ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಚ್ಚಿನ ನಾಯಕನ ಮುಖ ರಕ್ಷಣೆಯ ಕೆಲಸ

Last Updated 28 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಮಹಾತ್ಮ ಗಾಂಧಿ ಅವರ 148ನೇ ಜನ್ಮದಿನವನ್ನು ದೇಶ ಸದ್ಯದಲ್ಲೇ ಆಚರಿಸಲಿದೆ. ಅಂದಿಗೆ ಸ್ವಚ್ಛ ಭಾರತ ಅಭಿಯಾನಕ್ಕೆ ಮೂರು ವರ್ಷ ತುಂಬಲಿದೆ. 2014ರ ಅಕ್ಟೋಬರ್ 2ರಂದು ಈ ಅಭಿಯಾನಕ್ಕೆ ಚಾಲನೆ ನೀಡಿರುವುದರಿಂದ ಈ ಎರಡರ ನಡುವೆ ಸ್ಪಷ್ಟವಾದ ನಂಟು ಇದೆ. ಬಯಲು ಮಲ ವಿಸರ್ಜನೆ, ಕಸದ ರಾಶಿಗಳು ಮತ್ತು  ಇಂತಹ ಇತರ ವಿಷಯಗಳಿಂದ ದೇಶವನ್ನು ಮುಕ್ತಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ತಮಗೆ ಮತ್ತು ದೇಶ ಬಾಂಧವರಿಗೆ ಐದು ವರ್ಷ ಸಮಯ ಕೊಟ್ಟುಕೊಂಡಿದ್ದಾರೆ. ಅವರು ಆಗ ಇದನ್ನು ಹೀಗೆ ಹೇಳಿದ್ದರು: ‘2019ರಲ್ಲಿ ಮಹಾತ್ಮ ಗಾಂಧಿ ಅವರ 150ನೇ ಹುಟ್ಟಿದ ದಿನಕ್ಕೆ ಸ್ವಚ್ಛ ಭಾರತ ನಾವು ಅವರಿಗೆ ಸಲ್ಲಿಸಬಹುದಾದ ಅತ್ಯುತ್ತಮವಾದ ನಮನ’.

ಸ್ವಚ್ಛ ಭಾರತ ಅಭಿಯಾನ ಪ್ರಧಾನಿಯ ಅತ್ಯಂತ ನೆಚ್ಚಿನ ಮತ್ತು ಮಹತ್ವಾಕಾಂಕ್ಷೆಯ ಕಾರ್ಯಕ್ರಮ. ಅದಕ್ಕಾಗಿ ಅವರು ಭಾರಿ ಶಕ್ತಿ ವೆಚ್ಚ ಮಾಡಿದ್ದಾರೆ ಮತ್ತು ರಾಜಕೀಯವಾಗಿಯೂ ಇದು ಅವರಿಗೆ ಮಹತ್ವದ್ದಾಗಿದೆ. ಈ ತನಕ ಈ ಅಭಿಯಾನ ಏನು ಮಾಡಿದೆ? ಗುಜರಾತ್‍ನ ನಗರಗಳು ಸಂಪೂರ್ಣವಾಗಿ ಬಯಲು ಶೌಚಮುಕ್ತ ಎಂದು 2016ರ ಅಕ್ಟೋಬರ್ 2ರಂದು ಅಭಿಯಾನದ ಎರಡನೇ ವಾರ್ಷಿಕೋತ್ಸವದಲ್ಲಿ ಘೋಷಿಸಲಾಯಿತು. ಗಾಂಧಿ ಮತ್ತು ಮೋದಿ ಅವರಿಬ್ಬರದೂ ತವರು ರಾಜ್ಯ ಗುಜರಾತ್. ರಾಷ್ಟ್ರಪಿತನ ನೆನಪಿಗೆ ಸರ್ಕಾರವು ನೀಡುತ್ತಿರುವ ‘ಮಧ್ಯಂ ತರ ಕೊಡುಗೆ’ ಇದು. 2019ರ ಅಕ್ಟೋಬರ್ 2ರ ಹೊತ್ತಿಗೆ ಭಾರತವು ಕೊಳಕು, ಬಯಲು ಶೌಚ, ಕಸ ಮತ್ತು ಮಾಲಿನ್ಯ ಮುಕ್ತವಾಗಲಿದೆ ಎಂದು ಆಗಿನ ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯ ನಾಯ್ಡು ಹೇಳಿದ್ದರು.

ಸರ್ಕಾರ ಹೇಳಿದ್ದರಲ್ಲಿ ಸತ್ಯವಿದೆಯೇ ಎಂಬುದನ್ನು ಕಂಡುಕೊಳ್ಳಲು ‘ಕ್ಯಾರವಾನ್’ ಪತ್ರಿಕೆಯ ವರದಿಗಾರರೊಬ್ಬರು ಈ ಜನವರಿಯಲ್ಲಿ ಅಲ್ಲಿಗೆ ಹೊರಟರು. ಒಂದು ಕಾಲದಲ್ಲಿ, ಮಹಾತ್ಮ ಗಾಂಧಿ ಅವರು ಸತ್ಯಾಗ್ರಹ ಆಶ್ರಮ ನಡೆಸಿದ್ದ ಮತ್ತು ಮೋದಿ ಅವರು ಒಂದು ರಾಜ್ಯ ಸರ್ಕಾರವನ್ನು ನಡೆಸಿದ್ದ ಅಹಮದಾಬಾದ್‍ನಿಂದ ಅವರು ಯಾತ್ರೆ ಆರಂಭಿಸಿದರು. ಅವರು ಮಣಿನಗರಕ್ಕೆ ಹೋದರು. ಇದು ಮೋದಿ ಅವರು ಗುಜರಾತ್ ವಿಧಾನಸಭೆಗೆ ಮೂರು ಬಾರಿ ಆಯ್ಕೆ ಆಗಿದ್ದ ನಗರ ಪ್ರದೇಶದ ವಿಧಾನಸಭಾ ಕ್ಷೇತ್ರ. ‘ಇಕ್ಕಟ್ಟಾದ, ಕಸ ತುಂಬಿದ ಬೀದಿಗಳಲ್ಲಿ ಕೆಲವು ಅಂಗಡಿಗಳು ತೆರೆದುಕೊಂಡಿದ್ದವು- ಟಿ.ವಿ. ದುರಸ್ತಿ, ಮಾಂಸದ ಅಂಗಡಿ, ಸಣ್ಣ ಹೋಟೆಲುಗಳು- ಎಲ್ಲೆಡೆಯೂ ಯುವಕರ ಗುಂಪುಗಳು ಓಡಾಡಿಕೊಂಡಿದ್ದವು’ ಎಂದು ತಾವು ಕಂಡದ್ದನ್ನು ಆ ವರದಿಗಾರರು ದಾಖಲಿಸಿದ್ದಾರೆ. ಈ ಬೀದಿಯನ್ನು ಹಾದು ಅದರ ಆಚೆಗೆ ಇದ್ದ ಮೈದಾನದತ್ತ ಅವರು ಹೋದರು. ಅದರಾಚೆಗೆ ದೊಡ್ಡದೊಂದು ಕೆರೆ ಇದೆ. ಅದರ ಹೆಸರು ಚಂದೋಲಾ ಸರೋವರ. ‘ಸರೋವರದ ಬದಿಯಲ್ಲಿ ಕೊಳೆಗೇರಿಗಳು ನೆಲೆಯಾಗಿವೆ. ಸರೋವರದ ಸುಮಾರು ಹತ್ತು ಮೀಟರ್ ಅಗಲದ ದಂಡೆಯ ಉದ್ದಕ್ಕೂ ಕಾಲಿಡಲಾಗದಂತೆ ಮಲದ ರಾಶಿಗಳು ತುಂಬಿದ್ದವು. ನೊಣ, ಸೊಳ್ಳೆಗಳ ಸದ್ದು ಕಿವಿ ತುಂಬುತ್ತಿದ್ದವು. ಅಲ್ಲಿಯೇ ಸ್ವಲ್ಪ ಮುಂದೆ, ಸಣ್ಣ ಹುಡುಗನೊಬ್ಬ ಮಲವಿಸರ್ಜನೆಗೆ ಕುಳಿತಿದ್ದ’.

ಸಾಗರ್ ಎಂಬ ಈ ವರದಿಗಾರ ದೇಶದ ಹಲವು ಭಾಗಗಳಲ್ಲಿ ಸಂಚರಿಸಿ, ಅಲ್ಲಿನ ಸಾಮಾಜಿಕ ಹೋರಾಟಗಾರರು, ಅಧಿಕಾರಿಗಳು ಮತ್ತು ಜನರ ಜತೆ ಮಾತನಾಡಿದ್ದಾರೆ. ಭಾರತದ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಸಿದ್ಧಪಡಿಸಿದ ವರದಿಗಳನ್ನು ಅವರು ಓದಿದ್ದಾರೆ. ಸರ್ಕಾರದ ವರದಿಗಳು ವಿಶ್ವಾಸಾರ್ಹವಲ್ಲ ಎಂಬುದನ್ನು ಅವರು ಕಂಡುಕೊಂಡಿದ್ದಾರೆ. ಯಾಕೆಂದರೆ ಇವುಗಳಿಗೆ ಪಾರದರ್ಶಕತೆ ಇಲ್ಲ ಎಂಬುದು ಎದ್ದು ಕಾಣುತ್ತಿತ್ತು. ಅಭಿ ಯಾನದ ಗುರಿಯನ್ನು ಸಾಧಿಸುವುದರೆಡೆಗಿನ ಪ್ರಗತಿಯ ಬಗ್ಗೆ ಯಾವುದೇ ಖಚಿತತೆ ಈ ವರದಿಗಳಲ್ಲಿ ಇಲ್ಲ. ಮಲ ಹೊರುವ ಅಸಹ್ಯ ಪದ್ಧತಿ ದೇಶದ ಎಲ್ಲೆಡೆ ಪ್ರಚಲಿತದಲ್ಲಿದೆ. ಸಭ್ಯವಾದ ಶೌಚಾಲಯ ನಿರ್ಮಾಣಕ್ಕೆ ಹಲವು ತೊಡಕುಗಳಿವೆ ಮತ್ತು  ಇಂತಹ ಶೌಚಾಲಯಗಳನ್ನು ಜನರು ಬಳಸುವಂತೆ ಮಾಡುವುದರಲ್ಲಿ ಇನ್ನೂ ಹೆಚ್ಚು ತೊಡಕುಗಳಿವೆ.

ಭಾರತ ನಗರೀಕರಣಗೊಳ್ಳುತ್ತಿದ್ದಂತೆಯೇ ಭಾರಿ ಪ್ರಮಾಣದಲ್ಲಿ ಗೃಹ ತ್ಯಾಜ್ಯ ಮತ್ತು ಕೈಗಾರಿಕಾ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ‘ಈ ದೇಶಕ್ಕೆ ತನ್ನ ತ್ಯಾಜ್ಯವನ್ನು ಸಂಸ್ಕರಿಸುವ ಸಾಮರ್ಥ್ಯವೇ ಇಲ್ಲ’ ಎಂಬ ಸತ್ಯ ಆ ವರದಿಗಾರನಿಗೆ ಆಘಾತ ಉಂಟು ಮಾಡಿದೆ. ‘ಕ್ಯಾರವಾನ್’ನ 2017ರ ಮೇ ಸಂಚಿಕೆಯಲ್ಲಿ ಈ ವರದಿ ಪ್ರಕಟವಾಯಿತು. ಈ ವರದಿಯ ಒಟ್ಟು ಅಭಿಪ್ರಾಯ ಅದರ ಶೀರ್ಷಿಕೆಯಲ್ಲಿಯೇ ವ್ಯಕ್ತವಾಗುತ್ತಿದೆ: ‘ಮಾಡಿದ್ದೆಲ್ಲ ವ್ಯರ್ಥ: ಸ್ವಚ್ಛ ಭಾರತ ಅಭಿಯಾನ ವೈಫಲ್ಯದತ್ತ’.

ವೈಫಲ್ಯಗಳನ್ನು ನೇರವಾಗಿ ವರದಿ ಮಾಡಿದ್ದರೂ ಕ್ಯಾರವಾನ್‍ನ ಬರಹ ಸ್ವಚ್ಛ ಭಾರತ ಅಭಿಯಾನದ ಗುರಿಗಳನ್ನು ಶ್ಲಾಘಿಸಿದೆ. ನಾನೂ ಇದನ್ನು ಒಪ್ಪುತ್ತೇನೆ. ನನ್ನ ಹೆಚ್ಚಿನ ಓದುಗರೂ ಇದನ್ನು ಒಪ್ಪುತ್ತಾರೆ ಎಂಬ ಭಾವನೆ ನನ್ನದು. ಈ ಸರ್ಕಾರದಲ್ಲಿ ಇರುವ ಸಮಸ್ಯೆ ಎಂದರೆ, ತಿರುಳಿಗಿಂತ ಶೋಕಿಗೆ, ಯೋಜನೆಗಿಂತ ಬಡಾಯಿಗೆ ಇರುವ ಮಹತ್ವ. ಅಭಿಯಾನದ ಪರಿಣಾಮಗಳನ್ನು ಸಮಗ್ರವಾಗಿ ಅಧ್ಯಯನ ಮಾಡದೆಯೇ ಯೋಜನೆ ಘೋಷಿಸಲಾಯಿತು; ಒಂದು ಗೀಳಿನ ರೂಪದಲ್ಲಿ ಅಲ್ಲದಿದ್ದರೂ ಈ ಅಭಿಯಾನ ವ್ಯಾಪಕವಾಗಿ ಪ್ರಧಾನಿಯ ಜತೆಯೇ ಗುರುತಿಸಿಕೊಳ್ಳುತ್ತದೆ. ಎಷ್ಟು ವೇಗವಾಗಿ ಮತ್ತು ಎಷ್ಟು ಸಂಪೂರ್ಣವಾಗಿ ಅಭಿಯಾನದ ಗುರಿಗಳನ್ನು ಸಾಧಿಸಲಾಗುತ್ತದೆ ಎಂಬ ಬಗ್ಗೆ ವಿವೇಕದ ಎಲ್ಲೆ ಮೀರಿದ ಹೇಳಿಕೆಗಳನ್ನು ನೀಡಲಾಯಿತು.

ಅಭಿಯಾನದ ಮೂರನೇ ವಾಷಿಕೋತ್ಸವ ಸಮೀಪಿ ಸುತ್ತಿದೆ. ಅಭಿಯಾನದ ಭರವಸೆಗಳು ಮತ್ತು ವಾಸ್ತವದ ನಡುವಣ ಅಂತರ ತುಂಬುವುದಕ್ಕಾಗಿ ನರೇಂದ್ರ ಮೋದಿ ಅವರ ಸರ್ಕಾರ ಅಸಾಂಪ್ರದಾಯಿಕವಾದ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಹೊಸ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಿಮಾಚಲ ಪ್ರದೇಶದ ಕಸೌಲಿ ಸೇನಾ ನೆಲೆಗೆ ಇತ್ತೀಚೆಗೆ ಭೇಟಿ ನೀಡಿದ್ದರು. ಹಿಮಾಲಯದ ತಪ್ಪಲಿನ ಪ್ರವಾಸಿ ಮತ್ತು ತೀರ್ಥಯಾತ್ರೆ ತಾಣಗಳಲ್ಲಿನ ತ್ಯಾಜ್ಯವನ್ನು ಸಂಗ್ರಹಿಸಿ ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವುದು ಸೇನೆಯ ಕರ್ತವ್ಯ ಎಂದು ಪ್ರಧಾನಿ ಭಾವಿಸಿರುವುದಾಗಿ ಅಲ್ಲಿ ಇದ್ದ ಯೋಧರು ಮತ್ತು ಅಧಿಕಾರಿಗಳಿಗೆ ನಿರ್ಮಲಾ ಹೇಳಿದರು. ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಹೀಗಿದೆ: ‘ಪ್ರವಾಸಿಗರು ಬಿಟ್ಟು ಹೋಗುವ ತ್ಯಾಜ್ಯ ಅಲ್ಲಿನ ಪರಿಸ್ಥಿತಿಯಿಂದಾಗಿ ಕೊಳೆಯುವುದಿಲ್ಲ. ಹಾಗಾಗಿ ಎತ್ತರದ ಪ್ರದೇಶಗಳಿಗೆ ಹೋಗಿ ಕಸ ಹೆಕ್ಕಿ ಸ್ವಚ್ಛ ಮಾಡುವುದು ಅಭಿಯಾನಕ್ಕಾಗಿ ಯೋಧರು ಮಾಡಬೇಕಿರುವ ಕೆಲಸ’ ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.

ಪ್ರಧಾನಿ ಕಾರ್ಯಾಲಯದ ಈ ಸೂಚನೆಗೆ ಸೇನೆಯ ಮಾಜಿ ಉಪ ಮುಖ್ಯಸ್ಥ ಲೆ.ಜ. ವಿಜಯ್ ಒಬೆರಾಯ್ ಅವರು ಬ್ಲಾಗ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಪ್ರವಾಸಿಗರು ಮತ್ತು ತೀರ್ಥಯಾತ್ರಿಗಳು ಬಿಟ್ಟು ಹೋಗುವ ಕಸವನ್ನು ಹೆಕ್ಕುವುದು ಯೋಧರ ಕೆಲಸವೇ ಎಂದು ಅವರು ಪ್ರಶ್ನಿಸಿದ್ದಾರೆ. ‘ಕಳೆದ ಅರ್ಧ ಶತಮಾನದಲ್ಲಿ ನಾನು ಕೇಳಿದ ಅತ್ಯಂತ ದಡ್ಡ ಆದೇಶ ಇದು’ ಎಂದು ಅವರು ಹೇಳಿದ್ದಾರೆ. ಒಬೆರಾಯ್ ಹೀಗೆ ಹೇಳುತ್ತಾರೆ: ‘ನಾಗರಿಕ ಆಡಳಿತವು ದೇಶದ ಮೂಲೆ ಮೂಲೆಗೂ ವಿಸ್ತರಿಸಿದೆ. ಇದು ಭಾರತದ ಎಲ್ಲ ಗಡಿ ಭಾಗಗಳಿಗೂ ಅನ್ವಯವಾಗುತ್ತದೆ. ತನ್ನ ಅಧೀನದಲ್ಲಿರುವ ಸ್ಥಳಗಳ ಆಡಳಿತ ನಿರ್ವಹಣೆ ನಾಗರಿಕ ಆಡಳಿತ ವ್ಯವಸ್ಥೆಯ ಕೆಲಸ. ಹಾಗಾಗಿ, ಪ್ರವಾಸಿಗರು ಕಸ ಎಸೆಯದಂತೆ ಈ ವ್ಯವಸ್ಥೆ ಯಾಕೆ ನೋಡಿಕೊಳ್ಳಬಾರದು? ಇದು ಸಾಧ್ಯವಾಗುವುದಿಲ್ಲ ಎಂದಾದರೆ, ಈ ವ್ಯವಸ್ಥೆಗೆ ಸಂಪನ್ಮೂಲ, ಅಧಿಕಾರ ಎಲ್ಲವೂ ಇವೆ. ಅವುಗಳನ್ನು ಬಳಸಿಕೊಂಡು ಯಾಕೆ ಸ್ವಚ್ಛ ಮಾಡಬಾರದು? ರಕ್ಷಣಾ ಪಡೆಗಳು ತಾವು ಇರುವ ಎಲ್ಲ ಸ್ಥಳಗಳನ್ನೂ ಅತ್ಯಂತ ಸ್ವಚ್ಛವಾಗಿ, ಹಸಿರಾಗಿ ಮತ್ತು ನಿರ್ಮಲವಾಗಿ ಇರಿಸಿಕೊಳ್ಳುತ್ತವೆ. ಅವರು ನಿಜವಾಗಿಯೂ ಜನರು ಅನುಕರಿಸಬಹುದಾದ ಮಾದರಿ. ಹಾಗಿರುವಾಗ ಇಂತಹ ಆದೇಶ ಅಥವಾ ಸೂಚನೆಗಳನ್ನು ಯಾಕೆ ನೀಡಲಾಗಿದೆ?’

ತಮ್ಮ ಪ್ರಶ್ನೆಗೆ ಒಬೆರಾಯ್ ಅವರೇ ನೀಡಿದ ಉತ್ತರ ಹೀಗಿದೆ: ‘ಸ್ವಚ್ಛ ಭಾರತ ಅಭಿಯಾನವು ಉಂಟು ಮಾಡಿ ರುವ ಪರಿಣಾಮ ಅತ್ಯಲ್ಪ. ಹಾಗಾಗಿ, ಕನಿಷ್ಠ ಪಕ್ಷ ಪ್ರವಾಸಿ ತಾಣಗಳನ್ನು ಸ್ವಚ್ಛ ಮಾಡಿದರೆ, ಸರ್ಕಾರದ ಪ್ರಚಾರ ಯಂತ್ರವು ಅದನ್ನೇ ಟಾಂ ಟಾಂ ಮಾಡಿ ಸರ್ಕಾರದ ಮುಖ ಉಳಿಸಬಹುದು ಎಂಬುದೇ ಈ ಆದೇಶದ ಹಿಂದೆ ಇರುವ ಉದ್ದೇಶ’.

ಲೆ.ಜ. ಒಬೆರಾಯ್ ಅವರನ್ನು ಒಪ್ಪದಿರುವುದು ಕಷ್ಟ. ಸೇನೆಯನ್ನು ಸಾಧ್ಯವಿರುವ ಎಲ್ಲ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಗಡಿ ಕಾಯುವುದು, ನುಸುಳುಕೋರರನ್ನು ತಡೆಯುವುದು, ಯಾವುದೇ ಅತಿಕ್ರಮಣವನ್ನು ಎದುರಿಸುವುದು ಸೇನೆಯ ಪ್ರಧಾನ ಕರ್ತವ್ಯ. ಪ್ರವಾಹ ಅಥವಾ ಭೂಕಂಪದಂತಹ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಪರಿಹಾರ ಕಾರ್ಯಾಚರಣೆಗೆ ಸೇನೆಯನ್ನು ಕರೆಯುವುದನ್ನು ಅರ್ಥ ಮಾಡಿಕೊಳ್ಳಬಹುದು. ಕೆಲವೊಮ್ಮೆ, ಕೋಮು ಗಲಭೆ ನಡೆದು ಹಿಂಸಾಚಾರ ಕೈಮೀರಿದಾಗ ಸೇನೆಯನ್ನು ಕರೆಯುವುದು ಅನಿವಾರ್ಯ ಆಗಬಹುದು. ಆದರೆ, ಪ್ರಧಾನಿಯ ನೆಚ್ಚಿನ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮವೊಂದು ವಿಫಲವಾದಾಗ ನಾಗರಿಕ ಮತ್ತು ರಾಜಕೀಯ ವ್ಯವಸ್ಥೆಯ ಮುಖ ರಕ್ಷಣೆ ಖಂಡಿತವಾಗಿಯೂ ಸೇನೆಯ ಕೆಲಸ ಅಲ್ಲ.

ಸ್ವಚ್ಛತೆಯ ಅಭಿಯಾನ ಯಶಸ್ಸು ಕಾಣದಿದ್ದರೂ ಭಾರತದ ಬಹುಸಂಖ್ಯಾತರು ಇದೊಂದು ಒಳ್ಳೆಯ ಯೋಜನೆ ಎಂದೇ ಭಾವಿಸಿದ್ದಾರೆ ಎಂಬುದನ್ನು ನಾನು ಆಗಲೇ ಹೇಳಿದ್ದೇನೆ. ಪ್ರಧಾನಿಯ ಇನ್ನೊಂದು ಮಹತ್ವಾಕಾಂಕ್ಷೆಯ ಯೋಜನೆ ಹೆಚ್ಚು ವಿವಾದಾತ್ಮಕವಾಗಿದೆ. ಅದು ನೋಟು ರದ್ದತಿ. ಇದು ಬೇಜವಾಬ್ದಾರಿ ಮತ್ತು ಅವಿವೇಕದ ನಿರ್ಧಾರ ಎಂದು ನಮ್ಮ ಮುಖ್ಯವಾದ ಹಲವು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.

ಅವು ಸತ್ಯವೆಂದು ಈಗ ಸಾಬೀತಾಗಿದೆ. ಯಾಕೆಂದರೆ, ಚಲಾವಣೆಯಲ್ಲಿದ್ದ ಶೇ 86ರಷ್ಟು ನೋಟುಗಳನ್ನು ರದ್ದುಪಡಿಸಿದ ಬಳಿಕ ಉದ್ಯಮಗಳು ಕೆಲಸಗಾರರನ್ನು ಮನೆಗೆ ಕಳುಹಿಸಿವೆ, ಅಂಗಡಿಗಳು ಬಾಗಿಲು ಮುಚ್ಚಿವೆ ಮತ್ತು ರೈತರು ಬಿತ್ತನೆಯನ್ನು ಮುಂದೂಡಿದ್ದಾರೆ. ನೋಟು ರದ್ದತಿಯು ಅಸುರಕ್ಷಿತ ಭಾವ ಸೃಷ್ಟಿಸಿದ್ದಷ್ಟೇ ಅಲ್ಲ, ವಿಶ್ವಾಸ ನಷ್ಟವಾಗುವಂತೆಯೂ ಮಾಡಿತು. ಅದರ ಪರಿಣಾಮವಾಗಿ ಆರ್ಥಿಕ ಪ್ರಗತಿ ಗಣನೀಯವಾಗಿ ಕುಂಠಿತಗೊಂಡಿತು. ನಮ್ಮ ದೇಶಿ ಉತ್ಪನ್ನದಲ್ಲಿ ಶೇ 2ರಷ್ಟು ಕಡಿತವಾಗಲಿದೆ ಎಂದು ನಮ್ಮ ಹಿಂದಿನ ಅರ್ಥಶಾಸ್ತ್ರಜ್ಞ ‍ಪ್ರಧಾನಿ ಊಹಿಸಿದ್ದರು. ಆದರೆ ಈಗಿನ ಪ್ರಧಾನಿ ಅವರನ್ನು ಅಣಕಿಸಿದ್ದರು. ಅವರ ಅನುಯಾಯಿಗಳು ಮೂದಲಿಸಿದ್ದರು. ಆದರೆ ಕನಿಷ್ಠ ಪಕ್ಷ ಈ ವಿಚಾರದಲ್ಲಿಯಾದರೂ ಡಾ. ಮನಮೋಹನ್‌ ಸಿಂಗ್‌ ಅವರು ಹೇಳಿದ್ದು ಸರಿಯಾಗಿತ್ತು ಎಂಬುದನ್ನು ಸರ್ಕಾರದ ಅಂಕಿ ಅಂಶಗಳೇ ತೋರಿಸುತ್ತಿವೆ.

ನೋಟು ರದ್ದತಿ ಹೀನಾಯವಾಗಿ ಸೋಲುವುದರೊಂದಿಗೆ ಅದರ ಶಿಲ್ಪಿಯ ಹೆಸರು ಕಾಯುವ ಕೆಲಸದಲ್ಲಿ ಸರ್ಕಾರ ಹತಾಶವಾಗಿ ತೊಡಗಿಕೊಂಡಿದೆ. ಆದರೆ ಈ ವಿಚಾರದಲ್ಲಿ ನೆರವು ನೀಡುವಂತೆ ಸೇನೆಯ ಬದಲಿಗೆ ಪೊಲೀಸ್‌ ಇಲಾಖೆಗೆ ಸೂಚಿಸಲಾಗಿದೆ. ಜನರು ನಗದುರಹಿತ ವಹಿವಾಟು ನಡೆಸಲು ಪ್ರೋತ್ಸಾಹ ನೀಡಬೇಕು. ಈ ಮೂಲಕ ನೋಟು ರದ್ದತಿಯ ಉದ್ದೇಶ ಸಂಪೂರ್ಣವಾಗಿ ಈಡೇರುವಂತೆ ನೋಡಿಕೊಳ್ಳಬೇಕು ಎಂದು ಪೊಲೀಸ್‌ ಪಡೆಗಳಿಗೆ ಗೃಹ ಸಚಿವಾಲಯ ಪತ್ರ ಬರೆದಿದೆ ಎಂದು ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ಪತ್ರಿಕೆ ವರದಿ ಮಾಡಿದೆ. ‘ಜನರು ನಗದುರಹಿತ ವಹಿವಾಟು ನಡೆಸಲು ತರಬೇತಿ ಕೊಡಬೇಕು’ ಎಂದು ಎಲ್ಲ ರಾಜ್ಯಗಳ ಪೊಲೀಸರಿಗೆ ಪತ್ರದಲ್ಲಿ ಹೇಳಲಾಗಿದೆ.

ಈ ಅಸಾಂಪ್ರದಾಯಿಕವಾದ ಆದೇಶ ಪೊಲೀಸ್‌ ಅಧಿಕಾರಿಗಳಲ್ಲಿ ಕಳವಳ ಸೃಷ್ಟಿಸಿದೆ. ‘ಪೊಲೀಸ್‌ ಇಲಾಖೆಗೆ ಈಗಾಗಲೇ ಸಾಕಷ್ಟು ಕೆಲಸ ವಹಿಸಲಾಗಿದೆ. ಈಗ ಪೊಲೀಸರು ಮಾಡಬೇಕಾದ ಕೆಲಸದಲ್ಲಿ ಸೇರಿಲ್ಲದ ಕೆಲಸವನ್ನೂ ಅವರ ಮೇಲೆ ಯಾಕೆ ಹೇರಲಾಗಿದೆ’ ಎಂದು ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ಪತ್ರಿಕೆ ಜತೆ ಮಾತನಾಡಿದ ಹಿರಿಯ ಐಪಿಎಸ್‌ ಅಧಿಕಾರಿಯೊಬ್ಬರು ಪ್ರಶ್ನಿಸಿದ್ದಾರೆ. ‘ಬಹುಶಃ, ಕಳೆದ ವರ್ಷ ನೋಟು ರದ್ದತಿ ಮಾಡಿದ ಬಳಿಕ ಜನರು ಸಿಟ್ಟಿಗೆದ್ದಿದ್ದರು ಮತ್ತು ಪ್ರತಿ ನಗರದಲ್ಲಿಯೂ ಸಣ್ಣ ಪುಟ್ಟ ಅಹಿತಕರ ಘಟನೆಗಳು ನಡೆದಿದ್ದವು. ಹಾಗಾಗಿ ನಗದುರಹಿತ ವಹಿವಾಟಿನ ತರಬೇತಿಗೆ ಪೊಲೀಸರನ್ನು ಆಯ್ಕೆ ಮಾಡಿಕೊಂಡಿರಬಹುದು’ ಎಂದು ಆ ಅಧಿಕಾರಿ ಅಂದಾಜಿಸಿದ್ದಾರೆ. ಆದರೆ ಇನ್ನೊಬ್ಬ ಪೊಲೀಸ್‌ ಅಧಿಕಾರಿ ಸ್ವಲ್ಪ ಒರಟಾಗಿಯೇ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ‘ಈ ತರ್ಕದಲ್ಲಿ ನೋಡುವುದಾದರೆ ನಡೆದಾಡುವ ಪ್ರತಿ ವ್ಯಕ್ತಿಯೂ ಪೊಲೀಸರ ಜವಾಬ್ದಾರಿಯಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ನೋಟು ರದ್ದತಿ ವಿಫಲವಾಗಿದೆ. ಸ್ವಚ್ಛ ಭಾರತ ಅಭಿಯಾನ ಯಶಸ್ವಿಯಾಗುವ ಲಕ್ಷಣ ಇಲ್ಲ. ಈ ಎರಡೂ ಯೋಜನೆಗಳ ಜತೆ ಪ್ರಧಾನಿ ಮೋದಿ ಅವರ ಹೆಸರು ಮತ್ತು ವರ್ಚಸ್ಸು ತಳಕು ಹಾಕಿಕೊಂಡಿದ್ದು, ಅದನ್ನು ಬಿಡಿಸುವುದು ಕಷ್ಟ. ಹಾಗಾಗಿ, ಸಾರ್ವಜನಿಕ ಸಂಸ್ಥೆಗಳ ಸ್ವಾಯತ್ತೆ ಮತ್ತು ಸಮಗ್ರತೆಗಿಂತ ಅಧಿಕಾರದಲ್ಲಿರುವ ಪಕ್ಷ ಮತ್ತು ಸರ್ಕಾರಕ್ಕೆ ತಮ್ಮ ಶ್ರೇಷ್ಠ, ಮೆಚ್ಚಿನ ನಾಯಕನ ವರ್ಚಸ್ಸು  ಬಹಳ ಮುಖ್ಯವಾದುದು. ಹಾಗಾಗಿಯೇ, ಸೇನೆ ಮತ್ತು ಪೊಲೀಸ್‌ ಇಲಾಖೆಯನ್ನು ಈ ಸಂಸ್ಥೆಗಳ ಸಾಂವಿಧಾನಿಕ ಕರ್ತವ್ಯ ಅಲ್ಲದ ಕೆಲಸಗಳಿಗೆ ಎಳೆದು ತರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT