ ಹೊರಗೆ ಹೋಗಿದ್ದರು. ತಮಿಳುನಾಡಿನಲ್ಲಿ ಮೊನ್ನೆ ವಿಶ್ವಾಸ ಮತ ಯಾಚಿಸುವಾಗ ಇತಿಹಾಸ ಮರುಕಳಿಸಿದೆ. ಗುಜರಾತಿನಲ್ಲಿ ಬಹುಶಃ ಈಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಂಥದೇ ಹಿಂಸಾಚಾರ  ನಡೆದಿದೆ.

ದೇಶದ ಮೊದಲ ಪ್ರಧಾನಿ ಜವಾಹರಲಾಲ್‌  ನೆಹರೂ ಅವರಿಗೆ ಈ ಅಪಾಯ ತಿಳಿದಿತ್ತು. ಅವರು 1963ರ ಫೆಬ್ರುವರಿಯಲ್ಲಿ ಸಂಸದರಿಗೆ ಬರೆದ ಪತ್ರದಲ್ಲಿ ಇದೇ ಆತಂಕ ವ್ಯಕ್ತಪಡಿಸಿದ್ದರು. ಆಗ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ ಮಾಡುವಾಗ ವಿರೋಧ ಪಕ್ಷದಲ್ಲಿ ಇದ್ದವರು ದಾಂದಲೆ  ಮಾಡಿದ್ದರು. ‘ಇದು ಅತ್ಯಂತ ದುರದೃಷ್ಟಕರ ಘಟನೆ. ಇದನ್ನು ತಡೆಯದೇ ಇದ್ದರೆ ಸಂಸತ್ತಿನ ಮರ್ಯಾದೆ ಹೋಗುತ್ತದೆ. ಕಲಾಪ ಅರ್ಥ ಕಳೆದುಕೊಳ್ಳುತ್ತದೆ. ಸಂಸತ್ತು ಯಾವಾಗಲೂ ದೇಶಕ್ಕೆ ಮಾದರಿ ಹಾಕಿಕೊಡಬೇಕು. ಹಾಗೂ ಅದನ್ನು ವಿಧಾನಸಭೆಗಳು ಅನುಸರಿಸಬೇಕು’ ಎಂದು ಅವರು ಮನವಿ ಮಾಡಿಕೊಂಡಿದ್ದರು. ಈಗ ಹಾಗೆ ಬುದ್ಧಿ ಹೇಳುವವರು ಯಾರು ಇದ್ದಾರೆ? ಹಾಲಿ ಪ್ರಧಾನಿ ನರೇಂದ್ರ ಮೋದಿಯವರು ಸಂಸತ್‌ ಭವನವನ್ನು ಮೊದಲು ಪ್ರವೇಶಿಸುವಾಗ ಮೆಟ್ಟಿಲುಗಳಿಗೆ ಬಾಗಿ ನಮಿಸಿ ಒಳಗೆ ಬಂದಿದ್ದರು. ಅಷ್ಟೇ ಸಾಕೇ? ಸಂಸತ್ತಿನ ಪಾವಿತ್ರ್ಯ ಮತ್ತು ಮಹತ್ವ ಉಳಿಸುವುದು ಹೇಗೆ ಎಂದು ಪ್ರಧಾನಿಯಾದವರೇ ಯೋಚಿಸಬೇಕು. ಅದು ಅವರ ಹೊಣೆಗಾರಿಕೆ.

ಉಪರಾಷ್ಟ್ರಪತಿಗಳೂ, ರಾಜ್ಯಸಭೆಯ ಸಭಾಪತಿಗಳೂ ಆಗಿದ್ದ ಡಾ.ಎಸ್‌.ರಾಧಾಕೃಷ್ಣನ್‌ ಅವರು 1955ರಷ್ಟು ಹಿಂದೆ ಸಂಸತ್ತಿನಲ್ಲಿ ಗಲಾಟೆ ಮಾಡಿದ ಸದಸ್ಯರನ್ನು, ‘ಬೇಜವಾಬ್ದಾರಿ ವೃತ್ತಿಪರ ಮುಷ್ಕರಕೋರರು’ ಎಂದು ಹೀಯಾಳಿಸಿದ್ದರು. ಈಗ ಅವರು ಬದುಕಿ ಇದ್ದಿದ್ದರೆ ಈಗಿನ ಜನಪ್ರತಿನಿಧಿಗಳನ್ನು ಬೈಯಲು ಎಂಥ ಪದಗಳಿಗಾಗಿ ಹುಡುಕಾಟ ಮಾಡಬೇಕಿತ್ತೋ?

ವಿರೋಧ ಪಕ್ಷಗಳು ಸರ್ಕಾರವನ್ನು ರಚನಾತ್ಮಕವಾಗಿ ಟೀಕಿಸಬೇಕು. ಆಡಳಿತದಲ್ಲಿ ಆಗಿರುವ ಲೋಪಗಳನ್ನು ಎತ್ತಿ ಅದರ ಮುಖಕ್ಕೆ ಹಿಡಿಯಬೇಕು. ರಾಜ್ಯ ಸರ್ಕಾರವನ್ನು ರಚನಾತ್ಮಕವಾಗಿ ಟೀಕಿಸಲು ಈಚಿನ ವಿಧಾನ ಮಂಡಲದ ಅಧಿವೇಶನ ವಿರೋಧ ಪಕ್ಷಗಳಿಗೆ  ಒಳ್ಳೆಯ ಅವಕಾಶವನ್ನು ಕಲ್ಪಿಸಿತ್ತು. ರಾಜ್ಯದ 160 ತಾಲ್ಲೂಕುಗಳಲ್ಲಿ ಬರ ಬಿದ್ದಿದೆ. ಜನರು ಹೇಗೋ ಬದುಕಿದ್ದಾರೆ. ಪಶು ಪಕ್ಷಿಗಳು, ಜಲಚರಗಳು ನೀರು ಇಲ್ಲದೆ ನಿಂತಲ್ಲೇ, ಕುಳಿತಲ್ಲೇ ಪ್ರಾಣ ಬಿಡುತ್ತಿವೆ. ಮೊನ್ನಿನ ಅಧಿವೇಶನದಲ್ಲಿ ಯಾರಾದರು ಒಬ್ಬರಾದರೂ ರಾಜ್ಯದ ಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸಿದರೇ? ದುರಂತ ಏನು ಎಂದರೆ ವಿರೋಧ ಪಕ್ಷದವರೂ ಸದನಕ್ಕೆ ಬರಲಿಲ್ಲ, ಆಡಳಿತ ಪಕ್ಷದವರು ಬರುವ ಪ್ರಶ್ನೆಯಂತೂ ಇರಲೇ ಇಲ್ಲ.  ಹಾಗಾದರೆ ಇವರೆಲ್ಲ ಶಾಸಕರಾಗಿ ಆಯ್ಕೆಯಾಗಿ ಹೋಗಲು ಏಕೆ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಾರೆ? ಅವರಿಗೆಲ್ಲ ಜವಾಬ್ದಾರಿಯಿಲ್ಲದ ಅಧಿಕಾರ ಬೇಕಾಗಿದೆ. ಅಥವಾ ಅವರಿಗೆ ಇನ್ನೇನೋ ಆಗಬೇಕಾಗಿದೆ.  ಮತ್ತು ಮುಖ್ಯವಾಗಿ ಅವರಿಗೆ ಮಾದರಿಗಳು ಇಲ್ಲವಾಗಿವೆ. ತೀರಾ ಈಚಿನ ವರೆಗೆ ವಿಧಾನಸಭಾಧ್ಯಕ್ಷರಾಗಿದ್ದ ಕಾಗೋಡು ತಿಮ್ಮಪ್ಪನವರು ವಿರೋಧ ಪಕ್ಷದಲ್ಲಿ ಇದ್ದವರು. ಅದ್ಭುತ ಮಾತುಗಾರರು. ಆದರೆ, ಅವರು ವಿಧಾನಸಭೆಯ ಅಧ್ಯಕ್ಷ ಹುದ್ದೆಯಲ್ಲಿ ಇದ್ದಷ್ಟು ದಿನವೂ ಚಡಪಡಿಸುತ್ತಿದ್ದರು. ಅವರು ಅಲ್ಲಿ ಕುಳಿತುಕೊಂಡು ವಿರೋಧ ಪಕ್ಷದ ಕೆಲಸವನ್ನೇ ಮಾಡಿದರು. ಅವರು ಯಾವ ಸಚಿವರನ್ನೂ ಬಿಡಲಿಲ್ಲ. ವಿಶೇಷವಾಗಿ ಕಂದಾಯ ಮತ್ತು ಅರಣ್ಯ ಸಚಿವರ ಭೂತ ಬಿಡಿಸಿದರು. ಈಗ ಏನಾಯಿತು? ಕಾಗೋಡು ತಿಮ್ಮಪ್ಪನವರು ಕಂದಾಯ ಖಾತೆಯನ್ನೇ ಹೊಂದಿದ್ದಾರೆ. ಈಗ ಅವರು ಹೇಳುತ್ತಿದ್ದಾರೆ, ‘ಅಲ್ಲಿ ಕುಳಿತು ಮಾತನಾಡುವುದು ಬೇರೆ, ಇಲ್ಲಿ ಕುಳಿತು ಕೆಲಸ  ಮಾಡುವುದು ಬೇರೆ’ ಎಂದು. ಅವರು ಸಚಿವರಾಗಿ ಏನು ಮಾಡಬೇಕು ಎಂದುಕೊಂಡಿದ್ದರೋ ಗೊತ್ತಿಲ್ಲ. ಅದು ಅವರ ಮತ್ತು ಸರ್ಕಾರದ ಸಮಸ್ಯೆ. ಆದರೆ, ಸಭಾಧ್ಯಕ್ಷರಾಗಿದ್ದಷ್ಟು ಕಾಲವೂ ಅವರು ಕೊಟ್ಟ ಸಂದೇಶವೇನು? ‘ಇದು ನಿರುಪಯುಕ್ತವಾದ ಹುದ್ದೆ’ ಎಂದೇ ಅಲ್ಲವೇ? ಹಿರಿಯ ಸದಸ್ಯ, ವಾಗ್ಮಿ ರಮೇಶ್‌ಕುಮಾರ್ ಅವರು ಸಚಿವರಾಗುವುದಕ್ಕಿಂತ  ಮುಂಚೆ ಸದನದ ಒಳಗೆ ಮತ್ತು ಹೊರಗೆ ಸರ್ಕಾರವನ್ನು ಮತ್ತು ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡುದಕ್ಕೆ  ಲೆಕ್ಕವಿಲ್ಲ. ಅವರ ಮಾತುಗಳು ಕೇಳುವಂತೆ  ಇರುತ್ತಿದ್ದುವು. ಈಗ...? ಅವರ ಬಾಯಿ ಕಟ್ಟಿ ಹಾಕಿದೆ. ಅಂದರೆ ಅವರು ತಮ್ಮ ಮಾತಿನ ಸಾಮರ್ಥ್ಯವನ್ನು ಅಧಿಕಾರ ಹಿಡಿಯಲು ಬಳಸಿಕೊಂಡರು ಎಂದು ಕಿರಿಯರಿಗೆ ಅನಿಸಿದರೆ ಅದರಲ್ಲಿ ತಪ್ಪು ಹುಡುಕಲಾದೀತೇ?

ರಮೇಶ್‌ಕುಮಾರ್‌ ಅವರು ಸದನಕ್ಕೆ ಬರುವಾಗ ಅಭ್ಯಾಸ ಮಾಡಿ ಬರುತ್ತಿದ್ದರು. ಇಡೀ ಸದನ ಕಿವಿಯಾಗಿ ಕೇಳುವಂತೆ ಮಾತನಾಡುತ್ತಿದ್ದರು. ‘ರೈತರ ಪಾಲಿಗೆ ಈ ಸರ್ಕಾರ ಸತ್ತು ಹೋಗಿದೆ’ ಎಂದು ಅವರು ತೀರಾ ಈಚೆಗೆ ಹೇಳಿದ್ದರು. ಅವರ  ಮಾತಿಗೆ ಎಂಥ ಬಲ ಇತ್ತು! ಈಗ ಹಾಗೆ  ಮಾತನಾಡುವವರು ಯಾರು ಇದ್ದಾರೆ? ಇಲ್ಲ ಎಂದು ಅಲ್ಲ. ಹಾಗೆ  ಮಾತು ಬರುವವರು ಮೌನವಾಗಿ ಬಿಟ್ಟಿದ್ದಾರೆಯೇ?

ವಿರೋಧ ಪಕ್ಷದಲ್ಲಿ ಇರುವವರು ಮೊದಲು ತಮ್ಮ ಆಸನದಲ್ಲಿ ಗಟ್ಟಿಯಾಗಿ ಕುಳಿತುಕೊಳ್ಳಲು ಕಲಿಯಬೇಕು. ಆಯಾ ದಿನದ ಕಾರ್ಯತಂತ್ರ ಏನಾಗಿರಬೇಕು ಎಂದು ಆಯಾ ಪಕ್ಷಗಳು ಅಧಿವೇಶನಕ್ಕಿಂತ ಮೊದಲು ಸಭೆ ಸೇರಿ ಚರ್ಚಿಸಬೇಕು. ಯಾರು ಯಾವ ವಿಷಯದ ಮೇಲೆ ಮಾತನಾಡಬೇಕು ಎಂದು ನಿರ್ಣಯಿಸಬೇಕು. ವಿರೋಧ ಪಕ್ಷಗಳು ಒಂದಕ್ಕಿಂತ  ಹೆಚ್ಚು ಇರುವಾಗ ಜಂಟಿ ಕಾರ್ಯತಂತ್ರ  ರೂಪಿಸಬೇಕು. ಬರ ಕುರಿತು ಚರ್ಚೆ ಮಾಡುವಾಗ ಎಂಥ ಪಕ್ಷಭೇದ?

ವಿರೋಧ ಪಕ್ಷಗಳು ಎಂದರೆ ಸರ್ಕಾರವನ್ನು ವಿರೋಧ ಮಾಡುವುದು ಎಂದು ಅರ್ಥವೇ ಹೊರತು ಸರ್ಕಾರಕ್ಕೆ ಅಡ್ಡಿ ಮಾಡುವುದು ಎಂದು ಅಲ್ಲ. ಈಗ ಏನಾಗಿದೆ ಎಂದರೆ ಸರ್ಕಾರದ ಜೊತೆ ಸಂಘರ್ಷಕ್ಕೆ ಇಳಿಯುವುದೇ ವಿರೋಧ ಪಕ್ಷದ ಕೆಲಸ ಎನ್ನುವಂತೆ ಆಗಿದೆ. ಚುನಾವಣೆ ಭಾಷಣಕ್ಕೂ ಅಧಿವೇಶನದ ಭಾಷಣಕ್ಕೂ ವ್ಯತ್ಯಾಸವೇ ಇಲ್ಲದಂತೆ ಆಗಿದೆ. ಆಡಳಿತ ಪಕ್ಷವೂ ತನ್ನ ಹೊಣೆ ಏನು ಎಂಬುದನ್ನೇ ಮರೆತು ಬಿಟ್ಟಿದೆ ಅಥವಾ ಅದಕ್ಕೆ ಅದೆಲ್ಲ ಬೇಕಾಗಿಲ್ಲ. ಆಡಳಿತ ಪಕ್ಷವು ಯಾವಾಗಲೂ  ತೆರೆದ ಮನಸ್ಸು ಹೊಂದಿರಬೇಕು ಮತ್ತು ತೆರೆಯ ಹಿಂದಿನ ಸಂಧಾನದ ಮಾತುಗಳಿಗೆ  ಬಾಗಿಲು ತೆರೆದು ಇಡಬೇಕು. ಅಂತಿಮವಾಗಿ ಅಧಿವೇಶನದಲ್ಲಿ ಸರ್ಕಾರದ ಕೆಲಸಗಳು ಹೆಚ್ಚು ಆಗಬೇಕಾಗಿರು ತ್ತದೆಯೇ ಹೊರತು ವಿರೋಧ ಪಕ್ಷಗಳದು ಅಲ್ಲ. ಮತ್ತು ಅವೆಲ್ಲ ಜನರ ಹಿತಕ್ಕೆ ಸಂಬಂಧಿಸಿದ ಕೆಲಸಗಳಾಗಿರುತ್ತವೆ.  ವಿರೋಧ ಪಕ್ಷಗಳಿಗೂ ಅದೇ ಮುಖ್ಯ ಅಲ್ಲವೇ? ಅಲ್ಲವೇನೋ?      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT