ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಒಳ್ಳೆಯದನ್ನು ಮಾಡಿದಾಗ ಪ್ರಶಂಸಿಸದೆ ಇರಲಾಗದು

Last Updated 4 ಫೆಬ್ರುವರಿ 2018, 19:43 IST
ಅಕ್ಷರ ಗಾತ್ರ

ಫೆಬ್ರುವರಿ 1ರಂದು ಮಂಡಿಸಲಾದ ಕೇಂದ್ರ ಬಜೆಟ್ಟಿನಲ್ಲಿ ಕೆಲವು ವಿಶೇಷ, ಅನಿರೀಕ್ಷಿತ ವಿಷಯಗಳು ಇದ್ದವು. ರಕ್ಷಣಾ ಕ್ಷೇತ್ರಕ್ಕೆ ನೀಡುವ ಅನುದಾನ ಕಡಿಮೆ ಇದ್ದಿದ್ದು ಅವುಗಳಲ್ಲಿ ಮೊದಲನೆಯದು. ಇದು ರಕ್ಷಣಾ ವಿಷಯಗಳ ತಜ್ಞರಲ್ಲಿ ಅಸಮಾಧಾನ ಮೂಡಿಸಿತು. ಭಾರತವು ಪ್ರತಿವರ್ಷ ತನ್ನ ಸೇನೆಗಾಗಿ ₹ 4 ಲಕ್ಷ ಕೋಟಿ ವೆಚ್ಚ ಮಾಡುತ್ತದೆ. 50 ಕೋಟಿ ಬಡವರಿಗೆ ಪ್ರಯೋಜನ ಆಗಲಿರುವ 'ಮೋದಿಕೇರ್‌' ಯೋಜನೆಯ (ಇದರ ಬಗ್ಗೆ ನಾವು ಮತ್ತೆ ಚರ್ಚಿಸೋಣ) ವಾರ್ಷಿಕ ಅಂದಾಜು ವೆಚ್ಚ ₹ 10 ಸಾವಿರ ಕೋಟಿ ಮಾತ್ರ.

ಸೇನೆಗಾಗಿ ಮಾಡುವ ವೆಚ್ಚವು ಮೋದಿಕೇರ್‌ ಯೋಜನೆಗೆ ಮಾಡುವ ವೆಚ್ಚಕ್ಕಿಂತ ಹತ್ತು ಪಟ್ಟು ಹೆಚ್ಚಿನದಾದ, ಅಂದರೆ ₹ 1 ಲಕ್ಷ ಕೋಟಿಯ, ಪಿಂಚಣಿ ಪಾವತಿಯನ್ನು ಸಹ ಒಳಗೊಂಡಿದೆ. ಅಂಚೆಯಣ್ಣ, ಕಸ ಗುಡಿಸುವವ, ಶಿಕ್ಷಕ ಸೇರಿದಂತೆ ಸರ್ಕಾರದ ಇನ್ಯಾವುದೇ ನಿವೃತ್ತ ಉದ್ಯೋಗಿಗೆ ಸಿಗದಂತಹ ಪಿಂಚಣಿಯು 'ಒಂದು ಶ್ರೇಣಿ, ಒಂದು ಪಿಂಚಣಿ' ವ್ಯವಸ್ಥೆಯ ಮೂಲಕ ನಿವೃತ್ತ ಸೈನಿಕರಿಗೆ ಸಿಗುತ್ತಿದೆ. ನಿವೃತ್ತಿ ನಂತರದ ಇಂತಹ ಶಾಶ್ವತ ಸೌಲಭ್ಯವನ್ನು ಬಡ ದೇಶವೊಂದರಿಂದ ಕೇಳಿ, ಪಡೆದುಕೊಳ್ಳುವವರು ನಿವೃತ್ತ ಸೈನಿಕರು ಮಾತ್ರ. ಅಂದಹಾಗೆ, ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್‌) ಮೇಲೆ ದೇಶ ವಾರ್ಷಿಕವಾಗಿ ವೆಚ್ಚ ಮಾಡುವ ಅಂದಾಜು ₹ 30 ಸಾವಿರ ಕೋಟಿಯು ₹ 4 ಲಕ್ಷ ಕೋಟಿಯಲ್ಲಿ ಸೇರಿಲ್ಲ. ಸಿಆರ್‌ಪಿಎಫ್‌ ಯೋಧರನ್ನು ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ರಾಜ್ಯಗಳಲ್ಲಿ ಶಾಶ್ವತವೆಂಬಂತೆ ನಿಯೋಜಿಸಲಾಗಿದೆ. ಈ ಪಡೆಗಳನ್ನು 'ಸಶಸ್ತ್ರ ಪಡೆಗಳು' ಎಂಬ ವ್ಯಾಖ್ಯಾನದ ಅಡಿ ತರಲಾಗಿದೆ, ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯು (ಎ.ಎಫ್‌.ಎಸ್‌.ಪಿ.ಎ) ಇವುಗಳಿಗೆ ಕಾನೂನು ರಕ್ಷಣೆ ನೀಡುತ್ತದೆ.

ನರೇಂದ್ರ ಮೋದಿ ನೇತೃತ್ವದ ಸರ್ಕಾರವು ರಕ್ಷಣಾ ಕ್ಷೇತ್ರಕ್ಕೆ ನೀಡುವ ಅನುದಾನವನ್ನು ಕಡಿಮೆ ಮಾಡಿಲ್ಲ. ಆದರೆ ಈ ಸರ್ಕಾರವು 2014ರ ನಂತರ ಈ ಕ್ಷೇತ್ರಕ್ಕೆ ನೀಡುವ ಅನುದಾನವನ್ನು ವಾರ್ಷಿಕ ಶೇಕಡ 6ರಷ್ಟು ಮಾತ್ರ ಹೆಚ್ಚಿಸುತ್ತ ಬಂದಿದೆ. ಅನುದಾನ ಹೆಚ್ಚಳದ ಪ್ರಮಾಣವು ಹಣದುಬ್ಬರ ದರದ ಪ್ರಮಾಣಕ್ಕಿಂತ ತುಸುವೇ ಹೆಚ್ಚು. ಅಂದರೆ, ವಾಸ್ತವದಲ್ಲಿ ಈ ಕ್ಷೇತ್ರಕ್ಕಾಗಿ ಮಾಡುತ್ತಿರುವ ಖರ್ಚು ಒಂದೇ ಮಟ್ಟದಲ್ಲಿ ಇದೆ ಎಂದು ಅರ್ಥ. ತನ್ನ ಪ್ರಭಾವ ಇರುವ ಪ್ರದೇಶಗಳಲ್ಲಿ ಚೀನಾ ದೇಶವು ಇನ್ನಷ್ಟು ಆಕ್ರಮಣಕಾರಿ ಮನೋಭಾವ ಪ್ರದರ್ಶಿಸುತ್ತಿರುವ ಸಂದರ್ಭದಲ್ಲಿ ಭಾರತವು ಸವಾಲನ್ನು ಎದುರಿಸುವ ರೀತಿಯಲ್ಲಿ ವರ್ತಿಸುತ್ತಿಲ್ಲ ಎಂಬ ಕಳವಳವನ್ನು ರಕ್ಷಣಾ ತಜ್ಞರು ವ್ಯಕ್ತಪಡಿಸಿದ್ದಾರೆ.

ಅದೇನೇ ಇದ್ದರೂ, 'ಮಾತುಗಳನ್ನು ಜೋರಾಗಿ ಆಡಿದರೂ ಬಗಲಿನಲ್ಲಿ ಒಂದು ಚಿಕ್ಕ ದೊಣ್ಣೆಯನ್ನು ಇಟ್ಟುಕೊಳ್ಳುವ' ಮೋದಿ ಅವರ ನೀತಿ ಪ್ರಬುದ್ಧತೆಯಿಂದ ಕೂಡಿದ್ದು ಎಂದು ನನಗೆ ಅನಿಸುತ್ತದೆ. ದೇಶಗಳು ಸೇನೆಯನ್ನು ಹೊಂದಿರುವುದು ತಪ್ಪು ಎಂದು ನಾನು ಹೇಳುತ್ತಿಲ್ಲ. ದೇಶಗಳು ಸಂಪೂರ್ಣವಾಗಿ ನಿಶ್ಶಸ್ತ್ರೀಕರಣದತ್ತ ಸಾಗಬೇಕು ಎಂದೋ, ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಯನ್ನು ತೋರಿಸಬೇಕೋ ಎಂದೋ ನಾನು ಹೇಳುತ್ತಿಲ್ಲ. ಆದರೆ, ನಾವು ನಮ್ಮ ದೇಶದ ಭದ್ರತಾ ವ್ಯವಸ್ಥೆಯನ್ನು ವಾಸ್ತವಕ್ಕೆ ಅನುಗುಣವಾಗಿ, ಆದ್ಯತೆಗಳಿಗೆ ಅನುಸಾರವಾಗಿ ಕಟ್ಟಿಕೊಳ್ಳಬೇಕು. ದೇಶದ ಸಾಮಾನ್ಯ ವ್ಯಕ್ತಿಯೊಬ್ಬ ಚೀನಾ ದೇಶದ ಆಕ್ರಮಣಕ್ಕಿಂತಲೂ ರೋಗರುಜಿನಗಳಿಂದ ಅಥವಾ ಬಡತನದಿಂದ ತೊಂದರೆಗೆ ಒಳಗಾಗುವ ಸಾಧ್ಯತೆ ಜಾಸ್ತಿ. ನಾವು ನಮ್ಮ ಭದ್ರತಾ ವ್ಯವಸ್ಥೆಯನ್ನು ಈ ದೃಷ್ಟಿಕೋನದಿಂದ ನೋಡಬೇಕು. ಆಗ, ಸೇನೆಗಾಗಿ ಮಾಡುವ ವಾರ್ಷಿಕ ₹ 4 ಲಕ್ಷ ಕೋಟಿ ವೆಚ್ಚ, ಪಿಂಚಣಿ ಪಾವತಿಗೆ ಬೇಕಿರುವ ₹ 1 ಲಕ್ಷ ಕೋಟಿ ಹೆಚ್ಚು ಎಂಬುದು ಗೊತ್ತಾಗುತ್ತದೆ.

ಬೇರೆಯವರು ಏನಾದರೂ ಹೇಳಲಿ. ಈ ಮೊತ್ತದಲ್ಲಿ ಹೆಚ್ಚಳವಾಗುವುದನ್ನು ತಡೆಯುವ ಮೂಲಕ ಮೋದಿ ಅವರು ಅತ್ಯದ್ಭುತ ಕೆಲಸವೊಂದನ್ನು ಮಾಡಿದ್ದಾರೆ ಎಂದು ನನಗೆ ಅನಿಸುತ್ತದೆ. ಈಗ ನಾವು 'ಮೋದಿಕೇರ್' ಎಂದು ಕರೆಯಲಾಗುತ್ತಿರುವ ಯೋಜನೆಯತ್ತ ಗಮನ ಹರಿಸೋಣ. ಈ ಯೋಜನೆಯು 10 ಕೋಟಿ ಕುಟುಂಬಗಳಿಗೆ ವಿಮೆ ಒದಗಿಸುತ್ತದೆ. ಒಂದು ಕುಟುಂಬದಲ್ಲಿ ಸರಾಸರಿ ಐದು ಜನ ಇರುತ್ತಾರೆ ಎಂದು ಲೆಕ್ಕಹಾಕಿದರೆ, ಈ ಯೋಜನೆಯು 50 ಕೋಟಿ ಜನರಿಗೆ ಲಭ್ಯವಾಗಲಿದೆ. ಪ್ರತಿ ಕುಟುಂಬಕ್ಕೆ ಗರಿಷ್ಠ ₹ 5 ಲಕ್ಷದಷ್ಟು ಪ್ರಯೋಜನ ದೊರೆಯಲಿದೆ.

ತಜ್ಞರು ಈ ಯೋಜನೆಯ ಬಗ್ಗೆ ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಮೊದಲನೆಯದು, ಅರುಣ್ ಜೇಟ್ಲಿ ಅವರು ಯೋಜನೆಗೆ ಅಗತ್ಯವಿರುವಷ್ಟು ಹಣವನ್ನು ಮೀಸಲಿಟ್ಟಿಲ್ಲ ಎಂಬುದು. ಯೋಜನೆಗಾಗಿ ₹ 2 ಸಾವಿರ ಕೋಟಿ ಮಾತ್ರ ತೆಗೆದಿರಿಸಲಾಗಿದ್ದು, ವಾಸ್ತವದಲ್ಲಿ ಈ ಯೋಜನೆಗೆ ಇದಕ್ಕಿಂತ ಹೆಚ್ಚಿನ ಹಣ ಬೇಕಾಗುತ್ತದೆ. ₹ 5 ಲಕ್ಷದ ಆರೋಗ್ಯ ವಿಮೆಗಾಗಿ ಪ್ರತಿ ಕುಟುಂಬಕ್ಕೆ ಪ್ರತಿ ವರ್ಷ ಅಂದಾಜು ₹ 1,100ರಿಂದ ₹ 1,400ರಷ್ಟು ಪ್ರೀಮಿಯಂ ಮೊತ್ತ ಭರಿಸಬೇಕಾಗುತ್ತದೆ ಎಂಬ ಲೆಕ್ಕಾಚಾರ ಇದೆ. ಇದರ ಅರ್ಥ, ಯೋಜನೆಗೆ ವಾರ್ಷಿಕ ಅಂದಾಜು ₹ 11 ಸಾವಿರ ಕೋಟಿಯಿಂದ ₹ 14 ಸಾವಿರ ಕೋಟಿ ವೆಚ್ಚವಾಗುತ್ತದೆ.

ಈ ಯೋಜನೆಯು ಘೋಷಣೆ ಮಾತ್ರ ಎಂಬುದು ತಜ್ಞರು ಎತ್ತಿರುವ ಎರಡನೆಯ ವಿಚಾರ. ಈ ಯೋಜನೆಯ ರೂಪುರೇಷೆಗಳನ್ನು ಅಂತಿಮಗೊಳಿಸಲು ಆರು ತಿಂಗಳು ಬೇಕು, ಯೋಜನೆಯ ಅನುಷ್ಠಾನ ವರ್ಷದ ಉತ್ತರಾರ್ಧದಲ್ಲಿ ಆರಂಭವಾಗುತ್ತದೆ ಎಂದು ಸರ್ಕಾರ ಹೇಳುತ್ತಿದೆ. ಈ ಯೋಜನೆಯ ರೂಪುರೇಷೆಗಳನ್ನು ಮೊದಲು ಆಲೋಚಿಸಿ, ನಂತರ ಇದನ್ನು ಘೋಷಿಸಬೇಕಾಗಿತ್ತು.

ಮೂರನೆಯ ಸಂಗತಿಯೆಂದರೆ, ಈ ಯೋಜನೆಯ ಅರ್ಧದಷ್ಟು ವೆಚ್ಚವನ್ನು ರಾಜ್ಯ ಸರ್ಕಾರಗಳು ಭರಿಸಬೇಕು ಎಂಬ ನಿರೀಕ್ಷೆ ಇದೆ. ಆದರೆ ಈ ನಿಟ್ಟಿನಲ್ಲಿ ರಾಜ್ಯಗಳ ಜೊತೆಗೆ ಇನ್ನೂ ಮಾತುಕತೆ ಆರಂಭಿಸಿ ಆಗಿಲ್ಲ.

ನಾಲ್ಕನೆಯ ಸಂಗತಿ: ಇಂತಹ ಯೋಜನೆಗಳು ಕೆಲವು ರಾಜ್ಯಗಳಲ್ಲಿ ಈಗಾಗಲೇ ಇದ್ದರೂ ಅವುಗಳ ಪರಿಣಾಮ ಗಮನಾರ್ಹವಾಗಿಲ್ಲ.

ಐದನೆಯದು: ದೇಶದ ಹಲವರಿಗೆ ಸಮಸ್ಯೆ ಆಗಿರುವುದು ಗುಣಮಟ್ಟದ ಆಸ್ಪತ್ರೆಗಳ ಅಲಭ್ಯತೆ. ದೇಶದ ಹಲವು ಭಾಗಗಳಲ್ಲಿ ಉತ್ತಮ ಆರೋಗ್ಯ ಸೌಲಭ್ಯ ಇಲ್ಲ. ಹಾಗಾಗಿ ವಿಮೆ ಆಧಾರಿತ ಪರಿಹಾರವು ಮೂಲಸೌಕರ್ಯದ ಕೊರತೆಯ ಸಮಸ್ಯೆಯನ್ನು ಬಗೆಹರಿಸುವುದಿಲ್ಲ. ಆರನೆಯದು: ಭಾರತದಲ್ಲಿನ ಸರ್ಕಾರಿ ವೈದ್ಯಕೀಯ ಸೇವೆಗಳು ವಿಶ್ವದಲ್ಲೇ ಅತ್ಯಂತ ಕೆಟ್ಟ ಸೇವೆಗಳಲ್ಲಿ ಒಂದಾಗಿದ್ದು, ವೈದ್ಯರು ಕರ್ತವ್ಯಕ್ಕೆ ಹಾಜರಾಗದಿರುವುದು, ಆಸ್ಪತ್ರೆಗಳಲ್ಲಿ ಉತ್ತರದಾಯಿತ್ವವೇ ಇಲ್ಲದಿರುವ ಸಮಸ್ಯೆಗಳು ಇವೆ ಎಂಬುದನ್ನು ಅಧ್ಯಯನಗಳು ತೋರಿಸಿಕೊಟ್ಟಿವೆ. ಹಾಗಾಗಿ ಆಡಳಿತಾತ್ಮಕವಾದ ಸಮಸ್ಯೆಗಳೂ ಇಲ್ಲಿವೆ. ಇವನ್ನು ನಿರ್ಲಕ್ಷಿಸಿ ವಿಮೆ ಯೋಜನೆಗಳತ್ತ ಮಾತ್ರ ದೃಷ್ಟಿ ಹಾಯಿಸುವುದು, ಜವಾಬ್ದಾರಿಯಿಂದ ತಪ್ಪಿಸಿಕೊಂಡಂತೆ ಆಗುತ್ತದೆ.

ಈ ಎಲ್ಲ ಅಂಶಗಳಲ್ಲೂ ಹುರುಳಿದೆ, ಇವುಗಳನ್ನು ಬಗೆಹರಿಸಬೇಕಿದೆ. ಹೀಗಿದ್ದರೂ, ಆರೋಗ್ಯ ವಿಮೆ ಎಂಬುದು ಉತ್ತಮ ವಿಚಾರ. ಈಗ ಇದು ಬರಿಯ ಘೋಷಣೆ ಆಗಿದ್ದರೂ, ಒಂದಲ್ಲ ಒಂದು ಹಂತದಲ್ಲಿ ಸರ್ಕಾರ ಇದಕ್ಕಾಗಿ ಹಣ ವೆಚ್ಚ ಮಾಡಬೇಕಾಗುತ್ತದೆ. ದೇಶದ ಅತ್ಯಂತ ದುರ್ಬಲ ವ್ಯಕ್ತಿಗಳು ಹಾಗೂ ಏನೂ ಇಲ್ಲದ ಭಾರತೀಯನ ಆರೋಗ್ಯದ ವಿಷಯವನ್ನು ಇದು ಚರ್ಚೆಯ ಕೇಂದ್ರಕ್ಕೆ ತರುತ್ತದೆ. ಆರೋಗ್ಯ ಸೇವೆಗಳ ಬಗ್ಗೆ ದೇಶದಲ್ಲಿ ಚರ್ಚೆ ಆಗುವಂತೆ ಮಾಡುತ್ತದೆ.

ಒತ್ತಡ ಇದೆ ಎಂದಾದರೆ ಹಣವನ್ನು ಒಂದಲ್ಲ ಒಂದು ಕಡೆ ಕಂಡುಕೊಳ್ಳಬಹುದು. ಜನರ ಕೈಯಲ್ಲಿ ಹಣ ಬಂದ ನಂತರ, ಅವರು ಆರೋಗ್ಯ ಸೇವೆಗಳನ್ನು ಆಗ್ರಹಪೂರ್ವಕವಾಗಿ ಕೇಳುತ್ತಾರೆ. ವಿಮೆ ಮೂಲಕ ನೀಡುವ ₹ 5 ಲಕ್ಷ ಸಾಕಾಗುತ್ತದೆಯೋ ಇಲ್ಲವೋ ಎಂಬುದನ್ನು ನಾವು ಮುಂದೆ ಕಂಡುಕೊಳ್ಳಬಹುದು.

ಈ ಎಲ್ಲ ಕಾರಣಗಳಿಂದಾಗಿ ಈ ನಡೆಯು ಉತ್ತಮವಾದದ್ದು ಎಂದು ನಾನು ನಂಬಿದ್ದೇನೆ. ಮೋದಿ ಅವರು ತಮ್ಮ ರಾಜಕೀಯ ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದಿರುವ ಧಾರ್ಮಿಕ ಬಹುಸಂಖ್ಯಾತವಾದದ ಕುರಿತು ನನಗೆ ಕರುಣೆಯೂ ಇಲ್ಲ, ಪ್ರೀತಿಯೂ ಇಲ್ಲ. ಅವರ ಆಡಳಿತ ಅವಧಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಭೀತಿ ಮೂಡಿಸುವಂತೆ ಇವೆ, ಎಚ್ಚರಿಕೆಯ ಗಂಟೆಯಂತೆಯೂ ಇವೆ. ಹೀಗಿದ್ದರೂ, ಮೋದಿ ಅವರು ಒಳ್ಳೆಯದನ್ನು ಮಾಡಿದಾಗ ಅವರನ್ನು ಪ್ರಶಂಸಿಸದೆ ಇರಬಾರದು. ಆರೋಗ್ಯ ವಿಮೆ ಯೋಜನೆಯು ದೇಶದಲ್ಲಿನ ಚರ್ಚೆಯನ್ನೇ ಬದಲಾಯಿಸಿದೆ. ಹಾಗಾಗಿ ಈ ಯೋಜನೆಯನ್ನು ಬೆಂಬಲಿಸಬೇಕು.

(ಲೇಖಕ ಅಂಕಣಕಾರ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT